

ಶೃಂಗೇರಿ ಶಾರದಾ ಪೀಠ: ಸಹ್ಯಾದ್ರಿ ಶ್ರೇಣಿಯ ತಪ್ಪಲಿನ ರಮಣೀಯ ಪರಿಸರದಲ್ಲಿದೆ ಪವಿತ್ರ ಕ್ಷೇತ್ರ ಶೃಂಗೇರಿ. ಶ್ರೀ ಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಶೃಂಗೇರಿಯಲ್ಲಿ ಜು. 13ರಿಂದ ಸೆ. 10ರವರೆಗೆ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದಾರೆ. (ಸಂಪರ್ಕಕ್ಕೆ 08265-252525, 262626)
ರಂಭಾಪುರಿ ಪೀಠ: ಎನ್.ಆರ್.ಪುರ ತಾಲೂಕು ಬಾಳೆಹೊನ್ನೂರಿನಲ್ಲಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಶ್ರೀ ಡಾ. ವೀರಸೋಮೇಶ್ವರ ಜಗದ್ಗುರುಗಳು ತಮ್ಮ ಶ್ರಾವಣ ಇಷ್ಟಲಿಂಗ ಪೂಜಾ ತಪೋನುಷ್ಠಾನವನ್ನು ಜು.29ರಿಂದ ಆ.27ರವರೆಗೆ ನಡೆಸಲಿದ್ದಾರೆ. ಸಂಪರ್ಕಕ್ಕೆ 9731149569
ರಾಮಚಂದ್ರಾಪುರಮಠ: ಗೋ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತ ಬಂದಿರುವ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಗೋಕರ್ಣದ ಅಶೋಕೆಯಲ್ಲಿ ಜು. 13ರಿಂದ ಸೆ. 10ರವರೆಗೆ ಚಾತುರ್ವಸ್ಯ ವ್ರತ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 9449595205
ಲಕ್ಷ್ಮೀನರಸಿಂಹ ಪೀಠ: ಪುರಾತನ ಧಾರ್ವಿುಕ ಕ್ಷೇತ್ರ ಹರಿಹರಪುರದ ಆದಿಶಂಕರಾಚಾರ್ಯ ಲಕ್ಷ್ಮೀನರಸಿಂಹ ಪೀಠದ ಅಧಿಪತಿಗಳಾದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಈ ವರ್ಷದ ಚಾತುರ್ವಸ್ಯ ವ್ರತವನ್ನು ಹರಿಹರಪುರ ಮಠದಲ್ಲಿ ಜು.13ರಿಂದ ಸೆ.10ರವರೆಗೆ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 8904082221
ಶಕಟಪುರ ಮಠ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಶಕಟಪುರ ಪೀಠದ ಶ್ರೀ ವಿದ್ಯಾಭಿನವ ಕೃಷ್ಣಾನಂದತೀರ್ಥ ಸ್ವಾಮೀಜಿ ಈ ಬಾರಿ ಶಕಟಪುರ ಮಠದಲ್ಲಿ ಜು.13ರಿಂದ ಸೆ.10ರವರೆಗೆ ಚಾತುರ್ವಸ್ಯ ವ್ರತ ನಡೆಸಲಿದ್ದಾರೆ. ಸಂಪರ್ಕಕ್ಕೆ 9362132275, 9440697414
ಹೊಂಬುಜ ಜೈನ ಮಠ: ಜೈನರ ಪವಿತ್ರ ಯಾತ್ರಾ ಸ್ಥಳ ಹೊಸನಗರ ತಾಲೂಕು ಹೊಂಬುಜ ಮಠದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಜು.12ರಿಂದ ಅ. 25ರವರೆಗೆ ಹೊಂಬುಜ ಮಠದಲ್ಲಿ ಚಾತುರ್ವಸ್ಯ ವ್ರತ ಕೈಗೊಳ್ಳುವರು. ಸಂಪರ್ಕಕ್ಕೆ 9481192341
ಕೂಡಲಿ ಶೃಂಗೇರಿ ಮಠ: ಐದು ಶತಮಾನಗಳ ಇತಿಹಾಸವಿರುವ ಕೂಡಲಿ ಮಹಾಸಂಸ್ಥಾನದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಜು. 13ರಿಂದ ಸೆ.10ರವರೆಗೆ ಕೂಡಲಿ ಶೃಂಗೇರಿ ಮಹಾಸಂಸ್ಥಾನದಲ್ಲಿ ಚಾತುರ್ವಸ್ಯ ವ್ರತ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 9743315818
