ಜನಪದ ಕೇವಲ ಪ್ರದರ್ಶನ ಅಲ್ಲ, ಸಮಾಜದ ಜೀವನಾಡಿ

ವಿಶೇಷ ಅಂಕಣ
ವಿಶೇಷ ಅಂಕಣ
Published on

ಕೆಲ ದಶಕಗಳ ಹಿಂದೆ ಶ್ರೀ ಕ್ಷೇತ್ರಕ್ಕೆ ತೊಗಲು ಗೊಂಬೆಯಾಟ, ಹಾಲಕ್ಕಿಯವರು, ಕರಡಿ ವೇಷ, ವೀರಗಾಸೆ ಕುಣಿತ, ಡೊಳ್ಳು ಕುಣಿತ, ಪೂಜಾ ನೃತ್ಯ, ಹಲಗೆ ಹೊಡೆಯುವವರು, ತಮಟೆ ಬಾರಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಆದರೆ ಕಾಲಾನಂತರದಲ್ಲಿ ಅಂತಹ ಜನಪದ ಕಲೆಗಾರರು ಕಡಿಮೆಯಾಗುತ್ತಾ ಹೋದರು. ಈಗ ಲಕ್ಷದೀಪೋತ್ಸವ ಮತ್ತು ಶಿವರಾತ್ರಿಯಲ್ಲಿ ಮಾತ್ರ ಜನಪದ ಕಲಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಗೆ ಸೇವೆ ಸಲ್ಲಿಸುತ್ತಾರೆ.

ನಮ್ಮ ಕ್ಷೇತ್ರ ಮಾತ್ರವಲ್ಲದೆ ಬೇರೆ ಊರಿನ ಜಾತ್ರೆ, ಹಬ್ಬಗಳ ಆಚರಣೆ, ವಿಶೇಷ ಸಂದರ್ಭಗಳಲ್ಲಿ ಜನಪದ ಕಲೆಗಳು ಹೆಚ್ಚಾಗಿ ಪ್ರದರ್ಶನವಾಗುತ್ತಿದ್ದವು. ಗ್ರಾಮೀಣ ಪ್ರದೇಶಗಳಲ್ಲಿನ ಸುಗ್ಗಿ, ಹೋಳಿ, ಸಂಕ್ರಾಂತಿ, ಯುಗಾದಿ ಹೀಗೆ ವಿವಿಧ ಆಚರಣೆಗಳ ಮೂಲಕ ಜನಜೀವನ ಅವಿನಾಭಾವ ನಂಟನ್ನು ಹೊಂದಿದೆ. ಪರಿಣಾಮವಾಗಿ ಜನಪದ ಕಲೆ ಮತ್ತು ಜನಜೀವನ ಪರಸ್ಪರ ಬೆಸೆದುಕೊಂಡು, ಪೂರಕವಾಗಿ ಇಂದಿನವರೆಗೂ ಬೆಳೆದು ಬಂದಿದೆ.

ದೈವ ಭಕ್ತಿ, ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ರೀತಿ, ಸಾಮಾನ್ಯ ಜನರ ಅನುಭವ, ನಂಬಿಕೆ, ಭಾವನೆ ಮತ್ತು ಸಂಸ್ಕೃತಿ ಇತ್ಯಾದಿಯನ್ನೆಲ್ಲ ಪ್ರತಿಬಿಂಬಿಸುವ ಜನಪದ ಕಲೆಯು ಒಬ್ಬರಿಂದೊಬ್ಬರಿಗೆ ಅಥವಾ ಅಜ್ಜನಿಂದ ಮಗ, ಮೊಮ್ಮಗನಿಗೆ, ವಂಶಪಾರಂಪರ್ಯವಾಗಿ ಮುಂದುವರಿದುಕೊಂಡು ಬಂದಿರುವಂಥದ್ದು. ವಿಶೇಷವಾಗಿ ಗ್ರಾಮೀಣ ಜನತೆಯು ಬಿತ್ತನೆ, ಕೊಯ್ಲು, ಮಳೆಗಾಗಿ ಪ್ರಾರ್ಥನೆ, ಹಬ್ಬ-ಜಾತ್ರೆ ಮುಂತಾದ ಸಂದರ್ಭಗಳಲ್ಲಿ ಹಾಡು, ನೃತ್ಯ, ವೇಷಭೂಷಣಗಳ ಮೂಲಕ ಜನರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. ಹೀಗೆ ಕೃಷಿಯೊಂದಿಗೆ ಗ್ರಾಮೀಣರ ಬದುಕು ತಳುಕು ಹಾಕಿಕೊಂಡಿದ್ದು, ವಿವಿಧ ಆಚರಣೆಗಳಲ್ಲಿ ಭಕ್ತಿ, ಶೌರ್ಯ, ಹಾಸ್ಯ, ಮಾತ್ರವಲ್ಲದೆ ನೈತಿಕ ಮೌಲ್ಯಗಳನ್ನೂ ಕಾಣಬಹುದಾಗಿದೆ.

