ಸಾಮೂಹಿಕ ಸಂಕಲ್ಪದಿಂದ ಕರೊನಾ ನಿಯಂತ್ರಿಸಬಹುದು...

Edit lead
Published on
ಕರೊನಾ ವ್ಯಾಧಿಯಿಂದ ನಾವೆಲ್ಲರೂ ಚಿಂತಿತರಾಗಿದ್ದೇವೆ. ಆದರೆ ಕರೊನಾಸಂಬಂಧಿ ವಿಚಾರಗಳಲ್ಲಿ ಎಲ್ಲ ಜವಾಬ್ದಾರಿಯನ್ನು ಸರ್ಕಾರಗಳ ಮೇಲೆ ಹೊರಿಸಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿವೆ. ಅದರಲ್ಲಿ ಗೆಲುವು-ಸೋಲು ಇರಬಹುದು, ಸರಿ-ತಪ್ಪು ಇರಬಹುದು. ಕೆಲವರಿಗೆ ಸರ್ಕಾರದ ಪ್ರಯತ್ನ ಸಾಲದು ಅನಿಸಿರಬಹುದು. ಇದೆಲ್ಲದಕ್ಕೂ ಒಂದೇ ಉತ್ತರ- ಸರ್ಕಾರಗಳು ಯಥಾಶಕ್ತಿ ಕರ್ತವ್ಯ ಮಾಡುತ್ತಿವೆ. ಆಯಾ ಮುಖ್ಯಮಂತ್ರಿಗಳು, ಸಚಿವರು ಮತ್ತು ಗ್ರಾಮಮಟ್ಟದ ಪಂಚಾಯತ್ ಅಧಿಕಾರಿಗಳವರೆಗೆ ಎಲ್ಲಾ ಇಲಾಖೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ.

ಆದರೆ ಕರೊನಾದ ಆರ್ಭಟವನ್ನು ನೋಡುವಾಗ ಇಷ್ಟು ಪ್ರಯತ್ನ ಸಾಲುವುದಿಲ್ಲ ಎನಿಸುತ್ತದೆ. ಸರ್ಕಾರಗಳ ನಿರ್ಧಾರದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ, ವಿಮರ್ಶೆ ಆಗುತ್ತದೆ. ಒಂದು ನಿರ್ಣಯದ ಬಗ್ಗೆ ಕೆಲವರು ಸರಿ ಎಂದರೆ, ಸಾಲದು ಎನ್ನುವ ಇನ್ನೊಂದು ವರ್ಗ ಇರುತ್ತದೆ.

ನನಗೆ ಅನಿಸುವ ಪ್ರಕಾರ- ಸರ್ಕಾರಗಳು ಎಲ್ಲೋ ನಗರದಲ್ಲಿ ಕೂತು ಅಥವಾ ಜಿಲ್ಲಾಕೇಂದ್ರದಲ್ಲಿ ಕೂತು ತಮಗೆ ಬಂದ ವರದಿಯ ಹಿನ್ನೆಲೆಯಲ್ಲಿ ತೀರ್ಮಾನಗಳನ್ನು ಕೈಗೊಳ್ಳುತ್ತವೆ. ಆದರೆ ತಳಮಟ್ಟದ ವಾಸ್ತವ ಅರಿತು ಇಂತಹ ಜಾಗೃತಿ ಅಥವಾ ಹೋರಾಟಗಳನ್ನು ರೂಪಿಸಬೇಕು. ನಾವು ‘ಪಿಪಿಪಿ’ (ಪಬ್ಲಿಕ್ ಪ್ರೈವೇಟ್ ಪಾರ್ಟ್​ನರ್​ಶಿಪ್) ಎನ್ನುವ ಶಬ್ದ ಉಪಯೋಗಿಸುತ್ತೇವೆ. ಅಂದರೆ- ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ, ಪಾಲುದಾರಿಕೆ ಎನ್ನುವಂತಹ ಅರ್ಥದಲ್ಲಿ.

