ಕನ್ಫ್ಯೂಸ್​​ ಖೆಡ್ಡಾಗೆ ಬೀಳಿಸುವುದೇ ಕಾಂಗ್ರೆಸ್ ರಾಜಕಾರಣ!

Congress
Published on

-Harry S. TrumanIf you can't convince them, confuse them

ಅಮೆರಿಕದ 33ನೇ ಅಧ್ಯಕ್ಷ ಟ್ರೂಮನ್ ಮಾತನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ಅರ್ಥ ಬಹಳ ಸರಳ. ಯಾರಿಗಾದರೂ ಯಾವುದೇ ವಿಷಯವನ್ನು ನಿನ್ನಿಂದ ಮನವರಿಕೆ ಮಾಡಿಕೊಡಲು ಸಾಧ್ಯವಾಗದೇ ಹೋದರೆ, ಅವರಲ್ಲಿ ಗೊಂದಲ ಮೂಡುವಂತೆ ಕಥನ ಕಟ್ಟು, ದಿಕ್ಕು ತಪ್ಪಿಸು ಎಂಬುದು ಈ ಮಾತಿನ ಮರ್ಮ. ಭಾರತದ ಮಟ್ಟಿಗೆ ಕಾಂಗ್ರೆಸ್ ಪಕ್ಷದ ನಾಯಕರು ಈ ಮಾತನ್ನು ಯಥಾವತ್ತಾಗಿ ಆಚರಣೆಯಲ್ಲಿ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. ಕರ್ನಾಟಕದ ಮಟ್ಟಿಗೆ ಇದು ಇನ್ನೂ ಹೆಚ್ಚು ಎಂದರೆ ತಪ್ಪಲ್ಲ. ಜನರನ್ನು ಕನ್​ಫ್ಯೂಸ್ ಮಾಡುವುದೇ ಕಾಂಗ್ರೆಸ್ ರಾಜಕಾರಣದ ಶೈಲಿ ಎನ್ನಬಹುದು. ಸರ್ಕಾರದ ವೈಫಲ್ಯ, ತಪ್ಪುನಡೆ, ಸರ್ಕಾರದ ವ್ಯವಸ್ಥೆಗೆ ಯಾವುದೇ ಗಂಭೀರ ವಿಚಾರ, ಸವಾಲು ಎದುರಾದರೂ ಅಲ್ಲೊಂದು ದಿಕ್ಕು ತಪ್ಪಿಸುವ ಕೆಲಸ ನಡೆದೇ ಇರುತ್ತದೆ. ಅದನ್ನು ಒಂದೊಂದಾಗಿ ನೋಡೋಣ.

ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕವು ಆರ್ಥಿಕವಾಗಿ ಹೇಗೆ ಕುಸಿಯುತ್ತಿದೆ ಎಂಬುದು ಅನೇಕ ಸಂದರ್ಭಗಳಲ್ಲಿ ವಿವರವಾಗಿ ಚರ್ಚೆ ಆಗಿದೆ, ಹೀಗಾಗಿ ಅದನ್ನು ಇಲ್ಲಿ ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ. ಕರ್ನಾಟಕದ ಆರ್ಥಿಕತೆ ಕುಸಿಯುತ್ತಿದೆ ಅಂದರೆ ಆಗ್ಲಿಬಿಡಿ ನಮಗೇನಾಯ್ತೀಗ? ನಮಗೆ ಉಚಿತ ಕರೆಂಟು, ಉಚಿತ ಬಸ್ಸು, ಕೈಖರ್ಚಿಗೆ ಕಾಸು ಬಂದರೆ ಸಾಕು ಎಂಬ ಮಾನಸಿಕತೆಗೆ ವಾಲುತ್ತೇವೆ. ಅದೇ ವೇಳೆ ಪೊಲೀಸ್ ಇಲಾಖೆಯಲ್ಲಿ ಸಂಬಳ ವಿಳಂಬ ಆಗುತ್ತಿದೆ, ಸಾರಿಗೆ ನಿಗಮಗಳಲ್ಲಿ ವೇತನಕ್ಕೆ ತತ್ವಾರ ಆಗಿದೆ, ಡಿಪೋಗಳಲ್ಲಿ ನಟ್, ಬೋಲ್ಟ್ಗಳಿಗೂ ಬರ ಬಂದಿದೆ ಎಂದರೆ ‘ಹೌದಾ’ ಎಂದು ಹೌಹಾರುತ್ತೇವೆ. ಮೂಲವಿಚಾರ ಏನು ಎಂದರೆ ರಾಜ್ಯದ ಆದಾಯದ ಬಹುಪಾಲು ಉಚಿತ ಕೊಡುಗೆಗಳಿಗೇ ವ್ಯಯ ಆಗುತ್ತಿರುವುದರಿಂದ ಮೂಲಸೌಕರ್ಯ ಮತ್ತು ಅಭಿವೃದ್ಧಿಗೆ ಅದರಲ್ಲೂ ಮುಖ್ಯವಾಗಿ ಉತ್ಪಾದಕ ವಲಯಗಳಿಗೆ ಹೆಚ್ಚಿನ ಹಣ ನೀಡಿಕೆ ಸಾಧ್ಯವಾಗುತ್ತಿಲ್ಲ. ಈ ಪ್ರವೃತ್ತಿ 2023-24ರ ಬಜೆಟ್​ನಿಂದ ಆರಂಭವಾಗಿ 2025-26ನೇ ಸಾಲಿಗೂ ಮುಂದುವರಿದಿದೆ. ಆದಾಯ ಕೊರತೆಯನ್ನು ಸರಿದೂಗಿಸಲು ಮಿತಿಮೀರಿದ ಸಾಲಕ್ಕೆ ಕರ್ನಾಟಕ ಸರ್ಕಾರ ಶರಣಾಗಿದೆ ಎಂಬುದು ಈ ಸಾಲಿನ ಮುಂಗಡಪತ್ರದಲ್ಲಿ ಢಾಳಾಗಿ ಕಾಣಿಸುವ ಸಂಗತಿ. ಆದರೆ ಅಂತಹ ಗಂಭೀರ ವಿಚಾರವನ್ನು ಮರೆಮಾಚಿದ್ದು ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲು ನೀಡುವ ಕಾಂಗ್ರೆಸ್ ಸರ್ಕಾರದ ಅಜೆಂಡಾ.

ಈ ವಿಚಾರದಲ್ಲಿ ಪ್ರತಿಪಕ್ಷ ಸಹಜವಾಗಿ ಗೊಂದಲಕ್ಕೆ ಸಿಲುಕಿದ್ದು ಸುಳ್ಳಲ್ಲ. ಒಂದುಕಡೆ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಎದುರಾಗಿರುವ ಗಂಭೀರ ಸವಾಲು. ಮತ್ತೊಂದು ಕಡೆ ಧರ್ಮದ ಆಧಾರದಲ್ಲಿ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಬೇಕೆನ್ನುವ ಸಂವಿಧಾನ ವಿರೋಧಿ ಕ್ರಮ. ಬೊಬ್ಬೆ ಹೊಡೆಯುವುದರಿಂದ ಏಕಾಏಕಿ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸಲಂತೂ ಸಾಧ್ಯವಿಲ್ಲ, ಆದರೆ ಅದೇ ಮತೀಯ ಆಧಾರದಲ್ಲಿ ಮೀಸಲಾತಿ ನೀಡುವುದರ ವಿರುದ್ಧ ಬೊಬ್ಬೆ ಹೊಡೆಯುವುದರಿಂದ ಹಿಂದೂ ಮತ್ತು ಮುಸ್ಲಿಂ ಸಮುದಾಯವನ್ನು ಲಂಬಾಕಾರವಾಗಿ ಒಡೆಯುವುದರ (ಛ್ಟಿಠಿಜ್ಚಿಚ್ಝ ಛಜಿಡಜಿಛಛಿ) ಕುರಿತು ಅಷ್ಟೋ ಇಷ್ಟೋ ಸಾಮಾಜಿಕ ಜಾಗೃತಿ ಮಾಡುವುದು ಸಾಧ್ಯವಿದೆ. ಅದಕ್ಕಿಂತ ಮುಖ್ಯವಾಗಿ ದಲಿತರಿಗೆ, ಹಿಂದುಳಿದವರಿಗೆ ಸಂವಿಧಾನದತ್ತವಾಗಿ ಸಿಗಬೇಕಿದ್ದ ಮೀಸಲಾತಿ ಪಾಲು ರಾಜಕೀಯ ಲಾಭದ ಕಾರಣಕ್ಕೆ ಅನ್ಯರ ಪಾಲಾಗುವುದನ್ನು ತಡೆಯಲೇಬೇಕಾದ ಅನಿವಾರ್ಯ ಹೊಣೆಗಾರಿಕೆ ಮೆರೆಯಲು ಸಾಧ್ಯವಿದೆ ಎಂಬುದು ಹಲವರ ಅಂಬೋಣ.

