

ಇಂಜಿನಿಯರಿಂಗ್ ಪದವಿ ಗಳಿಸಿದ ಬಳಿಕ ರಾಜಗೋಪಾಲ್ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗ ಪಡೆದು ಕೈತುಂಬಾ ಸಂಬಳ ಗಳಿಸುತ್ತಿದ್ದ. ಮೂರು ವರ್ಷಗಳ ನೌಕರಿಯ ಬಳಿಕ ಆತ ತನ್ನ ಮಾತಾಪಿತರಿಗೆ ಪರಿಚಯವಿದ್ದ ಕುಟುಂಬಕ್ಕೆ ಸೇರಿದ್ದ ಸುಮಾಳನ್ನು ಲಗ್ನವಾದ. ಸುಮಾ ಕೂಡ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಸಾಫ್ಟ್ವೇರ್ ಕಂಪನಿಯ ಉದ್ಯೋಗಿಯಾಗಿದ್ದಳು. ಗಂಡ ಹೆಂಡಿರಿಬ್ಬರೂ ತಾವು ಕೆಲಸಕ್ಕಿದ್ದ ಪಟ್ಟಣದಲ್ಲಿ ಅಪಾರ್ಟ್ವೆುಂಟೊಂದರಲ್ಲಿ ಬಾಡಿಗೆಗಿದ್ದರು. ಸದ್ಯಕ್ಕೆ ಮಕ್ಕಳು ಬೇಡವೆಂದು ತೀರ್ಮಾನಿಸಿದ್ದರು.
ಸುಮಾ ವರ್ಕ್ ಫ್ರಮ್ ಹೋಂ ಮಾಡುತ್ತಿದ್ದ ಕಾರಣ ರಾಜಗೋಪಾಲ್ಗೆ ಮನೆಯಲ್ಲಿರುತ್ತಿದ್ದ ಬಹುತೇಕ ಸಮಯ ಒಂಟಿತನ ಕಾಡುತ್ತಿತ್ತು. ಸಮಯ ಕಳೆಯಲು ದಿನವೆಲ್ಲಾ ಕಂಪ್ಯೂಟರಿನಲ್ಲಿ ಸಿನಿಮಾಗಳನ್ನು ನೋಡುತ್ತಿದ್ದ. ಆದರೆ, ಕಾಲಕ್ರಮೇಣ ಏಕತಾನತೆ, ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆ ಹಾಗೂ ನಿರುದ್ಯೋಗದ ಕಾರಣದಿಂದ ಆತ ಖಿನ್ನತೆಗೆ ಜಾರಿದ. ‘ನಾನು ನಿನ್ನ ಸಂಬಳದಲ್ಲಿ ಊಟ ಮಾಡುವಂತಹ ಪರಿಸ್ಥಿತಿ ಬಂದಿತು’ ಎಂದು ಹೆಂಡತಿಗೆ ಹೇಳುತ್ತಾ ಅಳತೊಡಗಿದ. ತಿಂಗಳೊಂದರ ನಂತರ ಅಗ್ರೆಸಿವ್ ಆಗಿ ಸುಮಾಳನ್ನು ಬೈಯುತ್ತಾ ಸಣ್ಣ ಸಣ್ಣ ವಿಷಯಗಳಿಗೂ ಜಗಳವಾಡಲಾರಂಭಿಸಿದ. ಆದರೆ, ಅವನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದ ಸುಮಾ ತಾಳ್ಮೆ ಕಳೆದುಕೊಳ್ಳುತ್ತಿರಲಿಲ್ಲ. ಆದರೆ, ಕೆಲವೊಮ್ಮೆ ತಾಳ್ಮೆಕೆಟ್ಟಾಗ ಆಕೆ ಎದುರುತ್ತರವನ್ನು ಕೊಡುತ್ತಿದ್ದಳು. ಹೀಗಾದಾಗ ರಾಜಗೋಪಾಲ್ ಅವಳ ಮೇಲೆ ದೈಹಿಕ ಹಲ್ಲೆ ಮಾಡುತ್ತಿದ್ದ.
