ಇರಲಿ ಧೈರ್ಯ, ಅದುವೇ ಬದುಕಿನ ಮರ್ಮ: ಹಲೋ ಡಾಕ್ಟರ್

Courage
Published on
‘ಧೈರ್ಯಂ ಸರ್ವತ್ರ ಸಾಧನಂ’. ಇದು ನಮ್ಮಲ್ಲಿ ಪ್ರಚಲಿತವಾಗಿರುವ ಉಕ್ತಿ. ಇದು ನಿಜವೂ ಹೌದು. ಎಲ್ಲೆಡೆ ಇದರ ಉಲ್ಲೇಖವಿದೆ. ಧೈರ್ಯಶಾಲಿಗಳಾಗಿ ಬದುಕುವುದರಿಂದ ನಮ್ಮ ನಿಯೋಜಿತ ಕೆಲಸದಲ್ಲಿ ಅರ್ಧದಷ್ಟು ಸಾಧಿಸಿದಂತೆ. ಈ ಧೈರ್ಯದ ಜತೆ ಮನೋಸ್ಥೈರ್ಯವೂ ಅಷ್ಟೇ ಮುಖ್ಯ.

ಈ ಮಾತು ಏಕೆ ಬಂತೆಂದರೆ ಮೊನ್ನೆ ನನ್ನ ಹತ್ತಿರ ಒಬ್ಬ ವ್ಯಕ್ತಿ ಬಂದಿದ್ದರು. ಅವರು 15 ವರ್ಷದ ಹಿಂದೆ ತಮ್ಮ ಮಗನನ್ನು ಕರೆದುಕೊಂಡು ಬಂದಿದ್ದರಂತೆ. ನನಗೆ ಅದರ ನೆನಪಿರಲಿಲ್ಲ. ಅವರೇ ಹೇಳಿದಾಗ ಗೊತ್ತಾಯಿತು. ವಿಷಯ ಏನು ಹೇಳಿ? ಎಂದೆ. ಆಗ ಅವರು, ‘ಇಂದಿಗೆ 15 ವರ್ಷಗಳ ಹಿಂದೆ ನಾನು ನನ್ನ ಮಗನನ್ನು ನಿಮ್ಮ ಬಳಿ ಕರೆದುಕೊಂಡು ಬಂದಿದ್ದೆ. ನೀವು ಆಗ ಅವನಿಗೆ ಅಂದು ತುಂಬಿದ ಧೈರ್ಯದ ಫಲವಾಗಿ ಆತ ಇಂದು ಉನ್ನತ ಹುದ್ದೆಯಲ್ಲಿದ್ದಾನೆ. ನೀವು ನನಗೆ ನನ್ನ ಮಗನನ್ನು ಉಳಿಸಿಕೊಟ್ಟಿದ್ದೀರಿ’ ಎಂದು ಸ್ವೀಟ್ ಬಾಕ್ಸ್ ಕೂಡ ಕೊಟ್ಟು ಹೋದರು.

ವಿಷಯ ಅದಲ್ಲ. ಅಂದು ಅವರ ಮಗನಿದ್ದ ಸ್ಥಿತಿ ಆತನ ಪಾಲಕರನ್ನು ಚಿಂತೆಯ ಕೂಪಕ್ಕೆ ನೂಕಿತ್ತು. ಅವರು ಆತನನ್ನು ಕರೆದುಕೊಂಡು ಬಂದಾಗ ಅವರಲ್ಲಿ ಮನೆ ಮಾಡಿದ್ದ ಭಯಕ್ಕೆ ಕಾರಣ ಆತನ ಶೈಕ್ಷಣಿಕ ಪ್ರಗತಿಯಲ್ಲಿ ಹಿನ್ನಡೆ ಆಗಿರುವುದು. ಅವರ ಮಗ ಪಾಲಕರ ನಿರೀಕ್ಷೆಗೆ ತಕ್ಕಂತೆ ಓದಿನಲ್ಲಿ ಮುಂದಿರಲಿಲ್ಲ. ಆತನ ಮನಸ್ಸು ಅಥವಾ ಆಸಕ್ತಿಗೆ ವಿರುದ್ಧವಾದ ಕೋರ್ಸ್ ಮಾಡುವಂತೆ ಪಾಲಕರು ಒತ್ತಡ ಹೇರಿದ್ದರು. ಇದರ ಪರಿಣಾಮವಾಗಿ ಆತ ಖಿನ್ನತೆಗೆ ಒಳಗಾಗಿದ್ದ. ಪಾಲಕರು ಹೇಳಿದ ಕೋರ್ಸ್ ಸೇರಲು ಇಷ್ಟವಿಲ್ಲ ಎಂದು ಹೇಳಿದರೂ ಕೇಳುವವರಿರಲಿಲ್ಲ. ಇದರಿಂದ ಓದಿನಲ್ಲಿ ಆಸಕ್ತಿ ಕಳೆದುಕೊಂಡ. ಸದಾ ಸುಮ್ಮನೆ ಇರುತ್ತಿದ್ದ. ಇದನ್ನು ಗಮನಿಸಿದ ಆತನ ತಂದೆ ನನ್ನ ಬಳಿ ಕರೆತಂದಿದ್ದರು. ಆಗ ನಾನು ಅಪ್ಪ ಮಗ ಇಬ್ಬರನ್ನೂ ಕೂರಿಸಿಕೊಂಡು ರ್ಚಚಿಸಿದೆ. ಆಗ ಗೊತ್ತಾಗಿದ್ದು ನಿಜವಾದ ವಿಷಯ. ಅಪ್ಪನಿಗೆ ಮಗ ದೊಡ್ಡ ಹುದ್ದೆ ಪಡೆಯಬೇಕು. ಅದಕ್ಕೆ ತಾನು ಹೇಳಿದ ಕೋರ್ಸ್ ಪಡೆಯಬೇಕು. ಅದಕ್ಕೆ ಪೂರಕವಾಗಿ ಹಗಲಿರುಳು ಓದಬೇಕು. ಗರಿಷ್ಠ ಅಂಕ ಪಡೆಯಬೇಕು ಎಂದು ತಾಕೀತು ಮಾಡಿದ್ದರಲ್ಲದೇ ಆತನ ಮೇಲೆ ಇನ್ನಿಲ್ಲದ ಒತ್ತಡ ಹೇರಿದ್ದರು. ಇದನ್ನರಿತು ನಾನು ಇಬ್ಬರಿಗೂ ಸಮಾಲೋಚನೆ ಮಾಡಿ ಕಳಿಸಿದ್ದೆ. ಆತ ಇಂದು ಎಂಎಸ್ ಮಾಡಿ ಕಾರ್ಪೇರೇಟ್ ಕಂಪನಿಯೊಂದರ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿದ್ದಾನೆ.

ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆ ಮಗನ ಕ್ಷಮತೆ, ಆಸಕ್ತಿಯನ್ನು ಪಾಲಕರಾದವರು ಗಮನಿಸಬೇಕು. ಆತನ ಅಭಿರುಚಿಯನ್ನೂ ಗೌರವಿಸಬೇಕು. ಆತನ ಮಾತನ್ನು ಸಮಚಿತ್ತದಿಂದ ಆಲಿಸಬೇಕು. ಆದರೆ ಈ ಪ್ರಕರಣದಲ್ಲಿ ಹಾಗಾಗಿರಲಿಲ್ಲ. ನಾನು ಹೇಳಿದ್ದನ್ನು ನೀನು ಕಲಿಯಲೇಬೇಕು ಎನ್ನುವ ಫರ್ವನು ಮಗನ ಆತ್ಮಸ್ಥೈರ್ಯ ಕುಗ್ಗಿಸಿತ್ತು. ಇದರ ಪರಿಣಾಮ ಮಗ ಪಿಯುಸಿಯಲ್ಲಿ ಕಳಪೆ ಸಾಧನೆ ಮಾಡಿದ. ಈ ವಿಷಯಕ್ಕೂ ಆತ ಖಿನ್ನತೆಗೆ ಒಳಗಾಗಿದ್ದ. ಅಪ್ಪ ಮತ್ತು ಮಗನ ಮಾತುಗಳನ್ನು ಆಲಿಸಿದ ನಂತರ ಇಬ್ಬರಿಗೂ ಕೆಲ ವಿಚಾರ ತಿಳಿಹೇಳಿದೆ. ಮಗ ಉನ್ನತ ಹುದ್ದೆ ಅಲಂಕರಿಸಲಿ ಎಂದು ಆಸೆ ಪಡುವುದು ತಪ್ಪಲ್ಲ. ಆದರೆ ಇದು ಸಾಧ್ಯವಾ? ಆತನ ಶಕ್ತಿ, ಸಾಮರ್ಥ್ಯವೇನು? ಎಂಬುದನ್ನೂ ಸ್ವಲ್ಪ ನೋಡಬೇಕು. ನಮ್ಮ ಅಂಕಗಳಿಕೆಯ ಒತ್ತಡ ಆತನಿಗೆ ಬೇಸರವಾಗಬಾರದು ಎನ್ನುವ ಜ್ಞಾನ ಅತ್ಯಗತ್ಯ. ಅದೇ ರೀತಿ ಮಕ್ಕಳೂ ಅಷ್ಟೇ. ಇರುವ ವಿಚಾರವನ್ನು ಧೈರ್ಯವಾಗಿ ಹೇಳಬೇಕು. ವಾಸ್ತವತೆ ತಿಳಿ ಹೇಳಬೇಕು.

ಇದು ಬೆಳಕಿಗೆ ಬಂದ ಪ್ರಕರಣವಷ್ಟೇ. ಆದರೆ ನಮ್ಮ ಮಧ್ಯೆ ಈ ತರಹದ ಅನೇಕ ಪ್ರಕರಣಗಳು ನಡೆದಿವೆ, ನಡೆಯುತ್ತಿರುತ್ತವೆ. ಇಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದು ಇಂದಿನ ತುರ್ತು ಅಗತ್ಯವಾಗಿದೆ. ಪಾಲಕರಾದವರು ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಾಣುವ ಭರದಲ್ಲಿ ಎಡವಟ್ಟು ಮಾಡಬಾರದು. ಬದುಕಿನ ಪಯಣ ಸಾಗಿಸಲು ನೂರೆಂಟು ದಾರಿಗಳಿವೆ. ಇಲ್ಲಿ ಯಾವುದೇ ವೃತ್ತಿ ಶ್ರೇಷ್ಠವಲ್ಲ. ಕನಿಷ್ಠವೂ ಅಲ್ಲ. ಅಂಕ ಗಳಿಕೆಯೊಂದೇ ಯಶಸ್ಸಿನ ಮಾನದಂಡವಲ್ಲ. ಮಕ್ಕಳೂ ಅಷ್ಟೇ. ಅಂದುಕೊಂಡ ಕೋರ್ಸ್ ಸಿಗದಿದ್ದಾಗ ಹತಾಶರಾಗದೇ ಪರ್ಯಾಯ ಚಿಂತನೆ ಮಾಡಬೇಕು. ಆ ನಿಟ್ಟಿನಲ್ಲಿ ಸಾಗಬೇಕು. ಜೀವ, ಬದುಕು ಅತ್ಯಮೂಲ್ಯ. ಒಮ್ಮೆ ಜಾರಿದರೆ ಸಿಗದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net