ವಿಶ್ವದ ಐಕ್ಯತೆ, ಸಾಮರಸ್ಯ, ಪ್ರಗತಿಗೆ ಧ್ವನಿಯಾಗಲಿ..

Heggade 1
ಡಾ. ಹೆಗ್ಗಡೆಯವರು ಪ್ರಿನ್ಸ್ ಚಾರ್ಲ್ಸ್​ರನ್ನು ಭೇಟಿಯಾಗಿರುವುದು.
Published on
ಎಪ್ಪತ್ತು ವರ್ಷಗಳ ದೀರ್ಘಾವಧಿಗೆ ಇಂಗ್ಲೆಂಡಿನ ರಾಣಿಯಾಗಿದ್ದ 2ನೇ ಎಲಿಜಬೆತ್ ವಯೋಸಹಜ ಅನಾರೋಗ್ಯದಿಂದ 96ನೇ ವರ್ಷದಲ್ಲಿ ನಿಧನರಾದ ಸುದ್ದಿ ತಿಳಿದಾಗ, ನಾನು ಇಂಗ್ಲೆಂಡ್​ಗೆ ಹೋದಾಗ ಅಂದಿನ ಪ್ರಿನ್ಸ್ ಚಾರ್ಲ್ಸ್ ಅವರನ್ನು ಭೇಟಿಯಾದ ಕ್ಷಣ ನೆನಪಿಗೆ ಬಂತು. ಇಂಗ್ಲೆಂಡ್​ನಲ್ಲಿ ‘ಲಾಂಗ್ ಲಿವ್ ದಿ ಕಿಂಗ್’ ಎಂದು ರಾಜನನ್ನು ಹರಸುವ ಸಂಪ್ರದಾಯವಿದೆ. ಅಂತೆಯೇ ರಾಜ ಮೃತಪಟ್ಟಾಗ ‘ದಿ ಕಿಂಗ್ ಇಸ್ ಡೆಡ್ ಲಾಂಗ್ ಲಿವ್ ಕಿಂಗ್’ ಎಂದು ಹೇಳುತ್ತಾರೆ. ಅಂದರೆ, ರಾಜ ಸತ್ತಿದ್ದಾನೆ; ರಾಜ ದೀರ್ಘಾಯುಷಿಯಾಗಲಿ ಎಂದು. ಅಲ್ಲಿನವರು ಬ್ರಿಟಿಷ್ ಆಡಳಿತದ ಮೇಲಿನ ಶ್ರದ್ಧೆ, ನಂಬಿಕೆ ಹಾಗೂ ರಾಜಮನೆತನದ ಮೇಲಿನ ಒಲವು, ಗೌರವ ವ್ಯಕ್ತಪಡಿಸುತ್ತ, ಪರಂಪರೆ- ಸಂಸ್ಕೃತಿಗಳು ಮುಂದುವರಿಯಲಿ ಎಂದು ಆಶಿಸುತ್ತಾ ಮೇಲಿನ ಮಾತನ್ನು ಪುನರುಚ್ಚರಿಸುತ್ತಾರೆ.

