ಆಧ್ಯಾತ್ಮಿಕ ಆಯಾಮದಲ್ಲಿನ ಸಂಕೀರ್ಣತೆಗಳು

Column F
Published on
ಅನುಭವದ ಹೊಸ ಆಯಾಮವನ್ನು ಪ್ರವೇಶಿಸಬೇಕಾದರೆ ಮೊದಲು ಜೀವನವನ್ನು ಅದು ಇರುವ ರೀತಿಯಲ್ಲೇ ನೋಡಬೇಕು. ಎಲ್ಲವನ್ನೂ ಅದರ ನೈಜ ರೀತಿಯಲ್ಲಿ ನೋಡಿದರೆ, ಒಂದೇ ಸ್ಥಳದಲ್ಲಿ ನಿಂತಿರುವುದರಲ್ಲಿ ಯಾವ ಅರ್ಥವಿಲ್ಲ ಎಂಬುದು ಅರಿವಾಗುತ್ತದೆ. ಹೊಸದರತ್ತ ಚಲಿಸಲೇಬೇಕು ಎಂಬುದು ಬಹಳ ಸ್ಪಷ್ಟವಾಗುತ್ತದೆ.

ನಾವು ಈಗಿರುವ ಪರಿಸ್ಥಿತಿಯನ್ನು ಮೀರಿ ಅನುಭವದ ಇತರ ಆಯಾಮಗಳಿಗೆ ಹೋಗುವ ಪ್ರಯತ್ನ ಮಾಡಿದಾಗ ಕೆಲವು ಸಂಗತಿಗಳು ಗಲಿಬಿಲಿಯಾಗಬಹುದು. ಅದಕ್ಕೆ ಗಾಬರಿಯಾಗದೆ, ನಮ್ಮೊಳಗೆ ಅಗತ್ಯವಾದ ವಿವೇಕ ಮತ್ತು ಸಮತೋಲನವನ್ನು ಬೆಳೆಸಿಕೊಳ್ಳಬೇಕು, ಇಲ್ಲದಿದ್ದರೆ ಈ ಗಲಿಬಿಲಿ ವಿಪರೀತ ಗೊಂದಲಕ್ಕೆ ಕಾರಣವಾಗಬಹುದು. ಒಂದು ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತೀರಿ ಮತ್ತು ಇದ್ದಕ್ಕಿದ್ದಂತೆ ನೀವು ಎಲ್ಲಿಗೆ ಸೇರಿದವರು ಎನ್ನುವುದೇ ತಿಳಿಯುವುದಿಲ್ಲ. ಅಂದರೆ ನಿರಂತರವಾಗಿ ಹೊಸ ಆಯಾಮವನ್ನು ಪ್ರವೇಶಿಸುತ್ತಿದ್ದೀರಿ ಎಂದರ್ಥ.

