ರಂಭಾಪುರಿಪೀಠದಲ್ಲಿ ಧರ್ಮ ಪರಿಷತ್ತು; ಶ್ರೀ ರೇಣುಕಾಚಾರ್ಯ ಯುಗಮಾನೋತ್ಸವ

Rambapuri 4 March 20
Published on

ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಭೂತಲದಲ್ಲಿ ಸಂಸ್ಥಾಪಿಸಿದ ವೀರಶೈವ ಧರ್ಮಸಿದ್ಧಾಂತವನ್ನು ಶಿವಾದ್ವೈತ ಸಿದ್ಧಾಂತ ಎಂದೂ ಕರೆಯಲಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯ ಪರ್ವಕಾಲದಲ್ಲಿ ವೀರಶೈವ ಧರ್ಮ ಗಂಗೋತ್ರಿಯಾಗಿರುವ ಶ್ರೀ ರಂಭಾಪುರಿ ಪೀಠದಲ್ಲಿ ಶಿವಾದ್ವೆ ೖತ ಧರ್ಮ ಪರಿಷತ್ತನ್ನು ಆಯೋಜಿಸಲಾಗಿದೆ.

ಜೀವ ಶಿವನಾಗುವ, ಮಾನವ ಮಹಾದೇವನಾಗುವ, ಅಂಗ ಲಿಂಗವಾಗುವ ತತ್ತ್ವ-ಸಿದ್ಧಾಂತವನ್ನು ಜಗತ್ತಿಗೆ ಬೋಧಿಸಿದ ಮಹಾ ತತ್ತ್ವಜ್ಞಾನಿ ಶ್ರೀ ಜಗದ್ಗುರು ರೇಣುಕಾಚಾರ್ಯರು. ಅವರು ಲಿಂಗೋದ್ಭವರಾಗಿ ಅವತರಿಸಿದ ಪಾಲ್ಗುಣ ಶುದ್ಧ ತ್ರಯೋದಶಿಯಂದು ದೇಶದಾದ್ಯಂತ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಆಚರಿಸಲಾಗುತ್ತದೆ. ಅಂತೆಯೇ ಶ್ರೀಮದ್ ರಂಭಾಪುರಿ ವೀರಸಿಂಹಾಸ ಮಹಾಸಂಸ್ಥಾನ ಪೀಠದಲ್ಲಿ ಒಂದು ವಾರ ಅದ್ಧೂರಿಯಾಗಿ ಜಯಂತಿ ಯುಗಮಾನೋತ್ಸವವನ್ನು ಆಚರಿಸಲಾಗುತ್ತದೆ.

ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ವಿುಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದ್ದು, ಡಾ. ವೀರಸೋಮೇಶ್ವರ ಜಗದ್ಗುರುಗಳ ಪರಿಕಲ್ಪನೆಯಂತೆ ಈ ವರ್ಷ ವಿಶೇಷವಾಗಿ ಶಿವಾದ್ವೆ ೖತ ಧರ್ಮ ಪರಿಷತ್ತನ್ನು ಹಮ್ಮಿಕೊಳ್ಳಲಾಗಿದೆ. ಶಾಂತಿ-ನೆಮ್ಮದಿಯ ಬದುಕಿಗೆ ಧರ್ಮ ಪಾಲನೆ ಅಗತ್ಯವಾಗಿದ್ದು, ಸವೋದಯದ ಬಾಳಿಗೆ ಆಚಾರ್ಯರು, ಋಷಿಮುನಿಗಳು ಮತ್ತು ಸಂತ-ಶರಣರು ಕೊಟ್ಟ ಕೊಡುಗೆ ಅಪಾರ. ಪ್ರಾಚೀನವಾದ ವೀರಶೈವಧರ್ಮದ ಇತಿಹಾಸ ಮತ್ತು ಪರಂಪರೆ ಅಪೂರ್ವವಾಗಿದ್ದು, ಪರಶಿವನ ಪಂಚಮುಖಗಳಿಂದ ಆವಿರ್ಭವಿಸಿದ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾಚಾರ್ಯರು ವೀರಶೈವಧರ್ಮವನ್ನು ಸಂಸ್ಥಾಪಿಸಿದ್ದಾರೆ. ಶ್ರೀ ರೇಣುಕಾಚಾರ್ಯರ ಧಾರ್ವಿುಕ ಮತ್ತು ಸಾಮಾಜಿಕ ಕ್ರಾಂತಿ ಎಲ್ಲ ಕ್ರಾಂತಿಗಳಿಗೂ ಪ್ರೇರಣೆಯಾಗಿದೆ. ಈ ಸಿದ್ಧಾಂತದ ಸಾರವನ್ನು ಕುರಿತು ಚಿಂತನ ಮಂಥನ ನಡೆಸುವುದಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಶಿವಾದ್ವೆ ೖತ ಧರ್ಮ ಪರಿಷತ್ತನ್ನು ಹಮ್ಮಿಕೊಂಡಿದ್ದಾರೆ.