ಗುತ್ತಿಗೆ ಇರಲಿ, ನೌಕರಿಯೇ ಇರಲಿ ಸಂವಿಧಾನದತ್ತವಾಗಿ ಮೀಸಲಾತಿ ಲಭ್ಯ ಇರುವುದು ದಲಿತರಿಗೆ ಮಾತ್ರ. ಮುಸ್ಲಿಮರಿಗೆ ಅಥವಾ ಕಾಂಗ್ರೆಸ್ ಹೇಳುವ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಾಧ್ಯವೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷ ಪ್ರತಿಪಾದನೆ ಮಾಡುವ ಜಾತ್ಯತೀತತೆ ಎಂದರೆ ಮುಸ್ಲಿಂ ಓಲೈಕೆ ಮಾತ್ರವೇ? ಈ ಪ್ರಶ್ನೆ ಬಂದಾಗ ಕಾಂಗ್ರೆಸ್​ಗೆ ಸೇರಿರುವ ಜಾತ್ಯತೀತವಾದಿಗಳೆಲ್ಲ ಮೌನಕ್ಕೆ ಶರಣಾಗುತ್ತಾರಲ್ಲ ಯಾಕೆ? ಮುಸ್ಲಿಂ ಮೀಸಲಾತಿ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದ್ದಾಗ ಅದನ್ನು ದಿಕ್ಕು ತಪ್ಪಿಸಲು ಸಿಕ್ಕಿದ ಮತ್ತೊಂದು ಅಸ್ತ್ರ ಅಂದರೆ ಈಗಷ್ಟೇ ಮುಕ್ತಾಯವಾದ ರಂಜಾನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮುಸ್ಲಿಮರಿಗೆ ನೀಡಿದ ಮೋದಿ ಇಬಾದತ್ ಕಿಟ್. ಇದನ್ನು ನೀಡಿದ್ದು ಮುಸ್ಲಿಂ ಓಲೈಕೆ ಅಲ್ಲವೇ ಎಂಬ ಪ್ರಶ್ನೆಯನ್ನು ಮುಂದಿಟ್ಟು ಗೊಂದಲ ಸೃಷ್ಟಿ ಮಾಡಲಾಯಿತು. ಮೊದಲನೆಯದಾಗಿ, ರಂಜಾನ್ ಕಿಟ್ ನೀಡಿದ್ದು ಕೇಂದ್ರ ಸರ್ಕಾರವಲ್ಲ, ಕೊಟ್ಟಿದ್ದು ಬಿಜೆಪಿಯ ಮುಸ್ಲಿಂ ಅಲ್ಪಸಂಖ್ಯಾತ ಮೋರ್ಚಾ. ಅಷ್ಟು ಮಾತ್ರವಲ್ಲ, ಈ ಕಿಟ್ಟನ್ನು ಜೈನರಿಗೆ ಮತ್ತು ಸಿಖ್ಖರಿಗೂ ಅಲ್ಪಸಂಖ್ಯಾತ ಮೋರ್ಚಾದಿಂದ ನೀಡಲಾಗಿದೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಆರಂಭವಾಗಿದ್ದು ಇಂದು ನಿನ್ನೆ ಅಲ್ಲ ಮತ್ತು ಬಿಜೆಪಿಯು ಅಲ್ಪಸಂಖ್ಯಾತ ಮೋರ್ಚಾ ಎಂಬ ಉಪ ಸಂಘಟನೆ ಹೊಂದಿದೆ ಎಂಬುದರ ಅರ್ಥವೇ ಅದು ಸಾರಸಗಟಾಗಿ ಮುಸ್ಲಿಂ ವಿರೋಧಿ ಮಾನಸಿಕತೆ ಹೊಂದಿಲ್ಲ ಎಂದಷ್ಟೆ.

