

ನಾನೊಮ್ಮೆ ಹಳ್ಳಿಯೊಂದಕ್ಕೆ ಭೇಟಿ ನೀಡಿದಾಗ ಅಲ್ಲಿನ ಸ್ಥಿತಿ ಕಂಡು ಬೇಸರವಾಯಿತು. ಅಲ್ಲಿ ಎತ್ತರದ ಪ್ರದೇಶದಿಂದ ತಗ್ಗು ಪ್ರದೇಶದವರೆಗೆ ಮನೆಗಳನ್ನು ನಿರ್ವಿುಸಿಕೊಂಡು ಅನೇಕ ಕುಟುಂಬಗಳು ವಾಸವಾಗಿದ್ದವು. ಇನ್ನು ಕೆಲವು ಮನೆಗಳು ನಿರ್ಮಾಣ ಹಂತದಲ್ಲಿದ್ದವು. ಮನೆಗಳ ಮುಂದೆಯೇ ಕಾಲುವೆ ಇತ್ತು. ಕಾಲುವೆಯ ಬಳಿ ಮಕ್ಕಳನ್ನೆಲ್ಲ ಕರೆದುಕೊಂಡು ಬಂದು ಅಲ್ಲಿಯೇ ಪ್ರಕೃತಿಕರೆಗಳನ್ನು ಮಾಡಿಸುತ್ತಿದ್ದರು. ಅದೇ ಚರಂಡಿಯಲ್ಲಿ ಇತರ ತ್ಯಾಜ್ಯಗಳನ್ನು ಹೊತ್ತ ನೀರು ಹರಿಯುತ್ತಿತ್ತು. ಅಷ್ಟೊಂದು ಕಲುಷಿತಗೊಂಡ ತೆರೆದ ಚರಂಡಿಯ ಸ್ವಚ್ಛತೆಯ ಬಗ್ಗೆ ಯಾರಿಗೂ ಕಾಳಜಿ ಇದ್ದಂತಿರಲಿಲ್ಲ. ನಾನು ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರಲ್ಲಿ ‘ಇಲ್ಲಿನ ಜನರಿಗೆ ಸ್ವಚ್ಛತೆ, ಆರೋಗ್ಯದ ಬಗ್ಗೆ ಮಾಹಿತಿ ಕೊಡಿ. ತೆರೆದ ಚರಂಡಿಯನ್ನು ಒಳಚರಂಡಿಯನ್ನಾಗಿಸಲು ಇಲಾಖೆಗಳಿಗೆ ವಿನಂತಿಸಿಕೊಳ್ಳಿ’ ಎಂದು ಹೇಳಿದ್ದೆ. ಅದರಂತೆ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಿದ್ದರು. ಮನವಿಗೆ ಸ್ಪಂದಿಸಿದ ಪಂಚಾಯತ್ ಚರಂಡಿಯನ್ನು ವ್ಯವಸ್ಥಿತವಾಗಿ ನಿರ್ವಿುಸಿಕೊಟ್ಟಿತು.
ಹೆಚ್ಚಿನ ಕಡೆ ಇಂತಹ ಅವ್ಯವಸ್ಥೆಗಳು ಕಾಣಸಿಗುತ್ತವೆ. ಮನೆಯ ಸುತ್ತಮುತ್ತ ತರಕಾರಿ ಸಿಪ್ಪೆಯಿಂದ ಹಿಡಿದು ಪ್ಲಾಸ್ಟಿಕ್, ಬಾಟಲಿ ಹೀಗೆ ಅನೇಕ ರೀತಿಯ ತ್ಯಾಜ್ಯಗಳನ್ನು ಬಿಸಾಡಿರುವುದನ್ನು ಕಾಣುತ್ತೇವೆ. ಅಲ್ಲಿ ಕೋಳಿ, ನಾಯಿ ಅಥವಾ ಹಂದಿಗಳು ಇದ್ದರೆ ಎಸೆದ ತ್ಯಾಜ್ಯಗಳಲ್ಲಿ ಕೆಲವೊಂದನ್ನು ಅವು ತಿನ್ನುತ್ತವೆ. ಆದರೆ ಹೊಲಸು ತಿನ್ನಲು ಕೋಳಿ, ನಾಯಿಗಳು ಇವೆಯಲ್ಲ ಎಂದುಕೊಂಡು ಅಲ್ಲಲ್ಲಿ ಬಿಸಾಡುವುದು, ಗಲೀಜು ಮಾಡುವುದು ಸರಿಯಲ್ಲ. ಯಾಕೆಂದರೆ ತ್ಯಾಜ್ಯವಸ್ತುಗಳು ಕೊಳೆತು ನಾರತೊಡಗಿದರೆ ಪ್ರಾಣಿಗಳೂ ಅವುಗಳನ್ನು ಮುಟ್ಟುವುದಿಲ್ಲ. ಇಂತಹ ಅಸಹ್ಯ ವಾತಾವರಣ ನಿರ್ವಿುಸಿಕೊಂಡು, ಆಮೇಲೆ ಕಷ್ಟಪಡುವ ಬದಲು ದಿನಕ್ಕೆ ಕೇವಲ ಹತ್ತು ನಿಮಿಷ ಮನೆಯ ಸುತ್ತಮುತ್ತ ಸ್ವಚ್ಛತೆಗೆ ಮೀಸಲಿರಿಸಿದರೆ ಸಮಸ್ಯೆ ಖಂಡಿತ ಪರಿಹಾರವಾಗುತ್ತದೆ. ಹಳ್ಳಿ- ನಗರವಾಸಿಗಳಲ್ಲಿ ಈ ಪ್ರಜ್ಞೆ, ಅರಿವು ಮೂಡಬೇಕಿದೆ. ನಗರಗಳಲ್ಲಿ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆಗಳಿದ್ದರೂ ರಸ್ತೆಯ ಕೊನೆಗೋ, ಮೋರಿಗೋ ಕಸದ ಚೀಲಗಳನ್ನು ಎಸೆಯುವವರಿದ್ದಾರೆ. ತೊಟ್ಟಿ ಇದ್ದರೂ ಅದಕ್ಕೆ ಕಸ ಹಾಕದೆ ಎಲ್ಲೆಂದರಲ್ಲಿ ಹಾಕುವವರನ್ನು ಕಾಣಬಹುದು.
ನಾವು ಕೆಲವು ವರ್ಷಗಳ ಹಿಂದೆ ಅಮೆರಿಕಕ್ಕೆ ಪ್ರವಾಸ ಹೋದಾಗ ಅಲ್ಲಿದ್ದ ಪರಿಚಿತರೊಬ್ಬರ ಮನೆಯಲ್ಲೇ ಉಳಿದುಕೊಳ್ಳಬೇಕು ಎಂದು ಬಹಳ ಹಠ ಮಾಡಿದ್ದರಿಂದ, ಒಂದು ದಿನ ಅಲ್ಲಿಯೇ ಉಳಿದುಕೊಂಡೆವು. ಅದು ಅಮೆರಿಕದ ವಾಸ್ತುಶೈಲಿಯಲ್ಲಿ ನಿರ್ವಿುತವಾದ ಮನೆ. ಬಹಳ ತೆಳುವಾದ ಬಾಗಿಲು, ಪುಟ್ಟ ಮನೆ. ಮನೆಯ ಸುತ್ತಮುತ್ತ ವಿಶಾಲವಾದ ಜಾಗವಿತ್ತು. ಅಲ್ಲಿ ಹಸಿರು ತುಂಬಿತ್ತು. ಎಲ್ಲೂ ಕಸವನ್ನು ಕಾಣಲಿಲ್ಲ. ಇಷ್ಟೊಂದು ಸ್ವಚ್ಛತೆಯಿಂದ ಪರಿಸರವನ್ನು ಹೇಗೆ ಇಟ್ಟುಕೊಳ್ಳಲು ಸಾಧ್ಯ ಎಂದು ಆಶ್ಚರ್ಯವಾಯಿತು. ನಾವು ಟಿ.ವಿ.ಯಲ್ಲಿ ವಿದೇಶಗಳ ಪರಿಸರ, ಅಲ್ಲಿನವರ ಮನೆಗಳನ್ನು, ರಸ್ತೆ, ಇನ್ನಿತರ ಜಾಗಗಳನ್ನು ನೋಡಿದರೆ ಎಲ್ಲವೂ ಹಚ್ಚ ಹಸಿರಿನಿಂದ ತುಂಬಿರುತ್ತದೆ. ಒಂದಿನಿತೂ ಜಾಗವನ್ನು ಖಾಲಿ ಬಿಡದೆ ಸದ್ವಿನಿಯೋಗ ಮಾಡಿಕೊಂಡಿರುತ್ತಾರೆ. ಒಂದೋ ಗಿಡ ನೆಟ್ಟಿರುತ್ತಾರೆ, ಇಲ್ಲವಾದರೆ ಕಾಂಕ್ರೀಟ್, ಇಂಟರ್ಲಾಕ್ ಹಾಕಿರುತ್ತಾರೆ. ಮರಗಳಿಂದ ದಿನವೂ ಉದುರುವ ಎಲೆಗಳೂ ಕೂಡ ಕಾಣಸಿಗುವುದಿಲ್ಲ. ಅವೆಲ್ಲ ಬುಡವನ್ನು ಸೇರಿ ಪರಿಸರ ಸ್ವಚ್ಛವಾಗಿರುತ್ತದೆ. ಈ ರೀತಿಯ ಸ್ವಚ್ಛತೆ ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತವೆ. ನಾವು ಉಳಿದುಕೊಂಡಿದ್ದ ಮನೆಯವರಲ್ಲಿ ‘ಮರಗಳಿಂದ ಬಿದ್ದ ತರಗೆಲೆಗಳೂ ಇಲ್ಲದಂತೆ ಶುಚಿತ್ವ ಕಾಪಾಡಿಕೊಂಡಿರುವುದು ಹೇಗೆ?’ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು ‘ಇಲ್ಲಿ ಈ ರಸ್ತೆಯಲ್ಲಿರುವಂತಹ 50-100 ಮನೆಗಳಿಗೆ ಒಂದು ಸಮಿತಿ ಇರುತ್ತದೆ. ಆ ಸಮಿತಿಯಲ್ಲಿ ಒಪ್ಪಂದ ಮಾಡಿಕೊಂಡ ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ಜಾಗವನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳಬೇಕಾಗುತ್ತದೆ. ತರಗೆಲೆಗಳು ಬಿದ್ದು ಹಿಮ, ನೀರು ಸೇರಿಕೊಂಡು ಅಲ್ಲೇ ಕೊಳೆತು ಕ್ರಿಮಿಕೀಟಗಳು ಸೃಷ್ಟಿಯಾದರೆ ನಮ್ಮ ಮನೆಯ ಪರಿಸರಕ್ಕೂ, ಆರೋಗ್ಯಕ್ಕೂ ಮಾರಕ. ಅಲ್ಲದೆ ಅಕ್ಕಪಕ್ಕದವರಿಗೂ ತೊಂದರೆಯಾಗುತ್ತದೆ. ಶನಿವಾರ ಮತ್ತು ಭಾನುವಾರ ನಮಗೆ ರಜಾದಿನವಾಗಿದ್ದು ಅಂದು ವಿಶೇಷವಾಗಿ ಮನೆಯ ಯಜಮಾನ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆಯನ್ನು ಮಾಡಬೇಕಾಗುತ್ತದೆ. ಮನೆಯ ಮಕ್ಕಳನ್ನೂ ಸೇರಿಸಿಕೊಳ್ಳಲಾಗುತ್ತದೆ. ಬಾಲ್ಯದಿಂದಲೇ ಅವರಿಗೂ ಸ್ವಚ್ಛತೆಯ ಜಾಗೃತಿ ಮೂಡಿಸಲಾಗುತ್ತದೆ. ಎಲ್ಲ ತ್ಯಾಜ್ಯಗಳನ್ನು ಮನೆ ಹತ್ತಿರದಲ್ಲಿರುವ ತ್ಯಾಜ್ಯದ ಡ್ರಮ್ೆ ಹಾಕಿದರೆ ಆಯಾ ಪ್ರದೇಶದ ಆಡಳಿತ ವ್ಯವಸ್ಥೆ ನೋಡಿಕೊಳ್ಳುವ ಸಂಸ್ಥೆ, ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಿಸುವ ವ್ಯವಸ್ಥೆ ಮಾಡುತ್ತದೆ. ಒಂದು ವೇಳೆ ನಾವು ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ದಂಡ ಹಾಕುತ್ತಾರೆ’ಎಂದು ಅವರು ಹೇಳಿದರು. ‘ದಂಡಂ ದಶಗುಣಂ’ ಎನ್ನುವಂತೆ ಕೆಲವು ಸಲ ದಂಡ ಹಾಕಿದರೆ ಮಾತ್ರ ಭಯಪಟ್ಟಾದರೂ ಆ ಕೆಲಸವನ್ನು ಮಾಡುತ್ತಾರೆ. ಅನೇಕ ದೇಶಗಳಲ್ಲಿ ಸ್ವಚ್ಛತೆ ಎನ್ನುವಂತಹದ್ದು ಸಂಸ್ಕೃತಿಯಾಗಿ ಬದಲಾಗಿದೆ. ಜನಜೀವನದಲ್ಲಿ ಹಾಸುಹೊಕ್ಕಿದೆ.
