ಅವತಾರಶೃಂಗ ಶ್ರೀರಾಮಕೃಷ್ಣರೆಂಬ ದಿವ್ಯಾದ್ಭುತ ಭೃಂಗ

Rk pH
Published on
ಮನುಷ್ಯನು ತನ್ನ ಕರ್ತವ್ಯಗಳನ್ನು ಎಷ್ಟೋ ವೇಳೆ ನಿಷ್ಕಾಮಭಾವದಿಂದ ಮಾಡುತ್ತಿದ್ದೇನೆಂದು ತಿಳಿದರೂ ಅದು ಸಕಾಮಕರ್ಮವಾಗಿರುತ್ತದೆ! ಅತಿಯಾದ ದಾನ-ಧರ್ಮಗಳನ್ನು ಮಾಡಲು ಹೋಗಿ ಕೊನೆಗೆ ಲೋಕಮಾನ್ಯನಾಗಬೇಕೆಂಬ ಇಚ್ಛೆ ಬಂದುಬಿಡುತ್ತದೆ. ಭಗವಂತನ ಸಾಕ್ಷಾತ್ಕಾರಕ್ಕೆ ಕೆಲಸ ಎಂಬುದು ಕೇವಲ ಸಾಧನವಷ್ಟೇ. ಅತಿಯಾದ ಬಾಹ್ಯಾಚರಣೆ ನಿರರ್ಥಕ.

ಮನುಷ್ಯ ಸಂಕುಲ ಸಾಗಿ ಬಂದ ಪಥ ನಿಜಕ್ಕೂ ರೋಚಕ. ಇದು ನಿನ್ನೆ ಮೊನ್ನೆಯ ಕಥೆಯಲ್ಲ! ಜಗತ್ತಿನಲ್ಲಿ ಮಾನವರು ಉದಿಸಿದಾರಭ್ಯ ಅವರ ವ್ಯಕ್ತಿತ್ವಗಳಲ್ಲಿ ಸಮಾಜದಲ್ಲಿ ಒಳಿತುಕೆಡಕುಗಳ ಮಿಶ್ರಣವನ್ನು ಗಮನಿಸುತ್ತೇವೆ. ಯಾವುದೇ ಕಾಲದಲ್ಲೂ ‘ಸದ್ಗುಣಿ’ ಎನಿಸದ ಜಗತ್ತು ಮತ್ತು ಬದಲಾವಣೆಗಳನ್ನು ವಿರೋಧಿಸುತ್ತ ಬಂದ ಜಗತ್ತು ಬದಲಾವಣೆಗಳಿಂದಷ್ಟೇ ಸುಧಾರಣೆ ಕಂಡಿದೆ ಮತ್ತು ಸದ್ಗುಣಿಯನ್ನೇ ಪಥದರ್ಶಿಯಾಗಿ ಆಯ್ದುಕೊಂಡು ಸಾಗುತ್ತ ಬಂದಿದೆ.

ಜೀವವಿಜ್ಞಾನವು ಶಾರೀರಿಕ ವಿಕಾಸದ ಹಂತವನ್ನಷ್ಟೇ ಜಗತ್ತಿನ ಅದ್ಭುತವೋ ಎಂದು ಬಿಂಬಿಸುತ್ತದೆ. ಡಾರ್ವಿನ್ ವಿವರಿಸಿದ್ದು ಶಾರೀರಿಕ ವಿಕಾಸದ ವಿಚಾರವನ್ನಷ್ಟೇ. ಇದು ಮನುಷ್ಯನಿಗಿಂತ ಮೊದಲು ಇರುವ ‘Subhuman’ ಸಂಕುಲ ಕುರಿತಾದದ್ದು. ಆದರೆ ಸತ್ಯವೆಂದರೆ ಮಾನವನು ಕೇವಲ ಶರೀರವನ್ನಷ್ಟೇ ತನ್ನ ಸಮಗ್ರ ಅಸ್ತಿತ್ವವಾಗಿ ಬಿಂಬಿಸಿ ಸುಖಿಸಲಾರ! ಮಹಾಪ್ರಾಜ್ಞ ಮತ್ತು ಮಹಾಮೂರ್ಖರಲ್ಲಿ ವ್ಯತ್ಯಾಸವಿರುವುದು ಶಾರೀರಿಕಸ್ತರಕ್ಕಿಂತ ಬೌದ್ಧಿಕ ಸ್ತರದಲ್ಲಿ. ತದನಂತರದ್ದೇ ಮನೋಸಾಮಾಜಿಕ ವಿಕಾಸ!

