ಕಸಾಪಕ್ಕೆ ಪ್ರೊ.ಜಿ.ವಿಯವರ ಕೊಡುಗೆ

Pro venkata subbaiah
Published on
mahesh joshi
ಕನ್ನಡ ಸಾಹಿತ್ಯ ಪರಿಷತ್ ಜೊತೆಗಿನ ಪ್ರೊ.ಜಿ. ವೆಂಕಟಸುಬ್ಬಯ್ಯನವರ ಒಡನಾಟಕ್ಕೆ ಸುದೀರ್ಘ ಪರಂಪರೆ ಇದೆ. 1954ರಲ್ಲಿ ಮೊದಲು ಕಾರ್ಯದರ್ಶಿಯಾದರು. 1964ರಲ್ಲಿ ಅಧ್ಯಕ್ಷರಾದರು. ಅವರು ಅಧ್ಯಕ್ಷರಾದಾಗ ಪರಿಷತ್ತಿನ ಪರಿಸ್ಥಿತಿ ಸಂಕಷ್ಟದಲ್ಲಿ ಇತ್ತು. ನಲವತ್ತು ಸಾವಿರ ರೂಪಾಯಿಗಳ ಸಾಲವಿತ್ತು. ಸದಸ್ಯರ ಸಂಖ್ಯೆ ಕೂಡ ಬಹಳ ಕಡಿಮೆ ಇದ್ದು, ಸರ್ಕಾರದ ಬಳಿ ಅನುದಾನ ಕೇಳಿದರೆ ‘ಮೊದಲು ಸಾಲ ತೀರಿಸಿ’ ಎನ್ನುವ ಉತ್ತರ ಬಂದಿತು. ಬೇರೆ ಯಾರಾಗಿದ್ದರೂ ಅಧ್ಯಕ್ಷಗಿರಿಯೇ ಬೇಡ ಎಂದು ಬಿಟ್ಟು ಹೋಗುತ್ತಿದ್ದರು. ಆದರೆ ಜಿ.ವಿ ಹಾಗೆ ಮಾಡಲಿಲ್ಲ. ಜಿದ್ದಿನಿಂದ ಓಡಾಡಿ ಹಿರಿಯರಿಂದ, ಕನ್ನಡಪ್ರೇಮಿಗಳಿಂದ ಅನುದಾನ ತಂದರು. ಸರಸ್ವತಿ ಮಂದಿರದಲ್ಲಿ ನಿರಂತರ ಕಾರ್ಯಕ್ರಮಗಳನ್ನು ತೋರಿಸಿದರು. ಪ್ರಕಟಣೆಗಳನ್ನೂ ಮಾಡಿದರು. ನಂತರ ಆಗಿನ ಹಣಕಾಸು ಸಚಿವ ರಾಮಕೃಷ್ಣ ಹೆಗಡೆಯವರನ್ನು ಭೇಟಿ ಮಾಡಿ, ‘ಕೆಲಸ ಮಾಡಿದ್ದೇವೆ, ಅನುದಾನ ಕೊಡಿ’ ಎಂದು ಕೇಳಿದರು. ಜಿ.ವಿಯವರ ಓಲೈಕೆಯಿಂದ ಅನುದಾನ ಇಪ್ಪತ್ತೊಂದು ಸಾವಿರ ರೂಪಾಯಿಗಳಿಗೆ ಏರಿತು. ಎರಡು ಸಾಹಿತ್ಯ ಸಮ್ಮೇಳನಗಳು, ಪುಸ್ತಕ ಪ್ರಕಟಣೆ, ದಾಖಲೆ ಪ್ರಮಾಣದ ವಿಚಾರ ಸಂಕಿರಣಗಳನ್ನು ನಡೆಸಿದ ನಂತರ ಕೂಡ ಅಧ್ಯಕ್ಷತೆ ಬಿಡುವಾಗ ಅರವತ್ತೊಂದು ಸಾವಿರ ರೂಪಾಯಿಗಳ ಬ್ಯಾಲೆನ್ಸ್ ಉಳಿಸಿದ್ದರು. ಇದು ಜಿ.ವಿಯವರ ಸಾಧನೆ.

