

ಇರಲಿ. ಇವರೆಲ್ಲ ಇಷ್ಟು ಆರಾಧಿಸುವ ಚೀನಾ ಕಳೆದ ಎಂಟ್ಹತ್ತು ದಿನಗಳಿಂದ ಪಡಬಾರದ ಪಾಡು ಪಡುತ್ತಿದೆ. ನವೆಂಬರ್ ತಿಂಗಳ ಕೊನೆಯಲ್ಲಿ ಶಿಂಜಿಯಾಂಗ್ ಪ್ರಾಂತ್ಯದ ಉರುಕ್ಮಿಯಲ್ಲಿ ಹತ್ತಾರು ಮನೆಗಳುಳ್ಳ ಅಪಾರ್ಟ್ವೆುಂಟ್ ಒಂದಕ್ಕೆ ಬೆಂಕಿ ಹೊತ್ತಿಕೊಂಡು ಹತ್ತಕ್ಕೂ ಹೆಚ್ಚು ಮಂದಿ ತೀರಿಕೊಂಡರು. ಜನರ ಆಕ್ರೋಶಕ್ಕೆ ಕಾರಣವಾದ ಈ ಸಂಗತಿ ದಶಕಗಳಷ್ಟು ದೀರ್ಘಕಾಲದ ನಂತರ ಚೀನಿಯರನ್ನು ಪ್ರತಿಭಟನೆಯ ನೆಪದಲ್ಲಿ ಬೀದಿಗೆ ತಂತು. ಅಪಾರ್ಟ್ವೆುಂಟಿಗೆ ಬೆಂಕಿ ಹತ್ತಿಕೊಂಡರೆ ಪ್ರತಿಭಟನೆ ಮಾಡುವುದೇತಕ್ಕೆ ಎಂದು ಆಶ್ಚರ್ಯವಾಗಿರಬೇಕಲ್ಲವೇ? ಜೀರೊ ಕೋವಿಡ್ನ ಹುಚ್ಚಿಗೆ ಬಿದ್ದಿರುವ ಅಧ್ಯಕ್ಷ ಷಿ ಜಿನ್ಪಿಂಗ್ ಇಲ್ಲಿಂದ ಯಾರೊಬ್ಬರೂ ಆಚೆಗೆ ಬರದಂತೆ ಹೊರಬಾಗಿಲಿಗೆ ಕಬ್ಬಿಣದ ರಾಡುಗಳಿಂದ ವೆಲ್ಡಿಂಗ್ ಮಾಡಿಸಿದ್ದರ ಪರಿಣಾಮ ಜನ ಅನಿವಾರ್ಯವಾಗಿ ಬೆಂಕಿಯಲ್ಲಿ ಬೇಯಬೇಕಾಗಿ ಬಂತು. ಜಗತ್ತಿನಾದ್ಯಂತ ಕೋವಿಡ್ನ ಸಂಕಟ ಇರಬಹುದೇನೋ ಎಂದೇ ಭಾವಿಸಿಕೊಂಡಿದ್ದ ಚೀನೀ ಮಂದಿಗೆ ಫುಟ್ಬಾಲ್ ವಿಶ್ವಕಪ್ನ ವೇಳೆಗೆ ಮುಖಕ್ಕೆ ಮಾಸ್ಕು ಕೂಡ ಧರಿಸದೇ ಓಡಾಡುತ್ತಿರುವ ಮಂದಿಯನ್ನು ಕಂಡು ಕಿರಿಕಿರಿ ಎನಿಸಿರಲು ಸಾಕು. ವರ್ಷವೇ ಉರುಳಿದರೂ ಇನ್ನೂ ತಾವು ಕೋವಿಡ್ನ ಆತಂಕದಲ್ಲೇ ಬದುಕಬೇಕಾಯ್ತಲ್ಲ, ಮನೆಯಿಂದ ಹೊರಬರಲೂ ಸರ್ಕಾರದ ಅನುಮತಿ ಕೇಳಬೇಕಾಯ್ತಲ್ಲ ಎಂದವರಿಗೆ ಅನಿಸಿರಬೇಕು. ಕೊನೆಗೂ ಜನ ಬೀದಿಗೆ ಬಂದರು. ಲಾಕ್ಡೌನ್ ತೆಗೆಯಿರಿ ಎಂಬ ಘೊಷಣೆ ಕೂಗಲಾರಂಭಿಸಿದರು. ಪ್ರತಿಭಟನೆಯ ಕಾವು ಹಬ್ಬಲು ತುಂಬ ಸಮಯ ತೆಗೆದುಕೊಳ್ಳಲಿಲ್ಲ. ಶಾಂಘಾಯ್ ನವೆಂಬರ್ 26ಕ್ಕೆ ಬೀದಿಗೆ ಬಂತು. 