ಪ್ರಕೃತಿ ಕಾಲಕ್ರಮೇಣ ವಿಕಾಸವನ್ನು ಸಾಧಿಸುವುದರಿಂದ ಮಾನವನ ಸಾಮರ್ಥ್ಯಗಳೂ ಬೇರೆ ಬೇರೆ ಕಾಲಘಟ್ಟಗಳಲ್ಲಿ ವಿಭಿನ್ನವಾಗಿರುತ್ತವೆ. ತತ್ಪರಿಣಾಮವಾಗಿಯೇ ಅಖಂಡವಾದ ಧರ್ಮಸಾಗರದಲ್ಲಿ ಸತ್ಯವು ಬಗೆಬಗೆಯ ವಿಧಾನಗಳಿಂದ ವ್ಯಕ್ತಗೊಳ್ಳುತ್ತ ಮಾನವ ಸಂಕುಲವನ್ನು ಮುನ್ನಡೆಸುತ್ತದೆ.

ದಶಾವತಾರಗಳು ಸಹ ಮತ್ಸಾ ್ಯತಾರ, ಕೂರ್ವವತಾರ, ವರಾಹಾವತಾರ ಎಂಬಿತ್ಯಾದಿ ವಿವಿಧ ಹಂತಗಳ ವಿಕಾಸದ ಸಂಕೇತವಾಗಿದೆ.

ಭಗವದ್ಗೀತೆ ಉದ್ಘೋಷಿಸುತ್ತದೆ: ‘ಭಗವಂತನು ಯುಗಯುಗಗಳಲ್ಲಿ ಅವತರಿಸುತ್ತಾನೆ, ಹೊಸಹೊಸ ಮಾರ್ಗಗಳನ್ನು ಆವಿಷ್ಕರಿಸುತ್ತಾನೆ, ಜನರು ಧರ್ಮಪಥದಲ್ಲಿ ಶ್ರದ್ಧೆಯಿಂದ ಸಾಗುವಂತೆ ಅನುವು ಮಾಡಿಕೊಡುತ್ತಾನೆ. ಅವನೇ ತತ್ತ್ವದ ಪಥದರ್ಶಿ’. ಭಗವಾನ್ ಶ್ರೀಕೃಷ್ಣನು ನಿಷ್ಕಾಮತತ್ತ್ವ, ಬುದ್ಧನು ತ್ಯಾಗತತ್ತ್ವ, ಶ್ರೀಶಂಕರಾಚಾರ್ಯರು ಜ್ಞಾನವನ್ನು, ಶ್ರೀಚೈತನ್ಯ ಮಹಾಪ್ರಭು ದಿವ್ಯಪ್ರೇಮವನ್ನು ಕುರಿತು ಬೆಳಕು ಚೆಲ್ಲಿದ್ದಾರೆ. ನವಾವತಾರಿ ಶ್ರೀರಾಮಕೃಷ್ಣರು ಈ ‘ಎಲ್ಲ’ ಆದರ್ಶಗಳ ಸಮನ್ವಯವನ್ನು ಅನುಗ್ರಹಿಸಿದ್ದೇ ಅವರು ಜಗತ್ತಿಗಿತ್ತ ಬೋಧನಾ ವೈಶಿಷ್ಟ್ಯ.

ಬ್ರಹ್ಮಸಮಾಜದ ನೇತಾರನೂ, ವಿಕ್ಟೋರಿಯಾ ರಾಣಿಯಿಂದಲೂ ಶ್ಲಾಘಿಸಲ್ಪಟ್ಟ ಕೇಶವಚಂದ್ರಸೇನ, ‘ಶ್ರೀರಾಮಕೃಷ್ಣರನ್ನು ಕಾಣುವುದಕ್ಕೆ ಮೊದಲು ಧರ್ಮ ಎಂದರೇನು ಎಂಬುದು ಗೊತ್ತಿತ್ತೇ ನಮಗೆ?’ ಎಂದಿದ್ದಾನೆ.

