ಮಾಲಿನ್ಯದ ಚಕ್ರವ್ಯೂಹದಲ್ಲಿ ದೆಹಲಿ; ವಿಷಗಾಳಿಯ ಮುಸುಕು ಹೊದ್ದ ಮಹಾನಗರಿ

Untitled design (3)
Published on

ಚಳಿಗಾಲದ ಆರಂಭದಲ್ಲೇ ರಾಜಧಾನಿ ದೆಹಲಿಯ ಉಸಿರುಗಟ್ಟುತ್ತಿದೆ! ವಾಯುಮಾಲಿನ್ಯದ ಪ್ರಮಾಣ ತೀವ್ರವಾಗಿ ಏರಿಕೆಯಾಗಿದ್ದು, ಜನರು ಪರದಾಡುವಂತಾಗಿದೆ. ಎಕ್ಯೂಐ 448ರ ಗಡಿ ದಾಟಿರುವುದರಿಂದ ಅನಾರೋಗ್ಯದ ಸಮಸ್ಯೆಗಳು ತಲೆದೋರಿವೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಶೇಕಡ 15ರಷ್ಟು ಹೆಚ್ಚಾಗಿದ್ದು, ದಟ್ಟಣೆ ವ್ಯಾಪಕವಾಗಿದೆ. ದೆಹಲಿ ಮಾಲಿನ್ಯ ಸೃಷ್ಟಿಸಿರುವ ಅಧ್ವಾನ ಇತರ ಮಹಾನಗರಗಳ ಕಣ್ಣು ತೆರೆಸಬೇಕು. ದೆಹಲಿ ಮತ್ತೆ ಮತ್ತೆ ಈ ಸಮಸ್ಯೆಗೆ ಸಿಲುಕುತ್ತಿರುವುದೇಕೆ? ಪರಿಹಾರದ ಕ್ರಮಗಳು ವಿಫಲವಾಗುತ್ತಿರುವುದು ಏಕೆ? ಇಲ್ಲಿದೆ ವಿವರ.

