ಲೈಂಗಿಕ ಸ್ವೇಚ್ಛಾಚಾರ ಏಕೆ ಕೂಡದು?

Premshekhar
Published on
ಈಶ ಫೌಂಡೇಶನ್​ನ ಸದ್ಗುರು ಅವರು ತಮ್ಮ ಪ್ರವಚನಗಳಲ್ಲಿ ಲೈಂಗಿಕತೆಯ ವಿಷಯ ಬಂದಾಗ ಈ ಮಾತು ಹೇಳುತ್ತಾರೆ- ‘ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ನೆನಪುಗಳು ವರ್ಗಾವಣೆಯಾಗುತ್ತವೆ ಮತ್ತು ಅವು ಪರಸ್ಪರರ ದೇಹಗಳಲ್ಲಿ ಸಂಗ್ರಹಗೊಳ್ಳುತ್ತವೆ. ಇದನ್ನೇ ನಮ್ಮ ಸಂಸ್ಕೃತಿಯಲ್ಲಿ ‘ಋಣಾನುಬಂಧ’ ಎನ್ನುತ್ತಾರೆ. ಬೇರೆಬೇರೆ ವ್ಯಕ್ತಿಗಳ ಜತೆ ಲೈಂಗಿಕ ಕ್ರಿಯೆ ನಡೆಸಿದರೆ ಬೇರೆಬೇರೆ ನೆನಪುಗಳು ವರ್ಗಾವಣೆಯಾಗಿ ದೇಹ ಗೊಂದಲಗೊಳ್ಳುತ್ತದೆ. ಆ ಗೊಂದಲದ ಸ್ಥಿತಿ ನಮ್ಮ ಮಾನಸಿಕ ಸ್ಥಿತಿಯ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ ಅಂದರೆ ನಮ್ಮ ನೆಮ್ಮದಿಯನ್ನದು ಕಸಿದುಕೊಳ್ಳುತ್ತದೆ... ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮುನ್ನ ಅದರಿಂದಾಗುವ ಈ ಪರಿಣಾಮದ ಬಗ್ಗೆ ಯೋಚಿಸಬೇಕು.’

ಈ ಮಾತಿನೊಂದಿಗೆ, ಒಬ್ಬ ನಿಷ್ಠ ಸಂಗಾತಿಯ ಬದಲು ಹೆಚ್ಚು ವ್ಯಕ್ತಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದರಿಂದ ಎಂತಹ ಪರಿಣಾಮಗಳಾಗುತ್ತವೆ, ಅವು ಮನುಷ್ಯ ಜನ್ಮದ ಉದ್ದೇಶಕ್ಕೆ ಹೇಗೆ ಹಾನಿಕಾರವಾಗುತ್ತವೆ ಎಂದು ರ್ಚಚಿಸುವುದು ಈ ಲೇಖನದ ವಸ್ತುವಿಷಯ. ಪೀಠಿಕೆಯಾಗಿ ಪುನರ್ಜನ್ಮದ ಬಗ್ಗೆ ಒಂದು ಕಿರುಮಾಹಿತಿ.

ಕರ್ಮಕ್ಕನುಗುಣವಾಗಿ ಮರುಜನ್ಮವೆತ್ತುವ ಬಗ್ಗೆ ಹಿಂದೂಗಳು, ಬೌದ್ಧರು, ಜೈನರು ನಂಬಿಕೆಯನ್ನಿಟ್ಟಿದ್ದಾರೆ. ಈ ಮೂರು ಧರ್ಮಗಳ ತಳಹದಿಯೇ ಕರ್ಮ ಮತ್ತು ಕರ್ಮಕ್ಕನುಗುಣವಾಗಿ ಮರುಜನ್ಮ. ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಮ್ ಪುನರ್ಜನ್ಮವನ್ನು ತಿರಸ್ಕರಿಸುತ್ತವೆ. ಇರುವುದೊಂದೇ ಜನ್ಮ, ನಂತರದ್ದು ಅಂತಿಮ ತೀರ್ಪ, ಅದಕ್ಕನುಗುಣವಾಗಿ ಸ್ವರ್ಗ ಅಥವಾ ನರಕ ಎಂದು ಅವು ಹೇಳಿದರೂ ಎರಡೂ ಧರ್ಮಗಳಿಗೆ ಮೂಲ ಆಧಾರವಾದ ಬೈಬಲ್​ನ ಹಳೆಯ ಒಡಂಬಡಿಕೆಯಲ್ಲಿ ಪುನರ್ಜನ್ಮದ ಬಗ್ಗೆ ಇದ್ದ ವಿವರಗಳನ್ನು ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ರೋಮನ್ ಚಕ್ರವರ್ತಿ ಕಾನ್​ಸ್ಟಾಂಟೈನ್ ಮತ್ತವನ ತಾಯಿ ತೆಗೆದುಹಾಕಿದರು ಎನ್ನುವ ಮಾಹಿತಿಯೂ ಕ್ರಿಶ್ಚಿಯನ್ ಸಾಹಿತ್ಯದಲ್ಲೇ ಲಭ್ಯವಿದೆ. ಇಂದಂತೂ ಕ್ರಿಶ್ಚಿಯನ್ ಮತ್ತು ಯೆಹೂದೀ ಧರ್ವನುಯಾಯಿಗಳೇ ಅಗಿರುವ ಹಲವಾರು ವಿಶ್ವಾಸಾರ್ಹ ಮನೋವೈದ್ಯರು ಮತ್ತು ಮನಃಶಾಸ್ತ್ರಜ್ಞರು ಪುನರ್ಜನ್ಮವನ್ನು ವೈಜ್ಞಾನಿಕ ವಿಧಾನಗಳ ಮೂಲಕ ಸಾಬೀತುಪಡಿಸಿದ್ದಾರೆ. ಈಗ ಬದುಕಿರುವ ಸ್ತ್ರೀಯೊಬ್ಬಳು ಕಳೆದ ಮೂರೂವರೆ ಸಾವಿರ ವರ್ಷಗಳಿಂದಲೂ ಮತ್ತೆಮತ್ತೆ ಜನ್ಮಗಳನ್ನೆತ್ತಿ ಬರುತ್ತಿದ್ದಾಳೆಂದೂ, ಇದುವರೆಗೆ ಎಂಬತ್ತೆಂಟು ಬಾರಿ ಪುನರ್ಜನ್ಮವೆತ್ತಿದ್ದಾಳೆಂದೂ ಡಾ. ಬ್ರಿಯಾನ್ ವೇಸ್ ದಾಖಲಿಸಿದ್ದಾರೆ. ಈ ಕಾಲದಲ್ಲಿ ಬದುಕಿರುವ ವ್ಯಕ್ತಿಯೊಬ್ಬನ ಪುನರ್ಜನ್ಮಗಳನ್ನು ಶೋಧಿಸುತ್ತಾ ಹಿಂದೆಹಿಂದೆ ಹೋದ ಜಗದ್ವಿಖ್ಯಾತ ಮನಃಶಾಸ್ತ್ರಜ್ಞ ರೋಜರ್ ವೂಲ್ಜರ್ ಆ ವ್ಯಕ್ತಿ ಎರಡು ಸಾವಿರ ವರ್ಷಗಳ ಹಿಂದೆ ಕ್ರಿಸ್ತನನ್ನು ಶಿಲುಬೆಗೇರಿಸಿದ್ದಕ್ಕೆ ಸಾಕ್ಷಿಯಾಗಿದ್ದನ್ನು ಪತ್ತೆಹಚ್ಚಿದ್ದಾರೆ.

ನಾವು ಯಾವುದೇ ಪೂರ್ವತಯಾರಿಯಿಲ್ಲದೇ, ನಮಗೆ ತಿಳಿದಿಲ್ಲ ಎಂಬ ಹೆದರಿಕೆಯೂ ಇಲ್ಲದೇ ಸಹಜವಾಗಿ ಆಚರಿಸುವ ದೈನಂದಿನ ಚಟುವಟಿಕೆಗಳು ನೆನಪುಗಳ ಪರಿಣಾಮ. ಈ ನೆನಪುಗಳು ಈ ಜನ್ಮದ್ದು ಮಾತ್ರವಲ್ಲ. ಹಳೆಯ ಹಾಗೂ ಹೊಸ ನೆನಪುಗಳ ಸಂಗ್ರಹವನ್ನು ಆತ್ಮ ತನ್ನ ಜನ್ಮಜನ್ಮಾಂತರದ ಯಾನದಲ್ಲಿ ಜತೆಗೆ ಕೊಂಡೊಯ್ಯುತ್ತಿರುತ್ತದೆ ಎಂದು ಇದುವರೆಗೆ ನಂಬಲಾಗಿತ್ತು. ಆದರೆ ಆ ಸಂಗ್ರಹ ಇರುವುದು ದೇಹದಲ್ಲಿ ಎಂಬ ಮಾತನ್ನು ಈಗ ಕೇಳುತ್ತಿದ್ದೇವೆ. ಆತ್ಮದ ಜತೆಗೆ ದೇಹವೂ ಮತ್ತೆಮತ್ತೆ ಜನ್ಮ ತಾಳುತ್ತದೆ. ಪಂಚಭೂತಗಳಾದ ನೀರು (72%), ಭೂಮಿ (12%), ವಾಯು (6%), ಅಗ್ನಿ (4%), ಮತ್ತು ಆಕಾಶ (6%)ಗಳಿಂದ ರಚಿತವಾಗಿರುವ ಈ ದೇಹ ಮತ್ತೆ ಪಂಚಭೂತಗಳಲ್ಲಿ ಲೀನವಾಗುತ್ತದೆ ಎಂಬ ಮಾತನ್ನು ಇಡಿಯಾಗಿ ನಂಬುವುದು ಈಗ ಕಷ್ಟ. ಹಿಂದಿನ ದೇಹದಲ್ಲಿದ್ದ ಗುರುತುಗಳು ಈಗಿನ ದೇಹದಲ್ಲೂ ಅದೇ ಸ್ಥಳದಲ್ಲಿ, ಹಾಗೆಯೇ ಇರುವುದು ಪುನರ್ಜನ್ಮಗಳು ಸಾಬೀತಾಗಿರುವ ಹಲವಾರು ಪ್ರಕರಣಗಳಲ್ಲಿ ಕಂಡುಬಂದಿರುವುದರಿಂದಾಗಿ ಆತ್ಮದ ಜತೆಗೆ ದೇಹವೂ ಪ್ರತಿ ಜನ್ಮದಲ್ಲೂ ನಮ್ಮೊಂದಿಗಿರುತ್ತದೆಂದು ಊಹಿಸಬಹುದಾಗಿದೆ. ಕೇವಲ ಒಂದು ಸೂಕ್ಷ್ಮ ಅಂಡಾಣು ಮತ್ತು ಒಂದು ವೀರ್ಯಾಣುವಿನ ಸಂಗಮದಿಂದ ಆರಂಭವಾಗುವ ಮಾನವದೇಹ ಮುಂದೆ ಸುಮಾರು ಮೂವತ್ತು ಟ್ರಿಲಿಯನ್​ಗಳಷ್ಟು ಜೀವಕೋಶವನ್ನೊಳಗೊಂಡು ಬೆಳೆದು ನಂತರ ನಶಿಸಿಹೋಗುವುದು ನಿಜವಾದರೂ ತಾಯಿಯ ಗರ್ಭದಲ್ಲಿರುವ ಹಂತದಲ್ಲೇ ಆ ದೇಹಕ್ಕೆ ತನ್ನ ಹಿಂದಿನ ಜನ್ಮದಲ್ಲೂ ಇದ್ದ ನೈಸರ್ಗಿಕ ಅಥವಾ ಮುಖ್ಯವಾಗಿ ಗಾಯದಂತಹ ಕೃತಕ ಗುರುತುಗಳು ಕಾಣಿಸಿಕೊಳ್ಳುವ ಪರಿ ಅಚ್ಚರಿಯನ್ನುಂಟುಮಾಡುತ್ತದೆ. ಅಂದರೆ ಈ ದೇಹ ದಾಸರು ಹಾಡಿದಂತೆ ಮೂಳೆ ಮಾಂಸದ ತಡಿಕೆಯಷ್ಟೇ ಅಲ್ಲ, ಅದರಾಚೆಗೂ ಇದೆ. ಬಹುಶಃ ನಮ್ಮ ಅಸ್ತಿತ್ವದಲ್ಲಿ ಅರಿಯಬೇಕಾದ್ದು ಆ ಆಯಾಮವನ್ನು. ಮನುಷ್ಯ ಯಾರಿಂದಲೂ ಕಲಿಯದೇ ತಾನಾಗಿಯೇ ಹಲವು ಕೆಲಸಗಳಲ್ಲಿ ಹುಟ್ಟಿದಂದಿನಿಂದಲೇ ತೊಡಗುತ್ತಾನೆ ಮತ್ತು ಅವುಗಳಲ್ಲಿ ಪೂರ್ಣ ನೈಪುಣ್ಯತೆ ಪ್ರದರ್ಶಿಸುತ್ತಾನೆ. ತಾಯಿಯ ಎದೆಯಿಂದ ಹಾಲು ಹೀರುವುದು, ರುಚಿ, ವಾಸನೆ ಗ್ರಹಿಸುವುದು ನಂತರ ಕಾಲುಗಳು ದೇಹದ ಭಾರವನ್ನು ಹೊರಲು ಶಕ್ತವಾದೊಡನೇ ನಡೆಯುವುದು ಎಲ್ಲವೂ ದೇಹ ಸಂಗ್ರಹಿಸಿಟ್ಟುಕೊಂಡಿರುವ ನೆನಪುಗಳ ಪರಿಣಾಮ. ಭೌತಿಕವಾಗಿ ಗೋಚರವಾಗದ ಅದೆಷ್ಟೋ ನೆನಪುಗಳನ್ನು ಸಹ ದೇಹ ತನ್ನ ಇದುವರೆಗಿನ ಜನ್ಮಗಳಲ್ಲಿ ಸಂಗ್ರಹಿಸಿಟ್ಟುಕೊಂಡಿರುತ್ತದೆ ಮತ್ತು ಆ ನೆನಪುಗಳು ಬೇರೆಬೇರೆ ದೇಹಗಳಿಗೆ ವರ್ಗಾಯಿಸಲ್ಪಡುತ್ತವೆ.

ಒಂದು ದೇಹ ಸುಕೃತ್ಯಗಳ ಮೂಲಕ ಧನಾತ್ಮಕ ನೆನಪುಗಳನ್ನು ಸಂಗ್ರಹಿಸಿಟ್ಟುಕೊಂಡು ಅದನ್ನು ಇನ್ನೊಂದು ದೇಹಕ್ಕೆ ದಾಟಿಸಿದರೆ ಸ್ವೀಕರಿಸಿದ ದೇಹಕ್ಕೆ ಒಳ್ಳೆಯದೇ ಆಗುತ್ತದೆ. ಅದಕ್ಕೆ ವಿರುದ್ಧವಾಗಿ, ನೀಡುವ ದೇಹದಲ್ಲಿ ಕುಕೃತ್ಯಮೂಲದ ಋಣಾತ್ಮಕ ನೆನಪುಗಳೇ ಇದ್ದಲ್ಲಿ ಸ್ವೀಕರಿಸುವ ದೇಹಕ್ಕೆ ಹಾನಿ ನಿಶ್ಚಿತ. ನಮ್ಮೆದುರಿಗಿರುವ ದೇಹದಲ್ಲಿ ಎಂತಹ ನೆನಪುಗಳಿವೆ ಎಂದು ನಮಗೆ ತಿಳಿಯದ ಕಾರಣ ಮುನ್ನೆಚ್ಚರಿಕೆ ವಹಿಸುವ ಪರಿಪಾಠ ಚಾಲ್ತಿಗೆ ಬಂತು.