ಮೈಸೂರು ಪ್ರಾಂತ್ಯಕ್ಕೆ ಹೆಚ್ಚು ಸೀಮಿತವಾಗಿದ್ದ ಪರಿಷತ್​ಗೆ ಅಖಿಲ ಕರ್ನಾಟಕದ ಸ್ವರೂಪ ನೀಡಿದ್ದೂ ಜಿ.ವಿಯವರ ಹೆಗ್ಗಳಿಕೆ. ಪರಿಷತ್ತಿನ ಅಂಗರಚನೆಯಲ್ಲಿ ಇಂತಹ ಮಾರ್ಪಾಟು ಮಾಡಿದರು. ಕಾರ್ಯಕಾರಿ ಸಮಿತಿಯ ವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸಿ ಅದನ್ನು ಸದೃಢ ಮತ್ತು ಸಕ್ರಿಯಗೊಳಿಸಿದರು. ಅದಕ್ಕಾಗಿ ನಿರಂತರ ಪ್ರವಾಸಗಳನ್ನೂ ಕೈಗೊಂಡರು. ಪರಿಷತ್ತಿನ ಪುಸ್ತಕ ಭಂಡಾರಕ್ಕೆ ವ್ಯವಸ್ಥಿತ ರೂಪವನ್ನು ನೀಡಿದ್ದು, ಉಪನ್ಯಾಸ ಮಂದಿರವಾಗಿ ಪರಿಷನ್ಮಂದಿರವನ್ನು ನಿರ್ವಿುಸಿದ್ದು ಕೂಡ ಅವರ ಸಾಧನೆಯೇ. ಇಷ್ಟೆಲ್ಲ ಸಾಧನೆಯ ನಂತರ ಅವರು ಪರಿಷತ್ ಅಧ್ಯಕ್ಷತೆಗೆ ಜೋತು ಬೀಳಲಿಲ್ಲ. ಅದು ನಿಂತ ನೀರಾಗಬಾರದು ಎಂಬ ಭಾವದಲ್ಲಿ ಬೇರೆಯವರಿಗೆ ಅವಕಾಶ ಕೊಟ್ಟರು. ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಸಮಿತಿಗೆ ಅವರು ಇಪ್ಪತ್ತು ವರ್ಷಗಳ ಕಾಲ ಸಂಪಾದಕರಾಗಿದ್ದರು. 9000 ಪುಟಗಳ ಶಬ್ದಭಂಡಾರವನ್ನು ಕಟ್ಟಿದ ಹೆಗ್ಗಳಿಕೆ ಅವರದ್ದು.

ಪರಿಷತ್ತಿಗೆ ಇಷ್ಟೆಲ್ಲ ಕೊಡುಗೆ ನೀಡಿದ್ದರೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವರಿಗೆ ತೀರಾ ತಡವಾಗಿ ಲಭಿಸಿತು. ಅವರೇ ತಮಾಷೆಗೆ ಹೇಳಿಕೊಂಡಂತೆ ಅವರಿಂದ ಕನ್ನಡ ಕಲಿತವರಿಗೆಲ್ಲ ಲಭಿಸಿ ಕೊನೆಗೆ ಇವರ ಬಳಿ ಬಂದಿತು. 2011ರ ಫೆಬ್ರವರಿ 4ರಂದು ಬೆಂಗಳೂರಿನಲ್ಲಿ ನಡೆದ 77ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಸ್ಪಷ್ಟ ಮಾತುಗಳಲ್ಲಿ ತಮ್ಮ ಕನ್ನಡ ಪ್ರೀತಿಯನ್ನು ಹೇಳಿದ್ದಲ್ಲದೆ, ಆಗಬೇಕಾದ ಕೆಲಸಗಳನ್ನು ಖಚಿತವಾಗಿ ವಿವರಿಸಿದ್ದರು.

ಹಾಗೆ ನೋಡಿದರೆ ಜಿ.ವಿಯವರಿಗೆ ಎಲ್ಲವೂ ವಿಳಂಬವಾಗಿಯೇ ಬಂದಿತು. ಅವರಿಗೆ ನಾಡೋಜ ಗೌರವ ಸಂದಾಗ 92 ವರ್ಷ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ 98 ವರ್ಷ, ಪಂಪ ಪ್ರಶಸ್ತಿ ಬಂದಾಗ 101 ವರ್ಷ, ಪದ್ಮಶ್ರೀ ಬಂದಾಗ 104 ವರ್ಷ, ಕೇಂದ್ರ ಸರ್ಕಾರದ ಭಾಷಾ ಸಮ್ಮಾನ ಗೌರವ ಬಂದಾಗ 105 ವರ್ಷ. ಜಿ.ವಿಯವರು ಇದರ ಕುರಿತು ಎಂದೂ ಆಕ್ಷೇಪ ವ್ಯಕ್ತಪಡಿಸದಿದ್ದರೂ ನಮ್ಮ ವ್ಯವಸ್ಥೆ ಇದರ ಕುರಿತು ಯೋಚಿಸಬೇಕು.