ರೋಗಿಗಳಿಂದ ತುಂಬಿ ತುಳುಕುತ್ತಿರುವ ಆಸ್ಪತ್ರೆಗಳು

ಮಿತಿಮೀರಿದ ವಾಯುಮಾಲಿನ್ಯದಿಂದಾಗಿ ಅಕ್ಷರಶಃ ಧೃತಿಗೆಟ್ಟಿದೆ ಮಹಾನಗರಿ ದೆಹಲಿ. ನವೆಂಬರ್ ಎರಡನೇ ವಾರದಲ್ಲಿ ದೆಹಲಿ ವಾತಾವರಣ ತೀವ್ರ ಕಲುಷಿತಗೊಂಡಿದೆ. ಉಸಿರಾಟ ಸಂಬಂಧಿತ ಕಾಯಿಲೆಗಳು ಮಕ್ಕಳು-ವೃದ್ಧರೆನ್ನದೆ ಎಲ್ಲ ವಯೋಮಾನದವರನ್ನೂ ಬಾಧಿಸುತ್ತಿವೆ. ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಹೆಚ್ಚುತ್ತಲೇ ಇದೆ. ಸೋಮವಾರ ದೆಹಲಿಯಲ್ಲಿ ಎಕ್ಯೂಐ ಮಟ್ಟ 448ರ ‘ತೀವ್ರ ಅಪಾಯದ ಹಂತ’ ತಲುಪಿದೆ. ಭಾನುವಾರ 436 ಇತ್ತು. ಕಳೆದ ಮೂರು ದಿನಗಳಿಂದ ದಟ್ಟವಾದ ಮಂಜು ಹಾಗೂ ಹೊಗೆ ಮುಸುಕಿದ ವಾತಾವರಣ ಮುಂದುವರಿದಿದೆ. ಮಾಲಿನ್ಯದ ನಡುವೆಯೇ ತಾಪಮಾನ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ದೆಹಲಿ ಸುತ್ತಲಿನ ಪ್ರದೇಶಗಳಲ್ಲಿ ಕೃಷಿ ಜಮೀನಿನಲ್ಲಿ ಕೂಳೆ ಸುಡುತ್ತಿರುವ ಪ್ರಮಾಣವು ಗಮನಾರ್ಹ ಮಟ್ಟದಲ್ಲಿರುವ ಕಾರಣ, ಜನಜೀವನ ಮತ್ತಷ್ಟು ಅಸ್ತವ್ಯಸ್ತಗೊಂಡಿದೆ. ಸೋಮವಾರ ಗರಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಕನಿಷ್ಠ ಉಷ್ಣಾಂಶ 12 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 2024ರ ನವೆಂಬರ್​ನಲ್ಲೂ ದೆಹಲಿಯಲ್ಲಿ ಎಕ್ಯೂಐ ಪ್ರಮಾಣ 494ರ ಗಡಿ ದಾಟಿತ್ತು. ರಾಜಧಾನಿಯಲ್ಲಿರುವ 32 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 30ರಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಸರಾಸರಿ 420ರ ಗಡಿ ದಾಟಿದೆ. ದೆಹಲಿಯಲ್ಲಿ ಮತ್ತೆ ಮತ್ತೆ ಇಂಥ ಸ್ಥಿತಿ ಉದ್ಭವಿಸುತ್ತಿರುವ ಹಿನ್ನೆಲೆಯಲ್ಲಿ ಈ (ವಾಯುಮಾಲಿನ್ಯ) ಸಮಸ್ಯೆಗೆ ಶಾಶ್ವತ ಹಾಗೂ ಪರಿಣಾಮಕಾರಿ ಪರಿಹಾರ ಕಂಡುಹಿಡಿಯಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೂಳೆ ಸುಡುವಿಕೆ ಪ್ರಮಾಣ ಏರುಮುಖ

ಪಂಜಾಬ್ ಮತ್ತು ಹರಿಯಾಣದಲ್ಲಿ ಸ್ಯಾಟ್​ಲೈಟ್​ಗಳ ಕಣ್ಣಿಂದ ತಪ್ಪಿಸಿಕೊಳ್ಳಲು ರೈತರು ರಾತ್ರಿ ಹೊತ್ತಿನಲ್ಲಿ ಕೂಳೆ (ಕೃಷಿಬೆಳೆ ಅವಶೇಷ) ಸುಡುತ್ತಿದ್ದಾರೆ. ಇದೇ ವರ್ಷ ಸೆಪ್ಟೆಂಬರ್ 15ರಿಂದ ನವೆಂಬರ್ 7ರವರೆಗೆ ಪಂಜಾಬಿನಲ್ಲಿ ಇಂಥ 18 ಸಾವಿರ ಪ್ರಕರಣಗಳು ನಡೆದಿವೆ. ಹರಿಯಾಣದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ.

