

ಡೊನಾಲ್ಡ್ ಟ್ರಂಪ್ ಎರಡನೆಯ ಬಾರಿಗೆ ಶ್ವೇತಭವನ ಪ್ರವೇಶಿಸುವಾಗ ಅವರು ತಮ್ಮ ಮುಂದೆ ಹಾಕಿಕೊಂಡ ಗುರಿಗಳಲ್ಲಿ ಮುಖ್ಯವಾದುವು ಅಧಿಕ ಆಮದು ಮತ್ತು ಕಡಿಮೆ ರಫ್ತಿನಿಂದಾಗಿ ಅಮೆರಿಕಾ ಅನುಭವಿಸುತ್ತಿದ್ದ ಅಗಾಧ ಸಂದಾಯ ಬಾಕಿ (Balance of Payment) ಕೊರತೆಯನ್ನು ಹೋಗಲಾಡಿಸುವುದು ಮತ್ತು ಇರಾನಿ ಅಣ್ವಸ್ತ್ರ ಯೋಜನೆಯನ್ನು ತಹಬಂದಿಗೆ ತರುವುದು. ಇವೆರಡರಲ್ಲೂ ಅವರಿಗೆ ಪಾಕಿಸ್ತಾನದ ಸಹಕಾರ ಅಗತ್ಯವಾಗಿತ್ತು. ಆದರೆ ಪಾಕಿಸ್ತಾನದ ಸಹಕಾರ ದೊರೆಯುವಲ್ಲಿ ಭಾರತದ ಪಾತ್ರ ಹಿರಿದಾಗಿತ್ತು. ಈ ವಿಷಯದಲ್ಲಿ ಟ್ರಂಪ್ರ ನಿರೀಕ್ಷೆಗಳು ತಲೆಕೆಳಗಾದವು. ಮೊದಲಿಗೆ ಇರಾನ್ ಪ್ರಶ್ನೆಯನ್ನೇ ಎತ್ತಿಕೊಳ್ಳೋಣ.
ಇರಾನಿ ಅಣ್ವಸ್ತ್ರಗಳು ಇಸ್ರೇಲ್ಗೆ ನೇರವಾಗಿ ಅಪಾಯಕಾರಿ, ಅದರೊಂದಿಗೆ ಪಶ್ಚಿಮ ಏಷ್ಯಾದಲ್ಲಿ ಅಮೆರಿಕಾದ ಹಿತಾಸಕ್ತಿಗಳಿಗೂ ಸಹ. ಇದರೊಂದಿಗೆ ತಮ್ಮನ್ನು ಚುನಾವಣೆಗೂ ಮೊದಲೇ ತಮ್ಮ ಮಾರಾ ಲಾಗೋ ನಿವಾಸದ ಗಾಲ್ಪ್ ಕೋರ್ಟ್ನಲ್ಲಿ ಹತ್ಯೆಗೈಯಲು ತೆಹರಾನ್ ಸಂಚು ಹೂಡಿತ್ತೆನ್ನಲಾದ ವಿಷಯ ಆ ದೇಶದ ಮೇಲೆ ಟ್ರಂಪ್ ವೈಯಕ್ತಿಕವಾಗಿಯೂ ಅಸಹನೆ ಬೆಳೆಸಿಕೊಳ್ಳಲು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇರಾನ್-ಇಸ್ರೇಲ್ ಸಮರಕ್ಕೆ ಕ್ಷಣಗಣನೆ 2025ರ ಜನವರಿ 20ರಂದೇ ಆರಂಭವಾಯಿತು ಮತ್ತು ಅದರಲ್ಲಿ ಅಮೆರಿಕಾದ ಪಾತ್ರದ ಕಲ್ಪನೆ ಟ್ರಂಪ್ರಿಗೆ ಇದ್ದೇ ಇತ್ತು.
