ಯಕ್ಷಗಾನದ ಭ್ರಾಮರಿಗೆ ದಶಮಾನೋತ್ಸವ ಸಡಗರ

Vihara
Published on

ಮುಂಬಯಿಯಲ್ಲಿ ಯಕ್ಷಗಾನದ ವೈಭವದ ಕುರಿತು ಹೇಳಹೊರಡುವಾಗ ತಕ್ಷಣಕ್ಕೆ ನೆನಪಿಗೆ ಬರುವ ಚಿರಪರಿಚಿತ ಹೆಸರು ಕಟೀಲು ಸದಾನಂದ ಶೆಟ್ಟಿ ಹಾಗೂ ಅವರು ಕೃಷ್ಣರಾಜ ಶೆಟ್ಟಿ ಅವರ ಜತೆ ಸೇರಿ 2010ರಲ್ಲಿ ಸ್ಥಾಪಿಸಿದ ಭ್ರಾಮರಿ ಯಕ್ಷಗಾನ ನೃತ್ಯ ಕಲಾನಿಲಯ ಚಾರಿಟೆಬಲ್ ಟ್ರಸ್ಟ್. ಅದಕ್ಕೀಗ ದಶಮಾನೋತ್ಸವದ ಸಂಭ್ರಮ.

ಕನ್ನಡದ ಹೆಮ್ಮೆಯ ಕಲೆ ಯಕ್ಷಗಾನ, ರಾಜ್ಯದ, ದೇಶದ ಗಡಿಯಾಚೆಗೂ ಪ್ರದರ್ಶನಗೊಳ್ಳುತ್ತ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಲೇ ಬಂದಿದೆ. ಶತಮಾನದ ಹಿಂದೆಯೇ ಮುಂಬಯಿಯಂಥ ಮಾಯಾನಗರಿಗೂ ಯಕ್ಷಗಾನದ ಗೆಜ್ಜೆಯ ನಾದ ಪಸರಿಸಿದೆ.

ಮುಂಬಯಿ ಎನ್ನುವುದು ಎಂದೂ ನಿದ್ರಿಸದ ನಗರ. ಅಲ್ಲಿ ಯಕ್ಷಗಾನದ ದಿಗಿಣಕ್ಕೆ ರಂಗಸ್ಥಳ ಸಮರ್ಪಕವಾಗಿ ಸಜ್ಜ್ಜುಗೊಂಡಿದೆ ಎನ್ನುವುದೇ ಕೌತುಕದ ಸಂಗತಿ. ಮೇಳದ ರೀತಿಯಲ್ಲಿ ಅಲ್ಲದಿದ್ದರೂ, ಹವ್ಯಾಸಿ ತಂಡಗಳನ್ನು ಕಟ್ಟಿಕೊಂಡು, ಆಟಕ್ಕೆ ಬೇಕಾದ ಸರ್ವ ಪರಿಕರಗಳನ್ನು ಇಲ್ಲಿಯೇ ಹೊಂದಿಸಿಕೊಂಡು, ಅವಿರತ ತಾಲೀಮು ನಡೆಸಿ , ಸ್ಥಳೀಯರೇ ಬಣ್ಣ ಹಚ್ಚಿ ನೂರಾರು ಪ್ರಯೋಗಗಳನ್ನು ಯಶಸ್ವಿಯಾಗಿ ಅಲ್ಲಿ ಪ್ರದರ್ಶಿಸುತ್ತಿದ್ದಾರೆ.

ಮುಂಬಯಿಯಲ್ಲಿ ಕರ್ನಾಟಕ ಕರಾವಳಿ ಮೂಲದವರು ದೊಡ್ಡಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ತುಳು ಭಾಷಿಕರಾದ ಬಂಟ ಜನಾಂಗದವರ ಸಾಧನೆ ಅಸಾಮಾನ್ಯ. ಉದ್ಯೋಗ ಅರಸಿ ಬಂದ ಅನೇಕ ಶ್ರಮಜೀವಿಗಳ ಸಾಧನೆಯ ಕಥೆ ಇಲ್ಲಿ ಹೆಜ್ಜೆ ಹೆಜ್ಜೆಗೂ ಸಿಗುತ್ತದೆ. ಉದ್ಯೋಗದ ಜತೆ ಜತೆಗೇ, ತಮ್ಮ ನೆಲದ ಸಮಗ್ರ ಕಲೆಯೆನಿಸಿದ ಯಕ್ಷಗಾನವನ್ನು ಗಾಢವಾಗಿ ಪ್ರೀತಿಸುತ್ತ, ಸಂಭ್ರಮಿಸುತ್ತಿರುವುದು ಆ ಕನ್ನಡಿಗರ ಕಲಾಪ್ರೀತಿಯ ದ್ಯೋತಕ.

