ಬೆಚ್ಚಿ ಬೀಳಿಸುವ ಕರೊನಾ ಗೇಮ್

Coronavirus 21 march 20
Published on

ಅದೊಂದು ಮಾರಕ ವೈರಸ್. ನೋಡನೋಡುತ್ತಿದ್ದಂತೆಯೇ ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚಿ ಜನರ ಆಪೋಶನ ತೆಗೆದುಕೊಳ್ಳುತ್ತಿದೆ. ಅದರ ಪ್ರಹಾರಕ್ಕೆ ಇಡೀ ವಿಶ್ವವೇ ಕಂಗಾಲಾಗಿದೆ. ದಿನ ಬೆಳಗಾದರೆ ಹೊರಬರುವ ಸಾವು ನೋವಿನ ಕಥೆಗಳು ಎಲ್ಲೆಡೆ ಹಬ್ಬಿ ಜನರನ್ನು ಇನ್ನಷ್ಟು ಹೈರಾಣಾಗಿಸಿವೆ. ಇಂತಹ ಸನ್ನಿವೇಶದಲ್ಲಿ ಬೆದರಿ ಕಂಗಾಲಾದ ವಿಶ್ವಸಮೂಹ ಈ ವೈರಸ್ಸನ್ನು ತಡೆಗಟ್ಟುವ ಔಷಧಕ್ಕಾಗಿ ಆಸೆಗಣ್ಣಿನಿಂದ ವಿಜ್ಞಾನಿಗಳತ್ತ ನೋಡುತ್ತಿದೆ. ಈ ಮಧ್ಯೆ ಇಂತಹ ಹಸಿಬಿಸಿ ವಿಷಯಗಳಿಗೇ ಒಗ್ಗರಣೆ ಹಾಕಿ ಎಳೆದು ಹಿಗ್ಗಿಸಿ ಜಾಲತಾಣಗಳಿಗೆ ಹರಿಬಿಟ್ಟು ವೈರಸ್​ಗಿಂತ ವೇಗವಾಗಿ ಸುದ್ದಿ ವೈರಲ್ ಮಾಡಲೆಂದೇ ಕಾದು ಕುಳಿತ ಗಿರಾಕಿಗಳಿಗೇನೂ ಬರವಿಲ್ಲ...

ಇದು ಕರೊನಾ ಹಾವಳಿಯ ವಿವರಣೆ ಎಂದುಕೊಂಡಿರಾ? ಅಲ್ಲ. ಥೇಟ್ ಕರೊನಾ ಸನ್ನಿವೇಶವನ್ನೇ ಹೋಲುವ ಈ ‘ಆಟ’ವು ಪ್ಲೇಗ್​ಇಂಕ್ ಎಂಬ ಮೊಬೈಲ್ ಗೇಮ್ಲ್ಲಿ ಹಲವಾರು ವರ್ಷಗಳಿಂದ ಇದೆ! ಅಚ್ಚರಿಯೆಂದರೆ ಈ ಆಟ, ಕರೊನಾ ಸೇರಿದಂತೆ ಯಾವುದೇ ಮಾರಕ ವೈರಸ್​ನ ಸನ್ನಿವೇಶಕ್ಕೆ ಸರಿಯಾಗಿ ಹೊಂದುತ್ತದೆ.

ಇಂತಹ ಸನ್ನಿವೇಶಗಳನ್ನು ಮತ್ತು ಅವುಗಳ ಜನಪ್ರಿಯತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬ್ರಿಟನ್ ಮೂಲದ ಎನ್​ಡೆಮಿಕ್ ಎಂಬ ಮೊಬೈಲ್ ಗೇಮ್ ತಯಾರಿಕಾ ಕಂಪನಿಗೆ ಇಂತಹ ವೈರಸ್​ಗಳ ಕುರಿತು ಆಟವೊಂದನ್ನು ತಯಾರಿಸುವ ಯೋಚನೆ ಹೊಳೆಯಿತು. ಆಗ ಹುಟ್ಟಿದ್ದೇ ‘ಪ್ಲೇಗ್ ಇಂಕ್’ ಎಂಬ ಈ ಆಟ.

