

ಭೂಭಾಗಗಳನ್ನು ಗೆದ್ದವರು ಕೆಲವು ವ್ಯಕ್ತಿಗಳ ಮುಂದೆ ಶಿರಬಾಗಿ, ಮಂಡಿಯೂರಿ ‘ನಿನ್ನ ಆಜ್ಞಾಧಾರಕ ನಾನು’ ಎಂದು ಹೇಳುತ್ತಿರುವವರಂತೆ ವರ್ತಿಸುವುದನ್ನು ನೋಡಿದ್ದೇವೆ. ಇಲ್ಲಿ ನನ್ನ ಕಣ್ಣ ಮುಂದೆ ಬರುವ ಚಿತ್ರ ಕ್ಲಿಯೋಪಾತ್ರ ರೋಮ್ಗೆ ಭೇಟಿ ಕೊಟ್ಟಾಗ ಅವಳನ್ನು ಜೂಲಿಯಸ್ ಸೀಸರ್ ಸ್ವಾಗತಿಸಿದ ರೀತಿ. ಹಿಂದೊಮ್ಮೆ ಇದನ್ನು ಪ್ರಸ್ತಾಪಿಸಿದ್ದೆ. ಅವಳಿಗೆ ಸಿಕ್ಕ ಸ್ವಾಗತವಾದರೂ ಎಂಥದ್ದು! ಸ್ವಯಂ ಸೀಸರ್ ಮಂಡಿ ಊರಿ ಅವಳನ್ನು ರೋಮ್ಗೆ ಬರಮಾಡಿಕೊಂಡ. ಇವನು ಇಡೀ ಯುರೋಪನ್ನು ಗೆದ್ದಿದ್ದವನು. ಐರೋಪ್ಯ ಇತಿಹಾಸಕಾರರು ಪಟ್ಟಿ ಮಾಡಿರುವ ನಾಲ್ವರು ಚಕ್ರವರ್ತಿಗಳಲ್ಲಿ ಇವನೂ ಒಬ್ಬ. ಭಾರತೀಯ ಚಿಂತಕರಿಗೆ, ಋಷಿಮುನಿಗಳಿಗೆ ಇವನೊಬ್ಬ ಅಲ್ಪ ಮನುಷ್ಯ. ಸಮಾಜಕ್ಕೆ ಇವನೆಂದಿಗೂ ಆದರ್ಶವಲ್ಲ್ಲ ಇವನಿಗಿಂತಲೂ ವೀರರು ಬೇಕಾದಷ್ಟು ಜನ ಇದ್ದಾರೆ. ಅವರೇ ಸಮಾಜಕ್ಕೆ ಆದರ್ಶ.
ಈ ಆದರ್ಶ ಕಂಡಿದ್ದು ತಪಸ್ವಿಗಳಲ್ಲಿ, ಋಷಿಮುನಿಗಳಲ್ಲಿ, ಸಾಧುಸಂನ್ಯಾಸಿಗಳಲ್ಲಿ. ಅವರು ಭೂಗೋಳಗಳನ್ನು ಗೆದ್ದಿಲ್ಲವಾದರೂ ತಮ್ಮತಮ್ಮ ಮನಸ್ಸುಗಳನ್ನು ಸಂಪೂರ್ಣ ಗೆದ್ದಿದ್ದಾರೆ. ಮನಸ್ಸನ್ನು ಗೆಲ್ಲುವುದು ಲೋಕಗಳನ್ನು ಗೆಲ್ಲುವುದಕ್ಕಿಂತಲೂ ಕಷ್ಟ. ಸುಸಜ್ಜಿತ ಸೈನ್ಯ, ನಾಯಕ, ಆಯುಧಗಳಿದ್ದರೆ ಲೋಕಗಳನ್ನು ಸುಲಭವಾಗಿ ಗೆದ್ದುಬಿಡಬಹುದು. ಆದರೆ ಮನಸ್ಸನ್ನು ಗೆಲ್ಲುವುದು ಹೇಗೆ? ಅಲ್ಲಿ ಉಪಯೋಗಿಸಬಹುದಾದ ಆಯುಧ ಯಾವುದು? ಏಕೆಂದರೆ ಮನಸ್ಸು ಕಾಣುವುದಿಲ್ಲ! ಅದರ ಶಬ್ದ, ಕಂಪನ ಕೇಳುವುದಿಲ್ಲ. ಬಣ್ಣ, ರುಚಿ, ವಾಸನೆ, ಘನವೋ, ದ್ರವವೋ ಇದ್ಯಾವುದೂ ಗೊತ್ತಿಲ್ಲ. ಏಕೆಂದರೆ ಇದ್ಯಾವುದೂ ಅದಕ್ಕೆ ಇಲ್ಲ. ಕಣ್ಣಿಗೆ ಕಾಣುವ ವಸ್ತುವನ್ನು ಪಳಗಿಸುವುದು ಕಷ್ಟವಲ್ಲ. ಒಬ್ಬ ಸಣಕಲು ಮನುಷ್ಯ ಆನೆಯನ್ನೇ ಪಳಗಿಸಬಲ್ಲ. ಅದು ಕಣ್ಣಿಗೆ ಕಾಣುತ್ತೆ. ಕೇಳುವ ಕಂಪನಗಳನ್ನೂ ನಿಯಂತ್ರಿಸಬಹುದು. ರ್ಸ³ಸಿ ಅನುಭವ ಪಡೆಯಬಹುದಾದ ವಸ್ತುವನ್ನೂ ನಿಯಂತ್ರಿಸಬಹುದು. ಪಂಚಭೂತಗಳನ್ನು ಮನುಷ್ಯ ಇವತ್ತು ನಿಯಂತ್ರಿಸ್ತಾ ಇದ್ದಾನೆ.
ಕಾರಣ ಇಷ್ಟೇ ಅವುಗಳ ಜ್ಞಾನ ಅವನಿಗಿದೆ. ಅವುಗಳ ಒಳರಚನೆ, ಬಾಹ್ಯರೂಪ ಎಲ್ಲವನ್ನೂ ನಾವು ವಿಜ್ಞಾನದಲ್ಲಿ ಭೌತ, ರಾಸಾಯನಿಕ ಗುಣಗಳೆನ್ನುವ ಶೀರ್ಷಿಕೆಯಲ್ಲಿ ಓದುತ್ತೇವೆ. ಆದರೆ ಮನಸ್ಸು ಪಂಚಭೂತಗಳಲ್ಲಿ ಸೇರಲ್ಲ. ಅದನ್ನು ಪಳಗಿಸುವುದು ಹೇಗೆ? ಋಷಿಮುನಿಗಳು ಅದನ್ನು ಪಳಗಿಸಿ ಅಡಿಯಾಳನ್ನಾಗಿ ಮಾಡಿಕೊಂಡಿದ್ದಾರೆ. ಇದನ್ನು ಕಂಡೇ ಬುದ್ಧ ಒಂದೆಡೆ ‘ಸಾವಿರ ಇಂದ್ರರನ್ನು ಗೆಲ್ಲಬಹುದು ನೀನು; ಇಂದ್ರಿಯಗಳನ್ನು ಗೆಲ್ಲು ನೋಡೋಣ’ ಎನ್ನುತ್ತಾನೆ. ಇದೇ ಧಾಟಿಯಲ್ಲಿ ಶಂಕರಾಚಾರ್ಯರು ‘ಜಿತಂ ಜಗತ್ ಕೇನ? ಮನೋ ಹಿ ಏನ! - ಜಗತ್ತು ಯಾರಿಂದ ಗೆಲ್ಲಲ್ಪಟ್ಟಿದೆ? ಮನವನ್ನು ಗೆದ್ದವನಿಂದ!’ ಎನ್ನುತ್ತಾರೆ. ಅಮೃತಬಿಂದು ಉಪನಿಷತ್ ಹಿಂದೆ ಬೀಳುವುದಿಲ್ಲ. ‘ಮನಯೇವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ- ಮನಸ್ಸೇ ಮನುಷ್ಯನ ದುರ್ಗತಿ ಸದ್ಗತಿಗಳಿಗೆ ಕಾರಣ’ ಎನ್ನುತ್ತದೆ.
