ಕರೊನಾ ಮತ್ತು ಭಾರತದ ನಗರಗಳಿಗೆ ಪಾಠ

Edit 18 March 20
Published on

ಉದ್ಯಾನಗಳು, ಮಾರುಕಟ್ಟೆಗಳು ಮತ್ತು ಶಾಲಾ-ಕಾಲೇಜುಗಳಂತಹ ಸಾರ್ವಜನಿಕ ಸ್ಥಳಗಳು ತ್ಯಾಜ್ಯ ನಿರ್ವಹಣೆ ಮತ್ತು ನಿಯಮಿತವಾದ ಸುರಕ್ಷಿತ ವಿಲೇವಾರಿ ವ್ಯವಸ್ಥೆಯನ್ನು ಹೊಂದಿರಬೇಕು. ಈ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸ್ವಚ್ಛ ಭಾರತ ಅಭಿಯಾನ ಮತ್ತು ಅಮೃತ್ (AMRUT) ಯೋಜನೆಯಡಿ ಈಗಾಗಲೇ ಭಾರತದ ಅನೇಕ ನಗರಗಳನ್ನು ಸಜ್ಜುಗೊಳಿಸಲಾಗಿದೆ.

ವಿಶ್ವದಲ್ಲಿ ಭಾರತ ಕೂಡ ಹೆಚ್ಚು ಜನಸಂದಣಿಯ ಕೆಲವು ನಗರಗಳನ್ನು ಹೊಂದಿದೆ. ಜನರು ಇಲ್ಲಿ ಪ್ರತಿದಿನ ಭರ್ತಿಯಾದ ಮೆಟ್ರೋ ಮತ್ತು ಬಸ್ಸುಗಳಲ್ಲಿ ಪ್ರಯಾಣಿಸುತ್ತಾರೆ. ನೊವೆಲ್ ಕರೊನಾ ವೈರಸ್ (ಕೋವಿಡ್ 19) ಇಲ್ಲಿಯವರೆಗೆ 100ಕ್ಕೂ ಹೆಚ್ಚು ದೇಶಗಳ ಮೇಲೆ ಪರಿಣಾಮ ಬೀರಿದೆ. ಸಾಂಕ್ರಾಮಿಕ ರೋಗವನ್ನು ನಗರಗಳ ಆಯಾಮಗಳಲ್ಲಿ ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ತಗ್ಗಿಸುವ ಮತ್ತು ತಡೆಗಟ್ಟುವ ಕ್ರಮಗಳನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ದೃಢವಾದ ನಗರ ನಿರ್ವಹಣೆಯೊಂದಿಗೆ, ರೋಗ ನಿಯಂತ್ರಣದಲ್ಲಿ ಭಾರತವು ಮುಂಚೂಣಿಗೆ ಬರಬಹುದು.

ಕಾಯಿಲೆಗಳು ಮತ್ತು ನಗರ ಯೋಜನೆ ನಡುವಿನ ಸಂಬಂಧವನ್ನು ಇತಿಹಾಸ ಒತ್ತಿಹೇಳುತ್ತದೆ. 19ನೇ ಶತಮಾನದ ಮಧ್ಯಭಾಗದಲ್ಲಿ ನಗರಗಳಲ್ಲಿ ಮಲೇರಿಯಾ ಮತ್ತು ಕಾಲರಾ ಹರಡುವಿಕೆ ಕಾಣಿಸಿಕೊಂಡಾಗ ನೀರು ಮತ್ತು ನೈರ್ಮಲ್ಯ ಮೂಲಸೌಕರ್ಯಗಳ ಅಭಿವೃದ್ಧಿಯಿಂದ ಅನೇಕ ಆಧುನಿಕ ನಗರ ವ್ಯವಸ್ಥೆಗಳು ಜನ್ಮ ತಳೆದವು. ಹಾಗೆಯೇ, 20ನೇ ಶತಮಾನದಲ್ಲಿ, ಪ್ರಪಂಚದಾದ್ಯಂತ 50 ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡ ಸ್ಪಾ್ಯನಿಷ್ ಜ್ವರ, ಇಂತಹ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಹಲವಾರು ನಗರ-ಮಟ್ಟದ ಆಡಳಿತ ರಚನೆಗಳು ಮತ್ತು ಸಾಂಸ್ಥಿಕ ಚೌಕಟ್ಟುಗಳನ್ನು ಸ್ಥಾಪಿಸಲು ಕಾರಣವಾಯಿತು.