1936ರಲ್ಲಿ ಭಗವಾನ್ ಶ್ರೀರಾಮಕೃಷ್ಣರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಹೇಳುತ್ತಾರೆ: ‘ಲಕ್ಷ-ಲಕ್ಷ ಸಾಧಕರ ವಿವಿಧ ಸಾಧನೆಗಳ ಪ್ರವಾಹಗಳು ನಿಮ್ಮಧ್ಯಾನದಲ್ಲಿ ಲೀನವಾಗಿವೆ. ನಿಮ್ಮ ಜೀವನದ ಅಸೀಮ ಲೀಲಾಪಥಗಳು ಈ ಜಗತ್ತಿನಲ್ಲಿ ಹೊಸದೊಂದು ತೀರ್ಥಕ್ಷೇತ್ರದ ರೂಪವನ್ನು ತಾಳಿದೆ. ಆ ತೀರ್ಥಕ್ಷೇತ್ರ ದೇಶ-ವಿದೇಶಗಳ ಪ್ರಣಾಮಗಳನ್ನು ಸೆಳೆಯುತ್ತಿದೆ. ಅದಕ್ಕೆ ಇದೋ ನನ್ನ ಪ್ರಣಾಮವನ್ನು ಸೇರಿಸುತ್ತೇನೆ.

ಬಹು ಸಾಧಕೇರ್ ಬಹು ಸಾಧನಾರ್ ಧಾರಾಧ್ಯಾನೆ ತೋಮಾರ್ ಮಿಲಿತ ಹೊಯೆತೆ ತಾರಾ;ತೋಮಾರ್ ಜೀವನೆ ಅಸೀಮೆರ್ ಲೀಲಾಪಥೇನೂತನ್ ತೀರ್ಥ ರೂಪ್ ನಿಲೊ ಎ ಜಗತೆ;ದೇಶವಿದೇಶೇರ್ ಪ್ರಣಾಮ್ ಆನಿಲ ತಾನಿಸೆಥಾಯ್ ಅಮಾರ್ ಪ್ರಣತಿ ದಿಲಾಮ್ ಆನಿ’.

ಬಂಗಾಳದ ಕ್ರಾಂತಿಕಾರಿ ಕವಿ ಕಾಜಿ ನಸರುತ್ ಇಸ್ಲಾಂ ಶ್ರೀರಾಮಕೃಷ್ಣರನ್ನು ಕುರಿತು ಹೀಗೆ ಹಾಡಿದ್ದಾನೆ:

ಮಂದಿರೆ ಮಸ್ಜಿದೆ ಗಿರ್​ಜಾಯ್ಪೂಜಿಲೆ ಬ್ರಹ್ಮ ಸಮಶ್ರದ್ಧಾಯ್;ತವ ನಾಮ್ ಮಾಖಾ ಪ್ರೇಮ್ ನಿಕೇತನೇಭರಿಯಾಛೆ ತಾಯ್ ತ್ರಿಸಂಸಾರ್||

‘ದೇವರನ್ನು ನೀವು ದೇವಾಲಯದಲ್ಲಿ ಪೂಜಿಸಿದಷ್ಟೇ ಪ್ರೇಮಭರದಲ್ಲಿ ಚರ್ಚ್​ನಲ್ಲೂ ಪೂಜಿಸಿದಿರಿ, ಮಸೀದಿಯಲ್ಲೂ ಪೂಜಿಸಿದಿರಿ. ಆ ಕಾರಣದಿಂದಲೇ ಇಡೀ ಜಗತ್ತು ನೀವು ಯಾವ ಪ್ರೇಮದ ಸ್ವರೂಪರಾಗಿದ್ದಿರೋ ಅದರಿಂದ ತುಂಬಿ ತುಳುಕುತ್ತಿದೆ’.