ಅಂತಹ ಸನ್ನಿವೇಶದಲ್ಲಿ ಅಮೆರಿಕಾಗೆ ಅನುಕೂಲಕರವೆನಿಸುತ್ತಿದ್ದುದು ಪಾಕಿಸ್ತಾನದ ವಾಯುನೆಲೆಗಳು, ಮುಖ್ಯವಾಗಿ ರಾವಲ್ಪಿಂಡಿ ಸನಿಹದ ನೂರ್ ಖಾನ್ ನೆಲೆ. ಯಾಕೆಂದರೆ ಅದರ ಒಂದು ಭಾಗ ಅಫ್ಘನ್ ಯುದ್ಧದ ದಿನಗಳಿಂದಲೂ ಅಮೆರಿಕಾದ ನಿಯಂತ್ರಣದಲ್ಲಿತ್ತು ಮತ್ತದು ತಾಲಿಬಾನಿ ಅಫ್ಘಾನಿಸ್ತಾನದ ವಿರುದ್ಧದ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅದೇ ಪಾತ್ರವನ್ನು ಅದು ಇರಾನ್-ಅಮೆರಿಕಾ ಘರ್ಷಣೆಯಲ್ಲೂ ವಹಿಸುತ್ತದೆ ಎನ್ನುವುದು ಟ್ರಂಪ್ರ ನಿರೀಕ್ಷೆಯಾಗಿತ್ತು. ಆದರೆ ಅವರಿಗೆ ನಿರಾಸೆ ಉಂಟಾದದ್ದು ಏಪ್ರಿಲ್ 9-10ರ ರಾತ್ರಿ ಭಾರತೀಯ ವಾಯುಪಡೆ ನಡೆಸಿದ ಕಾರ್ಯಾಚರಣೆಯಿಂದ. ನೂರ್ ಖಾನ್ ನೆಲೆಯಷ್ಟೇ ಅಲ್ಲ, ಗ್ವಾದಾರ್ ಸನಿಹ ಸಣ್ಣ ಪಾಸ್ನಿ ನೆಲೆಯ ಹೊರತಾಗಿ ಪಾಕಿಸ್ತಾನದ ಎಲ್ಲ ಪ್ರಮುಖ ವಾಯುನೆಲೆಗಳು ಆ ರಾತ್ರಿ ತಿಂಗಳುಗಳವರೆಗೆ ಉಪಯೋಗವಾಗದಷ್ಟು ಮಟ್ಟಿಗೆ ಕ್ಷತಿಗೊಂಡದ್ದು ಟ್ರಂಪ್ರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿತು.
ಅಲ್ಲಿಯವರೆಗೆ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಕೈಗೊಳ್ಳಬಹುದಾದ ಕಾರ್ಯಾಚರಣೆಗಳಿಗೆ ಟ್ರಂಪ್ ಆಡಳಿತ ತಕರಾರನ್ನೇನೂ ಎತ್ತಿರಲಿಲ್ಲ. ಆದರೆ ಭಾರತ ಮಾಡಿದ್ದು ಟ್ರಂಪ್ ಆಡಳಿತ ಎಣಿಸಿದ್ದಷ್ಟು ‘ಸಣ್ಣ’ದೇನೂ ಆಗಿರಲಿಲ್ಲ. ಭಾರತ-ಪಾಕಿಸ್ತಾನ ಸಮಸ್ಯೆ ಅಮೆರಿಕಾದ ಸಮಸ್ಯೆಯೂ ಆಗಿ ಟ್ರಂಪ್ರಿಗೆ ಕಂಡದ್ದು ಆಗ. ಪಾಕಿಸ್ತಾನದ ಬೇಡಿಕೆಗೆ ಬೆಲೆ ಕೊಟ್ಟು ಭಾರತ ಏಪ್ರಿಲ್ 10ರ ಸಂಜೆ 5 ಗಂಟೆಗೆ ತನ್ನ ದಾಳಿಯನ್ನು ನಿಲುಗಡೆಗೆ ತರಲು ಸಮ್ಮತಿಸಿದಾಗ ಟ್ರಂಪ್ರಿಗೆ ಅದೆಷ್ಟು ‘ನೆಮ್ಮದಿ’ಯಾಯಿತೆಂದರೆ ತಾವೇ ಕದನವಿರಾಮ ಸಾಧಿಸಿದ ಹಿಗ್ಗು ಅವರಿಗೆ.
ಇಷ್ಟಾಗಿಯೂ ಇರಾನ್ ವಿರುದ್ಧದ ಸಮರ ಸನ್ನಿಹಿತವೇ ಆದಾಗ ಟ್ರಂಪ್ ಪಾಕಿಸ್ತಾನದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಹೊಂದಿರುವ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಪರೇಷನ್ ಸಿಂಧೂರದ ನಂತರದ ಪಾಕಿಸ್ತಾನದಿಂದ ಸಿಗಬಹುದಾದ ಅಳಿದುಳಿದ ಸಹಕಾರಕ್ಕೆ ವ್ಯವಸ್ಥೆ ಮಾಡಿಕೊಂಡರು. ಅದಕ್ಕಾಗಿ ಅವರು ಫೀಲ್ಡ್ ಮಾರ್ಷಲ್ ಮುನೀರ್ಗೆ ಶ್ವೇತಭವನದಲ್ಲಿ ಭೋಜನ ನೀಡಿದರು. ಜತೆಗೆ, ಸೆಪ್ಟೆಂಬರ್ನಲ್ಲಿ ಸೇನಾ ಕ್ರಾಂತಿ ಎಸಗಿ ಪಾಕಿಸ್ತಾನದ ಸೇನಾ ಸರ್ವಾಧಿಕಾರಿಯಾಗಲು ಸಹಕರಿಸುವ ಆಶ್ವಾಸನೆಯನ್ನೂ ಮುನೀರ್ಗೆ ಟ್ರಂಪ್ ನೀಡಿದ್ದಾರೆಂದು ಸುದ್ದಿ. ಜೂನ್ 22ರಂದು ಇರಾನ್ ಮೇಲಿನ ‘ಆಪರೇಷನ್ ಮಿಡ್ನೈಟ್ ಹ್ಯಾಮರ್’ ದಾಳಿ ಅಂತಿಮ ದಾಳಿಯಲ್ಲ ಎಂದು ಟ್ರಂಪ್ರಿಗೆ ಗೊತ್ತೇ ಇದೆ. ಮತ್ತೊಂದು, ಬಹುಶಃ ಅಂತಿಮ ದಾಳಿ ಯಾವಾಗ ಬೇಕಾದರೂ ಆರಂಭವಾಗಬಹುದು, ಅದಕ್ಕಾಗಿ ಇಸ್ರೇಲ್ ಅನ್ನು ಟ್ರಂಪ್ ಆಡಳಿತ ಸಿದ್ಧಗೊಳಿಸುತ್ತಿದೆ.
