ಶಿವತತ್ತ್ವರತ್ನಾಕರ ಎಂಬ ಸಮಸ್ತವಸ್ತು ವಿಶ್ವಕೋಶ

Shiva
Published on
ವಿಶ್ವಕ್ಕೆ ಭಾರತದ ಸಾರ್ವಕಾಲಿಕ ಶ್ರೇಷ್ಠ ಕೊಡುಗೆಗಳಲ್ಲಿ ಒಂದಾದ ಪ್ರಾಚೀನ ಆಯುರ್ವೆದವು ಕೈಗೆ ಬಂದರೂ ಬಾಯಿಗಿಲ್ಲ ಎಂಬಂತಾಗಿದೆ ಎಂದು ಅನೇಕರು ಭಾವಿಸುವುದುಂಟು. ಕಾರಣವಿಷ್ಟೇ, ಸಂಸ್ಕೃತವೇ ತಿಳಿಯದ ಮೇಲೆ ಸಂಸ್ಕೃತದಲ್ಲಿ ಬರೆಯಲ್ಪಟ್ಟಿರುವ ಆಯುರ್ವೆದವನ್ನು ಜೀರ್ಣಿಸುವುದಾದರೂ ಹೇಗೆಂಬ ಪೂರ್ವಗ್ರಹ ಪೀಡಿತ ಭಾವನೆ. ಜಗತ್ತಿನ ಹಲವಾರು ದೇಶಗಳ ಭಾಷೆಗಳಿಗೆ ಚರಕ ಸಂಹಿತೆಯಿಂದ ಮೊದಲ್ಗೊಂಡು ಮೂಲ ಗ್ರಂಥಗಳೆಲ್ಲಾ ನೂರಾರು ವರ್ಷಗಳ ಹಿಂದೆಯೇ ಯಥಾವತ್ ತರ್ಜುಮೆಗೊಂಡಿದೆಯೆಂದರೆ ರೋಮಾಂಚನವಾಗುತ್ತದೆ. ವೈದ್ಯವಿಜ್ಞಾನಿಋಷಿ ಆಚಾರ್ಯರಿಂದ ಪ್ರತಿಯೊಬ್ಬ ವ್ಯಕ್ತಿಯ ತನಕ ದಾಟಿಬಂದ ಆಯುರ್ವೆದ ಸಹಜವಾಗಿ ಭಾರತದ ಸಂಸ್ಕೃತಿಯ ಭಾಗವಾಗಿದೆ. ಕರ್ನಾಟಕ ರಾಜ್ಯದಲ್ಲೂ ಜನ್ಮತಾಳಿದ ಎರಡು ಸಂಸ್ಕೃತ ವಿಶ್ವಕೋಶಗಳಿದ್ದು ಮೊದಲನೆಯದು ಚಾಲುಕ್ಯ ಸೋಮೇಶ್ವರನ ಮಾನಸೋಲ್ಲಾಸ, ಎರಡನೆಯದು ಕೆಳದಿ ಬಸವರಾಜನ ಶಿವತತ್ತ್ವರತ್ನಾಕರ. ಅತ್ಯಂತ ಹೃದ್ಯ ವಿಚಾರವೆಂದರೆ ವಿದ್ವಾಂಸರಾದ ಪೊ›. ಮಲ್ಲೇಪುರಂ ಜಿ. ವೆಂಕಟೇಶ್ ಅವರ ನೇತೃತ್ವದ ಸಂಪಾದಕತ್ವದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯವು 1999ರಲ್ಲಿ ಇದರ ಕನ್ನಡ ಅನುವಾದ ಗ್ರಂಥಗಳನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದ್ದು ನಾಡಿನ ಸೌಭಾಗ್ಯವಾಗಿದೆ. ಈ ಗ್ರಂಥಕ್ಕೂ ಪ್ರಸ್ತುತ ಆಯುರ್ವೆದಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಎಂಬ ಪ್ರಶ್ನೆ ಮನದಲ್ಲಿ ಮೂಡುವುದು ಸಹಜ. ಎರಡು ಸಂಪುಟಗಳು ಸೇರಿ 9 ಕಲ್ಲೋಲಗಳೆಂಬ ವಿಭಾಗಗಳಲ್ಲಿ ಒಟ್ಟು 980 ಪುಟಗಳಿವೆ. ಅದರಲ್ಲಿ 250ಕ್ಕೂ ಹೆಚ್ಚು ಪುಟಗಳ ಮಾಹಿತಿ ಅರ್ಥಾತ್ ಗ್ರಂಥದ ಕಾಲುಭಾಗಕ್ಕೂ ಹೆಚ್ಚು ಆಯುರ್ವೆದ ವಿಚಾರಗಳೇ ತುಂಬಿಕೊಂಡಿವೆ! 108 ತರಂಗಗಳೆಂಬ ಅಧ್ಯಾಯಗಳಲ್ಲಿ 26ಕ್ಕೂ ಹೆಚ್ಚು ಆಯುರ್ವೆದ ಸಂಬಂಧೀ ವಿಷಯಗಳಿಗೇ ಮೀಸಲಾಗಿವೆ!