ಶ್ರೀರಾಮಕೃಷ್ಣರನ್ನು ಕುರಿತು ರಾಷ್ಟ್ರಕವಿ ಕುವೆಂಪು- ‘ಶ್ರೀರಾಮಕೃಷ್ಣರಷ್ಟು ಸರ್ವಜನ ಸಾಮಾನ್ಯ ರೂಪದಲ್ಲಿ, ಇಷ್ಟು ಸರ್ವಸುಲಭ ರೂಪದಲ್ಲಿ ಭಗವಂತ ಎಂದೂ ಅವತರಿಸಿರಲಿಲ್ಲ, ಭಗವದ್ವಾಣಿ ತಾನೆಂದೂ ಕೃತಿಗೊಂಡಿರಲಿಲ್ಲ...’ ಎಂದಿದ್ದಾರೆ.

ಶ್ರೀರಾಮಕೃಷ್ಣರು, ‘ಎಷ್ಟು ಮತಗಳೋ ಅಷ್ಟು ಪಥಗಳು’ ಎಂದು ಸಾರಿ, ಸಂಕುಚಿತತೆಯನ್ನು ಮೆಟ್ಟಿ ಸಮನ್ವಯತೆಯ ವಿಶಾಲ ಮನೋಭಾವದ ಅವಶ್ಯಕತೆಯನ್ನು ಜಗತ್ತಿಗೆ ಅರುಹಿದರು. ಅವರ ಸಮನ್ವಯತತ್ತ್ವ ರಾಷ್ಟ್ರೀಯ ಭಾವೈಕ್ಯವನ್ನು ಮೂಡಿಸಿದೆ. ಜಾಗತಿಕ ಶಾಂತಿಯನ್ನು ಪ್ರತಿಷ್ಠಾಪಿಸಿದೆ. ಅಲ್ಲದೆ ಪ್ರತಿಯೊಬ್ಬ ವ್ಯಕ್ತಿಯೂ ಭಕ್ತಿ, ಜ್ಞಾನ, ವಿವೇಕ ಮತ್ತು ವೈರಾಗ್ಯಗಳ ಸಮನ್ವಯ ಆದರ್ಶವನ್ನು ಸಾಧಿಸಿ ದಿವ್ಯತೆಯ ಹಂತಕ್ಕೇರಲು ಬೆಳಕು ಚೆಲ್ಲುತ್ತದೆ.

ದ್ವಾಪರ ಯುಗದಲ್ಲಿ ಸಮಸ್ತ ಜನಕೋಟಿಯ ಪ್ರತಿನಿಧಿಯಾಗಿ ಅರ್ಜುನನು ಶ್ರೀಕೃಷ್ಣನನ್ನು ಪರಿಪರಿಯಾಗಿ ಪ್ರಶ್ನಿಸಿ, ಪರಿಹಾರೋಪಾಯಗಳನ್ನು ಪಡೆದ. ಶ್ರೀಕೃಷ್ಣನ ದಿವ್ಯ ಬೋಧನೆಯ ಈ ಭಗವದ್ಗೀತೆಯನ್ನು ಕುರಿತು, "It is a heroic message from a heroic teacher to a heroic pupil' ಎಂದಿದ್ದಾರೆ ವಿಶ್ವಖ್ಯಾತಿಯ ಸಂತ ಸ್ವಾಮಿ ರಂಗನಾಥಾನಂದರು. ಕಲಿಯುಗದಲ್ಲಿ ದೇವರ ಅಸ್ತಿತ್ವದ ಕುರಿತು ಪ್ರಮಾಣವನ್ನು ಬಯಸಿದ ಸ್ವಾಮಿ ವಿವೇಕಾನಂದರಿಗೆ ಶ್ರೀರಾಮಕೃಷ್ಣರು, ‘ಹೌದು ನರೇನ್, ನಾನು ದೇವರನ್ನು ಕಂಡಿದ್ದೇನೆ, ನಿನ್ನನ್ನು ಕಾಣುತ್ತಿದ್ದೇನಲ್ಲ, ಅಷ್ಟೇ ಸ್ಪಷ್ಟವಾಗಿ ಕಂಡಿದ್ದೇನೆ. ನಿನ್ನೊಂದಿಗೆ ಮಾತನಾಡುತ್ತಿದ್ದೇನಲ್ಲ, ಇನ್ನೂ ಸ್ಪಷ್ಟವಾಗಿ ಅವನೊಂದಿಗೆ ಮಾತನಾಡಿದ್ದೇನೆ, ನಾನು ನಿನಗೂ ದೇವರನ್ನು ತೋರಿಸಬಲ್ಲೆ...’ ಎಂದಿತ್ತ ಸಂದೇಶ ಆಚಂದ್ರಾರ್ಕವಾದದ್ದು.

