ರೇಡಿಯೋ ಕಂಪು ಶಾಶ್ವತವಾಗಿ ಉಳಿಯಲಿ...

Radio Frequency
Published on
ಬಾಲ್ಯದಿಂದಲೂ ನನಗೆ ರೇಡಿಯೋ ಬಗ್ಗೆ ಹೆಚ್ಚಿನ ಒಲವು. ರೇಡಿಯೋದಲ್ಲಿ ಬರುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಾರ್ತೆ, ಕೃಷಿ ಮಾಹಿತಿ, ಇತ್ಯಾದಿ ಕಾರ್ಯಕ್ರಮಗಳನ್ನು ಕೇಳುವುದೆಂದರೆ ಬಲು ಇಷ್ಟ. ಕಾರು ಪ್ರಯಾಣದ ವೇಳೆ ಹೆಚ್ಚಾಗಿ ರೇಡಿಯೋ ಆಲಿಸುತ್ತಿರುತ್ತೇನೆ. ಈಗಂತೂ ರೇಡಿಯೋ ಕೇಲಲು ಕಾರಿನ ಡಿಜಿಟಲ್ ಡಿಸ್​ಪ್ಲೇಯಲ್ಲಿ ರೇಡಿಯೋದ ಚಿಹ್ನೆ ಒತ್ತಿ, ಬೇಕಾದ ಸ್ಟೇಶನ್​ಗೆ ಕ್ಲಿಕ್ ಮಾಡಿದರಾಯಿತು.

ಹಿಂದೆ ವಿವಿಧ ಸ್ಟೇಶನ್​ಗಳನ್ನು (ಆಕಾಶವಾಣಿ ಕೇಂದ್ರ) ಕೇಳುವುದು ತ್ರಾಸದಾಯಕವಾಗಿತ್ತು. 1960ರ ದಶಕಗಳಲ್ಲಿ ರೇಡಿಯೋ ಸ್ಟೇಶನ್​ಗಳ ಸಿಗ್ನಲ್​ಗಳು ಸುಲಭವಾಗಿ ಸಿಗುತ್ತಿರಲಿಲ್ಲ. ಬಾನುಲಿ ಕೇಂದ್ರದ ಕಾರ್ಯಕ್ರಮ ಕೇಳಲು, ಆಯಾ ಆಕಾಶವಾಣಿ ಕೇಂದ್ರಗಳ ಸಂಖ್ಯೆ ನಮೂದಿಸಿರುವ ಗುರುತಿಗೆ ಸರಿಯಾಗಿ ರೇಡಿಯೋದ ಗೆರೆಗಳನ್ನು ಹೊಂದಿಸಲು ನಿಧಾನವಾಗಿ ತಿರುಗಿಸಬೇಕಿತ್ತು. ಸಿಗ್ನಲ್ ಪಡೆಯಲು ಆಂಟೆನಾ ಬೇಕಿತ್ತು. ತರಂಗಾಂತರಗಳನ್ನು ಸೂಕ್ಷ್ಮವಾಗಿ ಹೊಂದಾಣಿಕೆ ಮಾಡಿದ ಬಳಿಕ ಕಾರ್ಯಕ್ರಮ ಆಲಿಸಬಹುದಿತ್ತು. ಕೆಲವು ಉತ್ತಮ ದರ್ಜೆಯ ಕಂಪನಿಗಳ ರೇಡಿಯೋದಲ್ಲಿ ಮಾತ್ರ ಸೂಕ್ಷ್ಮ ರೇಡಿಯೋ ಚಾನೆಲ್​ಗಳು ದೊರೆಯುತ್ತಿದ್ದವು.

ಸಾಮಾನ್ಯವಾಗಿ, ಆಗಿನ ಕಾಲದಲ್ಲಿ ಎ.ಎಮ್​ಗಳೇ ಹೆಚ್ಚು. ಅಂದರೆ ದೀರ್ಘ ತರಂಗಾಂತರಗಳನ್ನು ಹೊಂದಿದ್ದು ಇದು ಆಡಿಯೋ ರೇಡಿಯೋ ಪ್ರಸಾರದಲ್ಲಿ ಅಭಿವೃದ್ಧಿಪಡಿಸಿದ ಮೊದಲ ವಿಧಾನವಾಗಿದ್ದು ಇದರಲ್ಲಿ ಜಗತ್ತಿನ ನೂರಾರು ಸ್ಟೇಶನ್​ಗಳು ಲಭ್ಯವಾಗುತ್ತಿದ್ದವು. ಎಫ್.ಎಮ್ ರೇಡಿಯೋ ಚಾನಲ್​ಗಳು ಸೀಮಿತ ಪ್ರದೇಶಕ್ಕೆ ಮಾತ್ರ ಲಭ್ಯ. ಅದು ಆ ಭಾಗದ ಜನರ ಅಭಿರುಚಿ ಸಂಸ್ಕೃತಿ ಮತ್ತು ಭಾಷೆಯನ್ನು ಪ್ರತಿನಿಧಿಸುತ್ತದೆ. ಉದಾಹರಣೆಗೆ ಮಂಗಳೂರು ಎಫ್.ಎಮ್ ಕರಾವಳಿ ಪ್ರದೇಶದ ಜನರಿಗೆ ಮಾತ್ರ ಸೀಮಿತ.

ಎಫ್ಎ​ಮ್ ತರಂಗಾಂತರಗಳಲ್ಲಿ ಬೃಹತ್ ನಗರಗಳಾದ ಬೆಂಗಳೂರು, ಮೈಸೂರಿನಲ್ಲಿ ಮಾತ್ರ ಹೆಚ್ಚು ಚಾನೆಲ್​ಗಳು ಲಭ್ಯವಾಗುತ್ತಿದ್ದವು. ಗ್ರಾಮಾಂತರ ಪ್ರದೇಶ ಧರ್ಮಸ್ಥಳದಲ್ಲಂತೂ ಯಾವುದೇ ಸ್ಟೇಶನ್ ಸಿಗುತ್ತಿರಲಿಲ್ಲ. ನನ್ನ ತಾಯಿ ರತ್ನಮ್ಮನವರಿಗೆ ರೇಡಿಯೊ ಕೇಳುವ ಆಸಕ್ತಿ ಬಹಳ. ಒಳ್ಳೆಯ ಕಂಪನಿಯ ಟ್ರಾನ್ಸಿಸ್ಟರ್ ರೇಡಿಯೋ ಹಿಡಿದುಕೊಂಡು ಸಿಗ್ನಲ್ ದೊರೆಯುತ್ತದೆಯೋ ಎಂದು ಮನೆಯ ಒಳಗೆ, ಹೊರಗೆ, ಅಂಗಳದಲ್ಲಿ ಹೀಗೆ ಬಹಳ ಹುಡುಕಾಟ ನಡೆಸುತ್ತಿದ್ದರು. ಸಾಕಷ್ಟು ಪ್ರಯತ್ನದ ಬಳಿಕ ಸರಿಯಾದ ದಿಕ್ಕಿಗೆ ಅನುಗುಣವಾಗಿ ಆಂಟೆನಾ ತಿರುಗಿಸಿದಾಗ ಕೆಲವೊಂದು ರೇಡಿಯೋ ಸ್ಟೇಶನ್​ಗಳು ದೊರೆಯುತ್ತಿದ್ದವು. ಆದರೆ, ಮಕ್ಕಳು ಬಂದು ಕೀಟಲೆ ಮಾಡಿ, ಸಿಗುತ್ತಿದ್ದ ಸ್ಟೇಶನ್​ನ ಸಂಕೇತಗಳು