ಏನಿದೆ ಇದರಲ್ಲಿ?: ವೈರಸ್ ಮತ್ತು ಮನುಷ್ಯರ ನಡುವಿನ ಹೋರಾಟದ ವಿಷಯ ಒಳಗೊಂಡ ಆಟ ಇದು. ಅದರಲ್ಲಿನ ಒಬ್ಬ ಆಟಗಾರ ವೈರಸ್ಸೊಂದರ ಸೃಷ್ಟಿಕರ್ತ. ತಾನು ಹುಟ್ಟಿಸಿದ ವೈರಸ್ಸನ್ನು ಮನುಷ್ಯನಲ್ಲಿ ಸೇರಿಸಿ ಅಲ್ಲಿಂದ ಎಲ್ಲರಿಗೂ ಹರಡುವಂತೆ ಮಾಡಿ ಇಡೀ ಮನುಕುಲವನ್ನೇ ನಾಶ ಮಾಡುವುದು ಆತನ ಉದ್ದೇಶ. ಈ ಆಟ ಮುಂದುವರೆದಂತೆ, ವೈರಸ್​ಗೆ ಪ್ರತ್ಯುತ್ತರವಾಗಿ ಥೇಟ್ ನಮ್ಮಲ್ಲಿ ನಡೆಯುತ್ತಿರುವಂತೆ ಮನುಷ್ಯನು ಪ್ರತ್ಯೌಷಧಿಯನ್ನು ತಯಾರಿಸತೊಡಗುತ್ತಾನೆ. ಔಷಧ ತಯಾರಿಕೆ ಮುಗಿಯುವುದಕ್ಕೆ ಮುಂಚೆಯೇ ಹೆಚ್ಚುಹೆಚ್ಚು ಜನರಿಗೆ ವೈರಾಣುವನ್ನು ಅಂಟಿಸುತ್ತ ಹೋಗಬೇಕಾದ್ದು ಮತ್ತೊಬ್ಬ ಆಟಗಾರನ ಕೆಲಸ!

ಪ್ಲೇಗ್ ಇಂಕ್ ಆಟದಲ್ಲಿ ಆಟಗಾರನಿಗೆ ರೋಗಗಳನ್ನು ಹರಡಲು ವೈರಸ್ ಜತೆ ಬಾಕ್ಟೀರಿಯಾ, ಶಿಲೀಂಧ್ರ, ಜೈವಿಕ ಆಯುಧಗಳನ್ನು ಒದಗಿಸಲಾಗಿದೆ. ಅವುಗಳನ್ನು ಹರಡುವ ರೀತಿ, ಅದರ ತೀಕ್ಷ ್ಣತೆ - ಹೀಗೆ ಹಲವು ವಿಷಯಗಳನ್ನು ನಿರ್ಧರಿಸುವ ನಿಯಂತ್ರಣವನ್ನೂ ನೀಡಲಾಗಿದೆ. ನಮ್ಮಲ್ಲಿ ಕಂಡುಬಂದಿರುವ ಕರೊನಾ , ನಿಫಾದಂತಹ ವೈರಸ್​ಗಳ ಗುಣಲಕ್ಷಣಗಳನ್ನು ಆಧರಿಸಿ ಅದೇ ಹೆಸರನ್ನಿಟ್ಟು ಆಟದಲ್ಲಿ ಅವುಗಳನ್ನು ಸೃಷ್ಟಿಸುವ ಸ್ವಾತಂತ್ರ್ಯವೂ ಆಟಗಾರನಿಗಿದೆ.

