ಇತರರನ್ನು ದೂಷಿಸುವ ಮುನ್ನ ನಮ್ಮನ್ನು ಅರಿಯೋಣ..

Column F
Published on
ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಯೋಚನೆಗಳನ್ನು ಬದಿಗಿಡಿ. ಸಾಧ್ಯವಾದಷ್ಟು ಶಾಂತರೀತಿಯಿಂದ ವರ್ತಿಸುವುದು ಒಳಿತು. ಆ ಸಂದರ್ಭದಲ್ಲಿ ಎಲ್ಲ ಕೆಲಸಗಳನ್ನು ಬದಿಗಿಟ್ಟು ದೇವರಸ್ಮರಣೆ, ಜಪ, ಭಜನೆ ಮಾಡುವುದರಿಂದ ನಮ್ಮಲ್ಲಿನ ಋಣಾತ್ಮಕ ಶಕ್ತಿಯನ್ನು ದೂರ ಮಾಡಲು ಸಾಧ್ಯ.

ಮನುಷ್ಯ ತನ್ನ ದೋಷಗಳನ್ನು ಅರಿಯಲು ಪ್ರಯತ್ನಿಸದೆ ಇತರರ ದೋಷವನ್ನು ಹುಡುಕಲು ಪ್ರಯತ್ನಿಸುವುದು ಆತನ ಮೂಲಸ್ವಭಾವಗಳಲ್ಲಿ ಒಂದು. ಒಬ್ಬ ವ್ಯಕ್ತಿ ತನ್ನ ದೋಷವನ್ನು ಸಮರ್ಥಿಸಿಕೊಳ್ಳುತ್ತ ಇತರರಲ್ಲಿ ದೋಷವನ್ನು ಹುಡುಕುವುದರಲ್ಲೇ ಕಾಲ ಕಳೆಯುವುದನ್ನು ಅನೇಕ ಸಂದರ್ಭ ಗಳಲ್ಲಿ ಗಮನಿಸುತ್ತೇವೆ. ತನ್ನ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ, ತಾನೆಷ್ಟು ಸರಿಯಾಗಿದ್ದೇನೆ, ಸಮರ್ಥವಾಗಿದ್ದೇನೆ ಎಂದು ಅರಿಯದೆ ಮತ್ತೊಬ್ಬ ವ್ಯಕ್ತಿಯನ್ನು ಹೀಗಳೆಯುವುದನ್ನು, ಹೀಯಾಳಿಸುವುದನ್ನು ನೋಡುತ್ತೇವೆ.

