ಹಲ್ಲುಗಳ ನಡುವೆ ಏಕೆ ಅಂತರ ಉಂಟಾಗುತ್ತದೆ?: ಡೆಂಟಲ್ ಕೇರ್

Teeth
Published on

ಹಲ್ಲುಗಳು ನಾವು ತಿನ್ನುವ ಆಹಾರವು ಜೀರ್ಣಕ್ರಿಯೆಗೆ ಹೋಗುವ ಮೊದಲು ಅದನ್ನು ಜಗಿದು ತುಂಬಾ ಸಣ್ಣ ತುಂಡುಗಳನ್ನಾಗಿ ಮಾಡುತ್ತವೆ. ಹಲ್ಲುಗಳು ಇಲ್ಲದೆ ಇದ್ದರೆ ಅದು ನೇರವಾಗಿ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಈ ಹಲ್ಲುಗಳು ಜಗಿಯಲು ಮಾತ್ರವಲ್ಲದೆ, ಮುಖದ ಸೌಂದರ್ಯವನ್ನು ಕಾಪಾಡುವಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ. ಅನೇಕರಲ್ಲಿ

ಹಲ್ಲುಗಳ ನಡುವೆ ಅಂತರ ಕಂಡುಬರುತ್ತವೆ. ಕೆಲವರು ಇದನ್ನು ಆತ್ಮವಿಶ್ವಾಸದಿಂದ ಎದುರಿಸಿದರೆ ಮತ್ತೆ ಕೆಲವರು ಮುಖದ ಅಂದ ಕೆಡಿಸಿದವೆಂದು ಬೇಸರ ಮಾಡಿಕೊಳ್ಳುತ್ತಾರೆ. ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯಲು ಅಂಥವರಿಗೆ ಕಿರಿಕಿರಿಯಾಗುತ್ತದೆ.

ವಾಸ್ತವವಾಗಿ ಹಲ್ಲುಗಳ ನಡುವೆ ಸಹಜ ಅಂತರವಿದ್ದರೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಕೆಲವು ಸಲ ಈ ಅಂತರ ಹೆಚ್ಚಾಗಿ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಮಸ್ಯೆಯನ್ನು ಸಾಮಾನ್ಯವಾಗಿ ಮಕ್ಕಳು ಮತ್ತು ವಯಸ್ಕರು ಇಬ್ಬರಲ್ಲಿಯೂ ಕಾಣಬಹುದು. ಇದರಿಂದ ಹಲವರಲ್ಲಿ ಆತ್ಮವಿಶ್ವಾಸದ ಕೊರತೆಯುಂಟಾಗುತ್ತದೆ. ಹಲ್ಲುಗಳ ನಡುವಿನ ಅಂತರವು ಮೌಖಿಕ ಮತ್ತು ದೈಹಿಕ ಆರೋಗ್ಯವನ್ನು ಸೂಚಿಸುತ್ತದೆ.

ಹಲ್ಲುಗಳ ನಡುವಿನ ಅಂತರವು ಸಾಮಾನ್ಯವಾಗಿ ಮುಂದಿನ ಹಲ್ಲುಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಅಥವಾ ಕೆಲವೊಮ್ಮೆ ಪೂರ್ತಿ ದವಡೆಯ ಹಲ್ಲುಗಳಲ್ಲಿ ಕಾಣಬಹುದು. ಹಾಗಾದರೆ ಇದರ ಕಾರಣಗಳನ್ನು ತಿಳಿಯೋಣ.

