

ಇತ್ತೀಚೆಗೆ ಒಂದು ಕುಟುಂಬ ಶ್ರೀಕ್ಷೇತ್ರಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ನನ್ನ ಬಳಿ ಮಾತನಾಡಲು ಬೀಡಿಗೆ ಬಂದಿದ್ದರು. ಅವರ ಸುಮಾರು ನಾಲ್ಕು ವರ್ಷದ ಮಗು ಹಠ ಹಿಡಿದು ಜೋರಾಗಿ ಅಳುತ್ತಿತ್ತು. "ಯಾಕೆ ಮಗು ಅಷ್ಟೊಂದು ಜೋರಾಗಿ ಅಳುತ್ತಿದೆ ಸಮಾಧಾನಪಡಿಸಬಹುದಲ್ಲವೇ' ಎಂದು ಕೇಳಿದೆ. ಆಗ ಹೆತ್ತವರು ಹೇಳಿದ ಮಾತು, "ಆತನಿಗೆ ಮೊಬೈಲ್ ಬೇಕಂತೆ ಸ್ವಾಮಿ, ಅದನ್ನು ಕೊಡದ ಕಾರಣ ಅಳುತ್ತಿದ್ದಾನೆ.' ಅವರ ಮಾತು ಕೇಳಿ ನನಗೆ ಆಶ್ಚರ್ಯವಷ್ಟೇ ಅಲ್ಲ, ತೀವ್ರ ಕಳವಳವಾಯಿತು. ಕೇವಲ 4 ವರ್ಷದ ಕಂದಮ್ಮನ ಕೈಗೆ ಆಟಿಕೆಯ ಬೊಂಬೆಗಳ ಬದಲು ಸ್ಮಾರ್ಟ್ಫೋನ್ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಚಿಂತಿಸಬೇಕಾದ ಸಂಗತಿ.
ಮನೆಯಲ್ಲಿ ಅಮ್ಮ ಅಡುಗೆ ಮಾಡುವಾಗ, ಅಪ್ಪ ಕಚೇರಿಯ ಚಿಂತೆಯಿಂದ ಬಿಡುವು ಪಡೆದಾಗ ಅಥವಾ ಮಗು ಅತ್ತಾಗ ತಕ್ಷಣ ಸಮಾಧಾನಪಡಿಸಲು ಪೋಷಕರು ಮೊಬೈಲನ್ನೇ ತಾತ್ಕಾಲಿಕ ಪರಿಹಾರವಾಗಿ ಬಳಸುತ್ತಿದ್ದಾರೆ. ಒಂದು ಕಾಲವಿತ್ತು... ಸಂಜೆ ಶಾಲೆಯಿಂದ ಮನೆಗೆ ಬಂದ ಮಕ್ಕಳು ಪುಸ್ತಕದ ಚೀಲವನ್ನು ಬದಿಗಿಟ್ಟು ಮೈದಾನದತ್ತ ಓಡುತ್ತಿದ್ದರು. ಕ್ರಿಕೆಟ್ ಆಡುತ್ತಿದ್ದರು. ಇನ್ನು ಕೆಲವರು ಕಣ್ಣಾಮುಚ್ಚಾಲೆ, ಚಿನ್ನಿದಾಂಡು, ಗೋಲಿ, ಲಗೋರಿ ಆಟಗಳಲ್ಲಿ ಮುಳುಗಿರುತ್ತಿದ್ದರು. ಮರ ಹತ್ತುವುದು, ಮಣ್ಣಿನಲ್ಲಿ ಮನೆ ಕಟ್ಟುವುದು, ಮಳೆ ನೀರಿನಲ್ಲಿ ಕಾಗದದ ದೋಣಿ ಬಿಡುವುದು, ಅಜ್ಜಿಯ ಬಳಿ ಕಥೆ ಕೇಳುವುದು... ಇವೆಲ್ಲವೂ ಬಾಲ್ಯದ ಅವಿಭಾಜ್ಯ ಚಟುವಟಿಕೆಗಳಾಗಿದ್ದವು.