ಉದಾಹರಣೆಗೆ ವೀರಗಾಸೆ ಕುಣಿತವು ವೀರಭದ್ರನ ಪರಾಕ್ರಮವನ್ನು ಸ್ಮರಿಸುವ ಕಲೆಯಾಗಿದೆ. ತಾಳ-ಡೊಳ್ಳಿನ ಸದ್ದಿನ ನಡುವೆ ಕಲಾವಿದರು ಖಡ್ಗ ಹಿಡಿದು ಕುಣಿಯುತ್ತಾರೆ. ಇದು ಧೈರ್ಯ, ನ್ಯಾಯಕ್ಕಾಗಿ ಹೋರಾಟ ಮತ್ತು ಅಸುರ ಶಕ್ತಿಗಳ ವಿರುದ್ಧ ಜಯವನ್ನು ಸಾಧಿಸಿದ ಸಂಕೇತವಾಗಿದೆ. ಯಕ್ಷಗಾನದಲ್ಲಿ ಸಾಮಾಜಿಕ ಮೌಲ್ಯ ಬಿಂಬಿಸುವ ಪ್ರಸಂಗಗಳ ಜತೆ ರಾಕ್ಷಸರ ವಿರುದ್ಧ ದೇವತೆಗಳ ಹೋರಾಟ, ಅಧರ್ಮದ ವಿರುದ್ಧ ಧರ್ಮದ ಜಯ ಹೀಗೆ ಅನೇಕ ಮೌಲ್ಯಗಳನ್ನು ಕಾಣಬಹುದಾಗಿದೆ. ಹಾಗೆಯೇ ಸಂಕ್ರಾಂತಿ, ಸುಗ್ಗಿಯ ಸಮಯದಲ್ಲಿ ತಮ್ಮ ಕೃಷಿ, ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತ ದನ, ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಿ ಕೃತಜ್ಞತೆ ಸಲ್ಲಿಸಲಾಗುತ್ತದೆ. ಕೆಲವು ಕಡೆ ಕಿಚ್ಚು ಹಾಯಿಸುವ ಆಚರಣೆಯನ್ನು ನಡೆಸಲಾಗುತ್ತದೆ. ಈ ರೀತಿ ವಿವಿಧ ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿ ಆಚರಿಸಲ್ಪಡುತ್ತವೆ.

ತಮ್ಮ ಪರಿಸರದಲ್ಲೇ ಸಿಗುವ ವಸ್ತುಗಳನ್ನು ಬಳಸಿಕೊಂಡು ವೇಷಭೂಷಣಗಳನ್ನು ರಚಿಸುವುದು ಜನಪದ ಕಲೆಗಳ ವಿಶೇಷ. ಕರಾವಳಿ ಪ್ರದೇಶದಲ್ಲಿ ಕಂಗೀಲು, ಸುಗ್ಗಿ ಕುಣಿತಕ್ಕೆ ತೆಂಗಿನ ಮರದ ಎಳೆ ಗರಿಗಳನ್ನು ಬಳಸಿ ಆಕರ್ಷಕ ಮತ್ತು ಕಲಾತ್ಮಕವಾದ ವೇಷವನ್ನು ತಯಾರಿಸುತ್ತಾರೆ. ಹಾಗೆಯೇ ಮುಖಗಳಿಗೆ ಸಾಂಪ್ರದಾಯಿಕವಾಗಿ ತಯಾರಿಸುವ ಅರಿಶಿಣ, ಕುಂಕುಮ, ಕಾಡಿಗೆ, ಜೇಡಿಮಣ್ಣು, ಸುಣ್ಣ ಮುಂತಾದವುಗಳ ಬಣ್ಣ ಬಳಸುತ್ತಾರೆ. ಆಚರಣೆಯಲ್ಲಿ ಮಾತ್ರವಲ್ಲದೆ ವೇಷಭೂಷಣಗಳಲ್ಲೂ ಆಯಾ ನೆಲದ ಕಂಪನ್ನು ಕಾಣಬಹುದಾಗಿದೆ.