ಸರ್ಕಾರದ ಯೋಜನೆ ಮತ್ತು ಖಾಸಗಿ ಸಂಸ್ಥೆಗಳ ಯೋಚನೆ ಹಾಗೂ ಎರಡೂ ಸೇರಿ ಕಾರ್ಯಗತ ಮಾಡಿದಾಗ ಶ್ರಮ ಕಡಿಮೆಯಾಗುತ್ತದೆ, ಫಲ ಜಾಸ್ತಿಯಾಗುತ್ತದೆ ಎನ್ನುವ ಭಾವನೆ ಇದೆ.

ಜನತಾ ಕರ್ಫ್ಯೂನಲ್ಲಿ ಸರ್ಕಾರ ಸಾರ್ವಜನಿಕ ಹಿತಾಸಕ್ತಿಯಿಂದ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಆದರೆ ನಿಯಮ ತಿಳಿದೂ ಕೆಲವರು ಉಲ್ಲಂಘಿಸುತ್ತಾರೆ. ಉದಾಹರಣೆಗೆ- ಮಾರುಕಟ್ಟೆಗೆ ಹೋಗುತ್ತಾರೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಬೆಳಗ್ಗೆ ಎದ್ದು ಏನು ಮಾಡುವುದು ಎಂದು ಅರಿಯದೆ ಸ್ನೇಹಿತರ ಮನೆಗೆ ಅಥವಾ ಇನ್ಯಾವುದೇ ಉದ್ದೇಶಕ್ಕಾಗಿ ತಿರುಗಾಡುತ್ತಾರೆ. ಇನ್ನೊಂದು ಸಂಗತಿಯೆಂದರೆ, ಸದ್ಯ ಮದ್ಯ ಮಾರಾಟ ದ್ವಿಗುಣಗೊಂಡಿದೆಯಂತೆ.

ಅಂದರೆ ಮನೆಯಲ್ಲಿ ಕುಳಿತು ಏನು ಮಾಡುವುದು, ಸಮಯ ಕಳೆಯುವುದಕ್ಕೆ ಆಗೋದಿಲ್ಲ ಎನ್ನುವುದು ಕೆಲವರ ಮನೋಭಾವ. ಇಂಗ್ಲಿಷ್​ನಲ್ಲಿ ‘kಜ್ಝಿ್ಝ ಠಿಜಛಿ ಠಿಜಿಞಛಿ’ ಎಂಬ ಪದವಿದೆ. ಅಂದರೆ ಸಮಯವನ್ನು ಕೊಲ್ಲುವುದು. ಸಮಯವನ್ನು ಕೊಲ್ಲುವುದೆಂದರೆ ಹೇಗೆ? ನಾವು ಸಮಯವನ್ನು ಬಂಡವಾಳವಾಗಿ ಅಥವಾ ಉಪಯುಕ್ತವಾದ ವಸ್ತು ಎಂದು ಕಂಡರೆ ಅಥವಾ ಆಯುಷ್ಯದ ಪ್ರತಿಯೊಂದು ಕ್ಷಣವು ಕೂಡ ಉಪಯುಕ್ತವಾಗಿ ಗತಿಸುತ್ತಿದೆ ಎಂದು ತಿಳಿದುಕೊಂಡರೆ ಸಮಯದ ಮೌಲ್ಯ ತಿಳಿಯುತ್ತದೆ. ಬಾಲ್ಯ ಯೌವನ ಮಧ್ಯವಯಸ್ಸು ವೃದ್ಧಾಪ್ಯ ಸಾವು- ಇದಿಷ್ಟು ಅನಿವಾರ್ಯ. ಆಗ ಸಮಯವನ್ನು ಕೊಲ್ಲುವ ಪ್ರಮೇಯವೇ ಬರುವುದಿಲ್ಲ. ಸರಸವೆ ಜನನ. ವಿರಸವೆ ಮರಣ. ಸಮರಸವೆ ಜೀವನ. ‘ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀಜಠರೇ ಶಯನಮ್ ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಅಂದರೆ ಹುಟ್ಟು-ಸಾವು ಎರಡು ಅನಿವಾರ್ಯತೆಗಳು. ಇವೆರಡರ ಮಧ್ಯದ ಸಮಯವನ್ನು ಸಮಾಜದ ಒಳಿತಿಗಾಗಿ ಮುಡಿಪಾಗಿಡಬೇಕು.