ಒಬ್ಬ ವ್ಯಕ್ತಿ ವೈದ್ಯರ ಬಳಿ ತೆರಳಿ- ‘ನನ್ನ ಪತ್ನಿಗೆ ಶ್ರವಣದೋಷ ಇದೆ. ಆಕೆಗೆ ಕಿವಿ ಸರಿ ಕೇಳಿಸುತ್ತಿಲ್ಲ. ನನಗೆ ಮುಜುಗರ ಆಗುತ್ತಿದೆ. ನಾನು ಏನಾದರೂ ವಿಚಾರ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಅವಳು ಅದನ್ನು ತಪು್ಪ ತಿಳಿದುಕೊಳ್ಳುವ ಸಂದರ್ಭವೂ ಇದೆ. ನನಗೆ ಅವಳ ಜೊತೆ ಸಂಸಾರ ಮಾಡಲು ಕಷ್ಟವಾಗುತ್ತಿದೆ’ ಎಂದು ಹೇಳಿದ. ವೈದ್ಯರು ಅವನ ಮಾತುಗಳನ್ನು ಆಲಿಸಿ, ‘ಪರೀಕ್ಷೆ ಮಾಡೋಣ, ನೀವು ಇಂದು ಮನೆಗೆ ಹೋದಾಗ ಆಕೆಗೆ ಎಷ್ಟು ದೂರದಿಂದ ಕೇಳಿಸುತ್ತದೆ ಎಂದು ಮೊದಲಿಗೆ ಪರೀಕ್ಷಿಸಿ. ಮೊದಲು ಮನೆಯ ಎದುರು ಬಾಗಿಲಿನಲ್ಲೇ ಆಕೆಯನ್ನು ಕರೆಯಿರಿ. ಏನಾದರೂ ಪ್ರಶ್ನೆ ಕೇಳಿ. ಉತ್ತರಿಸದಿದ್ದರೆ ಮನೆಯ ಒಳಗೆ ಹೋಗಿ ಆಕೆ ಇರುವ ಕೋಣೆಯ ಹೊರಗಡೆಯಿಂದ ಅದೇ ಪ್ರಶ್ನೆ ಕೇಳಿ. ಆಗಲೂ ಉತ್ತರಿಸದಿದ್ದರೆ ಆಕೆಯ ಬಳಿ ಹೋಗಿ ಪ್ರಶ್ನಿಸಿ. ಈ ಮೂರು ವಿಧಾನಗಳಿಂದ ಆಕೆಯ ಶ್ರವಣದೋಷವನ್ನು ಪರೀಕ್ಷಿಸಿ’ ಎಂದರು. ಆ ವ್ಯಕ್ತಿಯೂ ವೈದ್ಯರು ಹೇಳಿದಂತೆಯೇ ಮಾಡಿದ. ಮನೆಗೆ ಬಂದು ಮನೆಬಾಗಿಲಿನ ಒಳ ಬಂದು ‘ಏನು ಆಡುಗೆ ಮಾಡಿದ್ದೀಯ ಇವತ್ತು?’ ಎಂದು ಕೇಳಿದ. ಹೆಂಡತಿ ಕಡೆಯಿಂದ ಉತ್ತರ ದೊರೆಯದೆ ಮುಂದೆ ಆಕೆ ಇದ್ದ ಅಡುಗೆಕೋಣೆ ಬಳಿ ತೆರಳಿ ಅದೇ ಪ್ರಶ್ನೆ ಪುನರುಚ್ಚರಿಸಿದರೂ ಉತ್ತರ ದೊರೆಯಲಿಲ್ಲ. ಬಳಿಕ ಆಕೆಯ ಸಮೀಪ ತೆರಳಿ ಅದೇ ಪ್ರಶ್ನೆ ಕೇಳಿದಾಗ ಆಕೆ, ‘ಮೂರು ಸಲ ನಾನು ಇಡ್ಲಿ ಇಡ್ಲಿ ಎಂದು ಹೇಳಿದೆ, ಇನ್ನೆಷ್ಟು ಸಲ ನಾನು ನಿಮಗೆ ಹೇಳಬೇಕು?’ ಎಂದು ಅಂದಳಂತೆ. ಈ ಉದಾಹರಣೆಯಿಂದ ಯಾರಿಗೆ ಕಿವಿ ಕೇಳಿಸುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಈ ಘಟನೆ ಹಾಸ್ಯಭರಿತವಾಗಿ ಕಂಡರೂ ಗಹನವಾದ ಚಿಂತನೆಗೆ ಒಳ ಪಡಿಸುತ್ತದೆ. ಈ ರೀತಿ ಅನೇಕ ಬಾರಿ ನಮ್ಮ ದೋಷಗಳನ್ನು ತಿಳಿದು ಕೊಳ್ಳದೆ ಇನ್ನೊಬ್ಬರ ದೋಷವನ್ನೇ ಹುಡುಕುತ್ತ ಹೋಗುತ್ತೇವೆ. ಹಾಗಾಗಿ ಇತರರನ್ನು ದೂಷಿಸುವ ಮೊದಲು ನಮ್ಮನ್ನು ನಾವು ತಿಳಿದುಕೊಳ್ಳುವುದು ಮುಖ್ಯ.