ನಮ್ಮೂರ ಬಯಲುಗಳಲ್ಲಿ ಭರ್ಜರಿ ಪ್ರದರ್ಶನ ಕಾಣುವ ಯಕ್ಷಗಾನಕ್ಕೆ ಅದರ ನೆಲವಲ್ಲದ ಮುಂಬಯಿಯಲ್ಲಿ ನೆಲೆ ಕಲ್ಪಿಸುವುದು ಸುಲಭವಲ್ಲ. ಆಟಕ್ಕೆ ಬೇಕಾದ ವೇಷಭೂಷಣ, ಹಿಮ್ಮೇಳ ಇತ್ಯಾದಿ ಸರ್ವ ಪರಿಕರಗಳನ್ನು ಅಲ್ಲಿಯೇ ಹೊಂದಿಸಿಕೊಳ್ಳಬೇಕು. ಪ್ರದರ್ಶನದ ಸ್ಥಳಕ್ಕೂ ಬಾಡಿಗೆ ಕೊಡಬೇಕು. ಇಂಥ ಸವಾಲಿದ್ದರೂ ಕರಾವಳಿ ಭಾಗದಿಂದ ಮುಂಬಯಿಗೆ ವಲಸೆ ಬಂದ ಅನೇಕರಿಗೆ ಇರುವ ಕಲಾಪ್ರೀತಿ ಆ ಸವಾಲಿಗೆ ಸೆಡ್ಡು ಹೊಡೆದು ಗೆಲುವು ಸಾಧಿಸಿದೆ. ಹತ್ತು ಹಲವು ಯಕ್ಷಗಾನ ಕಲಾಮಂಡಳಿಗಳು ಅಲ್ಲಿವೆ. ಯಾವ ವೃತ್ತಿಮೇಳಕ್ಕೂ ಕಡಿಮೆ ಇಲ್ಲದಂತೆ ಮರಾಠಿ ನೆಲದಲ್ಲಿ ಯಕ್ಷಗಾನ ಆಖ್ಯಾನಗಳನ್ನು ಅನಾವರಣಗೊಳಿಸುತ್ತಿವೆ.

ಅಂತಹ ಪ್ರಮುಖ ತಂಡಗಳಲ್ಲಿ ಭ್ರಾಮರಿ ಕೂಡ ಒಂದು. ಅದಕ್ಕೆ ಈಗ ಹತ್ತು ವರ್ಷವಷ್ಟೇ. ಆದರೆ, ಸಂಸ್ಥಾಪಕ ಸದಾನಂದ ಶೆಟ್ಟಿ ಅವರ ಸಾಧನೆಯ ಹಿಂದೆ ನಾಲ್ಕು ದಶಕಗಳ ಕಠಿಣ ಪರಿಶ್ರಮವಿದೆ. ಮುಂಬಯಿಯಲ್ಲಿ ಯಕ್ಷಗಾನವನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಅವರ ಕಾಲುಗಳು ನಡೆದಾಡಿ ಸೋತಿವೆ, ಬಿಸಿಲಿನ ಝುಳದಲ್ಲಿ ಬಾಯಾರಿದಾಗ ಒಂದು ಗುಟುಕು ತಂಪು ಪಾನೀಯಕ್ಕೆ ಒಣಗಿದ ನಾಲಗೆ ಹಾತೊರೆದಿದೆ, ಪ್ರದರ್ಶನಕ್ಕೆ ಕಾಸು ಕೂಡಿಸಲು ಹೆಣಗಾಡಿದ್ದಾರೆ. ಆದರೆ ಅವೆಲ್ಲವನ್ನೂ ಸಹಿಸಿಕೊಂಡು ಯಕ್ಷಗಾನಕ್ಕೆ ಮುಡಿಪಾಗಿಸಿಕೊಂಡು ಯಶಸ್ವಿಯಾದವರು ಸದಾನಂದಶೆಟ್ಟರು. ಹೊಟೆಲ್​ನಲ್ಲಿ ನೌಕರನಾಗಿ ಇದ್ದುಕೊಂಡೇ, ಯಕ್ಷಗಾನದ ಚೌಕಿಯೊಳಗೆ ಬಣ್ಣ ಹಚ್ಚಲು ಕಲಾವಿದರನ್ನು ಸಜ್ಜುಗೊಳಿಸಿರುವ ಇವರ ಕಹಾನಿ ಕೂಡ ಕುತೂಹಲಕಾರಿ. ಯಕ್ಷಗಾನದ ನಂಟಿನಿಂದಾಗಿ ಅನ್ನ ಕೊಡುವ ಕೆಲಸ ಕಳೆದುಕೊಳ್ಳಬೇಕಾದ ಸ್ಥಿತಿಯೂ ಹತ್ತಾರು ಬಾರಿ ಇವರಿಗೆ ಎದುರಾಗಿತ್ತಂತೆ. ಹಾಗೆ ನೋಡಿದರೆ ಶೆಟ್ಟರು ಮುಂಬಯಿಗೆ ಬಂದಿದ್ದೇ ಯಕ್ಷಗಾನಕ್ಕಾಗಿ!

