

ಚಳಿಗಾಲ ಚಳಿ ಮಾತ್ರವಲ್ಲ, ಜೊತೆಗೆ ನಿಮ್ಮ ನೆತ್ತಿಯ ಮೇಲೆ ಬೆಳ್ಳನೆಯ ಹೊಟ್ಟನ್ನು ಕೂಡ ತರುತ್ತದೆ. ಸಂಶೋಧನೆ ಕೂಡ ಚಳಿಗಾಲದಲ್ಲಿ ತಲೆಹೊಟ್ಟು ಉಲ್ಬಣಗೊಳ್ಳುತ್ತದೆ ಎಂದು ತೋರಿಸಿದೆ. ಹಾಗಾಗಿ ನಾವು ಕಾಲಕ್ಕೆ ತಕ್ಕ ಹಾಗೆ ಹೇರ್ ಮಾಸ್ಕ್ ಹಾಕುವುದು ಒಳ್ಳೆಯದು. ಅದರಲ್ಲೂ ನೈಸರ್ಗಿಕ ಪದಾರ್ಥಗಳನ್ನು ಒಳಗೊಂಡ ಹೇರ್ ಮಾಸ್ಕ್ಗಳು ನೆತ್ತಿಯ ಆರೋಗ್ಯ ಕಾಪಾಡುವುದಲ್ಲದೆ, ಕೂದಲನ್ನೂ ಬಲಪಡಿಸುತ್ತದೆ. ಆದ್ದರಿಂದ ಚಳಿಗಾಲದಲ್ಲಿ ತಲೆಹೊಟ್ಟಿಗೆ ಹೇಗೆ ವಿದಾಯ ಹೇಳಬೇಕೆಂದು ನೋಡೋಣ ಬನ್ನಿ.
ನಿಂಬೆ ರಸ ಬೆಸ್ಟ್ : ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆಯ ಜೊತೆಗೆ ನಿಂಬೆ ರಸ ಬೆರೆಸುವುದು ಒಳ್ಳೆಯದು. ಕೊಬ್ಬರಿ ಎಣ್ಣೆಯಲ್ಲಿರುವ ಮೊಯಿಶ್ಚರೈಸಿಂಗ್ ಗುಣ ಮತ್ತು ನಿಂಬೆ ರಸದಲ್ಲಿರುವ ಆಮ್ಲೀಯ ಗುಣಲಕ್ಷಣಗಳು ತಲೆಹೊಟ್ಟಿಗೆ ಪರಿಪೂರ್ಣ ಮನೆಮದ್ದಾಗಿದೆ. ನಿಂಬೆ ರಸವು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ. ಜೊತೆಗೆ ಇದು ಡ್ಯಾಂಡ್ರಫ್ ಫಂಗಸ್ ಬೆಳೆಯುವುದನ್ನು ತಡೆಯುತ್ತದೆ. ಕೊಬ್ಬರಿ ಎಣ್ಣೆ ನೆತ್ತಿ ಮತ್ತು ಕೂದಲಿನ ಎಳೆಗಳನ್ನು ಹೈಡ್ರೇಟ್ ಮಾಡುತ್ತದೆ. ಹಾಗೆಯೇ ಕೂದಲನ್ನು ಆರೋಗ್ಯಕರವಾಗಿ ಹೊಳೆಯುವಂತೆ ಮಾಡುತ್ತದೆ. ಮೊದಲಿಗೆ ವೃತ್ತಾಕಾರದ ಚಲನೆಯಲ್ಲಿ ನಿಮ್ಮ ನೆತ್ತಿಯ ಮೇಲೆ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ. ಆ ನಂತರ ನಿಂಬೆ ರಸ ಮತ್ತು ನೀರನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನೆತ್ತಿಯ ಮೇಲೆ ಹಚ್ಚಲು ಹತ್ತಿ ಉಂಡೆಯನ್ನು ಬಳಸಿ, ಹಚ್ಚಿದ ನಂತರ 20 ನಿಮಿಷಗಳ ಕಾಲ ಬಿಡಿ. ಕೊನೆಯಲ್ಲಿ ಉತ್ತಮ ಗುಣಮಟ್ಟದ ಶಾಂಪೂ ಬಳಸಿ ತೊಳೆಯಿರಿ. ಕೆಲವರಿಗೆ ತಲೆಗೆ ನಿಂಬೆರಸ ಬಳಸುವುದರಿಂದ ಕೆರೆತ ಶುರುವಾಗಬಹುದು. ಅಂತಹವರು ನಿಂಬೆರಸದ ಬದಲು ಕೇವಲ ಕೊಬ್ಬರಿ ಎಣ್ಣೆ ಹಚ್ಚಿದರೆ ಸಾಕು.
ಮರೆಯದಿರಿ ಎಣ್ಣೆ ಮಸಾಜ್: ಪ್ರತಿ ಬಾರಿ ನಿಮ್ಮ ಕೂದಲಿಗೆ ಶಾಂಪೂ ಹಾಕಿ ತೊಳೆಯುವ ಮೊದಲು ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿ. ಇದು ಕೂದಲಿನ ಎಳೆಗಳನ್ನು ಹೈಡ್ರೇಟ್ ಮಾಡಲು ಮತ್ತು ಕೂದಲಿನ ಬೇರುಗಳನ್ನು ಪೋಷಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ನೆತ್ತಿಯ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ತಲೆಹೊಟ್ಟು ವಿರುದ್ಧ ಹೋರಾಡುತ್ತದೆ.