ಯಕೃತ್​ಗೆ ಸಂಜೀವಿನಿಯಾದ ಆಯುರ್ವೇದ

Liver
Published on

ಯಕೃತ್​ನ ರೋಗಗಳ ಚಿಕಿತ್ಸೆ ಎಂದಾಕ್ಷಣ ಜನರಿಗೆ ಮೊದಲಾಗಿ ನೆನಪಾಗುವುದು ಆಯುರ್ವೆದ. ಹಾಗಾಗಿ ಯಕೃತ್​ನ ತೊಂದರೆ ಬಂದಾಕ್ಷಣ ಪ್ರಥಮ ಆಯ್ಕೆಯಾಗಿ ಆಯುರ್ವೆದ ವೈದ್ಯರ ಅಥವಾ ಆಯುರ್ವೆದವೇ ತಳಹದಿಯಾಗಿರುವ ಜಾನಪದ ವೈದ್ಯರ ಸಸ್ಯೌಷಧಿ ಚಿಕಿತ್ಸೆಯ ಮೊರೆ ಹೋಗುವುದು ಹಿಂದಿನಿಂದಲೂ ರೂಢಿಯಲ್ಲಿದೆ. ಇದರಿಂದಾಗಿ ಬಹುವಿಧವಾದ ಕಾಮಾಲೆ ರೋಗ ಚಿಕಿತ್ಸೆಯಲ್ಲಿ ಆಯುರ್ವೆದದ ಪಾರಮ್ಯ ಜನತೆಗೆ ಅನುಭವ ವೇದ್ಯವೂ ಹೌದು. ಪ್ರಸಿದ್ಧ ಆಯುರ್ವೆದ ಔಷಧ ತಯಾರಿಕಾ ಕಂಪನಿಯೊಂದರ ಉತ್ಪನ್ನವು ಚಿರಪರಿಚಿತವಾಗಿದ್ದು ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಎಲ್ಲ ಪದ್ಧತಿಗಳ ಎಲ್ಲಾ ಔಷಧಗಳ ಪೈಕಿ ನಿರಂತರ ಹದಿನೈದು ವರ್ಷಗಳಿಂದ ಹತ್ತರೊಳಗಿನ ಸ್ಥಾನದಲ್ಲಿದೆ! ಯಕೃತ್​ನ ರೋಗಗಳಲ್ಲಿ ಆಯುರ್ವೆದ ಔಷಧಿಗಳಿಗಿರುವ ಬೇಡಿಕೆ ಆ ಮಟ್ಟದ್ದು. ಗಮನಾರ್ಹವೆಂದರೆ ಈ ಔಷಧಿಯಲ್ಲೂ ಅಮೃತಬಳ್ಳಿ ಒಂದು ಘಟಕ ದ್ರವ್ಯ! ಇದೊಂದೇ ಉತ್ಪನ್ನದ ಕುರಿತಾಗಿ 250ಕ್ಕೂ ಹೆಚ್ಚು ಸಂಶೋಧನೆಗಳು ಭಾರತದಾದ್ಯಂತ ನಡೆದಿರುವುದೂ ಗಮನಾರ್ಹ ಸಂಗತಿ. ಯಕೃತ್​ನ ಸಮಸ್ಯೆಗಳಿಗಾಗಿ ಬಳಸಲ್ಪಡುವ ಬಹುತೇಕ ಆಯುರ್ವೆದ ಔಷಧಗಳಲ್ಲೂ ಈ ಅಮೃತಬಳ್ಳಿ ಇದೆ!