ಯಾರ ಮನಸ್ಸು ನಿಯಂತ್ರಣದಲ್ಲಿಲ್ಲವೋ ಅವನು ಎಂದಿಗೂ ಕುಬ್ಜ. ಬೆಳೆಯಲಾರ, ಮಹಾನ್ ಆಗಲಾರ. ಯಾರು ಮನಸ್ಸನ್ನು ಅಡಿಯಾಳಾಗಿಸಿಕೊಂಡಿದ್ದಾರೊ ಅವರಿಗೆ ಗೆಲ್ಲುವುದಕ್ಕೆ ಅಸಾಧ್ಯವಾದುದು ಯಾವುದೂ ಇಲ್ಲ. ವಿದ್ಯಾರ್ಥಿಗಳಿಗೆ ಶಿಕ್ಷಣದ ಪ್ರಾರಂಭದಲ್ಲಿ ನಾವು ಹೇಳಿಕೊಡಬೇಕಾದ್ದೇ ಇಂದ್ರಿಯ-ಮನಸ್ಸನ್ನು ಗೆಲ್ಲುವುದು ಹೇಗೆ ಎಂದು. ಸ್ವಾಮಿ ವಿವೇಕಾನಂದರು ಒಂದೆಡೆ ಹೇಳುತ್ತಾರೆ, ‘ನಾನು ಮತ್ತೊಮ್ಮೆ ನನ್ನ ಶಿಕ್ಷಣ ಪ್ರಾರಂಭಿಸಬೇಕಾದ ಸಂದರ್ಭ ಬಂದರೆ ವಿಷಯಗಳನ್ನು ಅರಿಯುವ ಗೋಜಿಗೇ ಹೋಗುವುದಿಲ್ಲ. ಮನಸ್ಸನ್ನು ನಿಯಂತ್ರಿಸುವುದು, ಏಕಾಗ್ರಗೊಳಿಸುವುದು ಹೇಗೆ? ಒಂದು ವಸ್ತುವಿನಿಂದ ಅದನ್ನು ಬೇರ್ಪಡಿಸುವುದು ಹೇಗೆ, ಜೋಡಿಸುವುದು ಹೇಗೆ ಎಂಬುದನ್ನು ಕಲಿಯುತ್ತೇನೆ. ಆಮೇಲೆ ಕಲಿಯಬೇಕಾದ ವಸ್ತುಗಳ ಮೇಲೆ ಅದನ್ನು ಏಕಾಗ್ರ ಮಾಡುತ್ತೇನೆ. ಅವಶ್ಯಕವಿಲ್ಲದ ವಸ್ತುಗಳಿಗೆ ಎಂದಿಗೂ ಗಮನ ಕೊಡುವುದಿಲ್ಲ’ ಎಂದು. ನಿಜಾರ್ಥದಲ್ಲಿ ಶಿಕ್ಷಣ ಕೊಡಬೇಕಾದ್ದು ಹೀಗೆಯೇ.
ಅರ್ಜುನನಿಗೆ ತ್ರಿಲೋಕವೀರ ಅಂತಲೇ ಹೆಸರು. ಅಂಥ ಅರ್ಜುನನೂ ಮನಸ್ಸನ್ನು ನಿಯಂತ್ರಿಸುವುದು ಎಷ್ಟು ಕಷ್ಟ ಎಂದು ಪರದಾಡಿದ್ದ. ಭಗವದ್ಗೀತೆಯಲ್ಲಿ ಯಾವ ಮುಚ್ಚುಮರೆಯೂ ಇಲ್ಲದೇ ನೇರವಾಗಿ ಕೃಷ್ಣನನ್ನು ಪ್ರಶ್ನೆ ಕೇಳುತ್ತಾನೆ.
ಚಂಚಲಂ ಹಿ ಮನಃ ಕೃಷ್ಣ ಪ್ರಮಾಥೀ ಬಲವದ್ದೃಡಂ |
ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ ||
ಮನಸ್ಸು ಚಂಚಲ, ನಿಯಂತ್ರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ, ಗಾಳಿಯನ್ನು ಹಿಡಿದಿಡುವಷ್ಟೇ ಕಷ್ಟ ಇದು ಎಂದು. ತ್ರಿಲೋಕವೀರನಿಗೆ ಈ ಸ್ಥಿತಿ! ಇನ್ನು ಸಾಮಾನ್ಯರ ಪಾಡೇನು? ಬಿಲ್ವಿದ್ಯೆಯಲ್ಲಿ ಅವನನ್ನು ಮೀರಿಸಿದವರಿಲ್ಲ. ಅವನ ಏಕಾಗ್ರತೆಯೂ ಕಡಿಮೆ ಏನಿಲ್ಲ. ಬೇರೆಯವರಿಗೆಲ್ಲಾ ಹಕ್ಕಿ, ರೆಂಬೆ, ಕೊಂಬೆ ಕಾಣುತ್ತಿದ್ದರೆ ಅರ್ಜುನನಿಗೆ ಹಕ್ಕಿಯ ಕಣ್ಣು ಮಾತ್ರ ಕಾಣುತ್ತಿತ್ತು. ಇಂಥವನಿಗೂ ಮನಸ್ಸಿನ ನಿಯಂತ್ರಣ ಸಾಧ್ಯವಾಗಲಿಲ್ಲ. ಕೃಷ್ಣ ಕೊಟ್ಟ ಪರಿಹಾರವೇನು?
