ಯೋಜನೆಗಳಿಗೆ ಆರ್ಥಿಕ ಮುಗ್ಗಟ್ಟು ; 2ನೇ ಬರಪೀಡಿತ ರಾಜ್ಯವೆಂಬ ಹಣೆಪಟ್ಟಿ: ನೀರಾವರಿ ಸೌಲಭ್ಯಕ್ಕೆ ಬೇಡಿಕೆ ಪ್ರಯತ್ನ ಇಳಿಕೆ

5-67c5eedccd62a
Published on

|ಮೃತ್ಯುಂಜಯ ಕಪಗಲ್ ಬೆಂಗಳೂರು

ಕೆರೆಗಳ ಭರ್ತಿಯಿಂದ ನೀರಾವರಿ ಸೌಲಭ್ಯಕ್ಕೆ ಬೇಡಿಕೆಗಳು ಏರುಮುಖವಾಗಿವೆ. ಆದರೆ ರಾಜ್ಯ ಸರ್ಕಾರದ ಪ್ರಯತ್ನ, ಇಚ್ಛಾಶಕ್ತಿ ಇಳಿಮುಖದ ಹಾದಿಯಲ್ಲಿ ಸಾಗಿದೆ. ‘ನುಡಿದಂತೆ ನಡೆಯುತ್ತಿದ್ದೇವೆ’ ಎಂದು ಹೇಳಿಕೊಳ್ಳುತ್ತಿರುವ ಅವಧಿಯಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ.

ಐದು ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗೆ 1.50 ಲಕ್ಷ ಕೋಟಿ ರೂ. ಖರ್ಚು ಮಾಡಲಾಗುವುದು. ಇದರಲ್ಲಿ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ 11 ಯೋಜನೆಗಳನ್ನು ಪೂರ್ಣಗೊಳಿಸಲು ಪ್ರತಿ ವರ್ಷ 10 ಸಾವಿರ ಕೋಟಿ ರೂ. ವಿನಿಯೋಗಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ಮೊದಲ ವರ್ಷ ಭಾರಿ ಮತ್ತು ಮಧ್ಯಮ ಗಾತ್ರದ ಯೋಜನೆಗಳಿಗೆ 18,530 ಕೋಟಿ ರೂ. ವಿನಿಯೋಗಿಸಿ, 21,782 ಹೆಕ್ಟೇರ್ ಪ್ರದೇಶಕ್ಕೆ ಹೊಸದಾಗಿ ನೀರಾವರಿ ಸವಲತ್ತು ಕಲ್ಪಿಸಿದೆ. ಹೊಸ ಯೋಜನೆಗಳಿಲ್ಲವಾದರೂ ಹಿಂದಿನ ಸರ್ಕಾರ ಅಂದಾಜು ವೆಚ್ಚಕ್ಕೆ ಮಂಜೂರು, ಅನುದಾನ ಬಿಡುಗಡೆ ಮಾಡಿದ್ದನ್ನು ಮುಂದುವರಿಸಿ ಪೂರ್ಣಗೊಳಿಸಿದೆಯಷ್ಟೇ. ರಾಜ್ಯದ ನಿವ್ವಳ ದೇಶೀಯ ಉತ್ಪಾದನೆ ದರ (ಜಿಎಸ್​ಡಿಪಿ)ದಲ್ಲಿ ಕೃಷಿ ಕ್ಷೇತ್ರದ ಪಾಲು ಶೇ.2ರಷ್ಟಿದೆ. ಒಟ್ಟು ಜನಸಂಖ್ಯೆಯಲ್ಲಿ ದುಡಿಮೆ ವಯಸ್ಸಿಗೆ ಬಂದವರಲ್ಲಿ ಶೇ.50 ಜನರಿಗೆ ಕೃಷಿ ಕ್ಷೇತ್ರವೇ ಉದ್ಯೋಗದಾತನಾಗಿದ್ದು, ಸೇವಾವಲಯ ನಂತರದ ಸ್ಥಾನದಲ್ಲಿದೆ.

ಆಹಾರ ಭದ್ರತೆ, ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿ, ಜೀವನಮಟ್ಟ ಸುಧಾರಣೆ, ಸುಸ್ಥಿರ ಅಭಿವೃದ್ಧಿಗೆ ಕೃಷಿಯೇ ಅಡಿಪಾಯ. ಇದರ ಮೇಲೆ ಉದ್ಯಮ-ವಹಿವಾಟು ಇನ್ನಿತರ ವಲಯಗಳನ್ನು ಕಟ್ಟಿ ಬೆಳೆಸಿದರೆ ಬದುಕು-ಭವಿಷ್ಯ ಸುಭದ್ರವಾಗಿರುತ್ತದೆ.