ಆ ದಾಳಿ ಇರಾನಿ ಅಣ್ವಸ್ತ್ರ ಯೋಜನೆಯನ್ನು ನಿರ್ಣಾಯಕವಾಗಿ ನಿಲುಗಡೆಗೆ ತರಬೇಕಾದರೆ ಪ್ರಸಕ್ತ ಇರಾನಿ ನಾಯಕತ್ವವನ್ನೂ ಬದಲಿಸಲೇಬೇಕಾದ ಅಗತ್ಯವಿದೆ. ಅದರಲ್ಲಿ ಅಮೆರಿಕಾದ ಸೇನೆಯ ನೇರ ಪಾತ್ರವಿರಬೇಕಾಗುತ್ತದೆ. ಅಂದರೆ ಅಫ್ಘನ್ ಯುದ್ಧದಲ್ಲಿ ಪಾಕಿಸ್ತಾನ ಯಾವ ಪಾತ್ರ ವಹಿಸಿತ್ತೋ ಅದನ್ನೇ ನಿರೀಕ್ಷಿತ ಇರಾನ್ ಯುದ್ಧದಲ್ಲೂ ಆ ದೇಶ ಮಾಡಬೇಕಾಗುತ್ತದೆ. ಯಾಕೆಂದರೆ ಅಂತಹ ಸಹಕಾರಕ್ಕೆ ಇರಾನ್ನ ಪಶ್ಚಿಮದ ಅರಬ್ ನೆರೆನಾಡುಗಳು ತಯಾರಾಗಿಲ್ಲ. ಅಮೆರಿಕಾಗೆ ಪಾಕಿಸ್ತಾನ ಮುಖ್ಯವೆನಿಸುವುದು ಈ ಕಾರಣಕ್ಕಾಗಿ. ಹಾಗೆಯೇ ಪಾಕಿಸ್ತಾನಿ ವಾಯುನೆಲೆಗಳನ್ನು ಧ್ವಂಸ ಮಾಡಿ ಅಷ್ಟರ ಮಟ್ಟಿಗೆ ತಮ್ಮ ಇರಾನ್ ಯೋಜನೆಯನ್ನು ಕಷ್ಟಕರವಾಗಿಸಿದ ಭಾರತ ಟ್ರಂಪ್ರಿಗೆ ಅಪ್ರಿಯವಾಯಿತು.