ಆರ್ಯಅಕ್ಷೋಭ್ಯ ಮಠ: ಕೂಡಲಿಯ ಮಾಧ್ವ ಪರಂಪರೆಯ ಆರ್ಯ ಅಕ್ಷೋಭ್ಯ ಮಠದ ಶ್ರೀ ರಘುವಿಜಯತೀರ್ಥರು ತಮ್ಮ 20ನೇ ಚಾತುರ್ವಸ್ಯವನ್ನು ಹಾವೇರಿ ಗುಡಿ ಓಣಿಯಲ್ಲಿರುವ ಕೂಡ್ಲಿ ಆರ್ಯ ಅಕ್ಷೋಭ್ಯ ಮಠದಲ್ಲಿ ಜು. 23ರಿಂದ ಸೆ. 10ರವರೆಗೆ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 9449959350
ಪೇಜಾವರ ಮಠ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೈದರಾಬಾದ್ ಶಾಖಾ ಮಠದಲ್ಲಿ ಜುಲೈ 13ರಿಂದ ಸೆ.10ವರೆಗೆ ಚಾತುರ್ವಸ್ಯ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 9440112171
ಪಲಿಮಾರು ಮಠ: ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ (ಕಿರಿಯ ಪಟ್ಟ) ಅವರು ಬೆಂಗಳೂರು ಮಲ್ಲೇಶ್ವರಂ ಶಾಖಾ ಮಠದಲ್ಲಿ ಜುಲೈ 23ರಿಂದ ಸೆ.10ರವರೆಗೆ ಚಾತುರ್ವಸ್ಯ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 9449934567
ಸೋದೆ ಮಠ: ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಗಳು ಶಿರಸಿ ಸೋಂದಾ ಕ್ಷೇತ್ರದಲ್ಲಿ ಜುಲೈ 13ರಿಂದ ಸೆ.10ರವರೆಗೆ ಚಾತುರ್ವಸ್ಯ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 9844126278
ಶೀರೂರು ಮಠ: ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಅವರು ಶಿರಸಿ ಸೋಂದಾ ಕ್ಷೇತ್ರದಲ್ಲಿ ಜುಲೈ 13ರಿಂದ ಸೆ.10ರವರೆಗೆ ಚಾತುರ್ವಸ್ಯ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 9448547810
ಕಾಣಿಯೂರು ಮಠ: ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಗಳು ಉಡುಪಿ ಕೃಷ್ಣ ಮಠದಲ್ಲಿ ಜುಲೈ 18ರಿಂದ ಸೆ.10ರವರೆಗೆ ಚಾತುರ್ವಸ್ಯ ನಡೆಸಲಿದ್ದಾರೆ. ಸಂಪರ್ಕಕ್ಕೆ 9449690531
ಕೃಷ್ಣಾಪುರ ಮಠ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಉಡುಪಿ ಕೃಷ್ಣ ಮಠದಲ್ಲಿ ಜುಲೈ 18ರಿಂದ ಚಾತುರ್ವಸ್ಯ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 0820-2520598
ಆನೆಗುಂದಿ ಮಠ: ಕಟಪಾಡಿ ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರು ಕಾಪು ಪಡುಕುತ್ಯಾರುವಿನಲ್ಲಿ ಜುಲೈ 13ರಿಂದ ಸೆ.10ರವರೆಗೆ ಚಾತುರ್ವಸ್ಯ ವ್ರತ ಕೈಗೊಳ್ಳುತ್ತಾರೆ. ಸಂಪರ್ಕಕ್ಕೆ 9483928289
ಬಾಳೆಕುದ್ರು ಮಠ: ಹಂಗಾರಕಟ್ಟೆ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು ಹಂಗಾರಕಟ್ಟೆ ಬಾಳೆಕುದ್ರು ಮಠದಲ್ಲಿಯೇ ಜುಲೈ 13ರಿಂದ ಸೆ.10ವರೆಗೆ ಚಾತುರ್ವಸ್ಯ ವ್ರತ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 8495839474
ವಜ್ರದೇಹಿ ಮಠ: ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಗುರುಪುರ ಮಠದಲ್ಲಿ ಜುಲೈ 23ರಿಂದ ಆ. 21ರವರೆಗೆ ಚಾತುರ್ವಸ್ಯ ವ್ರತ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 9743209418, 7892847068