ಯಕ್ಷಗಾನಕ್ಕಾಗಿಯೇ ಊರು ಬಿಟ್ಟರು!: ಯಕ್ಷಗಾನದ ವ್ಯಾಮೋಹಕ್ಕೆ ತಂದೆ ದಾಸು ವಾಸು ಶೆಟ್ಟಿಯಾಗಲೀ ತಾಯಿ ಲಕ್ಷ್ಮಿ ದಾಸು ಶೆಟ್ಟಿಯಾಗಲೀ ಪೋ›ತ್ಸಾಹ ಕೊಡಲಿಲ್ಲ. ಹೀಗಾಗಿ ತನ್ನ ಪ್ರವೃತ್ತಿಯನ್ನು ವೃತ್ತಿಯೊಂದಿಗೆ ಜೋಡಿಸಿಕೊಳ್ಳುವ ಸಲುವಾಗಿಯೇ ಕಟೀಲನ್ನು ಬಿಟ್ಟು 1977ರಲ್ಲಿ ಮುಂಬಯಿ ಸೇರಿದರು. ಹೊಟೇಲ್ ಒಂದರಲ್ಲಿ ಕೆಲಸಕ್ಕೆ ಸೇರುತ್ತಿದ್ದಂತೆಯೇ ಮುಂಬಯಿಯ ಜೋಗೇಶ್ವರಿಯಲ್ಲಿದ್ದ ಶ್ರೀ ರಾಘವೇಂದ್ರ ಯಕ್ಷಗಾನ ಕಲಾಮಂಡಳಿಯಲ್ಲಿ್ಲ ರಮೇಶ್ ಸುವರ್ಣ ಅವರಿಂದ ಯಕ್ಷಗಾನದ ನಾಟ್ಯ -ಕುಣಿತ-ದಿಗಿಣ ಮೊದಲಾದವುಗಳನ್ನು ಕಲಿತುಕೊಂಡರು. ಅರ್ಥಗಾರಿಕೆಯನ್ನು ವಿದ್ವಾನ್ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರಲ್ಲಿ ಅಭ್ಯಾಸ ಮಾಡಿದರು. ಯಕ್ಷಗಾನದ ಸರ್ವಾಂಗ ಪಾಂಡಿತ್ಯವನ್ನು ಬೊಟ್ಟಿಕೆರೆ ಪುರುಷೋತ್ತಮ ಪೂಂಜಾರಿಂದ ಕಲಿತುಕೊಂಡರು. ನಂತರ ವೇಷಧಾರಿಯಾಗಿ ಹಲವಾರು ಮಂಡಳಿಗಳಲ್ಲಿ ತೊಡಗಿಸಿಕೊಂಡ ಶೆಟ್ಟರು, ಮುಂಬಯಿಯ ಪ್ರಸಿದ್ಧ ಯಕ್ಷಗಾನ ತಂಡಗಳಾದ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ, ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ, ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾ ಮಿತ್ರ ಮಂಡಳಿ ಮೊದಲಾದ ಕಡೆ ಬಣ್ಣ ಹಚ್ಚಿದರು. ಆಟಗಳಲ್ಲಿ ಇವರು ನಿರ್ವಹಿಸುತ್ತಿದ್ದ ವಿಷ್ಣು, ಅಷ್ಟ ಭುಜೆ ದೇವಿ, ಈಶ್ವರ, ಕೌರವ, ಅಭಿಮನ್ಯು ಮೊದಲಾದ ಪಾತ್ರಗಳು ಅಪಾರ ಜನ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದವು.