ಕಳಚಲಾಗದ ಹಣೆಪಟ್ಟಿ: ರಾಜಸ್ಥಾನದ ನಂತರ ಹೆಚ್ಚು ಒಣಭೂಮಿ, ಪದೇಪದೆ ಅನಾವೃಷ್ಟಿ ಎದುರಿಸುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನವಿದೆ. ಈ ಹಣೆಪಟ್ಟಿ ಕಳಚುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಿಲ್ಲ. ಕೃಷ್ಣಾ, ಕಾವೇರಿ ಕೊಳ್ಳಗಳು, ಪಶ್ಚಿಮ ವಾಹಿನಿಗಳ ನೀರು ಸಮರ್ಪಕ ಬಳಕೆ, ಕೆರೆ-ಕುಂಟೆಗಳ ಸಂರಕ್ಷಣೆಯಿಂದ ಹೊಸದಾಗಿ 34.95 ಲಕ್ಷ ನೀರಾವರಿ ಪ್ರದೇಶ ಸೃಜನೆ ಸಾಮರ್ಥ್ಯ ರಾಜ್ಯಕ್ಕಿದೆ ಎಂದು ನೀರಾವರಿ ತಜ್ಞರು ಹೇಳುತ್ತಾರೆ. ಆದರೆ ದೂರಗಾಮಿ ಪ್ರಯೋಜನ, ಫಲ ನೀಡುವ ಭಾರಿ, ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ನೀರಾವರಿ ಯೋಜನೆಗಳು ಕಡತದಲ್ಲಿ ಸುಂದರವಾಗಿ ಕಾಣುತ್ತವೆ. ಜಲ ಸಂಪನ್ಮೂಲ, ನೀರಾವರಿ ನಿಗಮಗಳು ಮತ್ತು ಸಣ್ಣ ನೀರಾವರಿಗೆ ವರ್ಷಕ್ಕಿಷ್ಟು ಅನುದಾನ ಕಡಿತವಾಗುತ್ತಲಿದೆ. ಯೋಜನಾ ಅಂದಾಜು ವೆಚ್ಚ ಪರಿಷ್ಕರಣೆಯಾಗುತ್ತಲಿದೆ. ಮೀಸಲಿಡುವ ಅನುದಾನ ಪ್ರಮಾಣದ ಹೆಚ್ಚಳ ಮಾಡದಿರುವುದು ರೈತರು ಮಾತ್ರವಲ್ಲ, ರಾಜ್ಯದ ಪ್ರಗತಿ, ಆರ್ಥಿಕತೆ ವೃದ್ಧಿ ದೃಷ್ಟಿಯಿಂದಲೂ ಉತ್ತಮ ಬೆಳವಣಿಗೆಯಲ್ಲವೆಂಬ ನೀರಾವರಿ ತಜ್ಞರ ಆಕ್ಷೇಪಕ್ಕೆ ತಜ್ಞರು ಧ್ವನಿಗೂಡಿಸುತ್ತಾರೆ.