ಹಾಗೆ ನೋಡಿದರೆ ಬಿಜೆಪಿ ಎಲ್ಲ ಮುಸ್ಲಿಮರನ್ನು ವಿರೋಧಿಸುವುದಿಲ್ಲ. ಭಾರತಮಾತೆಗೆ ನಮಿಸದಿರುವ, ವಂದೇಮಾತರಂ ಗೀತೆಯನ್ನು ಹಾಡಲು ಆಕ್ಷೇಪಿಸುವ, ಭಾರತ್ ಮಾತಾ ಕಿ ಜೈ ಎಂದು ಹೇಳಲು ತಕರಾರು ತೆಗೆಯುವವರನ್ನು ವಿರೋಧಿಸುತ್ತೆ. ಇಷ್ಟು ಮಾತ್ರವಲ್ಲ, ಪಾಕಿಸ್ತಾನ ಭಾರತದ ವಿರುದ್ಧ ಕ್ರಿಕೆಟ್ ಗೆದ್ದಾಗ ಪಟಾಕಿ ಹೊಡೆದು ಸಂಭ್ರಮಿಸುವ, ಭಯೋತ್ಪಾದಕತೆಗೆ ಕುಮ್ಮಕ್ಕು, ಬೆಂಬಲ, ಆಶ್ರಯ ಕೊಡುವ, ಭಾರತದ ಇತಿಹಾಸ, ಸಂಸ್ಕೃತಿ, ಅಸ್ಮಿತೆಯನ್ನು ಗೌರವಿಸದೆ ಇರುವ ಮುಸ್ಲಿಮರನ್ನು ಖಡಾ ಖಂಡಿತವಾಗಿ ಯಾವುದೇ ಮುಲಾಜಿಲ್ಲದೆ ಬಿಜೆಪಿ ವಿರೋಧ ಮಾಡುತ್ತದೆ. ಮುಸ್ಲಿಮರು ಮಾತ್ರವಲ್ಲ ಮೇಲೆ ಹೇಳಿದ ಎಲ್ಲ ಸಂಗತಿಗಳಿಗೆ ಗೌರವ ಕೊಡದ ಹಿಂದೂಗಳನ್ನು, ನಾಮಮಾತ್ರ ಹಿಂದೂಗಳೇ ಮುನ್ನಡೆಸುವ ಸಂಘಟನೆಗಳನ್ನು ಬಿಜೆಪಿ ವಿರೋಧಿಸುತ್ತದೆ. ಅಷ್ಟು ಮಾತ್ರವಲ್ಲ ಈ ದೇಶವನ್ನು, ಸಂಸ್ಕೃತಿಯನ್ನು ಗೌರವಿಸದ ವ್ಯಕ್ತಿಗಳ ಮತವನ್ನೂ ಬಿಜೆಪಿ ಧಿಕ್ಕರಿಸುತ್ತದೆ. ಇನ್ನು ಓಲೈಕೆಯ ಪ್ರಶ್ನೆ ಎಲ್ಲಿಂದ ಬರಬೇಕು.

