ಭಾರತೀಯ ಚಿಕಿತ್ಸಾ ಪದ್ಧತಿಯತ್ತ ಮರಳಬೇಕಿದೆ...

aurveda mar 20
Published on

ನಾವು ಸ್ವಾಭಾವಿಕವಾದ ಜೀವನವನ್ನು ನಡೆಸಬೇಕು. ಕೃತ್ರಿಮವಾದ ಜೀವನವನ್ನಲ್ಲ. ಮನುಷ್ಯನ ಮೂಲ ಪ್ರವೃತ್ತಿ ಆನಂದವೇ ಆಗಿದೆ. ಆದರೆ ಮನುಷ್ಯ ಆನಂದ, ನೆಮ್ಮದಿ ಯಾವುದೆಂದು ಅರ್ಥೈಸಿಕೊಳ್ಳದೆ ಅದು ಬೇಕೆಂದು ಪರಿತಪಿಸುತ್ತಿದ್ದಾನೆ. ನಮ್ಮೊಳಗೆ ಇರುವ ಆನಂದದ ಸ್ವರೂಪವನ್ನು ಅರಿಯದೆ ಅದಕ್ಕಾಗಿ ನಿರಂತರ ಹೋರಾಟ ಮಾಡುತ್ತಿದ್ದಾನೆ.

ಭಾರತೀಯ ಚಿಕಿತ್ಸಾ ಪದ್ಧತಿ ಅನಾದಿಕಾಲದಿಂದ ಬೆಳೆದುಬಂದ ವೈಜ್ಞಾನಿಕ ಪದ್ಧತಿಯಾಗಿದೆ. ಇದು ಋಷಿಮುನಿಗಳ ಚಿಂತನೆಯ ಪ್ರಭಾವದಿಂದ ಮತ್ತು ಪ್ರಾಯೋಗಿಕ ಅನುಭವದಿಂದ ಉದಯಿಸಿದ್ದು. ಕೆಲವು ವರ್ಷಗಳ ಹಿಂದೆ ಭಾರತೀಯ ಚಿಕಿತ್ಸಾ ಪದ್ಧತಿ ಅರ್ಥಾತ್ ಆಯುರ್ವೇದ, ಪ್ರಕೃತಿಚಿಕಿತ್ಸೆ ಎಂದರೆ ಜನರು ಮೂಗು ಮುರಿಯುತ್ತಿದ್ದರು. ಯಾಕೆಂದರೆ ಅದು ವೈಜ್ಞಾನಿಕವಾದದ್ದಲ್ಲ ಎಂಬ ಭ್ರಮೆ ಮತ್ತು ಪಶ್ಚಿಮದೇಶಗಳು ಹೇಳಿದ್ದೆಲ್ಲ ಪರಮಸತ್ಯ ಎಂಬ ಭಾವನೆ ಹಲವರಲ್ಲಿತ್ತು. ಆದರೆ ಇವತ್ತು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಭಾರತದ ಆಯುರ್ವೇದ ಮತ್ತು ಪ್ರಕೃತಿಚಿಕಿತ್ಸೆಗೆ ದೊಡ್ಡ ಗೌರವ ಸಿಗುತ್ತಿದೆ. ಎಲ್ಲರೂ ಇದನ್ನು ಆದರಿಸುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯಲ್ಲಿ ಯೋಗದ ಹಿನ್ನೆಲೆ ಮತ್ತು ಪ್ರಯೋಜನವನ್ನು ಮನದಟ್ಟು ಮಾಡಿಸಿ, ಯೋಗ ವಿಶ್ವದಾದ್ಯಂತ ಪಸರಿಸುವ ಹಾಗೆ ಮಾಡಿದ್ದಾರೆ. ಇವತ್ತು ಯೋಗ ಎಂಬ ಶಬ್ದವೇ ಒಂದು ಮೌಲ್ಯಯುತವಾದ ವಿಷಯವಾಗಿದೆ. ಹೀಗೆ ಯೋಗ, ಆಯುರ್ವೆದ ಮೊದಲಾದ ಭಾರತೀಯ ವಿಜ್ಞಾನಗಳು ವಿದೇಶಿಯರು ಭಾರತದ ಕಡೆಗೆ ಗೌರವದಿಂದ ನೋಡುವಂತೆ ಮಾಡಿವೆ.

ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕು ಎಂದರೆ ಭೋಗದ ವಸ್ತುಗಳು ಹೇರಳವಾಗಿ ನಮಗೆ ಸಿಗಬಹುದು. ಕಡಿಮೆ ಬೆಲೆಯಲ್ಲಿ ಚೀನಾ ವಸ್ತುಗಳು ಸಿಗುತ್ತವೆ. ಇನ್ನು ಅತಿ ಹೆಚ್ಚು ಬೆಲೆತೆತ್ತು ವಿದೇಶಗಳ ಐಷಾರಾಮಿ ವಸ್ತುಗಳನ್ನು ಖರೀದಿಸುತ್ತೇವೆ. ಇವೆಲ್ಲವೂ ಮನುಷ್ಯನಿಗೆ ತಾತ್ಕಾಲಿಕ ಸುಖವನ್ನು ನೀಡುವ ಭೋಗದ ವಸ್ತುಗಳೇ ಆಗಿವೆ. ಆದರೆ ನಮ್ಮ ದೇಶದಿಂದ ವಿದೇಶಗಳಿಗೆ ರಫ್ತು ಮಾಡಬೇಕೆಂದರೆ ಅದು ಯೋಗ, ಅಧ್ಯಾತ್ಮ ಮತ್ತು ಪ್ರಕೃತಿಚಿಕಿತ್ಸಾ ಪದ್ಧತಿ.

ಸ್ವಾಮಿ ವಿವೇಕಾನಂದರು ನಮ್ಮ ದೇಶಕ್ಕೆ ವಿದೇಶಗಳಲ್ಲಿ ಗೌರವ ತಂದುಕೊಟ್ಟವರು. ಆಧ್ಯಾತ್ಮಿಕ ಸಂಪತ್ತು, ಉಪನಿಷತ್ತುಗಳ ಮೌಲ್ಯಗಳ ಆಧಾರದಲ್ಲಿ ಇಂದು ಭಾರತವನ್ನು ಗುರುತಿಸುತ್ತಾರೆ. ನಮ್ಮ ದೇಶದ ಋಷಿಮೂಲದ, ಅತ್ಯಂತ ವೈಜ್ಞಾನಿಕ ಚಿಂತನೆಗಳನ್ನು ಎಲ್ಲೆಡೆಗೆ ಪಸರಿಸಿದರೆ ಖಂಡಿತವಾಗಿಯೂ ಶಾಂತಿ, ಸಹಬಾಳ್ವೆ ಸಾಧ್ಯವಾಗುತ್ತದೆಂದು ವಿವೇಕಾನಂದರು ನಂಬಿದ್ದರು. ‘ಸದೃಢವಾದ ದೇಶದಿಂದ ಮಾತ್ರ ಸಚ್ಚಿಂತನೆಗಳು ಹೊರಹೊಮ್ಮಲು ಸಾಧ್ಯ’ ‘ಸದೃಢವಾದ ಮತ್ತು ಆರೋಗ್ಯಪೂರ್ಣವಾದ ಯುವ ಸಮುದಾಯದಿಂದ ದೇಶ ಪ್ರಗತಿಯನ್ನು ಸಾಧಿಸಬಹುದು’ ಎಂದು ವಿವೇಕಾನಂದರು ನಂಬಿದ್ದರು. ಆ ಸದೃಢತೆ ಮತ್ತು ಆರೋಗ್ಯಪೂರ್ಣವಾದಂಥ ಶರೀರ ಮತ್ತು ಮನಸ್ಸು ನಿಜವಾಗಿಯೂ ಭಾರತೀಯ ಆಯುರ್ವೇದ, ಪ್ರಕೃತಿಚಿಕಿತ್ಸೆ, ಯೋಗ, ಅಧ್ಯಾತ್ಮ ಚಿಂತನೆಗಳಿಂದ ಸಾಧ್ಯವೆಂಬುದು ವಿವೇಕಾನಂದ ಮೊದಲಾದ ಸಾಧುಸಂತರ ದೃಢವಾದ ವಿಶ್ವಾಸವಾಗಿತ್ತು. ರೋಗ ಬಂದ ನಂತರ ಔಷಧೋಪಚಾರ ಮಾಡುವುದಕ್ಕಿಂತ ರೋಗ ಬರದ ಹಾಗೆ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದು ಉತ್ತಮ. ನಮ್ಮ ಸುತ್ತಮುತ್ತಲಿರುವ ಪ್ರಾಕೃತಿಕ ಗಿಡಮೂಲಿಕೆಗಳು, ಪಂಚಭೂತದ ಅಂಶಗಳಿಂದಲೇ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಶ್ರೇಷ್ಠವಾದದ್ದು, ಕ್ಷಣಿಕವಾದ ಭೋಗ ವಸ್ತುವಿಗಿಂತ ತ್ಯಾಗವನ್ನು ಬೋಧಿಸುವ ಆಧ್ಯಾತ್ಮಿಕವಾದ ಸಾಧನೆಗಳೇ ಶ್ರೇಷ್ಠವಾದದ್ದು ಎಂದು ನಮ್ಮ ಋಷಿಮುನಿಗಳು ಲೋಕಕ್ಕೆ ಸಾರಿದ್ದಾರೆ.

ಸ್ವಾಮಿ ವಿವೇಕಾನಂದರು ವಿದೇಶಕ್ಕೆ ಹೋದಾಗ ಯುವಕರಾಗಿದ್ದರು. ದಷ್ಟಪುಷ್ಟ, ಆರೋಗ್ಯಪೂರ್ಣ ಮತ್ತು ಭಾರತೀಯ ತತ್ತ್ವವನ್ನು ಮೈತುಂಬ ತುಂಬಿಕೊಂಡ ವಿವೇಕಾನಂದರನ್ನು ನೋಡಿಯೇ ಭಾರತ ದೈಹಿಕವಾಗಿ ಮತ್ತು ಮಾನಸಿಕವಾಗಿ ಎಷ್ಟು ಸದೃಢವಾದ ದೇಶ ಎಂಬುದನ್ನು ವಿದೇಶಿಯರು ಕಂಡುಕೊಂಡರಂತೆ. ಯಾವುದೇ ದೇಶ ಮತ್ತಷ್ಟು ಸದೃಢವಾಗಬೇಕು ಅಂದರೆ ಅಲ್ಲಿನ ಯುವಸಮಾಜ ಬಲಿಷ್ಠವಾಗಿರಬೇಕು. ಯುವಸಮಾಜ ದಾರಿತಪ್ಪಿದರೆ ಆ ದೇಶಕ್ಕೆ ಭವಿಷ್ಯವೇ ಇಲ್ಲ. ‘ಒಂದು ದೇಶವನ್ನು ನಾಶಮಾಡಬೇಕೆಂದರೆ ಬಾಂಬನ್ನು ಎಸೆಯಬೇಕಾಗಿಲ್ಲ. ಯುದ್ಧ ಮಾಡಬೇಕಾಗಿಲ್ಲ. ಅಲ್ಲಿರುವ ಯುವ ಸಮುದಾಯವನ್ನು ದುರ್ಬಲಗೊಳಿಸಿದರೆ ಇಡೀ ದೇಶವೇ ವಿನಾಶದ ಅಂಚಿಗೆ ಹೋಗುತ್ತದೆ’ ಎಂದು ಬಲ್ಲವರು ಹೇಳಿದ್ದಾರೆ. ಹಾಗಾಗಿ ಭಾರತವನ್ನು ಆಧ್ಯಾತ್ಮಿಕವಾಗಿ ಮತ್ತು ಲೌಕಿಕವಾಗಿ ಬಲಿಷ್ಠವಾಗಿಸಬೇಕು ಎಂದಾದರೆ ಇಲ್ಲಿರುವ ಯುವ ಸಮುದಾಯಕ್ಕೆ ಸರಿಯಾದ ಮಾರ್ಗವನ್ನು ತೋರಿಸಿಕೊಡಬೇಕು. ಹಿರಿಯರು ಮೌಲ್ಯಗಳನ್ನು ಆಚರಿಸಿ ಕಿರಿಯರಿಗೆ ಆದರ್ಶಪ್ರಾಯರಾಗಬೇಕು.