ಹಿಂದಕ್ಕೆ ಹೆಜ್ಜೆ ಹಾಕುವಂತಿಲ್ಲ: ಇದು ಟ್ರಾ್ಯಪೀಜಿನಲ್ಲಿ ಉಯ್ಯಾಲೆ ಆಡಿದಂತೆ. ನಿಮ್ಮ ಸ್ವಂತ ಟ್ರಾ್ಯಪೀಜಿನಲ್ಲಿ ಉಯ್ಯಾಲೆ ಆಡುವಾಗ, ಅದು ಚೆನ್ನಾಗೆಯೇ ಇರುತ್ತದೆ. ನಿಮ್ಮದ್ದನ್ನು ಬಿಟ್ಟು ಇನ್ನೊಂದನ್ನು ಹಿಡಿಯಲು ಪ್ರಯತ್ನಿಸಿದಾಗ, ಆ ಮಧ್ಯದ ಅಂತರ ಭಯಂಕರವಾಗಿರುತ್ತದೆ, ಏಕೆಂದರೆ ನೀವು ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲವಾಗುತ್ತೀರಿ. ಜೀವನದ ಇತರ ಆಯಾಮಗಳನ್ನು ಅನ್ವೇಷಿಸಲು, ತಿಳಿಯಲು ಮತ್ತು ಅನುಭವಿಸಲು ಹೋಗುವವರ ಪರಿಸ್ಥಿತಿ ಇದೇ ತರಹ ಇರುತ್ತದೆ. ಅವರು ಇನ್ನೊಂದು ಮಗ್ಗುಲನ್ನು ತಿಳಿಯಲು ಬಯಸುತ್ತಾರೆ. ಆದರೆ ತಮಗೆ ಪರಿಚಿತವಿರುವ ಸಂಗತಿಗಳಿಂದ ಒಂದು ಕ್ಷಣದ ಮಟ್ಟಿಗಾದರೂ ಬಿಡುಗಡೆ ಹೊಂದಲು ಬಯಸುವುದಿಲ್ಲ, ಹಾಗಾಗಿ ಹೆಣಗಾಟ ಅನಗತ್ಯವಾಗಿ ದೀರ್ಘಕಾಲಿಕವಾಗಿಬಿಡುತ್ತದೆ. ನಿಮ್ಮ ಟ್ರಾಪೀಜಿನಿಂದ ಜಿಗಿದರೆ ಮತ್ತೊಂದು ಕಡೆಯ ಟ್ರಾಪೀಜು ಹಿಡಿತಕ್ಕೆ ಸಿಗುವಂತೆ ಯಾವಾಗಲೂ ಸರಿಯಾದ ಸ್ಥಳದಲ್ಲಿ ಇರುತ್ತದೆ. ಆದರೆ ಅದರ ಬದಲಾಗಿ, ಅದನ್ನು ಪೂರ್ತಿಯಾಗಿ ಬಿಟ್ಟುಬಿಡದೇ ಸುಮ್ಮನೆ ತೂಗಾಡುವುದು, ಹಿಡಿತವನ್ನು ಸಡಿಲಿಸುವುದು, ಅಥವಾ ಕಿರುಬೆರಳಿನಿಂದ ಹಿಡಿದುಕೊಂಡಿರುವುದು ಮಾಡುತ್ತಿದ್ದರೆ, ಅದೊಂದು ಹಿಂಸೆಯಾಗಿಬಿಡುತ್ತದೆ.

ಪರಿಚಿತ ಆಯಾಮವನ್ನು ಬಿಟ್ಟು ಬೇರೆಯದನ್ನು ಅನ್ವೇಷಿಸಿ ಎಂದು ಹೇಳಿದಾಗ ನಿಮ್ಮ ಕಚೇರಿ ಅಥವಾ ಮನೆಯನ್ನು ಬಿಟ್ಟು ಬೇರೆ ಕಡೆ ಹೋಗಿ ಎಂದಲ್ಲ. ಇದು ಆಂತರ್ಯದ ಪ್ರಕ್ರಿಯೆ. ನಿಮ್ಮ ಒಳಗೆ, ಅಂಟಿಕೊಂಡಿರುವ ಮತ್ತು ಗುರುತಿಸಿಕೊಂಡಿರುವ ವಿಷಯಗಳನ್ನು ಬಿಡಬೇಕು ಎಂದರ್ಥ. ಜೀವನದಲ್ಲಿ ಕೊರತೆಯಿದೆ ಎಂದೆನಿಸಿದ್ದರಿಂದ ಅಧ್ಯಾತ್ಮದ ಕಡೆಗೆ ಹೆಜ್ಜೆ ಇಟ್ಟಿದ್ದೀರಿ. ಒಂದು ವೇಳೆ ಕೇವಲ ಬೆಳಗಿನ ಉಪಾಹಾರ ತಿಂದು, ಕಾಫಿ ಕುಡಿದುಕೊಂಡು ಸಂತೋಷದಿಂದ ಇದ್ದೀರಿ ಮತ್ತು ಸಂಪೂರ್ಣವಾಗಿ ಸಂತುಷ್ಟರಾಗಿದ್ದೀರಿ ಎಂದರೆ ನೀವು ಬೇರೆ ಯಾವುದೇ ವಿಷಯವನ್ನು ಪ್ರಯತ್ನಿಸುತ್ತಿರಲಿಲ್ಲ. ಎಲ್ಲೋ ಒಂದು ಕಡೆ ನಿಮಗೆ ಕೊರತೆ ಕಾಣಿಸಿದೆ. ಬೇರೆ ಏನನ್ನೋ ತಿಳಿದುಕೊಳ್ಳಬೇಕು ಮತ್ತು ಅನುಭವಿಸಬೇಕು ಎಂದೆನಿಸಿದೆ. ಇದು ಈಗಿನ ಅಸ್ತಿತ್ವವನ್ನು ಕಡೆಗಣಿಸುವ ಬಗ್ಗೆಯಲ್ಲ. ಇದು ಈಗ ಇರುವ ಪರಿಸ್ಥಿತಿಯ ಮಿತಿಯನ್ನು ಕಂಡುಕೊಂಡು, ಜೀವನದಲ್ಲಿ ಮುಂದಿನ ಹಂತಕ್ಕೆ ಹೋಗುವ ವಿಷಯವಾಗಿದೆ.