ಮುಸ್ಲಿಮರನ್ನು ಓಲೈಸುವುದಾದರೆ ಭಾರತದಿಂದ ಕಾಶ್ಮೀರವನ್ನು ಬೇರ್ಪಡಿಸುವ ಸಂವಿಧಾನದ 370ನೆ ವಿಧಿಯನ್ನು ಕಿತ್ತು ಬಿಸಾಕುತ್ತಿರಲಿಲ್ಲ. ಮುಸ್ಲಿಂ ಮಹಿಳೆಯರ ಬದುಕನ್ನು ನರಕ ಮಾಡಿದ ತ್ರಿವಳಿ ತಲಾಖ್​ನ್ನು ರದ್ದು ಮಾಡುತ್ತಿರಲಿಲ್ಲ. 500 ವರ್ಷಗಳಿಂದ ಬಾಕಿ ಇದ್ದ ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ವಣದ ಕನಸನ್ನು ನನಸಾಗಿಸುತ್ತಿರಲಿಲ್ಲ. ಇಡೀ ಭಾರತದಲ್ಲಿ ಲ್ಯಾಂಡ್ ಜಿಹಾದ್​ಗೆ ಅಡಿಪಾಯ ಹಾಕಿದ್ದ ವಕ್ಪ್ ಕಾಯಿದೆಗೆ ತಿದ್ದುಪಡಿ ತಂದು ಲಕ್ಷೋಪಲಕ್ಷ ಎಕರೆ ಹಿಂದೂಗಳ ಖಾಸಗಿ ಆಸ್ತಿ ಮತ್ತು ಸರ್ಕಾರಿ ಆಸ್ತಿಗೆ ಜೀವದಾನ ಕೊಡುತ್ತಿರಲಿಲ್ಲ. ಉತ್ತರ ಕೊಡಬೇಕಾದ ಒಂದು ಪ್ರಶ್ನೆ ಬಾಕಿ ಇದೆ. ಮುಸ್ಲಿಮರಿಗೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕೆ ಟಿಕೆಟ್ ಕೊಡುತ್ತಿಲ್ಲ ಮತ್ತು ಸರ್ಕಾರದಲ್ಲಿ ಮಂತ್ರಿ ಮಾಡುತ್ತಿಲ್ಲ ಎಂಬುದು. ಈ ಪ್ರಶ್ನೆಗೆ ಉತ್ತರ ಕೊಡುವುದಕ್ಕಿಂತ ಸಾರಾಸಗಟಾಗಿ ಕಾಂಗ್ರೆಸ್​ಗೆ ಮತಹಾಕುವ ಮುಸ್ಲಿಂ ಸಮುದಾಯ ಮತ್ತು ಸಮುದಾಯದ ಪ್ರಮುಖರು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದಲ್ಲವೇ? ಆತ್ಮಾವಲೋಕನ ಮಾಡಿಕೊಂಡರೆ ದೇಶದ ಮುಸ್ಲಿಂ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಮತ್ತು ಕೇರಳದ ರಾಜ್ಯಪಾಲರಾಗಿರುವ ಅಪ್ಪಟ ರಾಷ್ಟ್ರವಾದಿ ಆರಿಫ್ ಮೊಹಮದ್ ಖಾನ್ ಕಣ್ಣಿಗೆ ಕಾಣಿಸುತ್ತಾರೆ. ಅವರೇ ಆ ಸಮುದಾಯದ ಕಣ್ತೆರೆಸುತ್ತಾರೆ, ಅನುಮಾನ ಬೇಡ.

ಮುಸ್ಲಿಮರಿಗೆ ರಂಜಾನ್ ಕಿಟ್, ಹಿಂದೂಗಳಿಗೆ ಬರೀ ಚಿಪ್ಪು ಎಂದು ಮೂದಲಿಸುವವರೂ ಇದ್ದಾರೆ. ಇದೇನು ಕರ್ಮ ನೋಡಿ. ಕಳೆದ ಹತ್ತು ವರ್ಷಗಳ ಈಚೆಗೆ ದೇಶದಲ್ಲಿ ಎಲ್ಲೆಂದರಲ್ಲಿ ಬಾಂಬ್​ಬ್ಲಾಸ್ಟ್ ಆಗಿದ್ದು ಕಂಡಿರುವಿರಾ? ಈ ಬೆಚ್ಚನೆ ಸುರಕ್ಷಾ ಭಾವ ಈ ಮೊದಲು ನಿಮಗೆ ದಕ್ಕಿತ್ತಾ? ಕೈತಪ್ಪಿ ಹೋಗಿದ್ದ ಕಾಶ್ಮೀರ ಕೈಗೆ ಬಂದದ್ದು ಮರೆತೇ ಬಿಟ್ಟಿರಾ? ಅದೇ ಅತಂತ್ರ ಕಾಶ್ಮೀರ ಭಯೋತ್ಪಾದನೆ ಮೂಲ ಆಗಿತ್ತಲ್ಲವೇ? ಅಲ್ಲಿಂದಲೇ ದೇಶದ ತುಂಬ ರಕ್ತದೋಕುಳಿ! ಕಾಶ್ಮೀರದಲ್ಲಿ ಕಲ್ಲು ತೂರುವವರು ಎಲ್ಲಿ ಹೋದರು? ಕಾಶ್ಮೀರ ಇಂದು ನಿಜವಾದ ಸ್ವಾತಂತ್ರ್ಯ ಅನುಭವಿಸುತ್ತಿರುವುದು ಸುಳ್ಳೇ? ರಾಮಮಂದಿರ ಸಾಕಾರಗೊಂಡಿದೆ. ಇಷ್ಟುವರ್ಷ ಅದರ ವಿಳಂಬಕ್ಕೆ ಕಾರಣ ಯಾರು? ಕಾಶಿಯ ಬಗ್ಗೆ ಸುಂದರ ಮತ್ತು ಪವಿತ್ರ ಭಾವ ಪುನಃ ತಳೆದಿದ್ದು, ಕಾಶಿ ಮಥುರಾದಲ್ಲಿ ಹೊಸ ಭರವಸೆ ಮೂಡಿದ್ದು, ವಿಶ್ವವಿಖ್ಯಾತ ಕುಂಭಮೇಳ, ಭಾರತ ಜಗತ್ತಿನ ಮೂರನೇ ಆರ್ಥಿಕ ಶಕ್ತಿ ಆಗುವತ್ತ ದಾಪುಗಾಲು ಹಾಕಿ ಜಗತ್ತು ಭಾರತಕ್ಕೆ ತಲೆಬಾಗುತ್ತಿರುವುದು... ಇನ್ನೂ ಬೇಕಾ ಹಿಂದೂಗಳಿಗೆ. ಅಯ್ಯೋ ಶಿವನೇ.