ಶ್ರೀರಾಮಕೃಷ್ಣರದ್ದು ಅತ್ಯಂತ ಸರಳ ಜೀವನ. ಅವರ ಕಠೋರ ಸತ್ಯನಿಷ್ಠೆ ವೈಜ್ಞಾನಿಕ ಯುಕ್ತಿಯನ್ನೂ ಬೆರಗುಗೊಳಿಸುವಂಥದ್ದು! ಅವರ ವ್ಯಾಕುಲತೆ ಅಪೂರ್ವವಾದದ್ದು. ವಿದ್ಯಾರ್ಥಿದೆಸೆಯಲ್ಲಿ ಇತರ ಯುವಕರ ಮನೋಧರ್ಮಕ್ಕಿಂತ ಭಿನ್ನವಾಗಿ ಶ್ರೀರಾಮಕೃಷ್ಣರು, ‘ನನಗೆ ಅಕ್ಕಿ, ಬಾಳೆಕಾಯಿ ಗಂಟು ಕಟ್ಟುವ ವಿದ್ಯೆ ಬೇಡ. ಯಾವುದು ಮನುಷ್ಯನಿಗೆ ತನ್ನ ಜೀವನದ ಚರಮಧ್ಯೇಯವಾದ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವಲ್ಲಿ್ಲ ನೆರವಾಗುವುದೋ ಅಂತಹ ವಿದ್ಯೆ ಬೇಕು’ ಎಂದರು. ಅವರು ತಮ್ಮ ಜೀವನದಲ್ಲಿ, ‘ಮೊದಲು ಆಚರಣೆ, ನಂತರ ಬೋಧನೆ’ ಎಂಬ ನಿಯಮವನ್ನು ಸಾಕ್ಷಾತ್ತಾಗಿ ಪಾಲಿಸಿದವರು. ದೇವರೆಂದರೆ ಭಕ್ತರು ಕೇಳಿದ್ದನ್ನೆಲ್ಲ ತತ್​ಕ್ಷಣವೇ ಕೊಡುವವನಲ್ಲ. ಯಾರಿಗೆ ಯಾವುದನ್ನು ಯಾವಾಗ ಕೊಟ್ಟರೆ ಅವರಿಗೆ ಅದರಿಂದ ಒಳ್ಳೆಯದಾಗುತ್ತದೆಯೋ ಅದನ್ನು ಕೊಡುತ್ತಾನೆ ಎಂಬುದನ್ನು ತೋರಿದರು.

ತಮ್ಮ ಹಿಂದಿನ ಅವತಾರಗಳ ಅನುಭವದಲ್ಲಿ ಮತ್ತು ಸಮಾಜವನ್ನು ಸರಿದಾರಿಯಲ್ಲಿ ನಡೆಸಲು ಮಾರ್ಗದರ್ಶನ ನೀಡಬೇಕಾದ ಶ್ರೇಷ್ಠರಲ್ಲಿರಬೇಕಾದ ಶಕ್ತಿ, ಸತ್ತ್ವ ಮತ್ತು ಬದ್ಧತೆಯನ್ನು ಶ್ರೀರಾಮಕೃಷ್ಣರ ಜೀವನ ಬಿಂಬಿಸುತ್ತ ಯಶಸ್ವಿಯಾಗಿದೆ. ಆದ್ದರಿಂದಲೇ ತಮ್ಮ ಸಾಧನೆ ಮತ್ತು ಬೋಧನೆಯ ವೈಶಿಷ್ಟ್ಯದಿಂದ ಅವತಾರಗಳ ಸಮೂಹದಲ್ಲಿ ಶ್ರೀರಾಮಕೃಷ್ಣರು ‘ಅವತಾರಶೃಂಗ’ ಎಂದೆನಿಸುತ್ತಾರೆ.