ಆದರೂ ಸುಮಾ ಬೇಸರಗೊಳ್ಳದೆ ಖಿನ್ನತೆಯ ಕಾರಣದಿಂದಲೇ ರಾಜಗೋಪಾಲ್ ಹೀಗಾಡುತ್ತಿದ್ದಾನೆಂದು ತಿಳಿದು ಸುಮ್ಮನಿದ್ದಳು. ಹೀಗೆಯೇ ಒಂದು ದಿನ ಕಲಹ ತಾರಕಕ್ಕೇರಿದಾಗ ಸುಮಾ ಗಂಡನ ಕೆನ್ನೆಗೊಂದೇಟು ಕೊಟ್ಟಳು. ರೌದ್ರಾವತಾರ ತಾಳಿದ ರಾಜಗೋಪಾಲ್ ಸುಮಾಳ ಕತ್ತು ಹಿಸುಕಿದ. ತಾನೇನು ಮಾಡಿದೆ ಎಂದು ಅವನಿಗೆ ಅರಿವಾಗುವಷ್ಟರಲ್ಲಿ ಸುಮಾ ಸತ್ತು ಬಿದ್ದಿದ್ದಳು.
ಮುಂದೇನು ಮಾಡಬೇಕು ಎಂದು ಅವನಿಗೆ ತಿಳಿಯಲಿಲ್ಲ. ಒಂದು ಬಾಟಲ್ ತಣ್ಣೀರನ್ನು ಕುಡಿದು ಯೋಚಿಸತೊಡಗಿದ. ನಂತರ ಪತ್ನಿಯ ಶವವನ್ನು ಬೆಡ್ಶೀಟ್ನಲ್ಲಿ ಸುತ್ತಿ ಮನೆಯ ಮೂಲೆಯೊಂದರಲ್ಲಿಟ್ಟ. ಮೂರು ದಿನಗಳ ನಂತರ ಶವ ವಾಸನೆ ಬರಲಾರಂಭಿಸಿದಾಗ ಮನೆಗೆ ರೂಂ ಫ್ರೆಷನರ್ ಸಿಂಪಡಿಸಿದ. ಮೃತದೇಹದ ಮೇಲೆ ಡೀಓಡರೆಂಟ್ ಸ್ಪ್ರೇ ಮಾಡಿದ. ಅದೇ ದಿನ ಸುಮಾಳ ತಂದೆ ಮಗಳ ಫೋನ್ಗೆ ಕರೆ ಮಾಡಿದರು. ಅವಳು ಉತ್ತರಿಸದಿದ್ದಾಗ ಅವರು ಅಳಿಯನನ್ನು ಸಂರ್ಪಸಿದರು. ‘ಏನು ಹೇಳಲಿ ಮಾವಾ, ನಿನ್ನೆ ರಾತ್ರಿ ಸುಮಾಳಿಗೆ ಕೋವಿಡ್ ರೋಗ ಬಂದದ್ದು ಪತ್ತೆಯಾಯಿತು. ಮುನಿಸಿಪಾಲಿಟಿಯವರು ಮನೆಗೆ ಆಂಬುಲೆನ್ಸ್ ತಂದು ಅವಳನ್ನು ಯಾವುದೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವಳೆಲ್ಲಿದ್ದಾಳೆ ಎಂದು ನನಗೆ ತಿಳಿಸಿಲ್ಲ. ಕೋವಿಡ್ ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಲು ಯಾರನ್ನೂ ಬಿಡುತ್ತಿಲ್ಲ. ಆಕೆಯ ಪರಿಸ್ಥಿತಿ ತಿಳಿದ ಕೂಡಲೇ ನಿಮಗೆ ಫೋನ್ ಮಾಡುವೆ’ ಎಂದ. ಸುಮಾಳ ಮಾತಾಪಿತರು ತಾವು ವಾಸವಿದ್ದ ಊರಿನಿಂದಲೇ ಸುಮಾ ಯಾವ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು ತಿಳಿದುಕೊಳ್ಳಲು ಪ್ರಯತ್ನಗಳನ್ನು ಮಾಡಿದರು. ಯಾವುದೂ ಸಫಲವಾಗಲಿಲ್ಲ. ಮಾರನೆಯ ದಿನವೇ ಮನೆಯಲ್ಲಿದ್ದ ಶವವು ತೀರಾ ಕೊಳೆಯುತ್ತಾ ಬಂದು ವಾಸನೆ ತಡೆಯದಾದಾಗ ರಾಜಗೋಪಾಲ್ ಅತ್ತೆ ಮಾವಂದಿರಿಗೆ ಕರೆ ಮಾಡಿದ. ‘ಸುಮಾ ಕೋವಿಡ್ಗೆ ತುತ್ತಾಗಿ ಆಸ್ಪತ್ರೆಯಲ್ಲಿ ಸತ್ತು ಹೋದಳೆಂದು ಮುನಿಸಿಪಾಲಿಟಿಯವರು ತಿಳಿಸಿದರು. ಅವಳ ಶವವನ್ನು ನನಗೆ ಕೊಡಲಿಲ್ಲ. ನಾನು ಅಂತಿಮ ದರ್ಶನ ಮಾಡಿದ ನಂತರ ಆಸ್ಪತ್ರೆಯ ಸಿಬ್ಬಂದಿ ಅವಳ ಶವವನ್ನು ಇತರ ಕೋವಿಡ್ ಶವಗಳ ಜೊತೆ ಸುಟ್ಟುಬಿಟ್ಟರು’ ಎಂದ. ಸುಮಾಳ ಮಾತಾಪಿತರು ಅವನಿಗೆ ಸಮಾಧಾನ ಮಾಡಿದರು.