  • ದವಡೆಯ ಗಾತ್ರ ಮತ್ತು ಹಲ್ಲುಗಳ ಪ್ರಮಾಣದಲ್ಲಿ ವ್ಯತ್ಯಾಸವಿದ್ದರೆ ಪೂರ್ತಿ ದವಡೆಯ ಹಲ್ಲುಗಳ ನಡುವೆ ಅಂತರವನ್ನು ಕಾಣಬಹುದು.
  • ಮಕ್ಕಳಲ್ಲಿ ಶಾಶ್ವತ ಹಲ್ಲುಗಳು ಬಂದನಂತರ ಹಲ್ಲುಗಳ ನಡುವಿನ ಅಂತರ ಕಡಿಮೆಯಾಗುತ್ತದೆ. ಆದರೆ ಶಾಶ್ವತ ಹಲ್ಲುಗಳು ಬಂದನಂತರವೂ ಕಡಿಮೆಯಾಗದಿದ್ದರೆ ವೈದ್ಯರನ್ನು ಕಾಣಬೇಕಾಗುತ್ತದೆ.
  • ಹಲ್ಲಿನ ಸ್ವರೂಪ ಅಥವಾ ಆಕಾರದಲ್ಲಿ ವ್ಯತ್ಯಾಸವಿದ್ದರೆ.
  • ಕೆಲವು ಮಕ್ಕಳು ಬೆರಳುಗಳನ್ನು ಚೀಪುವುದು ಮತ್ತು ನಾಲಿಗೆಯನ್ನು ಸಹಜವಾಗಿಡದೆ ಮೇಲ್ದವಡೆಯ ಹಲ್ಲುಗಳಿಗೆ ವರಗಿಸುವುದರಿಂದಲೂ ಹಲ್ಲುಗಳ ನಡುವೆ ಅಂತರ ಉಂಟಾಗುತ್ತದೆ.
  • ನಾಲಿಗೆಯ ಗಾತ್ರವು ಅಸಹಜವಾಗಿ ದೊಡ್ಡದಾಗಿದ್ದರೆ ಹಲ್ಲುಗಳ ನಡುವೆ ಅಂತರ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
  • ಅವಧಿಗೂ ಮುನ್ನ ಹಾಲು ಹಲ್ಲುಗಳನ್ನು ಕಳೆದುಕೊಂಡಾಗ. 
  • ಶಾಶ್ವತ ಹಲ್ಲುಗಳನ್ನು ಕಳೆದುಕೊಂಡು, ಅವುಗಳನ್ನು ಮರುಸ್ಥಾಪಿಸಲು ವಿಫಲವಾದಲ್ಲಿ.
  • ವಸಡಿನ ಸೋಂಕು ಉಂಟಾದಾಗ ಸೂಕ್ತ ಚಿಕಿತ್ಸೆ ಪಡೆಯದೇ ನಿರ್ಲಕ್ಷಿಸಿದರೆ ಸೋಂಕು ಮುಂದುವರಿದು ದವಡೆ ಮೂಳೆಗಳು ಉರಿಯೂತಕ್ಕೊಳಗಾಗಿ ಹಲ್ಲುಗಳು ಸಡಿಲಾಗಿ ಹಲ್ಲುಗಳ ನಡುವೆ ಅಂತರ ಕಾಣಿಸಿಕೊಳ್ಳಬಹುದು.
  • ಲೇಬಿಯಲ್ ಫ್ರೆನಮ್ (Labial frenum) ಒಂದು ಅಂಗಾಂಶದ ಮಡಿಕೆಯಾಗಿದ್ದು ಮೇಲಿನ ತುಟಿಯನ್ನು ವಸಡುಗಳಿಗೆ ಸಂರ್ಪಸುತ್ತದೆ. ಇದರ ಗಾತ್ರ ದೊಡ್ಡದಾಗಿದ್ದರೆ ಮುಂಭಾಗದ ಹಲ್ಲುಗಳ ನಡುವೆ ಅಂತರ ಉಂಟಾಗಬಹುದು. ಇದನ್ನು ಮಿಡ್ ಲೈನ್ ಡಯಾಸ್ಟಿಮಾ (Midline Diastema) ಎಂದು ಕರೆಯುತ್ತಾರೆ.

ಹೀಗೆ ಹಲ್ಲುಗಳ ನಡುವಿನ ಅಂತರಕ್ಕೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಸೌಂದರ್ಯದ ಸಮಸ್ಯೆ ಜೊತೆಗೆ ಅನೇಕ ಗಂಭೀರ ಸಮಸ್ಯೆಗಳನ್ನೂ ಉಂಟುಮಾಡುತ್ತದೆ. ಚಿಕಿತ್ಸಾ ಕ್ರಮವು ಕಾರಣವನ್ನು ಅವಲಂಬಿತವಾಗಿದ್ದು ಅದನ್ನು ಸರಿಪಡಿಸುವ ಮೂಲಕ ಪ್ರಯೋಜನವನ್ನು ಪಡೆಯಬಹುದು.

ಹಲ್ಲುಗಳ ನಡುವಿನ ಅಂತರಕ್ಕೆ ವಸಡಿನ ಕಾಯಿಲೆ ಕಾರಣವಾಗಿದ್ದರೆ ಉತ್ತಮ ಉಚಿತ ನೈರ್ಮಲ್ಯತೆಯನ್ನು ಅಭ್ಯಾಸ ಮಾಡುವುದರಿಂದ ಅದು ವ್ಯಾಪಿಸದಂತೆ ತಡೆಗಟ್ಟಬಹುದು. ಪ್ರತಿದಿನ ಎರಡು ಬಾರಿ ಹಲ್ಲುಗಳನ್ನು ಶುಚಿಗೊಳಿಸುವುದರ ಜೊತೆಗೆ ಫ್ಲಾಸಿಂಗ್ ಮತ್ತು ವಸಡಿನ ಮಸಾಜ್ ಮಾಡುವುದು ಸೂಕ್ತ. ಮಕ್ಕಳಲ್ಲಿ ಮೇಲ್ದವಡೆಯ ಮುಂದಿನ ಹಲ್ಲುಗಳ ನಡುವೆ ಅಂತರವಿರುತ್ತದೆ. ಅದು ಮಗುವಿಗೆ 11 ವರ್ಷ ತುಂಬುವಷ್ಟರಲ್ಲಿ ತಾನಾಗಿಯೇ ಕೂಡಿಕೊಳ್ಳುತ್ತದೆ. ಮಕ್ಕಳಲ್ಲಿ ಅಸಹಜ ಅಭ್ಯಾಸಗಳಿಂದ ಅದು ಉಂಟಾಗಿದ್ದಲ್ಲಿ ವೈದ್ಯರು ಅದನ್ನು ತಡೆಯುವ ಮೂಲಕ ಹಲ್ಲುಗಳ ನಡುವಿನ ಅಂತರವನ್ನು ನಿಯಂತ್ರಿಸುತ್ತಾರೆ. ಇದನ್ನು ಹೊರತುಪಡಿಸಿ ಆರ್ಥಾಡೊಂಟಿಕ್ ಚಿಕಿತ್ಸೆ, ಕ್ರೌನ್ಸ್, ವೆನೀಯರ್ಸ್, ಇಂಪ್ಲಾಂಟ್ಸ್ (orthodontic treatment, crowns, veneers, Implants) ನಂತಹ ಚಿಕಿತ್ಸ್ಸೆ ಲಭ್ಯವಿದ್ದು ವೈದ್ಯರು ನಿಮಗೆ ಸೂಕ್ತವಾದುದನ್ನು ಸೂಚಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net