ವಾಣಿಜ್ಯ ಎಲ್​ಪಿಜಿ ಬೆಲೆ ಇಳಿಕೆ

photo-4-68b5e246be4a2
Published on

ನವದೆಹಲಿ: ಹೋಟೆಲ್​ಗಳು ಮತ್ತು ರೆಸ್ಟೋರೆಂಟ್​ಗಳಲ್ಲಿ ಬಳಸುವ ವಾಣಿಜ್ಯ ಎಲ್​ಪಿಜಿಯ ಬೆಲೆ 19 ಕೆ.ಜಿ. ಸಿಲಿಂಡರ್​ಗೆ 51.50 ರೂ. ಕಡಿಮೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಈಗ ವಾಣಿಜ್ಯ ಎಲ್​ಪಿಜಿ ಬೆಲೆ 1,580 ರೂ. ಆಗಿದೆ. ವಾಣಿಜ್ಯ ಎಲ್​ಪಿಜಿ ದರವನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸತತ ಆರನೇ ತಿಂಗಳೂ ಕಡಿಮೆ ಮಾಡಿವೆ.

ಆ. 1ರಂದು 33.50 ರೂ. ಕಡಿಮೆ ಮಾಡಲಾಗಿತ್ತು. ಒಟ್ಟಾರೆ ಏಪ್ರಿಲ್​ನಿಂದ ಈವರೆಗೆ ಬೆಲೆ ಪ್ರತಿ ಸಿಲಿಂಡರ್​ಗೆ 223 ರೂ. ಕಡಿಮೆ ಆದಂತಾಗಿದೆ. ಗೃಹಬಳಕೆ ಅಡುಗೆ ಅನಿಲ ದರ 14.2 ಕೆ.ಜಿ. ಸಿಲಿಂಡರ್​ಗೆ 853 ರೂ. ಇದ್ದು ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಏಪ್ರಿಲ್​ನಲ್ಲಿ ಗೃಹಬಳಕೆ ಎಲ್​ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್​ಗೆ 50 ರೂ. ಹೆಚ್ಚಿಸಲಾಗಿತ್ತು.

ಪೆಟ್ರೋಲ್, ಡೀಸೆಲ್ ದರ ಯಥಾಸ್ಥಿತಿಯಲ್ಲಿವೆ. ಕಳೆದ ವರ್ಷದ ಮಾರ್ಚ್​ನಲ್ಲಿ ಸಾರ್ವತ್ರಿಕ ಚುನಾವಣೆಗೆ ಮುಂಚೆ ಇವುಗಳ ದರಗಳನ್ನು ಪ್ರತಿ ಲೀಟರ್​ಗೆ 2 ರೂ. ಕಡಿಮೆ ಮಾಡಲಾಗಿತ್ತು. ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಇಂಧನ ಬೆಲೆ ಪರಿಷ್ಕರಿಸುತ್ತವೆ. ಇದರ ಜೊತೆಗೆ, ಸೋಮವಾರ ವೈಮಾನಿಕ ಇಂಧನದ ಬೆಲೆಯನ್ನು ಶೇ. 1.4ರಷ್ಟು, ಅಂದರೆ ಕಿಲೋಲೀಟರ್​ಗೆ 1,308.41 ರೂ. ಕಡಿಮೆ ಮಾಡಲಾಗಿದೆ. ಇದರಿಂದ ವಾಣಿಜ್ಯ ವಿಮಾನಯಾನ ಕಂಪನಿ ಗಳ ಮೇಲಿನ ಆರ್ಥಿಕ ಭಾರ ಕಡಿಮೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net