ಬೆಟಗೇರಿಯಿಂದ ಥಾಯ್ಲೆಂಡ್​ಗೆ; ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ದೇಶದ ಪ್ರತಿನಿಧಿ

Betegeri 3 march 20
Published on

ಬಡಕುಟುಂಬಗಳಲ್ಲಿ ಅರಳುವ ಪ್ರತಿಭೆಗಳಿಗೇನೂ ಕಡಿಮೆ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪುಂಡಲೀಕ ಮಹಾದೇವಪ್ಪ ಲಕಾಟಿ. ಮೇ ತಿಂಗಳಿನಲ್ಲಿ ಥಾಯ್ಲೆಂಡ್​ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಇವರು ಭಾಗವಹಿಸುತ್ತಿದ್ದಾರೆ.

ಪ್ರತಿಭೆಗೆ ಬಡತನ- ಸಿರಿತನ ಎನ್ನುವ ಭೇದ ಇಲ್ಲ. ಹಾಗೆ ನೋಡಿದರೆ, ಆಧುನಿಕ ಸೌಲಭ್ಯಗಳಿಂದ ವಂಚಿತವಾಗಿರುವ, ಹಳ್ಳಿಯ ಮೂಲೆಯೊಂದರಲ್ಲಿ ಕಡುಬಡತನದಲ್ಲಿಯೇ ಹುಟ್ಟುವ ಪ್ರತಿಭೆಗಳೇ ಮುಂದೊಂದು ದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವುದು ಹೆಚ್ಚು. ಅಂಥ ಒಂದು ಪ್ರತಿಭೆ ಯೋಗಪಟು ಪುಂಡಲೀಕ ಲಕಾಟೆ.

ಕಳೆದ ಜನವರಿ 19ರಂದು ಮೈಸೂರಿನಲ್ಲಿ ನಡೆದ ರಾಷ್ಟ್ರಮಟ್ಟದ 35-40 ವಯೋಮಿತಿ ಪುರುಷ ವಿಭಾಗದ ಯೋಗಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಅಂತಾರಾಷ್ಟ್ರೀಯ ಮಟ್ಟದ ಪುರುಷ ವಿಭಾಗದ ಯೋಗಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ ಪುಂಡಲೀಕ. ಈ ಮೂಲಕ ಮೇ 17ರಂದು ಥಾಯ್ಲೆಂಡ್​ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಗೆ ಭಾರತ ದೇಶವನ್ನು ಇವರು ಪ್ರತಿನಿಧಿಸಲಿದ್ದಾರೆ.

ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮಹಾದೇವಪ್ಪ-ಯಲ್ಲವ್ವ ದಂಪತಿಯ ಪುತ್ರ ಇವರು. ಮನೆಯಲ್ಲಿ ಕಡುಬಡತನವಿದ್ದರೂ ಪಾಲಕರು ಮಕ್ಕಳಿಗೆ ಶಿಕ್ಷಣಕ್ಕೆ ಯಾವುದೇ ಕೊರತೆ ಮಾಡಲಿಲ್ಲ. ತಮ್ಮಿಬ್ಬರು ಮಕ್ಕಳ ಶಿಕ್ಷಣಕ್ಕಾಗಿ ಇವರು, ಎರಡು ಎಕರೆ ಜಮೀನು ಮಾರಿದ್ದಾರೆ. ಪುಂಡಲೀಕ ಅವರು, ಪ್ರೌಢಶಾಲೆಯವರೆಗಿನ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿದ್ದು, ಗೋಕಾಕ ಜಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ, ಎಲ್​ಇಟಿ ಸಂಸ್ಥೆಯಲ್ಲಿ ಪದವಿ ವ್ಯಾಸಂಗ ಮಾಡಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎಸ್​ಡಬ್ಲೂ

ಸ್ನಾತಕೋತ್ತರ ಶಿಕ್ಷಣ ಪೂರೈಸಿದ್ದಾರೆ. ಈಗ ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವಿಭಾಗದಲ್ಲಿ ಜಿಲ್ಲಾ ಸಾಮಾಜಿಕ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಲೇಜು ಶಿಕ್ಷಣದ ಜತೆಜತೆಗೇ ಯೋಗಾಭ್ಯಾಸವನ್ನೂ ರೂಢಿ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಯಾವ ಗುರುಗಳ ಬಳಿಯೂ ಸಾಗದೇ ಪುಸ್ತಕಗಳನ್ನು ನೋಡಿಯೇ ಯೋಗಾಭ್ಯಾಸ ಮಾಡಿರುವುದು ಇವರ ಹೆಗ್ಗಳಿಕೆ. ಈ ಮೂಲಕವೇ ಎಂಟು ವರ್ಷಗಳಿಂದ ಹಲವಾರು ಕಡೆಗಳಲ್ಲಿ ಯೋಗಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

‘ನಾನು ಹಲವಾರು ಯೋಗ ಪುಸ್ತಕ ತೆಗೆದುಕೊಂಡು ಅದರಲ್ಲಿರುವ ಮಾಹಿತಿಯಂತೆ ಯೋಗಾಸನಗಳ ವಿವಿಧ ಆಸನಗಳನ್ನು ನಿತ್ಯ ಯೋಗಾಭ್ಯಾಸ ಮಾಡುವ ರೂಢಿ ಮೈಗೂಡಿಸಿಕೊಂಡಿದ್ದು ಹೆಚ್ಚು. ತುಮಕೂರಿನ ರವೀಂದ್ರನಾಥ ಹಾಗೂ ಎಂ.ಕೆ.ನಾಗರಾಜರಾವ್ ಅವರ ಯೋಗ ಶಿಕ್ಷಣಾಭ್ಯಾಸದ ಮಾರ್ಗದರ್ಶನವೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಗೆ ಆಯ್ಕೆಗೊಳ್ಳಲು ಸಹಾಯಕವಾಗಿದೆ’ ಎನ್ನುತ್ತಾರೆ ಪುಂಡಲೀಕ.

ನೆರವಿಗೆ ಮೊರೆ

ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಪುಂಡಲೀಕ ಅವರಿಗೆ ಹಣಕಾಸಿನ ಕೊರತೆ ಇದೆ. ಈಗಾಗಲೇ ಶಿಕ್ಷಣಕ್ಕಾಗಿ ಇವರ ಪಾಲಕರು ಜಮೀನು ಮಾರಾಟವನ್ನೂ ಮಾಡಿದ್ದಾರೆ. ಆದ್ದರಿಂದ ಸರ್ಕಾರ ಹಾಗೂ ದಾನಿಗಳು ನೆರವು ನೀಡಿದ್ದಲ್ಲಿ ಮಾತ್ರ ಭಾರತದ ಈ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಹಾಯವಾಗುತ್ತದೆ. ಇವರ ಸಂಪರ್ಕ ಸಂಖ್ಯೆ: 9008200145.

| ಅಡಿವೇಶ ಮುಧೋಳ ಬೆಟಗೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net