ಈಗ ಆರ್ಥಿಕ ವಿಷಯಕ್ಕೆ ಬರೋಣ. ಭಾರತವನ್ನು ‘ಸುಂಕ ಸಾಮ್ರಾಟ’ ಎಂದೆಲ್ಲ ಟ್ರಂಪ್ ಕರೆದದ್ದು, ಅಧಿಕ ಸುಂಕ ವಿಧಿಸುವ ಬೆದರಿಕೆಯೊಡ್ಡಿದ್ದು ನಿಜವೇ. ಆದರೆ ಭಾರತ ತಮ್ಮಿಂದ ಅಧಿಕ ಬೆಲೆಯ ಶಸ್ತ್ರಾಸ್ತ್ರಗಳನ್ನು ಖರೀದಿಸಿ ಸಂದಾಯ ಬಾಕಿ ಅಮೆರಿಕಾದ ಪರವಾಗಿ ತಿರುಗುವಂತೆ ಮಾಡುವ, ಹಾಗಾದಲ್ಲಿ ಭಾರತವನ್ನು ತಮ್ಮ ಸುಂಕ ಸಮರದಿಂದ ಹೊರಗಿಡುವ ಆಲೋಚನೆಯೂ ಟ್ರಂಪ್ರಿಗಿತ್ತು. ಹೀಗಾಗಿಯೇ ಅವರು ಫೆಬ್ರವರಿ 14ರಂದು ಎಫ್-35 ಯುದ್ಧವಿಮಾನಗಳನ್ನು ಭಾರತಕ್ಕೆ ಮಾರುವ ಪ್ರಸ್ತಾಪ ಮಾಡಿದ್ದು. ಮೊದಲಿಗೆ 49% ಸುಂಕದ ಬೆದರಿಕೆಗೊಳಗಾದ ಕಾಂಬೋಡಿಯಾ ಬೋಯಿಂಗ್ ಕಂಪನಿಯ ಇಪ್ಪತ್ತು ಪ್ರಯಾಣಿಕರ ವಿಮಾನಗಳನ್ನು ಖರೀದಿಸಲು ತಯಾರಾಗಿ ಸುಂಕವನ್ನು 19%ಗೆ ಇಳಿಸಿಕೊಂಡು ‘ಬದುಕಿದೆಯಾ ಬಡಜೀವವೇ’ ಎಂದು ನಿಟ್ಟುಸಿರುಗರೆದದ್ದನ್ನು ಇಲ್ಲಿ ನೆನಪಿಸಿಕೊಳ್ಳಿ. ಆದರೆ ಕಾಂಬೋಡಿಯಾ ಆಗಲು ಭಾರತ ತಯಾರಾಗುತ್ತಿಲ್ಲ.
ಟ್ರಂಪ್ ಮುಂದೆ ಹಿಡಿದ ಎಫ್-35 ಯುದ್ಧವಿಮಾನಗಳ ನಿರಾಕರಣೆಗೂ ಭಾರತ ಸೂಕ್ತ ಕಾರಣಗಳನ್ನು ಮುಂದಿಟ್ಟಿದೆ. ಆ ಯುದ್ಧವಿಮಾನಗಳ ದುಬಾರಿತನ ಹಾಗೂ ಅದು ಅಮೆರಿಕಾ ಹೇಳುವಷ್ಟು ಮಹಾನ್ ಅಲ್ಲ ಎನ್ನುವುದು ಹಾರುವುದನ್ನು ಮರೆತು 2025ರ ಜೂನ್ 14ರಿಂದ ಒಂದಿಡೀ ತಿಂಗಳು ತಿರುವನಂತಪುರಂ ವಿಮಾನನಿಲ್ದಾಣದಲ್ಲಿ ಧೂಳು ಹಿಡಿಯುತ್ತ ನಿಂತ ಬ್ರಿಟಿಷ್ ನೌಕಾದಳದ ವಿಮಾನವೊಂದರಿಂದ ಜಗಜ್ಜಾಹೀರಾಗಿಹೋದದ್ದನ್ನು ಭಾರತ ಸರಿಯಾಗಿಯೇ ಬಳಸಿಕೊಂಡಿದೆ. ಅಲ್ಲದೆ ರಷ್ಯಾದಂತೆ ತಂತ್ರಜ್ಞಾನ ಹಂಚಿಕೆಗೆ ಅಮೆರಿಕಾ ಸಿದ್ಧವಾಗಿಲ್ಲ ಹಾಗೂ ವಿಮಾನಗಳ ಸೋರ್ಸ್ ಕೋಡ್ ನೀಡಲೂ ತಯಾರಿಲ್ಲ. ಹೀಗಾಗಿ ಅವುಗಳಿಗೆ ಭಾರತದ ಬ್ರಹ್ಮೋಸ್ ಸೇರಿದಂತೆ ಸ್ವದೇಶಿ ನಿರ್ವಿುತ ಕ್ಷಿಪಣಿಗಳನ್ನು ಅಳವಡಿಸಿ ಯುದ್ಧಗಳಲ್ಲಿ ಬಳಸಲು ಅವಕಾಶವಿಲ್ಲದಿರುವುದನ್ನೂ ಮುಂದೊಡ್ಡಿ ಆ ವಿಮಾನಗಳ ಖರೀದಿಗೆ ಮೋದಿ ಸರ್ಕಾರ ಹಿಂದೆಗೆದಿದೆ.