ಶ್ರೀರಾಮಕೃಷ್ಣರನ್ನು ಕುರಿತು ಪುಸ್ತಕ ಬರೆಯಬೇಕೆಂಬ ಆಶಯ ಹೊಂದಿದ್ದ ಪ್ರೊ.ಮ್ಯಾಕ್ಸ್​ಮುಲ್ಲರ್ ಸ್ವಾಮಿ ವಿವೇಕಾನಂದರನ್ನು ಶ್ರೀರಾಮಕೃಷ್ಣರ ಕುರಿತು ಮಾಹಿತಿಗಳನ್ನು ಕೇಳಲು ಮುಂದಾದಾಗ, ಸ್ವಾಮಿ ವಿವೇಕಾನಂದರು ತಮ್ಮ ಸೋದರ ಸಂನ್ಯಾಸಿ ಸ್ವಾಮಿ ಶಾರದಾನಂದರಿಗೆ ಪತ್ರ ಬರೆಯುತ್ತ,

“Dear Sharath, please send some information about our Gurudev to Prof. Max Muller. You may feel surprised to my request when I am very much in London! No doubt I can give some information about Sri Ramakrishna. But I will not stop until I prove that there was never a personage born like Sri Ramakrishna nor will there be in future. It will become too much for the old man to digest!”.

ಬೋಧನಾ ವೈಶಿಷ್ಟ್ಯ

ಮೂರ್ತಿಪೂಜೆ: ಭಗವದ್ರೂಪಗಳನ್ನು ಒಪ್ಪಬೇಕು. ಆಕಾರಗಳು ಭಕ್ತರಿಗಾಗಿ ಮಾತ್ರವೇ. ಆದರೆ ಜ್ಞಾನಸೂರ್ಯ ಉದಯಿಸಿದ ನಂತರ ಹಿಮಗಡ್ಡೆಗಳೆಲ್ಲ ಕರಗಿ ನೀರಾಗುತ್ತವೆ. ತಾಯಿ ತನ್ನ ಮಕ್ಕಳ ಜೀರ್ಣಶಕ್ತಿಗೆ ಅನುಸಾರವಾಗಿ ಆಹಾರ ತಯಾರಿಸುವಂತೆ ಭಗವಂತನೇ ಭಕ್ತರಿಗಾಗಿ ವಿವಿಧ ಪೂಜಾ ವಿಧಾನಗಳನ್ನು ರೂಪಿಸಿದ್ದಾನೆ. ತಂದೆಯ ಭಾವಚಿತ್ರ ತಂದೆಯನ್ನೇ ನೆನಪಿಸುವಂತೆ ಪ್ರತಿಮಾ ಪೂಜೆ ಮಾಡುತ್ತ ಶ್ರದ್ಧೆಯಿಂದ ಮುಂದುವರಿದಂತೆ, ಸತ್ಯದ ರೂಪ ಉದ್ದೀಪನವಾಗುತ್ತದೆ.

ಗೃಹಸ್ಥನ ಕರ್ತವ್ಯಗಳು: ಸಂಸಾರ, ದೋಷವಾದುದೇನಲ್ಲ. ಆದರೆ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಬೇಕು. ಒಂದು ಕೈಯಲ್ಲಿ ಕೆಲಸ ಮಾಡಿ, ಇನ್ನೊಂದು ಕೈಯಲ್ಲಿ ಭಗವಂತನನ್ನು ಬಲವಾಗಿ ಹಿಡಿದುಕೊಳ್ಳಿ. ಕೆಲಸ ಮುಗಿದ ಮೇಲೆ ಎರಡೂ ಕೈಗಳಿಂದ ಭಗವಂತನನ್ನು ಹಿಡಿದುಕೊಳ್ಳಿ. ಬಂಧುಬಾಂಧವರಲ್ಲಿಡುವ ಪ್ರೀತಿಯೇ ಮಾಯೆ. ಸರ್ವಭೂತಗಳಲ್ಲಿಡುವ ಒಂದೇ ಸಮನಾದ ಪ್ರೀತಿಯೇ ದಯೆ. ಗೃಹಸ್ಥನಿಗೆ ದೇವಋಣ, ಋಷಿಋಣಗಳಲ್ಲದೇ ಪತ್ನಿಋಣವೂ ಇದೆ. ಹೆತ್ತ ತಾಯಿ ಗುರು, ಬ್ರಹ್ಮಮಯೀ. ಆದ್ದರಿಂದ ಅವಳ ಮೇಲೂ ಧ್ಯಾನ ಮಾಡಬಹುದು, ಧ್ಯಾನ ಮಾಡಬೇಕಾದ್ದೇ.