2020ರಲ್ಲಿ ಹಾಂಕಾಂಗ್ನ ಮಂದಿ ಸರ್ಕಾರದ ದಮನ ನೀತಿಯ ವಿರುದ್ಧ ಪ್ರತಿಭಟನೆಗೆ ಖಾಲಿ ಕಾಗದ ಬಳಸಿದ್ದರಲ್ಲ ಅದೇ ಮಾದರಿಯನ್ನು ಇಲ್ಲಿಯೂ ಅನುಸರಿಸಲಾಯ್ತು. ಸರ್ಕಾರದ ವಿರುದ್ಧ ಘೊಷಣೆ ಇದ್ದರೆ ತಾನೇ ಜೈಲಿಗೆ ತಳ್ಳುವುದು? ಖಾಲಿಹಾಳೆಯನ್ನು ಅವರು ಏನೆಂದು ಗುರುತಿಸುತ್ತಾರೆ? ಈ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಮರುದಿನವೇ ಭಾಗವಹಿಸಿದವರನ್ನು ಬಂಧಿಸಲುದ್ಯುಕ್ತವಾಯ್ತು. ಇದನ್ನು ಪ್ರತಿಭಟಿಸಿ ಬೀಜಿಂಗ್ನಲ್ಲಿ ಜನ ಬೀದಿಗಿಳಿದರು. ಪೀಕಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದರು. ಜಿನ್ಪಿಂಗ್ರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಆಗ್ರಹಿಸಲಾಯ್ತು ಕೂಡ. ಇದು ಅಧಿಕಾರಕ್ಕೆ ಬಂದಾಗಿನಿಂದಲೂ ಷಿ ಪಾಲಿಗೆ ಬಲುದೊಡ್ಡ ಹೊಡೆತ. ಲಾಂಗ್ಜೊವರೆಗೂ ಪ್ರತಿಭಟನೆಗಳು ಹಬ್ಬಿ ಮೊದಲ ಬಾರಿಗೆ ಚೀನಾದ ದಮನ ನೀತಿಯನ್ನು ಮೀರಿ ಸುದ್ದಿ ಜಗತ್ತಿನ ಮೂಲೆ-ಮೂಲೆಗೂ ತಲುಪಿತು. ಪ್ರತಿಭಟನೆಯ ವರದಿ ಮಾಡುತ್ತಿದ್ದ ಬಿಬಿಸಿ ವರದಿಗಾರ ಎಡ್ವರ್ಡ್ ಲಾರೆನ್ಸ್ರನ್ನು ಪೊಲೀಸರು ಬಡಿದು, ಬಂಧಿಸಿ ಎಳೆದೊಯ್ದರು ಕೂಡ. ಹಾಂಕಾಂಗ್ ಶಾಂತವಾಗಿ ಚೀನಿಯರ ನೋವಿಗೆ ಬೆಂಬಲ ಸೂಚಿಸಿತು. ‘ನನಗೆ ಸ್ವಾತಂತ್ರ್ಯ ಕೊಡು, ಇಲ್ಲವೇ ಕೊಂದುಬಿಡು’ ಎನ್ನುವ ಮಾತು ಎಲ್ಲೆಡೆ ಕೇಳಿಬಂತು!