ಒಂದು ಬಾರಿ ನಾವು ಜಪಾನ್ಗೆ ಹೋಗಿದ್ದಾಗ ಅಲ್ಲಿ ನಮ್ಮೊಂದಿಗಿದ್ದ ಒಬ್ಬರು ಟೆಟ್ರಾಪ್ಯಾಕ್ನ ಜ್ಯೂಸ್ ಹಿಡಿದುಕೊಂಡಿದ್ದರು. ಇನ್ನೊಂದು ಕೈಯಲ್ಲಿ ಕೋಕಾಕೋಲಾದ ಬಾಟಲ್ ಹಿಡಿದಿದ್ದರು. ಒಂದು ಕಟ್ಟಡದ ಒಳ ಹೋಗಬೇಕಾದರೆ ಏನನ್ನೂ ಕೊಂಡು ಹೋಗುವಂತಿರಲಿಲ್ಲ. ಹಾಗಾಗಿ ಅವರು ಟೆಟ್ರಾಪ್ಯಾಕ್ನ ಜ್ಯೂಸ್ ಮತ್ತು ಕೋಕಾಕೋಲಾದ ಬಾಟಲನ್ನು ತ್ಯಾಜ್ಯ ವಿಲೇವಾರಿ ಡಬ್ಬಿಗೆ ಹಾಕಿದರು. ನಮ್ಮ ಜೊತೆಗಿದ್ದ ಜಪಾನಿ ಮಾರ್ಗದರ್ಶಕ ತ್ಯಾಜ್ಯ ಡಬ್ಬಿಗೆ ಕೈ ಹಾಕಿ ಕೋಕಾಕೋಲಾದ ಟಿನ್ ಹೊರತೆಗೆದು ಹತ್ತಿರದಲ್ಲೇ ಇದ್ದ ಮತ್ತೊಂದು ತ್ಯಾಜ್ಯ ವಿಲೇವಾರಿ ಡಬ್ಬಿಗೆ ಹಾಕಿದರು. ತ್ಯಾಜ್ಯವನ್ನು ವಿಂಗಡಿಸಿ ಆಯಾ ಡಬ್ಬಿಗೆ ಹಾಕುವ ವ್ಯವಸ್ಥೆ ಬಗ್ಗೆ ತಿಳಿಸಿದರು. ಅಷ್ಟು ಸೂಕ್ಷ್ಮವಾಗಿ ಕಾಳಜಿ ವಹಿಸುತ್ತಾರೆ. ಹಾಗಾಗಿ ಅಲ್ಲಿ ಪ್ರಕೃತಿ ಶುಚಿಯಾಗಿ ಕಾಣುತ್ತದೆ. ನಮ್ಮ ದೇಶದಲ್ಲಿ ಯಾಕೆ ಅದು ಸಾಧ್ಯವಿಲ್ಲ? ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎಂದಾಕ್ಷಣ ಅವೆಲ್ಲವೂ ಹೊಲಸಾಗಿರಬೇಕು, ತ್ಯಾಜ್ಯಗಳು ಅಲ್ಲಲ್ಲಿ ಚದುರಿರಬೇಕು ಎಂದೇನೂ ಇಲ್ಲ. ನಾವು ಚೀನಾಗೆ ಹೋಗಿದ್ದಾಗ ಹೆಚ್ಚಿನ ಎಲ್ಲಾ ಪ್ರದೇಶಗಳು ಸ್ವಚ್ಛವಾಗಿತ್ತು. ಒಂದೆರಡು ಕಡೆ ಮಾತ್ರ ಉಗುಳಿದ್ದು ಕಂಡಿತು. ‘ಬೇರೆ ಕಡೆಗಳಲ್ಲಿ ಶುಚಿತ್ವವಿದೆ. ಇಲ್ಲಿ ಉಗುಳಿದ್ದು ಕಾಣಿಸಿಕೊಂಡಿದೆಯಲ್ಲ ಯಾಕೆ?’ ಎಂದು ಗೈಡ್ನನ್ನು ಕೇಳಿದಾಗ ‘ಸ್ವಾಮಿ ಇಲ್ಲಿ ಇನ್ನೂ ಹಳೇ ತಲೆಮಾರಿನ ಮುದುಕರಿದ್ದಾರೆ, ಅವರಿಗಿನ್ನೂ ಈ ಸಂಸ್ಕೃತಿಯ ಪರಿಚಯ ಆಗಿಲ್ಲ. ಯುವಕರು ಮತ್ತು ಮಧ್ಯವಯಸ್ಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದಿಲ್ಲ. ದಾರಿಗಳಲ್ಲಿ ಉಗುಳೋದಿಲ್ಲ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಬೀಡಿ, ಸಿಗರೇಟು ಸೇದೋದಿಲ್ಲ. ಹಿರಿಯರು ಹಳೇ ಚಾಳಿಯನ್ನು ಉಳಿಸಿಕೊಂಡು ಬಂದಿದ್ದರಿಂದಲೇ ಅವರು ಎಲ್ಲೆಂದರಲ್ಲಿ ಉಗುಳುತ್ತಾರೆ, ತ್ಯಾಜ್ಯ ಬಿಸಾಡುತ್ತಾರೆ. ಬಹುಶಃ ಈ ತಲೆಮಾರು ಮರೆಯಾದ ನಂತರ ಈ ಸಮಸ್ಯೆಗಳು ಪರಿಹಾರವಾಗಬಹುದು’ಎಂದ.