ಅಂದು ಮಕ್ಕಳಿಗೆ ಸಮಯ ಕಳೆಯಲು ಮೊಬೈಲ್ ಬೇಕಿರಲಿಲ್ಲ; ಬದುಕೇ ಒಂದು ಸುಂದರ ಆಟವಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಮೈದಾನಗಳಲ್ಲಿ ಮಕ್ಕಳ ಆಟದ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಮಕ್ಕಳ ಕೈಗಳಲ್ಲಿ ಚೆಂಡು, ಬ್ಯಾಟ್, ಪುಸ್ತಕಗಳಿಗಿಂತ ಮೊಬೈಲ್ ಫೋನ್ಗಳೇ ಹೆಚ್ಚಾಗಿ ಕಾಣಿಸುತ್ತಿವೆ. ಸ್ನೇಹಿತರೊಂದಿಗೆ ಮಾತನಾಡುವುದಕ್ಕಿಂತ ಮೊಬೈಲ್ ಪರದೆಯೊಂದಿಗೆ ಕಳೆಯುವ ಸಮಯ ಹೆಚ್ಚಾಗಿದೆ. ಆದರೆ ಈ ಸಣ್ಣ ಪರದೆಯ ಅತಿಯಾದ ಬಳಕೆಯು ಮಕ್ಕಳ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೆಂಬುದನ್ನು ನಾವು ಗಮನಿಸಬೇಕಾಗಿದೆ.
ತಂತ್ರಜ್ಞಾನ ಮನುಷ್ಯನ ಬದುಕನ್ನು ಸುಲಭಗೊಳಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದೇ ತಂತ್ರಜ್ಞಾನ ನಮ್ಮ ಬದುಕಿನ ಅಮೂಲ್ಯ ಸಮಯವನ್ನೇ ಹೆಚ್ಚು ಆಕ್ರಮಿಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ಇಂದು ಗಂಭೀರವಾಗಿ ಕಾಡುತ್ತಿದೆ. ಅದರಲ್ಲೂ ಮಕ್ಕಳ ಬಾಲ್ಯ ಮೊಬೈಲ್ ಪರದೆಯೊಳಗೆ ಸೀಮಿತವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಸಮಸ್ಯೆಗೆ ಪರಿಹಾರವಾಗಿ ಜಗತ್ತಿನಾದ್ಯಂತ ಚರ್ಚೆಯಾಗುತ್ತಿರುವ ಪರಿಕಲ್ಪನೆಯೇ ಡಿಜಿಟಲ್ ಡಿಟಾಕ್ಸ್.
ಡಿಜಿಟಲ್ ಡಿಟಾಕ್ಸ್ ಎಂದರೆ ಮೊಬೈಲ್, ಕಂಪ್ಯೂಟರ್, ಟ್ಯಾಬ್ಲೆಟ್, ಟಿವಿ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಗೆ ಸ್ವಯಂಪ್ರೇರಿತವಾಗಿ ಮಿತಿ ಹಾಕಿಕೊಳ್ಳುವುದು. ತಂತ್ರಜ್ಞಾನದಿಂದ ಸಂಪೂರ್ಣ ದೂರವಾಗುವುದಲ್ಲ; ಅದನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು, ಅದರ ಮೇಲೆ ಅತಿಯಾಗಿ ಅವಲಂಬಿತರಾಗದೆ ಬದುಕುವುದೇ ಇದರ ಮೂಲ ಆಶಯ. ಮೊಬೈಲ್ ನಮ್ಮ ಕೈಯಲ್ಲಿರಬೇಕೇ ಹೊರತು, ನಮ್ಮ ಬದುಕು ಮೊಬೈಲ್ನ ನಿಯಂತ್ರಣಕ್ಕೆ ಒಳಗಾಗಬಾರದು ಎಂಬುದೇ ಡಿಜಿಟಲ್ ಡಿಟಾಕ್ಸ್ನ ಸರಳ ಸಂದೇಶ.