ವಿಷಗಾಳಿಯ ಪ್ರತಾಪ

ವಿಷಯುಕ್ತ ಗಾಳಿಯ ದಪ್ಪಪದರ ದೆಹಲಿ, ಗಾಜಿಯಾಬಾದ್​ಗೆ ಹೊದಿಕೆಯಾಗಿಬಿಟ್ಟಿದೆ. ಪರಿಣಾಮ, ಉಸಿರಾಟದ ತೊಂದರೆ, ಅಸ್ತಮಾ, ಕೆಮ್ಮು, ಶೀತ, ಶ್ವಾಸನಾಳಗಳ ಒಳಪೊರೆಯ ಉರಿಯೂತ ಹಾಗೂ ಅಲರ್ಜಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿವೆ. ಮುಂಚೆಯಿಂದಲೇ ಈ ಸಮಸ್ಯೆಗಳಿಂದ ಬಳಲುತ್ತಿದ್ದವರಲ್ಲಿ ಅವುಗಳ ತೀವ್ರತೆ ಹೆಚ್ಚಿದೆ. ವಾಯುಮಾಲಿನ್ಯದಿಂದ ಮಕ್ಕಳೇ ಹೆಚ್ಚು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ, ಸೋಂಕಿನ ಸಮಸ್ಯೆ ವಾಸಿಯಾಗುವುದಕ್ಕೂ ದೀರ್ಘಕಾಲ ತೆಗೆದುಕೊಳ್ಳುತ್ತಿರುವುದು ಜನರಲ್ಲಿ ಸಹಜವಾಗಿಯೇ ಆತಂಕ ಹುಟ್ಟಿಸಿದೆ. ಹಿಂದೆಲ್ಲ ಮಾಲಿನ್ಯ-ಸಂಬಂಧಿತ ಕಾಯಿಲೆಯ ಪ್ರಕರಣಗಳು ಶೇ. 15-20ರ ಆಸುಪಾಸಲ್ಲಿದ್ದರೆ, ಈಗ ಅದು ಶೇಕಡ 60ರವರೆಗೆ ಜಿಗಿದಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ.

ತುರ್ತು ಕ್ರಮಗಳು

  • ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
  • ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಸೌಲಭ್ಯ ನೀಡಲು ಕಂಪನಿಗಳಿಗೆ ದೆಹಲಿ ಸರ್ಕಾರ ಮನವಿ ಮಾಡಿದೆ. ಸರ್ಕಾರಿ ಕಚೇರಿಗಳ ಸಮಯ ಬದಲು (ಬೆಳಗ್ಗೆ 8.30ರಿಂದ ಸಂಜೆ 5).
  • ಸಮೂಹ ಸಾರಿಗೆ ಬಳಕೆಗೆ ಉತ್ತೇಜನ.

ಪರಿಹಾರದ ಹೆಜ್ಜೆ

  • ಕೈಗಾರಿಕೆಗಳು ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು.
  • ಜನರು ಸಾರ್ವಜನಿಕ ಸಾರಿಗೆ ಬಳಕೆಗೆ ಹೆಚ್ಚು ಒತ್ತು ನೀಡುವುದು.
  • ರೈತರು ಕೂಳೆ ವಿಲೇವಾರಿಗೆ ಪರ್ಯಾಯ ಕ್ರಮ ಅನುಸರಿಸುವುದು.
  • ವಾಯು ಗುಣಮಟ್ಟ ಸೂಚ್ಯಂಕ ಹೆಚ್ಚಿಸಲು ಮರಗಿಡಗಳನ್ನು ಬಳಸುವ ಪ್ರಯತ್ನಗಳು ಆಂದೋಲನ ಸ್ವರೂಪದಲ್ಲಿ ನಡೆಯಬೇಕು.
  • ವಾಯುಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದ ನೀತಿಗಳು ಕೂಡ ಇನ್ನಷ್ಟು ಬಿಗಿಯಾಗಬೇಕು.
  • ವಾಸಿಸುವ ಪ್ರದೇಶ ಹಾಗೂ ಸುತ್ತಲಿನ ವಾತಾವರಣದಲ್ಲಿ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಪ್ರತಿ ಯೊಬ್ಬರೂ ವೈಯಕ್ತಿಕ ಮತ್ತು ಸಾಂಸ್ಥಿಕ ವಾಗಿ ಕೆಲಸ ಮಾಡುವುದು ಅಗತ್ಯ.