ನಿಘಂಟು ಎಂಬ ಪದಕ್ಕೆ ಪರ್ಯಾಯ ಎನ್ನಿಸಿಕೊಂಡವರು: ಕನ್ನಡದಲ್ಲಿ ನಿಘಂಟು ಎನ್ನುವ ಪದ ಕೇಳಿದ ಕೂಡಲೇ ನೆನಪಾಗುವುದೇ ವೆಂಕಟಸುಬ್ಬಯ್ಯನವರ ಹೆಸರು. 1943ರಲ್ಲಿಯೇ ಡಿ.ಎಲ್.ನರಸಿಂಹಾಚಾರ್ಯರು ಪದ ಸಂಗ್ರಹದ ತರಬೇತಿಯನ್ನು ನೀಡಿ ಅವರನ್ನು ಈ ಕ್ಷೇತ್ರಕ್ಕೆ ಕರೆ ತಂದರು. ಅವರ ಗುರುಗಳಾದ ಎ.ಆರ್.ಕೃಷ್ಣಶಾಸ್ತ್ರಿಗಳು, ‘ಇದು ನೀನೇ ಮಾಡಬೇಕಾದ ಕೆಲಸ’ ಎಂದು ಸೂಚಿಸಿದರು. ಸ್ವತಃ ಜಿ.ವಿಯವರೇ ರೂಪಿಸಿದ ಹದಿನಾಲ್ಕು ನಿಘಂಟುಗಳು ಇರುವಂತೆ ನಿಘಂಟು ಶಾಸ್ತ್ರದ ಪರಿಚಯ ನೀಡುವ ಎರಡು ಮುಖ್ಯ ಕೃತಿಗಳನ್ನೂ ಅವರು ರಚಿಸಿದ್ದಾರೆ. 1993ರಲ್ಲಿ ಅವರು ‘ಕನ್ನಡ ನಿಘಂಟು ಶಾಸ್ತ್ರದ ಪರಿಚಯ’ ಕೃತಿ ರಚಿಸುವುದಕ್ಕೆ ಮೊದಲು ಆ ಕ್ಷೇತ್ರದಲ್ಲಿ ಕೃತಿಗಳೇ ಇರಲಿಲ್ಲ. ಅಲ್ಲಿಂದ ಮುಂದೆ ಆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆಲ್ಲರಿಗೂ ಅದು ಆಚಾರ್ಯ ಕೃತಿಯಾಯಿತು. ಕನ್ನಡ ನಿಘಂಟು ಪರಿವಾರ ನಿಘಂಟು ರಚನೆಯ ಹಿಂದಿನ ತಾತ್ವಿಕತೆಯನ್ನು ವಿವರಿಸುವಂತಹ ಕೃತಿ. ಇಲ್ಲಿನ 19 ಲೇಖನಗಳೂ ನಿಘಂಟು ರಚನೆಯ ಹಿಂದಿನ ಕುಶಲತೆಯನ್ನು ದಕ್ಷವಾಗಿ ವಿವರಿಸುತ್ತವೆ.