ದುಃಖೇ ದುಃಖಾಧಿಕಾನ್ ಪಶ್ಯೇತ್ ಸುಖೇ ಪಶ್ಯೇತ್ ಸುಖಾಧಿಕಾನ್|

ಆತ್ಮಾನಂ ಸುಖದುಃಖಾಭ್ಯಾಂ ಶತ್ರುಭ್ಯಾಮಿವ ನಾರ್ಪಯೇತ್||

‘ತನಗೆ ದುಃಖ ಬಂದಾಗ ತನಗಿಂತಲೂ ಹೆಚ್ಚಿನ ದುಃಖಿಗಳನ್ನು ನೋಡಬೇಕು. ತನಗೆ ಸುಖ ಬಂದಾಗ ತನಗಿಂತಲೂ ಹೆಚ್ಚಿನ ಸುಖಿಗಳನ್ನು ನೋಡಿಕೊಳ್ಳಬೇಕು. ತನಗೆ ಸುಖದುಃಖಗಳು ಬಂದಾಗ ಅವುಗಳಿಗೆ ಮಾತ್ರ ತಾನು ಸಿಕ್ಕಿಕೊಳ್ಳಬಾರದು. ಶತ್ರುಗಳಿಂದ ತನ್ನನ್ನು ಕಾಪಾಡಿಕೊಳ್ಳುವಂತೆ ತನ್ನನ್ನು ಸುಖದುಃಖಗಳಿಂದ ಬಿಡಿಸಿಕೊಳ್ಳಬೇಕು’.

ಪ್ರತಿಯೊಬ್ಬ ಮಾನವನಿಗೂ ಈ ಸಂಸಾರಚಕ್ರದಲ್ಲಿ ಸುಖದುಃಖಗಳು ಬಂದೇ ಬರುತ್ತವೆ. ಬಂದೂ ಇದ್ದೂ ಹೋಗುತ್ತಲೇ ಇರುತ್ತವೆೆ. ಸುಖದುಃಖಗಳು ದ್ವಂದ್ವಾತ್ಮಕ. ಈ ಸಂಸಾರವೆಂಬುದು ದ್ವಂದ್ವಾತ್ಮಕ. ಸುಖ ಬಂದಾಗ ಹಿಗ್ಗುವುದೂ, ದುಃಖ ಬಂದಾಗ ಕುಗ್ಗುವುದೂ ಮನುಷ್ಯನ ಸ್ವಭಾವ. ಈ ಏರುಪೇರುಗಳಿಂದ ತನ್ನನ್ನು ತಾನು ಬಿಡಿಸಿಕೊಳ್ಳುವವನೇ ಬುದ್ಧಿವಂತ. ಅದಕ್ಕೇನು ಉಪಾಯ? ಎಂದರೆ, ತನಗೆ ದುಃಖ ಬಂದಾಗ, ತನಗಿಂತಲೂ ಹೆಚ್ಚಿನ ದುಃಖಿಗಳನ್ನು ನೋಡಿದಾಗ, ತನ್ನ ದುಃಖವು ಸಣ್ಣದೆಂದು ತಿಳಿದಾಗ ತನ್ನ ಆ ದುಃಖವು ಅಲ್ಪವೆಂದು ತೋರಿ ಹಾರಿಹೋಗುತ್ತದೆ. ದುಃಖಾಧಿಕರನ್ನು ನೋಡಿದಾಗ ಒಂದು ವಿಧದ ಧೈರ್ಯವೂ ಬರುತ್ತದೆ. ಆಗ ತನ್ನ ದುಃಖವು ಮಾಯವಾಗಿ ಬಿಡುತ್ತದೆ. ಕೆರೆಯನ್ನು ನೋಡಿದಾಗ ಬಾವಿ ಸಣ್ಣದಾಗುತ್ತದೆ. ನದಿಯನ್ನು ನೋಡಿದಾಗ ಕೆರೆ ಸಣ್ಣದಾಗುತ್ತದೆ. ಸಮುದ್ರವನ್ನು ನೋಡಿದಾಗ ನದಿಯೂ ಸಣ್ಣದಾಗುತ್ತದೆಯಲ್ಲವೆ?

ತನಗೆ ಸುಖವು ಬಂದಾಗ ಹೌಹಾರಿ ಹಿಗ್ಗುವುದು ಸ್ವಭಾವ. ಹಾಗೆ ಹಿಗ್ಗುವುದು ಉಚಿತವಲ್ಲ. ಸುಖದಿಂದ ಉಬ್ಬಬಾರದು. ಇದಕ್ಕೆ ಏನು ಮಾಡಬೇಕು? ಎಂದರೆ ತನಗಿಂತಲೂ ಹೆಚ್ಚಿನ ಸುಖಿಗಳನ್ನು ನೋಡಬೇಕು. ಅವರ ಸುಖದ ಮುಂದೆ ತನ್ನ ಸುಖ ಅಲ್ಪ ಎನ್ನುವ ಭಾವನೆ ಸಹಜವಾಗಿ ಬರುತ್ತದೆ. ಸುಖದುಃಖಗಳೆರಡೂ ಮಾನವರಿಗೆ ಶತ್ರುಗಳೇ. ಆದ್ದರಿಂದ ಸುಖದುಃಖಗಳಿಗೆ ಮನುಷ್ಯನು ವಶನಾಗಬಾರದು.ಸುಖದುಃಖಗಳು ಭಗವಂತನ ಪ್ರಸಾದ ಎಂದು ಅರಿತು ಸ್ವೀಕರಿಸಿದರೆ ಜೀವನದಲ್ಲಿ ನೆಮ್ಮದಿಯಾಗಿರಲು ಸಾಧ್ಯ.