ಇಂದು ಮಕ್ಕಳು ಮೊಬೈಲ್ನಲ್ಲಿ ಆಟವಾಡುತ್ತಾರೆ, ವಿಡಿಯೋ ನೋಡುತ್ತಾರೆ, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಾರೆ. ಆರಂಭದಲ್ಲಿ ಇದು ಮನರಂಜನೆಯಾಗಿ ಕಾಣಿಸಿದರೂ, ಕ್ರಮೇಣ ಅಭ್ಯಾಸವಾಗಿ, ಕೆಲವೊಮ್ಮೆ ನಿಯಂತ್ರಿಸಲು ಕಷ್ಟವಾಗುವಷ್ಟು ಹೆಚ್ಚಾಗಬಹುದು. ಊಟ ಮಾಡುವಾಗ ಮೊಬೈಲ್ ಬೇಕು, ಮಲಗುವಾಗ ಮೊಬೈಲ್ ಬೇಕು, ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಬೇಕು ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಮಕ್ಕಳ ಮೇಲೆ ಹೆಚ್ಚುತ್ತಿರುವ ಡಿಜಿಟಲ್ ಪ್ರಭಾವವನ್ನು ಗಮನಿಸಿರುವ ಹಲವು ದೇಶಗಳು ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಮುಂದಾಗಿವೆ. ಅಮೆರಿಕ, ಆಸ್ಟ್ರೆಲಿಯಾ ದೇಶಗಳಲ್ಲಿಯೂ ಡಿಜಿಟಲ್ ಸಾಧನಗಳ ಬಳಕೆಯನ್ನು ಮಿತಿಗೊಳಿಸುವ ಕುರಿತು ಜಾಗೃತಿ ಮತ್ತು ವಿವಿಧ ಪ್ರಯತ್ನಗಳು ನಡೆಯುತ್ತಿವೆ.
ಡಿಜಿಟಲ್ ಡಿಟಾಕ್ಸ್ ಪರಿಕಲ್ಪನೆ ಈಗ ದೇಶ, ವಿದೇಶಗಳಲ್ಲಿ ವ್ಯಾಪಿಸುತ್ತಿದೆ. ನಮ್ಮ ದೇಶದಲ್ಲೂ ಈ ಅಭಿಯಾನ ನಡೆಯುತ್ತಿದೆ. ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಮೊಬೈಲ್, ಕಂಪ್ಯೂಟರ್ಗಳನ್ನು ದಿನದಲ್ಲಿ ಒಂದಷ್ಟು ಹೊತ್ತು ದೂರವಿಡುವ ಸಾಮೂಹಿಕ ತೀರ್ಮಾನ ಕೈಗೊಂಡ ಬಗ್ಗೆ ಪತ್ರಿಕೆಗಳಲ್ಲಿ ವರದಿ ಓದಿದ್ದೆ. ಛತ್ತೀಸ್ಗಢದಲ್ಲಿಯೂ ಇಂತಹ ಪ್ರಯತ್ನಗಳು ನಡೆದಿರುವ ಬಗ್ಗೆ ವರದಿಗಳಿವೆ. ಮೊಬೈಲ್ ಬಳಕೆಯಿಂದಾಗಿ ಕುಟುಂಬದ ಸದಸ್ಯರಲ್ಲಿ ಪರಸ್ಪರ ಮಾತುಕತೆ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ. ಕುಟುಂಬದ ಸದಸ್ಯರ ನಡುವೆ ಸಾಮರಸ್ಯ ಮೂಡಿಸುವ ದೃಷ್ಟಿಯಿಂದ ಮತ್ತು ಮಕ್ಕಳಲ್ಲಿ ಕೌಟುಂಬಿಕ ಮೌಲ್ಯಗಳ ಅರಿವು ಮೂಡಿಸುವ ಸಲುವಾಗಿ ಪ್ರತಿನಿತ್ಯ ಕನಿಷ್ಠ ಒಂದು ತಾಸು ಮೊಬೈಲ್ ದೂರವಿಡುವ ನಿರ್ಧಾರ ಕೈಗೊಳ್ಳುವುದು ತುಂಬಾ ಅಗತ್ಯ. ಸಂಜೆ ಹೊತ್ತು ಮೊಬೈಲ್ ಬದಿಗಿಟ್ಟು ಕುಟುಂಬದ ಸದಸ್ಯರು ಪರಸ್ಪರ ಸುಖ ದುಃಖ ಹಂಚಿಕೊಳ್ಳಬಹುದು. ಒಟ್ಟಾಗಿ ಕುಳಿತು ಮಾತುಕತೆ, ಹರಟೆ, ಊಟ ಮಾಡಿದರೆ ಸಂಬಂಧಗಳ ಮೌಲ್ಯ ಹೆಚ್ಚುತ್ತದೆ. ಆಹ್ಲಾದಕರ ಅನುಭವ ಉಂಟಾಗುತ್ತದೆ. ಕುಟುಂಬ ಹಾಗೂ ಸಮಾಜದ ಹಿತದೃಷ್ಟಿಯಿಂದ ಇದೊಂದು ಉತ್ತಮ ಬೆಳವಣಿಗೆ ಹಾಗೂ ಕಾಲದ ಅನಿವಾರ್ಯತೆಯೂ ಹೌದು.
ಹರಿಯಾಣದಲ್ಲಿ ಎಲ್ಕೆಜಿ ಬಾಲಕಿಯ ಮೇಲೆ ಮೂರನೇ ತರಗತಿಯ ಬಾಲಕನು ಹಲ್ಲೆ ನಡೆಸಿದ ಅತ್ಯಂತ ನೋವಿನ ಮತ್ತು ಆತಂಕಕಾರಿ ಘಟನೆ ನಡೆದಿದ್ದು, ಇಂತಹ ಘಟನೆಗಳ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ. ಇಂತಹ ಘಟನೆಗಳ ಹಿನ್ನೆಲೆಯನ್ನು ಅವಲೋಕಿಸುವಾಗ ಮಕ್ಕಳ ಮನಸ್ಥಿತಿ, ಅವರ ಸುತ್ತಮುತ್ತಲಿನ ವಾತಾವರಣ, ಅವರಿಗೆ ದೊರೆಯುವ ಮಾರ್ಗದರ್ಶನ ಹಾಗೂ ಡಿಜಿಟಲ್ ಮಾಧ್ಯಮಗಳ ಪ್ರಭಾವ ಸೇರಿದಂತೆ ಹಲವು ಅಂಶಗಳ ಬಗ್ಗೆ ಚಿಂತಿಸಬೇಕಾಗುತ್ತದೆ. ಮಕ್ಕಳು ಮೊಬೈಲ್ನಲ್ಲಿ ಏನು ನೋಡುತ್ತಿದ್ದಾರೆ ಎಂಬುದರ ಬಗ್ಗೆ ಕೆಲವು ಪೋಷಕರಿಗೆ ಸಾಕಷ್ಟು ಅರಿವು ಇಲ್ಲದಿರುವುದು ಸಹ ಗಮನಹರಿಸಬೇಕಾದ ವಿಷಯವಾಗಿದೆ.
