

ಅರೆರೆ ಇಷ್ಟು ಬೇಗ ಇದರ ಬಗ್ಗೆ ಪುಸ್ತಕವೂ ಬಂದುಬಿಟ್ಟಿತಾ ಎಂದು ಅಚ್ಚರಿಗೊಳ್ಳಬೇಡಿ. ಇಡೀ ಜಗತ್ತನ್ನು ಈ ಕರೊನಾ ಎಷ್ಟು ಭಯಭೀತ ಗೊಳಿಸಿ ಬಿಟ್ಟಿದೆಯೆಂದರೆ ಇದರ ಬಗ್ಗೆ ಕಾದಂಬರಿಯೇ ಪ್ರಕಟಗೊಂಡರೂ ಅಚ್ಚರಿಯಿಲ್ಲ.
ಸ್ವತಃ ವೈದ್ಯರಾಗಿರುವ ಮತ್ತು ಸಸ್ಯಶಾಸ್ತ್ರದಲ್ಲಿ ಪಿಎಚ್ಡಿ ಮಾಡಿರುವ ಡಾ. ಸತ್ಯನಾರಾಯಣ ಭಟ್ ಬರೆದಿರುವ ದಿಢೀರ್ ಪುಸ್ತಕ ಇದು. ಕರೊನಾ ವೈರಾಣುವಿನ ಸದ್ದು ಕೇಳಲು ಆರಂಭವಾಗಿದ್ದು 2019ರ ಅಂತ್ಯದಲ್ಲಿ. ಚೀನಾ, ಇಟಲಿ, ಸ್ಪೇನ್ ಮುಂತಾದ ರಾಷ್ಟ್ರಗಳಲ್ಲಿ ಅದು ಉತ್ತುಂಗಕ್ಕೆ ಹೋದದ್ದು ಈ ವರ್ಷದ ಆರಂಭದ ತಿಂಗಳುಗಳಲ್ಲಿ. ಅದೀಗ ಭಾರತಕ್ಕೂ ಕಾಲಿಟ್ಟಿದೆ. ಕರ್ನಾಟಕಕ್ಕೂ ಬಂದಿದೆ. ಅದರ ಕುರಿತು ಭೀತಿ ಆತಂಕ ಆವರಿಸಿ ನಾಗರಿಕರನ್ನು ಕಂಗೆಡಿಸಿದೆ.
ಉಪನಿಷತ್ತಿನಲ್ಲಿ ವಾಕ್ಯವೊಂದಿದೆ. ‘ಋತು ಸಂಧಿಷು ರೋಗ ವ್ಯಾಧಯ ಜಾಯಂತೇ’ ಎಂದು. ಅಂದರೆ ಋತು ಸಂಧಿಗಳಲ್ಲಿ ಸಾಂಕ್ರಾಮಿಕ ರೋಗಗಳು ಉಂಟಾಗುತ್ತವೆ ಎಂದರ್ಥ. ಅವು ಬರುವುದಂತೂ ನಿಶ್ಚಿತ. ಅವುಗಳನ್ನು ಎದುರಿಸಲು ಮನುಷ್ಯರಾದ ನಾವೆಲ್ಲ ಸಿದ್ಧರಾಗುವುದು ಹೇಗೆ? ಅದೇ ಈ ಪುಸ್ತಕದ ಹೂರಣ.
ಕರೊನಾ ವೈರಾಣು ಸೋಂಕಿನ ಲಕ್ಷಣಗಳು, ಅದನ್ನು ಎದುರಿಸಲು ಮಾಡಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಕಾಯಿಲೆ ತಡೆಗೆ ಇರುವ ದೇಸೀ ವಿಧಾನಗಳು, ಧರ್ವಚರಣೆಯಿಂದ ಹೇಗೆ ನಮ್ಮಲ್ಲಿ ರೋಗ ನಿರೋಧಕತೆ ಹೆಚ್ಚುತ್ತದೆ, ಯಾವ್ಯಾವ ಆಹಾರ ಸೇವಿಸಬೇಕು, ಯಾವುದನ್ನು ಸೇವಿಸಬಾರದು, ಅವುಗಳನ್ನು ಸೇವಿಸುವ ಸಮಯ... ಇತ್ಯಾದಿ ವಿವರಗಳು ಈ ಪುಸ್ತಕದಲ್ಲಿ ಅಡಕವಾಗಿವೆ. ವೈರಾಣು ನಿರೋಧಕವಾದ ಪಾಲೆಯ ಮರ, ಬಿಲ್ವ ದಳ ಸೇವನೆಯಿಂದಾಗುವ ಪ್ರಯೋಜನ, ಬಣ್ಣದ ಬದುಕಿಗೆ ಬಂಗಾರದ ಅರಿಶಿನ, ಚಿತ್ರಮೂಲ ಎಂಬ ವಿಚಿತ್ರ ಗಿಡ, ನಿಸರ್ಗದತ್ತ ಬಣ್ಣದ ಪದಿಮೊಗಂ, ಬೇಲಿ ಬದಿಯ ಲಕ್ಕಿ ರೆಂಬೆಗಳು ಮುಂತಾದ ಅಪರೂಪದ ಮಾಹಿತಿಯೂ ಇದರಲ್ಲಿದೆ. ‘ಕೋವಿಡ್ ಕತೆ ಮುಗಿಸಲು ಕರಿಮೆಣಸು’ ಎಂಬ ಶೀರ್ಷಿಕೆಯೊಂದು ಗಮನ ಸೆಳೆಯುತ್ತದೆ.
‘‘ಚೀನೀಯರ, ಅರಬರ ರೋಗ ನಿರೋಧಕ ಕಸುವಿಗಿಂತ ಭಾರತೀಯರಾದ ನಮ್ಮದು ವಿಭಿನ್ನ ಶಕ್ತಿ. ಸತ್ವ ಗುಣ, ಸಾತ್ವಿಕ ಆಹಾರ, ಸದಾಚಾರ ನಮ್ಮ ಬದುಕಿನ ಅವಿಭಾಜ್ಯ ಅಂಗ. ನಾವು ಪ್ರತಿದಿನ ಬಳಸುವ ಮನೆಯಂಗಳದ ತುಳಸಿ, ಹಿತ್ತಲಿನ ವೀಳ್ಯದೆಲೆ ಎಲ್ಲವೂ ವೈರಾಣು ನಿರೋಧಕವೇ. ಪರಿಸರದ ಸಸ್ಯಗಳನ್ನು ಬೆಳೆಸಿ, ಬಳಸಿ, ನಾವು ಬೇಸಿಗೆ ಕಾಯಿಲೆಗಳಿಂದ ದೂರವಿರಲು ಸಾಧ್ಯ’’ ಎನ್ನುತ್ತಾರೆ ಲೇಖಕರು.