ಅಸಂಶಯಂ ಮಹಾ-ಬಾಹೋ ಮನೋ ದುರ್ನಿಗ್ರಹಂ ಚಲಂ |
ಇಲ್ಲಿ ಮಹಾಬಾಹೋ ಎಂದರೆ ವೀರಾಧಿವೀರನೇ ಎಂದು. ಮನಸ್ಸನ್ನು ನಿಗ್ರಹಿಸುವುದು ವೀರಾಧಿವೀರನಿಗೂ ಕಷ್ಟ ಎಂಬುದನ್ನು ಕೃಷ್ಣ ಒಪ್ಪಿಕೊಳ್ಳುತ್ತಾನೆ. ಹಾಗೆ ಹೇಳಿ ಸುಮ್ಮನಾಗಲಿಲ್ಲ.
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ ||
ಮನಸ್ಸನ್ನು ಅನವಶ್ಯಕವಾದ ವಸ್ತುಗಳ ಕಡೆ ಹರಿಯದಂತೆ ನೋಡಿಕೊಂಡು, ಯಾವುದರ ಮೇಲೆ ಮಾಡಬೇಕಿದೆಯೋ ಅದರ ಮೇಲೆ ಏಕಾಗ್ರ ಮಾಡುವ ಅಭ್ಯಾಸ ಮಾಡಬೇಕು. ಇದು ಮುಖ್ಯ ವಿಷಯ. ಅಭ್ಯಾಸ! ಅಸಾಧ್ಯವಾದದ್ದನ್ನೂ ಅಭ್ಯಾಸದಿಂದ ಸಾಧ್ಯವಾಗಿಸಬಹುದು. ಇಂಗ್ಲೀಷಿನಲ್ಲಿ ಅದ್ಭುತವಾದ ಒಂದು ಮಾತಿದೆ if average should become excellent, consistency is the only way. ಸಾಮಾನ್ಯವಾದದ್ದು ಶ್ರೇಷ್ಠ ಮಟ್ಟಕ್ಕೆ ತಲುಪಬೇಕೆಂದರೆ ನಿರಂತರ ಅಭ್ಯಾಸ ಒಂದೇ ಮಾರ್ಗ. ಅಭ್ಯಾಸ ಎಂದರೇನು? ಮಹರ್ಷಿ ಪತಂಜಲಿ ಈ ರೀತಿ ವ್ಯಾಖ್ಯಾನಿಸುತ್ತಾನೆ.
ಸತು ದೀರ್ಘ ಕಾಲ ನೈರಂತರ್ಯ ಸತ್ಕಾರಾ ಸೇವಿತೋ ದೃಢ ಭೂಮಿಃ
ಇಲ್ಲಿ ಆತ ಮೂರು ವಿಷಯ ಪ್ರಸ್ತಾಪಿಸುತ್ತಾನೆ. ಸತು ದೀರ್ಘ ಕಾಲ- ದೀರ್ಘ ಕಾಲ ನಾವು ಒಂದನ್ನು ಮಾಡಬೇಕು. ರಾಮಕೃಷ್ಣರ ಮಾತಿನಲ್ಲಿ ಹೇಳಬೇಕೆಂದರೆ ಯಾವುದಾದರೊಂದನ್ನು 12 ವರ್ಷ ಸತತವಾಗಿ ಮಾಡಬೇಕು. ಸ್ವಯಂ ರಾಮಕೃಷ್ಣರು ತಪಸ್ಸು ಮಾಡಿದ್ದು 12 ವರ್ಷ. ಸಿದ್ಧಾರ್ಥ 12 ವರ್ಷ ತಪಸ್ಸು ಮಾಡಿಯೇ ಬುದ್ಧನಾಗಿದ್ದು. ಬ್ರಹ್ಮಚಾರಿಗಳಿಗೆ 12 ವರ್ಷಗಳ ಬ್ರಹ್ಮಚರ್ಯ ಕಟ್ಟುನಿಟ್ಟಾದ ನಿಯಮ. ಭಾರತೀಯ ಸಂಸ್ಕೃತಿಯಲ್ಲಿ 12ಕ್ಕೆ ವಿಶೇಷ ಸ್ಥಾನವಿದೆ.