ಮುಸ್ಲಿಂ ಮೀಸಲಾತಿ, ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದ ವಿರುದ್ಧ ರಾಜ್ಯದಲ್ಲಿ ಮತ್ತೊಂದು ಸುತ್ತಿನ ವಿರೋಧದ ಅಲೆ ಏಳುವ ಲಕ್ಷಣ ಗೋಚರಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಕೈಕಂಬ ಹೆಡೆ ಎತ್ತಿದೆ, ಅದೇ ಜಾತಿ ಜನಗಣತಿ ವಿಚಾರ. ಸರ್ಕಾರದ ವಿರುದ್ಧ ಯಾವುದೇ ಗಂಭೀರ ಚರ್ಚೆ ಆರಂಭವಾದಾಗ ಈ ಜಾತಿ ಜನಗಣತಿ ಲೆಕ್ಕಾಚಾರ ಮುನ್ನೆಲೆಗೆ ಬರುತ್ತಿತ್ತು.

ಈ ಬಾರಿ ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜಾತಿ ಜನಗಣತಿಯ ಅಂಕಿಸಂಖ್ಯೆ ಬಹಿರಂಗವಾಗಿದೆ. ಲಭ್ಯ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ 75 ಲಕ್ಷ (ನಂಬರ್ ವನ್ ಜಾತಿ) ಒಕ್ಕಲಿಗ 50 ಲಕ್ಷ (ಎರಡನೇ ನಂಬರ್ ಜಾತಿ) ಕುರುಬ 44 ಲಕ್ಷ (ಮೂರನೇ ಸ್ಥಾನ) ಎಸ್​ಸಿ ಎಡ 35 ಲಕ್ಷ (4ನೇ ಸ್ಥಾನ), ಎಸ್​ಸಿ ಬಲ 34 ಲಕ್ಷ (5ನೇ ಸ್ಥಾನ) ವೀರಶೈವ, ಲಿಂಗಾಯತ ಮತ್ತು ಇತರರು ನಂತರದ ಸ್ಥಾನ. ಇನ್ನು ಹಿಂದು ಮುಂದು ಎಲ್ಲ ಯಾವ ಲೆಕ್ಕ? ಈಗಷ್ಟೇ ಈ ಮಾಹಿತಿ ಬಹಿರಂಗ ಆಗಿದೆ. ಇದು ಸರಿಯಾದ ತಿರುವು ಪಡೆದುಕೊಂಡರೆ ಹೊಸ ವಿವಾದ, ದಿಕ್ಕು ತಪ್ಪಿಸುವ ಯತ್ನ ಬೇಕಾಗಲಿಕ್ಕಿಲ್ಲ. ಕಾದು ನೋಡೋಣ, ಏನಂತೀರಿ?

(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net