ಕಾಶೀ ಮಠ: ವಾರಣಾಸಿ ಶ್ರೀ ಕಾಶೀ ಮಠ ಸಂಸ್ಥಾನದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜುಲೈ 18ರಿಂದ ಸೆ. 10ರವರೆಗೆ ಚಾತುರ್ವಸ್ಯ ವ್ರತ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 9845082646, 9686944977
ಸುಬ್ರಹ್ಮಣ್ಯ ಮಠ: ಕುಕ್ಕೆ ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಸಂಪುಟ ನರಸಿಂಹ ಮಠದಲ್ಲಿ ಜುಲೈ 18ರಿಂದ ಸೆ. 10ರವರೆಗೆ ಚಾತುರ್ವಸ್ಯ ವ್ರತ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 7899812997
ಮೂಡುಬಿದಿರೆ ಜೈನ ಮಠ: ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಮೂಡುಬಿದಿರೆ ಜೈನ ಮಠದಲ್ಲಿ ಜುಲೈ 12ರಿಂದ ಚಾತುರ್ವಸ್ಯ ಆರಂಭಿಸಿದ್ದು, ಸೆ. 10ರವರೆಗೆ ನಡೆಯಲಿದೆ. ಸಂಪರ್ಕಕ್ಕೆ 0825-8236418
ಎಡನೀರು ಮಠ: ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಡನೀರು ಮಠದಲ್ಲಿ ಜು.13ರಿಂದ ಸೆ.10ರವರೆಗೆ ಚಾತುರ್ವಸ್ಯ ವ್ರತ ನಡೆಸಲಿದ್ದಾರೆ. ಸಂಪರ್ಕಕ್ಕೆ 9447089608
ಕೊಂಡೆವೂರು ಮಠ: ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಕೊಂಡೆವೂರಿನಲ್ಲಿ ಜು.13ರಿಂದ ಸೆ. 10ರವರೆಗೆ ಚಾತುರ್ವಸ್ಯ ವ್ರತ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 9400744159, 9496857851
ಸ್ವರ್ಣವಲ್ಲೀ ಮಠ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ತಮ್ಮ 32ನೇ ಚಾತುರ್ವಸ್ಯ ವ್ರತ ಸಂಕಲ್ಪವನ್ನು ಜು. 13ರಿಂದ ಸೆ.10ರವರೆಗೆ ಸ್ವರ್ಣವಲ್ಲೀ ಮಠದಲ್ಲಿ ಕೈಗೊಳ್ಳಲಿದ್ದಾರೆ.
ಕರ್ಕಿ ಜ್ಞಾನೇಶ್ವರಿ ಪೀಠ: ಹೊನ್ನಾವರ ರ್ಕಯ ದೈವಜ್ಞ ಬ್ರಾಹ್ಮಣ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಅವರ ಚಾತುರ್ವಸ್ಯ ವ್ರತವು ಗಾಣಗಾಪುರದ ಶ್ರೀ ಜಗದ್ಗುರು ಶಂಕರ ಮಠದಲ್ಲಿ ಜು. 13ರಿಂದ ಸೆ. 10ರವರೆಗೆ ನಡೆಯಲಿದೆ.
ಜೀವೋತ್ತಮ ಮಠ: ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಪರಂಪರೆಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಚಾತುರ್ವಸ್ಯ ಕುಮಟಾದ ಶ್ರೀ ಶಾಂತೇರಿ ಕಾಮಾಕ್ಷಿ ರಾಮನಾಥ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಜು. 20ರಿಂದ ಸೆ. 10ರವರೆಗೆ ನಡೆಯಲಿದೆ.
ಹಳದೀಪುರ ಶಾಂತಾಶ್ರಮ: ಹೊನ್ನಾವರ ತಾಲೂಕಿನ ಶ್ರೀ ಸಂಸ್ಥಾನ ಹಳದೀಪುರ ಶಾಂತಾಶ್ರಮದ ಶ್ರೀ ವಾಮನಾಶ್ರಮ ಸ್ವಾಮಿಗಳು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕನಕವಲ್ಲೀ ತಾಲೂಕಿನ ಮುಡೆಡೋಂಗರಿಯ ವಾಳಕೇಶ್ವರ ಮಂಗಲ ಕಾರ್ಯಾಲಯದಲ್ಲಿ ಜು. 13ರಿಂದ ಸೆ.10ರವರೆಗೆ 19ನೇ ಚಾತುರ್ವಸ್ಯ ವ್ರತ ಕೈಗೊಳ್ಳುವರು.
ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠ: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಜು. 26ರಿಂದ ಸೆ.10ರವರೆಗೆ ಮಂತ್ರಾಲಯದಲ್ಲಿ ಚಾತುರ್ವಸ್ಯ ವ್ರತ ಕೈಗೊಳ್ಳಲಿದ್ದಾರೆ.
ಹಂಪಿ ವಿದ್ಯಾರಣ್ಯ ಮಠ: ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನ ಮಠದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಜು.13ರಿಂದ ನ. 8ರವರೆಗೆ ಹಂಪಿ ಮಹಾಸಂಸ್ಥಾನದಲ್ಲಿ ಚಾತುರ್ವಸ್ಯ ವ್ರತ ಕೈಗೊಳ್ಳಲಿದ್ದಾರೆ.
ಅವಧೂತ ದತ್ತಪೀಠ: ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಜು.13ರಿಂದ ಸೆ.10ರವರೆಗೆ ಆಶ್ರಮದಲ್ಲಿ ಚಾತುರ್ವಸ್ಯ ವ್ರತ ದೀಕ್ಷೆ ಕೈಗೊಂಡಿದ್ದಾರೆ.
ದಿಗಂಬರ ಜೈನ ಮಠ: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೊಳ ಶ್ರೀ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜುಲೈ 18ರಿಂದ ಚಾತುರ್ಮಾಸ್ಯ ವ್ರತವನ್ನು ತಮ್ಮ ಮಠದಲ್ಲಿ ಆರಂಭಿಸಿದ್ದು ಅ. 25ರವರೆಗೆ ನಡೆಯಲಿದೆ.
ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠ: ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠ, ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ, ಜುಲೈ 13ರಿಂದ ಸೆ. 10ರವರೆಗೆ ಅರೆಮಾದನಹಳ್ಳಿಯಲ್ಲಿ ಚಾತುರ್ವಸ್ಯ ವ್ರತ ಕೈಗೊಂಡಿದ್ದಾರೆ.
ಕೇದಾರ ಪೀಠ: ಹಿಮಾಲಯದಲ್ಲಿರುವ ಕೇದಾರಪೀಠದ ಜಗದ್ಗುರು ರಾವಲ್ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಮಹಾರಾಷ್ಟ್ರದ ನಾಂದೇಡದಲ್ಲಿರುವ ದಶಮುಖಾಶ್ರಮದಲ್ಲಿ ಜು. 29ರಿಂದ ಆ. 27ರವರೆಗೆ ತಪೋನುಷ್ಠಾನ ಕೈಗೊಳ್ಳಲಿದ್ದಾರೆ.
ಉಜ್ಜಯಿನಿ ಪೀಠ: ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಜು. 29ರಿಂದ ಆ. 27ರವರೆಗೆ ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಉಜ್ಜಯಿನಿ ಪೀಠದಲ್ಲಿ ತಪೋನುಷ್ಠಾನ ಕೈಗೊಳ್ಳಲಿದ್ದಾರೆ.
ಶ್ರೀಶೈಲ ಪೀಠ: ಸೂರ್ಯಸಿಂಹಾಸನ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಜು. 30ರಿಂದ ಆ. 26ರವರೆಗೆ ಶ್ರೀಶೈಲ ಕ್ಷೇತ್ರದಲ್ಲಿ ತಪೋನುಷ್ಠಾನ ಕೈಗೊಳ್ಳಲಿದ್ದಾರೆ.
ಕಾಶೀ ಪೀಠ: ಜ್ಞಾನಸಿಂಹಾಸನ ಮಹಾಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಜು. 29ರಿಂದ ಆ. 26ರವರೆಗೆ ಪುಣೆಯ ಜಂಗಮವಾಡಿ ಮಠದಲ್ಲಿ ಪೂಜಾನುಷ್ಠಾನ ಕೈಗೊಳ್ಳಲಿದ್ದಾರೆ.
