

ದೇವತೆಗಳೆಲ್ಲ ಅಸುರರ ಜತೆ ಹೋರಾಡಿ ನೋವು-ವ್ಯಾಧಿಗೆ ತುತ್ತಾದಾಗ ಅದಕ್ಕೆ ಚಿಕಿತ್ಸೆ ನೀಡಲು ವಿಷ್ಣುವು ವೈದ್ಯನ ಅವತಾರ ಎತ್ತಿದನಂತೆ. ಅದೇ ಧನ್ವಂತರಿ ಅವತಾರ. ಒಂಟಿಕೊಪ್ಪಲು ಪಂಚಾಂಗದ ಪ್ರಕಾರ, ನವೆಂಬರ್ 2, ಅಂದರೆ ಆಶ್ವೀಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನ ಮಹಾವಿಷ್ಣು ಧನ್ವಂತರಿ ಅಪರಾವತಾರ ತಾಳಿ ಬಂದ ದಿನ. ಡಿ. 2, ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನ ಮಹಾವಿಷ್ಣುವಿನ ಧನ್ವಂತರಿ ಅವತಾರದ ಜಯಂತಿ.
|ಮಂಡಗದ್ದೆ ಪ್ರಕಾಶ್ಬಾಬು ಕೆ.ಆರ್.
‘ಓಂ ನಮೋ ಭಗವತೇ ಮಹಾಸುದರ್ಶನ ವಾಸುದೇವಾಯ |ಧನ್ವಂತರಾಯ ಅಮೃತ ಕಳಶ ಹಸ್ತಾಯ, ಸಕಲ ಭಯ ವಿನಾಶಾಯ |ಸರ್ವರೋಗ ನಿವಾರಣಾಯ, ತ್ರಿಲೋಕ ಪತಯೇ ತಿಲೋಕ ನಿಧಯೇ| ಓಂ ಶ್ರೀ ಮಹಾವಿಷ್ಣು ಸ್ವರೂಪಾಯ ಶ್ರೀ ಧನ್ವಂತರಿ ಸ್ವರೂಪ| ಓಂ ಶ್ರೀಶ್ರೀ ಔಷಧ ಚಕ್ರ ನಾರಾಯಣಾಯ ನಮಃ ||ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರ ಜಗತ್ತಿನ ಒಡೆಯರು. ಬ್ರಹ್ಮನು ಸೃಷ್ಟಿಕಾರ್ಯ ಮಾಡಿದರೆ, ವಿಷ್ಣು ಸ್ಥಿತಿಯ ಕಾರ್ಯ ಮಾಡುತ್ತಾನೆ, ಶಿವನು ಲಯಕಾರಕ. ಇದರಲ್ಲಿ ಮಹಾವಿಷ್ಣುವು ಒಂದು ಸಂದರ್ಭದಲ್ಲಿ ಸರ್ವವ್ಯಾಧಿ ನಿವಾರಕನಾಗಿ, ವೈದ್ಯನಾಗಿ, ಧನ್ವಂತರಿ ರೂಪಧಾರಿಯಾಗಿ ಬಂದಿದ್ದಾನೆ.