ಇದಾವುದನ್ನೂ ಟ್ರಂಪ್ ಆಡಳಿತ ನಿರಾಕರಿಸುವಂತೆಯೇ ಇಲ್ಲ. ಎಫ್-35 ಯುದ್ಧವಿಮಾನಗಳ ಇನ್ನೊಂದು ದೊಡ್ಡ ಸಮಸ್ಯೆಯೆಂದರೆ ಅವುಗಳನ್ನು ಖರೀದಿಸಿದ ದೇಶ ಯುದ್ಧಕಾಲದಲ್ಲಿ ಶತ್ರುದೇಶದ ವಿರುದ್ಧ ಬಳಸಲು ಹೋಗಿ ದಾಳಿಯ ಗುರಿಯನ್ನು ನಿರ್ಧರಿಸಿದರೆ ಆ ವಿವರಗಳು ದಾಖಲಾಗುವುದು ಅಮೆರಿಕಾದಲ್ಲಿರುವ ಸರ್ವರ್ಗಳಲ್ಲಿ! ಅಂದರೆ ಒಂದುವೇಳೆ ಭಾರತ ಆ ವಿಮಾನಗಳನ್ನು ಖರೀದಿಸಿ, ಆಪರೇಷನ್ ಸಿಂಧೂರ್ ಅನ್ನು ಮತ್ತೆ ಚಾಲನೆಗೊಳಿಸಿ ಪಾಕಿಸ್ತಾನದ ಮೇಲೆ ದಾಳಿಯೆಸಗಲು ಹೊರಟರೆ ಆ ವಿವರಗಳು ತಕ್ಷಣ ಅಮೆರಿಕಾಗೆ ತಿಳಿದುಹೋಗುತ್ತೆ! ಆ ವಿವರಗಳನ್ನು ಅಮೆರಿಕಾ ಸರ್ಕಾರ ಪಾಕಿಸ್ತಾನಕ್ಕೆ ತಿಳಿಸುವುದಿಲ್ಲ ಎನ್ನುವುದೇನು ಖಾತ್ರಿ? ಇದು ಸಾಲದು ಎಂಬಂತೆ ಎಫ್-35 ವಿಮಾನಗಳಲ್ಲಿ ‘ಕಿಲ್ ಕೀ’ ಎಂಬುದೊಂದು ಇದೆ ಎಂದು ಹೇಳಲಾಗುತ್ತದೆ. ಅದನ್ನು ಬಳಸಿ ಪ್ರಪಂಚದ ಯಾವುದೇ ಭಾಗದಲ್ಲಿರುವ ಎಫ್-35 ಯುದ್ಧವಿಮಾನಗಳನ್ನು ಅವೆುರಿಕಾ ನಿಷ್ಕ್ರಿಯಗೊಳಿಸಬಹುದಂತೆ. ‘ಅಂತಹದ್ದೇನೂ ಇಲ್ಲ’ ಎಂದು ಲಾಕ್ಹೀಡ್ ಮಾರ್ಟೀನ್ ಸಂಸ್ಥೆ ಹೇಳಿಕೆ ನೀಡಿದ್ದರೂ ಆ ಸಮಸ್ಯೆಯ ಕುರಿತಾಗಿ ನ್ಯಾಟೋ ದೇಶಗಳೇ ಮಾತಾಡತೊಡಗಿವೆ! ಟ್ರಂಪ್ರ ಅಮೆರಿಕಾದ ಸೇನಾ ಸಹಯೋಗಿ ನ್ಯಾಟೋ ದೇಶಗಳ ಹಣೆಬರಹವೇ ಹೀಗಾದರೆ ನಮ್ಮ ಕಥೆಯೇನು?
ಈ ಎಲ್ಲ ಕಾರಣಗಳಿಂದಾಗಿ ಎಫ್-35 ಯುದ್ಧವಿಮಾನಗಳು ತನಗೆ ಬೇಕಾಗಿಲ್ಲ ಎಂದು ಭಾರತ ಸರ್ಕಾರ ಟ್ರಂಪ್ ಆಡಳಿತಕ್ಕೆ ಸ್ಪಷ್ಟವಾಗಿ ತಿಳಿಸಿದೆ. ಪರಿಣಾಮವಾಗಿ ವಿಮಾನ ಖರೀದಿ ವ್ಯವಹಾರದ ಮಾತುಕತೆಗಳಿಗಾಗಿ ಜುಲೈ ಮಧ್ಯಭಾಗದಲ್ಲಿ ನವದೆಹಲಿಗೆ ಬರಲಿದ್ದ ಪೆಂಟಗನ್ ನಿಯೋಗದ ಭಾರತ ಭೇಟಿ ರದ್ದಾಯಿತು. ಇದು ಟ್ರಂಪ್ರಿಗೆ ದೊಡ್ಡ ನಿರಾಸೆ. ಭಾರತಕ್ಕೆ ದುಬಾರಿ ಬೆಲೆಯ ವಿಮಾನಗಳನ್ನು ಮಾರಿ ಒಂದೇ ಗಂಟಿನಲ್ಲಿ ನಾಲ್ಕೈದು ಬಿಲಿಯನ್ ಡಾಲರ್ಗಳನ್ನು ಜೇಬಿಗಿಳಿಸುವ, ನಂತರ ಅವುಗಳ ನಿರ್ವಹಣೆಗೆಂದು ವರ್ಷವರ್ಷವೂ ಬಿಲಿಯನ್ಗಟ್ಟಲೆ ಡಾಲರ್ಗಳನ್ನು ಭಾರತದಿಂದ ಪೀಕಿಸುವ ಆ ವ್ಯವಹಾರಸ್ಥ ಅಧ್ಯಕ್ಷರ ಕನಸು ಭಗ್ನ! ಒಟ್ಟಾರೆ, ಭಾರತ-ಅಮೆರಿಕಾ ವ್ಯಾಪಾರ ವಹಿವಾಟನ್ನು ಈಗಿರುವ ವಾರ್ಷಿಕ 130 ಬಿಲಿಯನ್ ಡಾಲರ್ಗಳಿಂದ ಮುಂದಿನ ಐದು ವರ್ಷಗಳಲ್ಲಿ 500 ಬಿಲಿಯನ್ ಡಾಲರ್ಗಳಿಗೇರಿಸಿ ಅದನ್ನು ತಮ್ಮ ದೇಶಕ್ಕೆ ಲಾಭದಾಯಕವಾಗುವಂತೆ ಪರಿವರ್ತಿಸಿಕೊಳ್ಳುವ ಅವರ ಲೆಕ್ಕಾಚಾರಗಳೆಲ್ಲವೂ ತಲೆಕೆಳಗು!
ಯಾವುದೇ ನಿರಾಕರಣೆಯನ್ನು ಸಹಿಸದ ಮನೋಭಾವದ, ಇದಿರಿನವರ ಮಾತಿನ ಅರ್ಥವನ್ನು ಗ್ರಹಿಸಿ ಮಾನ್ಯಮಾಡುವ ವಿವೇಚನೆಯಿಲ್ಲದ ಟ್ರಂಪ್ರ ಪಿತ್ತ ನೆತ್ತಿಗೇರಲು ಇಷ್ಟು ಸಾಕಿತ್ತು. ಆದರೆ ಇದನ್ನು ನೇರವಾಗಿ ಹೇಳಲು ಹಿಂಜರಿದ ಟ್ರಂಪ್ ರಷ್ಯನ್ ತೈಲದ ನೆಪವನ್ನೆತ್ತಿದ್ದಾರೆ. ಇದು ಅವರ ಅತಿ ಬುದ್ಧಿವಂತಿಕೆ! ವಾಸ್ತವವಾಗಿ ಭಾರತದ ರಷ್ಯನ್ ತೈಲ ಖರೀದಿ ಬೈಡೆನ್ ಆಡಳಿತದ ಪ್ರಶಂಸೆಗೆ ಪಾತ್ರವಾಗಿತ್ತು. ಅದಕ್ಕೆ ಕಾರಣವಿದೆ. ಯೂಕ್ರೇನ್ ಆಕ್ರಮಣವನ್ನು ವಿರೋಧಿಸಿದ ಐರೋಪ್ಯ ರಾಷ್ಟ್ರಗಳು ರಷ್ಯನ್ ತೈಲ ಖರೀದಿಯನ್ನು ಮಿತಗೊಳಿಸಿ ಪಶ್ಚಿಮ ಏಷ್ಯಾದತ್ತ ತಿರುಗಿದವು. ಪರಿಣಾಮವಾಗಿ ಪಶ್ಚಿಮ ಏಷ್ಯಾದ ತೈಲದ ಮೇಲೆ ಅವಲಂಬನೆ ಅತಿಯಾದ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಯದ್ವಾತದ್ವಾ ಏರುವಂತಾಯಿತು. ಅದು ಜಾಗತಿಕ ಅರ್ಥವ್ಯವಸ್ಥೆಗೆ ಹಾನಿಕಾರಕ ಸನ್ನಿವೇಶ. ಆಗ ರಷ್ಯನ್ ತೈಲವನ್ನು ಖರೀದಿಸಿ ಪಶ್ಚಿಮ ಏಷ್ಯಾದ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಬೈಡೆನ್ ಆಡಳಿತವೇ ಭಾರತವನ್ನು ಉತ್ತೇಜಿಸಿತು.