ವಿಜ್ಞಾನವು ಸಾವನ್ನು ಸ್ವಲ್ಪ ನಮ್ಮ ಹತೋ ಟಿಯಲ್ಲಿಟ್ಟುಕೊಳ್ಳುವಂತೆ ಮಾಡಿದೆ ಎಂದು ಹೇಳುವುದಾದರೆ, ಈ ಎಲ್ಲಾ ವ್ಯವಸ್ಥೆಗಳಲ್ಲಿ ಕೂಡ ನಮ್ಮ ಆರೋಗ್ಯವನ್ನು ನಾವೇ ನೋಡಿಕೊಳ್ಳಬೇಕು. ನಮ್ಮ ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಮಟ್ಟಿಗೆ ಧರ್ಮ ಉಪಯುಕ್ತವಾಗುತ್ತದೆ, ಆಚಾರ ವಿಚಾರ ಆಚರಣೆ ಇವುಗಳು ನೆಮ್ಮದಿಯ ಜೀವಕ್ಕೆ ಹಾಗೂ ಒತ್ತಡರಹಿತ ಶಾಂತಿಯ ಜೀವನಕ್ಕೆ ಸಹಕಾರಿಯಾಗಬಹುದು.

ಕೆಲವು ಸಲ ಯಾರಾದರೂ ತಪ್ಪು ಮಾಡಿದರೆ ಅವರ ಧರ್ಮವನ್ನೇ ದೋಷಾರೋಪಣೆ ಮಾಡಿಬಿಡುತ್ತಾರೆ. ತಮಗೆ ಧರ್ಮದ ಸಂಸ್ಕಾರ ಇಲ್ಲದಿದ್ದರೂ, ಧರ್ಮದ ಬಗ್ಗೆ ಆಸಕ್ತಿ ತಳೆಯದವರೂ ಕೂಡ ಹುಟ್ಟಿದ ಜಾತಿ, ಧರ್ಮವನ್ನು ದೂಷಿಸುತ್ತಾರೆ.

ನನ್ನ ಪ್ರಕಾರ, ಇಂದಿನ ನೆಮ್ಮದಿಯ ಬದುಕಿಗೆ ಪಿಪಿಪಿ ವ್ಯಾಖ್ಯೆ ಬದಲಾಯಿಸಬೇಕು. ಅಂದರೆ ಪಬ್ಲಿಕ್ ಪ್ರೈವೇಟ್ ಪಾರ್ಟ್​ನರ್​ಷಿಪ್ ಬದಲಾಗಿ ಪಬ್ಲಿಕ್ ಪ್ರೈವೇಟ್ ಪಾರ್ಟಿಸಿಪೇಷನ್ ಮಾಡಬೇಕು. ಪಾರ್ಟಿಸಿಪೇಷನ್ ಅಂದರೆ ಪಾಲುದಾರರಾಗುವ ಬದಲು ಸಹಭಾಗಿಗಳಾಗಬೇಕು.

‘ಸರ್ವೇ ಜನಾಃ ಸುಖಿನೋ ಭವಂತು’ ಎನ್ನುವ ವಾಕ್ಯದಂತೆ ಎಲ್ಲರ ಹಿತಕ್ಕಾಗಿ ಸರ್ಕಾರ ಆದೇಶ ಮಾಡಿದರೆ ನಾವು ಅದನ್ನು ಪಾಲಿಸಬೇಕು. ಯಾರು ಕೂಡ ಈ ಕರೊನಾ ಸಮಯದಲ್ಲಿ ಮನೆಯಿಂದ ಹೊರಗೆ ಬರಬೇಡಿ, ಸಾರ್ವಜನಿಕವಾಗಿ ಹೊರಗೆ ಹೋಗುವಾಗ ಕೆಲವು ನಿಯಮಗಳನ್ನು ಪಾಲಿಸಿ, ಆರೋಗ್ಯವನ್ನು ರಕ್ಷಿಸಿಕೊಳ್ಳಿ, ನೀವು ಇಲ್ಲದಿದ್ದರೆ ನಿಮ್ಮ ಮನೆ ಅನಾಥವಾಗುತ್ತದೆ, ಮನೆ ಹೆಣ್ಣು ಮಗಳು ಇಲ್ಲದಿದ್ದರೆ ಮಕ್ಕಳು ಮತ್ತು ಕುಟುಂಬದ ಇತರ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ಸಣ್ಣ ವಯಸ್ಸಿನ ಯುವಕರೇ! ನಿಮಗೆ ದೀರ್ಘಾಯಸ್ಸು ಇದೆ. ದೀರ್ಘ ಭವಿಷ್ಯವಿದೆ. ಆಲಸ್ಯದಿಂದ ಮತ್ತು ತಿರಸ್ಕಾರದಿಂದ, ವಯಸ್ಸಿನ ಉದ್ಧಟತನದಿಂದ ನಿಮ್ಮ ಆಯುಸ್ಸನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಅನೇಕ ಮಾರ್ಗದರ್ಶನಗಳು ಬರುತ್ತವೆ. ನಾವು ಆ ಸೂಚನೆಗಳನ್ನು ಪಾಲಿಸಬೇಕು.

ಆದರೂ ಕೆಲವರಿಗೆ ಏನೋ ಒಂದು ಹುಚ್ಚು, ಏನಾಗುತ್ತದೆ ನೋಡೋಣ ಎನ್ನುವ ಉದ್ಧಟತನ. ಇನ್ನೂ ಕೆಲವರಿಗೆ ಅನಿವಾರ್ಯತೆ. ಯಾರೊ ಒಬ್ಬ ದಾರಿಯಲ್ಲಿ ಸ್ಕೂಟರ್​ನಲ್ಲಿ ಹೋಗುತ್ತಿದ್ದಾನೆ. ಯಾಕೆ ಹೋಗುತ್ತಿದ್ದೀಯಾ? ಎಂದು ಕೇಳುವಂತಹ ಸಮಾಧಾನ ಸಾವಧಾನ ವ್ಯವಧಾನ ಪೊಲೀಸರು ಅಥವಾ ಇತರೇ ಇಲಾಖೆಯವರಲ್ಲೂ ಕೆಲವೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಲಾಠಿಯೇಟು ಕೊಟ್ಟುಬಿಡುತ್ತಾರೆ. ಯಾಕೆ ಹೋಗ್ತಿಯಾ? ಎಂದರೆ ಸತ್ಯವನ್ನು ಹೇಳಬಹುದು ಅಥವಾ ಸುಳ್ಳು ಹೇಳಬಹುದು. ಮನೆಗೆ ಹಾಲು ಅಥವಾ ತರಕಾರಿ ತರಲಿಕ್ಕೆ ಹೋಗುತ್ತಿದ್ದೇನೆ ಅಥವಾ ಸ್ನೇಹಿತರಿಗೆ ಏನೋ ಆಪತ್ತು ಬಂದಿದೆ ಅವರನ್ನು ನೋಡಲಿಕ್ಕೆ ಹೋಗುತ್ತಿದ್ದೇನೆ...ಹೀಗೆ ಏನೋ ಹೇಳಬಹುದು. ಆದರೆ ಕೇಳುವ ವ್ಯವಧಾನ ಇದ್ದರೆ ಮಾತ್ರ ಹೇಳುವ ವಿಧಾನಕ್ಕೆ ಅವಕಾಶವಿರುತ್ತದೆ. ಇಲ್ಲದಿದ್ದರೆ ತಕ್ಷಣ ಅವರಿಗೆ ಏಟು ಬಿದ್ದು ಬಿಡುತ್ತದೆ. ಆಗ ಇಲಾಖೆ ಮೇಲೆ, ಸರ್ಕಾರದ ಮೇಲೆ ತಿರಸ್ಕಾರ, ದ್ವೇಷ ಸಿಟ್ಟು ಬರುತ್ತದೆ. ಅದಕ್ಕಾಗಿ ನಾನು ಹೇಳುವುದು- ನಾವು ಪಾರ್ಟ್​ನರ್​ಷಿಪ್ ಅನ್ನು ಪಾರ್ಟಿಸಿಪೇಷನ್ ಮಾಡಬೇಕು.ಯಾವಾಗ ಯಾವ ಕಾರ್ಯ ಮಾಡಿದರೂ ನಮ್ಮದೇ ಎನ್ನುವ ಭಾವನೆ ಬರಬೇಕು. ನಮ್ಮ ದೇಶ, ರಾಜ್ಯ, ಸಮಾಜ, ನಮ್ಮ ಸಂಸಾರ, ನಮ್ಮ ನೆರೆ-ಕರೆ ಎಂಬ ಭಾವನೆ ಬಂದಾಗ ಅನಿವಾರ್ಯವಾಗಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಹಾಗಾಗಿ ಸಾರ್ವಜನಿಕವಾಗಿ ಓಡಾಡುವ ವಿಷಯದಲ್ಲಿ ಆಗಿರಲಿ, ಮಾಸ್ಕ್ ಧರಿಸುವ ವಿಷಯದಲ್ಲಾಗಲಿ, ಆಹಾರ ವಿಹಾರ ವಿಚಾರದಲ್ಲಾಗಲಿ ಎಲ್ಲವನ್ನೂ ಸರ್ಕಾರದ ಮೇಲೆ ಬಿಟ್ಟುಬಿಡಬೇಡಿ. ನೀವು ಕೂಡ ಅದರಲ್ಲಿ ಭಾಗವಹಿಸಿ. ಬಹಳ ಜನ ಅಡ್ಡಾಡುತ್ತಿದ್ದಾರೆ ಎಂದು ಪ್ರತಿ ಬಾರಿ ಪೊಲೀಸರನ್ನು, ಸರ್ಕಾರವನ್ನು ದೂಷಿಸುವ ಬದಲು ಹೀಗೆ ತಿರುಗಾಡುವವರ ಹೆತ್ತವರನ್ನು, ಒಡಹುಟ್ಟಿದವರನ್ನು ಪ್ರಶ್ನಿಸಿ. ಇಂಥ ನಿಯಂತ್ರಣ ಪ್ರಯತ್ನಗಳು ಬಂದರೆ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ.