ಅಷ್ಟೇ ಏಕೆ, ಭಾರತದಲ್ಲಿ ಸುಮಾರು ಎಂಟು ಸಾವಿರ ಆಯುರ್ವೆದ ಔಷಧ ತಯಾರಿಕಾ ಕಂಪನಿಗಳಿವೆ. ಈ ಎಲ್ಲಾ ಕಂಪನಿಗಳು ತಮ್ಮ ಒಂದಿಲ್ಲೊಂದು ಉತ್ಪನ್ನಗಳಿಗೆ ಘಟಕ ದ್ರವ್ಯವಾಗಿ ಬಳಕೆ ಮಾಡುವ ಬಹುಬೇಡಿಕೆಯ ಅರ್ನ್ಯಘ ಸಸ್ಯ ಅಮೃತಬಳ್ಳಿ! ಸಾವಿರಾರು ವರ್ಷಗಳಿಂದ ಆಯುರ್ವೆದ ಔಷಧಿಗಳಲ್ಲಿ ಪ್ರತ್ಯೇಕವಾಗಿ ಅಥವಾ ಘಟಕ ಅಂಶವಾಗಿ ಕಾರ್ಯವೆಸಗಿ ಜನತೆಗೆ ಆರೋಗ್ಯಭಾಗ್ಯ ಒದಗಿಸಿದ ಹೆಮ್ಮೆಯ ದ್ರವ್ಯ ಈ ಅಮೃತಬಳ್ಳಿ. ಯಕೃತ್​ನ ರೋಗ ನಿವಾರಣೆ ಹಾಗೂ ರಕ್ಷಣೆಗೆ ಸಂಬಂಧಿಸಿ ಆಯುರ್ವೆದ ಔಷಧಗಳು ಪರಿಣಾಮಕಾರಿ ಆಗಿರುವುದರಿಂದ ಅವುಗಳ ಬಳಕೆಗೆ ಔಷಧ ತಯಾರಿಕಾ ಉದ್ಯಮಗಳು ತುದಿಗಾಲಿನಲ್ಲಿ ನಿಂತಿರುವ ವಿಚಾರವೂ ತಿಳಿದಿರುವಂಥದ್ದೇ. ಕೇವಲ ಎರಡು ಮೂರು ಸಂಖ್ಯೆಯಲ್ಲಿ ಔಷಧಗಳನ್ನು ಉತ್ಪಾದಿಸುವ ಕಂಪನಿಗಳಿಂದ ಪ್ರಾರಂಭಿಸಿ ವಿಶಾಲಶ್ರೇಣಿಯ ನೂರಾರು ಉತ್ಪನ್ನಗಳಿರುವ ಕಂಪನಿಗಳ ತನಕ ಎಲ್ಲಾ ತಯಾರಕರೂ ಯಕೃತ್ ಚಿಕಿತ್ಸೆಗೆ ಸಂಬಂಧಿಸಿದ ಒಂದಾದರೂ ಔಷಧಿಯನ್ನು ಹೊಂದಿರುತ್ತಾರೆ ಎಂಬುದು ವಿಶೇಷ! ಜೀರ್ಣಾಂಗಗಳಿಗೆ ಸಂಬಂಧಿಸಿದ ರೋಗಗಳಲ್ಲಿ ಯಕೃತ್​ನ ಪ್ರಭಾವ ಇದ್ದೇ ಇರುತ್ತದೆ. ಇಂತಹ ವ್ಯಾಧಿಗಳಲ್ಲಿ ಬಳಸುವ ಆಯುರ್ವೆದ ಔಷಧಗಳು ಯಕೃತ್​ನ ಮೇಲೂ ಧನಾತ್ಮಕ ಪರಿಣಾಮವನ್ನು ಬೀರುತ್ತವೆ. ಸಮಗ್ರ ಆಯುರ್ವೆದದಲ್ಲಿ 6089 ಸಸ್ಯಗಳ ಬಗ್ಗೆ ವಿವರಣೆಗಳಿದ್ದರೂ ಇಂದು ಬಳಕೆಯಲ್ಲಿ ಸುಮಾರು ಐನೂರು ಸಸ್ಯಗಳು ಮುಂಚೂಣಿ ಪಾತ್ರವಹಿಸಿವೆ. ಇವುಗಳಲ್ಲಿ 260ಕ್ಕೂ ಹೆಚ್ಚು ಔಷಧೀಯ ಸಸ್ಯಗಳನ್ನು ಯಕೃತ್ ಸಂಬಂಧಿತ ಕಾಯಿಲೆಗಳಲ್ಲೂ ಉಪಯೋಗಿಸಲಾಗುತ್ತದೆ. ಇವುಗಳೆಲ್ಲ ಯಕೃತ್​ನ ಕಾರ್ಯದಕ್ಷತೆಯನ್ನು ಹೆಚ್ಚಿಸುವ ಗುಣವನ್ನೂ ಹೊಂದಿವೆ! ಯಕೃತ್​ಗೆ ಹಾನಿ ಮಾಡುವ ಮಾತೇ ಇಲ್ಲಿಲ್ಲ.