ಭಗವಂತನನ್ನು ಒಲಿಸಿಕೊಳ್ಳುವುದು ಬಹಳ ಸುಲಭ. ಅದಕ್ಕಾಗಿ ಹೆಚ್ಚು ಶ್ರಮ ಪಡಬೇಕಿಲ್ಲ. ಪ್ರಾಮಾಣಿಕರಾಗಿರಬೇಕು, ಶ್ರಮವಹಿಸಿ ಕಾಯಕ ಮಾಡಬೇಕು, ನಿಷ್ಠೆ ಇರಬೇಕು. ಇವೆಲ್ಲ ಸಹಜವಾಗಿದ್ದರೆ ಸಾಕು. ಭಗವಂತನ, ಗುರುಗಳ ಕೃಪಾದೃಷ್ಟಿ ತಮ್ಮ ಮೇಲೆ ಬೀಳಬೇಕು ಎನ್ನುವ ಮಾತಿದೆ. ಅಂದರೆ ಭಗವಂತನ ದರ್ಶನ ಕ್ಷಣಮಾತ್ರವಾದರೂ, ಭಗವಂತನ ಅನುಗ್ರಹ ನಮ್ಮ ಮೇಲೆ ಬಿದ್ದಿದೆ ಎನ್ನುವ ಭಾವನೆ ಇರುತ್ತದೆೆ. ಗುರುಗಳು ಪ್ರವಚನವನ್ನು, ಸಂದೇಶವನ್ನು ನೀಡುತ್ತಿರುವಾಗ ಭಕ್ತರ ಮೇಲೆ ಕಣ್ಣು ಹಾಯಿಸಿದಾಗ ತಮ್ಮ ಮೇಲೆ ದೃಷ್ಟಿ ಬಿದ್ದರೆ ಪುಳಕಿತರಾಗುತ್ತಾರೆ. ಗುರು ದೃಷ್ಟಿ ಬಿದ್ದ ಮೇಲೆ ತಮಗೆ ಉತ್ತಮ ಅನುಗ್ರಹ ದೊರಕಿತು ಅಂದುಕೊಳ್ಳುತ್ತಾರೆ. ಇಲ್ಲಿ ಯಾರ ದೃಷ್ಟಿ ಯಾರ ಮೇಲೆ ಎನ್ನುವುದಕ್ಕಿಂತ ಮಹಾತ್ಮರ ದೃಷ್ಟಿ ನಮ್ಮ ಮೇಲೆ ಬಿದ್ದಾಗ ಅದುವೇ ಮಹತ್ವವಾದದ್ದು.