ಶ್ರೀ ಜಗದ್ಗುರು ರೇಣುಕಾಚಾರ್ಯ ಪರಂಪರೆ: ಯುಗಯುಗಗಳಲ್ಲೂ ಅವತಾರವೆತ್ತಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರು ನೆರೆಯ ತೆಲಂಗಾಣದ ಕೊಲ್ಲಿಪಾಲಿ ಸುಕ್ಷೇತ್ರದ ಸ್ವಯಂಭೂ ಸೋಮೇಶ್ವರ ಲಿಂಗದಲ್ಲಿ ಅವತರಿಸಿದ ಮಹಾತ್ಮರು. ಮಾನವಧರ್ಮಸಂದೇಶದಂತೆ ರೇಣುಕರು ಎಲ್ಲ ಹದಿನೆಂಟು ಜಾತಿ ಜನಾಂಗಗಳಿಗೂ ಒಂದೊಂದು ಮಠವನ್ನು ನಿರ್ಮಾಣ ಮಾಡಿದ್ದು, ಕೊಲ್ಲಿಪಾಕಿ ಕ್ಷೇತ್ರದಲ್ಲಿ ಆ ಹದಿನೆಂಟು ಮಠಗಳ ಕುರುಹು ಇಂದಿಗೂ ಇದೆ.

ಲಿಂಗದಲ್ಲಿಯೇ ಉದಿಸಿ ಅದರಲ್ಲಿಯೇ ಐಕ್ಯರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಲ್ಲಿಪಾಕಿಯಿಂದ ಮಲಯಾಚಲಕ್ಕೆ ಆಗಮಿಸಿ ಅಗಸ್ತ್ಯಗೆ ತತ್ತೊ ್ವಪದೇಶ ಮಾಡಿ ಭದ್ರಾನದಿತಟದಲ್ಲಿ ವೀರಸಿಂಹಾಸನ ಪೀಠವನ್ನು ಸಂಸ್ಥಾಪಿಸಿದರು. ಕಲಿಯುಗದಲ್ಲಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರರ ಲೀಲೆಗಳು ಅಪಾರ. ನಾಡಿನಾದ್ಯಂತ ರೇವಣಸಿದ್ಧೇಶ್ವರರ ಐತಿಹಾಸಿಕ ಕುರುಹುಗಳು, ಸಾಹಿತ್ಯಿಕ ಸಾಕ್ಷಿಗಳು, ಶಾಸನಾಧಾರಗಳು ಸಾಕಷ್ಟಿದ್ದು, ಹನ್ನೆರಡನೇ ಶತಮಾನದ ಶಿವಶರಣರು ತಮ್ಮ ವಚನಗಳಲ್ಲಿ ಶ್ರೀ ರೇವಣಸಿದ್ಧೇಶ್ವರರ ಲೀಲೆಯನ್ನು ಉಲ್ಲೇಖಿಸಿದ್ದಾರೆ. ಅಕ್ಕನಾಮ್ಮನ ಒಂದು ವಚನದಲ್ಲಿ, ‘ಅಂಗದಿಂದುದಯವಾದತ ಮಡಿವಾಳಯ್ಯ, ಲಿಂಗದಿಂದುದಯವಾದಾತ ರೇವಣಸಿದ್ಧ...’ ಎಂಬ ಉಲ್ಲೇಖವಿದೆ. ಶ್ರೀ ಜಗದ್ಗುರು ರೇವಣಸಿದ್ಧೇಶ್ವರರು ಉತ್ತರಾಧಿಕಾರಿಗಳನ್ನಾಗಿ ನೇಮಿಸಿದ ಶ್ರೀ ರುದ್ರಮುನೀಶ್ವರರಿಂದ ರಂಭಾಪುರಿ ಪೀಠದ ಗುರುಪರಂಪರೆ ಆರಂಭವಾಗುತ್ತದೆ.