ಈ ರೀತಿಯ ಅತಂತ್ರ ಸ್ಥಿತಿ ಎದುರಾದಾಗ ಅಲ್ಲಿಯೂ ಇಲ್ಲದೆ ಇಲ್ಲಿಯೂ ಇಲ್ಲದೆ ಗೊಂದಲ ಉಂಟಾಗುತ್ತದೆ. ಅರವತ್ತರ ದಶಕದಲ್ಲಿ ಅಮೆರಿಕದಲ್ಲಿ ಶುರುವಾದ ಹಿಪ್ಪಿ ಚಳವಳಿ ಬಗ್ಗೆ ಗೊತ್ತಿರಬೇಕು. ಜನರು ತಮಗೆ ಗೊತ್ತಿದ್ದನ್ನು ಬಿಟ್ಟು ಹೊಸ ಜೀವನವನ್ನು ಮಾಡಲು ಪ್ರಯತ್ನಿಸಿದರು. ಅವರಿಗೆ ಸಮಾಜದ ಎಲ್ಲ ನಡವಳಿಕೆಗಳು ಉಸಿರುಗಟ್ಟಿದಂತಾದವು, ಅವರು ಅವೆಲ್ಲವನ್ನೂ ಮುರಿದು ಏನಾದರೂ ಹೊಸದನ್ನು ಮಾಡಲು ಬಯಸಿದರು. ಬಹಳಷ್ಟು ರೀತಿಗಳಲ್ಲಿ ಅವರು ಪ್ರಾಮಾಣಿಕರಾಗಿದ್ದರು. ಆದರೆ ಅವರು ಎಲ್ಲ ಕೆಟ್ಟ ಕೆಲಸಗಳನ್ನು ಮಾಡಲು ಮುಂದಾದರು. ಅವರು ಎಷ್ಟು ಗೊಂದಲಕ್ಕೆ ಒಳಗಾದರೆಂದರೆ ಅವರ ಇಡೀ ಪೀಳಿಗೆ ದೀರ್ಘಕಾಲದವರೆಗೆ ಅತ್ಯಂತ ಗೊಂದಲಮಯ ಮತ್ತು ಹಿಂಸಾತ್ಮಕವಾಗಿಬಿಟ್ಟಿತು.

ಆದರೆ ತಮಗೆ ತಿಳಿದಿದ್ದುದನ್ನು ಬಿಟ್ಟು, ತಮಗೆ ತಿಳಿಯದ ಆಯಾಮಕ್ಕೆ ಹೆಜ್ಜೆಯಿಡುವ ಅವರ ಹಂಬಲ ಮತ್ತು ಪ್ರಾಮಾಣಿಕ ಪ್ರಯತ್ನ ಅದ್ಭುತವಾಗಿತ್ತು. ಸರಿಯಾದ ಮಾರ್ಗದರ್ಶನವಿದ್ದಿದ್ದರೆ ಆ ತಲೆಮಾರು ಒಂದು ಅದ್ಭುತ ಸಾಧ್ಯತೆಯಾಗುತ್ತಿತ್ತು. ಈ ಆಂದೋಲನ ಭಾರತದಲ್ಲಿ ಅಷ್ಟಾಗಿ ಕಂಡುಬರಲಿಲ್ಲ. ಆದರೆ ಅಮೆರಿಕದಲ್ಲಿ ದೊಡ್ಡಪ್ರಮಾಣದಲ್ಲಿ ದೇಶವನ್ನೇ ಅಲುಗಾಡಿಸಿಬಿಟ್ಟಿತು. ಅವರಿಗೆ ಏನು ಮಾಡಬೇಕೆಂದು ತಿಳಿಯದಿದ್ದಾಗ ಮತ್ತು ಮಿತಿಯನ್ನು ಮುರಿಯುವುದು ಹೇಗೆ ಎಂಬುದು ತಿಳಿಯದಿದ್ದಾಗ ಮದ್ಯ, ಡ್ರಗ್ಸ್ ಮತ್ತು ಇತರ ದುಶ್ಚಟಗಳಿಗೆ ದಾಸರಾದರು. ಅದಕ್ಕೆ ಒಂದು ಕಾರಣವೆಂದರೆ ತಾರತಮ್ಯವನ್ನು ಹೋಗಲಾಡಿಸುವುದು. ಮೊದಲ ಬಾರಿಗೆ, ಗಂಡಸರು ಮತ್ತು ಹೆಂಗಸರು ಒಂದೇ ರೀತಿಯ ಉಡುಪನ್ನು ಧರಿಸಲಾರಂಭಿಸಿದರು.