ಜಿ.ವಿಯವರ ಇಂಗ್ಲಿಷ್-ಕನ್ನಡ ನಿಘಂಟು ಬಹು ಜನಪ್ರಿಯ. ದ್ವಿಭಾಷಾ ನಿಘಂಟು ಇದು ಅನುವಾದಕರಿಗೆ ಅತ್ಯುಪಯುಕ್ತ. ಬ್ರೖೆಲ್ ಲಿಪಿಗೆ ಕೂಡ ಇದು ಅಳವಡಿಸಲ್ಪಟ್ಟಿದ್ದು, ಅಂಧರೂ ಇದನ್ನು ಬಳಸಬಲ್ಲವರಾಗಿದ್ದಾರೆ. 1998ರಲ್ಲಿ ಪ್ರಕಟವಾದ ಅವರ ‘ಎರವಲು ಪದಕೋಶ’ ಇನ್ನೊಂದು ಪ್ರಮುಖ ಸಾಧನೆ. ಇಂಗ್ಲಿಷ್, ಪಾರ್ಸಿ, ಹಿಂದಿ, ಮರಾಠಿ ಮೊದಲಾದ ಭಾಷೆಗಳಿಂದ ಬಂದ ಪದಗಳ ವಿವರಣೆ ಇಲ್ಲಿದೆ. ಪತ್ರಕರ್ತರಿಗೆ ವರದಾನದಂತೆ ಬಂದಿರುವ ‘ಪತ್ರಿಕಾ ಪದಕೋಶ’ ಜಿ.ವಿಯವರ ಇನ್ನೊಂದು ಪ್ರಮುಖ ಸಾಧನೆ. ನಿತ್ಯದ ಉಪಯೋಗಕ್ಕಾಗಿ ಜಿ.ವಿ ‘ಕನ್ನಡ-ಕನ್ನಡ ಸಂಕ್ಷಿಪ್ತ ನಿಘಂಟು’ವನ್ನು ರಚಿಸಿದ್ದಾರೆ. ‘ಮುದ್ದಣ ಪ್ರಯೋಗ ಕೋಶ’ ಎಂಬ ಕವಿ ಮುದ್ದಣ್ಣನ ಕೃತಿಗಳ ಪ್ರಯೋಗದ ಕುರಿತೇ ಮಹತ್ವದ ಕೃತಿಯನ್ನು ರಚಿಸಿದ್ದಾರೆ. ಪತ್ರಿಕೆಯಲ್ಲಿ ಅಂಕಣ ರೂಪದಲ್ಲಿ ಪ್ರಕಟವಾಗಿ ನಂತರ ಕೃತಿಯಾಕಾರ ತಳೆದ ‘ಇಗೋ ಕನ್ನಡ’ ಜಿ.ವಿಯವರ ಇನ್ನೊಂದು ಮಹತ್ವದ ಸಾಧನೆ. ಮೂರು ಸಂಪುಟಗಳಲ್ಲಿ ಈ ಮಾಲಿಕೆ ಪ್ರಕಟವಾಗಿದ್ದು ಸಮಗ್ರ ಸಂಪುಟವೂ ಬಂದಿದೆ. ‘ಕನ್ನಡ ಕ್ಲಿಷ್ಟ ಪದಕೋಶ’ ಅವರು ರೂಪಿಸಿದ ಇನ್ನೊಂದು ಮಹತ್ವದ ನಿಘಂಟು.

ಜಿ.ವಿಯವರೊಂದಿಗೆ ಅನೇಕ ವರ್ಷಗಳ ಕಾಲ ನಿಘಂಟು ಕ್ಷೇತ್ರದಲ್ಲಿ ಕೆಲಸ ಮಾಡಿರುವ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ಅವರ ಅರ್ಹತೆಯನ್ನು ಗುರುತಿಸುವುದು ಹೀಗೆ- ‘ಕವಿ ಹೃದಯವನ್ನು ತಿಳಿಯಬಲ್ಲ ಸಹೃದಯತೆ, ಕವಿ ಪ್ರಯೋಗಗಳನ್ನು ಅರ್ಥೈಸಬಲ್ಲ ಪಾಂಡಿತ್ಯ, ಭಾಷಾವಿಜ್ಞಾನದ ಸ್ಪಷ್ಟ ತಿಳುವಳಿಕೆ, ಪಾಶ್ಚಾತ್ಯ ಸಾಹಿತ್ಯದ ಅಧ್ಯಯನದಿಂದ ಒದಗಿದ ವೈಜ್ಞಾನಿಕ ದೃಷ್ಟಿ, ಬೇರೆ ಭಾಷೆಗಳ ಜ್ಞಾನ ಎಲ್ಲಕ್ಕಿಂತ ಮಿಗಿಲಾಗಿ ಸಂಯಮ ಅವರನ್ನು ನಿಘಂಟು ತಜ್ಞರಾಗುವಂತೆ ಮಾಡಿತು’.

(ಲೇಖಕರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net