ರಾಣಿ 2ನೇ ಎಲಿಜಬೆತ್ ನಿಧನಕ್ಕೂ ಮುನ್ನ ಮಗ 3ನೇ ಚಾರ್ಲ್ಸ್ (73) ಅವರನ್ನು ಉತ್ತರಾಧಿಕಾರಿಯನ್ನಾಗಿ ಘೊಷಣೆ ಮಾಡಿದ್ದರು. ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಸರ್ಕಾರ ದೇಶದ ಆಡಳಿತ ನಡೆಸುತ್ತಿದ್ದರೂ ರಾಜಮನೆತನಕ್ಕೆ ಸರ್ಕಾರ ಹಾಗೂ ಅಲ್ಲಿನ ಪ್ರಜೆಗಳು ನಿಷ್ಠರಾಗಿದ್ದುಕೊಂಡು ವಿಶೇಷವಾದ ಗೌರವಾದರಗಳನ್ನು ಇಂದಿಗೂ ಸಲ್ಲಿಸುತ್ತಾರೆ. ಅದರಂತೆ ಇದೀಗ 3ನೇ ಚಾರ್ಲ್ಸ್ ಬ್ರಿಟನ್​ನ ರಾಜನಾಗಿ ಅಧಿಕೃತವಾಗಿ ನೇಮಕಕೊಂಡಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಜನಸ್ತೋಮ ‘ಗಾಡ್ ಸೇವ್ ದಿ ಕಿಂಗ್’ (ಭಗವಂತನೆ ದೊರೆಯನ್ನು ರಕ್ಷಿಸು) ಎಂದು ಉದ್ಘೋಷ ಮಾಡಿ ಗೌರವ ಸೂಚಿಸಿದ್ದಾರೆ. ಅಲ್ಲಿನ ರಾಜಮನೆತನವು ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಲ್ಲದೆ, ಪ್ರಜಾಪ್ರೀತಿಯನ್ನು ಗಳಿಸಿದೆ.

2012ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ‘ಗ್ರೀನ್ ಆಸ್ಕರ್’ ಎಂದೇ ಖ್ಯಾತಿಯಾಗಿರುವ ಆಶ್ಡನ್ ಪ್ರಶಸ್ತಿಗೆ ಭಾಜನವಾಗಿತ್ತು. ಸುಸ್ಥಿರ ಪರ್ಯಾಯ ಇಂಧನ ಮೂಲಗಳಾದ ಸೌರ, ಜಲ ಮತ್ತು ಪವನ ವಿದ್ಯುತ್ ಹಾಗೂ ಬಯೋಗ್ಯಾಸ್​ನಂತಹ ಕಾರ್ಯಕ್ರಮಗಳ ಅನುಷ್ಠಾನ ಮಾಡಿದ ಹಾಗೂ ಜನಸಾಮಾನ್ಯರು ಕೂಡ ಇವುಗಳ ಪ್ರಯೋಜನ ಪಡೆಯುವಲ್ಲಿ ಶ್ರಮಿಸಿದ ಸಂಸ್ಥೆಗಳಿಗೆ ಇದನ್ನು ಲಂಡನ್​ನಲ್ಲಿರುವ ಆಶ್ಡನ್ ಫೌಂಡೇಶನ್​ನಿಂದ ಕೊಡಲಾಗುತ್ತದೆ. ಆ ಪ್ರಶಸ್ತಿ ಸ್ವೀಕರಿಸಲು ನಾನು ಮತ್ತು ಸಂಸ್ಥೆಯ ಕಾರ್ಯನಿರ್ವಾಹಕ ಡಾ. ಎಲ್. ಎಚ್. ಮಂಜುನಾಥ್ ಲಂಡನ್​ಗೆ ತೆರಳಿದ್ದೆವು.