ಆದರೆ ಇಂದು ನಗರೀಕರಣ, ಆಧುನಿಕ ಮನರಂಜನೆ, ತಂತ್ರಜ್ಞಾನದ ಪ್ರಭಾವದಿಂದ ಜನಪದ ಕಲೆಯ ಸೊಗಡು ಕುಂದತೊಡಗಿದೆ. ತಲೆಮಾರುಗಳಿಂದ ಮುಂದುವರೆಯುತ್ತಾ ಬಂದಿರುವ ಕಲೆಗಳನ್ನು ಪೋಷಿಸುವವರು ಇಲ್ಲದೆ, ಅವುಗಳಲ್ಲಿ ತೊಡಗಿಕೊಳ್ಳುವವರು, ಆಚರಿಸುವವರು ಇಲ್ಲದೆ ಕೆಲವು ಕಲೆಗಳು ನಶಿಸುವ ಸ್ಥಿತಿಯಲ್ಲಿವೆ. ಇನ್ನು ಕೆಲವು ಜನಪದ ಕಲೆಗಳು ಆಧುನಿಕ ಕಾಲಕ್ಕೆ ತಕ್ಕಂತೆ ಬದಲಾವಣೆಗೊಂಡು ಆಚರಿಸಲ್ಪಡುತ್ತಿವೆ. ಜನಪದ ಕಲೆಗಳು ಗ್ರಾಮೀಣ ಜೀವನದ ಬೇರುಗಳಲ್ಲಿ ನೆಲೆಸಿರುವುದರಿಂದ ಅವು ಸಂಪೂರ್ಣವಾಗಿ ನಶಿಸುವುದಿಲ್ಲ. ಪುನರುಜ್ಜೀವನಗೊಳ್ಳುವ ಶಕ್ತಿ ಹೊಂದಿವೆ.

ಕೆಲ ದಶಕಗಳ ಹಿಂದೆ ಗ್ರಾಮ ಜಾತ್ರೆಗಳಲ್ಲಿ ಮಂತ್ರ- ಮಾಯಾಜಾಲ ತೋರಿಸುವವರು ಬರುತ್ತಿದ್ದರು. ಕಾರ್ಡ್ ಟ್ರಿಕ್, ಹಗ್ಗದ ಆಟ, ವಸ್ತುಗಳನ್ನು ಅಡಗಿಸುವ ಕೌಶಲ ಮುಂತಾದ ಕಣ್ಕಟ್ಟು ವಿದ್ಯೆಗಳು ಜನರಿಗೆ ಆಶ್ಚರ್ಯ ಉಂಟುಮಾಡುತ್ತಿದ್ದವು. ಅವರು ನೈಜ ಕಲಾವಿದರಲ್ಲ. ಅಲ್ಪ-ಸ್ವಲ್ಪ ವಿದ್ಯೆ ಕಲಿತು ಜನರ ನಂಬಿಕೆಯನ್ನೇ ಬಂಡವಾಳವನ್ನಾಗಿಸಿ ಹಣ ಸಂಪಾದಿಸುವ ಉದ್ದೇಶವಿರುವವರು. ಆದರೆ ಜನರಿಗೆ ಈ ಬಗ್ಗೆ ಅರಿವಿರದೆ, ಕಣ್ಕಟ್ಟನ್ನು ಕೇವಲ ಜಾದೂವನ್ನಾಗಿ ಮಾತ್ರ ನೋಡದೆ, ಮೂಢನಂಬಿಕೆಯನ್ನು ತಾಳುತ್ತಿದ್ದರು. ಹೇಗೆಂದರೆ ಕ್ಷಣ ಮಾತ್ರದಲ್ಲಿ ಲಿಂಬೆ ಹುಳಿಯನ್ನು ಮಾಯ ಮಾಡುವ ಈತ ತನ್ನ ಮಂತ್ರ- ತಂತ್ರದಿಂದ ನಮ್ಮ ಕಷ್ಟಗಳನ್ನೂ ಮಾಯ ಮಾಡುತ್ತಾನೆ ಎಂದು ಭಾವಿಸತೊಡಗಿದರು. ಅವರ ಅತಿಯಾದ ಮೂಢನಂಬಿಕೆಯನ್ನು ಬಂಡವಾಳವಾಗಿಸಿಕೊಂಡು ಅನೇಕರು ಮುಗ್ಧಜನರನ್ನು ಮೋಸ ಮಾಡುತ್ತಿದ್ದರು. ಈಗಲೂ ಮಾಡುತ್ತಲೇ ಇದ್ದಾರೆ.

