

ಹೈದರಾಬಾದ್: ತೆಲಂಗಾಣದಲ್ಲಿ ಪಂಚ ಗ್ಯಾರಂಟಿ ಭರವಸೆ ನೀಡಿರುವ ಕಾಂಗ್ರೆಸ್ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಆದರೆ ಮತದಾನಕ್ಕೆ ಮುನ್ನವೇ ಹಲವು ನಾಯಕರು ತಾನೇ ಮುಖ್ಯಮಂತ್ರಿ ಎಂದು ಪೋಷಿಸುತ್ತಿದ್ದಾರೆ. ಇದು ಹೈಕಮಾಂಡ್ಗೆ ತಲೆನೋವಾಗಿದೆ. ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸುತ್ತಿದ್ದಾರೆ ಎನ್ನುತ್ತಿವೆ ಪ್ರತಿಪಕ್ಷಗಳು.
ಕೆಲವರು ಪರೋಕ್ಷ, ಮತ್ತೆ ಕೆಲವರು ಬಹಿರಂಗವಾಗಿ ನಾನೇ ಸಿಎಂ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಟಿಪಿಸಿಸಿ ಅಧ್ಯಕ್ಷ ಕೆ.ಜನಾರೆಡ್ಡಿ, ಸಿಎಲ್‌ಪಿ ನಾಯಕ ಎ ರೇವಂತ್ ರೆಡ್ಡಿ, ಮಾಜಿ ಟಿಪಿಸಿಸಿ ಅಧ್ಯಕ್ಷ ಮಲ್ಲು ಭಟ್ಟಿ ವಿಕ್ರಮಾರ್ಕ, ಸಂಸದ ಕ್ಯಾಪ್ಟನ್ ಎನ್ ಉತ್ತಮ್ ಕುಮಾರ್ ರೆಡ್ಡಿ, ಮತ್ತೊಬ್ಬ ಸಂಸದ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಸಿಡಬ್ಲ್ಯುಸಿ ಕಾಯಂ ಆಹ್ವಾನಿತ, ಮಾಜಿ ಉಪಮುಖ್ಯಮಂತ್ರಿ, ದಾಮೋದರ ರಾಜನರಸಿಂಹ ಮುಖ್ಯಮಂತ್ರಿಯಾಗಲು ತುದಿಗಾಲ ಮೇಲೆ ನಿಂತಿದ್ದಾರೆ.
“ನಾನು ಮುಖ್ಯಮಂತ್ರಿ ಹುದ್ದೆಯ ನಂತರ ಇಲ್ಲ, ನನ್ನ ನಂತರ ಆ ಹುದ್ದೆ ಬರಬಹುದು. ಭವಿಷ್ಯದಲ್ಲಿ ಏನಾಗುತ್ತದೆ ಎಂದು ನಾವು ಊಹಿಸಲು ಸಾಧ್ಯವಿಲ್ಲ. ಅದೃಷ್ಟವಿದ್ದರೆ ಪಿವಿ ನರಸಿಂಹರಾವ್ ಅವರು ಹೇಗೆ ಅನಿರೀಕ್ಷಿತವಾಗಿ ಪ್ರಧಾನಿಯಾದರೋ ಅದೇ ರೀತಿ ನಾನೂ ಸಿಎಂ ಆಗಬಹುದು ಜಾನಾರೆಡ್ಡಿ ಹೇಳುತ್ತಿದ್ದಾರೆ.