ಮಂಗಳೂರಿನಲ್ಲಿ ನಡೆದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಸುಮಾರು 2-3 ವರ್ಷದ ಮಗು ತಾಯಿಯೊಂದಿಗೆ ಮಾಲ್ಗೆ ಹೋಗಿ ವಾಪಸಾಗುತ್ತಿದ್ದಾಗ ರಸ್ತೆಯಲ್ಲಿ ಮುಂದೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರು ತಿಂಡಿ ತಿಂದು ಪ್ಲಾಸ್ಟಿಕ್ ಕೊಟ್ಟೆಯನ್ನು ಪಕ್ಕಕ್ಕೆ ಬಿಸಾಡುತ್ತಾರೆ. ಈ ಮಗು ಅಮ್ಮನ ಕೈಯನ್ನು ಕೊಡವಿಕೊಂಡು ಓಡಿ ಹೋಗಿ ‘ನೀವು ಹೀಗೆ ರಸ್ತೆಯಲ್ಲಿ ಪೊಟ್ಟಣ ಬಿಸಾಡಬಾರದು’ ಎನ್ನುತ್ತದೆ. ಆ ಮನುಷ್ಯ ಸಿಟ್ಟಿಗೆದ್ದು ಮಗುವನ್ನು ಬಯ್ಯಬಹುದು ಎಂದು ತಾಯಿ ‘ಕ್ಷಮಿಸಿ, ಸಣ್ಣ ಮಗು ತಿಳಿಯದೆ ತಪ್ಪು ಮಾಡಿದೆ ’ಎಂದಳಂತೆ. ಆ ವ್ಯಕ್ತಿ ನಾಚಿ ನೀರಾಗಿ ‘ಅಮ್ಮ ಕ್ಷಮೆ ಕೇಳಬೇಕಾದವನು ನಾನು ಹೊರತು ನೀವಲ್ಲ. ಮಗುವಿನ ಪರಿಸರ ಪ್ರಜ್ಞೆಗೆ ಮೆಚ್ಚುತ್ತೇನೆ’ ಎಂದಾಗ ಸಂದರ್ಭ ತಿಳಿಯಾಯಿತು. ಈ ಪ್ರಜ್ಞೆ ಮಕ್ಕಳಲ್ಲಿ ಬೆಳೆಯಬೇಕಿದೆ.
ಬೆಳಗ್ಗಿನ ವೇಳೆಯಲ್ಲಿ ಮನೆ-ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆ ಬಹುತೇಕ ಕಡೆಗಳಲ್ಲಿ ಇದೆ. ಒಮ್ಮೆ ತ್ಯಾಜ್ಯ ಸಂಗ್ರಹಿಸುವವರು ಬಂದಾಗ ಸಣ್ಣ ಮಗುವೊಂದು ಒಳಮನೆಯಲ್ಲಿದ್ದ ಅಮ್ಮನನ್ನು ಕರೆದು ‘ಕಸದವರು ಬಂದಿದ್ದಾರಮ್ಮಾ’ ಎಂದು ಕೂಗಿ ಹೇಳುತ್ತದೆ. ಆಗ ತಾಯಿ ಮನೆಯೊಳಗಿಂದ ಕಸವನ್ನು ತಂದು ಕೊಡುತ್ತಾಳೆ. ಬಳಿಕ ಮಗಳಲ್ಲಿ ‘ನೋಡು ಮಗು, ಕಸದವರು ಅವರಲ್ಲ ನಾವು. ಯಾಕೆಂದರೆ ಇಷ್ಟೊಂದು ಕಸವನ್ನು ನಾವೇ ಮಾಡಿದ್ದಲ್ಲವೇ! ಅವರು ಸ್ವಚ್ಛಗೊಳಿಸುವವರು. ಪರಿಸರವನ್ನು ಸಂರಕ್ಷಿಸಲು ಕಾರ್ಯ ನಿರ್ವಹಿಸುವವರು. ಇನ್ನು ಅವರನ್ನು ಹಾಗೆ ಕರೆಯಬೇಡ’ ಎಂದು ತಿಳಿಹೇಳಿದಳು. ಮಗು ತಲೆಯಾಡಿಸಿತು.