ಒಬ್ಬ ಅಂಧ ದೇವರದರ್ಶನಕ್ಕೆ ಎಂದು ದೇವಸ್ಥಾನಕ್ಕೆ ಹೋದ. ಅವನ ಪಕ್ಕದಲ್ಲಿ ನಿಂತಿದ್ದ ಇನ್ನೊಬ್ಬ ವ್ಯಕ್ತಿ ಆತನಿಗೆ, ‘ನಿನಗೆ ದೃಷ್ಟಿ ಇಲ್ಲ, ಹಾಗಿದ್ದೂ ದೇವರ ದರ್ಶನಕ್ಕೆ ಏಕೆ ಬಂದಿದ್ದೀಯ?’ ಎಂದು ಕೇಳಿದ. ಆಗ ಆತ- ‘ನಾನು ದೇವರ ದರ್ಶನಕ್ಕೆ ಬಂದಿದ್ದೇನೆ. ನಾನು ದೇವರನ್ನು ನೋಡುವುದು ಮುಖ್ಯವಲ್ಲ, ದೇವರು ನನ್ನನ್ನು ನೋಡುವುದು ಬಹಳ ಮುಖ್ಯ’ ಎಂದ. ಈ ಮಾತಿನಲ್ಲಿ ದೊಡ್ಡ ಸಂದೇಶ ಇದೆ. ದೇವರು ನಮ್ಮನ್ನು ಕಾಣಬೇಕು ಎಂದಾದರೆ ನಾವು ಅಂತರಂಗದಲ್ಲಿ ಪರಿಶುದ್ಧರಾಗಿರಬೇಕು ಎನ್ನುವುದೇ ಇದರ ತಾತ್ಪರ್ಯ. ಅನೇಕ ಜನ ದೃಷ್ಟಿ ಉಳ್ಳವರು ಕುರುಡರಾಗಿದ್ದಾರೆ. ಅನೇಕ ವಿಷಯಗಳು ಈ ದೃಷ್ಟಿ ಮೂಲಕ ಬುದ್ಧಿಗೆ, ಮನಸ್ಸಿಗೆ ಬರುತ್ತವೆ. ಆದರೆ ಅದರ ಸದ್ಬಳಕೆ ಮಾಡಿಕೊಳ್ಳುವುದಿಲ್ಲ.

ಸಾತ್ವಿಕ, ರಾಜಸ, ತಾಮಸ ಗುಣಗಳಲ್ಲಿ ಸಾತ್ವಿಕವಾದ ಆಹಾರ, ಸಾತ್ವಿಕವಾದ ಚಿಂತನೆಗಳು ನಮಗೆ ಪುಷ್ಟಿಯಾಗಿರುತ್ತವೆ. ಅಂದರೆ ವ್ಯಕ್ತಿತ್ವದಲ್ಲಿ ಪ್ರೌಢತೆ ಹಾಗೂ ಒಳ್ಳೆಯ ವಿಚಾರಧಾರೆಗಳನ್ನು ಇವು ಕೊಟ್ಟರೆ ರಾಜಸ ಎನ್ನುವಂತಹದ್ದು ಮಾಧ್ಯಸ್ಥ ಭಾವವನ್ನು ಕೊಡುತ್ತದೆ. ತಾಮಸದಲ್ಲಿ ಇನ್ನೊಬ್ಬರಿಗೆ ನೋವು, ಹಿಂಸೆ ಉಂಟು ಮಾಡುವ ಆಲೋಚನೆ ಒಡಮೂಡುತ್ತದೆ. ಮತ್ತು ಅದನ್ನು ಕಾಯೇನ ವಾಚಾ ಮನಸಾ ಮಾಡುತ್ತಿರುತ್ತೇವೆ. ಕಾಯೇನ ಎಂದರೆ ದೈಹಿಕವಾಗಿ ಇನ್ನೊಬ್ಬರಿಗೆ ಹಿಂಸೆ ಕೊಡುವಂಥದ್ದು, ಘಾಸಿಗೊಳಿಸುವಂಥದ್ದು, ವಾಚಾ ಎಂದರೆ ಬಾಯಿಮಾತಿನಲ್ಲಿ ಕೊಲ್ಲುವುದು ಅಂದರೆ ಹೀಯಾಳಿಸುವುದು, ಚುಚ್ಚುಮಾತು ಆಡುವುದು, ದೂಷಿಸಿ ಹಿಂಸಿಸುವುದು. ಮನಸಾ ಎಂದರೆ ಮನಸ್ಸಿನಲ್ಲೇ ಇನ್ನೊಬ್ಬರ ಹಗೆತನ ಬೆಳೆಸಿಕೊಳ್ಳುವುದು. ಇನ್ನೊಬ್ಬರ ಬಗ್ಗೆ ಕೆಟ್ಟದಾದ ಆಲೋಚನೆಯನ್ನು ಬೆಳೆಸಿಕೊಂಡು ಹೋಗುವುದು. ಹಾಗಾಗಿ ನಮ್ಮ ಗುರಿ ಕಾಯೇನ ವಾಚಾ ಮನಸಾ ಸಾತ್ವಿಕತೆಯನ್ನು ಬೆಳೆಸಿಕೊಳ್ಳುವುದರಲ್ಲಿ ಇರಬೇಕು.