ಮಕ್ಕಳು ಮೊಬೈಲ್ ಬಳಕೆಯಲ್ಲಿ ಹೆಚ್ಚು ಆಸಕ್ತಿ ತೋರುವುದಕ್ಕೆ ಕೇವಲ ಅವರನ್ನೇ ಹೊಣೆ ಮಾಡುವುದು ಸರಿಯಲ್ಲ. ಅನೇಕ ಸಂದರ್ಭಗಳಲ್ಲಿ ಹೆತ್ತವರೇ ಅವರಿಗೆ ಮೊಬೈಲ್ ಪರಿಚಯಿಸುತ್ತೇವೆ. ಊಟ ಮಾಡಿಸಲು ಮೊಬೈಲ್ ತೋರಿಸುತ್ತೇವೆ. ಅಳುವುದನ್ನು ನಿಲ್ಲಿಸಲು ವಿಡಿಯೋ ಹಾಕುತ್ತೇವೆ. ಸುಮ್ಮನಿರಲಿ ಎಂದು ಕೈಗೆ ಫೋನ್ ಕೊಡುತ್ತೇವೆ. ಕೊನೆಗೆ ಅದೇ ಅಭ್ಯಾಸವಾಗಿ ಬೆಳೆದಾಗ ಮಕ್ಕಳನ್ನು ಗದರಿಸುವ ಸಂದರ್ಭಗಳೂ ಎದುರಾಗುತ್ತವೆ.
ತಾಯಿ ಮೊಬೈಲ್ನಲ್ಲಿ ರೀಲ್ಸ್ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಸುಮಾರು ಎರಡು ವರ್ಷದ ಮಗು ಮೂರನೇ ಮಹಡಿಯಿಂದ ಕೆಳಗೆ ಬಿದ್ದಿರುವುದಾಗಿ ವರದಿಯಾದ ಘಟನೆಯೂ ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ನೆನಪಿಸುತ್ತದೆ. ಇಂತಹ ಘಟನೆಗಳನ್ನು ಅವಲೋಕಿಸಿದಾಗ ಪೋಷಕರು ತಮ್ಮ ಮೊಬೈಲ್ ಬಳಕೆಯನ್ನು ನಿಯಂತ್ರಿಸುವುದರ ಜೊತೆಗೆ ಮಕ್ಕಳ ಸುರಕ್ಷತೆ ಹಾಗೂ ಆರೈಕೆಗೆ ಹೆಚ್ಚಿನ ಗಮನ ನೀಡಬೇಕು ಎಂಬುದು ಅರಿವಾಗುತ್ತದೆ. ಮಕ್ಕಳ ಮುಂದೆ ಸದಾ ಮೊಬೈಲ್ ಬಳಕೆಯಲ್ಲಿ ತೊಡಗಿರುವ ಪೋಷಕರು, ಮಕ್ಕಳಿಗೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಎಂದು ಹೇಳುವುದಕ್ಕಿಂತ ತಾವೇ ಉತ್ತಮ ಮಾದರಿಯಾಗುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಇಂದು ಮಕ್ಕಳಿಗೆ ದುಬಾರಿ ಮೊಬೈಲ್ ಕೊಡಿಸಲು ನಾವು ಸಿದ್ಧರಿದ್ದೇವೆ. ಅತ್ಯಾಧುನಿಕ ಗ್ಯಾಜೆಟ್ಗಳನ್ನು ಕೊಡಲು ಹಿಂದೆ ಮುಂದೆ ನೋಡುವುದಿಲ್ಲ. ಆದರೆ ಅವರೊಂದಿಗೆ ಕುಳಿತು ಮಾತನಾಡಲು, ಅವರ ಪ್ರಶ್ನೆಗಳಿಗೆ ಉತ್ತರಿಸಲು, ಅವರೊಂದಿಗೆ ಆಟವಾಡಲು ಎಷ್ಟು ಸಮಯ ಕೊಡುತ್ತಿದ್ದೇವೆ ಎಂದು ಯೋಚಿಸಬೇಕು. ಮಕ್ಕಳಿಗೆ ಬೇಕಾಗಿರುವುದು ಕೇವಲ ಮೊಬೈಲ್ ಅಲ್ಲ. ಅಪ್ಪ&ಅಮ್ಮನ ಪ್ರೀತಿ, ಅಜ್ಜ&ಅಜ್ಜಿಯ ಕಥೆಗಳು, ಗೆಳೆಯರ ಸ್ನೇಹ, ಆಟದ ಮೈದಾನ, ಪ್ರಕೃತಿಯ ಒಡನಾಟ ಎನ್ನುವುದನ್ನು ಅರಿತುಕೊಳ್ಳುವುದು ಹೆತ್ತವರ ಜವಾಬ್ದಾರಿಯೂ ಆಗಿದೆ. ಮಕ್ಕಳಿಗೆ ಡಿಜಿಟಲ್ ಜ್ಞಾನ ನೀಡುವಷ್ಟೇ ಮುಖ್ಯವಾಗಿ ನೈಜ ಬದುಕಿನ ಅನುಭವಗಳನ್ನೂ ನೀಡಬೇಕು.
