

ಪಾರ್ವತಿಯು ಸ್ನಾನ ಮುಗಿಸಿ ಬರುತ್ತಾಳೆ. ತನ್ನ ಮಗನ ಶಿರಚ್ಛೇದ ಮಾಡಿರುವುದನ್ನು ಕಂಡು ಅತ್ತು, ಕೋಪಗೊಳ್ಳುತ್ತಾಳೆ. ಶಿವನು ಆಕೆಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾನೆ. ಕೊನೆಗೆ ಬಾಲಕನನ್ನು ಬದುಕಿಸುವ ಭರವಸೆ ನೀಡಿ, ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿರುವವರ ತಲೆಯನ್ನು ತನ್ನಿ ಎಂದು ಶಿವ ತನ್ನ ಗಣಗಳಿಗೆ ಆದೇಶಿಸುತ್ತಾನೆ. ಅಂತೆಯೇ ಶಿವಗಣಗಳು ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿದ್ದ ಆನೆಯ ತಲೆಯನ್ನು ತರುತ್ತಾರೆ. ಅದನ್ನು ಆ ಬಾಲಕನ ಮುಂಡಕ್ಕೆ ಜೋಡಿಸಿ ಮರುಜೀವ ಕೊಡುತ್ತಾನೆ ಪರಶಿವ. ಹೀಗೆ ಆತನಿಗೆ ಆನೆಯ ಮುಖ ಪ್ರಾಪ್ತವಾಯಿತು. ಬಳಿಕ ಗಜಾನನನೆಂದು ಖ್ಯಾತನಾದನು.
ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ಒಬ್ಬ ವ್ಯಕ್ತಿಯ ಮುಂಡಕ್ಕೆ ಬೇರೊಂದು ರುಂಡವನ್ನು ಜೋಡಿಸಿ ಮರುಜೀವ ಕೊಟ್ಟಿರುವುದು. ಅಂದರೆ, ಈಗ ನಮ್ಮ ವೈದ್ಯವಿಜ್ಞಾನದಲ್ಲಿ ಇರುವಂತೆ ಅಂಗಾಂಗ ಕಸಿಯು ಪುರಾಣಗಳಲ್ಲಿಯೂ ಇತ್ತು ಎಂಬುದಕ್ಕೆ ಗಣಪತಿಯ ಕಥೆ ಉದಾಹರಣೆಯಾಗಬಲ್ಲದು.
ಮಹಾಭಾರತದಲ್ಲೂ ಗಾಂಧಾರಿಯ 101 ಮಕ್ಕಳ ಜನನದ ಹಿಂದೆಯೂ ವೈಜ್ಞಾನಿಕತೆ ಅಡಕವಾಗಿದೆ. ಕುಂತಿಗೆ ಮಕ್ಕಳಾಯಿತು ಎಂದು ತಿಳಿದ ಗಾಂಧಾರಿ ರೋಷದಿಂದ ತನ್ನ ಗರ್ಭಕ್ಕೆ ತಾನೇ ಹೊಡೆದುಕೊಂಡ ಕಾರಣಕ್ಕಾಗಿ ಮಾಂಸದ ಮುದ್ದೆಗಳಿಗೆ ಜನ್ಮವಿತ್ತಳು. ಮಹರ್ಷಿ ವ್ಯಾಸರು ತಕ್ಷಣವೇ ತುಪ್ಪಗಳಿಂದ ತುಂಬಿದ ನೂರು ಮಡಕೆಗಳನ್ನು ತರುವಂತೆ ಹೇಳಿ 100 ಭಾಗಗಳಾಗಿದ್ದ ಮಾಂಸದ ಮುದ್ದೆಯನ್ನು ಮಡಕೆಗಳಲ್ಲಿ ಮುಚ್ಚುವಂತೆ ಹೇಳಿದರು. ಹೀಗೆ ಕೌರವರ ಜನನವಾಯಿತು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ವ್ಯಾಸರಿಗೆ ಆಧುನಿಕ ತಂತ್ರಜ್ಞಾನದ ಬಗ್ಗೆ ಅರಿವಿರಬೇಕು. ಹೀಗಾಗಿ, ಅವರು ಕೃತಕವಾಗಿ ಪಿಂಡಗಳನ್ನು ಮಡಕೆಗಳಲ್ಲಿ ಸರಿಯಾದ ಸ್ಥಿತಿಯಲ್ಲಿ ಇಟ್ಟು ಶಿಶುವು ಅದರಲ್ಲಿ ಬೆಳೆಯುವಂತೆ ಮಾಡಿದರು.
ಸಾವಿರಾರು ವರ್ಷಗಳ ಹಿಂದೆಯೇ ಅಂಗಾಂಗ ದಾನ, ಕಸಿ, ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದವೆಂಬುದಕ್ಕೆ ಈ ಕಥೆಗಳು ಪುಷ್ಟಿ ನೀಡುತ್ತವೆ. ಅನೇಕ ಜನರು ಅಂಗಾಂಗ ವೈಫಲ್ಯಕ್ಕೊಳಗಾಗಿ ಬಳಲುತ್ತಾರೆ. ಅಂತಹವರಿಗೆ ಸೂಕ್ತ ಅಂಗಾಂಗಗಳು ದೊರೆತು ಜೋಡಣೆ ಮಾಡಿದಲ್ಲಿ ಅವರು ಮತ್ತಷ್ಟು ಕಾಲ ಜೀವನ ನಡೆಸಲು ಸಾಧ್ಯವಾಗುತ್ತದೆ.
ಅಂಗಾಂಗ ಜೋಡಣೆಯಂತಹ ವೈದ್ಯಕೀಯ ತಂತ್ರಜ್ಞಾನಗಳು ವಿದೇಶಗಳಲ್ಲಿ ಬಹು ಪ್ರಚಲಿತದಲ್ಲಿದ್ದವು. ಕಾಲಾನಂತರದಲ್ಲಿ ಭಾರತದಲ್ಲೂ ವ್ಯಾಪಿಸತೊಡಗಿತು. ಆರಂಭ ಕಾಲದಲ್ಲಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಈ ಚಿಕಿತ್ಸೆಗಳೆಲ್ಲ ಗಗನಕುಸುಮವಾಗಿದ್ದವು. ಈಗ ಎಲ್ಲ ವರ್ಗದವರಿಗೆ ಎಲ್ಲಾ ರೀತಿಯ ಸೇವೆ ಸೌಕರ್ಯಗಳು ದೊರೆಯುವಂತೆ ಸರ್ಕಾರಗಳು ನೋಡಿಕೊಳ್ಳುತ್ತಿವೆ. ರಾಜ್ಯದ ಅನೇಕ ಆಸ್ಪತ್ರೆಗಳಲ್ಲಿ ಸಹ ಅಂಗಾಂಗ ಕಸಿ ಅಥವಾ ಜೋಡಣೆಯ ಚಿಕಿತ್ಸೆಗಳು ನಡೆಯುತ್ತಿವೆ.
ಬೇರೆಲ್ಲ ಚಿಕಿತ್ಸೆಗಳನ್ನು ಆಧುನಿಕ ವೈದ್ಯಕೀಯ ಸಲಕರಣೆಗಳ ಸಹಾಯದಿಂದ ಮಾಡಬಹುದಾದರೂ ಅಂಗಾಂಗ ಕಸಿಗೆ ದಾನಿಗಳು ಅಗತ್ಯವಾಗಿ ಬೇಕಾಗಿರುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರೆ ಬೇರೆ ಲಿವರ್ ಕಸಿ ಮಾಡಲು ಮತ್ತೊಬ್ಬ ವ್ಯಕ್ತಿಯ ಲಿವರ್ ಅಗತ್ಯ. ಹೆಚ್ಚಾಗಿ ಅಪಘಾತ ಅಥವಾ ಇನ್ನಿತರ ಅವಘಡಗಳಲ್ಲಿ ಮಿದುಳು ನಿಷ್ಕಿ›ಯಗೊಂಡ ವ್ಯಕ್ತಿಯ ಅಂಗಾಂಗಳನ್ನು ದಾನ ಮಾಡಬಹುದಾಗಿದೆ. ಮೃತವ್ಯಕ್ತಿಯ ಕಣ್ಣುಗಳನ್ನು ಇತರರಿಗೆ ಅಳವಡಿಸಬಹುದಾಗಿದ್ದು, ಅದು ಇಂತಿಷ್ಟೇ ಗಂಟೆಗಳ ಒಳಗಾಗಿ ನಡೆಯಬೇಕಾದ ತುರ್ತು ಪ್ರಕ್ರಿಯೆಯಾಗಿದೆ.