ಶವದ ವಿಲೇವಾರಿ ಹೇಗೆ ಮಾಡುವುದೆಂದು ಯೋಚಿಸಿದ ರಾಜಗೋಪಾಲ್, ತನ್ನ ಬಡಾವಣೆಯಲ್ಲಿದ್ದ ರಿಲಯನ್ಸ್ ಮಾರ್ಟ್ನ ಅಂಗಡಿಗೆ ಹೋದ. ಅಲ್ಲಿ ದೊಡ್ಡದೊಂದು ಸೂಟ್ಕೇಸ್ ಖರೀದಿಸಿ ಮನೆಗೆ ತಂದ. ಅದರೊಳಗೆ ಸುಮಾಳ ಶವವನ್ನು ಹಾಕಿ ಭದ್ರಪಡಿಸಿದ. ನಂತರ ತನಗೆ ಪರಿಚಯವಿದ್ದ ಟ್ಯಾಕ್ಸಿ ಡ್ರೈವರನೊಬ್ಬನಿಗೆ ಫೋನು ಮಾಡಿ ಅರ್ಜೆಂಟಾಗಿ ಬರಲು ವಿನಂತಿಸಿದ. ಟ್ಯಾಕ್ಸಿ ಬಂದಕೂಡಲೇ ಚಕ್ರಗಳಿದ್ದ ಕೆಂಪು ಬಣ್ಣದ ಸೂಟ್ಕೇಸ್ ಎಳೆದುಕೊಂಡು ಬಂದು ಟ್ಯಾಕ್ಸಿಯಲ್ಲಿಟ್ಟು ಸರ್ಕಾರಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ಹೋಗಲು ಚಾಲಕನಿಗೆ ಸೂಚಿಸಿದ. ಆ ಆಸ್ಪತ್ರೆ ನಗರದ ದೊಡ್ಡ ಆಸ್ಪತ್ರೆಯಾಗಿದ್ದು ಆಸ್ಪತ್ರೆಯ ಹಿಂಭಾಗವು ನಿರ್ಜನ ಪ್ರದೇಶವಾಗಿತ್ತು. ಕಾಡಿನಂತಿದ್ದ ಆ ಜಾಗದ ಒಂದು ಮೂಲೆಯಲ್ಲಿ್ಲ ಆಸ್ಪತ್ರೆಯ ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಿದ್ದರು.
