

ಸಮಾಜದಲ್ಲಿ ಅಧರ್ಮ, ಅನ್ಯಾಯ, ಸ್ವೇಚ್ಛಾಚಾರ ಮೇರೆ ಮೀರಿದಾಗ ಸಂಜೀವಿನಿಯ ಹಾಗೆ ಸಾಧು-ಸಂತರು, ದಾರ್ಶನಿಕರು, ಯೋಗಿಗಳು, ಸಜ್ಜನರು, ಮಹಾತ್ಮರು ಜನ್ಮ ತಾಳಿ, ನೊಂದವರ ಬದುಕಿಗೆ ದಾರಿದೀಪವಾಗುತ್ತಾರೆ. ಅಂತಹ ಕಾರಣೀಪುರುಷರ ಸಾಲಿನಲ್ಲಿ ನಿಲ್ಲುವವರು ಕಲಿಯುಗದ ವರಗುರುವೆಂದೇ ಆರಾಧಿಸಲ್ಪಡುವ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ 20ನೇ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು. ಅವರ 29ನೇ ವರ್ಷದ ಪುಣ್ಯಸ್ಮರಣೆ ಸೆ. 24ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಈ ನುಡಿನಮನ.
| ಬಸವರಾಜ ಸಿರಿಗೆರೆ ಶಿವಮೊಗ್ಗ
ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ 20ನೇ ಜಗದ್ಗುರುಗಳಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ತಮ್ಮ ಜೀವಿತದ ಅವಧಿಯಲ್ಲಿಯೇ ಜನಮಾನಸದಲ್ಲಿ ದಂತಕಥೆಯಾದವರು. ಕೇವಲ ನುಡಿಜಾಣರಾಗದೆ ನಡೆಧೀರರೂ ಆಗಿದ್ದ ಅಪ್ರತಿಮ ವೀರಸನ್ಯಾಸಿ. ಹಳ್ಳಿಗಾಡುಗಳ ಜನರಿಗೆ ಶಿಕ್ಷಣದ ನೀರೆರೆದು, ಬದುಕಿನ ಬೆಂಗಾಡಿನಲ್ಲಿಯೂ ಸುಖದ ನಂದನವನವನ್ನು ನಿರ್ವಿುಸಿದವರು. ಅಂಜದೆ ಅಳುಕದೆ ಪರಮಾತ್ಮನ ರಾಜತೇಜದಲ್ಲಿ ಬಾಳಿ ಸಮಾಜವನ್ನು ಮುನ್ನಡೆಸಿದವರು. ಅವರು ಆಸೀನರಾದದ್ದು ಬೆಳ್ಳಿ ಬಂಗಾರದ ಸಿಂಹಾಸನದ ಮೇಲೆ ಅಲ್ಲ, ಭಕ್ತರ ಹೃದಯವೇ ಅವರ ಸಿಂಹಾಸನವಾಗಿತ್ತು. ಶ್ರೀಗಳ ಪೂರ್ವಾಶ್ರಮದ ಹೆಸರು ರೇವಣಸಿದ್ದಯ್ಯ. ಹೊಳಲ್ಕೆರೆ ತಾಲ್ಲೂಕಿನ ಮುತ್ತುಗದೂರಿನಲ್ಲಿ 1914ರ ಬಸವ ಜಯಂತಿಯಂದು ಮಹಾದೇವಯ್ಯ ಮತ್ತು ಬಸಮ್ಮನವರ ಮಗನಾಗಿ ಜನಿಸಿದರು. ಬೀರೂರು, ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿ ತರಳಬಾಳು ಮಠದ ಶಾಖಾ ಮಠವಾದ ಹಾಸನ ಜಿಲ್ಲೆಯ ಯಲಹಂಕ ಮಠಕ್ಕೆ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಎಂಬ ಅಭಿದಾನದಿಂದ ಪಟ್ಟಾಭಿಷೇಕಗೊಂಡರು. ನಂತರ ಅವರನ್ನು ಸಿರಿಗೆರೆಯ ಮೂಲಪೀಠಕ್ಕೆ 1940ರಲ್ಲಿ ಪಟ್ಟಾಧಿಕಾರಿಯನ್ನಾಗಿ ಮಾಡಲಾಯಿತು. ಅವರು ತರಳಬಾಳು ಪೀಠವನ್ನು ಕೇವಲ ಧಾರ್ವಿುಕ ಕ್ಷೇತ್ರವನ್ನಾಗಿಸದೆ ಸಮಾಜಮುಖಿಯನ್ನಾಗಿ ಮಾಡಿದರು. ಕಾಯಕ ಮತ್ತು ಕಾಲದ ಮಹತ್ವ ಸಾರಿ, ಸಿರಿಗೆರೆಯನ್ನು ಅನ್ನ-ಅಕ್ಷರ-ಆಸರೆಯ ಕಾಶಿಯನ್ನಾಗಿಸಿದರು. ಸಂವಿಧಾನ ರಚನೆಯ ಪೂರ್ವದಲ್ಲಿಯೇ ಜಾತ್ಯತೀತ ಸಮಾಜದ ಕನಸು ಕಂಡು ನನಸನ್ನಾಗಿಸಿದರು. 14 ಜಿಲ್ಲೆಗಳಲ್ಲಿ ನೂರಾರು ಶಾಲೆ ಕಾಲೇಜುಗಳನ್ನು ಸ್ಥಾಪಿಸಿದರು. ಪ್ರಸಾದ ನಿಲಯಗಳನ್ನು ತೆರೆದರು. ಅಣ್ಣನ ಬಳಗ, ಅಕ್ಕನ ಬಳಗ, ತರಳಬಾಳು ಕಲಾಸಂಘ, ತರಳಬಾಳು ಪ್ರಕಾಶನ ಹೀಗೆ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದರು. ಶಿವಾನುಭವ ಪ್ರವಾಸ, ಜಾತಿ- ಧರ್ಮ ಮೀರಿ ಸರ್ವಶರಣ ಸಮ್ಮೇಳನಗಳನ್ನು ಸಂಘಟಿಸಿದರು. ಸಂಸ್ಕೃತ ಪಾಂಡಿತ್ಯ ಗಳಿಸಿದ್ದ ಅವರು ಕವಿ, ಲೇಖಕ, ವಿಮರ್ಶಕ, ನಾಟಕ ರಚನೆಕಾರ- ನಿರ್ದೇಶಕ, ಉತ್ತಮ ವಾಗ್ಮಿಗಳೂ ಆಗಿದ್ದರು. ಅವರ ಅಸಂಖ್ಯಾತ ಶಿಷ್ಯರು ಶಿಕ್ಷಕರಾಗಿ, ಜನನಾಯಕರಾಗಿ, ವಿದ್ವಾಂಸರಾಗಿ, ಉದ್ಯಮಿಗಳಾಗಿ, ವಿಜ್ಞಾನಿಗಳಾಗಿ, ವೈದ್ಯರಾಗಿ ಯಶಸ್ವಿಯಾಗಿದ್ದಾರೆ.
ಈ ಸಲ ಸರಳ ಸಮಾರಂಭ
ಸೆ. 24ರಂದು ಗುರುಗಳ 29ನೇ ಶ್ರದ್ಧಾಂಜಲಿ ಸಮಾರಂಭ. ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆನ್ಲೈನ್ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತೀರ್ವನಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಹಿರಿಯ ರಾಜಕಾರಣಿಗಳು, ನಾಡಿನ ಪ್ರಮುಖ ಧರ್ಮಗುರುಗಳು ನುಡಿನಮನ ಸಲ್ಲಿಸಲಿದ್ದಾರೆ. ತರಳಬಾಳು ಮಠದ ಯೂಟ್ಯೂಬ್ ಚಾನೆಲ್ ಮೂಲಕ ಇದು ನೇರಪ್ರಸಾರವಾಗಲಿದೆ.