ಅಧಿಸೂಚನೆ ನೆಪ

ಯುಕೆಪಿ 3ನೇ ಹಂತದಡಿ ರಾಜ್ಯಕ್ಕೆ ಹಂಚಿಕೆಯಾದ ನೀರಿನ ಬಳಕೆಗೆ ಕೃಷ್ಣಾ 2ನೇ ನ್ಯಾಯಾಧಿಕರಣ ಐತೀರ್ಪಿನ ಅಂತಿಮ ಅಧಿಸೂಚನೆ ನೆಪದಲ್ಲಿ ಸರ್ಕಾರ ಕಾಲಹರಣ ಮಾಡುತ್ತಿದೆ. ಅಧಿಸೂಚನೆಗೆ ಮುನ್ನ ನೀರು ಸಂಗ್ರಹ, ನೀರಾವರಿ ಜಾಲ ಸೃಜನೆಗೆ ಬೇಕಾದ ಸಿದ್ಧತೆ ಕಡೆಗಣಿಸಿದೆ. ಇದರಿಂದಾಗಿ 53 ಸಾವಿರ ಕೋಟಿ ರೂ. ಅಂದಾಜು ವೆಚ್ಚವು -ಠಿ;1 ಲಕ್ಷ ಕೋಟಿ ದಾಟಿದ್ದು, 1.34 ಲಕ್ಷ ಎಕರೆ ಸ್ವಾಧೀನದ ಪೈಕಿ 25 ಸಾವಿರ ಎಕರೆಗೆ ಸ್ವಾಧೀನ ಆದೇಶ ಹೊರಡಿಸಿರುವುದು ಕಳೆದ ಒಂದು ದಶಕದ ಸಾಧನೆಯಾಗಿದೆ. ಚಿತ್ರದುರ್ಗ, ತುಮಕೂರು, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ 22.25 ಲಕ್ಷ ಹೆಕ್ಟೇರ್​ಗೆ ನೀರೊದಗಿಸುವ ಭದ್ರಾ ಯೋಜನಾ ವೆಚ್ಚ -21,437.67 ಕೋಟಿಗೆ ತಲುಪಿದೆ. ಕೇಂದ್ರ ಪ್ರಕಟಿತ -5,300 ಕೋಟಿ ನಿರೀಕ್ಷೆಯಲ್ಲಿ ಕಾಮಗಾರಿ ಆಮೆಗತಿಗೆ ತಿರುಗಿದೆ. ಎತ್ತಿನಹೊಳೆ ತೆವಳುತ್ತಿದ್ದು, ವಿವಿಧ ಹಂತದ ಒಟ್ಟು 413 ಕಿ.ಮೀ. ಉದ್ದದ ಕಾಲುವೆ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಸಣ್ಣ ನೀರಾವರಿ ಇಲಾಖೆಗಳ ವ್ಯಾಪ್ತಿಗೆ ಬರುವ 40 ಸಾವಿರ ಜಲಕಾಯಗಳ ಒತ್ತುವರಿ ತೆರವು, ಅಭಿವೃದ್ಧಿಗೊಳಿಸಿ ಬಲವರ್ಧಿಸಲು ಯೋಜನೆ ರೂಪಿಸಲಾಗಿದೆ. ಆದರೆ ಇಲಾಖೆಗೆ ನೀಡುವ ಅನುದಾನದ ಬಹುಪಾಲು ಬಾಕಿ ಬಿಲ್ ಪಾವತಿ ಚುಕ್ತಾಗೆ ಸರಿಹೋಗುತ್ತಿದ್ದು, ಹೊಸ ಕೆಲಸಗಳು ಚರ್ಚೆಗೆ ಸೀಮಿತವಾಗಿವೆ.

ಕೇಂದ್ರ ಸರ್ಕಾರದ ಪಾಲು

ತ್ವರಿತ ನೀರಾವರಿ ಕಾರ್ಯಕ್ರಮ (ಎಐಬಿಪಿ) ಮತ್ತು ಪ್ರಧಾನಮಂತ್ರಿ ಪ್ಯಾಕೇಜ್​ನಡಿ 1996ರಿಂದ ರಾಜ್ಯ ಸರ್ಕಾರ ನೆರವು ಕೋರಿ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಅರ್ಧ, ಅದಕ್ಕಿಂತ ಕಡಿಮೆ ಮೊತ್ತವನ್ನು ಕೇಂದ್ರ ಸರ್ಕಾರಗಳು ನೀಡುತ್ತ ಬಂದಿವೆ. ಮೋದಿ ಬಂದ ಮೇಲೆ ಅನುದಾನ ಕಡಿತ ಪರಿಪಾಠವಲ್ಲ. ಹಿಂದಿನ ಸರ್ಕಾರಗಳೂ ಇದೇ ನಿಲುವು ಅನುಸರಿಸುತ್ತ ಬಂದಿವೆ. 1996ರಿಂದ 2023-24ರವರೆಗೆ 154 ಯೋಜನೆಗಳಿಗೆ ರಾಜ್ಯ ಸರ್ಕಾರ ಒಟ್ಟು -10,721.93 ಕೋಟಿ ಕೇಳಿದ್ದರೆ, ಕೇಂದ್ರ -7583.63 ಕೋಟಿ ಬಿಡುಗಡೆ ಮಾಡಿದೆ.