ಸತು ದೀರ್ಘ ಕಾಲ ಅಂದರೆ ಕನಿಷ್ಠ 12 ವರ್ಷ, ನಿರಂತರ ಅಂದರೆ ಮಧ್ಯೆ ಮಧ್ಯೆ ಅಂತರವಿಲ್ಲದೆ ಎಂದು. ಸತ್ಕಾರಾ ಸೇವಿತೋ ಎಂದರೆ ಮನಸ್ಸಿಟ್ಟು, ಪ್ರೀತಿಯಿಂದ ಸತ್ಕಾರಪೂರಕವಾಗಿ ಮಾಡಬೇಕು ಎಂದು. ಮನಸ್ಸಿನಲ್ಲಿ ಆನಂದ ಅನುಭವಿಸುತ್ತಾ ಅಭ್ಯಾಸ ಮಾಡಬೇಕು. ಈ 3 ಅಂಶಗಳು ಒಟ್ಟಿಗೆ ಸೇರಿದಾಗ ನಾವು ಅಭ್ಯಾಸ ಮಾಡುತ್ತಿದ್ದೇವೆ ಎಂದರ್ಥ. ಅಭ್ಯಾಸದ ಮಹಿಮೆಯನ್ನು ರಾಮಕೃಷ್ಣರು ತಮ್ಮದೇ ರೀತಿಯಲ್ಲಿ ಉದ್ಗರಿಸುತ್ತಾರೆ. ಸರ್ಕಸ್ಸಿನಲ್ಲಿ ಕುದುರೆ ಓಡುತ್ತಿರುತ್ತದೆ, ಅದರ ಮೇಲೆ ಒಬ್ಬ ಮಹಿಳೆ ಒಂಟಿ ಕಾಲಿನಲ್ಲಿ ನಿಂತಿರುತ್ತಾಳೆ.
ಒಂದು ಕಡೆ ದೊಡ್ಡ ರಿಂಗ್ ಇರುತ್ತದೆ. ಆಕೆ ಆ ರಿಂಗಿನ ಒಳಗಡೆಗೆ ಹಾರಿ ಆಚೆ ಬಂದು ಮತ್ತೆ ಕುದುರೆಯ ಬೆನ್ನ ಮೇಲೆ ಒಂಟಿ ಕಾಲಿನಲ್ಲಿ ನಿಲ್ಲುತ್ತಾಳೆ. ಇದನ್ನು ನೋಡಿ ಮೂಕವಿಸ್ಮಿತರಾಗಿ ರಾಮಕೃಷ್ಣರು ಹೇಳುತ್ತಾರೆ- ಅಂತಹ ಚಾಕಚಕ್ಯತೆ ಅವಳಿಗೆ ಬಂದಿರಬೇಕೆಂದರೆ ಎಷ್ಟು ದೀರ್ಘ ಕಾಲ ಅವಳು ಅದನ್ನು ಅಭ್ಯಾಸ ಮಾಡಿರಬೇಕು! ಜೀವನದಲ್ಲಿ ಎಷ್ಟೋ ಕಷ್ಟದ ವಿಷಯಗಳಿವೆ. ಒಂದೆರಡು ಸಲಕ್ಕೆ ಸಾಕಪ್ಪ ಇದು ಅನಿಸುತ್ತೆ. ಆದರೆ ಅಭ್ಯಾಸ ಮಾಡ್ತಾ ಮಾಡ್ತಾ ಲೀಲಾಜಾಲವಾಗಿ ಮಾಡುವ ಸಾಮರ್ಥ್ಯ ಬರುತ್ತೆ. ಅದನ್ನು ಅವನು ಆನಂದಿಸುತ್ತಾನೆ. ಜನ ಅವನ ಪ್ರತಿಭೆ ಕಂಡು ಮೂಕವಿಸ್ಮಿತರಾಗುವಂತೆ ಮಾಡುತ್ತಾನೆ. ರಾಮಕೃಷ್ಣ ಮಿಷನ್ನ ಬ್ರಹ್ಮಚಾರಿಗಳು ಪ್ರಾರಂಭದಲ್ಲಿ ಜಪ ಧ್ಯಾನಾದಿ ಮಾಡುವಾಗ ಸಹಜವಾಗಿಯೇ ಮನಸ್ಸು ಚಂಚಲಗೊಂಡು ಏಕಾಗ್ರತೆ ಇಲ್ಲದೆ ಒದ್ದಾಡುತ್ತಿದ್ದರು.