ಉತ್ತರಾದಿ ಮಠ: ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿಯವರ 27ನೇ ಚಾತುರ್ವಸ್ಯ ವ್ರತ ಸಂತೇಬಿದನೂರಿನ ಉತ್ತರಾದಿ ಮಠದಲ್ಲಿ ಜು. 23ರಿಂದ ಸೆ. 10ರವರೆಗೆ ನಡೆಯಲಿದೆ. ಸಂಪರ್ಕಕ್ಕೆ 9866372460
ಭಂಡಾರಕೇರಿ ಮಠ: ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿಯವರ 43ನೇ ಚಾತುರ್ವಸ್ಯ ವ್ರತ ಜು. 18ರಿಂದ ಸೆ. 10ರವರೆಗೆ ಬೆಂಗಳೂರು ಗಿರಿನಗರ ಶಾಖಾ ಮಠದಲ್ಲಿ ನಡೆಯಲಿದೆ. ಸಂಪರ್ಕಕ್ಕೆ 9945525399
ಪುತ್ತಿಗೆ ಮಠ: ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಅಮೆರಿಕದ ಸ್ಯಾನ್ಹೋಸೆ ಮಹಾನಗರದಲ್ಲಿ ಜು. 29ರಿಂದ ಸೆ.10ರವರೆಗೆ ಚಾತುರ್ವಸ್ಯ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 9845043417
ಅದಮಾರು ಮಠ: ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನದಲ್ಲಿ ಜು. 23ರಿಂದ ಸೆ.10ವರೆಗೆ ವ್ರತ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 9449258712. ಅದಮಾರು ಮಠ (ಕಿರಿಯ ಪಟ್ಟ) ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಬಂಟ್ವಾಳ ತಾಲೂಕು ಕಡ್ತಿಲ ಶಾಖಾ ಮಠದಲ್ಲಿ ಜು. 13ರಿಂದ ಸೆ.10ರವರೆಗೆ ಚಾತುರ್ವಸ್ಯ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 9449348125
ಚಿತ್ರಾಪುರ ಮಠ: ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಸುರತ್ಕಲ್ ಸಮೀಪದ ಕುಳಾಯಿಯಲ್ಲಿರುವ ಮಠದಲ್ಲಿ ಜು.18ರಿಂದ ಸೆ.10ರವರೆಗೆ ಚಾತುರ್ವಸ್ಯ ವ್ರತ ನಡೆಸಲಿದ್ದಾರೆ. ಸಂಪರ್ಕಕ್ಕೆ 9353455374
ಸೋಸಲೆ ವ್ಯಾಸರಾಜಮಠ: ಮೈಸೂರಿನ ಶ್ರೀ ವ್ಯಾಸರಾಜ ಮಠದ (ಸೋಸಲೆ) ವಿದ್ಯಾಶ್ರೀಶತೀರ್ಥ ಶ್ರೀಗಳು ಜು. 25ರಿಂದ ಸೆ.10ರವರೆಗೆ ತುಮಕೂರಿನ ಚಿಕ್ಕಪೇಟೆಯ ಶ್ರೀವ್ಯಾಸರಾಜ ಮಠದಲ್ಲಿ 6ನೇ ಚಾತುರ್ವಸ್ಯ ನಡೆಸಲಿದ್ದಾರೆ. ಸಂಪರ್ಕಕ್ಕೆ 9845915808
ಆವನಿ ಶಂಕರಮಠ: ಕೋಲಾರ ಜಿಲ್ಲೆ ಮುಳಬಾಗಿಲ ತಾಲೂಕು ಆವನಿಯ ಶಂಕರಮಠದಲ್ಲಿ ನೂತನ ಜಗದ್ಗುರು ಶ್ರೀ ಶಾಂತಾನಂದ ಭಾರತೀ ಅವರು ಜು. 13ರಿಂದ ಆವನಿಮಠದಲ್ಲಿ ಚಾತುರ್ವಸ್ಯ ವ್ರತ ನಡೆಸಲಿದ್ದಾರೆ.
