

‘ಹೇ ಭಗವಂತ! ಎಂತಹ ಕಷ್ಟದ ಬದುಕು ಕೊಟ್ಟುಬಿಟ್ಟೆಯಲ್ಲಪ್ಪ! ಮನೆಯಲ್ಲಿ ಸುಖವಿಲ್ಲ, ನೆಮ್ಮದಿಯಿಲ್ಲ, ಜೀವನಕ್ಕೆ ಬೇಕಾದಷ್ಟು ಸಂಪತ್ತು ಕೊಟ್ಟಿಲ್ಲ, ಒಟ್ಟಿನಲ್ಲಿ ಈ ಬದುಕು ಸಾಕಾಗಿ ಹೋಗಿದೆ. ದಯಮಾಡಿ ಈ ಸಮಸ್ಯೆಗಳನ್ನು ನೀನೇ ಪರಿಹರಿಸು ದೇವ’ ಎಂದು ಭಕ್ತನೊಬ್ಬ ದೇವಸ್ಥಾನಕ್ಕೆ ಬಂದು ಮಂಡಿಯೂರಿ ಕುಳಿತು ಬೇಡುತ್ತಿದ್ದ.
‘ಭಕ್ತಾ, ಎಷ್ಟೊಂದು ಕಷ್ಟದಲ್ಲಿ ಸಿಲುಕಿಬಿಟ್ಟಿರುವೆಯಲ್ಲ! ನಿನಗೆ ತಂದೆ-ತಾಯಿಯ ಪ್ರೀತಿ ಎಂದರೆ ಏನು ಎಂಬುದು ತಿಳಿಯಲಿ ಅಂತ ಒಳ್ಳೆಯ ತಂದೆ-ತಾಯಂದಿರನ್ನು ಕೊಟ್ಟೆ. ಅವರಲ್ಲೂ ನಿನಗೆ ಸಮಾಧಾನ ಸಿಗಲಿಲ್ಲವೇ? ಸಂಸಾರದ ಸುಖ ಎಂದರೆ ಏನು ಎಂಬ ಅರಿವಾಗಲಿ ಎಂದು ಒಳ್ಳೆಯ ರೂಪವತಿ, ಸದ್ಗುಣಶೀಲಳಾದ ಪತ್ನಿಯನ್ನು ಕೊಟ್ಟೆ. ಅವಳಲ್ಲಿಯೂ ಸುಖ ಕಾಣಲಿಲ್ಲವೇ? ಎರಡು ಮುದ್ದಾದ ಮಕ್ಕಳು ನಿನಗೆ ಸುಖ ನೀಡಲಿಲ್ಲವೇ? ಎಷ್ಟೊಂದು ಜನ ಹಿತೈಷಿಗಳು ನಿನ್ನ ಸುತ್ತಲೂ ಇದ್ದು ನಿನ್ನ ಒಳಿತನ್ನು ಬಯಸುತ್ತಿದ್ದಾರಲ್ಲ ಅವರೂ ನಿನಗೆ ಕಷ್ಟಗಳನ್ನೇ ಕೊಟ್ಟರೇ?’ ಎಂದು ಕೇಳಿದ ಎದುರಿಗೆ ಪ್ರತ್ಯಕ್ಷನಾದ ಭಗವಂತ.
ಭಕ್ತನಿಗೆ ಆಶ್ಚರ್ಯವಾಯಿತು. ನಿತ್ಯವೂ ದೇವಸ್ಥಾನಕ್ಕೆ ಬಂದು ಎಷ್ಟು ಕರೆದರೂ, ಗೋಗರೆದರೂ ಬರದಿದ್ದ ಭಗವಂತ ಇಂದು ಬಂದುಬಿಟ್ಟಿದ್ದಾನೆ, ಈಗಲೇ ಎಲ್ಲವನ್ನೂ ಕೇಳಿಕೊಂಡುಬಿಡಬೇಕು. ಒಮ್ಮೆ ಇವನನ್ನು ಬಿಟ್ಟರೆ ಮತ್ತೆ ಸಿಗಲಾರ ಎಂದು ತನ್ನ ಬಯಕೆಗಳ ದೊಡ್ಡ ಪಟ್ಟಿಯನ್ನೇ ಭಗವಂತನ ಮುಂದಿಟ್ಟು ‘ಇವುಗಳನ್ನು ನೀನು ಕೊಡದಿದ್ದರೆ ನನಗೆ ಜೀವನವೇ ದುಸ್ತರ’ ಎಂಬುದಾಗಿ ಹೇಳಿ ಅವನ ಉತ್ತರದ ನಿರೀಕ್ಷೆಯಲ್ಲಿ ಕುಳಿತ.