ವಿದೇಶದಲ್ಲಿ ಒಮ್ಮೆ ಸ್ವಾಮಿ ವಿವೇಕಾನಂದರಿಗೆ ಒಬ್ಬ ಕೇಳಿದನಂತೆ-‘ನೀವು ಈ ರೀತಿ ಕಾಷಾಯ ವಸನವನ್ನು ಧರಿಸಿಕೊಂಡು ಏನು ಮಾಡುತ್ತೀರಿ? ನೀವ್ಯಾರು? ನಿಮ್ಮ ಜಾತಿ ಯಾವುದು? ಜೀವನದಲ್ಲಿ ನಿಮಗೇನು ಆಸೆ ಇದೆ? ಏನೂ ಉದ್ಯೋಗ ಮಾಡದೆ ತಿರುಗಾಡುವ ನೀವು ಸೋಮಾರಿಗಳಲ್ಲವೇ’? ಆಗ ವಿವೇಕಾನಂದರು-‘ನೀನು ಹೇಳಿದ ಹಾಗೆ ನಾನು ಇರಬಹುದು. ನಾನೂ ಒಂದು ಪ್ರಶ್ನೆ ಕೇಳುತ್ತೇನೆ, ಮುಂದೆ ಏನು ಮಾಡಬೇಕೆಂದು ಬಯಸಿದ್ದಿ?’ ಅದಕ್ಕಾತ- ‘ಉದ್ಯೋಗ ಮಾಡಬೇಕೆಂದಿದ್ದೇನೆ’ ಎಂದ. ‘ಯಾಕೆ ಉದ್ಯೋಗ ಮಾಡಬೇಕು?’ ಎಂದು ವಿವೇಕಾನಂದರು ಕೇಳಿದರು. ‘ಸಂಪಾದನೆಗಾಗಿ ಕೆಲಸ ಮಾಡಬೇಕು’ ‘ಸಂಪಾದನೆ ಯಾಕೆ ಮಾಡಬೇಕು?’ ಅದಕ್ಕಾತ, ‘ಮದುವೆಯಾಗಬೇಕು, ಸಂತಾನ ಪಡೆಯಬೇಕು, ಸಂಸಾರವನ್ನು ನಡೆಸಬೇಕಲ್ಲ! ಅದಕ್ಕಾಗಿ ದುಡಿದು ಸಂಪಾದಿಸಬೇಕು’ ಎಂದ. ‘ಸಂಸಾರ ಯಾಕೆ ಬೇಕು?’ ‘ಉದ್ಯೋಗ ಮಾಡಿ, ಸಂಪಾದಿಸಿ, ಸಂಸಾರವನ್ನು ಚೆನ್ನಾಗಿ ನೋಡಿಕೊಂಡು ಆರಾಮವಾಗಿ ಇರಬೇಕು’ ಎಂದ. ಆಗ ವಿವೇಕಾನಂದರು, ‘ನೀನು ಯಾವುದು ಬೇಕೆಂದು ಇಷ್ಟೆಲ್ಲ ಪರಿತಪಿಸುತ್ತಿದ್ದೀಯೋ ಕಷ್ಟಪಡುತ್ತಿದ್ದೀಯೋ ನಾನು ಅದೇ ಆನಂದದಲ್ಲಿ ಈಗಲೂ ಇದ್ದೇನೆ’ ಎಂದರಂತೆ.