ಕವಳೆ ಮಠ: ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಜು.13ರಿಂದ ಸೆ.17ರವರೆಗೆ ಸಾಗರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಚಾತುರ್ವಸ ವೃತ ಕೈಗೊಳ್ಳಲಿದ್ದಾರೆ. ಸಂಪರ್ಕಕ್ಕೆ 8951527810
| ಕೆ.ವಿ. ಲಕ್ಷ್ಮೀನಾರಾಯಣಾಚಾರ್ಯ ಆನೇಕಲ್
ಯತಿಗಳು ಹಾಗೂ ಆಚಾರ್ಯತ್ವ ಪಾಲನೆ ಮಾಡುವ ಸದ್ಗೃಸ್ಥರು ಚಾತುರ್ವಸ್ಯ ವ್ರತವನ್ನು ಹಿಡಿಯುತ್ತಾರೆ. ಮಳೆಗಾಲದಿಂದ ಕೂಡಿದ ಈ ನಾಲ್ಕು ತಿಂಗಳಲ್ಲಿ ಒಂದೊಂದು ತಿಂಗಳು ಒಂದೊಂದು ವ್ರತ ಆಚರಿಸಬೇಕು. ಆಷಾಢ ಹಾಗೂ ಶ್ರಾವಣ ಮಾಸದಲ್ಲಿ ಗ್ರೀಷ್ಮ ಮತ್ತು ವರ್ಷ ಋತುಗಳ ಸಮಾಗಮ. ಈ ವೇಳೆ ಮಳೆ ಹೆಚ್ಚು. ಮನೆ, ಮಠಗಳಿಂದ ಹೊರಬರಲಾಗದಷ್ಟು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತವೆ. ಜನಸಂಚಾರಕ್ಕೆ ಅಡ್ಡಿಯಾಗುತ್ತದೆ. ಇದಲ್ಲದೇ ಮಳೆಗಾಲದಲ್ಲಿ ಸಣ್ಣ ಕ್ರಿಮಿಕೀಟಗಳ ಉತ್ಪತ್ತಿಯೂ ಜೋರು. ಹೊರಗೆ ಸಂಚರಿಸುವಾಗ ಯತಿಗಳು ಕಾಲಿಗೆ ಹಾಕಿಕೊಳ್ಳುತ್ತಿದ್ದ ಮರದ ಹಾವುಗೆಗಳಿಗೆ (ಪಾದುಕೆ) ಸಿಕ್ಕ ಕೀಟಗಳು ಸಾಯುವ ಸಾಧ್ಯತೆ ಹೆಚ್ಚು. ಅಹಿಂಸೆಯೇ ಪರಮಧರ್ಮ ಎಂದರಿತಿದ್ದ ಯತಿಗಳು ಕೀಟಗಳ ಸಾವಿಗೆ ಕಾರಣರಾಗುತ್ತಿರಲಿಲ್ಲ. ಹಾಗಾಗಿ ಹೊರಗೆ ಸಂಚರಿಸುತ್ತಿರಲಿಲ್ಲ. ಇದರ ಜತೆಗೆ ಪುಣ್ಯ ಸಂಚಯನ ಮಾಡುವ ದಕ್ಷಿಣಾಯನ ಪುಣ್ಯಕಾಲ ಕೂಡಿರುತ್ತಿದ್ದ ಕಾರಣ ಯತಿಗಳು ಒಂದೆಡೆ ವ್ರತಕ್ಕೆ ಕೂರುತ್ತಿದ್ದರು. ಶಿಷ್ಯರು ಶ್ರದ್ಧಾವಂತರಾದ ಕಾರಣ ಗುರುಗಳ ಮಾರ್ಗ ಅನುಸರಿಸಿ ಅವರೂ ವ್ರತಕ್ಕೆ ಕೂರುತ್ತಿದ್ದರು.
ಮೊದಲ ತಿಂಗಳು ಶಾಕವ್ರತ. ಈ ತಿಂಗಳಲ್ಲಿ ತರಕಾರಿ, ಬಾಳೆಹಣ್ಣು, ಕೇಸರಿ, ಪಚ್ಚಕರ್ಪರ, ಸುಗಂಧದ್ರವ್ಯಗಳನ್ನು ಬಳಸುವಂತಿಲ್ಲ. ಮಾವು ಹೊರತಾಗಿ ಬೇರೆ ಹಣ್ಣುಗಳನ್ನು ದೇವರಿಗೆ ಅರ್ಪಿಸುವಂತಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣವಿದೆ. ಹಿಂದೆ ತರಕಾರಿಗಳನ್ನು ವ್ಯಾಪಾರ ದೃಷ್ಟಿಯಿಂದ ಬೆಳೆಯುತ್ತಿರಲಿಲ್ಲ. ಅಗತ್ಯಕ್ಕೆ ತಕ್ಕಹಾಗೆ ಹಿತ್ತಲು ಹಾಗೂ ಕೈತೋಟದಲ್ಲಿ ಜನ ತರಕಾರಿ ಬೆಳೆದುಕೊಳ್ಳುತ್ತಿದ್ದರು. ಮಳೆಗಾಲದ ಆರಂಭದಲ್ಲಿ ಭೂಮಿಯಲ್ಲಿ ಅಮಿತ ಉಷ್ಣಾಂಶವಿರುತ್ತದೆ. ಈ ಕಾಲದಲ್ಲಿ ಬೆಳೆದ ತರಕಾರಿಯಲ್ಲೂ ಈ ಉಷ್ಣಾಂಶ ಇರುವುದರಿಂದ ತರಕಾರಿ ಬಳಕೆ ಉತ್ತಮವಲ್ಲವೆಂದು ನಿಷೇಧಿಸಲಾಗಿತ್ತು. ಇದಲ್ಲದೆ ಜೋರು ಮಳೆಗಾಲವಾದ ಕಾರಣ ಹಣ್ಣುಗಳು ಕೆಡುತ್ತವೆ. ಸರಿಯಾಗಿ ಜೀರ್ಣವೂ ಆಗುವುದಿಲ್ಲ. ಹಾಗಾಗಿ ಈ ಪದಾರ್ಥಗಳನ್ಬು ನಿಷೇಧಿಸಿದ್ದರು.