ತಪ್ಪಿದಾಗ ‘ಇಷ್ಟು ಕಷ್ಟಪಟ್ಟು ಸಂಕೇತಗಳನ್ನು (ಸಿಗ್ನಲ್) ಹುಡುಕಿದ್ದೆ; ನೀವು ಅದನ್ನು ಮುಟ್ಟಿ ತಪ್ಪಿಸಿದಿರಿ’ ಎಂದು ರೇಗುತ್ತಿದ್ದರು. ಅಂತಹ ಕಾಲದಿಂದ ನಾವು ಇವತ್ತು ಎಲ್ಲಿಗೆ ಬಂದು ತಲುಪಿದ್ದೇವೆ ಎಂದರೆ ಕಾರಿನಲ್ಲಿ ಕೂತು ನಮ್ಮ ಧ್ವನಿಯಲ್ಲಿಯೇ ಇಂತಹ ಸ್ಟೇಶನ್/ಚಾನೆಲ್ ಬೇಕು ಎಂದಾಗ ಸ್ವಯಂಚಾಲಿತವಾಗಿ ಆ ಸ್ಟೇಶನ್ ಪ್ರಾರಂಭವಾಗಿ ಬಿಡುತ್ತದೆ. ಸಿಗ್ನಲ್​ಗಳನ್ನು ತನ್ನಿಂತಾನೇ ಸರಿಹೊಂದಿಸಿಕೊಳ್ಳುತ್ತದೆ.

ಹಿಂದೆ ರೇಡಿಯೋ ಆಲಿಸುವ ಆಸಕ್ತಿ ಯಾಕೆ ಇತ್ತು ಎಂದರೆ-ಹಾಡು, ಸಂಗೀತ ಮತ್ತು ವಾರ್ತೆ ಕೇಳಲು. ಹಿಂದೆ ವಾರ್ತೆಯನ್ನು ಆಲ್ ಇಂಡಿಯಾ ರೇಡಿಯೋದಲ್ಲಿ ಮಾತ್ರ ಬಿತ್ತರಿಸುತ್ತಿದ್ದರು. ಖಾಸಗಿ ಚಾನೆಲ್​ಗಳಲ್ಲಿ ವಾರ್ತೆಗಳು ಬರುತ್ತಿರಲಿಲ್ಲ. ರಾಷ್ಟ್ರೀಯ-ಅಂತಾರಾಷ್ಟ್ರೀಯ ವಾರ್ತೆಗಳನ್ನು ಕೇಳುವ ಹಂಬಲವೂ ಇತ್ತು. ಆದರೆ, ಅದು ಆಗ ಲಭ್ಯವಾಗುತ್ತಿರಲಿಲ್ಲ. ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ, ಬಾಂಗ್ಲಾದೇಶ ರೂಪುಗೊಂಡ ಸಂದರ್ಭದಲ್ಲಿ ಎಲ್ಲ ಕೆಲಸಗಳನ್ನು ಬದಿಗೊತ್ತಿ ರೆಡಿಯೋ ವಾರ್ತೆಗೆ ಕಿವಿಗೊಡುತ್ತಿದ್ದರು. ಭಾರತ ಪಾಕಿಸ್ತಾನವನ್ನು ಮಣಿಸಿ, ಶರಣಾಗತಿಗೆ ಸಹಿ ಮಾಡಿಸಿದಾಗಲಂತೂ ದೇಶದೆಲ್ಲೆಡೆ ಸಂಭ್ರಮ ಇಮ್ಮಡಿಗೊಂಡಿತ್ತು. ರೇಡಿಯೋ ಸ್ಟೇಶನ್ ಸಿಗದಿದ್ದಾಗ ಆಗುತ್ತಿದ್ದ ನಿರಾಸೆ ವರ್ಣನಾತೀತ.