ಕರೊನಾ ನಿಯಂತ್ರಣಕ್ಕೆ ಮನೆಯಲ್ಲೇ ಸಿದ್ಧಪಡಿಸಿದ ಶುಚಿಯಾದ ಆಹಾರ ಸೇವಿಸಿ ಎಂದು ತಜ್ಞರು ಹೇಳುತ್ತಾರೆ. ಮನೆಯಲ್ಲಿ ರೋಗನಿರೋಧಕ ವ್ಯವಸ್ಥೆಯನ್ನು ಮಾಡುವಂತಹದ್ದು ಎಲ್ಲರ ಜವಾಬ್ದಾರಿ. ಆದರೆ ಮಹಿಳೆಯರ ಮೇಲೆ ನಾವು ಅದನ್ನು ಹೊರಿಸಿಬಿಡುತ್ತೇವೆ- ಅಮ್ಮ ಹಾಗೆ ಮಾಡಿದರು, ಹೆಂಡತಿ ಹೀಗೆ ಮಾಡಿದಳು ಎನ್ನುತ್ತೇವೆ. ಆದರೆ, ಯಾವತ್ತೂ ನನ್ನಿಂದ ತಪ್ಪಾಗಿದೆ ಎನ್ನುವುದಿಲ್ಲ. ತಪ್ಪನ್ನು ಇನ್ನೊಬ್ಬರ ಮೇಲೆ ಹೊರಿಸುವ ತಂತ್ರದಿಂದ ಪರಿಹಾರ ಸಿಗುವುದಿಲ್ಲ.

