ರಾಷ್ಟ್ರಪ್ರಜ್ಞೆಯ ಉದ್ದೀಪಕಳಾಗಿ ಸೋದರಿ ನಿವೇದಿತಾ

Column
Published on
ಭಾರತದ ಇತಿಹಾಸದಲ್ಲಿ ಸೋದರಿ ನಿವೇದಿತಾಳ ಪ್ರವೇಶ ದೇಶದ ಮೇಧಾಶಕ್ತಿಸಂಪನ್ನ ಪ್ರತಿಭೆಯನ್ನು ಉದ್ದೀಪಿಸುವ ಮಹಾಸ್ಪೂರ್ತಿಯನ್ನು ಪ್ರತಿನಿಧಿಸುತ್ತದೆ. ತ್ಯಾಗ, ರಾಷ್ಟ್ರಪ್ರೇಮಗಳೆಂಬ ಉಜ್ವಲ ಧ್ಯೇಯಗಳನ್ನು ನಮ್ಮ ಮುಂದಿಡುತ್ತದೆ. ರಾಷ್ಟ್ರನಿರ್ಮಾಣಕ್ಕಾಗಿ ಪ್ರೇರಣೆ ನೀಡುತ್ತದೆ.

ಸೋದರಿ ನಿವೇದಿತಾ ಭಾರತವನ್ನು ಹೃದಯಾಂತರಾಳದಿಂದ ಪ್ರೀತಿಸಿದಳು. ಭಾರತೀಯರೊಡನೆ ಒಂದಾಗಿ ಬೆರೆತಳು. ಈ ದೇಶದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಉದ್ದೀಪಿಸಲು ದೃಢಸಂಕಲ್ಪಭರಿತಳಾಗಿದ್ದಳು. ಈ ಅಸೀಮ ಭಾರತಪ್ರೇಮವು ಅವಳ ಗುರುದೇವನಿಂದ ಬಂದ ಬಳುವಳಿಯಾಗಿತ್ತು. ಭಾರತೀಯ ಸಂಸ್ಕೃತಿ ಕುರಿತಂತೆ ನಿವೇದಿತಾ ಬರೆದಿರುವ ಪುಸ್ತಕಗಳಲ್ಲಿ ಅವಳ ಆತ್ಮಚೈತನ್ಯದ ಮಾಧುರ್ಯವನ್ನೂ ಮತ್ತು ತನ್ನ ಹೋರಾಟದ ಮಾರ್ಗದಲ್ಲಿ ಆಕೆಗಿದ್ದ ವಿಶ್ವಾಸ, ನಂಬಿಕೆಗಳನ್ನೂ ಕಾಣಬಹುದು. ಭಾರತೀಯರು ನಿವೇದಿತಾಳನ್ನು ಪ್ರಬುದ್ಧ ಹಿರಿಯಳಾಗಿ ಮತ್ತು ನಾಯಕಿಯಾಗಿ ಗುರುತಿಸಿ ಗೌರವಿಸಿದರು. ತನ್ನ ಪಾವಿತ್ರ್ಯ, ಪರಿಶುದ್ಧ ಚಾರಿತ್ರ್ಯ, ಕಷ್ಟನಷ್ಟಗಳ ನಡುವೆ ಅವಳು ಬಾಳಿದ ವೈರಾಗ್ಯದ ಜೀವನ ಅಸಾಧಾರಣ. ಈ ಎಲ್ಲ ಅಂಶಗಳೂ ನಿವೇದಿತಾಳನ್ನು ಧೀರೋದಾತ್ತ ನಾಯಕಿಯನ್ನಾಗಿ ಮಾಡಿವೆ. ಅದ್ಭುತ ಮೇಧಾಶಕ್ತಿ ಮತ್ತು ಚಾರಿತ್ರ್ಯಗಳಿಂದ ಅನೇಕ ಚಿಂತಕರ ಮೇಲೆ ಅವಳು ಆಳವಾದ ಪ್ರಭಾವವನ್ನು ಬೀರಿದಳು. ಸೋದರಿ ನಿವೇದಿತಾಳ ಜೀವನ ಮತ್ತು ಕೃತಿಗಳ ಅಧ್ಯಯನದಿಂದ ರಚನಾತ್ಮಕ, ಧನಾತ್ಮಕ, ವೈಜ್ಞಾನಿಕ ಮತ್ತು ಉನ್ನತ ಆಯಾಮಗಳಿಂದ ಭಾರತೀಯ ಸಂಸ್ಕೃತಿಯನ್ನು