ನಾನು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ, ಜನರು ಒಳ್ಳೆಯ ಸಿನಿಮಾ ಆಯ್ಕೆ ಮಾಡಿ, ಅದನ್ನು ನೋಡಲು ಹೋಗುವ ಟ್ರೆಂಡ್ ಇತ್ತು. ಆಗ ಸಿನಿಮಾ ಆರಂಭಗೊಳ್ಳುವ ಮೊದಲು ಥಿಯೇಟರ್​ಗಳಲ್ಲಿ ನ್ಯೂಸ್ ರೀಲ್ ಹಾಕಲು ಸರ್ಕಾರ ಕಡ್ಡಾಯ ಮಾಡಿತ್ತು. ಈ ನ್ಯೂಸ್ ರೀಲ್​ನಲ್ಲಿ ದೇಶದ ವಿವಿಧ ಸುದ್ದಿಗಳನ್ನು ಹಾಕುತ್ತಿದ್ದರು. ಟಿ.ವಿ.ಗಳು ಹೆಚ್ಚು ಪ್ರಚಲಿತದಲ್ಲಿ ಇರದಿದ್ದ ಕಾಲದಲ್ಲಿ ರಾಷ್ಟ್ರೀಯ ವಾರ್ತೆಯನ್ನು ದೃಶ್ಯ ರೂಪದಲ್ಲಿ ನೋಡುವ ಕುತೂಹಲ ನನಗೆ ತುಂಬಾ ಇತ್ತು.

ಒಮ್ಮೆ ಥಿಯೇಟರ್​ಗೆ ಹೋಗಿದ್ದಾಗ, ರಾಷ್ಟ್ರೀಯ ವಾರ್ತೆಯನ್ನು ನೋಡಿದ ನೆನಪು ಈಗಲೂ ಇದೆ. ಉತ್ತರ ಭಾರತದಲ್ಲಿ ಗಂಗೆೆ ಉಕ್ಕಿ ಹರಿಯುತ್ತಿದ್ದಾಳೆ, ಎಲ್ಲಾ ಕಡೆ ಭೂಮಿಯನ್ನು ಕಬಳಿಸುತ್ತಿದ್ದಾಳೆ, ಜನರು ಅಸಹಾಯಕರಾಗಿದ್ದಾರೆ ಎಂದು ವಾರ್ತೆ ದೃಶ್ಯ ಸಮೇತ ಬಿತ್ತರವಾಗಿತ್ತು. ನ್ಯೂಸ್ ರೀಲ್​ಗಳಲ್ಲಿ ಚಿಕ್ಕದಾಗಿ ಒಂದೆರಡು ಕ್ಷಣಗಳಲ್ಲಿ ವಿಷಯಗಳನ್ನು ಹೇಳುತ್ತಿದ್ದರು. ಆದರೆ, ರೇಡಿಯೋ ವಾರ್ತೆಯಷ್ಟು ವಿಶಾಲತೆ, ಸಮಗ್ರತೆ ಇರಲಿಲ್ಲ. ಗಾಂಧೀಜಿಯವರು ಮೃತರಾದಾಗ ವಿಚಾರವರಿಯಲು ಜನರೆಲ್ಲ ರೇಡಿಯೋ ಸುತ್ತಲೂ ಕೂತುಕೊಂಡಿದ್ದರು. 1950ರ ದಶಕದಲ್ಲಿ ಗ್ರಾಮಗಳ ಪಂಚಾಯತ್ ಕಚೇರಿಗಳ ಮೂಲಕ ಸಾರ್ವಜನಿಕವಾಗಿ ರೇಡಿಯೋ ಕಾರ್ಯಕ್ರಮಗಳ ಪ್ರಸಾರಕ್ಕೆ ವ್ಯವಸ್ಥೆ ಇತ್ತು. ಸಾರ್ವಜನಿಕ ಉದ್ಯಾನಗಳಲ್ಲಿ, ಮೈದಾನದ ಬಳಿ ರೇಡಿಯೋ ಅಳವಡಿಸಿ ವ್ಯವಸ್ಥೆ ಮಾಡುತ್ತಿದ್ದರು. ಸಿಗ್ನಲ್ ಸರಿಯಾಗಿ ಸಿಗದೆ ಕರ್ಕಶವಾದಾಗ ರೇಡಿಯೋ ಸಮೀಪ ಹೋಗಿ ಕಿವಿಕೊಟ್ಟು ಕೇಳಿದ್ದೂ ಇದೆ. ಇನ್ನೂ ಹತ್ತಿರ ಹೋದರೆ ‘ರೇಡಿಯೋ ನಿನ್ನ ತಲೆಯನ್ನು ಎಳೆದುಕೊಳ್ಳುತ್ತದೆ’ ಎಂದು ಹಾಸ್ಯ ಮಾಡುವುದೂ ಇತ್ತು.