ಎರಡನೇ ತಿಂಗಳು ದಧಿವ್ರತ. ಈ ತಿಂಗಳಲ್ಲಿ ಮೊಸರು ಬಳಸುವಂತಿಲ್ಲ. ಜಿಟಿಪಿಟಿ ಮಳೆಗಾಲವಾದ್ದರಿಂದ ಮೊಸರು ದೇಹಕ್ಕೆ ಒಗ್ಗುವುದಿಲ್ಲ. ಬದಲಿಗೆ ಶೀತವಾಗಿ ಕಾಡುತ್ತದೆ. ಹಾಗಾಗಿ ಮೊಸರಿಗೆ ನಿಷೇಧವಿದೆ.
ಮೂರನೆಯ ತಿಂಗಳು ಕ್ಷೀರ ವ್ರತ. ಈ ತಿಂಗಳು ಹಾಲು ಬಳಸುವಂತಿಲ್ಲ. ಈ ತಿಂಗಳಲ್ಲಿ ಮಳೆಯೂ ಉಂಟು ಬಿಸಿಲೂ ಉಂಟು. ಹಾಲು ಸೇವಿಸಿದರೆ ಶ್ವಾಸಕೋಶದಲ್ಲಿ ಕಫ ಕಟ್ಟುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಈ ತಿಂಗಳು ಹಾಲು ಬಳಕೆ ನಿಷೇಧಿಸಲಾಗಿದೆ.
ಕೊನೆಯ ತಿಂಗಳು ದ್ವಿದಳ ಧಾನ್ಯ ವ್ರತ. ಈ ತಿಂಗಳಲ್ಲಿ ರಾಗಿ, ಭತ್ತ, ಜೋಳ, ತೆಂಗು, ಬಾಳೆ ಇತ್ಯಾದಿ ಏಕದಳ ಪದಾರ್ಥಗಳನ್ನು ಬಳಸಬಹುದು. ದ್ವಿದಳ ಧಾನ್ಯಗಳಾದ ತೊಗರಿ, ಅಲಸಂದೆ, ಎಳ್ಳು, ಕಡಲೆ, ಹೆಸರು, ಉದ್ದು ಇತ್ಯಾದಿ ಧಾನ್ಯಗಳನ್ನು ಬಳಸುವಂತಿಲ್ಲ. ಮುಂಗಾರಿನಲ್ಲಿ ಬೆಳೆದ ಈ ದ್ವಿದಳ ಧಾನ್ಯಗಳಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ಹಾಗಾಗಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಾವನೆಯಿಂದ ನಿಷೇಧ ಹೇರಲಾಗಿದೆ. ನಮ್ಮ ಪೂರ್ವಿಕರು ಧಾರ್ವಿುಕ ಹಿನ್ನೆಲೆಯಲ್ಲಿ ಇದನ್ನೆಲ್ಲ ಆಚರಣೆಗೆ ತಂದರಾದರೂ ಇವುಗಳಲ್ಲಿ ವೈಜ್ಞಾನಿಕ ನೆಲೆಗಟ್ಟಿದೆ. ಧರ್ಮ ಹಾಗೂ ವಿಜ್ಞಾನ ಒಂದಕ್ಕೊಂದು ಬೆಸೆದುಕೊಂಡಿವೆ.