ನೆರೆ ರಾಜ್ಯಗಳು ಮೇಲ್ಪಂಕ್ತಿ

ರಾಜ್ಯಕ್ಕೆ ಹಂಚಿಕೆಯಾದ ನೀರಿನ ಸಂಗ್ರಹ, ಬಳಕೆ ಹಾಗೂ ಯುದ್ಧೋಪಾದಿ ಅನುಷ್ಠಾನದಲ್ಲಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಮೇಲ್ಪಂಕ್ತಿಯಾಗಿವೆ. ಅವಿಭಜಿತ ಆಂಧ್ರಪ್ರದೇಶದ ಸಿಎಂ ಆಗಿದ್ದ ಎನ್.ಟಿ. ರಾಮರಾವ್ ಬಜೆಟ್​ನ ಬೇರೆ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿ ನೀರಾವರಿಗೆ ಸಿಂಹಪಾಲು ಒದಗಿಸಿದರು. ತೆಲಂಗಾಣದಲ್ಲಿ ಚಂದ್ರಶೇಖರರಾವ್ ನೇತೃತ್ವದ ಸರ್ಕಾರ ಎರಡು ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂ. ವೆಚ್ಚ ಮಾಡಿ ಕಾಳೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿತು. ಕಾವೇರಿಯ 45 ಟಿಎಂಸಿ ಅಡಿ ಹೆಚ್ಚುವರಿ ನೀರಿನ ಬಳಕೆ ಉದ್ದೇಶಿತ ಕಾವೇರಿ-ವೈಗೈ-ಗುಂಡಾರು ಜೋಡಣಾ ಕಾಲುವೆ ನಿರ್ವಣಕ್ಕೆ ಕರ್ನಾಟಕ ತಕರಾರು ಎತ್ತಿದೆ. ಈ ವ್ಯಾಜ್ಯ ಸುಪ್ರೀಂಕೋರ್ಟ್​ನಲ್ಲಿದ್ದರೂ 262 ಕಿ.ಮೀ. ಉದ್ದದ ಕಾಲುವೆ ನಿರ್ವಣವನ್ನು ತಮಿಳುನಾಡು ಸರ್ಕಾರ ಮುಂದುವರಿಸಿದೆ. ರಾಜ್ಯದ ಪಾಲಿನ ನೀರು ಬಳಕೆ ವಿಚಾರದಲ್ಲಿ ಇಂತಹದೊಂದು ದಿಟ್ಟ ನಿರ್ಧಾರವನ್ನು ಕರ್ನಾಟಕದಲ್ಲಿ ಹಿಂದಿನ ಸರ್ಕಾರಗಳು ಕೈಗೊಂಡಿಲ್ಲ.

ವಂಚಿತರ ನೆರವಿಗೆ ಸಂಚಕಾರ

ನೀರಾವರಿ ಯೋಜನೆಗಳಿಗೆ ಪ. ಜಾತಿ, ಪಂಗಡಗಳ ಉಪಯೋಜನೆಯಡಿ ಅನುದಾನ ಪಾತಾಳಕ್ಕೆ ಇಳಿದಿದೆ. ಹೊಸ ಕಾಯ್ದೆ ಜಾರಿ ಮಾಡಿದಾಗಿನಿಂದ ಎಸ್​ಸಿಪಿ, ಟಿಎಸ್​ಪಿಯಡಿ ಪ್ರತಿ ವರ್ಷ ಸಾವಿರದಿಂದ 1,500 ಕೋಟಿ ರೂ. ನೆರವು ನೀಡಲಾಗಿದೆ. ಕರೊನಾ ಸಂಕಷ್ಟದ ಅವಧಿ (2020-21, 866.45 ಕೋಟಿ ರೂ., 2021-22, 577.76)ಯಲ್ಲಿ ದೊಡ್ಡ ಪ್ರಮಾಣದ ಕಡಿತವೆಂದು ಗದ್ದಲ ಎಬ್ಬಿಸಲಾಗಿತ್ತು. ಆದರೆ 2023-24ರಲ್ಲಿ ಎಸ್​ಸಿಪಿ, ಟಿಎಸ್​ಪಿಯಡಿ ವ್ಯಯಿಸಿದ್ದು ಕೇವಲ 79.50 ಕೋಟಿ ರೂ., ವಂಚಿತ ಸಮುದಾಯಗಳ ನೆರವಿನಲ್ಲಿ ಬಹುದೊಡ್ಡ ಸಂಚಕಾರ ಉಂಟಾಗಿರುವುದನ್ನು ಅಧಿಕೃತ ಅಂಕಿ-ಅಂಶಗಳು ಸಾರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net