ಕ್ರಮೇಣ ತಾವೇ ಯಕ್ಷಗಾನ ಸಂಸ್ಥೆ ಶುರು ಮಾಡುವ ಕನಸು ಕಂಡರು. ಜಾಗತಿಕ ಬಂಟ್ಸ್ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಮುಂಬಯಿಯ ಖ್ಯಾತ ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ ಹಾಗೂ ಬಿಲ್ಲವ ಅಸೋಸಿಯೇಷನ್ ಮುಂಬಯಿಯ ಅಧ್ಯಕ್ಷ ಜಯ ಸಿ. ಸುವರ್ಣ ಅವರ ಸಹಕಾರದೊಂದಿಗೆ ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್ ಟ್ರಸ್ಟ್ ಮೂರ್ತರೂಪ ಪಡೆಯಿತು. ಈ ಸಂಸ್ಥೆಯ ವತಿಯಿಂದ 2010ರ ಫೆ. 27ರಂದು ಮೊದಲ ಯಕ್ಷಗಾನ ಪ್ರದರ್ಶನ ಶಬರಿಮಲೆ ಅಯ್ಯಪ್ಪ ಮತ್ತು ಯಕ್ಷರೂಪಕ ಹರಿಮಾಯೆ ಪ್ರದರ್ಶನಗೊಂಡು ಜನಮನ ಸೂರೆಗೊಂಡಿತು. ನೋಡನೋಡುತ್ತಿದ್ದಂತೆಯೇ ಮುಂಬಯಿಯ ಸುಮಾರು 14 ಕಡೆ ಈ ಸಂಸ್ಥೆ ತನ್ನ ಶಾಖೆಗಳನ್ನು ತೆರೆಯಿತು. ಶೆಟ್ಟರ ಮಾರ್ಗದರ್ಶನದಲ್ಲಿ ಭ್ರಾಮರಿ ಸಂಸ್ಥೆ ಸಾವಿರಾರು ಕಲಾವಿದರನ್ನು ಹುಟ್ಟುಹಾಕಲಾರಂಭಿಸಿತು.

ಮಿಂಚುತ್ತಿರುವ ಮಹಿಳೆಯರು: ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ, ಕಲಿತಿರುವವರನ್ನು ಕನ್ನಡ ಭಾಷೆಯ ಯಕ್ಷಗಾನದ ಅರ್ಥಗಾರಿಕೆಗೆ ತಯಾರು ಮಾಡುವ ಸವಾಲನ್ನೂ ಸದಾನಂದ ಶೆಟ್ಟಿ ಸಶಕ್ತವಾಗಿ ನಿಭಾಯಿಸಿದರು. ಕಲಾವಿದರನ್ನು ಸಜ್ಜುಗೊಳಿಸುವಲ್ಲಿ ಸದಾನಂದ ಶೆಟ್ಟರ ತಾಳ್ಮೆ, ನೈಪುಣ್ಯ, ಅರ್ಪಣಾಭಾವ ಪ್ರಶಂಸನೀಯ. ಪ್ರತಿನಿತ್ಯ ತಾಲೀಮು ನಡೆಸುವ ಸಲುವಾಗಿ, ತಾವೇ ಭಾಗವತಿಕೆ ಕಲಿತುಕೊಂಡರು. ಇವರ ತಂಡದಲ್ಲಿ ಮಹಿಳೆಯರು ಕೂಡ ಇರುವುದು ವಿಶೇಷ.

ಭ್ರಾಮರಿ ಯಕ್ಷ ಕಲಾಕೇಂದ್ರಗಳಲ್ಲಿ ಮಾತ್ರವಲ್ಲದೆ, ಶೆಟ್ಟರು ಥಾಣೆ, ಮೀರಾ ರೋಡ್, ದಹಿಸರ್, ಭಿವಂಡಿ, ದೊಂಬಿವಿಲಿ, ವಸಾಯಿ, ಕಾಂದಿವಲಿ, ಕಲ್ಯಾಣ್, ವಾಪಿ ಹೀಗೆ ಮುಂಬಯಿ ಸಮೀಪದ ಇತರ ಪ್ರದೇಶಗಳಿಗೂ ತೆರಳಿ ಯಕ್ಷಗಾನದ ತರಬೇತಿ ನೀಡುತ್ತಿದ್ದಾರೆ. ಇವರ ಹೊಸ ಹೊಸ ಪ್ರಸಂಗಗಳು ಮಹಾರಾಷ್ಟ್ರದಾದ್ಯಂತ ಪ್ರದರ್ಶನ ಕಂಡು ಜನಮನ್ನಣೆ ಗಳಿಸಿವೆ. ಭ್ರಾಮರಿ ಸಂಸ್ಥೆಯ ‘ಕೃಷ್ಣಂ ವಂದೇ ಜಗದ್ಗುರುಂ’ ಅನ್ನುವ ಹಿಂದಿ ಭಾಷೆಯ ಯಕ್ಷಗಾನ ಪ್ರಯೋಗ, ಹಿಂದಿ ಭಾಷಿಗರ ಎದೆಯಲ್ಲಿ ತಲ್ಲಣ ಸೃಷ್ಟಿಸಿದೆ. ಇದಲ್ಲದೆ ಮರಾಠಿ ಭಾಷೆಯಲ್ಲಿ ಮಹಿಷ ಮರ್ದಿನಿ, ತುಳು ಭಾಷೆಯಲ್ಲಿ ಲವ ಕುಶ ಜತೆಗೇ ಇತರ ಹಲವಾರು ಸಾಂಪ್ರದಾಯಿಕ ಯಕ್ಷಗಾನ ಪ್ರಸಂಗಗಳು ಮತ್ತು ತಾಳಮದ್ದಳೆಗಳು ಕೂಡ ದಶಮಾನೋತ್ಸವದ ವಿಶೇಷ ಪ್ರದರ್ಶನಗಳ ಪಟ್ಟಿಯಲ್ಲಿ ಸೇರಿಕೊಂಡಿವೆ.

ಆಧುನಿಕತೆಯ ಟಚ್

ಯಕ್ಷಗಾನಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆಯ ಸಾಧ್ಯತೆಯನ್ನು ಕೂಡ ಪ್ರಯೋಗಾತ್ಮಕ ನೆಲೆಯಲ್ಲಿ ಬಳಸಿ ಯಶಸ್ವಿಯಾಗಿರುವುದು ಗಮನಾರ್ಹ. ಅಂತಹ ಒಂದು ಪ್ರಯೋಗವನ್ನು ಹರಿಮಾಯೆ ಮತ್ತು ಮಹಿಷಮರ್ದಿನಿ ಪ್ರಸಂಗಗಳಲ್ಲಿ ಸದಾನಂದ ಶೆಟ್ಟಿ ಬಳಸಿದ್ದರು. ಈ ಎರಡು ಯಕ್ಷಗಾನಗಳನ್ನು ಚಿತ್ರೀಕರಿಸಿ ಗ್ರಾಫಿಕ್ಸ್ ಮತ್ತು ಅನಿಮೇಷನ್ ಬಳಸಿ ಸಿ.ಡಿ. ಹೊರತಂದರು. ಬಹುಶಃ ಈ ಪ್ರಯೋಗ ಯಕ್ಷಲೋಕದ ಒಂದು ಅಪರೂಪದ ಪ್ರಯತ್ನ.

ಮುಂದಿನ ತಿಂಗಳು ಸಮಾರೋಪ

ಏಪ್ರಿಲ್ 18ರಂದು ದಶಮಾನೋತ್ಸವದ ಸಮಾರೋಪ ಸಮಾರಂಭ ಆಯೋಜನೆಗೊಂಡಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಪಾಲ್ಗೊಳ್ಳುತ್ತಾರೆ. ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದ ಜಬ್ಬಾರ್ ಸಮೋ ಅವರಿಗೆ ಯಕ್ಷ ಭ್ರಾಮರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.

| ಸುಧೀರ್

(ಪೂರಕ ಮಾಹಿತಿ- ವಿದ್ಯಾಧರ ಶೆಟ್ಟಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net