ಮನುಷ್ಯನ ಮೂಲ ಪ್ರವೃತ್ತಿ ಆನಂದವೇ ಆಗಿದೆ. ಆದರೆ ಮನುಷ್ಯ ಆನಂದ, ನೆಮ್ಮದಿ ಯಾವುದೆಂದು ಅರ್ಥೈಸಿಕೊಳ್ಳದೆ ಅದು ಬೇಕೆಂದು ಪರಿತಪಿಸುತ್ತಾನೆ. ಕಸ್ತೂರಿಮೃಗ ಎಂಬ ಪ್ರಾಣಿಯ ನಾಭಿಯಲ್ಲಿ (ಹೊಕ್ಕಳಿನಲ್ಲಿ) ಕಸ್ತೂರಿಯ ಪರಿಮಳ ಇರುತ್ತದಂತೆ. ಆದರೆ ಈ ಪರಿಮಳ ಎಲ್ಲಿಂದ ಬರುತ್ತಿದೆ ಎಂದು ಅರಿಯದೆ ಅದನ್ನು ಹುಡುಕುವುದಕ್ಕಾಗಿ ಕಾಡಿನಲ್ಲಿ ಅತ್ತ-ಇತ್ತ ಓಡುತ್ತಿರುತ್ತದೆ. ಹಾಗೆಯೇ ನಾವೂ ನಮ್ಮೊಳಗೆ ಇರುವ ಆನಂದದ ಸ್ವರೂಪವನ್ನು ಅರಿಯದೆ ಅದಕ್ಕಾಗಿ ನಿರಂತರ ಹೋರಾಟ ಮಾಡುತ್ತಿರುತ್ತೇವೆ.

ನಾವು ಸ್ವಾಭಾವಿಕವಾದ ಜೀವನವನ್ನು ನಡೆಸಬೇಕು. ಇಂದು ನಮ್ಮೆಲ್ಲ ವ್ಯವಹಾರಗಳಲ್ಲೂ ಕೃತ್ರಿಮತೆ ಅಧಿಕ ಸ್ಥಾನವನ್ನು ಪಡೆದಿದೆ. ಯಾವಾಗಲೂ ಇನ್ನೊಬ್ಬರನ್ನು ಅನುಕರಣೆ ಮಾಡಲು ಪ್ರಯತ್ನಿಸುತ್ತೇವೆ. ವೇಷಭೂಷಣದಲ್ಲಿ ಪಾಶ್ಚಾತ್ಯ ಅನುಕರಣೆ, ಕೇಶವಿನ್ಯಾಸ, ಆಹಾರ ಪದ್ಧತಿಯಲ್ಲಿಯೂ ಬೇರೆಯವರನ್ನು ಅನುಕರಣೆ ಮಾಡುತ್ತೇವೆ. ಪ್ರಕೃತಿದತ್ತವಾದ ಆಹಾರವನ್ನು ಬಿಟ್ಟು ವಿದೇಶೀಯ ಆಹಾರ ಪದ್ಧತಿಗಳನ್ನು ಅನುಕರಿಸುತ್ತೇವೆ. ಇತ್ತೀಚೆಗಂತೂ ಸಣ್ಣ ಪೇಟೆಗಳಲ್ಲೂ ಚೈನೀಸ್ ಆಹಾರ ಹೆಚ್ಚು ಜನಪ್ರಿಯವಾಗಿದೆ. ಇಂತಹ ಅನುಕರಣೆ ಬಹಳ ಅಪಾಯಕಾರಿ. ಸ್ವಂತಿಕೆಯನ್ನು ಕಳೆದುಕೊಂಡು, ಸರಿಯಾಗಿ ವಿಷಯವನ್ನು ಅರಿಯದೆ ಅನುಕರಣೆ ಮಾಡುವುದು ತಪ್ಪು.