ಭಗವಂತನ ಬಳಿ ಹೋದಾಗ ನಮ್ಮ ಭಾವನೆ ಹೇಗಿರಬೇಕು ಎಂಬುದೂ ಮುಖ್ಯ. ನಮ್ಮ ಭಕ್ತಿ ಎನ್ನುವುದು ಕ್ಷಣಿಕವಾದ ಭಕ್ತಿ ಆಗಿರಬಾರದು. ದೇವರನ್ನು ನೋಡುವ ಸಲುವಾಗಿ ಸಾಲಿನಲ್ಲಿ ನಾಲ್ಕಾರು ತಾಸು ನಿಲ್ಲಬೇಕಾದ ಸಂದರ್ಭಗಳೂ ಬರಬಹುದು. ಆಗ ಬಹುತೇಕರು ದರ್ಶನದ ಸಾಲಿನಲ್ಲಿ ನಿಂತು ಗಟ್ಟಿಯಾಗಿ ಫೋನಿನಲ್ಲಿ ಮಾತನಾಡುವುದು, ಇನ್ನೊಬ್ಬರ ಕೈ-ಕಾಲು ತಗುಲಿತೆಂದು ಜಗಳ ಕಾಯುವುದು, ನಾಲ್ಕೆ ೖದು ಜನ ಸೇರಿ ಪಟ್ಟಾಂಗ ಹೊಡೆಯುವುದು, ಜೋರಾಗಿ ನಗಾಡುವುದು ಇತ್ಯಾದಿಗಳನ್ನು ಮಾಡಿದಾಗ ಶ್ರದ್ಧೆಯನ್ನು ಕಳೆದುಕೊಳ್ಳುವುದರೊಂದಿಗೆ ಇತರರ ಭಕ್ತಿಗೂ ಭಂಗವಾಗುತ್ತದೆ. ಇನ್ನು ಕೆಲವು ಮನೆಗಳಲ್ಲಿ ದೇವರಿಗೆ ಪೂಜೆ, ಆರತಿ ಮಾಡುತ್ತಿರುವಾಗ ನಡು-ನಡುವಿನಲ್ಲಿ ಗಂಡ ಹೆಂಡತಿಗೆ, ‘ಇವತ್ತು ಆಫೀಸಿನಲ್ಲೇ ಮಧ್ಯಾಹ್ನ ಊಟ ಇದೆ. ಟಿಫಿನ್ ಬೇಡ ಕಣೇ..., ಹಾಂ ಅಲ್ಲಿ ಗ್ಯಾಸ್​ಬಿಲ್ ಇಟ್ಟಿದ್ದೇನೆ. ಆ ಹುಡುಗ ಬಂದ್ರೆ ಕೊಡು’ ಎಂದು ಅತ್ತ ಪೂಜೆ, ಇತ್ತ ಮಾತು, ಹೀಗೆ ಏಕಕಾಲದಲ್ಲಿ ಕೆಲಸವನ್ನೆಲ್ಲ ಮಾಡುವವರಿದ್ದಾರೆ. ಇಂತಹ ಭಕ್ತರುಗಳಿಂದ ಸ್ಥಿರವಾದ ಭಕ್ತಿ ಸಾಧ್ಯವಿಲ್ಲ.

ದೇವಸ್ಥಾನಕ್ಕೆ ಹೋಗಿ ಹಣ್ಣುಕಾಯಿ ನೀಡಿ ಕೈ ಮುಗಿದು ದೇವರನ್ನು ಶ್ರದ್ಧೆಯಿಂದ ಪೂಜಿಸುವುದಷ್ಟೇ ಭಕ್ತಿಯಲ್ಲ. ನಾವು ಯಾವ ಕೆಲಸವನ್ನು ಅಚ್ಚುಕಟ್ಟಾಗಿ ಪ್ರೀತಿಯಿಂದ ಒಳ್ಳೆಯ ರೀತಿಯಲ್ಲಿ ಮಾಡಿ ಮುಗಿಸುತ್ತೇವೆಯೋ ಅದು ಕೂಡ ಭಕ್ತಿಯಾಗುತ್ತದೆ. ನಾವು ಮಾಡುವ ಯಾವ ಕೆಲಸ ಆತ್ಮತೃಪ್ತಿಯನ್ನು ನೀಡುತ್ತದೋ ಅದೂ ಭಕ್ತಿಯೇ ಆಗಿದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಭಕ್ತಿ ಯಾಕೆ ಮಾಡುತ್ತಾರೆಂದರೆ ಅಲ್ಲಿ ದೈವೀ ಶಕ್ತಿಗಳು ಸದಾ ಜಾಗೃತವಾಗಿರುತ್ತವೆ.