ಈಗೀಗ ಅಂಗಾಂಗ ದಾನಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರ ಬಗ್ಗೆ ಜಾಗೃತಿ ಮೂಡುತ್ತಿದೆ. ಮಿದುಳು ನಿಷ್ಕಿ›ಯಗೊಂಡ ವ್ಯಕ್ತಿ ಜೀವಂತವಿರಬಹುದೇ ಹೊರತು ಆತ ‘ಬದುಕಿದ್ದರೂ ಸತ್ತಂತೆಯೇ’ ಇರುತ್ತಾನೆ. ಅಂತಹ ಸಂದರ್ಭದಲ್ಲಿ ಆತನ/ಆಕೆಯ ಮನೆಯವರು ಅಥವಾ ಬಂಧುಗಳು ಅಂಗಾಂಗ ದಾನಕ್ಕೆ ಸಮ್ಮತಿ ನೀಡಿದರೆ ಆತ ಅನೇಕರ ಜೀವನಕ್ಕೆ ಬೆಳಕಾಗಬಹುದು. ಒಂದು ದೇಹದ ಅಂಗಾಂಗ ದಾನದಿಂದ ಸುಮಾರು ಎಂಟು ಮಂದಿಗೆ ಅಂಗಾಂಗ ಕಸಿ ಮಾಡಿ ಬದುಕಿಸಲು ಸಾಧ್ಯವೆಂದು ತಜ್ಞರು ಹೇಳುತ್ತಾರೆ. ಮರಣಾನಂತರ ಬೆಂಕಿಯಲ್ಲಿ ಬೂದಿಯಾಗುವ ಅಥವಾ, ಮಣ್ಣಲ್ಲಿ ಮಣ್ಣಾಗುವ ದೇಹವನ್ನು ವೈದ್ಯಕೀಯ ಸಂಸ್ಥೆಗಳಿಗೆ ದಾನ ಮಾಡಬಹುದಾಗಿದೆ.
ಇದೇ ಜುಲೈ 12 ರಂದು ಧಾರವಾಡ ಶ್ರೀ ಮಂಜುನಾಥೇಶ್ವರ ವೈದ್ಯಕೀಯ ಆಸ್ಪತ್ರೆಯಲ್ಲಿ ಮಿದುಳು ನಿಷ್ಕಿ›ಯಗೊಂಡ ವ್ಯಕ್ತಿಯ ಹೃದಯವನ್ನು ಬೆಳಗಾವಿಯ ಆಸ್ಪತ್ರೆಗೆ ತಲುಪಿಸಿದರು. ಲಿವರ್ಗಳನ್ನು ಬೆಂಗಳೂರಿನ ಆಸ್ಪತ್ರೆಗೆ ತಲುಪಿಸಲಾಯಿತು. ಧಾರವಾಡದ ಆಸ್ಪತ್ರೆಯಲ್ಲಿ ಕಿಡ್ನಿ ಅವಶ್ಯಕವಿದ್ದ ವ್ಯಕ್ತಿಗೆ ಕಸಿ ಮಾಡಿದರು.
ಶರಣರನ್ನು ಮರಣದಲ್ಲಿ ನೋಡು ಎಂಬಂತೆ ಶವವಾಗಿದ್ದ ಜೀವದಿಂದ ಶಿವನನ್ನೇ ಅರಸಿ ತೆಗೆದು ನಿತ್ಯವೂ ರೋಗಿಯಾಗಿದ್ದ ವ್ಯಕ್ತಿಗೆ ಆಯುಷ್ಯದಾನ ಮಾಡಲು ಸಾಧ್ಯವಾದುದು. ದೇಹ ಅಥವಾ ಅಂಗಾಂಗ ದಾನದಿಂದ ಸತ್ತ ಮೇಲೂ ನಾಲ್ಕು ಜನರಿಗೆ ಪ್ರಯೋಜನವಾಗಲು ಸಾಧ್ಯ.
