ಅನೇಕ ಜನರು ಶ್ರೀಕ್ಷೇತ್ರದಲ್ಲಿ ನನ್ನನ್ನು ಭೇಟಿಯಾಗುವಾಗ ಗಂಡ-ಹೆಂಡತಿ ಪರಸ್ಪರ ದೂರು ಹೇಳುತ್ತಾರೆ. ‘ಅವರು ಕುಡಿದು ಬಂದು ಗಲಾಟೆ ಮಾಡುತ್ತಾರೆ, ಮಕ್ಕಳನ್ನು, ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ, ಇವರನ್ನು ಮದುವೆಯಾಗಿನಿಂದ ನನಗೆ ನೆಮ್ಮದಿಯೇ ಇಲ್ಲ’ ಎಂದು ಪತ್ನಿ ಅವಲತ್ತುಕೊಂಡರೆ, ಆತ ‘ನಾನು ದುಡಿದು ಮನೆಗೆ ತಂದು ಹಾಕಿದ್ದನ್ನು ಸರಿಯಾಗಿ ಬೇಯಿಸಿ ಹಾಕೋದಿಲ್ಲ, ಮನೆಯಲ್ಲಿ ಒಂದು ಕೆಲಸಾನೂ ನೆಟ್ಟಗೆ ಮಾಡಲ್ಲ, ಸಂಜೆ ಮನೆಗೆ ಕಾಲಿಟ್ಟೊಡನೆ ಕಿರಿಕಿರಿ ಮಾಡುತ್ತಾಳೆ’ ಎಂದು ಆಕೆಯ ಬಗ್ಗೆ ದೂರು ಕೊಡುತ್ತಾನೆ. ಹೀಗೆ ಇಬ್ಬರೂ ದೂರನ್ನು ಹೇಳಿಕೊಂಡಾಗ ಅವರನ್ನು ಸಮಾಧಾನಿಸಿ, ‘ಹೀಗೆ ನೀವಿಬ್ಬರೂ ಜಗಳ ಮಾಡಿದರೆ ಮಕ್ಕಳ ಗತಿ ಏನು? ಅವರು ಕೂಡ ನಿಮ್ಮ ಬುದ್ಧಿಯನ್ನೇ ಕಲಿಯುತ್ತಾರಲ್ಲವೇ? ನೀವು ಇಷ್ಟು ದೊಡ್ಡವರಿದ್ದೀರಿ, ಮಕ್ಕಳ ಮುಂದೆ ಜಗಳ ಮಾಡಬಾರದು. ಸಂಸಾರ ಎಂದ ಮೇಲೆ ಕೋಪತಾಪ ಇದ್ದದ್ದೇ, ಬೇವು-ಬೆಲ್ಲದಂತೆ ಅನುಸರಿಸಿಕೊಂಡು ಹೋದರೆ ಜೀವನ ರಸಮಯವಾಗುವುದು’ ಎನ್ನುತ್ತೇನೆ. ಕುಟುಂಬ, ರಾಜಕೀಯ, ಆಡಳಿತ ಹೀಗೆ ಎಲ್ಲ ವ್ಯವಸ್ಥೆಗಳು ಹಾಳಾಗುವುದು ಕೋಪ, ವೈಮನಸ್ಸುಗಳಿಂದ. ಈ ಮನೋಭಾವವನ್ನು ದೂರ ಮಾಡಿದಾಗ ಮಾತ್ರ ಸುಖ-ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ. ಶ್ರೀಕ್ಷೇತ್ರದ ಸ್ವಸಹಾಯ ಸಂಘಗಳಲ್ಲಿ ಆರ್ಥಿಕತೆಯ ಮಾಹಿತಿಯ ಜತೆಗೆ ವಿವಿಧ ಕಾರ್ಯಕ್ರಮಗಳ ಜೀವನ ಮೌಲ್ಯಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ. ‘ಸ್ವಸಹಾಯ ಸಂಘಗಳಿಗೆ ಸೇರಿದ ಮೇಲೆ ಮನೆಯಲ್ಲಿ ಗಲಾಟೆಗಳು ಕಡಿಮೆಯಾಗಿವೆ. ಹೆಂಡತಿಯೂ ಸ್ವಉದ್ಯೋಗ, ಕರಕುಶಲ ತಯಾರಿ ಇತ್ಯಾದಿ ಮೂಲಕ ಹಣ ಸಂಪಾದಿಸುವುದರಿಂದ ಗಂಡನನ್ನು ಸಂಪೂರ್ಣವಾಗಿ ಅವಲಂಬಿಸದೆ ಮನೆಯನ್ನು ನಿರ್ವಹಿಸಿಕೊಂಡು ಹೋಗುತ್ತಾಳೆ. ತನಗಾಗಿ ಖರ್ಚು ಮಾಡಿ ಒಮ್ಮೊಮ್ಮೆ ಗಂಡನಿಗೂ ಸಾಲ ಕೊಡುತ್ತಾಳೆ’ ಎಂದು ಯೋಜನೆಯ ಕಾರ್ಯಕರ್ತರು ಇಂತಹ ಅನೇಕ ಉದಾಹರಣೆಗಳ ಸಹಿತ ಹೇಳುತ್ತಾರೆ.