ಚೀನಾದ ಜನ ಎಲ್ಲ ದಬ್ಬಾಳಿಕೆಯನ್ನೂ ಸಹಿಸಿಕೊಳ್ಳುತ್ತಾರೆ. ಭಾವನಾತ್ಮಕವಾಗಿ ಸ್ವಲ್ಪ ಭಡಕಾಯಿಸಿದರೆ ಸಾಕು ಅವರಿಂದ ಬೇಕಾದ್ದನ್ನು ಮಾಡಿಸಿಕೊಳ್ಳಬಹುದು ಎಂಬ ಪರಿಸ್ಥಿತಿ ಇರುವಾಗ, ಅವರು ಬೀದಿಗೆ ಬಂದಿದ್ದಾದರೂ ಹೇಗೆ ಮತ್ತು ಏಕೆ ಎಂಬ ಪ್ರಶ್ನೆ ಸಹಜವೇ. ಇದಕ್ಕೆ ಕರೊನಾ ಮಹಾಮಾರಿಯೇ ಕಾರಣ. ಕರೊನಾ ಆರಂಭವಾದಾಗ ಜೀರೊ ಕೋವಿಡ್ ನೀತಿಯನ್ನು ಜಾರಿಗೆ ತಂದ ಅಧ್ಯಕ್ಷ ಷಿ ಜಿನ್ಪಿಂಗ್ ಕಠೋರ ಕ್ರಮಗಳ ಮೂಲಕ ಜನರನ್ನು ಉಳಿಸಿಕೊಂಡರು. ಆರಂಭದಲ್ಲಿ ಜನ ಪ್ರತಿಭಟಿಸಿದರಾದರೂ ಕಾಲಕ್ರಮದಲ್ಲಿ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಉಂಟಾದ ಸಾವುನೋವುಗಳನ್ನು ಕಂಡು, ತಮ್ಮ ಅಧ್ಯಕ್ಷರಿಗೆ ಜನರ ಆರೋಗ್ಯದ ಕುರಿತ ಕಾಳಜಿ ಕಂಡು ಅವರು ಮನಸೋತರು. ಚೀನಾದಲ್ಲಿ ಕೋವಿಡ್ ಸಾವು ಹೆಚ್ಚು-ಕಡಿಮೆ ನಗಣ್ಯವಾಗಿತ್ತು. ಆದರೆ, ಈ ತಂತ್ರ ಜನರ ಬದುಕನ್ನು ಸುದೀರ್ಘಕಾಲ ದುರ್ಭರಗೊಳಿಸಿದಾಗ ಅವರು ತಿರುಗಿ ಬೀಳುವ ಸಾಧ್ಯತೆ ಇತ್ತಲ್ಲ ಅದನ್ನು ಗಲ್ವಾನ್ನಲ್ಲಿ ಸಾಹಸ ಮಾಡುವ ಮೂಲಕ ಮುಚ್ಚಿಕೊಳ್ಳುವ ಯತ್ನ ಮಾಡಿತು ಚೀನಾ. ಅವರ ದುರದೃಷ್ಟಕ್ಕೆ 40ಕ್ಕೂ ಹೆಚ್ಚು ಸೈನಿಕರನ್ನು ಕಳಕೊಂಡು ಮುಖಭಂಗ ಅನುಭವಿಸಿತು. ಆದರೆ, ಯಾವ ಸೈನಿಕರೂ ತೀರಿಕೊಂಡಿಲ್ಲ ಎಂದು ಹೇಳುವ ಮೂಲಕ ಮಾನವುಳಿಸಿಕೊಳ್ಳುವ ಯತ್ನ ಮಾಡಿತ್ತು. ಈ ವೇಳೆಗೆ ಎವರ್ಗ್ರಾ್ಯಂಡ್ ಎಂಬ ರಿಯಲ್ ಎಸ್ಟೇಟ್ ಕಂಪನಿ ಬೀದಿಗೆ ಬಂದು ಚೀನಾದ ಮೇಲ್ಮಧ್ಯಮ ಮತ್ತು ಮಧ್ಯಮವರ್ಗದ ಮಂದಿ ಕಣ್ಣೀರಿಡುವಂತಾಯ್ತು. ಕರೊನಾಕ್ಕಿಂತ ಮುಂಚೆ ಜನರಿಂದ ಮತ್ತು ಬ್ಯಾಂಕುಗಳಿಂದ ಸಾಲ ಪಡೆದು ಅಗಾಧವಾಗಿ ಬೆಳೆದುನಿಂತ ಎವರ್ಗ್ರಾ್ಯಂಡ್ 200 ನಗರಗಳಲ್ಲಿ ಆಸ್ತಿ ಮಾಡಿತು. ತನ್ನ ಷೇರುದಾರರಿಗೆ ಅಪಾರ ಪ್ರಮಾಣದ ಲಾಭ ಮಾಡಿಕೊಟ್ಟು ಭರವಸೆ ಮೂಡಿಸಿತು. ಕರೊನಾ ಲಾಕ್ಡೌನಿನ ನಂತರ ಮನೆಗಳ ಮಾರಾಟ ತೀವ್ರ ಪ್ರಮಾಣದಲ್ಲಿ ಕಡಿಮೆಯಾಯ್ತಲ್ಲ, ಕಂಪನಿ ನಷ್ಟ ಅನುಭವಿಸಿತು. ಚೀನಾದ ಬ್ಯಾಂಕುಗಳಿಂದ ಸಾಲ ಪಡೆಯಬಹುದಾದ ಮಿತಿಯನ್ನು ದಾಟಿದ್ದರಿಂದ ಅದಕ್ಕೀಗ ಹಣಕಾಸಿನ ಮುಗ್ಗಟ್ಟು ಕಂಡುಬಂತು. ಹೂಡಿಕೆದಾರರಿಗೆ ಕೊಡಬೇಕಾಗಿದ್ದ ಹಣದ ಬದಲು ಅರೆನಿರ್ವಿುತ ಮನೆಗಳನ್ನು ನೀಡಲಾರಂಭಿಸಿತು. ಹಣವೇ ಬೇಕು ಎಂದವರ ಮುಂದೆ ಕೈಚೆಲ್ಲಿ ನಿಂತುಬಿಟ್ಟಿತು. ಶೆನ್ಜೆನ್ನಲ್ಲಿ ಮುಖ್ಯ ಕಚೇರಿಯ ಎದುರಿಗೆ ಜನ ಬಂದುನಿಂತರು. ಈ ಕಂಪನಿಯ ಒಟ್ಟು ಸಾಲ 88 ಬಿಲಿಯನ್ ಡಾಲರ್ಗಳಷ್ಟು! ಕಳೆದ ಜೂನ್ ತಿಂಗಳಿಗೆ ಕಟ್ಟಬೇಕಿದ್ದ ಬಡ್ಡಿಯೇ 80 ಮಿಲಿಯನ್ ಡಾಲರ್ಗಿಂತ ಹೆಚ್ಚಿತ್ತು. ಎವರ್ಗ್ರಾ್ಯಂಡ್ನ ಈ ಪರಿಸ್ಥಿತಿಯಿಂದಾಗಿ ಚೀನಾದಲ್ಲಿ ಒಟ್ಟಾರೆ ಮನೆಗಳ ಬೆಲೆಯೇ ಶೇಕಡಾ 20ರಷ್ಟು ಕುಸಿಯಿತು. ಎಲ್ಲ ರಿಯಲ್ ಎಸ್ಟೇಟ್ ಕಂಪನಿಗಳ ಷೇರು ಮೌಲ್ಯ ಪಾತಾಳಕ್ಕೆ ಹೋಯ್ತು. ಎಲ್ಲಕ್ಕಿಂತ ದೊಡ್ಡ ನಷ್ಟ ಅನುಭವಿಸಿದ್ದು ತಮ್ಮೆಲ್ಲ ಬದುಕಿನ ಹಣವನ್ನು ಈ ಕಂಪನಿಯೊಳಗೆ ಹೂಡಿದ್ದ ದೊಡ್ಡಮಟ್ಟದ ಮಧ್ಯಮ ವರ್ಗದ ಮಂದಿ!
ಚೀನಾದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಅದರ ಸಾಲ 8 ಟ್ರಿಲಿಯನ್ ಡಾಲರುಗಳಷ್ಟಾಗಿತ್ತು. ‘ಒನ್ ಬೆಲ್ಟ್ ಒನ್ ರೋಡ್’ ನೆಪದಲ್ಲಿ ಅದರ ಒಂದು ಟ್ರಿಲಿಯನ್ ಡಾಲರ್ನಷ್ಟು ಹಣ ಸಿಕ್ಕುಹಾಕಿಕೊಂಡಿತ್ತು. ಕರೊನಾ ನಂತರ ಪಶ್ಚಿಮದ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದ್ದರಿಂದ ಮತ್ತಷ್ಟು ಹೊಡೆತ ಬಿದ್ದಿತ್ತು. ಇತ್ತ ಗಡಿಯಲ್ಲಿ ಭಾರತದೊಂದಿಗೆ ಕ್ಯಾತೆ ತೆಗೆದು ಸೈನಿಕರನ್ನು ಕರೆತಂದು