ಧನ್ವಂತರಿ ಎನ್ನುವುದಕ್ಕೆ ವಿಶೇಷ ಅರ್ಥವಿದೆ. ಏನೆಂದರೆ ಧನ+ಏವ+ಅಂತಃ+ಅರಿ= ಧನ್ವಂತರಿ. ಇನ್ನೊಂದು ಅರ್ಥ ಧನಷಾ+ತರತೇ+ತಾರಯತೇ+ಪಾಪತ್= ಧನ್ವಂತರಿ (ಪಾಪ ವಿಮುಕ್ತಿ). ಚಾಕ್ಷುಷ ಮನ್ವಂತರದಲ್ಲಿ ದೂರ್ವಾಸ ಋಷಿಗಳ ಶಾಪದಿಂದ ಇಂದ್ರನು ಸಂಪತ್ತುರಹಿತನಾಗಿ ಚತುಮುಖ ಬ್ರಹ್ಮದೇವರ ಹತ್ತಿರ ಬಂದು ತಮ್ಮ ಸ್ಥಿತಿಯನ್ನು ವಿವರಿಸಿದ. ಬ್ರಹ್ಮದೇವರು ಮಹಾವಿಷ್ಣುವಿನಲ್ಲಿ ಶರಣು ಹೊಂದಲು ತಿಳಿಸಿದರು. ಅದೇ ಪ್ರಕಾರ ದೇವತೆಗಳು ಮಹಾವಿಷ್ಣುವಿನ ಬಳಿಗೆ ಹೋಗಿ ಸ್ತೋತ್ರ ಮಾಡಿದರು. ದೇವತೆಗಳ ಸ್ತೋತ್ರದಿಂದ ಪ್ರಸನ್ನನಾದ ವಿಷ್ಣು, ಅವರಿಗೆ ಅಭಯವನ್ನು ನೀಡಿದ. ಅಸುರರ ಜೊತೆ ಸಂಧಿ ಮಾಡಿಕೊಂಡು ಸಮುದ್ರಮಥನ ಮಾಡಲು ತಿಳಿಸಿದ. ಆಗ ‘ಮಂದರ ಪರ್ವತ’ವನ್ನು ಕಡಗೋಲನ್ನಾಗಿ ಹಾಗೂ ‘ವಾಸುಕೀ’ ಎಂಬ ಸರ್ಪವನ್ನು ಹಗ್ಗವನ್ನಾಗಿ ಮಾಡಿ ಸಮುದ್ರವನ್ನು ಕಡೆಯುತ್ತಿರಲು ಮೊದಲು ಹಾಲಾಹಲ ವಿಷ ಬಂತು. ಅದನ್ನು ಶಿವನು ಸ್ವೀಕರಿಸಿ ವಿಷಕಂಠನಾದ. ಮತ್ತೆ ಮಥನ ಕಾರ್ಯ ಮುಂದುವರೆದಾಗ ಕಾಮಧೇನು ಬಂತು. ಅದನ್ನು ಯಜ್ಞ ಮಾಡುವ ಋಷಿಗಳು ಸ್ವೀಕರಿಸಿದರು. ನಂತರ ಉಚೈ ಶ್ರವಸ್ ಕುದುರೆ ಬಂತು. ಅದನ್ನು ಬಲಿರಾಜ ಸ್ವೀಕರಿಸಿದ. ಜೊತೆಗೆ ಐರಾವತ ಆನೆ ಬಂತು. ಅದನ್ನು ಇಂದ್ರ ತೆಗೆದುಕೊಂಡ. ಪಾರಿಜಾತವೆಂಬ ಕಲ್ಪವೃಕ್ಷ ಬರಲು ಅದು ದೇವಲೋಕವನ್ನು ಅಲಂಕರಿಸಿತು ಹಾಗೂ ಅಪ್ಸರ ಸ್ತ್ರೀಯರು ಹುಟ್ಟಿ ಬಂದರು. ಆನಂತರವೂ ಮಥನ ಕಾರ್ಯ ಮುಂದುವರೆದಾಗ ವೈದ್ಯನಾದ ಮಹಾವಿಷ್ಣುವು ದಿವ್ಯಗಂಧಾನುಲೇಪಿತನಾಗಿ ‘ಅಮೃತ ಕಲಶ’ ಕೈಯಲ್ಲಿ ಹಿಡಿದು ‘ಧನ್ವಂತರಿ ಅಪರಾವತಾರ’ ತಾಳಿಬಂದದ್ದು ಆಶ್ವೀಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನ ಎಂದು ಪುರಾಣಗಳು ಹೇಳುತ್ತವೆ.
ಮಹಾ ವಿಷ್ಣುವು ಧನ್ವಂತರಿಯಾಗಿ ಅವತಾರ ರೂಪದಲ್ಲಿ ಬರಲು ಬಲವಾದ ಕಾರಣ ಏನೆಂದರೆ- ದೇವತೆಗಳು ಅಸುರರೊಂದಿಗೆ ಹೋರಾಡುವ ಸಂದರ್ಭದಲ್ಲಿ ಗುಣಪಡಿಸಲಾಗದ ನೋವು- ವ್ಯಾಧಿಗಳಿಗೆ ತುತ್ತಾಗುತ್ತಿದ್ದರು. ಇದನ್ನು ಕಂಡು ವಿಷ್ಣುವು ವೈದ್ಯನಾಗಿ ಚಿಕಿತ್ಸೆ ನೀಡಲು ಬಂದ. ಆ ದಿನವು ಕಾರ್ತೀಕ ಮಾಸದ ಕೃಷ್ಣಪಕ್ಷದ ತ್ರಯೋದಶಿ ದಿನವಾಗಿತ್ತು. ಅಂದಿನಿಂದ ಆ ದಿನವನ್ನು ಧನ್ವಂತರಿ ಜಯಂತಿ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ.