ಆತಂಕಕಾರಿ ಸಂಗತಿಗಳು

ಭಾರತದಲ್ಲಿ ವಾಯುಮಾಲಿನ್ಯದ ಪ್ರಮಾಣ ಭೌಗೋಳಿಕವಾಗಿ ವಿಸ್ತರಣೆಯಾಗಿದೆ ಮತ್ತು ಉತ್ತರ ಭಾರತದಲ್ಲಿ ಇದೇ ಪ್ರಮಾಣ ಮುಂದುವರಿದರೆ ಆ ಭಾಗದ ಜನರು ತಮ್ಮ ಆಯುಷ್ಯದಲ್ಲಿ ಒಂಬತ್ತಕ್ಕೂ ಹೆಚ್ಚಿನ ವರ್ಷಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕಕಾರಿ ವಿಚಾರವನ್ನು ಷಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್​ಸ್ಟಿಟ್ಯೂಟ್​ನ 2022ನೇ ವರ್ಷದ ಅಧ್ಯಯನ ವರದಿ ಬಹಿರಂಗಗೊಳಿಸಿತ್ತು. ಪ್ರತಿ 10 ಲಕ್ಷ ಜನರಲ್ಲಿ 18 ಸಾವಿರ ಜನರು ವಾಯುಮಾಲಿನ್ಯದ ಕಾರಣ ವಿವಿಧ ರೋಗ, ತೊಂದರೆಗೆ ಸಿಲುಕಿ ಮೃತರಾಗುತ್ತಿದ್ದಾರೆ. ಇದು ವಿಶ್ವದಲ್ಲೇ ಗರಿಷ್ಠ ಮಟ್ಟವಾಗಿದೆ ಎಂಬುದು ಕಳವಳದ ಸಂಗತಿ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ವಾಯುಮಾಲಿನ್ಯ ಪ್ರಮಾಣದಲ್ಲಿ ವಿಪರೀತ ಹೆಚ್ಚಳ ಕಂಡುಬಂದಿದೆ. ಈ ಎರಡೂ ರಾಜ್ಯಗಳಲ್ಲಿ ವ್ಯಕ್ತಿಯ ಸರಾಸರಿ ಆಯಸ್ಸು 2.5ರಿಂದ 2.9 ವರ್ಷಗಳಷ್ಟು ಕಡಿಮೆಯಾಗಲು ವಾಯುಮಾಲಿನ್ಯವೇ ಕಾರಣವಾಗಿದೆ. ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅಪಾಯದ ಮಟ್ಟ ಮೀರುತ್ತಿದೆ. ಭಾರತದ ಸುಮಾರು 14 ಕೋಟಿ ಜನರು ಎಕ್ಯೂಐನ ಅಪಾಯಕಾರಿ ಮಟ್ಟಕ್ಕಿಂತ 10ರಿಂದ 15 ಪಟ್ಟು ಹೆಚ್ಚು ಮಾಲಿನ್ಯ ಹೊಂದಿರುವ ಗಾಳಿ ಸೇವಿಸುತ್ತಿದ್ದಾರೆ. ಕೈಗಾರಿಕೆಗಳಿಂದ ಬರುವ ಕಲುಷಿತ ಹೊಗೆಯಿಂದ ಶೇಕಡ 50, ವಾಹನಗಳಿಂದ ಬರುವ ಹೊಗೆಯಿಂದ ಶೇಕಡ 25, ಬೆಳೆಯ ಕಳೆ ಸುಡುವುದರಿಂದ ಶೇಕಡ 15, ಕಸ ಸುಡುವುದರಿಂದ ಶೇ. 15ರಷ್ಟು ವಾಯುಮಾಲಿನ್ಯವಾಗುತ್ತಿದೆ ಎಂಬುದು ತಜ್ಞರ ಅಂಬೋಣ. ನಾವು ಉಸಿರಾಡುವ ಗಾಳಿಯಲ್ಲಿ ಗಂಧಕದ ಡೈ ಆಕ್ಸೈಡ್, ಸಾರಜನಕ ಡೈಆಕ್ಸೈಡ್, ಇಂಗಾಲದ ಮೊನಾಕ್ಸೈಡ್ (ಇದಂತೂ ಭಾರಿ ವಿಷಕಾರಕ) ಸೀಸ, ಜತೆಗೆ ಕ್ಲೋರೋಫೋರಾ ಕಾರ್ಬನ್ (ಇದು ಓಜೋನ್ ಪದರಕ್ಕೆ ಹಾನಿ ಮಾಡುತ್ತದೆ) ಸೇರಿಕೊಂಡಿವೆ. ವಾಯುಮಾಲಿನ್ಯ ಗಂಭೀರ ಸಮಸ್ಯೆ ಎಂದು ಪರಿಗಣಿಸಿ, ಪರಿಹಾರದ ದಾರಿಯಲ್ಲಿ ಬಲವಾದ ಹೆಜ್ಜೆಗಳನ್ನು ಇರಿಸದಿದ್ದರೆ, ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಅಪಾಯ ಎದುರಿಸಬೇಕಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಅಲ್ಲದೆ, ಈ ನಿಟ್ಟಿನಲ್ಲಿ ಜನರ ಸಹಕಾರ ಸಿಗುವವರೆಗೆ, ಜನರು ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ಮಾಡಿಕೊಳ್ಳುವವರೆಗೆ ದೊಡ್ಡ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ.

