ಇದು ಯಾರನ್ನಾದರೂ ಮಂತ್ರಮುಗ್ಧರನ್ನಾಗಿಸುವ ತಂತ್ರಯುಕ್ತಿ!

Thanthrayukthi
Published on
ಯಾವುದೇ ವಿಚಾರ ಜಗದ ಮನೆ ಮನಗಳನ್ನು ತಲುಪಿ ಜನಪ್ರಿಯವಾಗಬೇಕಾದರೆ ಜ್ಞಾನರಾಶಿಯಿಂದ ಸಮೃದ್ಧವಾದ ಕೃತಿಗಳು ಬೇಕು. ಅಂತಹ ಬೃಹತ್ ಕೃತಿಗಳು ಗ್ರಂಥಗಳಾಗಿ ಸಾರ್ವಕಾಲಿಕವಾಗಿ ಉಳಿಯಬೇಕಾದರೆ ಅದರ ಲೇಖಕರು ತಂತ್ರಯುಕ್ತಿಯನ್ನು ಪಾಲಿಸಿರಲೇಬೇಕು ಎನ್ನುತ್ತದೆ ಆಯುರ್ವೆದ. ಏನಿದು ತಂತ್ರಯುಕ್ತಿ? ಆಯುರ್ವೆದದ ಮೂಲ ಗ್ರಂಥಗಳೆಲ್ಲಾ ಮಾನವನ ಬದುಕಿಗೆ ಸಂಬಂಧಿಸಿದ ವೈಜ್ಞಾನಿಕ ಗ್ರಂಥಗಳಾದರೂ ತಂತ್ರಯುಕ್ತಿಯನ್ನು ಪೂರ್ಣಪ್ರಮಾಣದಲ್ಲಿ ಅನುಸರಿಸಿ ಅನುಷ್ಠಾನಿಸಿ ಇರುವುದರಿಂದ ಅವುಗಳಿಂದು ಸಾಹಿತ್ಯಕವಾಗಿಯೂ ಅತುಲ್ಯ, ಅರ್ನ್ಯಘ ರತ್ನಗಳಾಗಿ ಉಳಿದುಕೊಂಡಿವೆ. ವ್ಯಾಕರಣ ಶುದ್ಧತೆಗೆ, ವಿಷಯದ ಬದ್ಧತೆಗೆ ತಂತ್ರಯುಕ್ತಿ ಬೇಕು. ಚಿಕ್ಕದಾದ ಚೊಕ್ಕದಾದ ಅಭಿವ್ಯಕ್ತಿಗೆ ತಂತ್ರಯುಕ್ತಿಯ ಅನುಕರಣೆ ಅನಿವಾರ್ಯ. ತಂತ್ರಯುಕ್ತಿಯ ಪೂರ್ಣ ಅರಿವಿದ್ದ ಅಧ್ಯಯನ ನಿರತನಿಗೆ ಮಾತ್ರ ಗ್ರಂಥಗಳು ಪರಿಪೂರ್ಣವಾಗಿ ಗ್ರಾಹ್ಯವಾಗುತ್ತದೆ ಎಂಬುದಾಗಿ ಚರಕಾದಿ ಸಂಹಿತೆಗಳು ಸಾರಿವೆ. ಅಷ್ಟಾಂಗ ಸಂಗ್ರಹದ ಉತ್ತರತಂತ್ರದಲ್ಲಿ ಈ ತಂತ್ರಯುಕ್ತಿಗೆ ಅರ್ಥದುರ್ಗಾ ಎಂಬುದಾಗಿ ಕರೆದಿದ್ದಾರೆ. ಕೋಟೆಗಳ ಒಳಗೆ ರಾಜರ ಹಾಗೂ ರಾಜ್ಯಾಡಳಿತದ ಅನೇಕ ಸಂಗತಿಗಳು ಗುಪ್ತವಾಗಿ ಇರುವಂತೆ ತಂತ್ರಯುಕ್ತಿಯನ್ನು ಯಥಾವತ್ತಾಗಿ ಬಳಸಿಕೊಳ್ಳುವುದರಿಂದ ನಿಜ ಅರ್ಥವು ಗುಪ್ತವಾಗಿ ಉಳಿದು ಅಪಾತ್ರರಿಗೆ ಸುಲಭದಲ್ಲಿ ಅರ್ಥವೇ ಆಗುವುದಿಲ್ಲ ಎಂಬುದು ಅರ್ಥದುರ್ಗಾದ ಸಾರಾಂಶ. ತಂತ್ರಯುಕ್ತಿ ಮುಖ್ಯವಾಗಿ ಎರಡು ವಿಧವಾಗಿದೆ- ಮೊದಲನೆಯದು ವಾಕ್ಯಯೋಜನ. ಶಬ್ದಗಳು ಮತ್ತು ವಾಕ್ಯಗಳು ಪುಸ್ತಕಗಳಲ್ಲಿ ಕ್ರಮಬದ್ಧವಾಗಿ ಜೋಡಿಸಲ್ಪಟ್ಟಿರಬೇಕು. ಎರಡನೆಯದಾದ ಅರ್ಥಯೋಜನ ಎಂದರೆ ಕೃತಿಯು ಅಂತಿಮವಾಗಿ ಸರಿಯಾದ ಅರ್ಥವನ್ನು ಕೊಡುವಂತಿರಬೇಕು. ಗ್ರಂಥ ರಚನೆಯಲ್ಲಿ ಇವೆರಡು ವಿಚಾರಗಳು ಬಹುಮುಖ್ಯ. ಆಯುರ್ವೆದದ ವೈದ್ಯಕೀಯ ಗ್ರಂಥಗಳು 36 ತಂತ್ರಯುಕ್ತಿಗಳನ್ನು ವಿವರಿಸಿ ಹೇಳಿದ್ದನ್ನು ನೋಡಿದರೆ ಯಾರಾದರೂ ಮಂತ್ರಮುಗ್ಧರಾಗಲೇಬೇಕು. ಎತ್ತಣ ವೈದ್ಯ ವಿಜ್ಞಾನ, ಎತ್ತಣ ಸಾಹಿತ್ಯ ಮಾಪನ! ಪ್ರಾಚೀನ ವೈದ್ಯವಿಜ್ಞಾನಿ ಲೇಖಕ ಋಷಿಗಳ ಶಿಸ್ತುಬದ್ಧತೆಗಳ ಔನ್ನತ್ಯದ ದರ್ಶನವು ತಂತ್ರಯುಕ್ತಿಗಳಲ್ಲೂ ಆಗುವುದು ಆಶ್ಚರ್ಯಕರ ಸಂಗತಿ.