ಈ ರೀತಿಯ ಒಬ್ಬ ಹಿಪ್ಪಿ ದಂಪತಿ ನ್ಯೂಯಾರ್ಕ್​ನ ಭಾರತೀಯ ರಾಯಭಾರ ಕಚೇರಿಗೆ ಬಂದರು. ಏಕೆಂದರೆ ಆ ಸಮಯದಲ್ಲಿ ಭಾರತ ಒಂದು ದೊಡ್ಡ ತಾಣವಾಗಿತ್ತು. ಪ್ರತಿಯೊಬ್ಬರೂ ಮುಕ್ತಿಯ ಬಗ್ಗೆ ಮಾತನಾಡುತ್ತಿದ್ದದ್ದರಿಂದ, ಭಾರತವು ಬೇರೊಂದು ಸಾಧ್ಯತೆಯ ಭರವಸೆ ನೀಡುತ್ತಿದ್ದದ್ದರಿಂದ, ಬಹಳ ಜನರು ಇಲ್ಲಿಗೆ ಬರಲು ಸಾಲುಗಟ್ಟಿದ್ದರು. ಹಾಗಾಗಿ ಭಾರತೀಯ ರಾಯಭಾರ ಕಚೇರಿಗೆ ಬಂದರು. ಅಲ್ಲಿನ ಅಧಿಕಾರಿ ಈ ದಂಪತಿಯನ್ನು ನೋಡಿ, ‘ನಿಮ್ಮಲ್ಲಿ ಯಾರು ಪುರುಷ ಮತ್ತು ಯಾರು ಮಹಿಳೆ ಎಂದು ಗುರುತಿಸಲಾಗುತ್ತಿಲ್ಲ’ ಎಂದು ಹೇಳಿ, ‘ನಿಮ್ಮಲ್ಲಿ ಯಾರಿಗೆ ಋತುಚಕ್ರ ಇದೆ?’ಎಂದು ಕೇಳಿದರು. ಅದಕ್ಕೆ ಒಬ್ಬ ಹಿಪ್ಪಿ, ‘ಇಲ್ಲ ಸರ್, ನನ್ನ ಬಳಿ ಹೋಂಡಾ ಇದೆ’ ಎಂದನು.

ಹಾಗಾಗಿ, ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಪ್ರಾರಂಭಿಸುವುದು ಎಂದರೆ ಹಾಗೆಯೇ ಬಹಳಷ್ಟು ವಿಷಯಗಳು ಕಲಸುಮೇಲೋಗರವಾಗುತ್ತವೆ. ಅಪರಿಚಿತ ಸಂಗತಿಗಳತ್ತ ಹೆಜ್ಜೆ ಹಾಕುವ ಪ್ರಯತ್ನ ಮಾಡಿದ ನಂತರ, ಪರಿಚಿತ ಸಂಗತಿಗಳ ಕಡೆ ಹಿಂತಿರುಗುವುದರಲ್ಲಿ ಯಾವುದೇ ಅರ್ಥವಿಲ್ಲ. ಅದು ಹೆಜ್ಜೆ ಹಿಂದಕ್ಕೆ ಹಾಕಿದಂತೆಯೇ. ಗೊಂದಲವಾದಾಗ, ಹಿಂದೆ ಸರಿಯಬೇಡಿ. ಪ್ರತಿದಿನ ಪರಿಚಯವಿಲ್ಲದ ಪ್ರದೇಶಕ್ಕೆ ಕಾಲಿಡುತ್ತಿದ್ದರೆ, ಯಾವಾಗಲೂ ಗೊಂದಲಕ್ಕೊಳಗಾಗುತ್ತೀರಿ. ಈ ಗೊಂದಲವನ್ನು ನಿಮ್ಮನ್ನು ನೀವೇ ಸೋಲಿಸುವ ಪ್ರಕ್ರಿಯೆಯಾಗಿಸುವ ಬದಲು, ಸರಿಯಾಗಿ ಮತ್ತು ಲಾಭದಾಯಕವಾಗಿ ನಿರ್ವಹಿಸಬೇಕಾಗಿದೆ. ವಿಷಯಗಳನ್ನು ಸ್ಪಷ್ಟವಾಗಿ ನೋಡಲು ವಿಶಾಲವಾದ ದೃಷ್ಟಿಕೋನ ಬೇಕು. ಜೀವನವನ್ನು ಅದು ಇರುವ ಹಾಗೇ ನೋಡುವ ಸಾಮರ್ಥ್ಯ ಸುಖಾಸುಮ್ಮನೆ ಬರುವುದಿಲ್ಲ. ವಿವೇಕವನ್ನು ಪಡೆಯಲು ಅಗತ್ಯವಾದ ಕೆಲಸಗಳನ್ನು ಮಾಡಬೇಕು. ಇದು ಆಕಸ್ಮಿಕವಾಗಿ ಆಗುವಂಥದ್ದಲ್ಲ.

