ಸಸ್ಯವಾಗತ್ತೆ ಈ ಕೀಟ- ಪ್ರಕೃತಿ ಸೃಷ್ಟಿಸಿದ ಕೌತುಕವಿದು..

Cordyceps sinensis
Published on

ನೀವು ಇಷ್ಟು ದಿನ ಕೀಟ ಜಾತಿಯ ಪ್ರಭೇದಗಳನ್ನು ಮತ್ತು ಸಸ್ಯ ಜಾತಿಯ ಪ್ರಭೇದಗಳನ್ನು ನೋಡಿದ್ದೀರಿ, ಕೀಟ ತಿನ್ನುವ ಸಸ್ಯಗಳ ಬಗ್ಗೆಯೂ ಕೇಳಿದ್ದೀರಿ. ಆದರೆ ಕೀಟ ಜಾತಿ ಮತ್ತು ಸಸ್ಯ ಜಾತಿಯನ್ನೊಳಗೊಂಡ ಕೀಟಸಸ್ಯ ಜಾತಿಯ ಪ್ರಭೇದಗಳ ಬಗ್ಗೆ ಕೇಳಿದ್ದೀರಾ? ಹಾಗಾದರೆ ಬನ್ನಿ...ಈ ಕೀಟಸಸ್ಯದ ಬಗ್ಗೆ ಇಲ್ಲಿದೆ ನೋಡಿ ವಿವರ

ಇಲ್ಲಿರುವ ಚಿತ್ರದಲ್ಲಿ ಕಾಣಿಸುತ್ತಿದೆಯಲ್ಲ. ಇದು ಶಿಲೀಂಧ್ರ ಜಾತಿಗೆ ಸೇರಿದ ಸಸ್ಯ. ಇದರ ವಿಶೇಷತೆಯೆಂದರೆ ಇದು ಕೀಟವೂ ಹೌದು, ಸಸ್ಯವೂ ಹೌದು. ಇದರ ಹೆಸರು ಕಾರ್ಡಿಸೆಪ್ಸ್ ಸಿನೆನ್ಸಿಸ್ (Cordyceps sinensis). ಪ್ರಾಚೀನ ರೋಮನ್ ಭಾಷೆಯಲ್ಲಿ ‘ಕಾರ್ಡ್’ ಎಂದರೆ ಬೆತ್ತ ಮತ್ತು ‘ಸೆಪ್ಸ್’ ಎಂದರೆ ತಲೆ. ಇವುಗಳ ಜೋಡಣೆಯಾಗಿ ಬೆತ್ತದಾಕಾರದ ತಲೆ ಎಂಬ ಹೆಸರು ಇದಕ್ಕೆ ಬಂದಿದೆ. ಈ ಶಿಲೀಂಧ್ರಗಳು ಹೆಚ್ಚಾಗಿ ನೇಪಾಳ, ಚೀನಾ, ಜಪಾನ್, ಭೂತಾನ್, ಕೊರಿಯಾ, ವಿಯಟ್ನಾಮ್, ಥಾಯ್ಲೆಂಡ್ ದೇಶಗಳಲ್ಲಿ ಕಂಡುಬಂದರೂ ಭಾರತದ ಪಶ್ಚಿಮ ಹಿಮಾಲಯದ ಹುಲ್ಲುಗಾವಲಿನಲ್ಲಿ ಹೇರಳವಾಗಿ ಬೆಳೆಯುತ್ತವೆ.  ಭಾರತದಲ್ಲಿ ಇದನ್ನು ಕೀಡಾ ಜಡಿ ಎಂದು ಕರೆದರೆ, ಚೀನಾದವರು ಇದನ್ನು ಡಾಂಗ್ ಚಾಂಗ್ ಕ್ಸಿಯಾ ಕಾವೊ ಎಂದು ಕರೆಯುತ್ತಾರೆ, ಅಂದರೆ ಚಳಿಗಾಲದ ಕೀಟ ಬೇಸಿಗೆಗಾಲದ ಹುಲ್ಲು ಎಂದರ್ಥ.

ಔಷಧೀಯ ಶಿಲೀಂಧ್ರ: ಕಾರ್ಡಿಸೆಪ್ಸ್​ನಲ್ಲಿ ಅಪಾರ ಔಷಧೀಯ ಗುಣಗಳು ಇರುವ ಕಾರಣ ಇದನ್ನು ‘ಹಿಮಾಲಯದ ಬಂಗಾರ’ವೆಂದು ಕರೆಯುತ್ತಾರೆ. ಈ ಶಿಲೀಂಧ್ರದ ಉದ್ದ 8 ರಿಂದ 12 ಸೆಂ.ಮೀ ಇದೆ. ಕಾರ್ಡಿಸೆಪ್ಸ್ ಔಷಧಿಯ ಗುಣಗಳನ್ನು ಹೊಂದಿರುವುದರಿಂದ ಕೆಲವು ದೇಶಗಳಲ್ಲಿ ಇದನ್ನು ಚಹದ ಜತೆ ಬೆರೆಸಿ ಕುಡಿಯುತ್ತಾರೆ. ಚೀನಾದ ಓಟಗಾರರು ಈ ಶಿಲೀಂಧ್ರ ಬಲವರ್ಧಕ ಮೂಲಿಕೆಯೆಂದು ತಿಳಿದು ಹೆಚ್ಚಾಗಿ ಉಪಯೋಗಿಸುತ್ತಾರೆ. ಕ್ರೀಡಾಪಟುಗಳು ಸೇವಿಸಿ ಕ್ರೀಡಾವಲಯಗಳಲ್ಲಿ ಹಳೆಯ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ಮಾಡಿದ್ದಾರೆ.

