ಸುಧಾರಣೆಗೆ ಸಹಕಾರಿ: ತಂತ್ರಜ್ಞಾನದ ಸಮರ್ಪಕ ಬಳಕೆ ಅಗತ್ಯ

Karnataka Police
Published on

ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಮಹತ್ತರ ಹೊಣೆಗಾರಿಕೆ ಪೊಲೀಸ್ ಇಲಾಖೆಯ ಮೇಲಿದೆ. ಕರ್ತವ್ಯ ನಿರ್ವಹಣೆಯ ವೇಳೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ತರಾತುರಿಯಲ್ಲಿ ಅಚಾತುರ್ಯಗಳು ಸಂಭವಿಸುವ ಸಾಧ್ಯತೆಗಳು ಇರುತ್ತವೆ. ವಿವಾದಗಳು ಸೃಷ್ಟಿಯಾಗದಂತೆ, ಜನರ ವಿಶ್ವಾಸಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಅಗತ್ಯ. ಈ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಣೆಯ ಮಾದರಿಯಲ್ಲಿ ಕಾಲಕಾಲಕ್ಕೆ ಹಲವು ಸುಧಾರಣೆಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

ಇದರ ಭಾಗವಾಗಿಯೇ, ಬಾಡಿವೋರ್ನ್ ಕ್ಯಾಮರಾ ಧರಿಸುವುದನ್ನು ಪೊಲೀಸ್ ಇಲಾಖೆ ಕಡ್ಡಾಯಗೊಳಿಸಿದೆ. ಯಾವುದೇ ಪ್ರಕರಣದಲ್ಲಿ ವ್ಯಕ್ತಿಯನ್ನು ಬಂಧಿಸಲು ಹೋಗುವ ಪೊಲೀಸರು ಇನ್ಮುಂದೆ ಬಾಡಿವೋರ್ನ್ ಧರಿಸಿರಬೇಕು. ಬಂಧನದ ಎಲ್ಲ ಪ್ರಕ್ರಿಯೆಯೂ ಕ್ಯಾಮರಾದಲ್ಲಿ ರೆಕಾರ್ಡ್ ಆಗಿರಬೇಕು ಎಂದು ಆದೇಶಿಸಿದೆ. ಮುಂಚೆ, ಇದು ಬೆಂಗಳೂರು ಸಂಚಾರ ಪೊಲೀಸರಿಗೆ ಮಾತ್ರ ಸೀಮಿತವಾಗಿತ್ತು. ಬಂಧನದ ವೇಳೆ ಕ್ಯಾಮರಾಗಳನ್ನು ಧರಿಸುವ ವ್ಯವಸ್ಥೆ ಜಾರಿಗೊಳಿಸುವಂತೆ ಹೈಕೋರ್ಟ್ 2022ರ ಜೂ.10ರಂದು ಆದೇಶಿಸಿತ್ತು.

ಇತ್ತೀಚಿನ ದಿನಗಳಲ್ಲಿ ಪೊಲೀಸರ ವಿರುದ್ಧ ಆರೋಪಗಳು ಹೆಚ್ಚುತ್ತಿರುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಭ್ರಷ್ಟಾಚಾರ, ಲಂಚಕ್ಕೆ ಬೇಡಿಕೆ, ಸುಳ್ಳು ಪ್ರಕರಣ ದಾಖಲು, ಸುಲಿಗೆ, ಅನುಚಿತ ವರ್ತನೆ ಸೇರಿ ಪೊಲೀಸರ ವಿರುದ್ಧ ಕೇಳಿಬರುವ ಆರೋಪಗಳ ನಿಯಂತ್ರಣ ಹಾಗೂ ಕರ್ತವ್ಯದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಕ್ರಮ ಜಾರಿಗೊಳಿಸಲಾಗುತ್ತಿದೆ.

ವ್ಯವಸ್ಥೆ ಸುಧಾರಣೆಯ ನಿಟ್ಟಿನಲ್ಲಿ ಇದು ಪೂರಕ ಹೆಜ್ಜೆಯೆಂದೇ ಹೇಳಬಹುದು. ಇದರಿಂದ ಪೊಲೀಸರ ಮೇಲಿನ ಉತ್ತರದಾಯಿತ್ವ ಕೂಡ ಹೆಚ್ಚಲಿದೆ. ಪೊಲೀಸರೊಂದಿಗೆ ಕೆಲವರು ಅನುಚಿತ ವರ್ತನೆ ತೋರುತ್ತಾರೆ, ಕಾನೂನುಬಾಹಿರವಾಗಿ ವರ್ತಿಸುತ್ತಾರೆ. ಇಂಥ ಕೃತ್ಯಗಳಿಗೂ ಕಡಿವಾಣ ಹಾಕಲು ಇದು ಸಹಕಾರಿ ಆಗಬಲ್ಲದು. ಆದರೆ, ತಂತ್ರಜ್ಞಾನದ ಬಳಕೆ ಹೊಸ ಸಮಸ್ಯೆ, ಅಪಸವ್ಯಗಳಿಗೆ ದಾರಿ ಮಾಡಿಕೊಡದಂತೆ ಸೂಕ್ತ ನಿರ್ವಹಣೆ ಅಗತ್ಯ. ಕಾರ್ಯವೈಖರಿ ಪರಿಣಾಮಕಾರಿ ಆಗಿಸಲು ಕ್ಯಾಮರಾ ಅಳವಡಿಕೆ ಸಹಾಯಕವಾಗಲಿ. ಬಂಧನ ಮತ್ತಿತರ ಸಂದರ್ಭಗಳಲ್ಲಿ ನಡೆಯುವ ಅಹಿತಕರ ಘಟನೆಗಳು ತಪ್ಪಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net