1. ಅಧಿಕರಣ- ಗ್ರಂಥದ ಮುಖ್ಯ ವಿಷಯ ಸ್ಪಷ್ಟವಾಗಿ ಹೇಳಲ್ಪಟ್ಟಿರ ಬೇಕು. ಇದರಲ್ಲಿ ಮತ್ತೆ ಐದು ಉಪವಿಚಾರಗಳಿವೆ. ತಂತ್ರಾಧಿಕರಣ ಅಥವಾ ಶಾಸ್ತ್ರಾಧಿಕರಣವೆಂದರೆ ವಿಜ್ಞಾನದ ವಿಷಯ ವಿಭಾಗ. ಆಯುರ್ವೆದ ಎಂದರೆ ರೋಗ ವಿಜ್ಞಾನ ಎನ್ನುತ್ತೇವಲ್ಲ, ಹಾಗೆ. ಗ್ರಂಥಾಧಿಕರಣ- ಆ ಜ್ಞಾನದ ವಿಶೇಷ ಅಂಗ ಯಾವುದೆಂಬ ವಿಚಾರ. ಸುಶ್ರುತ ಸಂಹಿತೆಯು ಶಲ್ಯತಂತ್ರ ಅರ್ಥಾತ್ ಶಸ್ತ್ರಚಿಕಿತ್ಸೆಗೆ ಪ್ರಧಾನವಾಗಿ ಸಂಬಂಧಿಸಿದ ಗ್ರಂಥ. ಅಧ್ಯಾಯಾಧಿಕರಣ- ಪ್ರತಿಯೊಂದು ಅಧ್ಯಾಯದ ವಿಷಯವನ್ನು ಪ್ರತಿಪಾದಿಸುವುದು. ಪ್ರಕರಣಾಧಿಕರಣ- ಸಾಂರ್ದಭಿಕವಾಗಿ ಹೇಳಲ್ಪಡುವ ವಿಮರ್ಶೆಗಳ ವಿಷಯ ಸ್ಪಷ್ಟತೆ. ವಾಕ್ಯಾಧಿಕರಣ- ವಾಕ್ಯದ ವಿಷಯ! ಪ್ರತಿಯೊಂದು ವಾಕ್ಯ ಬರೆಯುವಾಗಲೂ ಲೇಖಕನಿಗೆ ಮೂಲ ವಿಷಯದ ಕಡೆ ಗಮನವಿರಬೇಕೆಂಬ ಎಚ್ಚರಿಕೆಯಿದು.

2. ಯೋಗ- ಕ್ರಮಾಗತವಾಗಿ ವಿಷಯಗಳ ಸೇರ್ಪಡೆ, ಸಂಯೋಜನೆ.

3. ಹೇತ್ವಾರ್ಥ- ಕೃತಿಯ ಕಾರಣ ಸಹಿತ ಉದ್ದೇಶವು ಗ್ರಂಥದ ಎಲ್ಲೆಡೆ ಅನ್ವಯವಾಗಿರಬೇಕು.

4. ಪದಾರ್ಥ- ಒಂದೇ ಶಬ್ದಕ್ಕೆ ಅನೇಕ ಅರ್ಥಗಳಿರುತ್ತವೆ. ಅವುಗಳಲ್ಲಿ ಎಲ್ಲಿ ಯಾವ ಅರ್ಥಗ್ರಾಹ್ಯ ಸೂಕ್ತ ಎಂಬ ನಿರ್ಧಾರ. ಊಟ ಮಾಡುವಾಗ ಸೈಂಧವ ತನ್ನಿ ಎಂದರೆ ಕುದುರೆ ತರುವುದಲ್ಲ. ಸೈಂಧವಕ್ಕೆ ಕುದುರೆ ಎಂಬ ಅರ್ಥವಿದ್ದರೂ ಊಟ ಮಾಡುವಾಗ ಉಪ್ಪು ಎಂಬುದನ್ನು ಗ್ರಹಿಸಿಕೊಳ್ಳಬೇಕು.

5. ಪ್ರದೇಶ- ಇನ್ನೊಂದೆಡೆ ಹೇಳಿದ್ದರಿಂದ ಪ್ರಾಪ್ತವಾಗುವ ನಿರ್ದೇಶನ ಅಥವಾ ಸೂಚನೆ. ಕೃತಿಯಲ್ಲಿ ಈ ಮೊದಲು ಹೇಳಿದ್ದರಿಂದ ಅಥವಾ ಹಿಂದೆ ಮಾಡಿದ ಕಾರ್ಯದ ಅನುಭವದಿಂದ ಅದನ್ನು ಪ್ರಸ್ತುತ ಸಂದರ್ಭದಲ್ಲೂ ಅನ್ವಯಿಸಿಕೊಳ್ಳುವುದು. ಈ ಶಸ್ತ್ರಚಿಕಿತ್ಸಕ ಹಿಂದೆಯೂ ಇಂತಹುದೇ ಸಂದರ್ಭದಲ್ಲಿ ಯಶಸ್ವಿಯಾಗಿರುವುದರಿಂದ ಈಗಿನ ಸನ್ನಿವೇಶದಲ್ಲೂ ಫಲದಾಯಿ ಆಗಬಹುದೆಂಬ ತರ್ಕ.

6. ಉದ್ದೇಶ- ಪ್ರಧಾನ ಗುರಿಯನ್ನು ಆಲೋಚಿಸಿ ಪುಟ್ಟದಾಗಿ ಹೇಳಿದಂತಿರಬೇಕು. ಕಾಯಚಿಕಿತ್ಸೆ ಎಂದಾಕ್ಷಣ ಶರೀರದ ಎಲ್ಲಾ ಸಾಮಾನ್ಯ ಕಾಯಿಲೆಗಳ ಶುಶ್ರೂಷೆ ಎಂಬುದರ ಅರಿವಾಗುತ್ತದೆ.

7. ನಿರ್ದೇಶ ಅದೇ ಗುರಿಯನ್ನು ವಿವರಣಾತ್ಮಕವಾಗಿ ಹೇಳಿರುವುದು.

8. ವಾಕ್ಯಶೇಷಾ- ಶಬ್ದಗಳಿಲ್ಲದೇ ಅರ್ಥ ತರುವಂಥದ್ದು! ನೇರವಾಗಿ ಬಳಸದೇ ಇದ್ದರೂ ವಾಕ್ಯವನ್ನು ಓದಿದಾಗ ಈ ಹೇಳದ ಶಬ್ದಾರ್ಥವೂ ಇರುವಂತೆ ನೋಡಿಕೊಳ್ಳುವ ಚಾಣಾಕ್ಷತೆ.

9. ಪ್ರಯೋಜನ- ಪುಸ್ತಕದ ಮುಖ್ಯ ಉಪಯೋಗ ಏನೆಂಬುದೂ ಓದುಗನಿಗೆ ತಿಳಿಯಲ್ಪಡಬೇಕು. ಕೃತಿಯನ್ನು ಪೂರ್ತಿಯಾಗಿ ಓದಿದ ಮೇಲೂ ಆ ಪುಸ್ತಕದ ಉಪಯೋಗ ಏನೆಂದು ತಿಳಿಯದಿದ್ದರೆ ಏನು ಪ್ರಯೋಜನ? ಕುತೂಹಲಕಾರಿಯಾದ, ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ಇನ್ನೂ 27 ತಂತ್ರಯುಕ್ತಿಗಳಿವೆ. ಜ್ಞಾನದ ಆಕಾಂಕ್ಷಿಗಳು ಯುಕ್ತಿಗಳನ್ನು ತಿಳಿಯುವುದು ಯುಕ್ತ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net