ಇಂದಿನ ಜಗತ್ತಿನಲ್ಲಿ ವ್ಯತ್ಯಾಸವೆಂದರೆ ವೈದ್ಯಕೀಯ ವಿಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯಗಳ ತೀವ್ರ ಬೆಳವಣಿಗೆ. ಇದು ಕೋವಿಡ್ 19 ಹರಡುವಿಕೆಯನ್ನು ತಡೆಯಲು ಯಶಸ್ವಿಯಾಗಿ ಹೋರಾಡಲು ಕಾರಣವಾಗಬಹುದು. ಇಂದು, ವಿಶ್ವದ ಜನಸಂಖ್ಯೆ ನಾಲ್ಕು ಪಟ್ಟು ವಿಸ್ತರಿಸಿದೆ, ಅರ್ಧಕ್ಕಿಂತ ಹೆಚ್ಚು ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಜಾಗತೀಕರಣದೊಂದಿಗೆ ರಾಷ್ಟ್ರೀಯ ಆರ್ಥಿಕತೆಗಳು ಹೆಣೆದುಕೊಂಡಿವೆ.

ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳ (ನೀರು ಮತ್ತು ನೈರ್ಮಲ್ಯ ಮತ್ತು ಆಸ್ಪತ್ರೆಗಳು ಹಾಗೂ ಆರೋಗ್ಯ ವ್ಯವಸ್ಥೆಗಳು) ಪರಿಣಾಮಕಾರಿತ್ವವನ್ನು ಖಾತರಿಪಡಿಸುವುದರಿಂದ, ಡಿಜಿಟಲ್ ಮತ್ತು ಆರ್ಥಿಕ ಮೂಲಸೌಕರ್ಯಗಳ ಹೆಚ್ಚು ಸಂರ್ಪತ ನೆಟ್​ವರ್ಕ್​ಗಳ ಮೂಲಕ ಪರಿಸರ ವ್ಯವಸ್ಥೆಯನ್ನು ಕಾಪಾಡುವವರೆಗೆ, ಹೊಸ ಸಾಂಕ್ರಾಮಿಕ ರೋಗಗಳನ್ನು ಎದುರಿಸುವ ದಕ್ಷ ಮತ್ತು ನವೀನ ವಿಧಾನಗಳನ್ನು ಅಭಿವೃದ್ಧಿ ಪಡಿಸುವಲ್ಲಿ ನಗರಗಳ ಆಡಳಿತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.

ನೀರು ಮತ್ತು ನೈರ್ಮಲ್ಯ ಸಂಸ್ಥೆಗಳು ನಗರದ ನೈರ್ಮಲ್ಯ ವ್ಯವಸ್ಥೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ಪರಿಸರ ನೈರ್ಮಲ್ಯವು ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯ. ಎಲ್ಲ ಸಾರ್ವಜನಿಕ ಮತ್ತು ಸಮುದಾಯ ಶೌಚಗೃಹಗಳನ್ನು ಸ್ವಚ್ಛಗೊಳಿಸಬೇಕು ಮತ್ತು ಇವು ಹ್ಯಾಂಡ್​ವಾಶ್ ಹಾಗೂ ಟಿಶ್ಯೂಗಳನ್ನು ಹೊಂದಿರಬೇಕು. ಉದ್ಯಾನಗಳು, ಮಾರುಕಟ್ಟೆಗಳು ಮತ್ತು ಶಾಲಾ-ಕಾಲೇಜುಗಳಂತಹ ಸಾರ್ವಜನಿಕ ಸ್ಥಳಗಳು ತ್ಯಾಜ್ಯ ನಿರ್ವಹಣೆ ಮತ್ತು ಸುರಕ್ಷಿತ ವಿಲೇವಾರಿ ವ್ಯವಸ್ಥೆಯನ್ನು ಹೊಂದಿರಬೇಕು. ಈ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸ್ವಚ್ಛ ಭಾರತ ಅಭಿಯಾನ ಮತ್ತು ಅಮೃತ್ (AMRUT) ಯೋಜನೆಯಡಿ ಈಗಾಗಲೇ ಭಾರತದ ಅನೇಕ ನಗರಗಳನ್ನು ಸಜ್ಜುಗೊಳಿಸಲಾಗಿದೆ.

ಜಿಲ್ಲಾಡಳಿತದಿಂದ ಡಿಜಿಟಲ್ ಮೂಲಸೌಕರ್ಯದ ನಿಯಮಿತ ಬಲಪಡಿಸುವಿಕೆ ಮತ್ತು ಮೇಲ್ವಿಚಾರಣೆಯ ಅಗತ್ಯ. ಕರೊನಾ ವೈರಸ್ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚುವಲ್ಲಿ ಮತ್ತು ಎದುರಿಸುವಲ್ಲಿ ಕೇರಳ ರಾಜ್ಯ ಮುಂಚೂಣಿಯಲ್ಲಿದೆ. ಪಾಸಿಟಿವ್ ಪ್ರಕರಣಗಳನ್ನು ಪ್ರತ್ಯೇಕವಾಗಿ ಇರಿಸಲು ಮತ್ತು ಚಿಕಿತ್ಸೆ ನೀಡಲು ಇದು ತನ್ನ ಡಿಜಿಟಲ್ ಆರೋಗ್ಯ ಮೂಲಸೌಕರ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ.

ಸನ್ನದ್ಧತೆಯನ್ನು ಹೆಚ್ಚಿಸುವಲ್ಲಿ, ಘಟನೆಗಳನ್ನು ನಿಗ್ರಹಿಸುವಲ್ಲಿ ಮತ್ತು ಗುರುತಿಸಲಾದ ಪ್ರಕರಣಗಳ ಹರಡುವಿಕೆಯನ್ನು ತಡೆಯುವಲ್ಲಿ ಡೇಟಾ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದ ನೂರು ಸ್ಮಾರ್ಟ್ ನಗರಗಳಲ್ಲಿ ಸ್ಮಾರ್ಟ್ ಮೂಲಸೌಕರ್ಯ ಜಾರಿಯಲ್ಲಿದೆ. ಇವುಗಳಲ್ಲಿ ಡೇಟಾ ಸಂಗ್ರಹಣೆ ಮತ್ತು ನಿರ್ವಹಣೆಯನ್ನು ಪ್ರಾದೇಶಿಕವಾಗಿ ಅನ್ವೇಷಿಸಬಹುದು ಮತ್ತು ವಿಸ್ತರಿಸಬಹುದು. ಭೌಗೋಳಿಕ ಮಾಹಿತಿ ವ್ಯವಸ್ಥೆಗಳ ಮೂಲವು 1854ರಲ್ಲಿ ಜಾನ್ ಸ್ನೋ ಅವರ ಕೆಲಸದೊಂದಿಗೆ ಸಂಬಂಧಿಸಿದೆ. ಇವರು ಲಂಡನ್​ನಲ್ಲಿ ನೀರಿನ ಮೂಲಗಳಂತಹ ಹೆಚ್ಚುವರಿ ಪದರಗಳನ್ನು ಸೇರಿಸಿ ಭೌತಿಕ ನಕ್ಷೆಗಳು ಮತ್ತು ಇನ್ಪೋಗ್ರಾಫಿಕ್ಸ್ ಅನ್ನು ವಿಲೀನಗೊಳಿಸುವ ಮೂಲಕ ಕಾಲರಾ ಪ್ರಕರಣಗಳ ಹರಡುವಿಕೆಯನ್ನು ನಕ್ಷೆ ಮಾಡಿದ್ದವರು. ಕಾಲರಾ ವೈರಸ್ ಗಾಳಿಯ ಬದಲು ನೀರಿನ ಮೂಲಗಳ ಮೂಲಕ ಹರಡುತ್ತದೆ ಎಂದು ಕಂಡುಹಿಡಿಯಲು ಇದು ಕಾರಣವಾಯಿತು. ಈ ರೀತಿಯ ಒಳನೋಟಗಳು ಸೂಕ್ತ ಕ್ರಮಗಳನ್ನು ವೇಗಗೊಳಿಸುತ್ತವೆ.

ಔಷಧ ರಹಿತ ಕ್ರಮಗಳು (ಎನ್​ಪಿಐಗಳು) ಸಾಂಕ್ರಾಮಿಕ ಕಾಯಿಲೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತವೆ. 1918ರಲ್ಲಿ ಕಾಣಿಸಿಕೊಂಡ ಸ್ಪಾ್ಯನಿಷ್ ಸಾಂಕ್ರಾಮಿಕ ಜ್ವರದಲ್ಲಿ ಜನರ ನಡುವೆ ಸಾಂಕ್ರಾಮಿಕದ ಸಂಪರ್ಕವನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ಜಾರಿಗೆ ತಂದ ಅಮೆರಿಕದ ನಗರಗಳು ರೋಗ ನಿಯಂತ್ರಣ ನೀತಿಗಳನ್ನು ಅಳವಡಿಸಿಕೊಳ್ಳಲು ತಡಮಾಡಿದ ನಗರಗಳಿಗಿಂತ ಗಮನಾರ್ಹವಾಗಿ ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿದ್ದವು. ಫಿಲಡೆಲ್ಪಿಯಾ ಸಾರ್ವಜನಿಕ ಕೂಟಗಳಿಗೆ ಅವಕಾಶ ಮಾಡಿಕೊಟ್ಟರೆ, ಸೇಂಟ್ ಲೂಯಿಸ್ ಎಲ್ಲ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲು ನಿರ್ಧರಿಸಿತು.