ಒಂದು ಬಾರಿ ನನ್ನ ಕ್ಯಾಮರಾ ಕೆಟ್ಟುಹೋಗಿತ್ತು. ಅದನ್ನು ಸ್ಟುಡಿಯೋಗೆ ತೆಗೆದುಕೊಂಡು ಹೋಗಿ ಇನ್ನೂ ಮೇಜಿನ ಮೇಲೆ ಇಟ್ಟಿಲ್ಲ, ಅಷ್ಟರಲ್ಲಿ ಸ್ಟುಡಿಯೋ ಯಜಮಾನ ‘ಮಕ್ಕಳು ಕ್ಯಾಮರಾ ಕೆಡಿಸಿದ್ದಾರೆ ಅಲ್ವಾ’ ಎಂದ. ನಾನು ಒಂದು ಕ್ಷಣ ಯೋಚನೆ ಮಾಡಿದೆ. ಮನೆಯಲ್ಲಿ ಕ್ಯಾಮರಾ ಹಾಳುಮಾಡುವ ಮಕ್ಕಳಿರಲಿಲ್ಲ. ಯಾಕೆ ಹಾಗೆ ಕೇಳುತ್ತಿದ್ದೀಯ ಎಂದೆ. ಆಗ ಅವನು ‘ಯಾರು ಇಲ್ಲಿಗೆ ಕ್ಯಾಮರಾ ರಿಪೇರಿಗೆ ತಂದರೂ ನನ್ನ ಕೈಯಿಂದ ಜಾರಿ ಬಿತ್ತು, ನಾನು ಫೋಟೋ ತೆಗೆಯುವಾಗ ಏನೋ ತಪ್ಪಾಯ್ತು ಎನ್ನುವುದಿಲ್ಲ. ಮಕ್ಕಳು ಮನೆಯಲ್ಲಿ ಹಾಳು ಮಾಡಿದ್ದಾರೆ ಎನ್ನುತ್ತಾರೆ. ನನಗೆ ಕ್ಯಾಮೆರಾ ರಿಪೇರಿ ಮಾಡುವ ಜವಾಬ್ದಾರಿ ಮಾತ್ರ. ಅದನ್ನು ಯಾರು ಕೆಡಿಸಿದ್ದಾರೆ ಎನ್ನುವಂಥದ್ದು ನನ್ನ ಕುತೂಹಲ ಅಲ್ಲ. ಆದರೆ ಹೆಚ್ಚಿನವರು ದೋಷವನ್ನು ಇನ್ನೊಬ್ಬರ ಮೇಲೆ ಹಾಕುತ್ತಾರೆ. ಇನ್ನೊಬ್ಬರ ಮೇಲೆ ಆರೋಪ ಮಾಡುವುದರಲ್ಲಿಯೇ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಾರೆ’ ಎಂದರು.

ಎಷ್ಟು ನಿಜ ಅಲ್ಲವೆ? ‘ಈ ಫೋಟೋದಲ್ಲಿ ಮಂತ್ರಿಗಳು, ಶಾಸಕರು ಮುಖಕ್ಕೆ ಮಾಸ್ಕ್ ಹಾಕೊಂಡು ಇರ್ಲಿಲ್ಲ, ನಾನು ಪೇಟೆಗೆ ಹೋದಾಗ ಅಲ್ಲಿ ಯಾರೂ ಮಾಸ್ಕ್ ಹಾಕಿಕೊಂಡಿರಲಿಲ್ಲ’ ಎನ್ನುತ್ತೇವೆ. ಅಂದರೆ ದೋಷಾರೋಪಣೆ ಮಾಡುವುದು ಮತ್ತು ತನ್ನ ತಪ್ಪನ್ನು ಇನ್ನೊಬ್ಬರ ಮೇಲೆ ಹೊರಿಸುವುದು ಮತ್ತು ತಾನು ಮಾಡುವ ತಪ್ಪು ಕನಿಷ್ಠ, ಇನ್ನೊಬ್ಬರು ಮಾಡುವ ತಪ್ಪು ಗರಿಷ್ಠ, ತಾನು ತಪ್ಪು ಮಾಡಿದರೆ ಅದಕ್ಕೆ ಕಾರಣ ಇದೆ, ಆದರೆ ಬೇರೊಬ್ಬರು ಮಾಡಿದರೆ ಅದಕ್ಕೆ ಕಾರಣ ತಿಳಿದುಕೊಳ್ಳುವಷ್ಟು ವ್ಯವಧಾನ, ಸಮಾಧಾನ ಸಾವಧಾನ ತನ್ನಲ್ಲಿಲ್ಲ ಎನ್ನುವಂಥ ಭಾವನೆ ಬಂದಿದೆ. ಒಂದು ಸೂಕ್ತಿ ಹೀಗೆ ತಿಳಿಸುತ್ತದೆ.