ಬಹಳಷ್ಟು ಕಡೆಗಳಲ್ಲಿ ಅವಿದ್ಯಾವಂತರು ಅಥವಾ ಕಡಿಮೆ ಶಿಕ್ಷಣ ಪಡೆದವರು ಜೀವನ ನಿರ್ವಹಣೆಗಾಗಿ ಇಂತಹ ಶುಚಿಗೊಳಿಸುವ, ತ್ಯಾಜ್ಯ ನಿರ್ವಹಣೆಯ ಕೆಲಸ ಮಾಡುತ್ತಿರುತ್ತಾರೆ. ಆದರೆ ಬಹಳಷ್ಟು ಕಡೆ ಅವರನ್ನು ತಾತ್ಸಾರದಿಂದ, ಕೀಳಾಗಿ ನೋಡಲಾಗುತ್ತದೆ. ಇದು ತಪ್ಪು. ಯಾಕೆಂದರೆ ಯಾವ ಕೆಲಸವೂ ಕೀಳಲ್ಲ, ಮೇಲೂ ಅಲ್ಲ. ಎಲ್ಲವೂ ಒಂದೇ. ಅವರು ತ್ಯಾಜ್ಯ ಸಂಗ್ರಹಣೆ, ಶುಚಿತ್ವದ ಕೆಲಸ ಮಾಡುವುದರಿಂದಲೇ ನಾವು ಸುಂದರವಾದ ಪರಿಸರದಲ್ಲಿ ನೆಮ್ಮದಿಯಾಗಿರಲು ಸಾಧ್ಯ. ಅವರು ತ್ಯಾಜ್ಯ ಸಂಗ್ರಹಿಸಲು ಒಂದೆರಡು ದಿನ ಬಾರದೇ ಇದ್ದಲ್ಲಿ ನಮ್ಮ ಮನೆಗಳಲ್ಲೂ ಕಸ ಕೊಳೆತು ನಾರಲು ಶುರುವಾಗುತ್ತದೆ. ಅವರನ್ನು ಗೌರವದಿಂದ ಕಾಣುವುದಷ್ಟೇ ಅಲ್ಲದೆ ಅವರಿಗೆ ಸಹಕರಿಸುವುದು ಅಗತ್ಯ.
ಇದು ‘ನನ್ನದಲ್ಲ’ ಎನ್ನುವ ಭಾವನೆಯನ್ನು ತೊಡೆದುಹಾಕಿ ‘ನಮ್ಮದು’ ಎನ್ನುವ ಭಾವನೆ ಮೈಗೂಡಿಸಿಕೊಂಡು, ನಮ್ಮ ದೇಶ, ನಮ್ಮ ರಾಜ್ಯ, ನಮ್ಮ ಪರಿಸರ ಎಂಬ ಧೋರಣೆ/ಮನೋಭಾವ ಇದ್ದರೆ ಮಾತ್ರ ಶುಚಿತ್ವ ಕಾಪಾಡಿಕೊಳ್ಳಲು ಸಾಧ್ಯ, ದೇಶವನ್ನು ಸುಸ್ಥಿರ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ಸಾಧ್ಯ. ಜಗತ್ತಿನಲ್ಲೇ ಹೆಚ್ಚು ಸಂಖ್ಯೆಯಲ್ಲಿರುವ ಭಾರತದ ಯುವಜನರು ಈ ಭಾವನೆಗಳನ್ನು ಮೈಗೂಡಿಸಿಕೊಂಡರೆ ದೇಶವು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದಿ ಶ್ರೇಷ್ಠ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ಸಾಧ್ಯವಾಗುತ್ತದೆ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)