ನಿಲ್ಲಿಸಿಕೊಂಡಿತ್ತಲ್ಲ, ಭಾರತವೂ ಅಷ್ಟೇ ಗಟ್ಟಿಯಾಗಿ ತಳವೂರಿದ್ದರಿಂದ ಸೈನ್ಯದ ಖರ್ಚು ವೆಚ್ಚವೂ ಊಹಿಸಲಾರದಷ್ಟಾಗಿತ್ತು. ಒಂದೆಡೆ ಕ್ಷಾಮ ಮತ್ತೊಂದೆಡೆ ಪ್ರವಾಹ, ಧಾನ್ಯ ದಾಸ್ತಾನನ್ನು ಶೇಕಡಾ 50ರಷ್ಟು ತಿಂದುಹಾಕಿತ್ತು. ಒಂದೆಡೆ ಕುಸಿಯುತ್ತಿರುವ ಕೈಗಾರಿಕೆ ಉತ್ಪನ್ನಗಳು, ಮತ್ತೊಂದೆಡೆ ಏರುತ್ತಿರುವ ನಿರುದ್ಯೋಗ ಚೀನಾವನ್ನು ಒಳಗಿಂದೊಳಗೇ ತಿನ್ನುತ್ತಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕಮ್ಯುನಿಸ್ಟ್ ಪಾರ್ಟಿಯ ವಾರ್ಷಿಕ ಸಭೆಯಲ್ಲಿ ತನ್ನ ಅವಧಿ ವಿಸ್ತಾರವನ್ನು ದೃಢಪಡಿಸಿಕೊಂಡ ಷಿ ಮತ್ತೆ ಜೀರೋ ಕೋವಿಡ್ ನೀತಿ ಜಾರಿಗೆ ತಂದರು. ಮೊದಲ ಬಾರಿಗೆ ಈ ನೀತಿಯಿಂದಾಗಿ ಲಕ್ಷಾಂತರ ಮಂದಿಯ ಜೀವ ಉಳಿದಿರುವುದನ್ನು ಜನ ಮೆಚ್ಚಿದ್ದರು. ಆದರೆ, ಈಗ ಜಗತ್ತೆಲ್ಲ ಚಟುವಟಿಕೆಗೆ ಮರಳಿರುವಾಗ ತಾವಿನ್ನೂ ಮನೆಗಳಲ್ಲಿ ಬಂಧಿಸಿಕೊಂಡು ಕುಳಿತಿರುವುದನ್ನು ಚೀನಿಯರಿಂದ ಸಹಿಸಲಾಗಲಿಲ್ಲ. ಶೂನ್ಯ ಕೋವಿಡ್ ಎಂಬುದೊಂದು ಕಟ್ಟುಕಥೆ ಎಂದು ಜಗತ್ತಿನ ವಿಜ್ಞಾನಿಗಳೆಲ್ಲ ಹೇಳುತ್ತಿರುವುದು ಈಗ ಅವರಿಗೆ ಸತ್ಯವೆನಿಸುತ್ತಿದೆ. ಚೀನಾದ ಕೋವಿಡ್ ಲಸಿಕೆ ಪ್ರಭಾವಿಯಾಗಿಲ್ಲ ಎಂದು ಡಾ. ಪಾಲ್ ಹಂಟರ್ ಹಿಂದೆಯೇ ಹೇಳಿದ್ದು ನಿಜವೆನಿಸುತ್ತಿದೆ. ಎಡಿನ್ಬರ್ಗ್ ವಿಶ್ವವಿದ್ಯಾಲಯದ ಪೊ›. ದೇವಿಶ್ರೀಧರ್ ಅವರು, 80 ದಾಟಿರುವ ಚೀನಾದ ವೃದ್ಧರಲ್ಲಿ ಶೇಕಡಾ 40 ಮಂದಿಗೆ ಮಾತ್ರ ಬೂಸ್ಟರ್ ಲಸಿಕೆ ದೊರೆತಿರುವುದರಿಂದ ಭವಿಷ್ಯದ ದಿನಗಳು ಭಯಾನಕವಾಗಿದೆ ಎಂದಿದ್ದರಲ್ಲದೆ, ಮಿಲಿಯನ್ಗಟ್ಟಲೆ ಮಂದಿ ಚೀನಾದಲ್ಲಿ ಇದುವರೆಗೂ ವ್ಯಾಕ್ಸಿನ್ ಪಡೆದುಕೊಂಡಿಲ್ಲ ಎಂದೂ ಎಚ್ಚರಿಸಿದ್ದರು. ಲಾಕ್ಡೌನ್ನಲ್ಲಿ ಇದ್ದಷ್ಟೂ ದಿನ ವೈರಸ್ಗೆ ಅವರು