ಕುಟುಂಬದಲ್ಲಿ ಊಟದ ಸಮಯವನ್ನು ಮೊಬೈಲ್ ಮುಕ್ತ ಸಮಯವನ್ನಾಗಿ ಮಾಡಬೇಕು. ರಾತ್ರಿ ಮಲಗುವ ಮುನ್ನ ಮೊಬೈಲ್ ಬಳಕೆಯನ್ನು ತಪ್ಪಿಸಬೇಕು. ಮಕ್ಕಳಲ್ಲಿ ಒಂಟಿತನದ ಭಾವನೆ ಮೂಡದಂತೆ ಅವರ ಜೊತೆ ಪ್ರತಿದಿನ ಮಾತನಾಡಬೇಕು. ಪ್ರತಿದಿನ ಹೊರಾಂಗಣ ಆಟಕ್ಕೆ ಅವಕಾಶ ನೀಡಬೇಕು. ಕಥೆ ಪುಸ್ತಕ ಓದುವ, ಚಿತ್ರ ಬಿಡಿಸುವ, ಸಂಗೀತ ಕಲಿಯುವ, ತೋಟಗಾರಿಕೆ ಮಾಡುವ ಹವ್ಯಾಸಗಳನ್ನು ಬೆಳೆಸಬೇಕು. ಆಗ ಮನಸ್ಸು ವಿಕಸಿತವಾಗುತ್ತದೆ.
ತಂತ್ರಜ್ಞಾನದ ಅತಿಯಾದ ಬಳಕೆಯನ್ನು ನಿಯಂತ್ರಿಸಲು "ಡಿಜಿಟಲ್ ಡಿಟಾಕ್ಸ್' ಅಭಿಯಾನಗಳ ಮೂಲಕ ಸೂಕ್ತ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಇಂದಿನ ಅಗತ್ಯವಾಗಿದೆ. ಇಂತಹ ಪ್ರಯತ್ನಗಳಿಂದ ಜನರಿಗೆ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಹಾಗೂ ಹಿತಮಿತವಾಗಿ ಬಳಸುವ ಬಗ್ಗೆ ಸರಿಯಾದ ತಿಳುವಳಿಕೆ ನೀಡಲು ಸಾಧ್ಯವಾಗುತ್ತದೆ.
ನಾವು ಮೊಬೈಲ್ ಮತ್ತು ಇತರ ಡಿಜಿಟಲ್ ಸಾಧನಗಳಿಂದ ಸ್ವಲ್ಪ ಸಮಯ ದೂರವಿದ್ದು, ನಿಜಜೀವನದ ಸಂಬಂಧಗಳು ಮತ್ತು ಪ್ರಕೃತಿಯೊಂದಿಗೆ ಬೆರೆಯುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಆಧುನಿಕ ಜೀವನದ ಒತ್ತಡ ಹಾಗೂ ಮಾನಸಿಕ ಅಶಾಂತಿಯನ್ನು ಕಡಿಮೆ ಮಾಡಿಕೊಂಡು, ಮನಸ್ಸಿಗೆ ನಿಜವಾದ ನೆಮ್ಮದಿ ಮತ್ತು ಆರೋಗ್ಯಕರ ಬದುಕನ್ನು ಕಂಡುಕೊಳ್ಳಲು ಖಂಡಿತಾ ಸಾಧ್ಯವಿದೆ.