ಸ್ವಲ್ಪಕಾಲ ಮೌನದಿಂದಿದ್ದ ಭಗವಂತ- ‘ಅಯ್ಯೋ, ಮಗು ನೀನು ಎಷ್ಟೊಂದು ಕಷ್ಟಗಳನ್ನು ಅನುಭವಿಸುತ್ತಿದ್ದೀಯಲ್ಲ! ಖಂಡಿತವಾಗಿಯೂ ನಿನ್ನೆಲ್ಲ ಕಷ್ಟಗಳನ್ನೂ ಪರಿಹರಿಸುತ್ತೇನೆ. ಅದಕ್ಕಾಗಿ ನೀನೊಂದು ಸಣ್ಣ ಕೆಲಸ ಮಾಡಬೇಕು’.
‘ಏನದು?’ ಕಾತರದಿಂದ ಕೇಳಿದ ಭಕ್ತ.
‘ಇನ್ನೇನೂ ಇಲ್ಲ, ನಿನಗೆ ಈ ಲೋಕದ ಸಹವಾಸವೇ ಬೇಡ, ನೀನು ನನ್ನ ಜೊತೆ ಬಂದುಬಿಡು ಅಷ್ಟೇ’. ಭಕ್ತ ನಿಂತಲ್ಲೇ ನಡುಗಿ ಹೋದ. ‘ಏನು? ನಾನು ನಿನ್ನ ಜೊತೆ ಬರಬೇಕೇ? ಖಂಡಿತ ಸಾಧ್ಯವಿಲ್ಲ, ಇನ್ನೂ ಎಷ್ಟೊಂದು ಕೆಲಸಗಳನ್ನು ಮಾಡಲಿಕ್ಕಿದೆ, ಇಲ್ಲಿ ಎಲ್ಲ ಸುಖಗಳೂ ಇವೆ. ತಂದೆ-ತಾಯಿ, ಮಡದಿ, ಮಕ್ಕಳು, ಬಂಧುಗಳು ನನ್ನ ಹಿತವನ್ನೇ ಬಯಸಿ ಬದುಕಿಗೆ ಸಂತೋಷವನ್ನು ತಂದುಕೊಟ್ಟಿದ್ದಾರೆ. ಇಲ್ಲಿ ಯಾವ ತೊಂದರೆಯೂ ಇಲ್ಲ. ಅಷ್ಟಕ್ಕೂ ನಾನು ಕಷ್ಟ ಅಂತ ಹೇಳಿದ್ದು ತಮಾಷೆಗಾಗಿ ಅಷ್ಟೆ, ನೀನಿನ್ನು ಹೊರಡಬಹುದು’ ಎಂದು ಹೇಳಿದ ಭಕ್ತ ಅಲ್ಲಿಂದ ಕಾಲ್ಕಿತ್ತ.
ವಾಸ್ತವದಲ್ಲಿ ನಾವೆಲ್ಲರೂ ಇಂದು ಭಕ್ತನ ಸ್ಥಾನದಲ್ಲಿ ನಿಂತಿದ್ದೇವೆ. ಎಲ್ಲವೂ ಇದ್ದು ಏನೂ ಇಲ್ಲದವರಂತೆ ಬೇಡುತ್ತಿದ್ದೇವೆ. ಕಂಡ ಕಂಡ ದೇವಾಲಯಗಳ ಕಂಬಗಳನ್ನು ಸುತ್ತಿ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸುತ್ತಿದ್ದೇವೆ. ಒಂದೊಮ್ಮೆ ಭಗವಂತನೇನಾದರೂ ಬಂದು, ‘ನಿನಗೆ ಈ ಕಷ್ಟದ ಜೀವನವೇ ಬೇಡ, ನನ್ನ ಜೊತೆ ಹೊರಡು’ ಎಂದಾಗ ನಮ್ಮ ನಿಜವಾದ ಶಕ್ತಿಯ ಅರಿವಾದೀತು. ಆದರೆ ಏನು ಪ್ರಯೋಜನ? ಇರುವುದರಲ್ಲೇ ತೃಪ್ತಿ ಕಾಣುತ್ತ, ಜೀವನದ ಸತ್ಯ ಅರಿಯೋಣ.
(ಲೇಖಕರು ಸಂಸ್ಕೃತ ಉಪನ್ಯಾಸಕರು)