ತಮ್ಮತಾವು ತೆರೆದುಕೊಂಡಿರಲಿಲ್ಲ. ಈಗ ಮನೆಯಿಂದ ಹೊರಬರುತ್ತಿದ್ದಂತೆ ಮತ್ತೆ ವೈರಸ್ ಆಕ್ರಮಿಸಿಕೊಳ್ಳುತ್ತಿದೆ. ಆಹಾರ ದಾಸ್ತಾನು ಕಡಿಮೆ ಇರುವುದರಿಂದ ನಿರ್ವಹಣೆ ಅಷ್ಟು ಸುಲಭವಾಗಿಲ್ಲ. ಮೊದಲ ಬಾರಿ ಕೋವಿಡ್ ಬಂದಾಗಲೇ ಪ್ರತಿಯೊಬ್ಬ ವ್ಯಕ್ತಿಯ ಹೆಸರಲ್ಲೂ ಕ್ಯೂಆರ್ ಕೋಡ್ ಜನರೇಟ್ ಮಾಡಲಾಗಿತ್ತು. ಅದು ನಮ್ಮ ‘ಆರೋಗ್ಯ ಸೇತು’ ಆಪ್ಗಿಂತ ಭಿನ್ನವಾದ್ದು. ಮಾಲ್ಗೆ ಹೋಗಬೇಕಾಗಲೀ ಅಥವಾ ರೈಲು ಹತ್ತಿ ಪಕ್ಕದೂರಿಗಾದರೂ ಸರಿ ಎಲ್ಲೆಡೆ ಬಾಗಿಲು ತೆರೆದುಕೊಳ್ಳಬೇಕೆಂದರೆ ಕ್ಯೂಆರ್ ಕೋಡ್ ಅನ್ನು ಯಂತ್ರಕ್ಕೆ ಹಿಡಿಯಲೇಬೇಕು. ಅಲ್ಲೇನಾದರೂ ಬಣ್ಣ ಕೆಂಪು ಬಂತೆಂದರೆ ಆ ಬಾಗಿಲು ನಿಮಗೆ ತೆರೆಯಲ್ಪಡುವುದಿಲ್ಲ. ಬದಲಿಗೆ ಅದು ಜೋರಾಗಿ ಸದ್ದು ಮಾಡಿ, ನಿಮ್ಮಿಂದ ಇತರರು ದೂರ ಓಡುವಂತೆ ಮಾಡುತ್ತದಲ್ಲದೆ, ಕೋವಿಡ್ ಪೊಲೀಸರು ಬಂದು ಬಂಧಿಸಲು ಅನುಕೂಲ ಮಾಡಿಕೊಡುತ್ತದೆ. ಒಮ್ಮೆ ಅವರು ಬಂಧಿಸಿದರೆಂದರೆ ಮುಂದಿನ ಒಂದು ತಿಂಗಳ ಕಾಲ ಅಥವಾ ಕ್ಯೂಆರ್ ಕೋಡ್ನಲ್ಲಿ ಬಣ್ಣ ಹಸಿರಿಗೆ ತಿರುಗುವವರೆಗೂ ನರಕ ಯಾತನೆ ಅನುಭವಿಸಬೇಕು. ಇನ್ನೂ ವಿಚಿತ್ರವೇನು ಗೊತ್ತೇ? ನಿಮಗೆ ಅರಿವಿಲ್ಲದೆ ಕ್ಯೂಆರ್ ಕೋಡ್ನಲ್ಲಿ ಕೆಂಪು ಬಣ್ಣ ಇದ್ದವನೊಂದಿಗೆ ನೀವು ಹತ್ತು ನಿಮಿಷ ಮಾತನಾಡಿದರೂ ನಿಮ್ಮ ಕ್ಯೂಆರ್ ಕೋಡ್ ಕೆಂಪು ಬಣ್ಣಕ್ಕೆ ತಿರುಗಿಬಿಡುತ್ತದೆ. ಅಲ್ಲಿಗೆ ನೀವು ಸತ್ತಂತೆ. ಹೀಗಾಗಿಯೇ ಒಬ್ಬರ ಕ್ಯೂಆರ್ ಕೋಡ್ ಕೆಂಪಾಗಿದೆ ಎಂಬ ಸದ್ದು ಬಂದೊಡನೆ ಉಳಿದ ಮಂದಿ ಅವನಿಂದ ದೂರ ಓಡಲಾರಂಭಿಸುತ್ತಾರೆ. ಎಚ್ಐವಿ ಕುರಿತಂತೆ ತಪ್ಪು ಕಲ್ಪನೆಗಳಿದ್ದಾಗಲೂ ಭಾರತದಲ್ಲಿ ಮಂದಿ ಹೀಗೆ ನಡೆದುಕೊಂಡಿರಲಿಲ್ಲ. ಈ ಕಾರಣಕ್ಕಾಗಿ ಚೀನಾದಲ್ಲಿ ಜನರ ಆಕ್ರೋಶ ಹೆಚ್ಚುತ್ತಿದೆ.