ನೆನಪುಗಳ ವರ್ಗಾವಣೆ ಸಾಸಿವೆ, ಉಪ್ಪು, ಮೆಣಸಿನಕಾಯಿ ಮುಂತಾದ ವಸ್ತುಗಳ ನೇರ ವಿನಿಮಯದಿಂದಲೂ ಆಗುತ್ತದೆ ಎಂಬ ನಂಬಿಕೆ ಮತ್ತು ಆ ಕುರಿತಾಗಿನ ಆತಂಕ ಬೇರೆಬೇರೆ ಸಮಾಜಗಳಲ್ಲಿ ಬೇರೆಬೇರೆಯಾಗಿ ಇದ್ದರೂ ಆ ಬಗ್ಗೆ ವೈಜ್ಞಾನಿಕವಾಗಿ ವಿವರಿಸುವಷ್ಟು ಮಾಹಿತಿ ನನ್ನಲ್ಲಿಲ್ಲದ ಕಾರಣ ಆ ವಿಷಯವನ್ನು ಮುಂದುವರಿಸುವುದಿಲ್ಲ.

ಕೆಲವರು ಸ್ಪರ್ಶಿಸಿದಾಗ ನಮಗೆ ಥಟಕ್ಕನೆ ಹಿತವೆನಿಸುವುದು, ಮತ್ತೆ ಕೆಲವರ ಸ್ಪರ್ಶ ಮುಜುಗರವನ್ನೋ, ಕಿರಿಕಿರಿಯನ್ನೋ ಅಥವಾ ಅಸಹ್ಯ ಭಾವವನ್ನೋ ಏಕಾಏಕಿ ಉಂಟುಮಾಡುತ್ತದೆ. ಇದರರ್ಥ ಮತ್ತೊಂದು ದೇಹದ ನೆನಪುಗಳು ಯಾವ ಬಗೆಯವು ಎಂದು ಸ್ಪರ್ಶಮಾತ್ರದಿಂದ ಗುರುತಿಸುವ ಸಾಮರ್ಥ್ಯ ನಮ್ಮ ದೇಹಕ್ಕಿದೆ. ಹೀಗಾಗಿಯೇ ನೆನಪುಗಳು ಅಧಿಕವಾಗಿ ವರ್ಗಾವಣೆಯಾಗುವುದು ಪರಸ್ಪರ ಸ್ಪರ್ಶದ ಮೂಲಕ ಎಂದು ಪೌರ್ವಾತ್ಯ ಸಮಾಜಗಳು ಎಂದೋ ಅರಿತಿವೆ. ಅಪರಿಚಿತರಲ್ಲಿ ಯಾವ ಬಗೆಯ ನೆನಪುಗಳಿವೆಯೆಂದು ಅರಿಯಲಾಗದ ಕಾರಣ ಅವರನ್ನು ರ್ಸ³ಸದೇ, ಶಿರಬಾಗಿ, ಎರಡೂ ಕೈಗಳನ್ನೆತ್ತಿ ನಮಸ್ಕರಿಸುವ ಸಂಪ್ರದಾಯ ಭಾರತೀಯ ಸಮಾಜದಲ್ಲಿ ರೂಢಿಗೆ ಬಂದಿದೆ. ಚೀನೀಯರು ತಲೆಯನ್ನು ಸ್ವಲ್ಪ ಬಾಗಿಸಿದರೆ, ಜಪಾನೀಯರು ತಲೆಯ ಜತೆ ನಡುವನ್ನೂ ಬಾಗಿಸುವುದುಂಟು. ಆದರೆ ಸ್ಪರ್ಶ ಮಾತ್ರ ಇಲ್ಲ!

ಅಪರಿಚಿತರು ಸಾಧುಸಂತರಾಗಿದ್ದರೆ, ವಿದ್ಯೆ ನೀಡುವ, ಬುದ್ಧಿ ಹೇಳುವ ಗುರುಗಳಾಗಿದ್ದರೆ ಅವರು ಈ ಜನ್ಮದಲ್ಲಿ ಆ ಸ್ಥಾನಕ್ಕೇರಿರುವುದು ಹಿಂದಿನ ಜನ್ಮಗಳ ಸುಕೃತಗಳ ಫಲ ಮತ್ತು ಅವರ ದೇಹದಲ್ಲಿ ಧನಾತ್ಮಕ ನೆನಪುಗಳು ಸಂಗ್ರಹಗೊಂಡಿರುತ್ತವೆ ಮತ್ತು ಅವು ನಮ್ಮ ದೇಹಕ್ಕೆ ವರ್ಗಾವಣೆಯಾಗುವುದರಿಂದ ನಮಗೆ ಒಳ್ಳೆಯದೇ ಆಗುತ್ತದೆ ಎಂಬ ಕಾರಣದಿಂದಾಗಿ ಅಂತಹವರ ಪಾದಸ್ಪರ್ಶ ಮಾಡುವುದು ಸಂಪ್ರದಾಯವಾಗಿದೆ. ಕೆಲ ಅಪವಾದಗಳ ಹೊರತಾಗಿ ಅಂತಹ ಹಿರಿಯರು