ಖಲಃ ಸರ್ಷಪಮಾತ್ರಾಣಿ ಪರಚ್ಛಿದ್ರಾಣಿ ಪಶ್ಯತಿ |

ಆತ್ಮನೋ ಬಿಲ್ವಗಾತ್ರಾಣಿ ಪಶ್ಯನ್ನಪಿ ನ ಪಶ್ಯತಿ ||

(ಮೂರ್ಖನು ಇನ್ನೊಬ್ಬರಲ್ಲಿರುವ ಸಾಸಿವೆ ಕಾಳಿನಷ್ಟು ಚಿಕ್ಕದಾದ ತಪ್ಪನ್ನೂ ದೊಡ್ಡದುಮಾಡಿ ತೋರಿಸುತ್ತಾನೆ. ಅದೇ ತನ್ನಲ್ಲಿರುವ ಬಿಲ್ವಪತ್ರೆ ಗಿಡದ ಕಾಯಿಯಂತಹ ದೊಡ್ಡದಾದ ತಪ್ಪೂ ತನಗೆ ಕಾಣುವುದೇ ಇಲ್ಲ.)

ನಾವೆಲ್ಲರೂ ಹೊಣೆಗಾರಿಕೆಯಲ್ಲಿ ಇದ್ದೇವೆ, ನಮ್ಮ ಕರ್ತವ್ಯಮಾಡುವಾಗ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು, ಒಂದೇ ದೇಶದ ಪ್ರಜೆಗಳು, ಒಂದೇ ಸಮಾಜ ಜೀವಿಗಳು, ಧರ್ವತೀತವಾಗಿ ನಾವು ಮನುಷ್ಯರು ಎಂಬ ಭಾವನೆ ತಳೆದರೆ ಕರೊನಾವನ್ನು ಪೂರ್ತಿಯಾಗಿ ತಪ್ಪಿಸಲು ಸಾಧ್ಯವಿಲ್ಲದಿದ್ದರೂ ಅದನ್ನು ನಿಯಂತ್ರಣ ಮಾಡುವಲ್ಲಿ ಯಶಸ್ಸು ಸಾಧಿಸಬಹುದು. ದಯವಿಟ್ಟು ಎಲ್ಲರೂ ಇದನ್ನು ಗಮನಿಸಿ. ಸಾಧ್ಯವಾದಷ್ಟು ಇಡೀ ಕುಟುಂಬವನ್ನು, ಸಮಾಜವನ್ನು, ಎಲ್ಲಾ ಪ್ರಜೆಗಳನ್ನು ಹೊಣೆಗಾರಿಕೆಯುಳ್ಳವರನ್ನಾಗಿ ಮಾಡಿ. ಸರ್ಕಾರ, ಅಧಿಕಾರಿಗಳಲ್ಲಿ, ಮಾಧ್ಯಮದವರಲ್ಲೂ ಇದೇ ಮಾತನ್ನು ಕೇಳಿಕೊಳ್ಳುತ್ತೇನೆ. ಇಂತಹ ಕ್ಷೋಭೆಯಿಂದ ಹೊರಬರಲು ಎಲ್ಲರನ್ನೂ ಹೊಣೆಗಾರರನ್ನಾಗಿ ಮಾಡಿದಾಗ ಸೋಂಕು ಪಸರಿಸುವ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವುದು ನನ್ನ ಭಾವನೆ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net