ಲಕ್ಷ ಲಾಡು ವಿತರಣೆ
ಮಠಕ್ಕೆ ಬರುವ ಭಕ್ತರಿಗೆ ಕರೊನಾ ನಿಯಮಗಳನ್ನು ಪಾಲಿಸಿ ದಾಸೋಹ ಏರ್ಪಡಿಸಲಾಗಿದೆ. ಪ್ರತಿ ವರ್ಷದಂತೆ ಚನ್ನಗಿರಿ ತುಮ್ಕೋಸ್ ಸಂಸ್ಥೆ 1 ಲಕ್ಷ ಲಾಡುಗಳನ್ನು ತಯಾರಿಸಿ ದಾಸೋಹಕ್ಕೆ ಕಳಿಸುತ್ತಿದೆ. ದಾವಣಗೆರೆಯ ಎಸ್.ಎಸ್. ಮಲ್ಲಿಕಾರ್ಜುನ್ ಅಭಿಮಾನಿ ಬಳಗದವರು 200 ಕ್ವಿಂಟಲ್ ಅಕ್ಕಿಯನ್ನು ಸಮರ್ಪಿಸಿದ್ದಾರೆ. ಪ್ರಸಾದ ತಯಾರಿಕೆಯ ಕಾರ್ಯ ಭರದಿಂದ ನಡೆದಿದೆ.
ಭರಮಸಾಗರ ಕೆರೆಗೆ ಗಂಗಾವತರಣ
ಶ್ರದ್ಧಾಂಜಲಿ ದಿನದಂದೇ ಭರಮಸಾಗರ ಕೆರೆಗೆ ತುಂಗಭದ್ರೆಯ ನೀರು ಹರಿದುಬರಲಿರುವುದು ವಿಶೇಷವಾಗಿದೆ. ಸುಮಾರು 524 ಕೋಟಿ ರೂ.ಗಳ ಯೋಜನೆ ಇದು. ಈ ಭಾಗದ ರೈತರಿಗೆ ಇದೊಂದು ಸಿಹಿ ಸುದ್ದಿ. ದಾವಣಗೆರೆ ಜಿಲ್ಲೆಯ ಜಗಳೂರು, ಚನ್ನಗಿರಿ, ದಾವಣಗೆರೆ ಅಲ್ಲದೆ ನೆರೆ ಜಿಲ್ಲೆಗಳಾದ ಚಿತ್ರದುರ್ಗ, ಚಿಕ್ಕಮಗಳೂರು, ಹಾವೇರಿ, ಹಾಸನ ಜಿಲ್ಲೆಗಳ ನೂರಾರು ಕೆರೆಗಳನ್ನು ತುಂಬಿಸಲು ಈಗಿನ ಶ್ರೀಗಳು ಶ್ರಮಿಸುತ್ತಿದ್ದಾರೆ. 2018ರಲ್ಲಿ ಸಿದ್ಧರಾಮಯ್ಯಸರ್ಕಾರ ಬಜೆಟ್ನಲ್ಲಿ ಜಗಳೂರು, ಭರಮಸಾಗರ ಏತನೀರಾವರಿ ಯೋಜನೆಗಳನ್ನು ಸೇರ್ಪಡೆ ಮಾಡಿತ್ತು. ಯಡಿಯೂರಪ್ಪ ಸರ್ಕಾರ ಇದಕ್ಕೆ 1200 ಕೋಟಿ ರೂ. ಮಂಜೂರು ಮಾಡಿತು. ನೂರು ಕೆರೆಗಳನ್ನು ತುಂಬಿಸುವ ಈ ಎರಡೂ ಯೋಜನೆಗಳು ಮುಕ್ತಾಯದ ಹಂತದಲ್ಲಿವೆ.