ಭಾರಿ ಜನಪ್ರಿಯತೆ: ಇದನ್ನು ಮಾರುಕಟ್ಟೆಗೆ ಪರಿಚಯಿಸಿದ ಕೆಲವೇ ಸಮಯದಲ್ಲಿ ಇದು ಎಂಟು ಕೋಟಿ ಗ್ರಾಹಕರನ್ನು ಗಳಿಸಿ ಭಾರಿ ಜನಪ್ರಿಯತೆ ಪಡೆಯಿತು! ಇದರ ಬೆನ್ನಲ್ಲೇ ಈ ಆಟಕ್ಕೆ 2012ರಲ್ಲಿ ಅತ್ಯುತ್ತಮ ತಂತ್ರದ ಆಟವೆಂಬ ಅಂತಾರಾಷ್ಟ್ರೀಯ ಪ್ರಶಸ್ತಿಯೂ ದೊರೆಯಿತು. ಈ ಆಟ ಆಗಾಗ ಪರಿಷ್ಕರಣೆಯನ್ನೂ ಕಂಡಿತು. 2014ರಲ್ಲಿ ಕಂಪನಿಯು ‘ಪ್ಲಾನೆಟ್ ಆಫ್ ಏಪ್ಸ್’ ಎಂಬ ಜನಪ್ರಿಯ ಹಾಲಿವುಡ್ ಚಲನಚಿತ್ರವನ್ನು ಆಧರಿಸಿ ಹೊಸ ಅವತರಣಿಕೆಯನ್ನು ಪರಿಚಯಿಸಿತು. ವೈರಸ್ ದಾಳಿಯ ಕಾರಣ ಚಿಂಪಾಂಜಿಗಳು ಮಾನವನಿಗಿಂತ ಹೆಚ್ಚು ಬುದ್ಧಿಮತ್ತೆಯನ್ನು ಹೊಂದುವ ಕಥೆಯ ಈ ಅವತರಣಿಕೆಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತು. 2018ರಲ್ಲಿ ‘ಪ್ಲೇಗ್ ಇಂಕ್’ಗೆ ರಾಜಕೀಯ ತಿರುವನ್ನು ಸೇರಿಸಲಾಯಿತು. ಅಂದರೆ ಈ ವೈರಸ್ ಹರಡುತ್ತಲೇ ಸಾವುನೋವು ಸಂಭವಿಸುವುದಲ್ಲದೆ, ದೇಶ-ದೇಶಗಳ ನಡುವೆ ಯುದ್ಧ, ನಾಗರಿಕರಲ್ಲಿ ಅರಾಜಕತೆ ಸಂಭವಿಸುವ ಸನ್ನಿವೇಶವನ್ನು ಅದರಲ್ಲಿ ಸೃಷ್ಟಿಸಲಾಗಿತ್ತು. ಇದಕ್ಕೂ ಸಿಕ್ಕಾಪಟ್ಟೆ ಜನಸ್ಪಂದನೆ ಸಿಕ್ಕು, ಪ್ಲೇಗ್ ಇಂಕ್​ನ ಅಭಿಮಾನಿಗಳ ಸಂಖ್ಯೆ ಇನ್ನಷ್ಟು ವೃದ್ಧಿಸಿತು. ಈ ಆಟಕ್ಕೆ ನಂತರದ ದಿನಗಳಲ್ಲಿ ಹಲವಾರು ಪ್ರಶಸ್ತಿಗಳೂ ಸಿಕ್ಕವು. 2019ರಲ್ಲಿ ಈ ಆಟ 12 ಕೋಟಿ ಹಿಂಬಾಲಕರನ್ನು ಪಡೆಯಿತು!

ಅತಿ ಹೆಚ್ಚು ಡೌನ್​ಲೋಡ್: ಪ್ಲೇಗ್ ಇಂಕ್​ನ ಜನಪ್ರಿಯತೆಯ ಗ್ರಾಫ್ ಗಮನಿಸಿದಾಗ ಕಂಡುಬರುವ ಕುತೂಹಲಕರ ಅಂಶವೊಂದಿದೆ. ಅದೇನೆಂದರೆ, ಹೊಸ ವೈರಾಣು ಹುಟ್ಟಿಕೊಂಡಾಗಲೆಲ್ಲ ಈ ಆಟದ ಹಿಂಬಾಲಕರ ಸಂಖ್ಯೆ ಹೆಚ್ಚಿದೆ. 2019ರ ಕೊನೆಯಲ್ಲಿ ಕರೊನಾ ವೈರಸ್ ಚೀನಾದಲ್ಲಿ ಹಬ್ಬಿದಾಗ ಅತಿ ಹೆಚ್ಚು ಜನ ‘ಪ್ಲೇಗ್ ಇಂಕ್’ ಗೇಮ್ ಡೌನ್​ಲೋಡ್ ಮಾಡಿಕೊಂಡರು. ಇದು ಆ ವರ್ಷ ಅತಿ ಹೆಚ್ಚು ಡೌನ್​ಲೋಡ್​ಗಳನ್ನು ಕಂಡ, ವರ್ಷದ ನಂಬರ್ ಒನ್ ಆಪ್​ಗಳ ಪಟ್ಟಿಗೆ ಸೇರಿತು.

ಕರೊನಾಕ್ಕೂ ನಂಟು: ಇದರ ಜನಪ್ರಿಯತೆಗೆ ಕಾರಣ ಹುಡುಕ ಹೊರಟವರಿಗೆ ಅಚ್ಚರಿ ಕಾದಿತ್ತು. ಕರೊನಾದ ಗುಣಲಕ್ಷಣಗಳನ್ನು ಆಟದ ವೈರಸ್​ಗೆ ನೀಡಿ ಅದರ ಹರಡುವಿಕೆಯನ್ನು ಅಭ್ಯಸಿಸಲು ಅಲ್ಲಿನವರು ಈ ಆಟವನ್ನು ಬಳಸುತ್ತಿದ್ದರು! ಇದಕ್ಕೆ ಎಂಡಮಿಕ್ ಕಂಪನಿ ಸಮಜಾಯಿಷಿ ನೀಡಬೇಕಾಗಿ ಬಂತು. ‘ಆಟದಲ್ಲಿರುವ ವೈರಾಣುಗಳ ಸ್ವಭಾವಕ್ಕೂ ನಿಜವಾದ ಕರೊನಾ ವೈರಸ್​ಗಳ ಗುಣಲಕ್ಷಣಗಳಿಗೂ ಪೂರ್ತಿ ಸಾಮ್ಯ ಇಲ್ಲ; ಈ ಆಟವು ಸಂಪೂರ್ಣವಾಗಿ ಕರೊನಾದ ವೈಜ್ಞಾನಿಕ ಮಾಡೆಲ್ ಅಲ್ಲ’ ಎಂದು ಕಂಪನಿ ಹೇಳಿಕೆ ನೀಡಿತು. ಆದರೂ ಜನರ ಸುರಕ್ಷತೆ ದೃಷ್ಟಿಯಿಂದ ಚೀನಾ ಸರ್ಕಾರ ಫೆ. 29ರಂದು ಈ ಗೇಮ್​ನ್ನು ನಿಷೇಧಿಸಿದೆ. ಅದರಲ್ಲಿ ಕಾನೂನುಬಾಹಿರ ಮತ್ತು ಆಕ್ಷೇಪಾರ್ಹ ವಿಷಯಗಳಿವೆಯೆಂಬ ಕಾರಣ ನೀಡಿದೆ.

ಭಾರತದಲ್ಲಿ ಈಗಲೂ ಆಡ್ತಿದಾರೆ...:ಈ ‘ಪ್ಲೇಗ್ ಇಂಕ್’ ಗೇಮನ್ನು ಚೀನಾದಲ್ಲಿ ಮಾತ್ರ ನಿಷೇಧಿಸಲಾಗಿದ್ದು, ಭಾರತವೂ ಸೇರಿದಂತೆ ಉಳಿದೆಲ್ಲ ದೇಶಗಳಲ್ಲಿ ಆಡಲಾಗುತ್ತಿದೆ. ಕರ್ನಾಟಕದಲ್ಲೂ ಯುವಪೀಳಿಗೆಯಲ್ಲಿ ಇದು ಅತ್ಯಂತ ಜನಪ್ರಿಯ ಮೊಬೈಲ್ ಫೋನ್ ಗೇಮ್ ಆಪ್​ಸ್ಟೋರ್​ಗಳಿಂದ ಸುಲಭವಾಗಿ ಯಾರು ಬೇಕಾದರೂ ಡೌನ್​ಲೋಡ್ ಮಾಡಿಕೊಂಡು ಆಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net