ಸ್ಪರ್ಶಕ್ಕೆ ಯೋಗ್ಯರೇ ಆಗಿರುತ್ತಾರೆ. ಈಗ ಸ್ಪರ್ಶದ ವೈಜ್ಞಾನಿಕ ಆಯಾಮದತ್ತ ಹೊರಳೋಣ. ನಮಗಿಷ್ಟವಾದ ಕೆಲಸಗಳಲ್ಲಿ ತೊಡಗಿದಾಗ, ಇಷ್ಟವಾದದ್ದನ್ನು ಸೇವಿಸಿದಾಗ ಸಂತೋಷವಾಗುತ್ತದಲ್ಲವೇ? ಅದಾಗುವುದು ಆ ಕೃತ್ಯಗಳು ನಮ್ಮ ಮಿದುಳಿನಲ್ಲಿ ಡೊಪ್ಯಾಮಿನ್ ಎಂಬ ನ್ಯೂರೋಟ್ರಾನ್ಸ್​ಮಿಟರ್ ಅಂದರೆ ಮಿದುಳಿನ ಜೀವಕೋಶಗಳಾದ ನ್ಯೂರಾನ್​ಗಳ ನಡುವೆ ಸಂದೇಶವಾಹಕವನ್ನು ಬಿಡುಗಡೆ ಮಾಡುವುದರಿಂದ. ಈ ಡೊಪ್ಯಾಮಿನ್ ನಮಗೆ ಸಂತೋಷದ ಅನುಭವ ನೀಡುವುದರಿಂದ ಅದಕ್ಕೆ ‘ಖುಷಿ ಹಾಮೋನ್’ ಎಂಬ ಹೆಸರೇ ಬಂದಿದೆ. ಡೊಪ್ಯಾಮಿನ್ ಸರಿಯಾದ ಪ್ರಮಾಣದಲ್ಲಿ ಸ್ರವಿಸುತ್ತಿದ್ದರೆ ನಾವು ಉತ್ಸಾಹದಿಂದಿರುತ್ತೇವೆ, ಆಸಕ್ತಿಯಿಂದ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೇವೆ. ಡೊಪ್ಯಾಮಿನ್ ಕಡಿಮೆಯಾದಷ್ಟೂ ನಿರಾಸಕ್ತಿ, ಡಿಪ್ರೆಷನ್​ಗೆ ಒಳಗಾಗುತ್ತಾನೆ. ಮದ್ಯ ಮತ್ತು ಮಾದಕದ್ರವ್ಯಗಳೂ ಮಿದುಳಿನಲ್ಲಿ ಈ ಖುಷಿ ಹಾಮೋನನ್ನು ಬಿಡುಗಡೆ ಮಾಡಿದರೂ ಅವುಗಳಿಂದ ಶರೀರಕ್ಕೆ ಹಾನಿ ತಗುಲುತ್ತದೆ. ಆದರೆ ಬಯಸಿದ ತಿಂಡಿ ತಿಂದಾಗ; ಇಷ್ಟದ ಆಟ ಆಡಿದಾಗ; ಆಸಕ್ತಿಯಿಂದ ಸಂಗ್ರಹಿಸಿದ ಅಂಚೆಚೀಟಿಗಳನ್ನೋ, ನಾಣ್ಯಗಳನ್ನೋ ಸವರುವಾಗ; ಅಷ್ಟೇಕೆ ಫೇಸ್​ಬುಕ್​ನಲ್ಲಿ ಪೋಸ್ಟ್​ಗಳಿಗೆ, ಪೋಟೋಗಳಿಗೆ ಲೈಕ್ಸ್ ಬಂದಾಗಲೂ ಡೊಪ್ಯಾಮಿನ್ ಬಿಡುಗಡೆಯಾಗಿ ಶರೀರಕ್ಕೇನೂ ಹಾನಿಯಾಗದೇ, ಸಂತೋಷದ ಅನುಭವವಾಗುತ್ತದೆ. ಆದರೆ ಈ ಕೃತ್ಯಗಳಿಂದ ಡೊಪ್ಯಾಮಿನ್ ಬಿಡುಗಡೆ ನಿಧಾನವಾಗಿ ಕಡಿಮೆಯಾಗುತ್ತದೆ ಮತ್ತು ಹಿಂದಿನ ಪ್ರಮಾಣದ್ದೇ ಡೊಪ್ಯಾಮಿನ್ ಮಿದುಳಿನಲ್ಲಿ ಸ್ರವಿಸಬೇಕಾದರೆ ಆ ಕೃತ್ಯಗಳನ್ನು ಇನ್ನೂ ಹೆಚ್ಚಾಗಿ ಮಾಡಬೇಕಾಗುತ್ತದೆ. ಪರಿಣಾಮವಾಗಿ ನಾವು ಆ ಕೃತ್ಯಗಳಿಗೆ ಅಡಿಕ್ಟ್ ಆಗಿಬಿಡುತ್ತೇವೆ. ಅದರ ಅಡ್ಡಪರಿಣಾಮವಾಗಿ ತೊಂದರೆಗಳು ಎದುರಾಗುತ್ತವೆ.