ಹಿಂದೊಮ್ಮೆ ಒಂದು ಹಳ್ಳಿಯಲ್ಲಿ ಊರಿನ ಜಾತ್ರೆಗೆ ಮಾಯಾಜಾಲ ತೋರಿಸುವಾತ ಬರುತ್ತಾನೆ. ಬೀದಿ ಬದಿಯಲ್ಲಿ ಟೆಂಟ್ ಹಾಕಿ ಕಾರ್ಡ್ ಟ್ರಿಕ್, ಹಗ್ಗದ ಆಟ, ಖಾಲಿ ಪೇಪರನ್ನು ಹಣವನ್ನಾಗಿ ಬದಲಾಯಿಸುವ ಕಣ್ಕಟ್ಟು ವಿದ್ಯೆ ಎಲ್ಲವನ್ನು ಪ್ರದರ್ಶಿಸಿ ಜನರನ್ನು ಆಶ್ಚರ್ಯಚಕಿತರನ್ನಾಗಿಸುತ್ತಾನೆ. ಅವನ ಕೈಚಳಕ ನೋಡಿದವರು ಒಂದಿಷ್ಟು ಹಣವನ್ನು ಕೂಡ ನೀಡುತ್ತಾರೆ. ಈ ಮಾಯಾಜಾಲವನ್ನು ರೈತನೊಬ್ಬ ವೀಕ್ಷಿಸುತ್ತಾನೆ. ಆತ ತನ್ನ ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದ, ಬೆಳೆ ಹಾನಿಯಾಗಿತ್ತು, ಮನೆಯಲ್ಲಿ ಹೆಂಡತಿಯೊಂದಿಗೆ ಕಲಹ, ಮಗುವಿಗೆ ಅನಾರೋಗ್ಯ ಕಾಡುತ್ತಿತ್ತು. ಮಾಯಾಜಾಲಗಾರ ಲಿಂಬೆಯನ್ನು ಮಾಯ ಮಾಡಿದುದನ್ನು ನೋಡಿ, ಇವನು ನನ್ನ ಕಷ್ಟವನ್ನೂ ಮಾಯ ಮಾಡಬಹುದು ಎಂದು ರೈತ ನಂಬಿಬಿಟ್ಟ.

ಕಣ್ಕಟ್ಟು ವಿದ್ಯೆ ಮಾಡುವಾತ ಲಿಂಬೆಯನ್ನು ಮಂತ್ರಿಸಿ ಕೊಡುತ್ತೇನೆ. ನಿನ್ನ ಸಂಪೂರ್ಣ ದೋಷ ನಿವಾರಣೆ ಮಾಡುತ್ತೇನೆ, ಇಂತಿಷ್ಟು ಹಣ ಕೊಡು ಎಂದ. ಆತನ ಮಾತನ್ನು ನಂಬಿದ ರೈತ ತಾನು ಕೂಡಿಟ್ಟ ಹಣವನ್ನೆಲ್ಲ ಆತನಿಗೆ ಕೊಟ್ಟ. ದಿನಗಳು ಕಳೆದರೂ ಯಾವುದೇ ಬದಲಾವಣೆ ಕಾಣಿಸಲಿಲ್ಲ. ಆಗ ರೈತನಿಗೆ ತಾನು ಮೋಸ ಹೋಗಿದ್ದು ಅರಿವಾಯಿತು. ಮಗುವಿನ ಆರೋಗ್ಯ ಹದಗೆಟ್ಟಿತು. ಕೊನೆಗೆ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಾಗ ವೈದ್ಯರು ಚಿಕಿತ್ಸೆ ನೀಡಿ ಮಗುವನ್ನು ಗುಣಪಡಿಸಿದರು. ಆಗ ರೈತನಿಗೆ ಅರಿವಾಯಿತು- ಮೂಢನಂಬಿಕೆಯಿಂದ ಕಷ್ಟಗಳನ್ನು ನಿವಾರಿಸಲು ಸಾಧ್ಯವಿಲ್ಲ. ಅದು ಸಾಧ್ಯವಿರುವುದು ವೈದ್ಯಕೀಯ ಚಿಕಿತ್ಸೆಗೆ ಮಾತ್ರ ಎಂದು.