ಅವರೆಲ್ಲರೂ ಸ್ವಾಮಿ ಬ್ರಹ್ಮಾನಂದಜೀ ಅವರ ಹತ್ತಿರ ಕಷ್ಟ ಹೇಳಿಕೊಳ್ಳುತ್ತಿದ್ದರು. ಬ್ರಹ್ಮಾನಂದಜೀ ಹೇಳುತ್ತಾರೆ- ‘ಪ್ರಾರಂಭದ 2-3 ವರ್ಷ ನಾನು ಕಿವಿಗೆ ಹಾಕಿಕೊಳ್ಳುವುದಿಲ್ಲ, ಏಕೆಂದರೆ ಪ್ರಾರಂಭದಲ್ಲಿ ಅದು ಆಗುವುದೇ ಹಾಗೆ! ನಾವು ಏನು ಸಲಹೆ ಸೂಚನೆ ಕೊಟ್ಟರೂ ಪ್ರಯೋಜನವಿಲ್ಲ. ಅಭ್ಯಾಸ ಮಾಡ್ತಾ ಮಾಡ್ತಾ ಮನಸ್ಸಿಗೆ ಒಂದು ಸಾಮರ್ಥ್ಯ ಬರುತ್ತದೆ. ಮಾಡುವ ಕೆಲಸದಲ್ಲಿ ರುಚಿ ಸಿಗುತ್ತದೆ, ಮಾಡುವ ಕೆಲಸವನ್ನು ಅದು ಪ್ರೀತಿಸಲು ಪ್ರಾರಂಭಿಸುತ್ತದೆ. ಆಗ ಮನಸ್ಸು ತನ್ನಿಂತಾನೇ ಅಲ್ಲಿ ನೆಲೆಸುತ್ತದೆ. ಅದರಲ್ಲೇನೋ ಆನಂದ ಕಂಡುಕೊಳ್ಳುತ್ತದೆ.
ಬ್ರಹ್ಮಚಾರಿಗಳಿಗೆ, ಸಾಧಕರಿಗೆ, ಸಂನ್ಯಾಸಿಗಳಿಗೆ ಜಪ ಮಾಡುವಾಗ ಬರುವ ಸಮಸ್ಯೆ ಎಲ್ಲಿವರೆಗೆ ಅಂದರೆ ನಾಮದಲ್ಲಿ ರುಚಿ ಕಾಣುವವರೆಗೆ. ಅದು ಜಪನಿರತ ಸಾಧಕರಿಗೆ ಪ್ರಗತಿಯ ಒಂದು ಹಂತ. ಪ್ರಾರಂಭದಲ್ಲಿ ಜಪ ನೀರಸ, ಧ್ಯಾನ ಇನ್ನೂ ನೀರಸ. ಆದರೆ ನಾಮದಲ್ಲಿ ರುಚಿ ಕಂಡುಕೊಂಡರೆ, ಜಪ ಸರಾಗ; ಆನಂದದಾಯಕ ಕೂಡ. 3-4 ವರ್ಷಗಳ ನಂತರ ಯಾವ ಬ್ರಹ್ಮಚಾರಿಗಳೂ ಬಂದು ಕಷ್ಟ ಹೇಳಿಕೊಳ್ಳುತ್ತಿಲ್ಲ. The duty that is desired will ultimately become a delight. ಯಾವ ಕೆಲಸವನ್ನು ನಾವು ಪ್ರೀತಿಸಲು ಪ್ರಾರಂಭಿಸುತ್ತೇವೋ ಅದು