ನಮ್ಮ ದೇಶದಲ್ಲಿ ಆಹಾರ, ವಿಹಾರ ಮತ್ತು ವಿಚಾರದಲ್ಲಿ ಪರಕೀಯರ ಅಂಧಾನುಕರಣೆ ಹೆಚ್ಚಾಗಿ ಕಂಡುಬರುತ್ತಿದೆ. ಪ್ರಕೃತಿದತ್ತವಾದ ಪೌಷ್ಟಿಕ ಆಹಾರಗಳನ್ನು ಬಿಟ್ಟು ನಾಲಿಗೆಗೆ ರುಚಿಕೊಡುವ ಆದರೆ ದೇಹದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವ ಆಹಾರದ ಹಿಂದೆಯೇ ಓಡುತ್ತಿದ್ದೇವೆ. ಋತುಗಳಿಗೆ ವಿರೋಧವಾದ ಆಹಾರವನ್ನು ಮತ್ತು ಸಮಯದ ಪರಿಜ್ಞಾನವಿಲ್ಲದೆ ಎಷ್ಟೆಷ್ಟೋ ಹೊತ್ತಿಗೆ ಆಹಾರ ಸೇವಿಸುತ್ತೇವೆ. ಇದು ನಮ್ಮ ಪ್ರಕೃತಿಗೆ ವಿರುದ್ಧವಾದದ್ದು. ಆದ್ದರಿಂದಲೇ ಆಯುರ್ವೇದದಲ್ಲಿ ‘ಹಿತಭುಕ್ ಮಿತಭುಕ್ ಕ್ಷುತಭುಕ್’ ಎಂದು ಹೇಳಿದ್ದಾರೆ. ಪ್ರವಾಸ, ಪ್ರಯಾಣ ಮುಂತಾದ ವಿಹಾರದ ಕ್ರಮದಲ್ಲಿಯೂ ನಮ್ಮತನವನ್ನು ರಕ್ಷಿಸಿಕೊಳ್ಳಬೇಕು. ವಿಚಾರದಲ್ಲಂತೂ ಕಲುಷಿತತೆ ಹೆಚ್ಚಾಗಿದೆ. ನಮಗೆ ಮಾಹಿತಿಗಳೆಲ್ಲವೂ ತುಂಬ ಕಲುಷಿತವಾಗಿ ಬರುತ್ತಿವೆ. ಅಂತಹ ವಿಚಾರಗಳು ನಮ್ಮನ್ನು ಭಾರತೀಯತೆಯಿಂದ ದೂರಕ್ಕೆ ಎಳೆದುಕೊಂಡು ಹೋಗುತ್ತಿವೆ. ನಮ್ಮ ಋಷಿಮುನಿಗಳು ಹೇಳಿದ ಅತ್ಯಂತ ವೈಜ್ಞಾನಿಕ ವಿಷಯಗಳಿಗಿಂತ ವಿದೇಶಿಯರು ಹೇಳಿದ ಯಾವುದೋ ವಿಷಯ ಹೆಚ್ಚು ಆಪ್ಯಾಯಮಾನವಾಗುತ್ತಿದೆ. ಹೀಗೆ ಅನೇಕ ವಿಧವಾದ ಮಾಲಿನ್ಯ ಪ್ರವೇಶಿಸಿ ನಮ್ಮತನವನ್ನು ಕಳೆದುಕೊಂಡಿದ್ದೇವೆ.

