ಕರೊನಾ.. ಎಚ್ಚರಿಕೆಯ ಹೆಜ್ಜೆ ಅಗತ್ಯ; ನಮ್ಮ ಜವಾಬ್ದಾರಿ ನಿಭಾಯಿಸೋಣ..

Janamatha1
Published on

ನಮ್ಮ ಜವಾಬ್ದಾರಿ ನಿಭಾಯಿಸೋಣ

ಕರೊನಾ ಎರಡನೇ ಅಲೆ ಸಂದರ್ಭದಲ್ಲಿ ಸೋಂಕು ಹೇಗೆ ಹರಡಬಲ್ಲದು ಮತ್ತು ಅದಕ್ಕೆ ತೆಗೆದುಕೊಳ್ಳಬಹುದಾದ ಜಾಗರೂಕತೆ ಏನು ಎಂಬುದು ಬಹುತೇಕರಿಗೆ ತಿಳಿದಿದೆ. ಆದರೂ ಈ ಸಲ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಯಾಕೆ ಹೀಗಾಯಿತು? ಎಂಬ ಪ್ರಶ್ನೆ ನಮಗೇ ಹಾಕಿಕೊಳ್ಳೋಣ.

ಕಳೆದ ಬಾರಿ ಇದ್ದ ಭಯ ನಮಗೆ ಈ ಸಲ ಇರಲಿಲ್ಲ ಎಂಬುದು ವಾಸ್ತವ. ಅಲ್ಲದೆ, ಚುನಾವಾಣಾ ಪ್ರಚಾರದಲ್ಲಿ ಜನರನ್ನು ಗುಂಪು ಗುಂಪು ಸೇರಿಸಿಕೊಂಡ ರಾಜಕಾರಣಿಗಳು, ‘ನಾವು ವ್ಯಾಕ್ಸಿನ್ ತೆಗೆದುಕೊಂಡಿದ್ದೇವೆ. ಕರೊನಾ ನಮಗೆ ಏನೂ ಮಾಡಲ್ಲ’ ಎಂದುಕೊಂಡು ತಿರುಗಾಡುತ್ತಿರುವವರು ಕೂಡ ಸೋಂಕು ಹೆಚ್ಚಳಕ್ಕೆ ಕಾರಣಿಕರ್ತರು. ಎರಡನೇ ಅಲೆಯ ಪ್ರಾರಂಭದಲ್ಲಿ ಯಾರೂ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಸೋಂಕಿತರು ಆರಾಮವಾಗಿ ಸುತ್ತಿ ಬಹಳಷ್ಟು ಜನರಿಗೆ ಹರಡಿಸಿಬಿಟ್ಟರು. ಸೋಂಕಿತರ ಸಂಖ್ಯೆ ಹೆಚ್ಚಾದಾಗ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕದೆ, ಸಾವು ಹೆಚ್ಚಾದಾಗ ಎಲ್ಲರೂ ಎಚ್ಚೆತ್ತುಕೊಂಡೆವು.

ನಾವು ಮೊದಲೇ ಜಾಗರೂಕತೆಯಿಂದ ಇದ್ದಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ. ಈಗ ಮುಂದೇನು ಎಂಬ ಯೋಚನೆ ಮಾಡಬೇಕು. ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ಅದನ್ನು ಯಶಸ್ವಿಗೊಳಿಸುವುದು ನಮ್ಮ ಕೈಯಲ್ಲಿದೆ. ದಿನ ಬೆಳಗ್ಗೆ ಮಾರ್ಕೆಟ್​ನಲ್ಲಿ ಜನರ ಸಂತೆ ನೋಡಿದಾಗ ಆತಂಕವಾಗುತ್ತದೆ. ದಿನವೂ ಮಾರ್ಕೆಟಿಗೆ ಹೋಗುವ ಮೂಲಕ ಅಪಾಯ ತರಿಸಿಕೊಳ್ಳುವ ಬದಲು ಮನೆಗೆ ಬೇಕಾದ ದಿನಸಿಗಳನ್ನು ಒಂದೇ ಸಲ ತಂದು ದಾಸ್ತಾನು ಮಾಡಿಕೊಳ್ಳಬೇಕು. ಈಗಿನ ಸನ್ನಿವೇಶದಲ್ಲಿ ಅನಗತ್ಯವಾಗಿ ಹೊರಹೋಗಬಾರದು. ಹಾಗಿದ್ದ ಮೇಲೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ತಂದಿಟ್ಟು, ಹದಿನೈದು ದಿನದ ಮಟ್ಟಿಗೆ ಮನೆಯಲ್ಲೇ ಇದ್ದರೆ ಖಂಡಿತ ಈ ಸೋಂಕು ಹರಡುವುದನ್ನು ನಿಯಂತ್ರಿಸಬಹುದು. ಆ ಮೂಲಕ ಸೋಂಕಿನ ಸರಪಳಿಯನ್ನು ತುಂಡರಿಸಬಹದು.