ಬರಬರುತ್ತಾ ಒಂದು delight ಆಗಿಬಿಡುತ್ತದೆ. ಆದ್ದರಿಂದ ಯಾವುದೇ ವ್ಯಕ್ತಿ ಜೀವನದಲ್ಲಿ ಉದ್ಧಾರವಾಗಬೇಕು ಅಂತಿದ್ದರೆ ತಾನು ಮಾಡಬೇಕಾದ ಕೆಲಸದಲ್ಲಿ ಪರಿಣಿತಿ, ನೈಪುಣ್ಯ ಹೊಂದಬೇಕಾದ್ದು ಅನಿವಾರ್ಯ! ನೈಪುಣ್ಯ ಸುಮ್ಮನೆ ಸಿಗುವುದಿಲ್ಲ, ನಿರಂತರ ಪ್ರಯತ್ನದಿಂದ ಸಿಗುತ್ತದೆ. ಅಭ್ಯಾಸ ಮಾಡ್ತಾ ಇದ್ದರೆ ಅದರಲ್ಲಿ ಆನಂದ ಸಿಗುತ್ತದೆ, ಬೇಸರ ಬರುವುದಿಲ್ಲ, ಏಕತಾನತೆ ಇರುವುದಿಲ್ಲ. ಅದಕ್ಕೇ ಮಕ್ಕಳು ಎಷ್ಟೊತ್ತು ಬೇಕಾದರೂ ಆಟ ಆಡ್ತಾರೆ, ಸಂಗೀತವನ್ನು ಪ್ರೀತಿಸುವವನು ಎಷ್ಟೊತ್ತು ಬೇಕಾದರೂ ಹಾಡ್ತಾನೆ.
ರೈತ ಬೇಸರವಿಲ್ಲದೆ ಹೊಲದಲ್ಲಿ ದುಡಿಯುತ್ತಾನೆ. ತಾಯಿ ಬೇಸರವಿಲ್ಲದೆ ಮಕ್ಕಳ ಸೇವೆಯಲ್ಲಿ ತೊಡಗುವುದೇ ಪ್ರೀತಿ ಮಮತೆಯಿಂದ. ಹೀಗೆ ಈ ಅಭ್ಯಾಸ ಎನ್ನುವ ಬ್ರಹ್ಮಾಸ್ತ್ರ ನಮ್ಮ ಬತ್ತಳಿಕೆಯಲ್ಲಿದ್ದರೆ ನಾವು ಉತ್ತಮ ಕರ್ಮಪಟುತ್ವ, ಕ್ರಿಯಾನೈಪುಣ್ಯ ಸಾಧಿಸಬಹುದು, ನಿಪುಣರಾಗಬಹುದು. ಅದರಿಂದ ಅದ್ಭುತವಾದ ಗುಣಾತ್ಮಕತೆ ನಮ್ಮದಾಗುತ್ತದೆ. ಪ್ರಪಂಚ ನಮ್ಮನ್ನು ಎಂದಿಗೂ ಬಿಡುವುದಿಲ್ಲ. ಯಾವುದೇ ಕ್ಷೇತ್ರವಿರಲಿ, ಉದ್ದಿಮೆದಾರ ನೇಮಿಸಿಕೊಳ್ಳುವುದು ನೈಪುಣ್ಯವಿರುವವರನ್ನೇ! ಆದ್ದರಿಂದ ಒಂದು ಕೆಲಸದಲ್ಲಿ ನಿಪುಣನಾದವನಿಗೆ ಪ್ರಪಂಚದಲ್ಲಿ ಇನ್ನಿಲ್ಲದ ಬೇಡಿಕೆ ಬರುತ್ತದೆ.