ಪರಿಣಾಮವಾಗಿ, ಈ ನಗರಗಳ ನಡುವೆ ಮರಣ ಪ್ರಮಾಣದಲ್ಲಿ ವ್ಯತ್ಯಾಸಗಳು ಕಂಡುಬಂದವು: ವಾರಕ್ಕೆ ಸಾವಿನ ಪ್ರಮಾಣ ಸೇಂಟ್ ಲೂಯಿಸ್​ನಲ್ಲಿ 100,000 ಜನರಿಗೆ 31 ಆಗಿದ್ದರೆ, ಫಿಲಡೆಲ್ಪಿಯಾದಲ್ಲಿ ಸಾವಿನ ಪ್ರಮಾಣ 100,000 ಜನರಿಗೆ 257 ಆಗಿತ್ತು. ಹೀಗಾಗಿ, ಮನೆಯಿಂದ ಕೆಲಸ, ಶಾಲೆ ಮುಚ್ಚುವಿಕೆ, ಸಾರ್ವಜನಿಕ ಕೂಟಗಳನ್ನು ನಿರ್ಬಂಧಿಸುವುದು ಮುಂತಾದ ಔಷಧ ರಹಿತ ಕ್ರಮಗಳು ಸಾಮೂಹಿಕ ಸೋಂಕಿನ ಅಪಾಯದ ಸಾಧ್ಯತೆಗಳನ್ನು ನಿವಾರಿಸುತ್ತವೆ ಮತ್ತು ಸಾಮಾಜಿಕ ದೂರವನ್ನು ಕಾಪಾಡುತ್ತವೆ, ಇದು ರೋಗ ಹರಡುವುದನ್ನು ತಡೆಯುತ್ತದೆ.

ಸಮುದಾಯದೊಂದಿಗೆ ಬಲವಾದ ಸಂವಹನವನ್ನು ಖಾತ್ರಿಪಡಿಸಿಕೊಳ್ಳುವುದು ರಕ್ಷಣೆಯ ಮೊದಲ ಹಂತ. ಕೋವಿಡ್ 19ರಂಥ ಉಸಿರಾಟ ಸಂಬಂಧಿ ಕಾಯಿಲೆಗಳ ರೋಗಲಕ್ಷಣಕ್ಕೆ ಒಳಗಾಗುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ತಜ್ಞ ಆಸ್ಪತ್ರೆ ಚಿಕಿತ್ಸೆಯ ಅಗತ್ಯವಿರುತ್ತದೆ ಮತ್ತು ದ್ವಿತೀಯ ಸೋಂಕುಗಳ ವಿರುದ್ಧ ಹೋರಾಡಲು ರೋಗ ನಿರೋಧಕಗಳ ಅವಶ್ಯಕತೆಯಿರುತ್ತದೆ. ಕೋವಿಡ್ 19 ಸೋಂಕು ಪ್ರಕರಣಗಳನ್ನು ಎದುರಿಸಲು ನಿರ್ಬಂಧಿತ ಕೇಂದ್ರಗಳು ಮತ್ತು ಪ್ರತ್ಯೇಕ ಸೌಲಭ್ಯಗಳನ್ನು ಹೊಂದಿರುವ ತಾತ್ಕಾಲಿಕ ಆಸ್ಪತ್ರೆಗಳು ಅಗತ್ಯವಾಗಿರುತ್ತವೆ. ಈ ಉದ್ದೇಶಕ್ಕಾಗಿ ಬಳಸಬಹುದಾದ ಕಟ್ಟಡಗಳು ಮತ್ತು ಸೌಲಭ್ಯಗಳನ್ನು ಗುರುತಿಸಬೇಕು ಮತ್ತು ಸನ್ನದ್ಧತೆಯ ಕಾರ್ಯತಂತ್ರದ ಭಾಗವಾಗಿ ಅಗತ್ಯವಾದ ಕ್ರಿಮಿನಾಶಕದೊಂದಿಗೆ ಅವುಗಳನ್ನು ಸ್ವಚ್ಛಗೊಳಿಸಬೇಕು.