| ಪದ್ಮಲತಾ ಮೋಹನ್

ಎಚ್ಚರಿಕೆಯ ಹೆಜ್ಜೆ ಅಗತ್ಯ

ಕೋವಿಡ್ ಸೋಂಕಿನ ಅಲೆಯಲ್ಲಿ ಜನರು ಸಾಕಷ್ಟು ಕಷ್ಟ-ನಷ್ಟ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲೂ ಸಾವಿನ ಪ್ರಮಾಣ ಅಧಿಕವಾಗುತ್ತಿದೆ. ಸರ್ಕಾರ ಸಾಕಷ್ಟು ಶ್ರಮ ಹಾಕುತ್ತಿದ್ದರೂ, ಸೌಲಭ್ಯಗಳ ಕೊರತೆ ಬೃಹದಾಕಾರವಾಗಿ ಹೆಚ್ಚುತ್ತಿದೆ. ಇಂತಹ ಸನ್ನಿವೇಶದಲ್ಲಿ ಕೇವಲ ಸರ್ಕಾರದಿಂದಲೇ ಎಲ್ಲವನ್ನೂ ನಿರೀಕ್ಷಿಸಿದರೆ ಪರಿಹಾರ ಕಷ್ಟಸಾಧ್ಯ. ಲಾಕ್​ಡೌನ್ ಅಷ್ಟೇ ಸೋಂಕು ನಿಮೂಲನೆಗೆ ಇರುವ ಕ್ರಮ ಎಂಬುದನ್ನೂ ಒಪ್ಪಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಕಾರಣ ಈ ಬಾರಿ ಲಸಿಕೆ ಆಂದೋಲನ ಇದರೊಂದಿಗೆ ಸೇರಿದೆ. ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಲಸಿಕಾಕೇಂದ್ರ ಗಳತ್ತ ದೌಡಾಯಿಸು ತ್ತಿದ್ದಾರೆ.

ಇಂತಹ ಭಯಾನಕ ಸನ್ನಿವೇಶದಲ್ಲಿ ಲಸಿಕೆ ಆಂದೋಲನವೂ ಅಪಾಯಕಾರಿ ಎನಿಸುತ್ತಿದೆ. ಕಾರಣ ಈ ರೂಪಾಂತರಿ ವೈರಸ್ ಪತ್ತೆ ಸಹ ಕಷ್ಟ ಎಂದು ಹೇಳಲಾಗುತ್ತಿದೆ. ಹಾಗಾಗಿ ಲಸಿಕಾ ಕೇಂದ್ರಕ್ಕೆ ಬರುವವರೆಲ್ಲರೂ ಸೋಂಕುಮುಕ್ತರೆಂದು ಹೇಳಲು ಸಾಧ್ಯವಿಲ್ಲ. ಅಲ್ಲದೆ ಹೆಚ್ಚಿನ ಕೇಂದ್ರಗಳಲ್ಲಿ ಅಂತರ ಕಾಯ್ದುಕೊಳ್ಳುತ್ತಿಲ್ಲ.

ಸರ್ಕಾರವೇ ಎಲ್ಲ ಜವಾಬ್ದಾರಿ ನಿರ್ವಹಿಸಬೇಕೆಂದು ಅಪೇಕ್ಷಿಸುವುದಕ್ಕಿಂತ, ನಾಗರಿಕರಾದ ನಾವು ನಮ್ಮ ಜೀವವನ್ನು ರಕ್ಷಿಸಿಕೊಳ್ಳಲು ಮುಂದಾಗಬೇಕಿದೆ. ಶಾಸಕರು, ಮಂತ್ರಿಗಳಾದಿಯಾಗಿ ಎಲ್ಲ ಹಂತದ ಜನಪ್ರತಿನಿಧಿಗಳೂ ರಾಜಕಾರಣವನ್ನು ಸ್ವಲ್ಪಕಾಲ ಸ್ಥಗಿತಗೊಳಿಸಿ, ತಮಗಿರುವ ಅವಕಾಶವನ್ನು ಸುತ್ತಲಿನ ನಾಗರಿಕರನ್ನು ರಕ್ಷಿಸಲು ಸರ್ವರೀತಿಯಲ್ಲೂ ಬಳಸಲಿ.

| ನ.ರಾ.ವೆಂಕಟೇಶ್ ಶಿವಮೊಗ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net