ಸಾಹಿತ್ಯ, ಸಂಗೀತ, ನಾಟ್ಯ, ಕಾವ್ಯ, ವಾಸ್ತು, ಜ್ಯೋತಿಷ, ಖಗೋಳ, ಭೂಗೋಳ, ವೈದ್ಯ, ಮಣಿ, ಮಂತ್ರ, ತಂತ್ರ, ಕೃಷಿ, ಗಜ, ಅಶ್ವ, ಕಾಮ, ಯುದ್ಧ, ರಾಜನೀತಿ, ಅಧ್ಯಾತ್ಮ, ದರ್ಶನಾದಿ ವಿಷಯಗಳನ್ನೆಲ್ಲಾ ಸಂಕಲಿಸಲಾಗಿದ್ದು ಬ್ರಹ್ಮಾಂಡ ಸೃಷ್ಟಿಯಿಂದ ಮೊದಲ್ಗೊಂಡು ರಾಜಧರ್ಮದ ತನಕ ಇಲ್ಲಿ ಇಲ್ಲದ ವಿಷಯಗಳಿಲ್ಲ. ಆರೋಗ್ಯಕ್ಕೆ ಸಂಬಂಧಿಸಿ ಆಯುರ್ವೆದದ ಅನೇಕ ವಿಚಾರಗಳು ಸರಳವಾಗಿ ವಿವರಿಸಲ್ಪಟ್ಟಿರುವುದು ನಮ್ಮ ನೆಲದ ಬಗೆಗೆ ಹೆಮ್ಮೆಯನ್ನು ಮೂಡಿಸುತ್ತದೆ. ಶಿವಮೊಗ್ಗದ ಕೆಳದಿಯನ್ನು ರಾಜಧಾನಿಯಾಗಿಸಿಕೊಂಡು ರಾಜ್ಯಭಾರ ಮಾಡಿದ ಜ್ಞಾನಿ, ಅಧ್ಯಾತ್ಮ ತತ್ತ್ವಗಳ ಸಾಧಕ ಹಿರಿಯ ಬಸವಪ್ಪನಾಯಕ ಎಂಬ ನಾಮಾಂಕಿತ, ಕ್ರಿಸ್ತಶಕ 1698ರಿಂದ 1715 ತನಕ ರಾಜ್ಯವನ್ನಾಳಿದ ಕೀರ್ತಿ ಕೆಳದಿಯ ಬಸವರಾಜ ಭೂಪಾಲನಿಗೆ ಸಲ್ಲುತ್ತದೆ. ಆಯುರ್ವೆದದ ವಾಗ್ಭಟನ ಅಷ್ಟಾಂಗ ಸಂಗ್ರಹ, ಶಾšರ್Yಧರ ಸಂಹಿತಾ, ರಸರತ್ನಾಕರ, ಯೋಗರತ್ನಾವಲೀ, ರಸಾದಿಹೃದಯಂ ಮೊದಲಾದ ಗ್ರಂಥಗಳಿಂದ ಜ್ಞಾನ ಸಂಗ್ರಹಿಸಿರುವುದಾಗಿಯೂ ಗ್ರಂಥಕಾರರು ಹೇಳಿಕೊಂಡಿರುವುದು ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿ.