ಅನೇಕ ಆಂಟಿಬಯೋಟಿಕ್​ಗಳು ಯಕೃತ್​ನ ಮೇಲೆ ವಿಷಕಾರಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಹಲವಾರು ಸಂಶೋಧನಾ ಅಧ್ಯಯನಗಳ ವರದಿಗಳಿವೆ. ಅಂತರ್ಜಾಲದಲ್ಲಿ ಹುಡುಕಿದರೂ ತಕ್ಷಣವೇ ಇವೆಲ್ಲ ಮಾಹಿತಿ ಸಿಗುತ್ತದೆ. ಕ್ಷಯರೋಗ, ಆತ್ರೈಟಿಸ್, ಕ್ಯಾನ್ಸರ್, ಚರ್ಮರೋಗ, ಮಾನಸಿಕ ರೋಗಗಳಲ್ಲಿ ಉಪಯೋಗಿಸುವ ಅನೇಕ ಔಷಧಿಗಳು ಯಕೃತ್​ನ ಮೇಲೆ ದುಷ್ಪರಿಣಾಮ ಬೀರುವುದು ತಿಳಿದಿರುವ ವಿಚಾರ. ಇದೇ ಕಾರಣದಿಂದ ಈ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಅವಧಿಯಲ್ಲಿ ಯಕೃತ್​ಗೆ ಸಂಬಂಧಿಸಿದ ರಕ್ತ ತಪಾಸಣೆಯನ್ನು ಆಗಾಗ ನಡೆಸುವುದರ ಹಿಂದಿನ ಉದ್ದೇಶದ ಅರಿವೂ ಜನಸಾಮಾನ್ಯರಿಗೆ ಸ್ಪಷ್ಟವಾಗಿ ಇದೆ. ಹಾಗೆಂದು ಆ ಪದ್ಧತಿಯಲ್ಲಿ ಅಂತಹ ಔಷಧಗಳನ್ನೆಲ್ಲಾ ಚಿಕಿತ್ಸೆಯಲ್ಲಿ ಉಪಯೋಗಿಸದೆ ಇರಲು ಸಾಧ್ಯವೇ? ಅದು ಆಯಾಯ ಪದ್ಧತಿಗಳ ಇತಿಮಿತಿಗೆ ಸಂಬಂಧಿಸಿದೆ. ಆದರೆ ಆಯುರ್ವೆದದಲ್ಲಿ ಜ್ವರದ ಚಿಕಿತ್ಸೆಗೆ ಹೇರಳವಾಗಿ ಬಳಸಲ್ಪಡುವ ನೂರಹತ್ತು ಔಷಧೀಯ ಸಸ್ಯಗಳಲ್ಲಿ ಮೂವತ್ತನ್ನು ಹೆಪಟೈಟಿಸ್​ನಲ್ಲೂ ಉಪಯೋಗಿಸಲಾಗುತ್ತದೆ! ಚಿಕಿತ್ಸಾ ದೃಷ್ಟಿಕೋನದಿಂದ ನೋಡಿದರೆ ಲಿವರ್​ಗೂ ಫಿವರ್​ಗೂ ನಿಕಟ ಸಂಬಂಧವಿರುವುದು ಇದರಿಂದ ತಿಳಿಯುತ್ತದೆ. ಜ್ವರಕ್ಕೆ ಬಳಸುವ ಬಹುತೇಕ ಔಷಧೀಯ ಸಸ್ಯಗಳು ಯಕೃತ್​ನ ರಕ್ಷಕವೂ ಆಗಿವೆ. ಆಯುರ್ವೆದದ ಅನೇಕ ವಿಶೇಷತೆಗಳಲ್ಲಿ ಇದೂ ಒಂದು. ಈ ಸುರಕ್ಷತೆಯ ಕಾರಣದಿಂದಲೇ, ಯಕೃತ್​ನ ಹಿತದೃಷ್ಟಿಯಿಂದ ನೋಡಿದರೆ ಜ್ವರ ಬಂದಾಗ ಆಯುರ್ವೆದ ಚಿಕಿತ್ಸೆಗೆ ಪ್ರಾಧಾನ್ಯತೆ ನೀಡಬೇಕೆಂಬುದು ಮನದಟ್ಟಾಗುತ್ತದೆ. ಮೂರು ದಶಕಗಳ ಹಿಂದಿನ ತನಕವೂ ಯಕೃತ್ ಚಿಕಿತ್ಸೆಗೆ ರಾಸಾಯನಿಕ ಔಷಧಗಳಿಲ್ಲದೆ ಕೊರತೆ ಕಾಡುತ್ತಿತ್ತು. ಹಾಗಾಗಿ ಯಾವುದೇ ವಿಧವಾದ ಹೆಪಟೈಟಿಸ್​ಗೂ ಚಿಕಿತ್ಸೆಯ ಅಗತ್ಯವೇ ಇಲ್ಲ ಎಂದು ಹೇಳುತ್ತಿದ್ದುದು ಯಾರೆಂಬುದು ಇನ್ನೂ ಜನತೆಯ ನೆನಪಿನಲ್ಲಿದೆ. ಹೀಗೆ ಚಿಕಿತ್ಸೆಯೇ ಬೇಡ, ಅವೆಲ್ಲ ತನ್ನಿಂದ ತಾನೇ ಗುಣವಾಗುತ್ತವೆ ಎಂಬುದಾಗಿ ಹೇಳಿ ತದನಂತರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನೂ ನೀಡಿ ದುಬಾರಿ ವೆಚ್ಚದೊಂದಿಗೆ ರೋಗಿಗಳು ಹೊರಬರುತ್ತಿದ್ದುದೂ ಲೋಕಕ್ಕೆ ತಿಳಿದಿರುವ ಸಂಗತಿ. ಈಗಲೂ ಕೇವಲ ಬೆರಳೆಣಿಕೆಯ ರಾಸಾಯನಿಕ ಔಷಧಗಳಷ್ಟೇ ಚಾಲ್ತಿಯಲ್ಲಿದ್ದರೂ ಆಯುರ್ವೆದದಲ್ಲಿ ಸಾವಿರಾರು ಔಷಧಗಳು ಯಕೃತ್ ಚಿಕಿತ್ಸೆಗಾಗಿಯೇ ಲಭ್ಯವಿರುವುದು ಮಾನವನಿಗೆ ಆಯುರ್ವೆದ ದಯಪಾಲಿಸಿದ ವರದಾನ. ಹರ ಎಂದರೆ ಸಂಹರಿಸುವುದು, ನಾಶಮಾಡುವುದು ಎಂದರ್ಥವಿದೆ. ಆಯುರ್ವೆದದಲ್ಲಿ ವಾತಹರ, ದೋಷಹರ, ವ್ಯಾಧಿಹರ, ವಿಷಹರ ಮುಂತಾದ ಗುಣಧರ್ಮ ಹೊಂದಿದ ಸಾವಿರಾರು ಔಷಧಗಳಿವೆ. ಆದರೆ ಯಕೃತ್​ಹರ ಎಂಬ ಗುಣದ ಒಂದೇ ಒಂದು ಔಷಧವಿಲ್ಲ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net