ಆ ವರ್ಷ ವಿವಿಧ ದೇಶಗಳ 251 ಸಂಘ- ಸಂಸ್ಥೆಗಳ ಅರ್ಜಿಗಳನ್ನು ಪರಿಶೀಲಿಸಿ ಅಂತಿಮವಾಗಿ ಭಾರತ, ಅಫ್ಘಾನಿಸ್ತಾನ, ಇಂಡೋನೇಶ್ಯಾ, ಕಾಂಬೋಡಿಯಾ, ಉಗಾಂಡ, ನ್ಯೂಜಿಲೆಂಡ್, ಫಿಲಿಪ್ಪೀನ್ಸ್ ಮತ್ತು ಪೆರು ರಾಷ್ಟ್ರಗಳ ವಿವಿಧ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿತ್ತು. ಹೀಗೆ ಆಯ್ಕೆಯಾದ ಸಂಸ್ಥೆಗಳ ಪೈಕಿ ಅತಿ ಶ್ರೇಷ್ಠ ಸಾಧನೆ ಮಾಡಿದ ಸಂಸ್ಥೆಯೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಗುರುತಿಸಿ ಸಮಗ್ರ ಪ್ರಶಸ್ತಿ ನೀಡಿದ್ದರು. ಇವೆಲ್ಲವೂ ನಮ್ಮ ಕಾರ್ಯಕರ್ತರ ಅವಿರತ ಶ್ರಮ ಹಾಗೂ ಸೇವೆಗೆ ಸಂದ ಗೌರವವಾಗಿದೆ. ಈ ಕಾರಣಕ್ಕಾಗಿ ಇಂಗ್ಲೆಂಡ್​ನ ಯುವರಾಜನಾಗಿದ್ದ ಪ್ರಿನ್ಸ್ ಚಾರ್ಲ್ಸ್​ರನ್ನು ಭೇಟಿ ಮಾಡಿ ಅವರೊಂದಿಗೆ ಚಹಾ ಕೂಟ ಹಾಗೂ ಮಾತುಕತೆ ನಡೆಸುವ ಅವಕಾಶ ಕಲ್ಪಿಸಲಾಗಿತ್ತು. ನಿಗದಿಪಡಿಸಿದ ದಿನದಂದು ಯುವರಾಜರ ಅರಮನೆ ಕ್ಲಾರೆನ್ಸ್​ಹೌಸ್​ಗೆ ತೆರಳಿ ಅವರೊಡನೆ ಮಾತುಕತೆ ನಡೆಸಿದೆವು. ಯುವರಾಜ ಚಾರ್ಲ್ಸ್

ಅವರು ಬಂದವರೊಡನೆ ಖುದ್ದಾಗಿ ಕುಶಲೋಪರಿ ವಿಚಾರಿಸಿದರು. ಪ್ರಶಸ್ತಿ ಪಡೆದ ಸಂಸ್ಥೆಯ ಕಾರ್ಯಗಳ ಬಗ್ಗೆ ಆ ಪ್ರತಿನಿಧಿಗಳನ್ನು ಪ್ರಶ್ನಿಸಿ ಅಭಿನಂದಿಸಿದ್ದರು. ನಮ್ಮ ಕಾರ್ಯಚಟುವಟಿಕೆಗಳ ಬಗ್ಗೆಯೂ ಪ್ರಶ್ನಿಸಿದರು. ‘ವಿದ್ಯುತ್ ಉಳಿತಾಯಕ್ಕಾಗಿ ಸಾವಿರಾರು ಸೌರ ವಿದ್ಯುತ್ ಘಟಕಗಳನ್ನು ನಿರ್ವಿುಸಿದ್ದೇವೆ. ಗ್ರಾಮೀಣ ಜನತೆಗೆ ಸೋಲಾರ್, ಬಯೋ ಗ್ಯಾಸ್ ಮುಂತಾದ ಹಸಿರು ಇಂಧನ ಬಳಕೆಯ ಬಗ್ಗೆ ಮಾಹಿತಿ, ತರಬೇತಿ ನೀಡುವ ಕಾರ್ಯ ನಡೆಸುತ್ತಿದ್ದೇವೆ’ ಎಂದು ವಿವರಿಸಿದಾಗ ಅವರು ಸಂತೋಷದಿಂದ ಶುಭ ಹಾರೈಸಿದರು. ಆ ಬಳಿಕ ವ್ಯಕ್ತಿಗತವಾಗಿ ಪ್ರಶಸ್ತಿಗೆ ಪಾತ್ರರಾದವರೊಡನೆ ಮಾತನಾಡುವ ವ್ಯವಸ್ಥೆ ಇತ್ತು.

ಇದೇ ವೇಳೆ ಅವರಿಗೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಹೆಸರಿರುವ ಶಾಲು ಹೊದೆಸಿ ಗೌರವಿಸಿದೆ. ಅಲ್ಲದೆ, ಶ್ರೀ ಕ್ಷೇತ್ರದ ನಾಣ್ಯ ಹಾಗೂ ಪುಸ್ತಕ ನೀಡಿದೆ. ಅದರಲ್ಲಿ ಕಾರ್​ವು್ಯೂಸಿಯಂನಲ್ಲಿ ಇದ್ದ 1949ನೇ ಮಾಡೆಲ್​ನ ಡ್ಯಾಮ್ಲರ್ ಸ್ಟ್ರೈಟ್ 8 ಕಾರಿನ ಭಾವಚಿತ್ರವಿತ್ತು. ಅದನ್ನು ನೋಡಿ ಅವರ ಮುಖದಲ್ಲಿ ಮಂದಹಾಸ ಮಿನುಗಿತು. ಆಶ್ಚರ್ಯಚಕಿತರಾಗಿ ‘ವೇರ್ ಇಸ್ ಶೀ’ (ಅವಳು ಈಗ ಎಲ್ಲಿದ್ದಾಳೆ?) ಎಂದು ಕೇಳಿದರು. ಆ ಮಾತಿನಲ್ಲಿ ಅವರಿಗೆ ಕಾರಿನ ಮೇಲಿದ್ದ ಪ್ರೀತಿ ವ್ಯಕ್ತವಾಗುತ್ತಿತ್ತು. ಭಾರತದಲ್ಲಿ ನದಿಗಳಿಗೆ ಸ್ತ್ರೀಯರ ಹೆಸರನ್ನು ಇಟ್ಟು ಕರೆಯುವ ಹಾಗೆ ಅವರು ಕಾರನ್ನು ಸ್ತ್ರೀರೂಪವಾಗಿ ಕಂಡು ‘ವೇರ್ ಇಸ್ ಶೀ’ ಎಂದಿದ್ದರು. ‘ಅವಳು ನಮ್ಮ ಕ್ಷೇತ್ರದಲ್ಲಿದ್ದಾಳೆ. ಪ್ರವಾಸಿಗರ ಪಾಲಿಗೆ ವಿಶೇಷ ಆಕರ್ಷಣೆಯಾಗಿದ್ದಾಳೆ’ ಎಂದು ಹೇಳಿದೆ. ಅಲ್ಲದೆ, ಕಾರಿನೊಂದಿಗೆ ನಾನಿದ್ದ ಫೋಟೋವನ್ನು ಅವರಿಗೆ ನೀಡಿದೆ. ‘ಅವಳನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ನಗುತ್ತಾ ತಿಳಿಸಿದರು.

ಆ ಕಾರನ್ನು 1948ರಲ್ಲಿ ಅಂದಿನ ಇಂಗ್ಲೆಂಡ್ ರಾಣಿ ವಿಕ್ಟೋರಿಯಾ ಅವರ ಆಸ್ಟ್ರೇಲಿಯಾ ಪ್ರವಾಸಕ್ಕೆ ಎಂದು ವಿಶೇಷವಾಗಿ ತಯಾರಿಸಲಾಗಿತ್ತು. ಆದರೆ, ಅನೇಕ ಕಾರಣಗಳಿಂದ ಅವರ ಪ್ರವಾಸ ಮೊಟಕುಗೊಂಡು ಅದು ಡ್ಯಾಮ್ಲರ್ ಕಂಪನಿಯಲ್ಲೇ ಉಳಿದುಕೊಂಡಿತ್ತು. ಆಗಿನ ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಇಂಗ್ಲೆಂಡಿನ ರಾಜಮನೆತನದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರು ಈ ಕಾರಿನ ಬಗ್ಗೆ ತಿಳಿದು ಕಂಪನಿಯ ಜೊತೆ ಮಾತನಾಡಿ ಅದನ್ನು ಖರೀದಿಸಿ ಮೈಸೂರಿಗೆ ತಂದಿದ್ದರು. ಮೈಸೂರು ಅರಮನೆಯಲ್ಲಿ ಹಲವು ವರ್ಷಗಳ ಕಾಲ ಬಳಕೆಯಲ್ಲಿತ್ತು. ಸುಮಾರು ವರ್ಷಗಳ ಬಳಿಕ ಮೈಸೂರು ಮಹಾರಾಜರು ಡ್ಯಾಮ್ಲರ್ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆಂಬ ಸುದ್ದಿ ತಿಳಿದು ಬಂತು. ಕಾರು ಸಂಗ್ರಾಹಕನಾದ ನನಗೆ ಅದನ್ನು ಯಾಕೆ ಕ್ಷೇತ್ರಕ್ಕೆ ತರಬಾರದು ಎಂದು ಆಲೋಚನೆಯಾಯಿತು. ಬಳಿಕ ನಮ್ಮ ಆತ್ಮೀಯರು ಸುತ್ತೂರು ಶ್ರೀಗಳ ಸಹಕಾರದಿಂದ ಮಹಾರಾಜರನ್ನು ಸಂರ್ಪಸಲು ಸೂಚಿಸಿದರು. ಸುತ್ತೂರು ಶ್ರೀಗಳು ‘ಮಹಾರಾಜರಲ್ಲಿ ಚೌಕಾಸಿ ಮಾಡುವುದು ಬೇಡ. ಅವರು ಎಷ್ಟು ಹೇಳುತ್ತಾರೋ ಅಷ್ಟು ಕೊಟ್ಟು ಕಾರನ್ನು ತರುವುದು ಒಳ್ಳೆಯದು’ ಎಂದು ಹೇಳಿ ಮಹಾರಾಜರನ್ನು ಭೇಟಿ ಮಾಡಿಸಿದರು. ಮಹಾರಾಜರನ್ನು ಭೇಟಿಯಾಗಿ ಅವರು ತಿಳಿಸಿದ ಮೊತ್ತವನ್ನು ಭರಿಸಿ ಕಾರನ್ನು ಶ್ರೀ ಕ್ಷೇತ್ರಕ್ಕೆ ತಂದೆವು. ಇದು ಬಹಳ ವಿಶಿಷ್ಟವಾದ ಕಾರು.

ಇಂದಿನ ರಾಜ ಚಾರ್ಲ್ಸ್ ಅವರ ಭೇಟಿಯ ಕ್ಷಣ ಈಗಲೂ ನನಗೆ ನೆನಪಿನಲ್ಲಿದೆ. ಅವರ ವ್ಯಕ್ತಿತ್ವ, ನೀಳಕಾಯ, ಗಾಂಭೀರ್ಯ ಎಲ್ಲವೂ ನನ್ನನ್ನು ಆಕರ್ಷಿಸಿದ್ದವು. ಅವರು ದೃಢಕಾಯ ಹೊಂದಿದ್ದು, ಯೌವ್ವನದಲ್ಲಿ ಆಟೋಟಗಳಲ್ಲಿ ಸಕ್ರಿಯರಾಗಿದ್ದರು. ಕುದುರೆ ಸವಾರಿ ಅವರಿಗೆ ಬಲು ಇಷ್ಟವಾಗಿತ್ತು ಮತ್ತು ಕುದುರೆಯಲ್ಲಿ ಕುಳಿತು ಪೋಲೋ ಆಟ ಆಡುತ್ತಿದ್ದರು ಎಂಬುದನ್ನು ನಾವು ಕೇಳಿದ್ದೇವೆ. ಅದರ ಜೊತೆಗೆ ಅವರ ಸೌಮ್ಯ ಸ್ವಭಾವ, ವಿನಯದಿಂದ ಕೂಡಿದ ನಡವಳಿಕೆ ಇಷ್ಟವಾಯಿತು. ಅವರು ಪ್ರಶಸ್ತಿ ವಿತರಣೆಯ ಸಂದರ್ಭದಲ್ಲಿ ಅಲ್ಲಿದವರನ್ನು ಉದ್ದೇಶಿಸಿ ಮಾತನಾಡಿದ ಶೈಲಿ, ವಿಚಾರಗಳು ಸ್ಮರಣೀಯವಾಗಿದೆ. ಗಮನಾರ್ಹವಾದದ್ದು ಎಂದರೆ ಅವರ ಕೈ ಬೆರಳುಗಳು. ಸಾಮಾನ್ಯರ ಎರಡು ಬೆರಳು ಸೇರಿಸಿದರೆ ಅವರ ಒಂದು ಬೆರಳಾಗುತ್ತಿತ್ತು.

