

ಭಟ್ಟರ ಕಾವ್ಯಮನೋಧರ್ಮ ಮೂಲತಃ ರೊಮ್ಯಾಂಟಿಕ್ ಆದದ್ದು. ಆದರೆ ಅವರ ಆಳ ಸಾಹಿತ್ಯಾಭ್ಯಾಸ, ನವ್ಯದೊಂದಿಗಿನ ಒಡನಾಟ ಈ ರೊಮ್ಯಾಂಟಿಕ್ ಮನೋಧರ್ಮಕ್ಕೆ ವಸ್ತುನಿಷ್ಠತೆಯ ಎಚ್ಚರವನ್ನು ತಂದುಕೊಟ್ಟಿದೆ. ಇದರ ಪರಿಣಾಮವೇ ‘ಸೀಮಂತಿನಿ’ಯಂತಹ ಚೆಲುವಾದ ವಿಶಿಷ್ಟ ಬಗೆಯ ಕವಿತೆಯ ಸೃಷ್ಟಿ. ತಾಯ್ತನಕ್ಕೆ ಸಿದ್ಧಳಾದ ಹೆಣ್ಣನ್ನು ಕುರಿತ, ನನಗೆ ಅತ್ಯಂತ ಇಷ್ಟವಾದ ಈ ಕವಿತೆ ಆಧುನಿಕ ಕನ್ನಡ ಕಾವ್ಯದಲ್ಲಿಯೇ ಅಪರೂಪವೆನ್ನಬಹುದಾದ ವಸ್ತುವನ್ನು ಒಳಗೊಂಡಂಥದು. ‘ಯಾರಿವಳು?/ಇದ್ದಕಿದ್ದಂತೆ ಪಕ್ಕದಲೆ ಬದಲಾದವಳು?/ ಗಂಡನೆಂಬುವನನ್ನು ಕಂಡ ಕಂಡಂತೆಯೇ/ಕಂದ ಎಂಬಂತೆ ಮಮತೆಯಲಿ ಮಾತನಾಡಿಸು ವವಳು/ ಅಪ್ಪ ಬಂದವನನ್ನು ತಪ್ಪು ಮಾಡಿದ ಎಳೆಯನಂತೆ/ಉಡಿಯಲ್ಲಿ ಹಾಕಿ ಶಮಿಸಿದವಳು/... ಬೇಸಿಗೆಯ ಉರಿಗಣ್ಣ ಬೆಳುದಿಂಗಳಲಿ ತೊಳೆದು/ಗರ್ಭಗುಡಿ ಹಣತೆಯನು ಹಚ್ಚಿರುವಳು/ಮೊನ್ನೆ ಸೀಮಂತದಲಿ ಹಸೆಯೇರಿದಾಗಿಂದ ಜಗದಂಬೆ ಭಾವಕ್ಕೆ ಸಂದಿರುವಳು/ಎಲ್ಲ ಬಾಳಲಿ ಎಂಬ ಭಾವ/ಚೆಲ್ಲುತಿದೆ ಕಣ್ಣು, ಅಲುಗಿದೆ ಹೊಟ್ಟೆಯೊಳಗಿರುವ ಪುಟ್ಟ ಜೀವ/ಗಟ್ಟಿ ಸ್ವಾರ್ಥಕೆ ಈಗ ಮಳೆ ಬಿದ್ದು ಮೈಯೊಡೆದು ಉಸಿರಾಡುತಿದೆ ಮಣ್ಣ ತೇವ’ (ಸಮಗ್ರ ಕಾವ್ಯ, ಸಂಪುಟ 1 ಪುಟ 3). ಭಟ್ಟರ ಮೊದಲ ಕವನ ಸಂಕಲನ ‘ವೃತ್ತ’ದ ಮೊದಲ ಕವಿತೆಯಿದು. ಹೆಣ್ಣಿನ ವ್ಯಕ್ತಿತ್ವದಲ್ಲಿ ಇದ್ದಕ್ಕಿದ್ದಂತೆ ಆಗುವ ಬದಲಾವಣೆಯ ಈ ವಿಸ್ಮಯವೇ ಭಟ್ಟರ ಕಾವ್ಯದುದ್ದಕ್ಕೂ ಕಂಡುಬರುವ ಪ್ರಮುಖ ಅಂಶ. ಸೃಷ್ಟಿಯ ಬಗೆಗಿನ ಈ ವಿಸ್ಮಯ ಅನೇಕ ನೆಲೆಗಳಲ್ಲಿ ಅಭಿವ್ಯಕ್ತಿ ಪಡೆಯುತ್ತಾ ಹೋಗುತ್ತದೆ. ‘ತಾಯಿ’, ‘ಸುಳಿ’, ‘ಗುಣಾಕಾರಿ’, ‘ಮಧ್ಯಚಿತ್ತ’, ‘ನೀಲಾಂಜನ’, ‘ಹೊಳೆಸಾಲಿನ ಮರ’ ಇಂತಹ ಕವಿತೆಗಳಲ್ಲಿ ಬುದ್ಧಿಗೆ ಸವಾಲಾಗುವ ಭಾವಸಂಬಂಧಗಳು, ದಿನನಿತ್ಯದ ಸಹಜ ಚಟುವಟಿಕೆಗಳಲ್ಲಿಯೇ ಎದುರಾಗುವ ನಿಗೂಢಗಳು ಅರ್ಥಪೂರ್ಣವಾಗಿ ಮೈತಳೆದಿವೆ. ಈ ‘ವಿಸ್ಮಯ’ದ ಹಿಂದೆ ಕವಿ ಸಹಜ ಕುತೂಹಲ ಮಾತ್ರವಲ್ಲದೆ ಅದನ್ನು ಅರ್ಥಮಾಡಿಕೊಳ್ಳಬೇಕೆನ್ನುವ ಅನ್ವೇಷಣಾ ಮನೋಭಾವ, ಬದುಕಿಗೆ ತಂಪೆರೆಯುವ ಈ ಶಕ್ತಿಯ ಬಗೆಗೆ ವಿನಯ ಎದ್ದುಕಾಣುತ್ತದೆ. ವಿಶ್ಲೇಷಣೆಗೆ ದಕ್ಕದ ಶಕ್ತಿಯ ಬಗೆಗೆ ಅವರಿಗೆ ಅತೀವ ಆಸಕ್ತಿಯಿದೆ. ಈ ಚಿಂತನೆಯ ಪರಿಪಕ್ವ ಅಭಿವ್ಯಕ್ತಿಯನ್ನು ‘ಅರುಣಗೀತ’ದಂತಹ ಕವಿತೆಯಲ್ಲಿ ಕಾಣುತ್ತೇವೆ.
ಅನಂತಮೂರ್ತಿಯವರು ಹೇಳುವಂತೆ ಭಟ್ಟರ ಬಹುಮುಖ್ಯ ಸಾಧನೆಯೆಂದರೆ ಅವರ ಕಾವ್ಯಭಾಷೆ. ಬರಿ ಆಡುಮಾತೂ ಅಲ್ಲದ, ಬರಿ ಗ್ರಾಂಥಿಕವೂ ಅಲ್ಲದ ಸಂಭಾವಿತವೆನ್ನಿಸಿದರೂ ಶಕ್ತಿಹೀನವಲ್ಲದ ಅವರ ಕಾವ್ಯಭಾಷೆ ತುಂಬ ಹಿತವಾದ ರೀತಿಯಲ್ಲಿ ಭಾವವನ್ನು ವ್ಯಂಜಿಸಬಲ್ಲುದು. ಕನ್ನಡ ಸಂಸ್ಕೃತಗಳ ಹಿತವಾದ ಮಿಶ್ರಣದಲ್ಲಿ ಮೂರ್ತವಾದದ್ದನ್ನೂ, ಅಮೂರ್ತವಾದದ್ದನ್ನೂ, ವೈಯಕ್ತಿಕವಾದದ್ದನ್ನೂ, ಸಾಧಾರಣವಾದದ್ದನ್ನೂ ಒಟ್ಟೊಟ್ಟಿಗೇ ವ್ಯಂಜಿಸಬಲ್ಲ, ಯಾವೊಂದು ಧಾಟಿಗೂ ಗಂಟುಬೀಳದಂತೆ ಧಾಟಿಯಿಂದ ಧಾಟಿಗೆ ಬದಲಾಗುವ ಲವಲವಿಕೆ ಪಡೆದ ಭಟ್ಟರ ಶೈಲಿ ಮೆಚ್ಚತಕ್ಕುದು. ಅವರ ಲಯಜ್ಞಾನವಂತೂ ವಿಶೇಷವಾಗಿ ಉಲ್ಲೇಖಿಸಬೇಕಾದಂಥದು.
