ಪಂಚ ರಾಜ್ಯಗಳಲ್ಲಿ ಸೈಕಲ್ ಯಾತ್ರೆ; ಹುತಾತ್ಮ ಯೋಧರ ಪತ್ನಿಯರ ಸಂಕಷ್ಟ ಅಧ್ಯಯನ

Cycle 11 Feb 20
Published on

ತಮ್ಮ ಪ್ರಾಣ ಪಣಕ್ಕಿಟ್ಟು, ದೇಶ ಸೇವೆ ಮಾಡುವ ಸೈನಿಕರೆಂದರೆ ನಮಗೆಲ್ಲ ಹೆಮ್ಮೆ. ಎಲ್ಲಿಲ್ಲದ ಅಭಿಮಾನ. ಆದರೆ, ದೇಶ ಸೇವೆಯಲ್ಲಿ ತೊಡಗಿದ್ದ ಪತಿಯನ್ನು ಕಳೆದುಕೊಂಡು ಅದೆಷ್ಟೋ ಪತ್ನಿಯರು ಅತಂತ್ರವಾಗಿದ್ದಾರೆ.

ಅಂಥವರ ಸಂಕಷ್ಟಗಳ ಕುರಿತು ಅಧ್ಯಯನ ಕೈಗೊಳ್ಳುವ ಸಲುವಾಗಿ ರಾಜಸ್ಥಾನದ ಜೈಸಲಮೇರ್​ನಲ್ಲಿರುವ ‘ಮದ್ರಾಸ್ ಇಂಜಿನಿಯರ್ ಗ್ರೂಪ್’ನ 15 ಇಂಜಿನಿಯರ್ ರೆಜಿಮೆಂಟ್​ನ 14 ಸೈನಿಕರು ದೇಶದ ಪಂಚ ರಾಜ್ಯಗಳಲ್ಲಿ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ರೈಲಿನ ಮೂಲಕ ಈಚೆಗೆ ಬೆಳಗಾವಿಗೆ ಬಂದಿಳಿದಿದ್ದ ಸೈನಿಕರು ಯಾತ್ರೆ ಆರಂಭಿಸಿದ್ದು, ನಿತ್ಯವೂ ಸೈಕಲ್ ತುಳಿಯುತ್ತಿದ್ದಾರೆ.

ವಿವಿಧ ಶಾಲಾ-ಕಾಲೇಜುಗಳಿಗೆ ತೆರಳಿ ಭಾರತೀಯ ಸೇನೆಗೆ ಸೇರಲು ವಿದ್ಯಾರ್ಥಿಗಳಲ್ಲಿ ಪ್ರೇರಣೆ ತುಂಬುತ್ತಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ 1,401 ಕಿ.ಮೀ. ದೂರವನ್ನು ಸೈಕಲ್ ಮೂಲಕ ಕ್ರಮಿಸಲಿದ್ದಾರೆ. ‘ಯಾವುದೇ ನಗರ ಅಥವಾ ಗ್ರಾಮ ಪ್ರವೇಶಿಸಿದಾಗ ಜನರು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ನಾವು ಹುತಾತ್ಮ ಯೋಧರ ಪತ್ನಿಯರನ್ನು ಭೇಟಿಯಾಗಿ ಸಂಕಷ್ಟ ಆಲಿಸುತ್ತಿದ್ದೇವೆ. ಅವರ ಕೌಟುಂಬಿಕ ಸ್ಥಿತಿಗತಿ ಕುರಿತು ಅಭ್ಯಸಿಸುತ್ತಿದ್ದೇವೆ. ಸೇನೆ ಬಗ್ಗೆ ಅವರಿಗಿರುವ ಪ್ರೀತಿ ಕಂಡು ಸಂತಸಗೊಳ್ಳುತ್ತಿದ್ದೇವೆ. ಅಂತಿಮವಾಗಿ ಅಧ್ಯಯನ ವರದಿಯನ್ನು ಮೇಲಧಿಕಾರಿಗೆ ಒಪ್ಪಿಸುತ್ತೇವೆ’ ಎನ್ನುತ್ತಾರೆ ಸೈಕಲ್ ಯಾತ್ರೆ ಮುನ್ನಡೆಸುತ್ತಿರುವ ಕ್ಯಾಪ್ಟನ್ ನರೇಂದ್ರ ಪಾಂಚಾಲ್.

‘ಶಾಲಾ-ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದೇವೆ. ಪ್ರತಿ ಭಾರತೀಯನಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮನದಟ್ಟು ಮಾಡುತ್ತಿದ್ದೇವೆ. ಭಾರತೀಯ ಸೇನೆಗೆ ಸೇರಿದರೆ ಸರ್ಕಾರದಿಂದ ಸಿಗುವ ಸವಲತ್ತುಗಳ ಕುರಿತ ಕೈಪಿಡಿ ವಿತರಿಸುತ್ತಿದ್ದೇವೆ. ನಮ್ಮನ್ನು ಕಂಡು ಪ್ರೀತಿಯಿಂದ ಅಪ್ಪಿಕೊಳ್ಳುವ ವಿದ್ಯಾರ್ಥಿಗಳ ನಡೆಯಿಂದ ಖುಷಿಯಾಗಿದೆ. ನಮ್ಮ ವೃತ್ತಿ ಬಗ್ಗೆ ಹೆಮ್ಮೆ ಮೂಡುತ್ತಿದೆ’ ಎಂದು ಕರ್ನಾಟಕದ ಮಡಿಕೇರಿ ಮೂಲದ ಹವಾಲ್ದಾರ್ ಸಿ.ಎಂ. ನಂಜಪ್ಪ ಸಂತಸ ಹಂಚಿಕೊಳ್ಳುತ್ತಾರೆ.

ಆಯಾ ಜಿಲ್ಲೆಗಳಲ್ಲಿ ಸೇನೆಯ ಅಧಿಕಾರಿಗಳು ಸೈನಿಕರಿಗೆ ಊಟ ಮತ್ತು ವಾಸ್ತವ್ಯದ ವ್ಯವಸ್ಥೆ ಮಾಡಿದ್ದಾರೆ. ನಿವೃತ್ತ ಸೈನಿಕರು ಕೈಜೋಡಿಸುತ್ತಿದ್ದಾರೆ. 25 ದಿನಗಳವರೆಗೆ ನಡೆಯುವ ಯಾತ್ರೆ ಕೇರಳದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಬೆಳಗಾವಿ ಮೂಲದ ನಿವೃತ್ತ ಕ್ಯಾಪ್ಟನ್ ಶ್ರೀಧರ ಪಾಟೀಲ ಹೇಳುತ್ತಾರೆ.

ದೇಶದ ವಿವಿಧ ಶಾಲಾ-ಕಾಲೇಜುಗಳಿಗೆ ತೆರಳಿ ಭಾರತೀಯ ಸೇನೆಗೆ ಸೇರಲು ವಿದ್ಯಾರ್ಥಿಗಳಲ್ಲಿ ಪ್ರೇರಣೆ ತುಂಬುವ ಕೆಲಸ ಮಾಡುತ್ತಿದ್ದಾರೆ ಚೆನ್ನೈನ ಕೆಲವು ಯುವ ಇಂಜಿನಿಯರ್​ಗಳು.

| ಇಮಾಮಹುಸೇನ್ ಗೂಡುನವರ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net