ಆಯುರ್ವೆದ ಅತ್ಯಂತ ಪುರಾತನವಾದದ್ದು. ಮನುಷ್ಯ ಅಸ್ವಸ್ಥನಾದಾಗ ಗಿಡಮೂಲಿಕೆಗಳಿಂದ ಕಷಾಯ, ಕಾಡೆಗಳನ್ನು ತಯಾರಿಸಿ ಕುಡಿಸಿ ಅಥವಾ ಬೇರು, ಎಲೆ, ಹೂವು, ಕಾಂಡಗಳನ್ನು ಅರೆದು ಗಾಯಗಳಿಗೆ ಲೇಪಿಸುತ್ತೇವೆ. ಔಷಧೀಯ ಗುಣಗಳನ್ನು ಸಸ್ಯಗಳು ಹೊಂದಿವೆ. ಪ್ರತಿ ರೋಗಕ್ಕೂ ಒಂದು ಗಿಡಮೂಲಿಕೆ ಇದೆ. ಮೊದಲು ವೈದ್ಯರು ಗುಡ್ಡ, ಬೆಟ್ಟ, ಕಾಡುಗಳನ್ನು ಅಲೆದು ಔಷಧೀಯ ಸಸ್ಯಗಳನ್ನು ತಂದು ಮದ್ದನ್ನು ತಯಾರಿಸುತ್ತಿದ್ದರು. ಹಿಂದೆ ರಾಮಾಯಣ ಕಾಲದಲ್ಲಿ ನಡೆದ ಘಟನೆ ಈ ಆಯುರ್ವೆದಕ್ಕೆ ಸಾಕ್ಷಿ ಆಗಿದೆ. ರಾಮ, ಲಕ್ಷ್ಮಣರು ಕಾಡಿನಲ್ಲಿದ್ದಾಗ ಒಂದು ಸಂದರ್ಭದಲ್ಲಿ ಲಕ್ಷ್ಮಣ ಮೂರ್ಛೆ ಹೋಗುತ್ತಾನೆ. ರಾಮ ಗಾಬರಿಗೊಂಡು ತನ್ನ ಭಕ್ತನಾದ ಹನುಮಂತನಿಗೆ, ಕಿಷ್ಕಿಂಧಾ ಪರ್ವತಕ್ಕೆ ಹೋಗಿ ಸಂಜೀವಿನಿ ಕಡ್ಡಿ ತರಲು ಹೇಳುತ್ತಾನೆ. ತಕ್ಷಣ ಹನುಮಂತ ಆ ಪರ್ವತಕ್ಕೆ ಹೋಗಿ ಹುಡುಕಿದಾಗ ಸಂಜೀವಿನಿ ಸಿಗದ ಕಾರಣ ಪರ್ವತವನ್ನೇ ಹೊತ್ತು ತರುತ್ತಾನೆ. ಅದರಿಂದ ಸಂಜೀವಿನಿಯನ್ನು ತೆಗೆದು ಲಕ್ಷ್ಮಣನ ಪ್ರಾಣವನ್ನು ಉಳಿಸಲಾಗುತ್ತದೆ. ಹಿಂದೆ ಋಷಿಮುನಿಗಳು ಹಾಗೂ ಗುಡ್ಡಗಾಡು ಜನರು ಹಣ್ಣು, ಗಡ್ಡೆ, ಗೆಣಸು ತಿಂದು ಅಪಾರ ಶಕ್ತಿಯನ್ನು ಪಡೆದಿದ್ದರು. ಹಾಗೆಯೇ ಆರೋಗ್ಯ ಸರಿಯಿಲ್ಲದಾಗ ಆಯುರ್ವೆದವನ್ನೇ ಬಳಸುತ್ತಿದ್ದರು.