ಮೇಲಿನ ಕೃತ್ಯಗಳು ಎಲ್ಲರ ಮಿದುಳುಗಳಲ್ಲೂ ಸಮಾನವಾಗಿ ಡೊಪ್ಯಾಮಿನ್ ಉತ್ಪತ್ತಿ ಮಾಡಲಾರವು ಮತ್ತು ಎಲ್ಲರಿಗೂ ಸಮಾನವಾಗಿ ಸಂತೋಷವನ್ನೂ ಉಂಟುಮಾಡಲಾರವು. ಆದರೆ ಸ್ಪರ್ಶ ಎಂಬ ಮಾಂತ್ರಿಕ ಕ್ರಿಯೆ ಸಾಮಾನ್ಯವಾಗಿ ಎಲ್ಲರ ಮಿದುಳಿನಲ್ಲೂ ಡೊಪ್ಯಾಮಿನ್ ಅನ್ನು ಉತ್ಪತ್ತಿ ಮಾಡಿಬಿಡುತ್ತದೆ. ಹೀಗಾಗಿಯೇ ಆತ್ಮೀಯರನ್ನು ರ್ಸ³ಸಿದಾಗ, ಆಲಿಂಗಿಸಿದಾಗ ಸಂತೋಷ ಉಂಟಾಗುವುದು ಎಲ್ಲರ ಅನುಭವವಾಗಿರುತ್ತದೆ. ತಾಯಿ, ಮಗುವನ್ನು ಅಪ್ಪಿ ಮುದ್ದಾಡುವಾಗ ಇಬ್ಬರ ಮಿದುಳಿನಲ್ಲೂ ಡೊಪ್ಯಾಮಿನ್ ಹೇರಳವಾಗಿ ಉತ್ಪತ್ತಿಯಾಗುತ್ತದೆ, ಇಬ್ಬರಿಗೂ ಖುಷಿಯಾಗುತ್ತದೆ. ಹೀಗೆ ತಾಯಿಯ ಸ್ಪರ್ಶ ಮನುಷ್ಯ ಪ್ರಾರಂಭಿಕ ಹಂತದಲ್ಲಿ ಕಂಡುಕೊಳ್ಳುವ ಡೊಪ್ಯಾಮಿನ್​ನ ಮೂಲ. ನಂತರ ತಾಯಿಯ ಸ್ಪರ್ಶದಿಂದ ಡೊಪ್ಯಾಮಿನ್ ಉತ್ಪತ್ತಿಯಾಗುವುದು ಕಡಿಮೆಯಾಗುತ್ತಾ ಹೋಗಿ ಆ ಸ್ಥಾನದಲ್ಲಿ ನಾಯಿಯಂತಹ ಪ್ರೀತಿಯ ಪ್ರಾಣಿಗಳು ಬರುತ್ತವೆ. ಅದರಲ್ಲೂ ಹಸುವಿನ ಕೊರಳು ಬಳಸುವುದು ಎಲ್ಲ ವಯಸ್ಸಿನವರ ಮಿದುಳಿನಲ್ಲೂ ಡೊಪ್ಯಾಮಿನ್ ಉತ್ಪಾದಿಸಿ ಸಂತೋಷವನ್ನುಂಟುಮಾಡುತ್ತದೆ. ಅದಕ್ಕೇ ಹಸುವನ್ನು ‘ಗೋಮಾತೆ’ ಎಂದಿರಬೇಕು. ಈಗಂತೂ ಇದನ್ನು ಪಾಶ್ಚಾತ್ಯರೂ ಕಂಡುಕೊಳ್ಳತೊಡಗಿದ್ದಾರೆ. ಡಿಪ್ರೆಷನ್ ದೂರ ಮಾಡಿಕೊಳ್ಳಲು, ಬದುಕಿನಲ್ಲಿ ಮರುಉತ್ಸಾಹ ಚಿಗುರಿಸಿಕೊಳ್ಳಲು ಹಸುಗಳನ್ನು ಮುದ್ದಿಸುವುದು ಪರಿಣಾಮಕಾರಿ ಚಿಕಿತ್ಸಾವಿಧಾನ ಎಂದು ಸಂಶೋಧನೆಗಳಿಂದ ತಿಳಿದಾಗಿನಿಂದ 'Cow Cuddling' ಎಂಬ ಹೊಸ ಚಿಕಿತ್ಸಾ ಪದ್ಧತಿಯೇ ತಲೆಯೆತ್ತಿದೆ. ತಾಯಿ-ತಂದೆ, ನಂತರ ಸಾಕುಪ್ರಾಣಿಗಳನ್ನು ಮುದ್ದಿಸುವುದರಿಂದ ಡೊಪ್ಯಾಮಿನ್ ಗಳಿಸುವ ಮನುಷ್ಯಪ್ರಾಣಿ ನಂತರ ಅದಕ್ಕಾಗಿ ಬದುಕಿನ ಒಂದು ಹಂತದಲ್ಲಿ ವಿರುದ್ಧ ಲಿಂಗಿಯ ಸ್ಪರ್ಶವನ್ನು ಕಂಡುಕೊಳ್ಳುತ್ತದೆ. ವಯಸ್ಕ ಗಂಡುಹೆಣ್ಣುಗಳ ಸ್ಪರ್ಶ ಲೈಂಗಿಕ ಆಯಾಮ ಹೊಂದಿರುವುದು ಪ್ರಕೃತಿ ನಿಯಮ.