ಜೀವನೋದ್ದೇಶ: ದುರ್ಲಭವಾದ ಮಾನವಜನ್ಮದ ಉದ್ದೇಶ ಧನಾರ್ಜನೆಯಲ್ಲ, ಭಗವಂತನ ಸೇವೆ. ಧನಾರ್ಜನೆ ಭಗವಂತನ ಸೇವೆಗೆ ಅನುವು ಮಾಡಬಹುದಾದರೆ ಅದು ದೋಷವಲ್ಲ. ಮನುಷ್ಯನು ತನ್ನ ಕರ್ತವ್ಯಗಳನ್ನು ಎಷ್ಟೋ ವೇಳೆ ನಿಷ್ಕಾಮಭಾವದಿಂದ ಮಾಡುತ್ತಿದ್ದೇನೆಂದು ತಿಳಿದರೂ ಅದು ಸಕಾಮಕರ್ಮವಾಗಿರುತ್ತದೆ! ಅತಿಯಾದ ದಾನ-ಧರ್ಮಗಳನ್ನು ಮಾಡಲು ಹೋಗಿ ಕೊನೆಗೆ ಲೋಕಮಾನ್ಯನಾಗಬೇಕೆಂಬ ಇಚ್ಛೆ ಬಂದುಬಿಡುತ್ತದೆ. ಭಗವಂತನ ಸಾಕ್ಷಾತ್ಕಾರಕ್ಕೆ ಕೆಲಸ ಎಂಬುದು ಕೇವಲ ಸಾಧನವಷ್ಟೇ. ಅತಿಯಾದ ಬಾಹ್ಯಾಚರಣೆ ನಿರರ್ಥಕ; ವಿವೇಕಶೂನ್ಯ ಪಾಂಡಿತ್ಯವೂ ನಿಷ್ಪ ್ರೊಜಕ!

ಜಾತಿಪದ್ಧತಿ: ಜಾತಿಭೇದವನ್ನು ಭಕ್ತಿಮಾರ್ಗದಿಂದ ತೆಗೆದುಹಾಕಿಬಿಡಬಹುದು. ಭಕ್ತರಿಗೆ ಜಾತಿಯಿಲ್ಲ. ಭಕ್ತಿ ದೇಹ, ಮನಸ್ಸು, ಆತ್ಮಗಳನ್ನು ಶುದ್ಧವಾಗಿಸಿಬಿಡುತ್ತವೆ. ಸತ್ತಪ್ರಾಣಿಯ ಚರ್ಮವು ಅಪವಿತ್ರ. ಆದರೆ ಅದು ಹದವಾದ ಮೇಲೆ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಬಹುದು!

‘ಕಣ್ಣುಮುಚ್ಚಿ ದೈವವನ್ನು ಕಾಣುವುದಕ್ಕಿಂತ ಕಣ್ಣು ತೆರೆದು ದೇವರನ್ನು ನೋಡು. ನೀನು ದೇವರನ್ನು ನಂಬುವುದಕ್ಕಿಂತ ಅಧಿಕವಾಗಿ ನಿನ್ನನ್ನು ನೀನು ನಂಬುವುದೇ ನಿನ್ನ ಆಸ್ತಿಕತೆಗೆ ಹೆಚ್ಚಿನ ಅಡಿಪಾಯ’ ಎಂದ ಶ್ರೀರಾಮಕೃಷ್ಣರನ್ನು ವಿವರಿಸುತ್ತ ಧರ್ಮ-ಅಧ್ಯಾತ್ಮಗಳನ್ನು ದೂಷಿಸಿ ದ್ವೇಷಿಸುವ ಬುದ್ಧಿಜೀವಿಗಳನ್ನು ಸ್ವಾಮಿ ವಿವೇಕಾನಂದರು ಎಚ್ಚರಿಸಿದ್ದು ಹೀಗೆ:“Carry your rationalism to its end! Don’t be a partial rationalist, be a complete rationalist!” ಹೌದಲ್ಲವೇ?

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net