ಧನ್ವಂತರಿಯು ಬಲಗೈಯಲ್ಲಿ ಜ್ಞಾನಮುದ್ರೆಯನ್ನೂ, ಎಡಗೈಯಲ್ಲಿ ಅಮೃತಕಲಶವನ್ನೂ ಹಿಡಿದುಕೊಂಡಿದ್ದಾನೆ. ನಮ್ಮ ಹೃದಯದಲ್ಲಿ ಅಗ್ನಿಮಂಡಲ, ಚಂದ್ರಮಂಡಲ, ಸೂರ್ಯಮಂಡಲಗಳಿವೆ. ಹೃದಯದಲ್ಲಿರುವ ಸೂರ್ಯಮಂಡಲದಲ್ಲಿ ಸೂರ್ಯನಾರಾಯಣನನ್ನು ಚಿಂತಿಸಿ, ಗಾಯತ್ರಿ ಮಂತ್ರವನ್ನು ಜಪಿಸುವಂತೆ ಹೃದಯದಲ್ಲಿರುವ ಚಂದ್ರಮಂಡಲದಲ್ಲಿ ಧನ್ವಂತರಿಯನ್ನು ಚಿಂತಿಸಿ ಜಪ ಮಾಡಬೇಕು. ಹೃದಯದ ಚಂದ್ರಮಂಡಲದಲ್ಲಿರುವ ಧನ್ವಂತರಿಯು 72000 ನಾಡಿಗಳಲ್ಲಿ ತನ್ನ ಬೆಳಕನ್ನು ಸೂಸುತ್ತಾ ನಮ್ಮ ಸಮಸ್ತ ದೇಹವನ್ನು ಅಮೃತಮಯವನ್ನಾಗಿ ಮಾಡುತ್ತಾನೆ. ಅಲ್ಲದೆ ಶಿರಸ್ಸಿನಲ್ಲಿ ಹುಬ್ಬುಗಳ ನಡುವೆ, ಕಿರುನಾಲಿಗೆಯಲ್ಲಿ, ಹೊಕ್ಕಳಿನಲ್ಲಿ ಮತ್ತು ಕೆಳಭಾಗ ದಲ್ಲಿರುವ ಷಟ್ಚಕ್ರಗಳಲ್ಲಿಯೂ ಇದೇ ಧನ್ವಂತ ರಿಯು ಅಮೃತಧಾರೆಯನ್ನು ಸುರಿಸುತ್ತಿದ್ದಾನೆ.
ಶಂಖಂ ಚಕ್ರಮುಪಯಧಶ್ಚಕರ ಯೋರ್ದಿವ್ಯೌಷಧಂ ದಕ್ಷಿಣೇವಾಮೇನಾನ್ಯ ಕರೇಣ ನಿರ್ಮಲ ಸುಧಾಕುಂಭಂ ಜಲೂಕಾವಲಿಮ್ ಭಿಭ್ರಾಣಃ ಕರುಣಾಕರಃ ಶುಭಕರಃ ಸರ್ವಮಯ ಧ್ವಂಸತಃ ಸರ್ವಂ ಮೇ ದುರಿತಂ ಛಿನತ್ತು ಭಗವಾನ್ ಧನ್ವಂತರಿ ಸಂತತಮ್|
ಅರ್ಥ: ತನ್ನ ದೇಹದ ಮೇಲ್ಭಾಗದ ಎರಡು ಹಸ್ತಗಳಲ್ಲಿ ಶಂಖ, ಚಕ್ರಗಳನ್ನು ಧರಿಸಿ, ಕೆಳಬದಿಯ ಬಲಗೈಯಲ್ಲಿ ದಿವ್ಯೌಷಧವಾಗಿರುವ ಅಮೃತಕುಂಭವನ್ನು ಧರಿಸಿ, ಎಡಗೈಯಲ್ಲಿ ಜಿಗಣೆಗಳ ಗುಂಪನ್ನು ಹಿಡಿದಿರುವ, ಕರುಣಾಸಾಗರನಾಗಿರುವ, ಸರ್ವರೋಗ ನಿವಾರಕನಾಗಿರುವ, ಪ್ರಪಂಚಕ್ಕೆ ಒಳಿತನ್ನು ದಯಪಾಲಿಸುವ ಸಾಕ್ಷಾತ್ ಭಗವದ್ ಸ್ವರೂಪಿ ಧನ್ವಂತರಿ ಸ್ವಾಮಿಯು ಸಮಸ್ತ ರೋಗಗಳಿಗೆ ಮೂಲವಾಗಿರುವ ನನ್ನ ಸರ್ವಪಾ ಪಗಳನ್ನು ಅನುದಿನವೂ ನಿವಾರಿಸಲಿ.