ಲಕ್ಷ್ಮೀನಾರಾಯಣ ಭಟ್ಟರಿಗೆ ಅಪಾರ ಜನಪ್ರೀತಿಯನ್ನು ತಂದುಕೊಟ್ಟದ್ದು ಅವರ ಭಾವಗೀತೆಗಳು. ನವ್ಯದ ಸಂದರ್ಭದಲ್ಲಿ ಹಿಂದೆ ಸರಿದಿದ್ದ ಭಾವಗೀತೆಯನ್ನು ಮತ್ತೆ ಚಾಲನೆಗೆ ತಂದವರಲ್ಲಿ ಭಟ್ಟರು ಪ್ರಮುಖರೆಂಬುದು ನಿಸ್ಸಂದೇಹ. ಕಾವ್ಯ ಮತ್ತು ಸಂಗೀತದ ಸಾಹಚರ್ಯವನ್ನು ಕುರಿತ ಪ್ರಶ್ನೆ ಸಾಕಷ್ಟು ಹಳೆಯದಾದರೂ ನವ್ಯದ ಸಂದರ್ಭದಲ್ಲಿ ಅದು ಹೆಚ್ಚು ಪ್ರಖರವಾಗಿ ಚರ್ಚೆಗೊಳಗಾಯಿತು. ಶರ್ಮ - ಭಟ್ಟರ ಕಾವ್ಯವಾಗ್ವಾದವೆಂದೇ ಕರೆಯಬಹುದಾದ ಈ ಚರ್ಚೆಯಲ್ಲಿ ಭಟ್ಟರು ಕಾವ್ಯ ಸಂಗೀತಗಳ ಸಾಹಚರ್ಯವನ್ನು ಪ್ರತಿಪಾದಿಸಿದರೆ, ರಾಮಚಂದ್ರ ಶರ್ಮರು ಕಾವ್ಯಕ್ಕೆ ಸಂಗೀತದ ಹಂಗು ಬೇಕಿಲ್ಲವೆಂದು ವಾದಿಸಿದರು. ಮೂಲತಃ ಇದು ಕಾವ್ಯಸಂವಹನಕ್ಕೆ ಸಂಬಂಧಿಸಿದ ಸಂಗತಿ. ಜನಸಮುದಾಯಕ್ಕೆ ಕವನಗಳು ಎಷ್ಟು ಅಗತ್ಯವೋ ಹಾಗೆಯೇ ಗೀತೆಗಳೂ ಬೇಕು ಎಂಬ ನಂಬಿಕೆಯಲ್ಲಿ ಭಟ್ಟರು ಗೀತೆ ರಚನೆಗೆ ತೊಡಗಿಸಿಕೊಂಡರು. ಗೀತೆಗಳನ್ನೇ ಪ್ರತ್ಯೇಕವಾಗಿ ಪ್ರಕಟಿಸಿದ ಅವರ ‘ಗೀತಭಾರತಿ’ ಸಂಕಲನದಲ್ಲಿ 325 ಗೀತೆಗಳಿವೆ. ನವೋದಯ ಸಂದರ್ಭದಲ್ಲಿ ಕವನ, ಗೀತೆ ಎಂಬ ಭೇದವಿರಲಿಲ್ಲ; ನವ್ಯದ ನಂತರದ ಬೆಳವಣಿಗೆಯಿದು.
ಲಕ್ಷ್ಮೀನಾರಾಯಣಭಟ್ಟರಿಗೆ ಜಗತ್ತಿನ ಅತ್ಯುತ್ತಮ ಸಾಹಿತ್ಯದ ಪರಿಚಯವಿತ್ತು. ನಿರಂತರ ಅಧ್ಯಯನಶೀಲರಾಗಿದ್ದ ಅವರು ಪಾಶ್ಚಾತ್ಯ ಸಾಹಿತ್ಯವನ್ನೂ ಪ್ರೀತಿಯಿಂದ ಅಧ್ಯಯನ ಮಾಡಿದ್ದರು. ಜಗತ್ತಿನ ಅತ್ಯಂತ ಪ್ರತಿಭಾವಂತ ಮನಸ್ಸುಗಳನ್ನು ತನ್ನ ಭಾಷೆಯ ಜನತೆಗೆ ಪರಿಚಯಿಸಬೇಕೆಂಬ ಸಾಂಸ್ಕೃತಿಕ ಜವಾಬ್ದಾರಿಯ ಅರಿವಿದ್ದ ಭಟ್ಟರು ಭಾಷಾಂತರವನ್ನೂ ಸೃಜನಶೀಲತೆಯ ಭಾಗವೆಂಬಂತೆ ಭಾವಿಸಿ ಷೇಕ್ಸ್ಪಿಯರ್, ಯೇಟ್ಸ್ ಹಾಗೂ ಎಲಿಯಟ್ ಮುಂತಾದವರನ್ನು ಕನ್ನಡಕ್ಕೆ ಸಮರ್ಥವಾಗಿ ಪರಿಚಯಿಸಿದರು. ‘ಒಂದು ಕವಿತೆಯನ್ನು ಅದೇ ಭಾಷೆಯಲ್ಲಿಯೇ ಮತ್ತೆ ಬೇರೆ ರೀತಿ ಹೇಳುವುದು ಅಸಾಧ್ಯ. ಹೀಗಿರುವಾಗ ಕವಿತೆಯನ್ನು ಬೇರೆ ಭಾಷೆಯಲ್ಲಿ ಹಿಡಿಯುತ್ತೇನೆನ್ನುವುದು ಹೇಗೆ ಸಾಧ್ಯ?’- ಇದು ರಿಲ್ಕ್ ಭಾಷಾಂತರವನ್ನು ಕುರಿತು ಹೇಳುವ ಮಾತು. ಇದರ ಅರಿವು ಭಟ್ಟರಿಗಿದೆ. ಹಾಗೆಯೇ ಭಾಷಾಂತರದ ಅಸಮರ್ಪಕತೆಯ ಬಗ್ಗೆ ಯಾರು ಏನೇ ಹೇಳಲಿ, ಜಗತ್ತಿನಲ್ಲಿ ಭಾಷಾಂತರ ಅತ್ಯಂತ ಮುಖ್ಯವಾದ ಒಂದು ಮೌಲಿಕ ಚಟುವಟಿಕೆ ಎಂಬ ಗಯಟೆಯ ಮಾತೂ ಅವರಿಗೆ ಗೊತ್ತು. ಈ ಮಿತಿ- ವ್ಯಾಪ್ತಿಗಳ ಹಿನ್ನೆಲೆಯಲ್ಲಿಯೇ ಅವರು ‘ಅನುಸೃಷ್ಟಿ’ಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮರುಸೃಷ್ಟಿ ಯಲ್ಲಿ ಮೂಲದ ಕೆಲವಂಶ ಮರೆಯಾಗಿಬಿಡುವಂತೆಯೇ, ಮೂಲಪಠ್ಯದ ಜೊತೆಜೊತೆಗೇ ಬೇರೆ ಅಂಶಗಳೂ ಕೂಡಿಕೊಂಡು ಹೊಸ ಅನುಭವವನ್ನೇ ನೀಡಬಹುದು. ಭಟ್ಟರ ಅನುವಾದಗಳಲ್ಲಿ ನಾವು ಎರಡನೆಯ ಮಾದರಿಯನ್ನು ಕಾಣುತ್ತೇವೆ. ಭಟ್ಟರ ಈ ಅನುವಾದ ಸಂಪುಟಗಳ ಮತ್ತೊಂದು ವೈಶಿಷ್ಟ್ಯವೆಂದರೆ ಮೂಲ ಲೇಖಕರ ಬಗ್ಗೆ ಅಧ್ಯಯನಪೂರ್ಣವಾದ, ವಿವರ ಮಾಹಿತಿಗಳನ್ನೊಳಗೊಂಡ ಸುದೀರ್ಘ ಪರಿಚಯ ಪ್ರಸ್ತಾವನೆ. ಭಟ್ಟರು ಅನುವಾದಿಸಿರುವ ಶೂದ್ರಕನ ‘ಮೃಚ್ಛಕಟಿಕ’ ಹಾಗೂ ರವೀಂದ್ರನಾಥ ಠಾಗೂರರ ‘ತಾಸೆರ್ ದೇಶ್’ ನಾಟಕವನ್ನಾಧರಿಸಿದ ‘ಇಸ್ಪೀಟ್ ರಾಜ್ಯ’ ನಾಟಕಗಳನ್ನೂ ನಾವಿಲ್ಲಿ ನೆನಪಿಸಿಕೊಳ್ಳಬೇಕು. ‘ಊರ್ವಶಿ’ ಲಕ್ಷ್ಮೀನಾರಾಯಣಭಟ್ಟರು ರಚಿಸಿದ ಗೀತನಾಟಕ.
ಭಾವಗೀತೆಯಂತೆಯೇ ನವ್ಯದ ಸಂದರ್ಭದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಕ್ಕಳ ಸಾಹಿತ್ಯಕ್ಕೆ ಲಕ್ಷ್ಮೀನಾರಾಯಣಭಟ್ಟರು ನವಚೇತನ ನೀಡಿದರು. ಮಕ್ಕಳ ಜಗತ್ತಿನಲ್ಲಿ ಅಮ್ಮ, ಅಪ್ಪ, ಅಜ್ಜಿ, ತಾತ, ಮಿಸ್ಸು, ಫ್ರೆಂಡ್ಸು ಇವರು ಮುಖ್ಯ. ಜೊತೆಗೆ ಪ್ರಾಣಿ, ಸಸ್ಯ ಜಗತ್ತಿನ ಜೊತೆ ಅವರ ಒಡನಾಟ. ಭಟ್ಟರು ಮಕ್ಕಳ ಈ ಜಗತ್ತನ್ನೇ ಕೇಂದ್ರ ವಾಗಿಟ್ಟುಕೊಂಡು ಕವಿತೆಗಳನ್ನು ರಚಿಸಿದ್ದಾರೆ. ‘ಬಹಳ ಒಳ್ಳೆಯವರು ನಮ್ ಮಿಸ್ಸು’ವಿನಂತಹ ಅನೇಕ ಆಕರ್ಷಕ ಮಕ್ಕಳ ಕವಿತೆಗಳನ್ನು ಅವರು ಬರೆದಿದ್ದಾರೆ; ಸುಗಮ ಸಂಗೀತ ಕಲಾವಿದರು ಅವರ ಭಾವಗೀತೆಗಳಂತೆಯೇ ಇವುಗಳನ್ನೂ ಜನಪ್ರಿಯಗೊಳಿಸಿದ್ದಾರೆ.