ಅಗತ್ಯ ಔಷಧಗಳು ಮತ್ತು ಮುಖಗವಸುಗಳು, ವೈದ್ಯಕೀಯ ಬಟ್ಟೆ, ಹ್ಯಾಂಡ್​ವಾಶ್ ಮತ್ತು ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್​ಗಳಂತಹ ಮುನ್ನೆಚ್ಚರಿಕೆಯ ವಸ್ತುಗಳನ್ನು ನಿರ್ವಹಿಸುವುದು ಮತ್ತು ನಿಯಂತ್ರಿಸುವುದು ಅಗತ್ಯ. ಸರ್ಕಾರವು ಅಗತ್ಯ ಸ್ಯಾನಿಟೈಸರ್ ಮತ್ತು ಮುಖಗವಸುಗಳನ್ನು ಜೂನ್ 30ರವೆರೆಗೆ ಅಗತ್ಯ ಸರಕುಗಳ ಕಾಯಿದೆಯಡಿ ‘ಅಗತ್ಯ ಸರಕುಗಳು’ ಎಂದು ಮಾರ್ಚ್ 13ರಂದು ಘೊಷಿಸಿತು. ಬೇಡಿಕೆ-ಪೂರೈಕೆ ಹೊಂದಾಣಿಕೆ, ಬಾಡಿಗೆ-ಬೇಡಿಕೆ, ಸಂಗ್ರಹಣೆ ಮತ್ತು ಅತಿಯಾದ ಬೆಲೆಗಳ ಪರಿಸ್ಥಿತಿಯನ್ನು ತಪ್ಪಿಸಲು ಈ ಕ್ರಮ ಮುಖ್ಯವಾಗಿತ್ತು. ಪ್ರತಿ ಜಿಲ್ಲೆಯು ಈ ವಸ್ತುಗಳ ದಾಸ್ತಾನುಗಳನ್ನು ನಿರ್ವಹಿಸಬೇಕು ಮತ್ತು ಔಷಧಾಲಯಗಳು ದಬ್ಬಾಳಿಕೆ ಮಾಡದಂತೆ ನೋಡಿಕೊಳ್ಳಬೇಕು.

ಸಾರ್ವಜನಿಕ ಸಾರಿಗೆ ಸಂಸ್ಥೆಗಳು ನಿಯಮಿತವಾಗಿ ನಿಗದಿತ ಶುಚಿಗೊಳಿಸುವಿಕೆಯನ್ನು ಹೆಚ್ಚಿಸಬೇಕು ಮತ್ತು ತಮ್ಮನ್ನು ಮತ್ತು ಇತರರನ್ನು ರಕ್ಷಿಸಿಕೊಳ್ಳಲು ಉತ್ತಮ ಅಭ್ಯಾಸಗಳ ಬಗ್ಗೆ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಅರಿವು ಮೂಡಿಸಬೇಕು. ದೆಹಲಿ ಮೆಟ್ರೋ ರೈಲುಗಳು ಮತ್ತು ಮುಂಬೈ ಸ್ಥಳೀಯ ರೈಲುಗಳು ಹಾಗೂ ನಿಲ್ದಾಣಗಳನ್ನು ಕಾರ್ಯಾಚರಣೆಯ ಸಮಯ ಮತ್ತು ಕಾರ್ಯನಿರ್ವಹಿಸದ ಸಮಯದಲ್ಲಿ ಸ್ವಚ್ಛಗೊಳಿಸಿ ಸೋಂಕುರಹಿತ ಮಾಡಲಾಗುತ್ತಿದೆ. ಅಂತಹ ಕ್ರಮಗಳು ಮೋಟಾರುರಹಿತ ವಾಹನಗಳು, ಬಸ್ಸುಗಳು, ರೈಲ್ವೆಗಳು, ಹಡಗುಗಳು ಮುಂತಾದ ಇತರ ಸೇವೆಗಳಲ್ಲೂ ಆಗಬೇಕು. ಕೋವಿಡ್ 19ರ ಪ್ರಯಾಣ-ಸಂಬಂಧಿತ ಅಥವಾ ಸಂಬಂಧವಿಲ್ಲದ ಶಂಕಿತ ಪ್ರಕರಣಗಳನ್ನು ಪತ್ತೆ ಹಚ್ಚಿ ಗೊತ್ತುಪಡಿಸಿದ ಆರೋಗ್ಯ ಸೌಲಭ್ಯಗಳಲ್ಲಿ ತ್ವರಿತವಾಗಿ ಪ್ರತ್ಯೇಕಗೊಳಿಸಬೇಕು ಮತ್ತು ಅಂತಹ ಪ್ರಕರಣಗಳ ಸಂಪರ್ಕ ಹೊಂದಿದ ಎಲ್ಲರ ಪಟ್ಟಿ ತಯಾರಿಸಬೇಕು.