ಕರ್ನಾಟಕ ಸದ್ಯಕ್ಕೆ ಸುರಕ್ಷಿತ

ರಾಷ್ಟ್ರ ರಾಜಧಾನಿ ದೆಹಲಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಮಾಲಿನ್ಯ ಪ್ರಮಾಣದಲ್ಲಿ ಸುರಕ್ಷಿತವಾಗಿದೆ. ಕರ್ನಾಟಕ ಸೇರಿ ದಕ್ಷಿಣ ಭಾರತದ ನಗರಗಳಲ್ಲಿ ಕಡಿಮೆ ವಾಯುಮಾಲಿನ್ಯವಿದೆ. ರಾಜ್ಯದ ಇತರ ನಗರಗಳಲ್ಲೂ ವಾಯುಮಾಲಿನ್ಯ ಮಿತಿ ಮೀರಿಲ್ಲ. ಬೆಂಗಳೂರಿನಲ್ಲಿ ಸೋಮವಾರ ಎಕ್ಯೂಐ ಮಟ್ಟ 115 ಇತ್ತು. ಕೆಲವು ವರ್ಷಗಳ ಮುಂಚೆ ಬೆಂಗಳೂರು ಉದ್ಯಾನನಗರಿ ಎಂಬ ಹೆಗ್ಗಳಿಕೆಯನ್ನು ಹೊಂದಿತ್ತು. ಮರಗಳ ಸಂಖ್ಯೆಯೂ ಗಣನೀಯವಾಗಿತ್ತು. ಆದರೆ, ಈಗ ವಾಹನಗಳ ಸಂಖ್ಯೆಯೇ 1 ಕೋಟಿಯ ಗಡಿ ದಾಟಿದ್ದು, ಸಂಚಾರಸಿಕ್ಕು, ಮಾಲಿನ್ಯದ ಪ್ರಮಾಣ ಕಂಗೆಡಿಸಿದೆ. ರಸ್ತೆಗಳ ಅಗಲೀಕರಣ, ಹೊಸ ಬಡಾವಣೆಗಳು, ನಿರ್ಮಾಣ ಕಾಮಗಾರಿಗಳು, ಅಭಿವೃದ್ಧಿ ಯೋಜನೆಗಳು ಹೀಗೆ ವಿವಿಧ ಕಾರಣಗಳಿಗಾಗಿ ಮರಗಳ ಬಲಿ ನಡೆಯುತ್ತಲೇ ಇದೆ. ಒಂದೆಡೆ ಹಸಿರು ಕಡಿಮೆಯಾಗುತ್ತಿದ್ದರೆ, ಮತ್ತೊಂದೆಡೆ ಹೆಚ್ಚುತ್ತಿರುವ ವಾಹನಗಳ ಮೂಲಕ ವಾಯುಮಾಲಿನ್ಯ, ಶಬ್ದಮಾಲಿನ್ಯ ಏರಿಕೆ ಆಗುತ್ತಿದೆ. ಇದು ಹೀಗೇ ಮುಂದುವರಿದರೆ ಬೆಂಗಳೂರು ದೆಹಲಿಯ ಸ್ಥಿತಿಯನ್ನೇ ತಂದುಕೊಳ್ಳಬಹುದು ಎಂಬ ಆತಂಕ ಕಾಡುತ್ತಿದೆ. ಪರಿಸ್ಥಿತಿ ತೀವ್ರವಾಗಿ ಹದಗೆಡುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ. ಮಾಲಿನ್ಯ ನಿಯಂತ್ರಣ ಮತ್ತು ಪರಿಸರ ಸಂರಕ್ಷಣೆಯ ಕ್ರಮಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬರಬೇಕಿದೆ. ಗಿಡ-ಮರಗಳನ್ನು ಬೆಳೆಸುವ ಸರ್ಕಾರದ ಯೋಜನೆಗಳು ಕಾಗದದಲ್ಲೇ ಉಳಿಯದೆ, ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು.