ಭಾರತ ಹಾಗೆ ಮಾಡಿದಾಗ ಪ್ರಶಂಸಿಸಿತು ಸಹ. ಆ ಉತ್ತೇಜನ ಹಾಗೂ ಪ್ರಶಂಸೆಯ ಮಾತುಗಳು ಬೈಡೆನ್ ಆಡಳಿತದ ಪ್ರಮುಖರಿಂದಷ್ಟೇ ಅಲ್ಲ, ಆಗ ಭಾರತದಲ್ಲಿ ಅಮೆರಿಕಾದ ರಾಯಭಾರಿಯಾಗಿದ್ದ ಎರಿ ಗ್ಯಾರ್ಸೆಟಿಯವರಿಂದಲೂ ಮುಕ್ತವಾಗಿಯೇ ಬಂದಿವೆ. ಇಷ್ಟಾಗಿಯೂ ರಷ್ಯನ್ ಉತ್ಪಾದನೆಗಳ ಮೇಲೆ ಅವಲಂಬಿತವಾದ ದೇಶಗಳಲ್ಲಿ ಭಾರತ ಅಗ್ರಗಣ್ಯವೇನಲ್ಲ. ಆದರದು ಚೀನಾ ಮತ್ತು ಐರೋಪ್ಯ ಒಕ್ಕೂಟಗಳ ನಂತರ ಮೂರನೆಯ ಸ್ಥಾನ. 2022ರ ಮಾರ್ಚ್ನಿಂದ 2025ರ ಜುಲೈ ನಡುವಿನ ಅವಧಿಯಲ್ಲಿ ರಷ್ಯಾಗೆ ಚೀನಾದಿಂದ 198 ಬಿಲಿಯನ್ ಡಾಲರ್ಗಳು ಮತ್ತು ಐರೋಪ್ಯ ಒಕ್ಕೂಟದಿಂದ 123 ಬಿಲಿಯನ್ ಡಾಲರ್ಗಳು ಸಂದಿವೆ! ಭಾರತ ಪಾವತಿಸಿದ್ದು 120 ಬಿಲಿಯನ್ ಡಾಲರ್. ಆದರೆ ಟ್ರಂಪ್ ಅತಿ ಬುದ್ಧಿವಂತಿಕೆ ತೋರಿ ಭಾರತವನ್ನು ಮಾತ್ರ ಕಟಕಟೆಯಲ್ಲಿ ನಿಲ್ಲಿಸಲು ಹೆಣಗುತ್ತಿದ್ದಾರೆ.
ಐರೋಪ್ಯ ಒಕ್ಕೂಟದ ಸರಕುಗಳ ಮೇಲೆ ಕೇವಲ 15% ಸುಂಕ, ಭಾರತದ ಮೇಲೆ 50%. ಚೀನಾದ್ದು ಇನ್ನೂ ವಿಚಿತ್ರ ಕಥೆ. ಆ ದೇಶದ ಮೇಲೆ 145% ಸುಂಕದ ಘೊಷಣೆ ಮಾಡಿದ್ದ ಟ್ರಂಪ್ ಅದರ ಅನುಷ್ಠಾನವನ್ನು ನವೆಂಬರ್ 10ರವರೆಗೆ ಮುಂದೂಡುವ ಘೊಷಣೆಯನ್ನು ಆಗಸ್ಟ್ 11ರಂದು ಮಾಡಿದ್ದಾರೆ! ಅಂದರೆ ರಷ್ಯಾಗೆ ಅತಿ ಹೆಚ್ಚು ಹಣ ಪಾವತಿಸಿರುವ ಚೀನಾಗೆ ಇಷ್ಟು ರಿಯಾಯಿತಿ! ಇದೇಕೆ ಗೊತ್ತೇ? ಕೃತಕಬುದ್ಧಿಮತ್ತೆಯ ಅಗ್ರಮಾನ್ಯ ಸಂಸ್ಥೆ ‘ಎನ್ವಿಡಿಯಾ’ದ ಎಚ್-20 ಮತ್ತು ‘ಎಎಂಡಿ’ಯ ಎಂಐ-308 ಚಿಪ್ಗಳನ್ನು ಅಧಿಕ ಸಂಖ್ಯೆಯಲ್ಲಿ ಕೊಳ್ಳಲು ಚೀನಾ ಮುಂದೆಬಂದಿದೆ. ಆ ವ್ಯವಹಾರದಲ್ಲಿ ತಮ್ಮ ಗಳಿಕೆಯ 15% ಅನ್ನು ತಮ್ಮ ಸರ್ಕಾರಕ್ಕೆ ಕೊಟ್ಟು ಚೀನಾಗೆ ಬೇಕಾದಷ್ಟು ಚಿಪ್ಗಳನ್ನು ಮಾರುವ ಅವಕಾಶವನ್ನು ಟ್ರಂಪ್ ಪಡೆದಿದ್ದಾರೆ!