ಶ್ರೀಪೀಠದಲ್ಲಿರುವ ಜಗದ್ಗುರು ಶ್ರೀ ರುದ್ರಮುನೀಶ್ವರ ಭಗವತ್ಪಾದರ ಜೀವಂತಸಮಾಧಿ ಅತ್ಯಂತ ಜಾಗೃತ ಸ್ಥಾನ. ಅವರು ಇಲ್ಲಿನ ವೀರಭದ್ರಸ್ವಾಮಿ ದೇವಾಲಯದ ಗರ್ಭಗುಡಿಯ ಬಲಭಾಗದ ಕಂಬದಲ್ಲಿ ಬರೆದಿರುವಂತೆ - ನಂದಿಯು ದಿನೇದಿನೆ ಬೆಳೆಯುತ್ತಿದ್ದು, ಹರಕೆ ನಂದಿ ಎಂದು ಪ್ರಸಿದ್ಧವಾಗಿದೆ.

ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ: 120 ಜಗದ್ಗುರುಗಳು ಆರೋಹಣ ಮಾಡಿರುವ ರಂಭಾಪುರಿ ಪೀಠದ ಪರಂಪರೆಯಲ್ಲಿ 119ನೆಯವರಾಗಿದ್ದ ಶ್ರೀ ಜಗದ್ಗುರು ವೀರಗಂಗಾಧರ ಭಗವತ್ಪಾದರ ಕಾಲ ಪ್ರಮುಖ. ಅವರ ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಘೋಷವಾಕ್ಯವು 120ನೇ ಜಗದ್ಗುರು ವೀರರುದ್ರಮುನಿ ಭಗವತ್ಪಾದರ ಕಾಲಕ್ಕೆ ಮತ್ತಷ್ಟು ವಿಶಾಲವಾಯಿತು. ಪ್ರಸ್ತುತ ಜಗದ್ಗುರು ಡಾ. ವೀರಸೋಮೇಶ್ವರ ಭಗವತ್ಪಾದರು 121ನೇ ಜಗದ್ಗುರುಗಳಾಗಿ ಕಳೆದ 28 ವರ್ಷಗಳಿಂದ ಶ್ರೀಪೀಠದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಮತ್ತು ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಜಾತ್ರಾ ಕಾರ್ಯಕ್ರಮವನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಿದ್ದು, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ಸ್ಥಾಪಿಸಿ ನಾಡಿನ ಸಾಧಕರಿಗೆ ನೀಡುತ್ತಿದ್ದಾರೆ. ಪ್ರತಿವರ್ಷದಂತೆ ಪಾಲ್ಗುಣ ಶುದ್ಧ ತ್ರಯೋದಶಿಯಂದು (ಮಾ.7) ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯ ಅಂಗವಾಗಿ ನಡೆಯುವ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದು, ಅಥಣಿಯ ಅಂಧ ಸಾಧಕ ಬಸವರಾಜ ಉಮರಾಣಿಯವರಿಗೆ 2020ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. 5ರಿಂದ ಆರಂಭವಾಗುವ ಜಾತ್ರಾಮಹೋತ್ಸವದಲ್ಲಿ 6ರಂದು ಕುಂಕುಮೋತ್ಸವ, ಚಿಕ್ಕರಥೋತ್ಸವ ಹಾಗೂ ಶಿವಾದ್ವೈತ ಧರ್ಮ ಪರಿಷತ್ತು ನಡೆಯಲಿದೆ. 7ರಂದು ಮಹಾರಥೋತ್ಸವ, 8ರಂದು ಶಯನೋತ್ಸವ, 9ರಂದು ವಸಂತೋತ್ಸವ ಹಾಗೂ 10ರಂದು ಸುರಗಿ ಸಮಾರಾಧನೆ ನಡೆಯಲಿದೆ.

| ಪ್ರಶಾಂತ ರಿಪ್ಪನ್​ಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net