ಮಾಸ್ಕ್ ಹಾಕಿಕೊಳ್ಳಿ, ಕಿಟಕಿ ಮುಚ್ಚಿ!

ದೆಹಲಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ತಿಳಿಸಿರುವ ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಫೋರ್​ಕಾಸ್ಟಿಂಗ್ ಆಂಡ್ ರಿಸರ್ಚ್ ಸಂಸ್ಥೆ ಮಾಸ್ಕ್ ಹಾಕಿಕೊಂಡು ಸಂಚರಿಸುವಂತೆ ಮತ್ತು ಮನೆಯ ಕಿಟಕಿಗಳನ್ನು ಮುಚ್ಚುವಂತೆ ಮನವಿ ಮಾಡಿದೆ. ಮಕ್ಕಳು ಮತ್ತು ವಯಸ್ಸಾದವರು ಹೆಚ್ಚು ಸಮಯ ಹೊರಗಡೆ ಕಳೆಯದಂತೆ, ವಾಹನಗಳ ಬಳಕೆ ತಗ್ಗಿಸುವಂತೆ ಸೂಚಿಸಿದೆ.

ಜನರ ಆಕ್ರೋಶ...

ವಾಯುಮಾಲಿನ್ಯ ನಿಯಂತ್ರಿಸುವಲ್ಲಿ ಸರ್ಕಾರದ ನೀತಿಗಳು ವಿಫಲವಾಗಿವೆ ಎಂದು ಆರೋಪಿಸಿ ಜನರು ಭಾನುವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ‘ಬದುಕಲು ನಮಗೆ ಶುದ್ಧ ಗಾಳಿ ಕೊಡಿ’ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು, ಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸರು ಪ್ರತಿಭಟ ನಾಕಾರರನ್ನು ವಶಕ್ಕೆ ಪಡೆದು, ಬಿಡುಗಡೆಗೊಳಿಸಿದರು.

ಭಾರತದಲ್ಲಿ ನಿಯಂತ್ರಣ ಕ್ರಮಗಳು

  1. ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮ ಮತ್ತು ರಾಷ್ಟ್ರ ರಾಜಧಾನಿ ವಲಯದ ವಾಯು ಗುಣಮಟ್ಟ ಆಯೋಗ ರಚನೆ.
  2. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಅಧಿಕಾರ.
  3. ಗುಜರಾತಿನಿಂದ ದೆಹಲಿಯವರೆಗಿನ ಅರಾವಳಿ ಬೆಟ್ಟಗಳ 155 ಕಿ.ಮೀ. ವ್ಯಾಪ್ತಿಯಲ್ಲಿ ಗಿಡಗಳನ್ನು ನೆಡುವ ಬೃಹತ್ ಯೋಜನೆ ಆರಂಭವಾಗಿದೆ.
  4. ಸಮ ಮತ್ತು ಬೆಸ ವಾಹನ ಗಳ ಸಂಚಾರದ ಪ್ರಯೋ ಗವೂ ಈ ಹಿಂದೆ ನಡೆದಿದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net