ಅಂಗಾಂಗ ದಾನ ಮಾಡಲು ವಯೋಮಿತಿ, ಲಿಂಗ ಭೇದವಿಲ್ಲ. ಕ್ಯಾನ್ಸರ್, ಏಡ್ಸ್ ಮುಂತಾದ ಸೋಂಕಿತರನ್ನು ಹೊರತುಪಡಿಸಿ ದೇಹದ ಅಂಗಾಂಗಗಳು ಸುವ್ಯವಸ್ಥೆಯಲ್ಲಿರುವವರು ದಾನ ಮಾಡಬಹುದು. ವ್ಯಕ್ತಿಯ ಮಿದುಳು ನಿಷ್ಕಿ›ಯವಾಗಿದ್ದಾಗ ಹೃದಯ ಬಡಿತವಿರುತ್ತದೆ. ಆಗ ಕಣ್ಣು, ಕಿವಿ, ಯಕೃತ್ ದಾನ ಮಾಡಬಹುದು. ಮರಣದ ನಂತರ(ತಕ್ಷಣಕ್ಕೆ) ಹೃದಯ, ಚರ್ಮ, ಕರುಳು, ಮೂತ್ರಪಿಂಡ, ಶ್ವಾಸಕೋಶ, ದಾನ ಮಾಡಬಹುದು.
ಅಂಗಾಂಗ ದಾನದ ಮಹತ್ವ, ಉದ್ದೇಶ ಸಾರುವ ನಿಟ್ಟಿನಲ್ಲಿ ಆಗಸ್ಟ್ 13ನ್ನು ವಿಶ್ವ ಅಂಗಾಂಗ ದಾನ ದಿನವಾಗಿ ಆಚರಿಸಲಾಗುತ್ತದೆ. ಆದರೆ, ಜಾಗೃತಿಯ ಕೊರತೆ ಎಲ್ಲೆಡೆ ಇದೆ ಎಂದು ಅನೇಕ ಸಮೀಕ್ಷೆಯ ಮೂಲಕ ಕಂಡುಬಂದಿದೆ. ಈಗ ಅಂಗಾಂಗ ದಾನದ ಪ್ರಮಾಣ ಕೇವಲ ಶೇ.0.26ರಷ್ಟಿದೆ. ವರ್ಷದಿಂದ ವರ್ಷಕ್ಕೆ ಅಂಗಾಂಗದಾನ ಬಯಸುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅರ್ಧ ಮಿಲಿಯನ್ನಷ್ಟು ಭಾರತೀಯರು ಅಂಗಾಂಗ ದಾನದ ಅಗತ್ಯವನ್ನು ಎದುರಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.
ಅಂಗಾಂಗ ದಾನದ ಕುರಿತಾಗಿ ಜನರಿಗಿರುವ ಮೌಢ್ಯವನ್ನು ಹೋಗಲಾಡಿಸಿ ಅರಿವನ್ನು ತುಂಬುವ ಕಾರ್ಯಗಳು ನಡೆದರೆ ಸಮಾಜ ಜಾಗೃತವಾಗುತ್ತದೆ. ಕೆಲ ವರುಷಗಳ ಹಿಂದೆ ರಕ್ತ ಕೊಟ್ಟರೆ ಕೆಲವು ಅಡ್ಡ ಪರಿಣಾಮಗಳಾಗುತ್ತವೆ ಎಂಬ ಊಹಾಪೋಹ ಹರಡುತ್ತಿದ್ದವು. ಬಳಿಕ ರಕ್ತದಾನದಿಂದ ಯಾವುದೇ ತೊಂದರೆಯಾಗುವುದಿಲ್ಲ. ಆರೋಗ್ಯವಂತ ವ್ಯಕ್ತಿ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ರಕ್ತದಾನ ಮಾಡಿದರೆ ದೇಹಾರೋಗ್ಯ ಉತ್ತಮಗೊಳ್ಳುತ್ತದೆ ಎಂಬೆಲ್ಲ ಮಾಹಿತಿಗಳನ್ನು ನೀಡಿ ಜನರಿಗೆ ಧೈರ್ಯ ತುಂಬಿದ ಬಳಿಕ ರಕ್ತದಾನ ಮಾಡಲು ಮುಂದಾದರು.