ಮೂರ್ತಿ ಅಥವಾ ಬಿಂಬದಿಂದ ಹೊರ ಹೊಮ್ಮುವ ತರಂಗ ಅಥವಾ ಕಂಪನಗಳು ನಮ್ಮಲ್ಲಿನ ಋಣಾತ್ಮಕ ದೋಷಗಳನ್ನು ಕಳೆದು ಧನಾತ್ಮಕವಾದ ಪ್ರಭಾವ ಬೀರುತ್ತವೆ. ಯಾಕೆಂದರೆ ಕ್ಷೇತ್ರದಲ್ಲಿ ಧಾರ್ವಿುಕ ವಿಧಿವಿಧಾನಗಳಿಂದ ದೇವರ ಪ್ರತಿಷ್ಠಾಪನೆ, ಪೂಜೆ, ಅರ್ಚನೆಗಳೆಲ್ಲ ನಡೆಯುವುದರಿಂದ ವಿಶೇಷವಾದ ಶಕ್ತಿ ಸಾನ್ನಿಧ್ಯದ ಪ್ರಭಾವ ಅಲ್ಲಿ ಹೆಚ್ಚಿರುತ್ತದೆ. ಅಲ್ಲದೆ ದೇವಸ್ಥಾನದಲ್ಲಿರುವ ಗಂಟೆ, ಪ್ರಶಾಂತ ವಾತಾವರಣಗಳೆಲ್ಲ ವಿಶೇಷವಾದ ಪ್ರಭಾವ ಬೀರಿ ಮನಸ್ಸಿಗೆ ಉತ್ಸಾಹ, ನೆಮ್ಮದಿ, ಶಾಂತಿಯನ್ನು ಉಂಟುಮಾಡುತ್ತವೆ.

ಭಕ್ತಿ ಎಂದಿಗೂ ಒಳಮನಸ್ಸಿನಿಂದ ಮೂಡಿಬರಬೇಕು. ಒಳಮನಸ್ಸಿನಲ್ಲಿ ಮೂಡಬೇಕಾದರೆ ನಮ್ಮಲ್ಲಿರುವ ಅರಿಷಡ್ವರ್ಗ ಮುಂತಾದ ದೋಷಗಳನ್ನೆಲ್ಲ ಕಳೆದುಕೊಂಡು ಹಗುರಾಗಬೇಕು. ಎಷ್ಟು ಸಾತ್ವಿಕ ಭಾವವನ್ನು ಹೊಂದುತ್ತೇವೆಯೋ ಅಷ್ಟು ದೇವರಿಗೆ ಹತ್ತಿರವಾಗಲು ಸಾಧ್ಯ. ಯಾಕೆಂದರೆ ನಾವು ದೇವರೆಡೆಗೆ ಒಂದು ಹೆಜ್ಜೆ ಮುಂದಿಟ್ಟರೆ ದೇವರೂ ಒಂದು ಹೆಜ್ಜೆ ನಮ್ಮೆಡೆಗೆ ಬರುತ್ತಾನಂತೆ. ಸನ್ಮಾರ್ಗದಲ್ಲಿ ಬದುಕನ್ನು ನಡೆಸುವ ಮೂಲಕ ಮಾತ್ರ ದೇವರೆಡೆಗೆ ಸಾಗಲು ಸಾಧ್ಯ. ದೇವರು ಒಲಿಯುವುದು ಮುಗ್ಧ ಭಕ್ತಿ-ಶ್ರದ್ಧೆಗೆ. ನಮ್ಮನ್ನು ನಾವು ಅರಿತು ಅಂತರಂಗ ಶುದ್ಧಿಗೊಳಿಸಿದಾಗ ಭಕ್ತಿಯಲ್ಲೂ ಬದುಕಿನಲ್ಲೂ ಪರಿಪೂರ್ಣತೆ ಪಡೆಯಲು ಸಾಧ್ಯವಾಗುತ್ತದೆ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net