ಭಾರತದ ಯಾವುದೇ ರೇಡಿಯೋ ಸ್ಟೇಶನ್ ಸರಿಯಾಗಿ ಸಿಗದಿದ್ದರೂ, ರೇಡಿಯೋ ಸಿಲೋನ್ ಮಾತ್ರ ದೊರೆಯುತ್ತಿತ್ತು. ರೇಡಿಯೋ ಸಿಲೋನ್​ನಲ್ಲಿ ಬುಧವಾರ ಬರುತ್ತಿದ್ದ ಅಮೀನ್ ಸಹಾನಿಯವರ ಬಿನಾಕಾ ಗೀತಮಾಲಾ ಬಹಳ ಪ್ರಸಿದ್ಧವಾಗಿತ್ತು. ಬೆಂಗಳೂರಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ನನ್ನ ಮಾವ ಶ್ರೀನಿವಾಸ ಶೆಟ್ರು, ಪ್ರತಿ ಬುಧವಾರ ಸಂಜೆ ಆ ಕಾರ್ಯಕ್ರಮ ಆಲಿಸಲು ಕುಳಿತು ಬಿಡುತ್ತಿದ್ದರು. ನಾವೆಲ್ಲ ಅವರ ಸುತ್ತಮುತ್ತ ಕುಳಿತು ಹಾಡುಗಳನ್ನು ಆಸ್ವಾದಿಸುತ್ತಿದ್ದೆವು. ವಾರದ ಅತ್ಯುತ್ತಮ ಹಾಡುಗಳನ್ನು ಅಲ್ಲಿ ಅವರು ಹಾಕುತ್ತಿದ್ದರು.

ಇನ್ನು ಕ್ರಿಕೆಟ್ ಸಂದರ್ಭದಲ್ಲಿ ರೇಡಿಯೊದಲ್ಲಿ ವೀಕ್ಷಕ ವಿವರಣೆ ಕೇಳುವುದು ಅಚ್ಚುಮೆಚ್ಚಿನ ವಿಷಯವಾಗಿತ್ತು. ಆಗಂತೂ ಟೆಸ್ಟ್ ಕ್ರಿಕೆಟ್ ಬೆಳಗ್ಗೆಯಿಂದ ಸಂಜೆಯವರೆಗೆ 150 ರನ್ ಹೊಡೆದರೆ ಹೆಚ್ಚು. ಆಗಿನ ಟೆಸ್ಟ್ ಮ್ಯಾಚ್ ಎಂದರೆ ಈಗಿನ ಕಾಲದವರಿಗೆ ಒಂದು ಗಂಟೆ ಕೂಡ ಸಹಿಸಲು ಸಾಧ್ಯವಿಲ್ಲ. ಆಗ ಯಾರು ಹೆಚ್ಚು ಮೇಡನ್ ಓವರ್ ಮಾಡಿದ್ದರೋ ಅವರು ಆ ದಿನದ ಹೀರೋ. ಅಪರೂಪಕ್ಕೆ ಯಾರಾದರು ಬ್ಯಾಟ್ಸ್​ಮನ್ ಬೌಂಡರಿ ಬಾರಿಸಿದಾಗ ರೋಮಾಂಚನಗೊಳ್ಳುತ್ತಿದ್ದೆವು.