ಪ್ರಕ್ರಿಯೆಯನ್ನು ಆನಂದಮಯವಾಗಿಸಿಕೊಳ್ಳುವುದು: ಆಧ್ಯಾತ್ಮಿಕ ಪ್ರಕ್ರಿಯೆ ನೋವಿನಿಂದ ಕೂಡಿರಬಾರದು, ಅದು ಆನಂದಮಯ ಪ್ರಕ್ರಿಯೆಯಾಗಬೇಕಾದರೆ, ಅದಕ್ಕಿರುವ ಒಂದು ಮಾರ್ಗ ಭಕ್ತಿ. ನೀವು ಭಕ್ತರಾಗಿದ್ದರೆ, ಗೊಂದಲವು ಒಂದು ಸಮಸ್ಯೆಯೇ ಅಲ್ಲ. ಆದರೆ ನಿಮ್ಮ ಮನಸ್ಸು ಎಲ್ಲವನ್ನೂ ಪ್ರಶ್ನಿಸಿದರೆ ಅದು ಸಾಧ್ಯವಾಗುವುದಿಲ್ಲ. ಆಗ, ಯಾವುದು ಸತ್ಯ ಮತ್ತು ಯಾವುದು ಅಸತ್ಯ ಎಂಬುದನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ, ಅದು ಸಾಧ್ಯವಾಗುವುದು ಹಿಂದಿನ ಅನುಭವಗಳು ಮತ್ತು ಜೀವನದ ಸ್ಥಿತಿಗತಿಗಳ ಪ್ರಭಾವದಿಂದಲ್ಲ, ಬದಲಾಗಿ ತೀಕ್ಷ್ಣವಾದ ವಿವೇಚನೆಯಿಂದ ಇದನ್ನು ಮಾಡಲು ಬಯಸಿದರೆ, ಮೊದಲಿಗೆ ಹರಿತವಾದ ಬುದ್ಧಿಶಕ್ತಿ ಬೆಳೆಸಿಕೊಳ್ಳಬೇಕು, ಅದರಿಂದ ವಿಷಯಗಳನ್ನು ಸರಿಯಾಗಿ ಕತ್ತರಿಸಿ ಅಂದರೆ ವಿಂಗಡಿಸಿ ನೋಡಬಹುದು.