ಅರಿಯಬಹುದು. ವಿವೇಕಪೂರ್ಣವೂ, ವೈಜ್ಞಾನಿಕ ದೃಷ್ಟಿಕೋನವೂ ಆಗಿ ಸಂವೇದನಾಶೀಲವಾಗಿರುವ ಪ್ರಾಯೋಗಿಕ ಮತ್ತು ಪ್ರಗತಿಶೀಲವಾಗಿರುವ ಮನಸ್ಸು ಮಾತ್ರವೇ ಭಾರತೀಯ ಸಂಸ್ಕೃತಿಯ ಅಮೂಲ್ಯ ಅಂಶಗಳನ್ನು ಗ್ರಹಿಸಬಲ್ಲದು. ಆ ವಿವೇಕ ಬುದ್ಧಿ, ಧಾನ್ಯವನ್ನು ಹೊಟ್ಟಿನಿಂದ ಬೇರ್ಪಡಿಸುವಂತೆ, ಅಗತ್ಯವಾದ ಸಾರವನ್ನು ಅನಗತ್ಯವಾದ ಜೊಳ್ಳಿನಿಂದ ಪ್ರತ್ಯೇಕಿಸಬಲ್ಲದು; ಮನುಕುಲದ ಉತ್ತಮ ಭವಿಷ್ಯಕ್ಕಾಗಿ ತನ್ನ ಕಾಣಿಕೆಯನ್ನು ನೀಡಬಲ್ಲದು. ಭಾರತದ ಇತಿಹಾಸದಲ್ಲಿ ನಿವೇದಿತಾಳ ಪ್ರವೇಶ ದೇಶದ ಮೇಧಾಶಕ್ತಿಸಂಪನ್ನ ಪ್ರತಿಭೆಯನ್ನು ಉದ್ದೀಪಿಸುತ್ತ ಮಹಾ ಸ್ಪೂರ್ತಿಯನ್ನು ಪ್ರತಿನಿಧಿಸುತ್ತದೆ. ತ್ಯಾಗ, ರಾಷ್ಟ್ರಪ್ರೇಮಗಳೆಂಬ ಉಜ್ವಲ ಧ್ಯೇಯಗಳನ್ನು ನಮ್ಮ ಮುಂದಿಡುತ್ತದೆ.

ಸೋದರಿ ನಿವೇದಿತಾಳ ಕೃತಿಗಳು: ಭಾರತೀಯ ಸಂಸ್ಕೃತಿಯ ಆಶೋತ್ತರಗಳೊಡನೆ ನಿವೇದಿತಾ ತಾದಾತ್ಮ್ಯ ಹೊಂದಿದ್ದಳು. ಆಕೆಯ ಕೃತಿಗಳಾದ ‘ಹಿಂದುಸ್ಥಾನದ ತೊಟ್ಟಿಲ ಕಥೆಗಳು’, (Cradle Tales of Hinduism) ‘ಭಾರತದ ಇತಿಹಾಸದ ಹೆಜ್ಜೆಗುರುತುಗಳು’ (Footfalls of Indian History) ಮತ್ತು ವಿಶೇಷವಾಗಿ ‘ಕಾಳಿಮಾತಾ’ ಮುಂತಾದವು ನಮ್ಮ ಸಂಸ್ಕೃತಿಯ ಔಚಿತ್ಯ ಮತ್ತು ಪ್ರಾಮುಖ್ಯ ವನ್ನು ಪರಿಣಾಮಕಾರಿಯಾಗಿ ಬಿಂಬಿಸಿವೆ. ನಿವೇದಿತಾಳ ಅಗಾಧವಾದ ತ್ಯಾಗ ಮತ್ತು ಆಳವಾದ ಸಮರ್ಪಣಾಭಾವಗಳಿಗೆ ಭಾರತವು ಪ್ರತಿಯಾಗಿ ಏನನ್ನಾದರೂ ನೀಡುವುದು ನಿಜವಾಗಿಯೂ ಅಸಾಧ್ಯ. ಪೂರ್ವ-ಪಶ್ಚಿಮಗಳ ಶ್ರೇಷ್ಠ ಮೌಲ್ಯಗಳ ಸಂಗಮವಾದ ಆಕೆಯ ಜೀವಂತ ನಿದರ್ಶನವನ್ನು ಭಾರತೀಯ ಮಹಿಳೆಯರಿಗಾಗಿ ಮತ್ತು ಸ್ತ್ರೀ ಸಬಲೀಕರಣದ ಯಶಸ್ಸಿಗಾಗಿ ಆಧುನಿಕ ಸಂದರ್ಭದಲ್ಲಿ ಬಳಸಬೇಕಾಗಿದೆ.