ಶ್ರೀಕ್ಷೇತ್ರದ ವಸ್ತುಸಂಗ್ರಹಾಲಯದಲ್ಲಿ ಸುಮಾರು 30-40ರ ದಶಕಗಳಲ್ಲಿನ ರೇಡಿಯೋಗಳನ್ನು ಸಂಗ್ರಹ ಮಾಡಿದ್ದೇವೆ. ಅದರಲ್ಲಿ ಸುಮಾರು ನೂರು ಸ್ಟೇಶನ್​ಗಳಿದ್ದವು. ದೇಶದೊಳಗಿನ ಸ್ಟೇಶನ್​ಗಳು ಸೇರಿ ನೆರೆಯ ಪಾಕಿಸ್ತಾನದ ಕರಾಚಿ ಸ್ಟೇಶನ್ ಹಾಗೂ ಪ್ಯಾರಿಸ್, ರೋಮ್ ಅಮೆರಿಕಾ, ವ್ಯಾಟಿಕನ್, ಮಾಸ್ಕೋ, ಕೈರೋ, ಚೀನಾ, ಸಿಂಗಾಪುರ, ಜೋಹಾನ್ಸ್​ಬರ್ಗ್ ಸೇರಿದಂತೆ ಅನೇಕ ಪಾಶ್ಚಾತ್ಯ ರಾಷ್ಟ್ರಗಳ ಸ್ಟೇಶನ್​ಗಳಿದ್ದವು. ಅಂದಿನ ಕಾಲಕ್ಕೂ ವಿವಿಧ ವಿದೇಶಗಳ ಚಾನೆಲ್​ಗಳು ಲಭ್ಯವಾಗುತ್ತಿತ್ತು. ಅಮೆರಿಕಾದ ಪೈಲಟ್, ಜೆನಿತ್, ಬಿಪಿ-10 ಪರ್ಸನಲ್, ಮೊಟೊರೊಲಾ, ಹ್ಯಾಲಿಕ್ರಾಪ್ಟರ್ಸ್, ಗ್ರೇಟ್ ಬ್ರಿಟನ್​ನ ಹಿಸ್ ಮಾಸ್ಟರ್ಸ್ ವಾಯಿಸ್, ಜನರಲ್ ಎಲೆಕ್ಟ್ರಿಕ್ ಸೇರಿದಂತೆ ಸೋನಿ, ಪ್ಯಾನಾಸೋನಿಕ್, ಫಿಲಿಪ್ಸ್​ನಂತಹ ಕಂಪೆನಿಗಳ ರೇಡಿಯೋ ಆಗ ರಾರಾಜಿಸುತ್ತಿದ್ದವು.

40 ವರ್ಷಗಳಿಂದ ಇತ್ತೀಚೆಗೆ ಹೊಸ ರೀತಿಯ ರೇಡಿಯೋಗಳು ಬಂದವು. ಅದರಲ್ಲಿ ಐದಾರು ಕಪ್ಪು ಬಟನ್​ಗಳು (ಗುಂಡಿ) ಇರುತ್ತಿದ್ದವು. ಆ ಬಟನ್ ಒತ್ತಿದರೆ ಸ್ಟೇಶನ್ ಸೂಚಿಸುತ್ತಿದ್ದ ಮುಳ್ಳು ಸರಿಯಾಗಿ ಅಲ್ಲೇ ಹೋಗಿ ನಿಲ್ಲುತ್ತಿತ್ತು. ಉದಾಹರಣೆಗೆ ವಿವಿಧ ಭಾರತಿ ಕೇಳಲು ಒಂದನೇ ಬಟನ್ ಒತ್ತಿದರೆ ಸಾಕಿತ್ತು. ಎರಡನೇ ಬಟನ್ ಒತ್ತಿದರೆ ಆಲ್ ಇಂಡಿಯಾ ರೇಡಿಯೋ ಕೇಳುತ್ತಿತ್ತು. ಆ ಬಳಿಕ ಬಂದದ್ದೇ ಡಿಜಿಟಲ್ ಇಲೆಕ್ಟ್ರಾನಿಕ್ ಯುಗ. ಈಗಂತೂ ತಂತ್ರಜ್ಞಾನ ತೀರ ಮುಂದುವರಿದಿದೆ. ವಾಯ್್ಸ ಕಮಾಂಡ್ (ಧ್ವನಿ ಆಜ್ಞೆ) ಮೂಲಕ ಯಾವ ರೇಡಿಯೋ ಚಾನೆಲ್ ಆಲಿಸಬೇಕು ಎಂದು ತಿಳಿಸಿದರೆ ಸಾಕು ಸ್ವಯಂಚಾಲಿತವಾಗಿ ಆ ಚಾನೆಲ್ ಆರಂಭವಾಗುತ್ತದೆ. ಅಲ್ಲದೆ, ರೇಡಿಯೋವನ್ನು ಆಕರ್ಷಕವಾದ ಮಾಧ್ಯಮವನ್ನಾಗಿಸಿ, ಗತವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಸಹ ಕೆಲಸ ಕಾರ್ಯಗಳು ಆಗುತ್ತಿವೆ.

ನಮ್ಮ ದೇಶದ ಪ್ರಗತಿಗೆ ರೇಡಿಯೋ ಮಹತ್ತರ ಕೊಡುಗೆಯನ್ನು ನೀಡಿದೆ. ಕೃಷಿ ವಾರ್ತೆ, ಕೃಷಿಕರ ಜೊತೆ ಸಂವಾದ, ಅನುಭವ ಹಂಚಿಕೆಯಿಂದ ಲಾಭವಿದೆ. ಹೊಸ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುತ್ತಿದೆ. ಹಲೋ ಡಾಕ್ಟರ್ ಆರೋಗ್ಯ ಮಾಹಿತಿ ನೀಡುತ್ತದೆ. ನರೇಂದ್ರ ಮೋದಿಯವರು ಪ್ರಧಾನಿಯಾದಾಗಿನಿಂದ ರೇಡಿಯೋದಲ್ಲಿ ಪ್ರಸಾರವಾಗುವ ಅವರ ಮನ್ ಕೀ ಬಾತ್ ಕಾರ್ಯಕ್ರಮ ಸಾಮಾನ್ಯ ಜನರನ್ನು ಆಕರ್ಷಿಸಿದೆ.

ಕಣ್ಣಲ್ಲಿ ದೃಶ್ಯರೂಪವಾಗಿ ನೋಡುವುದಕ್ಕೂ, ಕುತೂಹಲದಿಂದ ಕಿವಿಯಲ್ಲಿ ಆಲಿಸಿ ನಾವೇ ಕಲ್ಪಿಸಿಕೊಂಡು ಆನಂದಿಸುವುದಕ್ಕೂ ವ್ಯತ್ಯಾಸ ಹೆಚ್ಚು. ಬಹುಶಃ ರೇಡಿಯೋ ಇದಕ್ಕೆ ಆಕರ್ಷಣೀಯವಾಗಿದೆ. ಮನೆ ಕೆಲಸ ಮಾಡುವಾಗ, ಪ್ರಯಾಣದ ವೇಳೆ, ಅಂಗಡಿ, ಗ್ಯಾರೇಜ್, ಹೀಗೆ ಕೆಲಸ ಮಾಡುತ್ತಲೇ ರೇಡಿಯೋ ಆಲಿಸಬಹುದಾಗಿದೆ. ಬ್ಯಾಟರಿ ಚಾಲಿತ ಸಣ್ಣ ಟ್ರಾನ್ಸಿಸ್ಟರ್ ಬೇಕಾದಲ್ಲಿ ಕೊಂಡೊಯ್ಯಬಹುದಾಗಿದೆ. ಈಗಂತೂ ಮೊಬೈಲ್​ನಲ್ಲೇ ರೇಡಿಯೋ ಆಲಿಸಬಹುದಾಗಿದ್ದು, ರೇಡಿಯೋ ಗಾರ್ಡನ್ ಮುಂತಾದ ವಿವಿಧ ಆಪ್​ಗಳ ಮೂಲಕ ಜಗತ್ತಿನೆಲ್ಲೆಡೆಯಿರುವ ವಿವಿಧ ಚಾನೆಲ್​ಗಳನ್ನು ಆಲಿಸಬಹುದಾಗಿದೆ.