ಹಣ, ಕೀರ್ತಿ, ಅಧಿಕಾರ, ಸ್ಥಾನಮಾನ. ಪ್ರಶಂಸೆ ಇತ್ಯಾದಿಗಳು ಆ ನೈಪುಣ್ಯವನ್ನು ಅನುಸರಿಸಿಕೊಂಡೇ ಬರುತ್ತವೆ. ಆಗ ಮನುಷ್ಯನಿಗೆ ತನ್ನ ಬಗ್ಗೆ ಹೆಮ್ಮೆ ಬರುತ್ತದೆ. ತಾನು ಓಡಾಡುವ ಜಾಗದಲ್ಲಿ ಬದಲಾವಣೆಗಳನ್ನು ತರುವ ಸಾಮರ್ಥ್ಯ ದೊರೆಯುತ್ತದೆ. ಉದ್ದಿಮೆದಾರರು ಪ್ರಪಂಚದಾದ್ಯಂತ ತಮ್ಮ ಹಣ-ಸಾಮರ್ಥ್ಯ ಬಂಡವಾಳ ಮಾಡಿಕೊಂಡು ಬೆಳೆಯಲು ಕಾತರರಾಗಿದ್ದಾರೆ. ತನ್ಮೂಲಕ ಸಹಸ್ರಾರು ಜನರಿಗೆ ಉದ್ಯೋಗವೂ ಸಿಗುತ್ತದೆ. ಆ ಉದ್ದಿಮೆಗಳು ಲಾಭದಾಯಕವಾಗುವಂತೆ ಮಾಡಲು ತಜ್ಞರು, ನಿಪುಣರು ಬೇಕಾಗಿದ್ದಾರೆ.
ಆ ನೈಪುಣ್ಯಕ್ಕೆ ಬುನಾದಿ ಬರುವುದೇ ವಿದ್ಯಾರ್ಥಿದೆಸೆಯಿಂದಲೇ ಮಹರ್ಷಿ ಪತಂಜಲಿ ಹೇಳಿದ ಆ ದೀರ್ಘ ಕಾಲ, ನಿರಂತರ, ಸತ್ಕಾರದಿಂದ ಕೂಡಿದ ನಮ್ಮ ಪಾಲಿನ ಕೆಲಸಗಳನ್ನು ನಾವು ಯಶಸ್ವಿಯಾಗಿ ಮಾಡುತ್ತಾ ಮಾಡುತ್ತಾ. ಈ ಸುವ್ರತ ನಮ್ಮದಾಗಬೇಕು. ಸುವ್ರತರು ದೀಕ್ಷಾಬದ್ಧರು. ದೀಕ್ಷೆ ಒಂದು ಮಹಾನ್ ಬದ್ಧತೆ. ಆದ್ದರಿಂದಲೇ ವಿದ್ಯಾಭ್ಯಾಸ, ವಿವಾಹ, ಘಟಿಕೋತ್ಸವ ಇವೆಲ್ಲವೂ ದೀಕ್ಷೆಗಳೇ. ಚುನಾವಣೆಯಲ್ಲಿ ಗೆದ್ದು ಪ್ರತಿಜ್ಞಾವಿಧಿ ಸ್ವೀಕರಿಸುವುದೂ ದೀಕ್ಷೆಯೇ. ದೀಕ್ಷೆ ಅಂದರೆ ಇಷ್ಟೇ! ಯಾವ ಕ್ಷೇತ್ರವನ್ನು ನಾನು ಪ್ರವೇಶ ಮಾಡುತ್ತಿದ್ದೇನೋ ಆ ಕ್ಷೇತ್ರದ ಘನತೆ, ಮಹಿಮೆ, ಭವ್ಯತೆ, ಪಾವಿತ್ರ್ಯಗಳನ್ನು ನೂರ್ಮಡಿಗೊಳಿಸಲು ಬದ್ಧನಾಗಿದ್ದೇನೆ ಎಂದು ಜನರೆದುರು ಪ್ರತಿಜ್ಞೆ ಸ್ವೀಕರಿಸುವ ವಿಧಿ. ಇದನ್ನೆಲ್ಲಾ ನಾವು ಅರ್ಥ ಮಾಡಿಕೊಂಡಿದ್ದಿದ್ದರೆ ಗಾಂಧೀಜಿಯವರ ರಾಮರಾಜ್ಯದ ಕನಸು ಎಂದೋ ನನಸಾಗಿಬಿಡುತ್ತಿತ್ತು! ಚಿಂತೆಯಿಲ್ಲ! ಈಗಲಾದರೂ ನಾವು ಎಚ್ಚೆತ್ತುಕೊಂಡು ಇದನ್ನೆಲ್ಲಾ ಅರಿಯೋಣ, ಅರಿತು ಮುಂದುವರಿಯೋಣ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)