ಭಗವಂತ ಈ ವಿಶಾಲವಾದ ಭೂಮಿಯನ್ನು ಸೃಜಿಸಿದ. ಇದರ ಮೇಲೆ ಏಕಾಣು ಜೀವಿಗಳಿಂದಾರಂಭಿಸಿ, ಬಹುಕಣದ ಜೀವಿಗಳವರೆಗೆ ಅನೇಕ ವಿಧದ ಮರ, ಗಿಡ, ಬಳ್ಳಿ, ಪಶು, ಪಕ್ಷಿ, ಉರಗ, ಕೀಟ, ಮನುಷ್ಯಾದಿಗಳನ್ನು ನಿರ್ವಿುಸಿದ. ಆಗಸದಲ್ಲಿ ಸೂರ್ಯ, ಚಂದ್ರ, ನಕ್ಷತ್ರ, ಮೋಡಗಳು, ಭೂಮಿಯ ಮೇಲೆ ಕೆರೆ, ತೊರೆ, ಹಳ್ಳ, ನದಿಗಳು, ಕಡಲು, ಗಾಳಿ ಇತ್ಯಾದಿಗಳೆಲ್ಲವೂ ಸೇರಿ ಪರಿಸರವೆನಿಸಿದವು. ಸೂರ್ಯಚಂದ್ರರ ಉದಯ, ಹಗಲಲ್ಲಿ ಸೂರ್ಯನ ಬಿಸಿಲು, ಇರುಳಲ್ಲಿ ಚಂದಿರನ ಬೆಳದಿಂಗಳು, ತಂಪಾಗಿ ಬೀಸುವ ಮಾರುತ, ಮರಗಿಡಗಳಲ್ಲಿ ಬಿರಿಯುವ ಬಣ್ಣ ಬಣ್ಣದ ಹೂಗಳ ಸುಗಂಧ ಎಲ್ಲವೂ ಈ ನಿಸರ್ಗವನ್ನು ಎಷ್ಟು ಸುಂದರವನ್ನಾಗಿ ಮಾಡುತ್ತವೆ! ಇವುಗಳೆಲ್ಲದರ ಸೌಂದರ್ಯ ಸವಿಯುತ್ತ ಮಾನವನು ಬದುಕಲೆಂದು ಭಗವಂತ ನಮ್ಮೆಲ್ಲರನ್ನೂ ಹರಸಿದ. ಆದರೆ ಆಧುನಿಕತೆ, ಭೌತಿಕತೆ, ಕೃತ್ರಿಮತೆಗೆ ಮರುಳಾದ ಮನುಷ್ಯ ನಿಸರ್ಗದಿಂದ ದೂರವಾಗಿ, ಭಗವಂತನ ಮೂಲ ಕೊಡುಗೆಯನ್ನು ಅರ್ಥೈಸುವಲ್ಲಿ ವಿಫಲನಾದ. ಅನೇಕ ವಿಧದ ತೊಂದರೆ, ಕಷ್ಟ, ತಾಪತ್ರಯಗಳಲ್ಲಿ ರೋಗ-ರುಜಿನಗಳಲ್ಲಿ ಸಿಲುಕಿ ಒದ್ದಾಡತೊಡಗಿದ. ಚಿಕಿತ್ಸಾ ಪದ್ಧತಿಯಲ್ಲಿಯೂ ಪ್ರಕೃತಿಚಿಕಿತ್ಸೆ ಉತ್ತಮವಾದುದು. ಮನುಷ್ಯನ ಶರೀರ ಪಂಚಭೂತಗಳಿಂದ ಮಾಡಲ್ಪಟ್ಟಿದೆ. ಈ ಶರೀರದಲ್ಲಿ ವಾತ, ಪಿತ್ತ, ಕಫಗಳ ವೈಪರೀತ್ಯದಿಂದ (ತ್ರಿದೋಷದಿಂದ) ಅನಾರೋಗ್ಯ ಉಂಟಾದರೆ, ಅದರ ಪರಿಹಾರಕ್ಕೆ ಬೇಕಾದ ವ್ಯವಸ್ಥೆ ಈ ಪ್ರಕೃತಿಯಲ್ಲಿಯೇ ಇದೆ. ಸುತ್ತಮುತ್ತಲಿರುವ ಗಾಳಿ, ಬೆಳಕು, ನೀರು, ಅಗ್ನಿ ಮತ್ತು ಮಣ್ಣು ಇವುಗಳನ್ನು ಒಂದು ಸಮಪ್ರಮಾಣದಲ್ಲಿ ಬಳಸಿ ದೇಹಕ್ಕೆ ಬಂದ ಕಾಯಿಲೆಯನ್ನು ದೂರ ಮಾಡಿಕೊಳ್ಳಬಹುದು. ಆದ್ದರಿಂದ ವಿಕೃತಿ ಉಂಟಾದಾಗ ಪ್ರಕೃತಿಯಿಂದಲೇ ಅದನ್ನು ಸುಸ್ಥಿತಿಗೆ ತರಲು ಸಾಧ್ಯ ಎಂಬುದನ್ನು ಪ್ರಕೃತಿಚಿಕಿತ್ಸೆ ತೋರಿಸಿಕೊಡುತ್ತದೆ. ನಾವು ಪ್ರಕೃತಿಯೆಡೆಗೆ ಪುನಃ ಮರಳಬೇಕಾಗಿದೆ.

ಮನುಷ್ಯ ಹೆಚ್ಚು ಶ್ರಮವಿಲ್ಲದೆ ಸುಖ ಪಡೆಯಲು ಬಯಸುತ್ತಾನೆ. ಮನೆಯಿಂದ ಸ್ವಲ್ಪ ದೂರ ಹೋಗುವುದಾದರೂ ನಡೆಯದೆ ವಾಹನ ಬಳಸುತ್ತಾನೆ. ಮನೆಯಲ್ಲಿಯೇ ಸಿದ್ಧಪಡಿಸಿದ ಆಹಾರದ ಬದಲು ಸುಲಭವಾಗಿ ಸಿಕ್ಕುವ, ಹೊರಗಿನ ಆಹಾರವನ್ನು ತಂದು ಸೇವಿಸುತ್ತಾನೆ. ಪೌಷ್ಟಿಕ ಆಹಾರ, ಶುದ್ಧ ಆಹಾರ ಎಲ್ಲರಿಗೂ ಲಭ್ಯವಿದೆ. ಆದರೆ ವ್ಯಾಯಾಮದ ಕೊರತೆಯಿದೆ. ಕಷ್ಟಪಟ್ಟು ಜ್ಞಾನವನ್ನು ಸರಿಯಾಗಿ ಸಂಪಾದಿಸದೆ ಸುಲಭವಾಗಿ ಯಾರೋ ಹೇಳಿದ ವಿಚಾರಧಾರೆಯನ್ನು ಅನುಕರಿಸಿ ಸಂತೋಷವಾಗಿರಬೇಕು ಎಂದು ಬಯಸುತ್ತಾನೆ. ಇದೆಲ್ಲವೂ ನಮ್ಮನ್ನು ಮೂಲಸ್ವಭಾವದಿಂದ ದೂರ ತಳ್ಳಿಬಿಡುತ್ತದೆ. ಮನುಷ್ಯನಿಗೆ ಬರುತ್ತಿರುವ ಬೇರೆ ಬೇರೆ ರೀತಿಯ ಕಾಯಿಲೆಗಳನ್ನು ಕಂಡಾಗ, ಇದಕ್ಕೆ ಭಾರತೀಯ ಚಿಕಿತ್ಸಾ ಪದ್ಧತಿಯಲ್ಲಿಯೇ ಹೆಚ್ಚು ಅನುಕೂಲಕರವಾದ ಪರಿಹಾರವಿದೆ ಎಂದು ಹೇಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net