ಇಂತಹ ಜನರಿಂದಾಗಿ ನೈಜ ಕಲಾವಿದರನ್ನೂ ಶಂಕಿಸುವ ಸ್ಥಿತಿ ಉದ್ಭವಿಸುತ್ತದೆ. ಈ ಬಗ್ಗೆ ಅನೇಕ ಜಾಗೃತಿಗಳು ನಡೆದಿದ್ದು, ನೈಜ ಕಲಾವಿದರು ತಮ್ಮ ಕಾರ್ಯಕ್ರಮಗಳಲ್ಲಿ ಕಣ್ಕಟ್ಟು ವಿದ್ಯೆಗಳಿಗೆ ಮೋಸ ಹೋಗದಂತೆ ಅರಿವು ಮೂಡಿಸುತ್ತಾರೆ. ಅನಾರೋಗ್ಯ, ಬೆಳೆ ಹಾನಿ, ಕುಟುಂಬ ಕಲಹ ಇತ್ಯಾದಿಗಳಿಗೆ ಕಣ್ಕಟ್ಟು ವಿದ್ಯೆ ಪರಿಹಾರ ಎಂದು ನಂಬುವ ಕೆಲವರು ಅದನ್ನು ಅಲೌಕಿಕ ಶಕ್ತಿ ಎಂದು ತಪ್ಪಾಗಿ ಅರ್ಥೈಸುವುದು ಬಹುದೊಡ್ಡ ಸಮಸ್ಯೆ. ಇಷ್ಟಲ್ಲದೆ ನಿಧಿಯ ಆಸೆಗಾಗಿ ಬಲಿ ಕೊಡುವ ದೃಷ್ಟಾಂತಗಳು ಅನೇಕ ನಡೆದಿವೆ. ಇತ್ತೀಚೆಗೆ ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳು ಪ್ರಕಟಗೊಂಡಿವೆ. ಈ ಆಧುನಿಕ ಕಾಲಘಟ್ಟದಲ್ಲಿಯೂ ಜನರು ಮೋಸ ಹೋಗುತ್ತಿದ್ದಾರೆ ಎಂಬುದು ಖೇದಕರ ಸಂಗತಿ.

ಜನಪದ ಕಲೆಗಳು ನಮ್ಮ ಸಮಾಜದ ಜೀವನಾಡಿಯಾಗಿವೆ. ಯಕ್ಷಗಾನ, ವೀರಗಾಸೆ, ಬೊಂಬೆಯಾಟ, ಸುಗ್ಗಿ ಕುಣಿತ, ಹೋಳಿ ಇಂತಹ ಕಲಾರೂಪಗಳು ಪೀಳಿಗೆಯಿಂದ ಪೀಳಿಗೆಗೆ ಮೌಲ್ಯ, ಭಕ್ತಿ, ಶೌರ್ಯ ಮತ್ತು ಮಾನವೀಯ ಮೌಲ್ಯಗಳನ್ನು ಪಸರಿಸುತ್ತಿವೆ. ಇವು ಕೇವಲ ವೇದಿಕೆಯ ಪ್ರದರ್ಶನಗಳಿಗೆ ಸೀಮಿತವಾಗದೆ ಬದುಕಿನ ಪಾಠಗಳನ್ನು ತಿಳಿಹೇಳುತ್ತವೆ. ಅಂತಹ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದಾಗಬೇಕಿದೆ.

ನೈಜ ಕಲಾವಿದರ ಪರಿಶ್ರಮ ಮತ್ತು ವಂಶಪಾರಂಪರ್ಯವಾಗಿ ಬಂದ ಪರಿಣತಿಯನ್ನು ಗೌರವಿಸುವ ಜತೆಗೆ, ವೈಜ್ಞಾನಿಕ ಮನೋಭಾವ ಮತ್ತು ಜಾಗೃತಿಯನ್ನು ಬೆಳೆಸುವ ಅಗತ್ಯವಿದೆ. ಅದಲ್ಲದೆ ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸುವುದು ನಮ್ಮ ಕರ್ತವ್ಯ; ಜನಪದ ಕಲೆ, ಪರಂಪರೆ ಮತ್ತು ಅಭಿವೃದ್ಧಿ ಜತೆಯಾಗಿ ಸಾಗಿದಾಗ ಮಾತ್ರ ಸಮಾಜ ಪ್ರಗತಿಪಥದಲ್ಲಿ ಸಾಗುವುದಲ್ಲದೆ ಸಾಂಸ್ಕೃತಿಕವಾಗಿಯೂ ತನ್ನ ಹಿರಿತನವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net