ಭಟ್ಟರದು ವಿದ್ವತ್ ಜಗತ್ತಿನೊಡನೆ ನಿಕಟ ಒಡನಾಟ. ಅವರು ತೀನಂಶ್ರೀ ಹಾಗೂ ಡಿಎಲ್ಎನ್ ಅವರ ಶಿಷ್ಯರು. ಕಾವ್ಯಮೀಮಾಂಸೆ, ಗ್ರಂಥಸಂಪಾದನೆ, ಭಾಷಾವಿಜ್ಞಾನ ಇವು ಅವರ ಗುರುಗಳಿಗೆ ಮೆಚ್ಚಿನ ವಿಷಯಗಳಾಗಿದ್ದವು. ಗುರುಗಳ ಗಾಢ ಪ್ರಭಾವಕ್ಕೊಳಗಾಗಿದ್ದ ಭಟ್ಟರು ಈ ಕ್ಷೇತ್ರಗಳಲ್ಲಿಯೂ ಗಮನಾರ್ಹ ಕೆಲಸ ಮಾಡಿದ್ದಾರೆ. ಗ್ರಂಥಸಂಪಾದನೆಯ ಕ್ಷೇತ್ರದಲ್ಲಿ ಡಿ .ಎಲ್. ನರಸಿಂಹಾಚಾರ್ ಅವರ ‘ಕನ್ನಡ ಗ್ರಂಥ ಸಂಪಾದನೆ’ ಒಂದು ಮಹತ್ವದ ಕೃತಿ. ಆದರೆ ಈ ಕ್ಷೇತ್ರದಲ್ಲಿ ಭಾರತೀಯ ವಿದ್ವಾಂಸರಲ್ಲಿಯೇ ಮೊದಲು ಕೆಲಸ ಮಾಡಿದವರು ಪೂನಾದ ಡೆಕ್ಕನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಎಸ್.ಎಂ.ಕತ್ರೆಯವರು. ಲಕ್ಷ್ಮೀನಾರಾಯಣಭಟ್ಟರು ಡಿಎಲ್ಎನ್ ಕೃತಿಗೆ ಪೂರಕವೆನ್ನುವಂತೆ ಕತ್ರೆಯವರ ಕೃತಿಯನ್ನು ‘ಭಾರತೀಯ ಗ್ರಂಥ ಸಂಪಾದನಾ ಪರಿಚಯ’ದ ಮೂಲಕ ಕನ್ನಡಕ್ಕೆ ಪರಿಚಯಿಸಿದರು. ಜೊತೆಗೆ 18ನೇ ಶತಮಾನದ ಉತ್ತರಾರ್ಧದಲ್ಲಿದ್ದ ತಿಮ್ಮಪ್ಪದಾಸ ಕವಿಯ ‘ಧ್ರುವಚರಿತ್ರೆ’ಯನ್ನು ಸಂಪಾದಿಸಿ ಪ್ರಕಟಿಸಿ ದರು. ಧ್ರುವನಿಗೆ ಸಂಬಂಧಿಸಿದಂತೆ ಯಕ್ಷಗಾನದ ಎರಡು ಪ್ರಸಂಗ ಗಳು, ಚಾಟುವಿಠಲನಾಥನ ‘ಧ್ರುವೋಪಾಖ್ಯಾನ’ವಿದ್ದರೂ ಕನ್ನಡ ದಲ್ಲಿ ಇಡಿಯಾಗಿ, ಸುದೀರ್ಘವಾಗಿ ರಚಿತವಾಗಿರುವ ಕೃತಿಯಿದು.
ಕಾವ್ಯದಲ್ಲಿ ಪ್ರತಿಮೆಗಳ ಸ್ವರೂಪ ಕುರಿತ ಚಿಂತನೆಗಳ ಅಧ್ಯಯನ ವಾದ ‘ಕಾವ್ಯ ಪ್ರತಿಮೆ’ ಲಕ್ಷ್ಮೀನಾರಾಯಣಭಟ್ಟರ ಮಹತ್ವದ ಕೃತಿಗಳಲ್ಲೊಂದು. ಜಿ.ಎಸ್.ಶಿವರುದ್ರಪ್ಪನವರು ಹೇಳುವಂತೆ ‘ವ್ಯಾಪಕವೂ ತಲರ್ಸ³ಯೂ ಆದ ಅಧ್ಯಯನದಿಂದ, ಖಚಿತವೂ ವಾಚನೀಯವೂ ಆದ ನಿರೂಪಣಾಶೈಲಿಯಿಂದ, ಅನೇಕ ಹೊಸ ವಿಚಾರ ಹೊಳಹುಗಳಿಂದ ಕೂಡಿರುವ ಈ ವಿದ್ವತ್ಗ್ರಂಥ ಕನ್ನಡ ಕಾವ್ಯಮೀಮಾಂಸೆಯ ಕ್ಷೇತ್ರಕ್ಕೆ ಒಂದು ಮೌಲಿಕ ಕೊಡುಗೆಯಾಗಿದೆ.’
‘ಕನ್ನಡ ಸಾಹಿತ್ಯ ಚರಿತ್ರೆ’ ಎನ್ಎಸ್ಎಲ್ ಅಮೆರಿಕದಲ್ಲಿರುವ ಕನ್ನಡಿಗರಿಗೆ ಸಾಹಿತ್ಯ ರಂಗದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಂಪರೆ ಕುರಿತು ನಡೆಸಿದ ಶಿಬಿರದ ಉಪನ್ಯಾಸಗಳ ವಿಸõತ ರೂಪ. ಇದು ಪ್ರಾಚೀನ ಸಾಹಿತ್ಯದಿಂದ ಮೊದಲ್ಗೊಂಡು, ಇತ್ತೀಚಿನ ಸಾಹಿತ್ಯದವರೆಗೂ ಕನ್ನಡ ಸಾಹಿತ್ಯ ಬೆಳೆದುಬಂದ ಸ್ವರೂಪವನ್ನು ಹಿಡಿಯಲು ಪ್ರಯತ್ನಿಸುತ್ತದೆ.
ಕನ್ನಡ ಸಾಹಿತ್ಯಕ್ಕೆ ಪ್ರವೇಶ ಪಡೆಯುವವರಿಗೆ ಇದೊಂದು ಉಪಯುಕ್ತ ಕೃತಿ. ಅಂತೆಯೇ ‘ರೀಡಿಂಗ್ಸ್ ಇನ್ ಕನ್ನಡ’ ಎಂಬ ಅವರ ಮತ್ತೊಂದು ಕೃತಿ ಕನ್ನಡ ಭಾಷೆಯನ್ನು ಕಲಿಯಬಯಸುವ ಕನ್ನಡೇತರರಿಗೆ ತುಂಬ ಉಪಯುಕ್ತವಾಗಿದೆ. ಅವರ ‘ಕನ್ನಡ ಮಾತು’ ಎಂಬ ಪುಸ್ತಕ ಕನ್ನಡ ಭಾಷೆಯನ್ನು, ಅದರ ಮಹತ್ವವನ್ನು ಸೊಗಸಾಗಿ ಪರಿಚಯಿಸುತ್ತದೆ.
ಲಕ್ಷ್ಮೀನಾರಾಯಣ ಭಟ್ಟರದು ಬಹುಮುಖ ಪ್ರತಿಭೆ. ಕಾವ್ಯ, ನಾಟಕ, ಅನುವಾದ, ಜೀವನಚರಿತ್ರೆ, ಮಕ್ಕಳ ಸಾಹಿತ್ಯ, ಗ್ರಂಥ ಸಂಪಾದನೆ, ಭಾಷಾವಿಜ್ಞಾನ, ಕಾವ್ಯಮೀಮಾಂಸೆ, ವಿಮರ್ಶೆ, ಸಾಹಿತ್ಯ ಚರಿತ್ರೆ ಹೀಗೆ ಅನೇಕ ಪ್ರಕಾರಗಳಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಉತ್ತಮ ವಾಗ್ಮಿಗಳಾಗಿದ್ದ ಎನ್ಎಸ್ಎಲ್ ಸದಭಿರುಚಿಯ ವಾತಾವರಣ ನಿರ್ಮಿಸಲು ನಿರಂತರ ಶ್ರಮಿಸಿದವರು. ಇಂತಹ ಹಿರಿಯ ಚೇತನಕ್ಕೆ ನಾಡವರ ಪರವಾಗಿ ನಮನಗಳು.
(ಲೇಖಕರು ಖ್ಯಾತ ವಿಮರ್ಶಕರು)