ಮಹಾಭಾರತದ ಒಂದು ಕಥೆ ಇಲ್ಲಿ ಉಲ್ಲೇಖನೀಯ. ಒಮ್ಮೆ ಕೃಷ್ಣ ಮತ್ತು ಅರ್ಜುನರ ನಡುವೆ ದಾನದ ಮಹತ್ವದ ಬಗ್ಗೆ ಚರ್ಚೆಯಾಗುತ್ತಿತ್ತು. ಆಗ ಧರ್ಮರಾಯನ ದಾನ ಧರ್ಮಗಳೇ ಶ್ರೇಷ್ಠ ಎನ್ನುವುದು ಅರ್ಜುನನ ವಾದವಾಗಿತ್ತು.
ಕೃಷ್ಣನಿಗೆ ಕರ್ಣನ ದಾನಗಳ ಬಗ್ಗೆ ತಿಳಿದಿತ್ತು. ಹಾಗಾಗಿ ಈ ಚರ್ಚೆಯನ್ನು ಮುಗಿಸುವ ಸಲುವಾಗಿ ಕೃಷ್ಣನು ಅರ್ಜುನನನ್ನು ಧರ್ಮರಾಯನ ಬಳಿ ಕರೆದುಕೊಂಡು ಹೋಗಿ ತನಗೆ ಮಹಲೊಂದನ್ನು ಕಟ್ಟಲು ಗಂಧದ ಕಟ್ಟಿಗೆಗಳ ಅವಶ್ಯಕತೆ ಇದೆಯೆಂದು ತಿಳಿಸಿದನು. ಧರ್ಮರಾಯನು ತನ್ನ ಸೇವಕರಿಗೆ ಆದೇಶ ನೀಡಿದನು. ಆದರೆ, ಆಗ ಮಳೆ ಸುರಿಯುತ್ತಿದ್ದುದರಿಂದ ಕಟ್ಟಿಗೆಯನ್ನು ತರಲು ಸಾಧ್ಯವಾಗಲಿಲ್ಲ. ಧರ್ಮರಾಯನು ಅಸಹಾಯಕತೆಯಿಂದ ಕೃಷ್ಣನಲ್ಲಿ ತನ್ನಿಂದ ಈ ಕಾರ್ಯ ಸಾಧ್ಯವಿಲ್ಲ ಎಂದನು. ಬಳಿಕ ಕೃಷ್ಣನು ಅರ್ಜುನನನ್ನು ಕರ್ಣನ ಬಳಿ ಕರೆದೊಯ್ದು ಅದೇ ವಿಚಾರವನ್ನು ಪ್ರಸ್ತಾಪಿಸಿದನು. ಕರ್ಣನಿಗೂ ಮಳೆಯಿಂದಾಗಿ ಗಂಧದ ಕಟ್ಟಿಗೆಯ ಅಭಾವ ಕಾಡಿತು. ಆದರೆ, ಸಮಯ ಸಂದರ್ಭ ಅರಿತ ಕರ್ಣನು ತನ್ನ ಕೊಠಡಿಯಲ್ಲಿದ್ದ ಗಂಧದ ಮರದಿಂದ ತಯಾರಿಸಲ್ಪಟ್ಟಿದ್ದ ಮಂಚದ ಕಾಲುಗಳನ್ನು ಕತ್ತರಿಸಿ ಕೃಷ್ಣನಿಗೆ ಒದಗಿಸಿದನು. ಇದನ್ನೆಲ್ಲ ನೋಡುತ್ತಿದ್ದ ಅರ್ಜುನನಿಗೆ ದಾನದ ಮಹತ್ವ ಮತ್ತು ಅದರ ಶ್ರೇಷ್ಠತೆಯ ಅರಿವಾಯಿತು.
ದಾನ ಮಾಡುವ ಸಂಸ್ಕಾರವನ್ನು ನಾವು ಬೆಳೆಸಿಕೊಳ್ಳಬೇಕು. ಆಗ ನಮ್ಮ ಕಾಯವಳಿದರೂ ಅಂಗಗಳು ಮತ್ತೊಬ್ಬರಿಗೆ ದೊರೆಯುವುದರಿಂದ ನಮ್ಮ ಜೀವನವನ್ನು ವಿಸ್ತರಿಸಿಕೊಂಡಂತೆ ಆಗುತ್ತದೆ. ನಾವು ಅಳಿದಾಗ ನೇತ್ರದಾನ ಮಾಡಿದರೆ ನಮ್ಮ ಕಣ್ಣುಗಳು ಜಗತ್ತನ್ನು ಕಾಣುತ್ತಿರುತ್ತವೆ. ಈ ಮೂಲಕ ಮತ್ತೊಬ್ಬರಿಗೆ ನಾವು ಬೆಳಕಾಗುತ್ತೇವೆ.
‘ಮಾನವನ ಅಂಗಗಳು ಅತ್ಯಂತ ಅಮೂಲ್ಯವಾದದ್ದು ಮತ್ತು ಯಾರಾದರೂ ಅಂಗದಾನಕ್ಕೆ ನಿರ್ಧರಿಸಿದರೆ ಅವರು ನಿಜವಾಗಿಯೂ ತಮ್ಮ ಜೀವನವನ್ನು ಇನ್ನೊಂದು ಜೀವಕ್ಕೆ ವರ್ಗಾಯಿಸಿ ತಮ್ಮ ಜೀವನವನ್ನೇ ವಿಸ್ತರಿಸಿಕೊಂಡಂತೆ’ ಎನ್ನುವ ಉಕ್ತಿ ನಿಜಕ್ಕೂ ಸಾರ್ವಕಾಲಿಕವಾದುದು. ಹಿಂದಿನ ಕಾಲದಲ್ಲಿ ದಾನ ಧರ್ಮ ಎನ್ನುವ ವ್ಯಾಖ್ಯಾನ ಬೇರೆಯಾಗಿತ್ತು. ಹೆಚ್ಚಾಗಿ ಧನ, ಧಾನ್ಯಗಳ ದಾನಕ್ಕೆ ಪ್ರಾಮುಖ್ಯತೆ ಇತ್ತು. ಅನ್ನದಾನ, ವಿದ್ಯಾದಾನ, ಕನ್ಯಾದಾನ ಹೀಗೆ ಪ್ರತಿಯೊಂದು ದಾನವೂ ತನ್ನದೇ ಆದ ಮೌಲ್ಯ ಹಾಗೂ ಮಹತ್ವವನ್ನು ಹೊಂದಿದೆ. ನಮ್ಮಲ್ಲಿರುವ ದಾನ ಪರಂಪರೆಯಿಂದಾಗಿಯೇ ಭಾರತೀಯರು ವಿಶ್ವದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟು ಗೌರವ ಪಡೆಯುತ್ತಿರುವುದು. ನಮ್ಮ ಸಂಪ್ರದಾಯ, ಪದ್ಧತಿಗಳ ರೂಪದಲ್ಲಿ ಜನಜೀವನದಲ್ಲಿ ಹಾಸುಹೊಕ್ಕಿರುವ ದಾನಪರಂಪರೆಗೆ ರಕ್ತದಾನ, ಅಂಗಾಂಗದಾನ ಹೊಸ ಸೇರ್ಪಡೆಯೆಂದೇ ಹೇಳಬಹುದು. ಸಾಧ್ಯವಾದಷ್ಟು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ ಇನ್ನೊಬ್ಬರ ಬದುಕಿಗೆ ಜೀವತುಂಬುವ ಕಾರ್ಯದಲ್ಲಿ ನಮ್ಮಿಂದಾಗುವ ಪ್ರಯತ್ನವನ್ನು ಮಾಡೋಣ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)