‘ನಿಮಗೆ ಪರಿಚಿತವಾದದ್ದರ ಕಡೆಗೆ ಏಕೆ ಒಲವು ತೋರುತ್ತಿದ್ದೀರಾ?’ ಎಂಬುದನ್ನು ತಿಳಿಯಲು, ಅದನ್ನು ಕತ್ತರಿಸಿ, ಬಿಡಿಸಿ ನೋಡಲು ಸಿದ್ಧವಾಗಿಲ್ಲದಿದ್ದರೆ, ಹೊಸದರ ಕಡೆ ಹೆಜ್ಜೆ ಹಾಕುವುದಿಲ್ಲ. ಈಗ ನೀವಿರುವ ಪರಿಸ್ಥಿತಿಯ ಟೊಳ್ಳುತನವನ್ನು ಕಾಣದಿದ್ದರೆ, ಹೊಸದರ ಕಡೆ ಹೋಗುವ ಛಲ ಬಲಗೊಳ್ಳುವುದಿಲ್ಲ. ಹಾತೊರೆಯುವಿಕೆ ಬಲವಾಗಿರದಿದ್ದರೆ ಯಾವಾಗಲೂ ಅತಂತ್ರರಾಗಿರುತ್ತೀರಿ. ಜೀವನವನ್ನು ತೆರೆದು, ಎಲ್ಲವನ್ನೂ ಪರಿಶೀಲಿಸಿ ಮತ್ತು ಅದು ಏನು; ಯಾವುದು ಯೋಗ್ಯವಾಗಿದೆ, ಯಾವುದು ಯೋಗ್ಯವಾಗಿಲ್ಲ ಎನ್ನುವುದನ್ನು ನೋಡದೇ ಹಂಬಲ ಬಲಗೊಳ್ಳುವುದಿಲ್ಲ. ಅದನ್ನು ಅರ್ಥಹೀನಗೊಳಿಸುವುದರ ಬಗ್ಗೆ ಅಲ್ಲ. ಜೀವನವನ್ನು ಅದು ಇರುವ ರೀತಿಯಲ್ಲೇ ನೋಡಬೇಕು. ಎಲ್ಲವನ್ನೂ ಅದರ ನೈಜ ರೀತಿಯಲ್ಲಿ ನೋಡಿದರೆ, ಒಂದೇ ಸ್ಥಳದಲ್ಲಿ ನಿಂತಿರುವುದರಲ್ಲಿ ಅರ್ಥವಿಲ್ಲ ಎಂಬುದು ಅರಿವಾಗುತ್ತದೆ. ನೀವು ಚಲಿಸಲೇಬೇಕು ಎಂಬುದು ನಿಮಗೆ ಬಹಳ ಸ್ಪಷ್ಟವಾಗುತ್ತದೆ.

ಈ ಎರಡು ವಿಷಯಗಳು ಸಾಧ್ಯವಾಗದಿದ್ದರೆ, ನಿಮ್ಮನ್ನು ಚಟುವಟಿಕೆಗಳಿಗೆ ಒಳಪಡಿಸಬೇಕು. ಅರ್ಥಪೂರ್ಣವಾಗಿ ಯಾವುದೇ ವಿಷಯ ಕಂಡರೂ ಅದರಲ್ಲಿ ಸುಮ್ಮನೆ ತೊಡಗಿಸಿಕೊಳ್ಳಿ. ಅಥವಾ, ಮತ್ತೊಂದು ಸಾಧ್ಯತೆಯೆಂದರೆ, ನಿಮ್ಮ ಶಕ್ತಿಯನ್ನು ತೀವ್ರಗೊಳಿಸುವುದು. ಎಷ್ಟರ ಮಟ್ಟಿಗೆಂದರೆ ಮನಸ್ಸು ಏನೋ ಹೇಳುತ್ತಿರುತ್ತದೆ, ಭಾವನೆ ಮತ್ತೇನೋ ಹೇಳುತ್ತಿರುತ್ತದೆ, ಆದರೆ ಶಕ್ತಿಗಳು ಹುಚ್ಚೆದ್ದಿರುವುದರಿಂದ ಯಾವುದೂ ಮುಖ್ಯವೆನಿಸುವುದಿಲ್ಲ. ಮನಸ್ಸು ತಪ್ಪಾಗಿರಬಹುದು, ಅದು ಬಹಳಷ್ಟು ಸಲ ತಪು್ಪ ಮಾಡಿದೆ, ಮತ್ತದು ತಪು್ಪ ಮಾಡುತ್ತಲೇ ಇರುತ್ತದೆ. ಆದರೆ ಜೀವಶಕ್ತಿಗಳು ಎಂದಿಗೂ ತಪ್ಪಾಗುವುದಿಲ್ಲ. ಜೀವಶಕ್ತಿಗಳಿಗೆ ಸರಿ-ತಪು್ಪಗಳ ವ್ಯತ್ಯಾಸ ಗೊತ್ತಿಲ್ಲ. ಅವುಗಳಿಗೆ ಗೊತ್ತಿರುವುದು ಜೀವನ ಮತ್ತು ಜೀವನ ಮಾತ್ರ. ಅದು ಹೆಚ್ಚು ತೀವ್ರವಾಗಿದೆಯೋ ಅಥವಾ ಕಡಿಮೆ ತೀವ್ರವಾಗಿದೆಯೋ ಎಂಬುದಷ್ಟೇ ಮುಖ್ಯ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net