ಬದಲಾದ ದನಿಯಲ್ಲಿ ಬರ್ತಾನೆ ದಳವಾಯಿ ಮುದ್ದಣ್ಣ

Salaga 2 mrch
Published on

ಬೆಂಗಳೂರು: ಕಳೆದ ಶುಕ್ರವಾರವಷ್ಟೇ ಬಿಡುಗಡೆ ಆಗಿರುವ ‘ಬಿಚ್ಚುಗತ್ತಿ’ ಸಿನಿಮಾದ ದಳವಾಯಿ ಮುದ್ದಣ್ಣ ಸದ್ಯದಲ್ಲೇ ಹೊಸ ದನಿಯೊಂದಿಗೆ ಬರಲಿದ್ದಾನೆ. ಅದಕ್ಕಾಗಿಯೇ ಚಿತ್ರಕ್ಕೆ ಹೊಸದಾಗಿ ಡಬ್ಬಿಂಗ್ ಮಾಡಲಾಗಿದ್ದು, ಶುಕ್ರವಾರದಿಂದ ಚಿತ್ರಮಂದಿರಗಳಲ್ಲಿ ಹೊಸ ದನಿ ಕೇಳಿ ಬರಲಿದೆ.

ಚಿತ್ರದುರ್ಗದ ಇತಿಹಾಸದ ಕುರಿತು ಡಾ.ಬಿ.ಎಲ್. ವೇಣು ಅವರು ಬರೆದಿರುವ ‘ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ’ ಕಾದಂಬರಿ ಆಧರಿಸಿರುವ ‘ಬಿಚ್ಚುಗತ್ತಿ’ ಸಿನಿಮಾದಲ್ಲಿ ಭರಮಣ್ಣ ನಾಯಕ, ಗುಡಿಕೋಟೆ ರಾಜಕುಮಾರಿ ಸಿದ್ದಾಂಬೆ ಹಾಗೂ ದಳವಾಯಿ ಮುದ್ದಣ್ಣನ ಪಾತ್ರಗಳೇ ಪ್ರಮುಖವಾದವು. ಈ ಪಾತ್ರಗಳಲ್ಲಿ ಕ್ರಮವಾಗಿ ರಾಜ್​ವರ್ಧನ್, ಹರಿಪ್ರಿಯಾ ಹಾಗೂ ತೆಲುಗಿನ ಖ್ಯಾತ ನಟ ಪ್ರಭಾಕರ್ ಅಭಿನಯಸಿದ್ದಾರೆ. ಆ ಪೈಕಿ ದಳವಾಯಿ ಮುದ್ದಣ್ಣನ ಪಾತ್ರಕ್ಕೆ ಸ್ವತಃ ಪ್ರಭಾಕರ್ ಕಂಠದಾನ ಮಾಡಿರುವುದರಿಂದ ಬಹಳಷ್ಟು ಅಪಭ್ರಂಶಗಳಾಗಿದ್ದಷ್ಟೇ ಅಲ್ಲದೆ, ಸಂಭಾಷಣೆ ಅಸಹಜ ಎಂಬ ರೀತಿಯಲ್ಲಿ ಮೂಡಿಬಂದಿದೆ. ಈ ಬಗ್ಗೆ ವಿಮರ್ಶೆಗಳಲ್ಲಿ ಮಾತ್ರವಲ್ಲದೆ ಪ್ರೇಕ್ಷಕರ ಪ್ರತಿಕ್ರಿಯೆಗಳಲ್ಲೂ ಋಣಾತ್ಮಕ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಚಿತ್ರತಂಡ ಎಚ್ಚೆತ್ತುಕೊಂಡಿದೆ. ಅಲ್ಲದೆ ತಕ್ಷಣ ಮುದ್ದಣ್ಣನ ಪಾತ್ರವನ್ನು ಹೊಸದನಿಯೊಂದಿಗೆ ತೆರೆಗೆ ತರುತ್ತಿದೆ. ಈ ವಿಷಯವಾಗಿ ಕೆಲಸಗಳು ಭರದಿಂದ ಸಾಗಿದ್ದು, ಇನ್ನೆರೆಡು ದಿನಗಳಲ್ಲಿ ಮುಗಿಯುವ ಸಾಧ್ಯತೆ ಇದೆ. ಇದೇ ಶುಕ್ರವಾರದಿಂದ ಚಿತ್ರಮಂದಿರಗಳಲ್ಲಿ ಮುದ್ದಣ್ಣ ಹೊಸ ದನಿಯಲ್ಲಿ ಗುಡುಗಲಿದ್ದಾನೆ.

ದಳವಾಯಿ ಮುದ್ದಣ್ಣನ ಪಾತ್ರಕ್ಕೆ ಡಬ್ಬಿಂಗ್ ಕಲಾವಿದ ಮಂಜು ಕಂಠದಾನ ಮಾಡಿದ್ದಾರೆ. ಅವರ ದನಿಯೊಂದಿಗೆ ಮುದ್ದಣ್ಣನ ಪಾತ್ರ ಹೊಸ ಅನುಭವ ನೀಡಲಿದೆ. ಅದಕ್ಕಾಗಿ ತಾಂತ್ರಿಕ ಪ್ರಕ್ರಿಯೆ ನಡೆಯುತ್ತಿದ್ದು ಶುಕ್ರವಾರದ ಹಾಗೆ ಹೊಸ ವರ್ಷನ್ ತೆರೆ ಮೇಲೆ ಬರಲಿದೆ. | ಹರಿ ಸಂತೋಷ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net