ಇನ್ನೂ ಅಚ್ಚರಿಯ ಸಂಗತಿ ಏನು ಗೊತ್ತೇ? ಸರ್ಕಾರ ತನ್ನ ಬಳಿಯಿರುವ ಡಾಟಾ ಬಳಸಿ ತನ್ನ ವಿರೋಧಿಯ ಕ್ಯೂಆರ್ ಕೋಡ್ ಕೆಂಪಾಗುವಂತೆ ಸಲೀಸಾಗಿ ಮಾಡಿಬಿಡಬಲ್ಲದು. ಅಲ್ಲಿಗೆ ನಿಮ್ಮನ್ನು ಕೊಲ್ಲಬೇಕೆಂದು ಷಿ ನಿಶ್ಚಯಿಸಿದರೆ ಆತನ ಪಾಲಿಗೆ ಅದು ಕಂಪ್ಯೂಟರ್ನಲ್ಲಿ ಒಂದು ಕ್ಲಿಕ್ ಮಾತ್ರ!
ಯಾವುದಕ್ಕೂ ಮಣಿಯದ ಚೀನೀ ಆಡಳಿತ ಮೊದಲ ಬಾರಿಗೆ ಕೋವಿಡ್ ನಿಯಮಗಳನ್ನು ಸಡಿಲಗೊಳಿಸುವ ಮಾತನಾಡುತ್ತಿದೆ. ಹಾಗೇನಾದರೂ ಪೂರ್ಣ ಸಡಿಲಿಸಿದಲ್ಲಿ ಕನಿಷ್ಠ ಪಕ್ಷ ಎರಡು ಮಿಲಿಯನ್ ಮಂದಿ ಅದಕ್ಕೆ ಆಹುತಿಯಾಗಲಿದ್ದಾರೆ ಎಂಬ ಆತಂಕವನ್ನು ಜಗತ್ತು ವ್ಯಕ್ತಪಡಿಸುತ್ತಿದೆ.
ಜನರ ಗಮನವನ್ನು ಬೇರೆಡೆ ಸೆಳೆಯಲು ಜಿನ್ಪಿಂಗ್ಗೆ ಇರುವುದೊಂದೇ ಮಾರ್ಗ. ಯಾರೊಂದಿಗಾದರೂ ಕಾಲು ಕೆರಕೊಂಡು ಜಗಳಕ್ಕೆ ಹೋಗಬೇಕು. ಚೀನೀ ಜನರ ಭಾವನೆಯನ್ನು ಕೆರೆಯಬೇಕು. ಅದಾಗಲೇ ಗಲ್ವಾನಿನಲ್ಲಿ ಭಾರತ ಸರಿಯಾದ ತಪರಾಕಿ ಕೊಟ್ಟಿದೆ. ಜಪಾನ್ ರಕ್ಷಣಾ ಬಜೆಟ್ ಅನ್ನು ದುಪ್ಪಟ್ಟುಗೊಳಿಸಿದೆ. ಇನ್ನು ಅದಕ್ಕಿರುವುದು ತೈವಾನ್ ಒಂದೇ. ಮುಂದಿನ ದಿನಗಳಲ್ಲಿ ನಾವು ತೈವಾನ್ನತ್ತ ಏರಿಹೋಗುವ ಅಥವಾ ಆಂತರಿಕವಾಗಿ ಕುಸಿದುಹೋಗುವ ಚೀನಾವನ್ನು ನೋಡಬಹುದೆನಿಸುತ್ತದೆ!
ಅಂದಹಾಗೆ, ಇವೆಲ್ಲದರ ನಡುವೆ ಕಾಣೆಯಾಗಿರುವುದು ಮಾತ್ರ ಸಿದ್ದರಾಮಯ್ಯನವರು...
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)