ಏಳು ಬಾರಿ ಶಾಸಕರಾಗಿದ್ದ ಜನಾರೆಡ್ಡಿ ಅವರು 2018 ರ ಚುನಾವಣೆಯಲ್ಲಿ ನಾಗಾರ್ಜುನ ಸಾಗರದಿಂದ ಸೋತರು. 2021 ರಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಅವರು ಗೆಲುವು ಸಾಧಿಸಲಿಲ್ಲ. ಈ ಬಾರಿ ಅವರು ಸ್ಪರ್ಧೆಯಿಂದ ಹೊರಗುಳಿದಿದ್ದರೂ, ಅವರ ಪುತ್ರ ಜಯವೀರ್ ರೆಡ್ಡಿ ನಾಗಾರ್ಜುನಸಾಗರ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಬಹುಮತ ಬಂದರೆ ಪುತ್ರನನ್ನು ರಾಜೀನಾಮೆ ಕೊಡಿಸಿ ಮರು ಚುನಾವಣೆಯಲ್ಲಿ ಆರಿಸಿ ಬಂದು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎನ್ನುತ್ತಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕ್ಷಣದಲ್ಲೇ ಅಂಗವಿಕಲ ಮಹಿಳೆಗೆ ಉದ್ಯೋಗ ಘೋಷಿಸುವುದಾಗಿ ಹೇಳುವ ಮೂಲಕ ರೇವಂತ್ ರೆಡ್ಡಿ ಬಹಿರಂಗವಾಗಿ ನಾನೂ ಸಿಎಂ ರೇಸ್ನಲ್ಲಿದ್ದೇನೆ ಎಂದು ಪ್ರತಿಪಾದಿಸುತ್ತಿದ್ದಾರೆ. ಕುತೂಹಲ ಸಂಗತಿ ಏನೆಂದರೆ ಇವರು ಸಹ 2018 ರ ಚುನಾವಣೆಯಲ್ಲಿ ಕೊಡಂಗಲ್‌ನಿಂದ ಸೋತಿದ್ದು, ಮತ್ತೆ ಅದೇ ಕ್ಷೇತ್ರದಿಂದ ಈ ಬಾರಿಕಣದಲ್ಲಿದ್ದಾರೆ.
ಭುವನಗಿರಿ ಸಂಸದ ಕೋಮಟಿರೆಡ್ಡಿ ತೆಲಂಗಾಣದಲ್ಲಿ ಕಾಂಗ್ರೆಸ್ ನಾಯಕತ್ವ ವಹಿಸುವ ಮಹತ್ವಾಕಾಂಕ್ಷೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ ಮತ್ತೊಬ್ಬ ನಾಯಕ. ಪಕ್ಷದಲ್ಲಿ ಉತ್ತಮ್, ಭಟ್ಟಿ ವಿಕ್ರಮಾರ್ಕ ಮತ್ತು ರಾಜನರಸಿಂಹ ಸಹ ಆಕಾಂಕ್ಷಿಗಳಾಗಿದ್ದಾರೆ.
15 ಸೀಟು ಕೂಡ ಗೆಲ್ಲುತ್ತಿಲ್ಲ:
ತೆಲಂಗಾಣದಲ್ಲಿ 119 ಸ್ಥಾನಗಳಿದ್ದು, ಕಾಂಗ್ರೆಸ್ಗೆ ವೈಎಸ್ಆರ್ ಪಕ್ಷ ಬೆಂಬಲಿಸಿದೆ. ಪಂಚ ಗ್ಯಾರಂಟಿ ಭರವಸೆ ಕೊಡಲಾಗಿದೆ. ಇದೇ ಆದಾರದ ಮೇಲೆ ಕರ್ನಾಟಕದಂತೆ ಇಲ್ಲೂ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಎಲ್ಲ ಕೈ ಮುಖಂಡರಲ್ಲಿ ಬಂದಿದೆ. ಕೂಸು ಹುಟ್ಟುವ ಮೊದಲೇ ಕುಲಾವಿ ಒಲೆಸಿದರು ಎಂಬಂತೆ ಚುನಾವಣೆಗೆ ಮೊದಲೇ ಮುಖ್ಯಮಂತ್ರಿ ಕುರ್ಚಿಗೆ ಗುದ್ದಾಟ ಶುರುವಿಟ್ಟಿಕೊಂಡಿದ್ದಾರೆ. ತೆಲಂಗಾಣದಲ್ಲಿ ನ.30ಕ್ಕೆ ಚುನಾವಣೆ ನಡೆಯಲಿದ್ದು, ಡಿ.3ಕ್ಕೆ ಫಲಿತಂಶ ಪ್ರಕಟವಾಗಲಿದೆ.