ಆರನೆಯ ಕಲ್ಲೋಲದಲ್ಲಿ ವೃಕ್ಷಗಳ ವರ್ಣನೆ, ಸಸ್ಯ ಉದ್ಯಾನದ ಮಾಹಿತಿ, ಭೂಮಿಯ ಗುಣ ವಿಮರ್ಶೆ, ಸ್ತ್ರೀಯರಲ್ಲಿಯ ಭೇದಗಳು, ವಾತ-ಪಿತ್ತ-ಕಫ ಪ್ರಕೃತಿಯ ಲಕ್ಷಣಗಳು, ಕಾಮಶಾಸ್ತ್ರದ ವಿವರಗಳು, ತೈಲ ಅಭ್ಯಂಗ ಸ್ನಾನದ ಮಾಹಿತಿ, ತೈಲದ ವಿಧಗಳು, ತೈಲ ತಯಾರಿಸುವ ವಿಧಾನ, ಗಂಧಗಳ ತಯಾರಿ, ಧೂಪ ತಯಾರಿಕಾ ವಿಧಾನ, ತಾಂಬೂಲ ವಿಚಾರ, ವಸ್ತ್ರಗಳ ವಿಶ್ಲೇಷಣೆ, ಕಾಲಕ್ಕನುಗುಣವಾಗಿ ಧರಿಸಬೇಕಾದ ವಸ್ತ್ರ ಮಾಹಿತಿ, ಹೂವು, ಹಾರ, ಮಾಲೆ, ಆಭರಣಗಳ ಧಾರಣೆ, ರತ್ನ ಉಪರತ್ನಗಳ ಸಮಗ್ರ ಮಾಹಿತಿ, ಅವುಗಳ ದೋಷ ನಿವಾರಣೆ, ರತ್ನಧಾರಣೆಯ ಫಲ, ಧಾನ್ಯ ವಿಚಾರ, ಭಕ್ಷ್ಯ, ಲೇಹ್ಯ ಮೊದಲಾದ ವಿವರಣೆ, ಭೋಜನ ನಂತರದ ಕರ್ತವ್ಯಗಳು, ಶಯನ ಸಂಬಂಧೀ ವಿಚಾರಗಳು, ವಿಭಿನ್ನ ಮಂಚಗಳ ಗುಣಗಳು, ಶರೀರವನ್ನು ಸದೃಢಗೊಳಿಸುವ ಉಪಾಯಗಳು, ಅಷ್ಟಾಂಗ ಆಯುರ್ವೆದದ ವಿವರಣೆ, ರೋಗಿ ಪರೀಕ್ಷೆ, ಮಹಾರೋಗಗಳ ವರ್ಣನೆ, ಔಷಧ ನಿರ್ವಣ, ಔಷಧ ಸೇವನಾ ವಿಧಿ, ಆಹಾರ ದ್ರವ್ಯಗಳು, ಗೋವಿನ ಕ್ಷೀರಾದಿಗಳ ಗುಣಧರ್ಮ, ಸ್ವರ್ಣ ಮೊದಲಾದ ಲೋಹಗಳ ಶುದ್ಧೀಕರಣ, ಭಸ್ಮಆ ತಯಾರಿ ವಿಧಾನ, ಪಾದರಸದ ಪರಿಜ್ಞಾನ, ಭಸ್ಮ ಔಷಧಿಗಳ ಪ್ರಯೋಗ, ಗುಣ ವಿಶೇಷಗಳು, ರಸಾದಿಗಳ ಶೋಧನ, ಸಂಸ್ಕಾರ ಕ್ರಮಗಳು, ಔಷಧ ತಯಾರಿಕಾ ವೈದ್ಯಶಾಲೆ ಹಾಗೂ ಯಂತ್ರಗಳ ನಿರೂಪಣೆ, ವಿಷ ಮೂಲಗಳು, ವಿಷಬಾಧಿತರಿಗೆ ಚಿಕಿತ್ಸೆ, ಆಯುರ್ವೆದ ವಿಧಾನದಿಂದ ರಾಜರ ಶರೀರ ಸಂರಕ್ಷಣೆಗಳೆಲ್ಲಾ ವಿವರಿಸಲ್ಪಟ್ಟಿವೆ. ಏಳನೆಯ ಕಲ್ಲೋಲದಲ್ಲಿ ಸ್ತ್ರೀಯರ ಗರ್ಭಚಿಹ್ನೆಗಳು, ಸ್ತ್ರೀ ಪುರುಷರ ದೇಹದ ಶುಭಾಶುಭ ಲಕ್ಷಣ, ಯೋಗ, ಎಂಟನೆಯ ಕಲ್ಲೋಲದಲ್ಲಿ ರುದ್ರಾಕ್ಷಿ, ಧ್ಯಾನ, ಜಪಗಳ ಮಾರ್ಗದರ್ಶನವಿದೆ. ಒಂಬತ್ತನೆಯ ಕಲ್ಲೋಲದಲ್ಲಿ ಶರೀರದ ಕ್ರಮವಿಸ್ತಾರ, ಬಾಲ್ಯದಿಂದ ಮುಪ್ಪು ಹೊಂದುವ ವಿಚಾರ, ಸ್ಥೂಲದೇಹ-ಹೀಗೆ ಅನೇಕಾನೇಕ ಅಮೂಲ್ಯ ವಿಚಾರಗಳಿಂದ ಸಂಪನ್ನವಾದ ಅತುಲ್ಯ ಗ್ರಂಥರತ್ನವಾಗಿರುವುದು ಜಗತ್ತಿಗೆ ಕನ್ನಡನಾಡಿನ ಉನ್ನತ ಕೊಡುಗೆಯಾಗಿ ಶೋಭಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net