ಚಿಕಿತ್ಸೆಯ ಸಾಕ್ಷಿಗೆ ಇತಿಗಿಂತ, ಮಿತಿಯೇ ಹೆಚ್ಚಿದೆ!

Evidence based Medicine
Published on
ಸಾಮಾನ್ಯವಾಗಿ ಆರೋಗ್ಯ, ಆರ್ಥಿಕ ಹಾಗೂ ಆಡಳಿತ ಸಮಸ್ಯೆಗಳು ಹೆಚ್ಚಾಗಿ ಜನರನ್ನು ಬುಡಮೇಲು ಮಾಡುವುದನ್ನು ನಿತ್ಯವೂ ನೋಡುತ್ತೇವೆ. ಈ ಮೂರು ಸಮಸ್ಯೆಗಳು ಇಲ್ಲವೆಂದಾದರೆ ಉಳಿದೆಲ್ಲಾ ಬವಣೆಗಳನ್ನು ಬಹುತೇಕ ಗೆದ್ದುಬಿಡಬಹುದು. ಜನರು ಪ್ರಾರ್ಥನಾ ಸ್ಥಳಗಳಿಗೆ ಹೋದಾಗ ಮಾಡುವ ಬಿನ್ನಹ ಬಹುತೇಕ ಈ ಮೂರಕ್ಕೆ ಸಂಬಂಧಿಸಿರುತ್ತದೆ. ಇಲ್ಲಿ ಆಡಳಿತ ಎಂದಾಗ ಅದು ಮನೆ-ಕುಟುಂಬ ನಿರ್ವಹಣೆ, ವೃತ್ತಿಯ ನಿರ್ವಹಣೆ ಅಥವಾ ಸಮಾಜದ್ದೇ ಆಗಿರಬಹುದು. ಗೌರವಾದರ ಪೂರ್ವಕ ಸಂಬಂಧ ಇಲ್ಲದಿದ್ದರೆ ಆಡಳಿತವೆಂಬುದು ದುಸ್ತರವಾಗುತ್ತದೆ. ಯೋಜನೆ, ಯೋಚನೆ, ಯಾಚನೆಗಳು ಸರಿ ಇಲ್ಲದಿದ್ದರೆ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಆದರೆ ಎಲ್ಲಾ ಸಮಸ್ಯೆಗಳ ಪೈಕಿ ಜನರನ್ನು ಅತಿಹೆಚ್ಚು ಕಾಡುವುದು ಆರೋಗ್ಯ ಸಮಸ್ಯೆಗಳೇ. ಹಾಗಾಗಿಯೇ ಚಿಕಿತ್ಸೆಗೆ ನಮ್ಮೆಲ್ಲರ ಜೀವನದಲ್ಲಿ ಅಷ್ಟೊಂದು ಮಹತ್ವವಿದೆ.

ರೋಗವಿದ್ದಾಗ ವೈದ್ಯರಲ್ಲಿಗೆ ಹೋಗುತ್ತೇವೆ. ಜ್ವರ ಬಂದಿದೆ ಎಂದಿಟ್ಟುಕೊಳ್ಳಿ. ವೈದ್ಯರ ಬಳಿ ಹೋದಾಗ ಕೆಲವೊಂದಷ್ಟು ಔಷಧಗಳನ್ನು ಕೊಡುತ್ತಾರೆ. ಅದೇ ಆಸ್ಪತ್ರೆಯ ಹತ್ತು ವೈದ್ಯರನ್ನು ಭೇಟಿಯಾದರೆ ಹತ್ತು ವಿಭಿನ್ನ ಔಷಧಿಗಳ ಸಲಹೆ ಸಿಗುತ್ತದೆ! ರೋಗ ಒಂದೇ, ಔಷಧಿಗಳು ಸಂಪೂರ್ಣವಾಗಿ ಬೇರೆ! ಎಲ್ಲವೂ ಸಾಕ್ಷಿ ಆಧಾರಿತ ಚಿಕಿತ್ಸೆ ಎನ್ನುವಾಗ ಯಾಕೆ ಹೀಗಾಯಿತು ಎಂಬ ಗೊಂದಲವೂ ಅಚ್ಚರಿಯೂ ಏಕಕಾಲದಲ್ಲೇ ಆಗುತ್ತದೆ. ಇನ್ನು ಹಲವಾರು ಕಾಯಿಲೆಗಳಿರುವ ವ್ಯಕ್ತಿಗೆ ಚಿಕಿತ್ಸೆಯ ಸಲಹೆಯಲ್ಲಿ ವೈದ್ಯರಿಂದ ವೈದ್ಯರಿಗೆ ಸಾಕಷ್ಟು ವ್ಯತ್ಯಾಸಗಳಾಗುತ್ತವೆ. ಇದಕ್ಕೆ ಪುರಾವೆಗಳ ಅಗತ್ಯವಿಲ್ಲ. ಒಂದೇ ರೋಗವಿದ್ದು ಇಬ್ಬರು ವೈದ್ಯರಿಂದ ಚಿಕಿತ್ಸಾ ಸಲಹೆಯನ್ನು ಒಂದು ಸಮಯದಲ್ಲಿ ಪಡೆದುಕೊಂಡಾಗ ಒಂದು ಔಷಧವನ್ನು ಇಬ್ಬರೂ ಬರೆದಿದ್ದಾರೆ ಎಂದಿಟ್ಟುಕೊಳ್ಳಿ. ಸೇವಿಸಬೇಕಾದ ಔಷಧದ ಪ್ರಮಾಣದಲ್ಲಿ ಅನೇಕ ಬಾರಿ ವ್ಯತ್ಯಾಸವಿರುತ್ತದೆ. ಸಾಕ್ಷಿ ಆಧಾರಿತವೇ ಆಗಿದ್ದಲ್ಲಿ ಹೀಗಾಗಬಾರದು. ಇದು ಔಷಧಿಗಳ ಸಲಹೆ ವಿಚಾರವಾದರೆ ರೋಗ ನಿರ್ಣಯದಲ್ಲೂ ಅನೇಕ ಬಾರಿ ವ್ಯತ್ಯಾಸ ಕಂಡುಬರುತ್ತದೆ. ಹೀಗಿರುವಾಗ ಸಾಕ್ಷಿ ಆಧಾರಿತ ಚಿಕಿತ್ಸೆ ಎಂದು ಇದನ್ನು ಹೇಗೆ ಹೇಳುತ್ತೀರಿ? ಒಂದೇ ರೋಗ ಇದ್ದಾಗಲೇ ಹೀಗೆಲ್ಲಾ ಆಗುತ್ತದೆ. ಇನ್ನು ಅಪರೂಪದ, ಕ್ಲಿಷ್ಟಕರವಾದ, ಹಲವಾರು ರೋಗಗಳು ಒಬ್ಬ ವ್ಯಕ್ತಿಗೆ ಇದ್ದರಂತೂ ಒಂದೊಂದು ಕಡೆ ಒಂದೊಂದು ವಿಧವಾದ ರೋಗನಿರ್ಣಯಗಳು! ಇದಿಷ್ಟು ಒಂದೇ ಆಸ್ಪತ್ರೆಯ ಒಳಗಿನ ತಜ್ಞವೈದ್ಯರುಗಳ ಚಿಕಿತ್ಸೆಗಳಲ್ಲಿ ಕಂಡುಬರುವ ಭಿನ್ನತೆಗಳಾದರೆ ದೇಶದ ಉದ್ದಗಲಕ್ಕೆ ಅದೆಷ್ಟು ವ್ಯತ್ಯಯಗಳು ಸಂಭವಿಸುತ್ತಲೇ ಇರುತ್ತವೆ. ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.

ದೇಶದಿಂದ ದೇಶಕ್ಕೂ ಚಿಕಿತ್ಸೆಯ ವಿಧಾನಗಳಲ್ಲಿ, ಔಷಧಿಗಳ ಸಲಹೆಗಳಲ್ಲಿ ವ್ಯತ್ಯಾಸಗಳಿರುತ್ತವೆ. ಪ್ರತಿಯೊಂದು ದೇಶದಲ್ಲೂ ಅವರದ್ದೇ ಆದ ಆದ್ಯತೆಗಳು, ನೀತಿನಿಯಮಗಳು, ಚಿಕಿತ್ಸಾ ಕ್ರಮಗಳು ರೂಢಿಯಲ್ಲಿದ್ದು ಅದನ್ನವರು ಅನುಸರಿಸುತ್ತಾರೆ. ಚಿಕಿತ್ಸೆ ನಿಜವಾಗಿಯೂ ಸಾಕ್ಷಿ ಆಧಾರಿತ ಆಗಿದ್ದರೆ ಎಲ್ಲೆಡೆಯೂ ಒಂದೇ ತೆರನಾಗಿ ಇರಬೇಕಿತ್ತು. ಈಗ ಹೇಳಿ, ಇವುಗಳಲ್ಲಿ ಯಾವ ದೇಶದ್ದು ಸಾಕ್ಷಿ ಆಧಾರಿತ, ಯಾವ ದೇಶದ್ದು ಅಲ್ಲ? ರೋಗಿಯೊಬ್ಬ ತನ್ನ ತೀವ್ರವಾದ ಸಮಸ್ಯೆಯ ಚಿಕಿತ್ಸೆಗೆ ತಜ್ಞ ವೈದ್ಯರನ್ನು ಸಂರ್ಪಸಿದಾಗ ಶಸ್ತ್ರಚಿಕಿತ್ಸೆ ಈ ಕ್ಷಣಕ್ಕೆ ಆಗಲೇಬೇಕೆಂದು ಅಪ್ಪಣೆ ಮಾಡುತ್ತಾರೆ. ಇನ್ನೊಬ್ಬ ವೈದ್ಯರಲ್ಲಿಗೆ ಅಭಿಪ್ರಾಯ ಪಡೆಯಲೆಂದು ಹೋದಾಗ ಶಸ್ತ್ರಚಿಕಿತ್ಸೆಯ ಅಗತ್ಯವೇ ಇಲ್ಲ, ಹಾಗೇ ಔಷಧ ಕೊಡುತ್ತೇನೆ, ಸಾಕು ಎನ್ನುತ್ತಾರೆ! ಮೂರನೇ ತಜ್ಞ ವೈದ್ಯರಲ್ಲಿಗೆ ಅದೇ ದಿನ ತೆರಳಿದಾಗ ಜೀವನಶೈಲಿಯಲ್ಲಿ ಕೆಲವೊಂದು ಮಾರ್ಪಾಡುಗಳೊಂದಿಗೆ ವ್ಯಾಯಾಮ, ಇತ್ಯಾದಿಗಳನ್ನು ಮಾಡಲು ಹೇಳಿ ಅದಷ್ಟೇ ಸಾಕು, ಔಷಧವೇ ಬೇಡವೆನ್ನುತ್ತಾರೆ! ಇವುಗಳಲ್ಲಿ ಯಾವುದನ್ನು ಸಾಕ್ಷಿ ಆಧಾರಿತ ಚಿಕಿತ್ಸೆ ಎನ್ನುತ್ತೀರಿ? ಇವೆಲ್ಲ ಜನತೆಯ ಅನುಭವದಲ್ಲಿರುವ ನಿತ್ಯಸತ್ಯಗಳು.

ವೈದ್ಯರಿಂದ ವೈದ್ಯರಿಗೆ ಭಿನ್ನ ಔಷಧ ಸಾಕ್ಷಿ ಆಧಾರಿತ ಚಿಕಿತ್ಸೆಯ ತತ್ತ್ವವಲ್ಲ. ಸಾಕ್ಷಿಯ ಮಾನದಂಡ ಅಲ್ಲಿಗೂ ಒಂದೇ, ಇಲ್ಲಿಗೂ ಒಂದೇ. ಇಲ್ಲಿಯ ತನಕ ಹೇಳಿದ್ದೆಲ್ಲವೂ ಅಧಿಕೃತ ಔಷಧಿ ಹಾಗೂ ಚಿಕಿತ್ಸೆಗಳಿರುವ ರೋಗಗಳಿಗೆ ಸಂಬಂಧಪಟ್ಟಿರುವ ವಿಚಾರಗಳು. ಇಂದಿನ ಬಹುತೇಕ ರೋಗಗಳಿಗೆ ಒಂದೋ ಗುಣಕಾರಕ ನಿಖರ ಔಷಧಿಗಳಿಲ್ಲ, ಔಷಧಿಗಳ ಆಯ್ಕೆಯ ನಿರ್ಧಾರವೂ ಅಂತಿಮಗೊಂಡಿಲ್ಲ, ಚಿಕಿತ್ಸಾ ಸೂತ್ರ ಹೇಗಿರಬೇಕು ಎಂಬುದರ ಅಧಿಕೃತ ನಿರ್ಣಯವೂ ಆಗಿಲ್ಲ! ವಸ್ತುಸ್ಥಿತಿ ಹೀಗಿರುವಾಗ ಅವುಗಳಿಗೆಲ್ಲಾ ಸಾಕ್ಷಿ ಆಧಾರಿತ ಔಷಧಿ ಹಾಗೂ ಚಿಕಿತ್ಸೆ ಎಂಬ ಮಾನದಂಡವೇ ಅನ್ವಯವಾಗುವುದಿಲ್ಲ! ಚಿಕಿತ್ಸೆಯು ನಿಜಾರ್ಥದಲ್ಲಿ ಸಾಕ್ಷಿ ಆಧಾರಿತವಾಗಿದ್ದರೆ ಅಪೇಕ್ಷಣೀಯ. ಆದರೆ ವಾಸ್ತವ ಹಾಗಿಲ್ಲ. ಸಾಕ್ಷಿ ಆಧಾರಿತ ಎನ್ನುವುದಕ್ಕೆ ಮಿತಿಯಿದೆ. ಪ್ರಸಕ್ತ ವಿದ್ಯಮಾನಗಳೆಲ್ಲವನ್ನೂ ಅವಲೋಕಿಸುತ್ತಾ ಹೋದಂತೆ ಎದುರಾಗುವ ಅತಿದೊಡ್ಡ ಪ್ರಶ್ನೆಯೆಂದರೆ ನಿಜವಾದ ಸಾಕ್ಷಿ ಆಧಾರಿತ ಔಷಧಿ ಹಾಗೂ ಚಿಕಿತ್ಸೆ ಎಲ್ಲಿದೆ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net