ಆಸ್ಪತ್ರೆಯ ಆವರಣ ತಲುಪಿದಾಗ ರಾಜಗೋಪಾಲ್ ಟ್ಯಾಕ್ಸಿ ಚಾಲಕನಿಗೆ, ‘ಈ ಸೂಟ್ಕೇಸ್ನಲ್ಲಿ ನನ್ನ ಹೆಂಡತಿಯ ದೇಹವಿದೆ. ಅವಳು ಕೋವಿಡ್ ರೋಗ ಬಂದು ಸತ್ತುಹೋಗಿದ್ದಾಳೆ, ಆಕೆಯ ದೇಹವನ್ನು ನಾನು ವಿಲೇವಾರಿ ಮಾಡಲು ಚಿತಾಗಾರಕ್ಕೆ ತೆಗೆದುಕೊಂಡು ಹೋದರೆ ಡೆತ್ ಸರ್ಟಿಫಿಕೇಟ್ ಮುಂತಾದ ದಾಖಲೆಗಳನ್ನು ತೋರಿಸಲು ಹೇಳುವುದಲ್ಲದೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ. ನನಗೂ ಕೋವಿಡ್ ಬಂದಿದೆಯೆಂದು ನನ್ನನ್ನೂ ಬಲವಂತವಾಗಿ ಆಸ್ಪತ್ರೆಗೆ ಸೇರಿಸುತ್ತಾರೆ. ನೀನು ನನಗೆ ಸಹಾಯ ಮಾಡಿದರೆ ಹತ್ತು ಸಾವಿರ ರೂಪಾಯಿ ಕೊಡುವೆ’ ಎಂದ. ಟ್ಯಾಕ್ಸಿ ಚಾಲಕ ಒಪ್ಪಿದ ನಂತರ ರಾಜಗೋಪಾಲ್ ಅವನಿಗೆ ವಾಹನವನ್ನು ಕಾಲೇಜಿನ ಹಿಂಭಾಗಕ್ಕೆ ತೆಗೆದುಕೊಂಡು ಹೋಗಲು ಸೂಚಿಸಿದ. ಇನ್ನೇನು ಮಧ್ಯರಾತ್ರಿಯಾಗುತ್ತಿತ್ತು. ಯಾರೊಬ್ಬರೂ ಅಲ್ಲಿರಲಿಲ್ಲ. ಸೂಟ್ಕೇಸನ್ನು ಕೆಳಗಿಳಿಸಿದ ರಾಜಗೋಪಾಲ್, ಕಸವನ್ನೆಸೆದಿದ್ದ ಜಾಗದಲ್ಲಿ ಸೂಟ್ಕೇಸನ್ನಿಟ್ಟ. ಕಾರಿನಿಂದ ಸ್ವಲ್ಪ ಪೆಟ್ರೋಲ್ ತೆಗೆದುಕೊಡಲು ಚಾಲಕನಿಗೆ ಹೇಳಿ ಸೂಟ್ಕೇಸಿನ ಮೇಲೆ ಅದನ್ನು ಸಿಂಪಡಿಸಿ ಕಡ್ಡಿ ಗೀರಿದ. ಕೆಲ ನಿಮಿಷಗಳ ಕಾಲ ಸೂಟ್ಕೇಸ್ ಸುಡುವುದನ್ನು ನೋಡಿ ಅನಂತರ ಮನೆಗೆ ವಾಪಸಾದ. ಮಾರನೆಯ ಬೆಳಿಗ್ಗೆ ಆಸ್ಪತ್ರೆಯ ಸೇವಕರು ಕಸವನ್ನೆಸೆಯಲು ಬಂದಾಗ ತಿಪ್ಪೆಯಲ್ಲಿ ಅರ್ಧ ಸುಟ್ಟಿದ್ದ ಸೂಟ್ಕೇಸ್ ನೋಡಿ ಅದನ್ನು ಹೊರತೆಗೆದು ಒಳಗೇನಿದೆಯೆಂದು ನೋಡಿದರು. ಅದರಲ್ಲಿ ಯುವತಿಯ ದೇಹ ಕಂಡು ಗಾಬರಿಯಾದರು. ದೇಹವು ಮುಕ್ಕಾಲು ಭಾಗ ಸುಟ್ಟು ಹೋಗಿದ್ದರೂ ಮುಖ ಸಂಪೂರ್ಣವಾಗಿ ಸುಟ್ಟಿರಲಿಲ್ಲ. ಕೂಡಲೇ ಪೊಲೀಸರಿಗೆ ಕರೆಹೋಯಿತು. ಸ್ಥಳಕ್ಕೆ ಬಂದ ಪೊಲೀಸರು ಕೋವಿಡ್ ಬಂದು ಸತ್ತ ಮಹಿಳೆಯ ಶವವನ್ನು ಎಸೆಯಲಾಗಿದೆ ಎಂದೇ ಊಹಿಸಿದರು. ಮೃತದೇಹದ ಪಂಚನಾಮೆ ಮಾಡಿ ಮೃತಳು ಯಾರೆಂದು ಗುರುತಿಸಲು ದೇಹದ ಫೋಟೋಗಳನ್ನು ತೆಗೆದುಕೊಂಡರು.