ಪ್ರಿನ್ಸ್ ಚಾರ್ಲ್ಸ್ ಪ್ರಸಿದ್ಧಿಗೆ ಬಂದಿದ್ದು ಅವರ ಮಡದಿ ಡಯಾನಾಳಿಂದಾಗಿ. ಆಕೆ ಬ್ರಿಟನ್​ನಲ್ಲಿ ಅತ್ಯಂತ ಸುಂದರಿ ಎಂದು ಖ್ಯಾತಿ ಹೊಂದಿದ್ದರು. ಅದರ ಜೊತೆಗೆ ಸಾರ್ವಜನಿಕ ಸಂಪರ್ಕ, ಸಮಾಜ ಸೇವೆಯಲ್ಲೂ ತೊಡಗಿಕೊಂಡು ಪ್ರಸಿದ್ಧರಾಗಿದ್ದರು. ಆದರೆ, ಸಂಸಾರದಲ್ಲಿ ಬಿರುಕು ಉಂಟಾಗಿ ವಿಚ್ಛೇದನ ಪಡೆದಿದ್ದರು. ಬಳಿಕ ಅವರು ಕಾರು ಅಪಘಾತದಲ್ಲಿ ದುರ್ಮರಣ ಹೊಂದಿದರು.

ಬ್ರಿಟನ್​ನ ರಾಜನಾಗಿ ಅಧಿಕಾರ ವಹಿಸಿದ 3ನೇ ಚಾರ್ಲ್ಸ್ ಅವರಿಗೆ ನಾನು ಶುಭಾಶಯ ಕೋರಿದ್ದೇನೆ ಮತ್ತು ಕ್ಷೇತ್ರದ ಆಶೀರ್ವಾದವನ್ನು ಕಳುಹಿಸಿದ್ದೇನೆ. ‘ದೀರ್ಘಾಯಸ್ಸು ನಿಮ್ಮದಾಗಲಿ ಹಾಗೂ ನಿಮ್ಮ ಆಡಳಿತಾವಧಿಯಲ್ಲಿ ಇಂಗ್ಲೆಂಡ್ ಮತ್ತಷ್ಟು ಅಭಿವೃದ್ಧಿಯಾಗಲಿ’ ಎಂದು ಶುಭ ಹಾರೈಸಿದ್ದೇನೆ.

ಈಗ ಇಂಗ್ಲೆಂಡ್​ನಲ್ಲಿ ರಾಜಪ್ರಭುತ್ವ ಬೇಕೆ, ಬೇಡವೇ ಎನ್ನುವ ಚರ್ಚೆ ನಡೆಯುತ್ತಿದೆ. ಈಗ ಆಯ್ಕೆಯಾಗಿರುವ ನೂತನ ಪ್ರಧಾನಿಯೂ ಕೆಲವು ವರ್ಷಗಳ ಹಿಂದೆ ಪ್ರಜಾಪ್ರಭುತ್ವದಲ್ಲಿ ರಾಜಮನೆತನದ ಪಾತ್ರದ ಬಗ್ಗೆ ಮಾತನಾಡಿದ್ದರು. ಪ್ರಜಾಪ್ರಭುತ್ವ ಮತ್ತು ರಾಜಪ್ರಭುತ್ವ ಎರಡನ್ನೂ ಸಮೀಕರಿಸಿಕೊಂಡು ಗೌರವಿಸುತ್ತಿರುವ ಅಪರೂಪದ ಉದಾಹರಣೆ ಇಂಗ್ಲೆಂಡ್ ದೇಶದಲ್ಲಿದೆ. ಅನೇಕ ಹಿರಿಯರು ಹಾಗೂ ಯುವಕರು ರಾಜತ್ವದ ಬಗ್ಗೆ ಗೌರವ ಹೊಂದಿದ್ದಾರೆ. ಇದಕ್ಕೆ ಕಾರಣವೇನೆಂದರೆ ರಾಜಮನೆತನದವರು ದೇಶದ ಆಡಳಿತಾತ್ಮಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ರಾಣಿ ಎಲಿಜಬೆತ್ ಕೂಡ ಇದೇ ನೀತಿ ಪಾಲಿಸುತ್ತಿದ್ದರು. ಅವರು ಜನತೆಗೆ ಹಿತ ಆಗುವಂತಹ ಕಾರ್ಯಗಳನ್ನು ಮಾಡುತ್ತಿದ್ದರಲ್ಲದೆ, ಪ್ರಜಾಪ್ರಭುತ್ವದ ನಡವಳಿಕೆಯಲ್ಲಿ ಮಧ್ಯಪ್ರವೇಶ ಮಾಡುತ್ತಿರಲಿಲ್ಲ. ಹಾಗಾಗಿ ಇನ್ನು ಮುಂದಿನ ದಿನಗಳಲ್ಲಿ ದೇಶದ ಜನ ತಮ್ಮ ಭವಿಷ್ಯ ನಿರ್ಧರಿಸಿಕೊಳ್ಳುತ್ತಾರೆ. ದೇಶದ ಅಭಿವೃದ್ಧಿ ಮತ್ತು ಆರ್ಥಿಕತೆಯಲ್ಲಿ ಸುಧಾರಣೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜರು ತಮ್ಮ ಕೊಡುಗೆ ನೀಡಬೇಕಿದೆ. ಯಾವುದೇ ದೇಶದಲ್ಲೂ ಬಡತನ ಇಲ್ಲ, ಸಂಪದ್ಭರಿತವಾಗಿದೆ ಎನ್ನುವುದು ಸರಿಯಲ್ಲ. ವಸಾಹತು ಇದ್ದ ಕಾಲದಲ್ಲಿ ಇಂಗ್ಲೆಂಡ್ ಸಿರಿವಂತ ದೇಶ ಎನಿಸಿಕೊಂಡಿತ್ತು. ಪ್ರಸ್ತುತ ಇಂಗ್ಲೆಂಡ್​ನಲ್ಲಿ ಆರ್ಥಿಕ ಹಿಂಜರಿತ ಇದ್ದು ಅದನ್ನು ನಿವಾರಿಸಿ ಪ್ರಗತಿ ಸಾಧಿಸುವ ಆನಿವಾರ್ಯತೆ ಇದೆ. ಹೊಸ ರಾಜರು ದೇಶದ ಪ್ರಗತಿಯಲ್ಲಿ ಪಾಲುದಾರರಾಗಿ ವಿಶ್ವಶಾಂತಿಗೆ ಪ್ರಯತ್ನಿಸಲಿ. ಅಲ್ಲಲ್ಲಿ ಅಸಹಕಾರಗಳು, ಅಸಹನೆಗಳು, ಯುದ್ಧಗಳು ಜಾಸ್ತಿಯಾಗುತ್ತಿದೆ. ವಿಶ್ವಶಾಂತಿ ಪ್ರತಿಪಾದನೆಯಲ್ಲಿ ಇಂಗ್ಲೆಂಡ್ ಅತ್ಯಂತ ಮಹತ್ತರ ಪಾತ್ರ ವಹಿಸುತ್ತಿದೆ. ಹಾಗಾಗಿ ವಿಶ್ವಶಾಂತಿಯ ಬಗ್ಗೆ ಅಧಿಕೃತವಾಗಿ ಮಾತನಾಡುವ ಅಗತ್ಯವಿದ್ದು ರಾಜರು ವಿಶ್ವದ ಐಕ್ಯತೆ, ಸಾಮರಸ್ಯ, ಪ್ರಗತಿ ಸಾಧಿಸುವಲ್ಲಿ ಧ್ವನಿಯಾಗಲಿ ಎಂದು ಆಶಿಸುತ್ತೇನೆ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net