ಆ ಅತ್ಯಾಧುನಿಕ ಚಿಪ್ಗಳನ್ನು ಚೀನಾ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಷ್ಟೇ ಅಲ್ಲ, ಶಸ್ತ್ರಾಸ್ತ್ರಗಳ ಅಭಿವೃದ್ಧಿಯಲ್ಲೂ ಬಳಸಿ ಅಮೆರಿಕಾಕ್ಕೆ ಹಾನಿ ಮಾಡಬಹುದಾದ ಅಪಾಯ ಅಮೆರಿಕಾದಲ್ಲೇ ದೊಡ್ಡದಾಗಿ ವ್ಯಕ್ತವಾಗತೊಡಗಿದೆ. ಆದರೆ ಅಧ್ಯಕ್ಷ ಟ್ರಂಪ್ ಮತ್ತು ವ್ಯವಹಾರಸ್ಥ ಟ್ರಂಪ್ ನಡುವಿನ ವಾದದಲ್ಲಿ ವ್ಯವಹಾರಸ್ಥನೇ ಜಯಗಳಿಸಿರುವಂತಿದೆ. ಇದೆಲ್ಲದರ ಅರ್ಥ ಟ್ರಂಪ್ರ "Make America Great Again ಮ್ಯಾಗಾ) ಯೋಜನೆ "Destory America Right Now' ಡಾರ್ನ್) ಎಂದಾಗುತ್ತಿದೆ. ಈ ನಡುವೆ ಉತ್ತರ ಧ್ರುವದಲ್ಲೊಂದು ಬೆಳ್ಳಿರೇಖೆ ಕಾಣಿಸಿಕೊಡಿದೆ. ರಷ್ಯಾದ ಮಾಜಿ ಅಧ್ಯಕ್ಷ ಹಾಗೂ ಅಧ್ಯಕ್ಷ ಪುತಿನ್ರ ಘನಿಷ್ಠ ಸಹಯೋಗಿ ದಿಮಿತ್ರಿ ಮೆದ್ವೆದೆವ್ ವಿರುದ್ಧ ಟ್ರಂಪ್ ಅಪಶಬ್ದಗಳನ್ನು ಬಳಸಿದ್ದಕ್ಕೆ ಮತ್ತು ರಷ್ಯಾದ ಹತ್ತಿರದ ಸಾಗರ ಪ್ರದೇಶಕ್ಕೆ ಅಣ್ವಸ್ತ್ರ ಜಲಾಂತರ್ಗಾಮಿ ಕಳುಹಿಸುವುದಾಗಿ ಬೆದರಿಕೆ ಒಡ್ಡಿದ್ದಕ್ಕೆ ರಷ್ಯಾ ಉಗ್ರವಾಗಿ ಪ್ರತಿಕ್ರಿಯಿಸಿದೆ.
ಈ ನಡೆ ಟ್ರಂಪ್ರನ್ನು ಮೆತ್ತಗಾಗಿಸಿದೆ. ತಮ್ಮ ಪ್ರತಿನಿಧಿ ಸ್ಟೀವ್ ವಿಟ್ಕಾಫ್ರನ್ನು ತರಾತುರಿಯಲ್ಲಿ ಮಾಸ್ಕೋಗೆ ಅಟ್ಟಿ ಅಧ್ಯಕ್ಷ ಪುತಿನ್ರೊಂದಿಗೆ ನೇರ ಮಾತುಕತೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಟ್ರಂಪ್ ಅವರ ಪ್ರಳಯಾಂತಕ ಬುದ್ಧಿ ಅಮೆರಿಕಾದ ನೆಲಕ್ಕೆ ಬಂದ ಪುತಿನ್ ವಿರುದ್ಧ ಕಿಡಿಗೇಡಿ/ಹೊಣೆಗೇಡಿ ಕೃತ್ಯಕ್ಕೇನಾದರೂ ದಾರಿ ಮಾಡಿಕೊಡದಿದ್ದರೆ ಈ ಭೇಟಿ ಆಗಸ್ಟ್ 15ರಂದು ಅಲಾಸ್ಕಾದಲ್ಲಿ ಜರುಗಲಿದೆ. ಅಲ್ಲಿ ಯೂಕ್ರೇನ್ ಸಮರಕ್ಕೆ ಪರಿಹಾರ ಕಂಡುಬಂದಲ್ಲಿ ಅದು ಭಾರತಕ್ಕೆ ಸ್ವಾತಂತ್ರ್ಯ ದಿನದ ಉಡುಗೊರೆಯಾಗಬಹುದು, ಯುದ್ಧವಿಮಾನ ಖರೀದಿಸದಿದ್ದಕ್ಕಾಗಿ ಭಾರತಕ್ಕೆ ಹಾನಿಯೆಸಗಲು ರಷ್ಯನ್ ತೈಲದ ನೆಪ ಟ್ರಂಪ್ರ ಕೈನಿಂದ ಜಾರಿಹೋಗಬಹುದು. ಅಥವಾ ಟ್ರಂಪ್ ಮತ್ತೇನಾದರೂ ಒಂದು ನೆಪ ಹುಡುಕಬಹುದು. ಇರಲಿ, ನಾವು ಕಾದು ನೋಡೋಣ.