ಅದೇ ಸರ್ಕಾರಿ ಆಸ್ಪತ್ರೆಯಲ್ಲಿಯೇ ದೇಹದ ಮರಣೋತ್ತರ ಪರೀಕ್ಷೆ ಮಾಡಲಾಯಿತು. ಪರೀಕ್ಷೆ ಮಾಡಿದ ವೈದ್ಯರು ಮೃತಳು ಸುಮಾರು 35ವರ್ಷ ವಯಸ್ಸಿನವಳಾಗಿದ್ದು, ಆಕೆ ಗರ್ಭ ಧರಿಸಿಲ್ಲ. ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಹೇಳಿ ಆಕೆಗೆ ಕೋವಿಡ್ ಇರಲಿಲ್ಲ ಎನ್ನುವುದನ್ನು ದೃಢೀಕರಿಸಿದರು. ಆಗ ಪೊಲೀಸರು ಕೊಲೆ ಮತ್ತು ಸಾಕ್ಷ್ಯನಾಶದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಪ್ರಾರಂಭಿಸಿದರು. ಶವವಿದ್ದ ಸೂಟ್ಕೇಸನ್ನು ಅಲ್ಲಿಗೆ ಯಾರು ತೆಗೆದುಕೊಂಡು ಬಂದರೆಂದು ಹುಡುಕಾಟ ನಡೆಯಿತು. ಶವವನ್ನು ವಾಹನದಲ್ಲಿಟ್ಟುಕೊಂಡೇ ತರಬೇಕಾಗಿದ್ದ ಕಾರಣ ತನಿಖೆ ಆ ಜಾಡಿನಲ್ಲಿ ಮುಂದುವರಿಯಿತು. ಆಸ್ಪತ್ರೆಯ ಆವರಣಕ್ಕೆ ಬರಲು ಇದ್ದ ಗೇಟ್ ಮುಂದೆ ಅಳವಡಿಸಿದ್ದ ಸಿಸಿಟಿವಿಯ ಮೂಲಕ ಆಸ್ಪತ್ರೆಗೆ ಬಂದ ವಾಹನಗಳು ಯಾವವು ಎನ್ನುವುದನ್ನು ಪರಿಶೀಲಿಸಿದಾಗ ಟ್ಯಾಕ್ಸಿಯೊಂದು ಗಮನಕ್ಕೆ ಬಂದಿತು. ಆ ಟ್ಯಾಕ್ಸಿಯ ನೋಂದಣಿ ಸಂಖ್ಯೆ ದಾಖಲಾಗಿದ್ದರಿಂದ ಸುಲಭವಾಗಿ ಅದನ್ನು ಪತ್ತೆ ಮಾಡಿ ಚಾಲಕನನ್ನು ಪ್ರಶ್ನಿಸಲಾಯಿತು. ಆತ ನಡೆದ ವಿಷಯವನ್ನು ಬಾಯ್ಬಿಟ್ಟ.