ರೇಡಿಯೋ ಶಾಶ್ವತವಾಗಿ ಉಳಿಯಲಿ ಎನ್ನುವ ಹಂಬಲ ನನ್ನದು. ಜೊತೆಗೆ ಖಾಸಗಿ ರೇಡಿಯೋ ಚಾನೆಲ್​ಗಳಲ್ಲೂ ವಾರ್ತೆಗಳು ಪ್ರಸಾರಗೊಳ್ಳಲಿ. ವಿದೇಶಗಳಲ್ಲಿ ಈಗಲೂ ರೇಡಿಯೋವನ್ನು ಬಹಳಷ್ಟು ಜನರು ಆಲಿಸುತ್ತಾರೆ. ಯಾಕೆಂದರೆ ವಾಹನದಲ್ಲಿ ಸಂಚರಿಸುವಾಗ ರೇಡಿಯೋದಲ್ಲಿ ಈ ರಸ್ತೆಗೆ ಹೋಗಿ, ಇಂಥಾ ರಸ್ತೆಯಲ್ಲಿ ವಾಹನ ದಟ್ಟಣೆಯಿದ್ದು, ಸಂಚಾರ ವ್ಯತ್ಯಯವಾಗಿದೆ. ಇಂತಹ ರಸ್ತೆಯಲ್ಲಿ ಸಣ್ಣ ಅಪಘಾತವಾಗಿದೆ ಎಂದು ಕ್ಷಣ-ಕ್ಷಣದ ಸುದ್ದಿ ಬಿತ್ತರಿಸುತ್ತಾರೆ. ಮಳೆಗಾಲದ ಸಂದರ್ಭದಲ್ಲಿ ಇಲ್ಲಿ ನೀರು ನಿಂತಿದೆ. ಈ ರಸ್ತೆ ಸುರಕ್ಷಿತವಲ್ಲ, ಇಂತಹ ರಸ್ತೆಗಳಲ್ಲಿ ತಿರುವು ಪಡೆಯಿರಿ ಎನ್ನುವ ಸುದ್ದಿ ಬಿತ್ತರಿಸುತ್ತಾರೆ. ಹಾಗಾಗಿ ಅನೇಕ ಮಂದಿ ಜಿ.ಪಿ.ಎಸ್. ಬಳಕೆಯೊಂದಿಗೆ ರೇಡಿಯೋ ಆಲಿಸಿಕೊಂಡೇ ವಾಹನ ಚಲಾಯಿಸುತ್ತಾರೆ. ಈಗ ಬೆಂಗಳೂರು, ಮೈಸೂರಿನಲ್ಲೂ ಇಂತಹ ಸೌಲಭ್ಯವಿದ್ದು ಅನೇಕ ಎಫ್.ಎಂಗಳು ಮನೋರಂಜನೆ, ಸುದ್ದಿ ಜೊತೆಗೆ ಟ್ರಾಫಿಕ್, ಹವಾಮಾನ ಇತ್ಯಾದಿ ಮಾಹಿತಿ ನೀಡುತ್ತಿವೆ. ಒಟ್ಟಿನಲ್ಲಿ, ರೇಡಿಯೋ ದೀರ್ಘಕಾಲ ಉಳಿಯಲಿ ಎನ್ನುವುದೇ ನಮ್ಮ ಆಶಯ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net