ಕೊನೆಯದಾಗಿ, ಇಂಥ ವೈರಾಣುಗಳು ಉಂಟು ಮಾಡುವ ಪರಿಣಾಮದಿಂದ ನಗರ ಆರ್ಥಿಕತೆ ಹಾನಿಗೊಳಗಾಗುವ ಸಾಧ್ಯತೆಯಿದೆ ಮತ್ತು ನಗರಗಳು ಜಿಡಿಪಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತಿರುವುದರಿಂದ ಇದನ್ನು ನಿರ್ಲಕ್ಷಿಸಲಾಗುವುದಿಲ್ಲ. ಸ್ಥಳೀಯ ಆರ್ಥಿಕ ಪರಿಣಾಮಗಳನ್ನು ಕಡಿಮೆ ಮಾಡುವುದು ಮುಖ್ಯ ಮತ್ತು ಇದನ್ನು ಸಾಧಿಸುವಲ್ಲಿ ಜಿಲ್ಲಾಡಳಿತ ಪ್ರಮುಖ ಪಾತ್ರ ವಹಿಸಬಹುದು. ಅನಿಶ್ಚಿತ ಉದ್ಯೋಗದಲ್ಲಿರುವವರ ಬಗ್ಗೆ ಗಮನ ಹರಿಸಬೇಕು. ಪೂರ್ಣ ಪ್ರಮಾಣದ ಮುನ್ನೆಚ್ಚರಿಕೆ ಕ್ರಮಗಳು ಖಂಡಿತವಾಗಿಯೂ ವ್ಯವಹಾರವನ್ನು ಎಂದಿನಂತೆ ಉಳಿಸಿಕೊಳ್ಳಲು ಸಹಾಯ ಮಾಡುತ್ತವೆ ಮತ್ತು ತ್ವರಿತ ಪ್ರತಿಕ್ರಿಯೆ ದೀರ್ಘಕಾಲೀನ ಪರಿಣಾಮಗಳನ್ನು ಕಡಿಮೆ ಮಾಡುತ್ತವೆ.

ಉತ್ತಮ ನಿರ್ವಹಣೆ ಮತ್ತು ಯೋಜನಾಬದ್ಧ ನಗರ ವ್ಯವಸ್ಥೆ ಸಾಂಕ್ರಾಮಿಕ ರೋಗ ಮತ್ತು ಅಪಾಯಗಳನ್ನು ಕಡಿಮೆ ಮಾಡುತ್ತದೆ. ಭಾರತದ ನಗರ ವ್ಯವಸ್ಥೆ ಹೆಚ್ಚು ಸಂಘಟಿತವಾದ ಮತ್ತು ಔಪಚಾರಿಕ ಅಭಿವೃದ್ಧಿಯನ್ನು ಸಾಧಿಸಬೇಕಾಗುತ್ತದೆ. ವೈರಸ್​ಗೆ ಜನರ ನಿರೋಧಕ ಶಕ್ತಿ ಕಡಿಮೆ ಇದ್ದರೂ ಅಥವಾ ಇಲ್ಲದಿದ್ದರೂ, ಪೂರ್ವಭಾವಿ ಯೋಜನೆ ಮತ್ತು ಅನುಷ್ಠಾನದೊಂದಿಗೆ ಕೆಟ್ಟ ಪರಿಸ್ಥಿತಿಯನ್ನು ತಪ್ಪಿಸಲು ಈ ಸಾಂಕ್ರಾಮಿಕ ರೋಗದ ಪರಿಣಾಮವನ್ನು ಕಡಿಮೆ ಮಾಡಬಹುದು.

(ಅಮಿತಾಭ್ ಕಾಂತ್ ನೀತಿ ಆಯೋಗದ ಸಿಇಒ, ರಿಚಾ ರಶ್ಮಿ ನೀತಿ ಆಯೋಗದ ಯುವ ಉದ್ಯೋಗಿ. ಇಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ವೈಯಕ್ತಿಕವಾದವು) (ಕೃಪೆ: ಪಿಐಬಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net