ಅವನ ಮಾಹಿತಿಯ ಮೇರೆಗೆ ರಾಜಗೋಪಾಲ್ನ ಮನೆಗೆ ಹೋಗಿ ಪ್ರಶ್ನಿಸಿದಾಗ ಆತ ತನಗೇನೂ ಗೊತ್ತಿಲ್ಲವೆಂದೇ ಸಾಧಿಸಿದ. ‘ನನ್ನ ಹೆಂಡತಿಗೆ ಕೋವಿಡ್ ಬಂದು ಆಸ್ಪತ್ರೆಗೆ ದಾಖಲಾಗಿದ್ದಳು. ಸರ್ಕಾರೀ ಅಧಿಕಾರಿಗಳೇ ಇತರ ಕೋವಿಡ್ ಮೃತರಿಗೆ ಮಾಡಿದಂತೆ ಆಕೆಯ ಅಂತ್ಯಕ್ರಿಯೆಯನ್ನೂ ಮಾಡಿರಬೇಕು’ ಎಂದು ಸಾಧಿಸಿದ. ಸುಮಾ ಕೋವಿಡ್ನಿಂದ ಸತ್ತಿಲ್ಲವೆಂದು ಮರಣೋತ್ತರ ಪರೀಕ್ಷೆಯಲ್ಲಿ ಖಾತ್ರಿಯಾಗಿದ್ದ ಕಾರಣ ಪೊಲೀಸರು ಅವನಿದ್ದ ಅಪಾರ್ಟ್ವೆುಂಟ್ ಬ್ಲಾಕಿನ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದರು. ಅದರಲ್ಲಿ ಆತ ರಾತ್ರಿ 11 ಗಂಟೆ ಸುಮಾರಿಗೆ ಲಿಫ್ಟಿನಿಂದಿಳಿದು ಕೆಂಪು ಸೂಟ್ಕೇಸನ್ನು ಎಳೆದುಕೊಂಡು ಕಟ್ಟಡದ ಮುಂಭಾಗಕ್ಕೆ ಹೋದದ್ದು ದಾಖಲಾಗಿತ್ತು. ಅದೇ ದಿನ ಬೆಳಗ್ಗೆ ಸುಮಾರು 11 ಗಂಟೆಗೆ ಆತ ಅದೇ ಕೆಂಪು ಬಣ್ಣದ ಸೂಟ್ಕೇಸ್ ಹೊರಗಿನಿಂದ ತೆಗೆದುಕೊಂಡು ಬಂದಿದ್ದೂ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಮನೆಯನ್ನು ಶೋಧಿಸಿದಾಗ ಆತ ಸೂಟ್ಕೇಸನ್ನು ರಿಲಯನ್ಸ್ ಮಾರ್ಟಿನಿಂದ ಖರೀದಿಸಿದ್ದ ರಸೀತಿ ಸಿಕ್ಕಿತು.
ರಾಜಗೋಪಾಲ್ನನ್ನು ತೀವ್ರವಾಗಿ ಪ್ರಶ್ನೆ ಮಾಡಿದಾಗ ಆತ ಕೃತ್ಯವನ್ನು ಒಪ್ಪಿಕೊಂಡ. ಸುಮಾಳ ಕೊಲೆಗೆ ಪ್ರತ್ಯಕ್ಷದರ್ಶಿಗಳಿಲ್ಲದಿರುವುದರಿಂದ ಈ ಪ್ರಕರಣವನ್ನು ಕೇವಲ ಸಾಂರ್ದಭಿಕ ಸಾಕ್ಷ್ಯಗಳ ಮೂಲಕವೇ ಸಾಬೀತುಪಡಿಸಬೇಕಾಗಿದೆ. ಸೂಟ್ಕೇಸಿನಲ್ಲಿ ಸುಮಾಳ ಶವವಿತ್ತು ಎಂದು ರಾಜಗೋಪಾಲ್ ಟ್ಯಾಕ್ಸಿ ಡ್ರೈವರನ ಮುಂದೆ ತಪ್ಪೊಪ್ಪಿರುವುದರಿಂದ ಚಾಲಕನನ್ನು ಮಾಫಿಸಾಕ್ಷಿಯಾಗಿ (ಅಪೂ›ವರ್) ತೆಗೆದುಕೊಳ್ಳುವ ಅನಿವಾರ್ಯತೆಯಿದೆ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು ರಾಜಗೋಪಾಲ್ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದಾನೆ. ನೌಕರಿ ಹೋದ ಖಿನ್ನತೆಯಿಲ್ಲದಿದ್ದರೆ ರಾಜಗೋಪಾಲ್ ಇಂತಹ ಹೇಯಕೃತ್ಯ ಮಾಡುತ್ತಿರಲಿಲ್ಲವೇನೋ. ಆಸ್ಟ್ರೇಲಿಯಾದ ಮನಶ್ಶಾಸ್ತ್ರಜ್ಞೆ ಡರೋತಿ ರೋವ್ ಹೇಳುವಂತೆ, ‘ಖಿನ್ನತೆಯೇ ಒಂದು ಬಂದಿಖಾನೆ- ಖಿನ್ನ ಮನಸ್ಕನೇ ನೊಂದ ಕೈದಿ ಮತ್ತು ಕ್ರೂರಿ ಜೈಲರ್ ಎರಡೂ ಆಗಿರುವುದೇ ಅದರ ವಿಶೇಷ.’
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)