ಮಿದುಳು ಎರಡು ಗೋಲಾರ್ಧಗಳಲ್ಲಿ ವಿಂಗಡಣೆಯಾಗಿದೆ; ಎಡ ಗೋಲಾರ್ಧ ರ್ತಾಕ ಚಿಂತನೆಯನ್ನು ನಿಯಂತ್ರಿಸಿದರೆ, ಬಲ ಗೋಲಾರ್ಧ ಸೃಜನಶೀಲ ಆಯಾಮವನ್ನು ನಿಯಂತ್ರಿಸುತ್ತದೆ ಮತ್ತು ಅವೆರಡೂ ಶರೀರದ ವಿರುದ್ಧ ಭಾಗಗಳ ಅಂಗಗಳ ಕೆಲಸಕಾರ್ಯಗಳನ್ನು ನಿರ್ದೇಶಿಸುತ್ತವೆ. ದೇಹದ ಎಡ ಭಾಗದಲ್ಲಾಗುವ ಸ್ಪರ್ಶ ಬಲ ಮಿದುಳನ್ನು ಅಂದರೆ ಸೃಜನಶೀಲ ಚಿಂತನೆಯನ್ನು ಪ್ರಚೋದಿಸಿದರೆ, ದೇಹದ ಬಲಭಾಗದಲ್ಲಾಗುವ ಸ್ಪರ್ಶ ಎಡ ಮಿದುಳನ್ನು ಅಂದರೆ ತಾರ್ಕಿಕ ಚಿಂತನೆಯನ್ನು ಪ್ರಚೋದಿಸುತ್ತದೆ. ಆದರೆ ನಾಲಿಗೆ ಮತ್ತು ಜನನೇಂದ್ರಿಯಗಳು ದೇಹದ ನಟ್ಟನಡುವೆ ಸ್ಥಿತಗೊಂಡಿರುವುದರಿಂದಾಗಿ ಅವುಗಳ ಸ್ಪರ್ಶದಿಂದ ಹೊರಡುವ ಸಂದೇಶಗಳು ಏಕಕಾಲದಲ್ಲಿ ಮಿದುಳಿನ ಎರಡೂ ಗೋಲಾರ್ಧಗಳನ್ನು ಪ್ರಚೋದಿಸುತ್ತವೆ. ಹೀಗಾಗಿಯೇ ಬೇರಾವ ಸ್ಪರ್ಶಕ್ಕಿಂತಲೂ ಚುಂಬನ ಮತ್ತು ಲೈಂಗಿಕ ಕ್ರಿಯೆ ಮಿದುಳನ್ನು ಹೆಚ್ಚಾಗಿ ಮತ್ತು ಇಡಿಯಾಗಿ ಪ್ರಚೋದಿಸುತ್ತದೆ. ಆ ಕಾರಣದಿಂದಲೇ ಇವೆರಡೂ ಕ್ರಿಯೆಗಳು ಪರಸ್ಪರರ ನಡುವೆ ನೆನಪುಗಳ ವಿನಿಮಯವನ್ನೂ ಅತಿಯಾಗಿಸುತ್ತವೆ ಮತ್ತು ಆ ನೆನಪುಗಳು ದೇಹದಲ್ಲಿ ಆಳಕ್ಕಿಳಿದು ನೆಲೆಯಾಗಿಬಿಡುತ್ತವೆ. ಆ ನೆನಪುಗಳು ಒಳ್ಳೆಯವಾಗಿದ್ದರೆ ಸ್ವೀಕರಿಸಿದ ದೇಹಕ್ಕೆ ಹಿತವಾಗುತ್ತದೆ, ಒಳ್ಳೆಯದೂ ಆಗುತ್ತದೆ. ಇಲ್ಲವಾದಲ್ಲಿ ಮುಂದೆ ಅನಾಹುತ ಖಂಡಿತ.

ಗಂಡು-ಹೆಣ್ಣುಗಳ ನಡುವಿನ ಲೈಂಗಿಕ ಸಂಪರ್ಕ ಸಂತಾನೋತ್ಪತ್ತಿಗೆ, ಆ ಮೂಲಕ ಮನುಕುಲದ ಮುಂದುವರಿಕೆಗೆ ಅತ್ಯಗತ್ಯವಾದುದರಿಂದಾಗಿ ಅದರಿಂದಾಗ ಬಹುದಾದ ಋಣಾತ್ಮಕ ನೆನಪುಗಳ ವರ್ಗಾವಣೆ ಆದಷ್ಟು ಕಡಿಮೆ ಇರುವಂತಹ ವ್ಯವಸ್ಥೆಯನ್ನು ಸಮಾಜಗಳು ರೂಪಿಸಿಕೊಂಡವು. ಈ ಜನ್ಮದಲ್ಲಿ ಅನುಭವಗಳು ಮತ್ತು ನೆನಪುಗಳು ಅತಿಯಾಗುವ ಮೊದಲೇ ವಿವಾಹವನ್ನೇರ್ಪಡಿಸುವ ಸಂಪ್ರದಾಯದ ಮೂಲ ಇದು. ಹಿಂದಿನ ಜನ್ಮಗಳ ಋಣಾತ್ಮಕ ನೆನಪುಗಳನ್ನೂ ಸಾಧ್ಯವಾದಷ್ಟು ತೊಡೆದುಹಾಕಲು ರೂಪಿತವಾದ ವಿಧಾನವೇ ಅಗ್ನಿಸಾಕ್ಷಿಯ ವಿವಾಹ. ನೀರಿನಿಂದ ದೇಹದ ಹೊರ ಕಶ್ಮಲಗಳನ್ನು ತೊಳೆದುಕೊಳ್ಳಬಹುದಾದರೆ, ದೇಹವನ್ನು ಅಗ್ನಿಯ ನಸುಶಾಖಕ್ಕೆ ಒಳಪಡಿಸುವುದರ ಮೂಲಕ ಅದರಲ್ಲಿರಬಹುದಾದ ಋಣಾತ್ಮಕ ನೆನಪುಗಳನ್ನು ತೊಳೆದುಕೊಳ್ಳಬಹುದು ಎನ್ನಲಾಗುತ್ತದೆ. (ಸೀತೆಯ ಅಗ್ನಿಪರೀಕ್ಷೆಯ ಉದ್ದೇಶ ಅಪಹರಣವಾದಂದಿನಿಂದ ಬಿಡುಗಡೆಯವರೆಗೆ ಆಕೆಯ ದೇಹ ಅನನುಕೂಲಕರ/ದುಃಖಕರ ವಾತಾವರಣದಲ್ಲಿ ಸಂಗ್ರಹಿಸಿರಬಹುದಾದ ಋಣಾತ್ಮಕ ನೆನಪುಗಳ ನಾಶ, ಆ ಮೂಲಕ ಅವು ರಾಮನಿಗೆ ವರ್ಗಾವಣೆಯಾಗದಂತೆ ಮಾಡುವ ವಿಧಾನವಾಗಿರಬಹುದು) ಈ ಬಗೆಯ ವಿವಾಹಗಳ ನಂತರ ಸತಿಪತಿಯರ ಬದುಕು, ಅಲ್ಲಿಲ್ಲಿ ಅಪವಾದಗಳ ಹೊರತಾಗಿ, ಇಬ್ಬರಿಗೂ ಅಂಗೈಯಷ್ಟೇ ಸ್ಪಷ್ಟವಾಗಿದ್ದುದರಿಂದ ಹಾಗೂ ಯಾವುದೇ ಋಣಾತ್ಮಕ ನೆನಪುಗಳು ಸಂಗಾತಿಯ ದೇಹದಲ್ಲಿ ಸಂಗ್ರಹಗೊಂಡಿಲ್ಲ ಎಂಬ ನಂಬಿಕೆಯೊಂದಿಗೆ ಪರಸ್ಪರರು ನಿರಾತಂಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದಾಗಿತ್ತು ಹಾಗೂ ಆ ಮೂಲಕ ಮಕ್ಕಳನ್ನು ಪಡೆಯಬಹುದಾಗಿತ್ತು. ಋಣಾತ್ಮಕ ನೆನಪುಗಳನ್ನು ಸೀಮಿತಗೊಳಿಸುವ, ಸಾಧ್ಯವಾದಷ್ಟು ತೊಡೆದುಹಾಕುವ ಈ ವಿಧಾನಗಳು ಈಗ ನಿಧಾನವಾಗಿ ಮರೆಯಾಗುತ್ತಿವೆ. ವಿವಾಹ ಪರಸ್ಪರರಿಗೆ ಸಂತೋಷ, ನೆಮ್ಮದಿ ನೀಡುವುದು ಕಡಿಮೆಯಾಗುತ್ತಿರುವುದು, ವೈವಾಹಿಕ ಬದುಕು ಶಾಶ್ವತವಾಗದಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಈ ಕಾರಣಕ್ಕಿರಬೇಕು.

ಇನ್ನು ಪರಸ್ಪರರ ದೇಹಗಳಲ್ಲಿ ಸಂಗ್ರಹವಾಗಿರಬಹುದಾದ ನೆನಪುಗಳ ಅರಿವಿಲ್ಲದೇ ಆ ಕ್ಷಣದ ಸಂತೋಷದ ಅಗತ್ಯಕ್ಕಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಮಿದುಳಿನಲ್ಲಿ ಡೊಪ್ಯಾಮಿನ್ ಉತ್ಪತ್ತಿಯಾಗಬಹುದು, ಆದರೆ ಅದು ತಾತ್ಕಾಲಿಕ. ದೀರ್ಘ ಪರಿಣಾಮವೆಂದರೆ ವಿವಿಧ ದೇಹಗಳಿಂದ ಹೀಗೆ ಬಂದ ನೆನಪುಗಳು (ಅವು ಋಣಾತ್ಮಕವಾಗಿದ್ದಲ್ಲಿ) ಸ್ವೀಕರಿಸಿದ ವ್ಯಕ್ತಿಯ ದೇಹದಲ್ಲಿ ಮಡುಗಟ್ಟಿ ಮುಂದೆ ಮಾನಸಿಕ ಸ್ಥಿತಿಯ ಮೇಲೆ ಪ್ರಭಾವ ಬೀರಬಹುದು, ಎಲ್ಲವೂ ಇದ್ದರೂ ಸಂತೋಷ, ನೆಮ್ಮದಿ ದೂರಾಗಬಹುದು.

ಮತ್ತೆ ಸದ್ಗುರುವಿಗೇ ಹಿಂತಿರುಗುವುದಾದರೆ, ‘ಸಿಕ್ಕಸಿಕ್ಕವರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ನೈತಿಕತೆಯ ವಿಷಯವಲ್ಲ, ನಾವು ವಿವೇಕಿಗಳಾಗಿ ಬದುಕಬೇಕಾದ ವಿಷಯ... ಲೈಂಗಿಕ ಕ್ರಿಯೆಗಳ ಮೂಲಕ ಬಗೆಬಗೆಯ ನೆನಪುಗಳನ್ನು ಸಂಗ್ರಹಿಸಿಕೊಳ್ಳುತ್ತಾ, ಋಣಾನುಬಂಧಗಳನ್ನು ಏರ್ಪಡಿಸಿಕೊಳ್ಳುತ್ತಾ ಹೋದರೆ, ಜನ್ಮಜನ್ಮಗಳ ಬಂಧನದಿಂದ ಬಿಡುಗಡೆಯಾಗಿ ಮುಕ್ತಿ ಪಡೆಯುವುದು ಹೇಗೆ ತಾನೆ ಸಾಧ್ಯ?’

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net