ಈ ಔಷಧೀಯ ಗುಣಗಳಿಂದಾಗಿಯೇ ಇದನ್ನು ಹುಡುಕುತ್ತಾ ಬೇಸಿಗೆ ಕಾಲದಲ್ಲಿ ಹಿಮಾಲಯದತ್ತ ಹೋಗುವವರ ಸಂಖ್ಯೆ ಹೆಚ್ಚಿದೆ. ಇದು ತೀರಾ ಚಿಕ್ಕದಾಗಿರುವ ಕಾರಣ, ಏಕಾಗ್ರತೆಯಿಂದ ಹುಡುಕಾಟ ನಡೆಸಬೇಕಾಗುತ್ತದೆ. ಇವುಗಳನ್ನು ಸಂಗ್ರಹಿಸಿ ಬ್ರಷ್​ನಿಂದ ಸ್ವಚ್ಛಮಾಡಿ ಒಣಗಿಸಿ ಕೊನೆಗೆ ಮಾರಾಟ ಮಾಡುತ್ತಾರೆ. ಈ ಶಿಲೀಂಧ್ರಕ್ಕೆ ಒಂದು ಕೆ.ಜಿಗೆ 60 ಸಾವಿರದಿಂದ ಮೂರು ಲಕ್ಷ ರೂಪಾಯಿವರೆಗೂ ಬೆಲೆ ಇದೆ. ವ್ಯಾಯಾಮ ಮಾಡುವಾಗ ದೇಹದಲ್ಲಿ Adenosine Triphosphate ಉತ್ಪಾದಿಸಿ ಸ್ನಾಯುಗಳಿಗೆ ಶಕ್ತಿಯನ್ನು ಒದಗಿಸುತ್ತದೆ, ವಯಸ್ಸಾಗುವುದನ್ನು ತಡೆಯುತ್ತದೆ, ಕೆಲವು ಬಗೆಯ ಕ್ಯಾನ್ಸರ್​ಗಳನ್ನು ತಡೆಗಟ್ಟುತ್ತದೆ ಹಾಗೂ ಮಧುಮೇಹ, ಹೃದ್ರೋಗ, ಉರಿಯೂತ, ಕಿಡ್ನಿಗೆ ಸಂಬಂಧಪಟ್ಟ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ ಎಂಬುದಾಗಿ ಸಂಶೋಧನೆಗಳು ಹೇಳಿರುವ ಕಾರಣ, ಅನೇಕ ಔಷಧಿಗಳಲ್ಲಿಯೂ ಇದರ ಬಳಕೆ ಆಗುತ್ತಿದೆ. ಚೀನಾದವರು ತಮ್ಮ ದೇಶದ ಆಸ್ಪತ್ರೆಗಳಲ್ಲಿ ಔಷಧಿಯನ್ನಾಗಿ ಉಪಯೋಗಿಸಲು ಅನುಮತಿ ಕೊಟ್ಟಿದ್ದಾರೆ.

ಸಸ್ಯವಾಗುವ ರೀತಿ ಹೀಗೆ...

ಕಾರ್ಡಿಸೆಪ್ಸ್ ಪರಾವಲಂಬಿ ಶಿಲೀಂಧ್ರವಾಗಿದೆ. ಕಂಬಳಿ ಹುಳಗಳ ಜಾತಿಗೆ ಸೇರಿರುವ ಹೆಪಿಲಸ್ ಫ್ಯಾಬ್ರಿಸಿಯಸ್ (Hepilus fabricius) ಎಂಬ ಕೀಟದ ದೇಹದೊಳಗೆ Ophiocordyceps Sinensis ಎಂಬ ಶಿಲೀಂಧ್ರ ಸೇರಿಕೊಂಡಾಗ ಆ ಕೀಟಕ್ಕೆ ಸೋಂಕು ತಗುಲಿ ಅದು ಸಾಯುತ್ತದೆ. ಅದು ಮಣ್ಣನ್ನು ಸೇರಿದಾಗ, ಈ ಕೀಟದ ತಲೆಯಿಂದ ಶಿಲೀಂಧ್ರವು ಬೆತ್ತದಾಕಾರವಾಗಿ ಭೂಮಿಯಿಂದ ಹೊರಬರುತ್ತದೆ. ಅದು ತನ್ನ ಬೀಜಗಳನ್ನು ಎಲ್ಲೆಡೆ ಪಸರಿಸುತ್ತದೆ.  ಆಮೇಲೆ ಶಿಲೀಂಧ್ರಗಳ ಬೀಜಗಳು ಪುನಃ ಮರಿಗಳಾಗುತ್ತವೆ. ಪುನಃ ಅವು ಬೇರೆ ಮರಿಹುಳುಗಳ ದೇಹದ ಒಳಗೆ ಸೇರಿ ಅವುಗಳಿಗೆ ಸೋಂಕು ತಲುಗಿಸಿ ಸಾಯಿಸುತ್ತವೆ. ಅವು ಪುನಃ ಭೂಮಿಯೊಳಕ್ಕೆ ಹೋಗಿ ಸಸ್ಯಗಳಾಗಿ ಬೆಳೆಯುತ್ತವೆ.

(ನವೀನ ಪ್ಯಾಟಿಮನಿ ಲೇಖಕರು ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ, ಧಾರವಾಡದ ಸಹಾಯಕ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net