ನೇತಾಜಿ ಸುಭಾಷ್​ಚಂದ್ರ ಬೋಸ್ ನಿವೇದಿತಾಳನ್ನು ಕುರಿತು ಹೇಳಿದ ಮಾತಿದು: ‘ವಿವೇಕಾನಂದರನ್ನು ಅಧ್ಯಯನ ಮಾಡಿ ನಾನು ಭಾರತವನ್ನು ಪ್ರೀತಿಸಲು ಕಲಿತೆ, ಮತ್ತು ನಿವೇದಿತಾಳ ಕೃತಿಗಳ ಮೂಲಕ ವಿವೇಕಾನಂದರನ್ನು ನಿಜವಾಗಿ ಅರ್ಥಮಾಡಿಕೊಂಡೆ’. ಗುರುದೇವ ರವೀಂದ್ರನಾಥ ಟ್ಯಾಗೋರ್ ಬರೆಯುತ್ತಾರೆ: ‘ಜನಸಾಮಾನ್ಯರ ಸೇವೆಗಾಗಿ ಹೃದಯವನ್ನೇ ಸಮರ್ಪಿಸುವುದು ಅದೆಷ್ಟು ಶ್ರೇಷ್ಠವಾದುದೆಂದು ನಿವೇದಿತಾಳಿಂದ ನಾವು ಅರಿತೆವು’. ತತ್ತ್ವಜ್ಞಾನಿಯೂ, ವಿಜ್ಞಾನಿಯೂ ಆಗಿದ್ದ ಡಾ. ಜಗದೀಶ್ ಚಂದ್ರ ಬೋಸರನ್ನು ನಿವೇದಿತಾ ಪ್ರೋತ್ಸಾಹಿಸಿ ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗುವಂತೆ ಮಾಡಿ, ಆರ್ಥಿಕ ನೆರವನ್ನೂ ನೀಡಿದಳು. ಬ್ರಿಟಿಷ್ ಸರ್ಕಾರ ಇಂತಹ ಸಂಶೋಧನೆಗಳ ಕುರಿತು ತಟಸ್ಥವಾಗಿದ್ದ ಸಂದರ್ಭದಲ್ಲಿ, ಬೋಸರ ಕಾರ್ಯಗಳೆಡೆಗೆ ಅದರ ಗಮನ ಸೆಳೆದು ಅವರಿಗೆ ಮಾನ್ಯತೆ ಸಿಗುವಂತೆ ಮಾಡಿದಳು. ಆಕೆಯ ಸಹಾಯದ ಕುರಿತಂತೆ ರವೀಂದ್ರನಾಥ ಟ್ಯಾಗೋರ್ ಹೇಳುತ್ತಾರೆ: ‘ತನ್ನ ಯಶಸ್ಸಿನ ದಿನಗಳಲ್ಲಿ, ಜಗದೀಶ್ ಒಬ್ಬ ಶಕ್ತಿವಂತ ಸಹಾಯಕಿಯನ್ನು ಸೋದರಿ ನಿವೇದಿತಾಳಾಗಿ ಪಡೆದ. ಆತನ ಬದುಕಿನ ಘಟನೆಗಳನ್ನು ದಾಖಲಿಸುವಾಗ ಆಕೆಗೆ ಗೌರವಾನ್ವಿತ ಸ್ಥಾನವನ್ನು ನೀಡಬೇಕು’. ಜೆಮ್ೆಡ್​ಜೀ ಟಾಟಾ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ(IISc)ಯನ್ನು ಸ್ಥಾಪಿಸುವಲ್ಲಿ ಮತ್ತು ಈ ಸಂಸ್ಥೆಗೆ ಬ್ರಿಟಿಷ್ ಸರ್ಕಾರದ ಮಾನ್ಯತೆ ದೊರಕಲು ನಿವೇದಿತಾ ಸಕ್ರಿಯವಾಗಿ ನೆರವಾದಳು. ರಾಷ್ಟ್ರಪ್ರಜ್ಞೆ ಜಾಗೃತಗೊಳಿಸಲು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಲು ಅರವಿಂದ ಘೊಷರು ಸ್ಥಾಪಿಸಿದ್ದ ರಾಜಕೀಯ ಸಮಿತಿಯ 5 ಸದಸ್ಯರಲ್ಲಿ ಒಬ್ಬಳಾಗಿದ್ದಳು ನಿವೇದಿತಾ. ಅವನೀಂದ್ರನಾಥ ಟ್ಯಾಗೋರ್, ಆನಂದ ಕುಮಾರಸ್ವಾಮಿ ಮತ್ತು ಹ್ಯಾವೆಲ್​ರಂಥ ಕಲಾವಿದರನ್ನು ಸಂರ್ಪಸಿದ ನಿವೇದಿತಾ ಭಾರತೀಯ ಕಲಾವಿಭಾಗದ ಶುದ್ಧ ಸಂಪ್ರದಾಯವನ್ನು ಮುಂದುವರಿಸುವಂತೆ ಸ್ಪೂರ್ತಿ ನೀಡಿದಳು. ನಂದಲಾಲ್ ಬೋಸ್, ಅಸಿತ್​ಕುಮಾರ್ ಹಾಲ್ದಾರ್, ಸುರೇಂದ್ರನಾಥ ಗಂಗೋಪಾಧ್ಯಾಯ ಮುಂತಾದ ಕಲ್ಕತ್ತಾದ ಕಲಾಶಾಲೆಯ ಪ್ರತಿಭಾನ್ವಿತರಿಗೆ ಪುರಾತನ ಭಾರತೀಯಕಲೆಗಳ ಪುನರುಜ್ಜೀವನಕ್ಕಾಗಿ ಶ್ರಮಿಸುವಂತೆ ಮಾರ್ಗದರ್ಶನ ಮಾಡಿದಳು. ತಮಿಳುನಾಡಿನ ಹೆಸರಾಂತ ಕವಿ ಸುಬ್ರಹ್ಮಣ್ಯ ಭಾರತಿ ಮೇಲೆ ಆಳವಾದ ಪ್ರಭಾವ ಬೀರಿದಳು. ಭಾರತೀಯ ಸ್ತ್ರೀಯರ ವಿಮೋಚನೆಗಾಗಿ ದುಡಿಯುವಂತೆ ಸುಬ್ರಹ್ಮಣ್ಯ ಭಾರತಿಯನ್ನು ಪ್ರೇರೇಪಿಸಿದಳು. ಆ ಧ್ಯೇಯಕ್ಕಾಗಿ ಇಡೀ ಜೀವನ ಹೋರಾಡಿದರು ಆ ಕವಿ.

‘ಭಾರತದಲ್ಲಿ ಯಾವ ಬಗೆಯ ಕಾರ್ಯವನ್ನು ಮಾಡುವಿರಿ?’ ಎಂದು ಒಬ್ಬರು ನಿವೇದಿತಾಳನ್ನು ಕೇಳಿದರಂತೆ. ಅದಕ್ಕೆ ಆಕೆ ನೀಡಿದ ಉತ್ತರದಲ್ಲಿ ಅವಳ ಬಾಳಿನ ರಹಸ್ಯವೇ ಅಡಗಿರುವಂತಿದೆ: ‘ನನ್ನ ಜೀವನವನ್ನು ಭಾರತಮಾತೆಗೆ ಸಮರ್ಪಿಸಿದ್ದೇನೆ. ಅವಳಿಗಾಗಿ ಬಾಳುತ್ತೇನೆ, ಅವಳಿಗಾಗಿ ಮಡಿಯುತ್ತೇನೆ. ಭರತವರ್ಷ ಅಖಂಡವಾಗಿ ಒಂದೆಂದು ನನ್ನ ಪರಮ ವಿಶ್ವಾಸ. ರಾಷ್ಟ್ರೀಯ ಐಕ್ಯತೆಯನ್ನು ಸರ್ವರ ಒಳಿತು ಮತ್ತು ಪ್ರೇಮದ ಆಭಾರದಲ್ಲಿ ನಿರ್ವಿುಸಬೇಕು. ವೇದೋಪನಿಷತ್ತುಗಳಲ್ಲಿ ಅಭಿವ್ಯಕ್ತವಾಗಿರುವ, ಧರ್ಮ ಮತ್ತು ಸಾಮ್ರಾಜ್ಯಗಳನ್ನು ನಿರ್ವಿುಸಿದ, ವಿದ್ವಾಂಸರ ವಿದ್ವತ್ತು ಮತ್ತು ಸಂತರ ಧ್ಯಾನದಲ್ಲಿ ಸುಪ್ತವಾಗಿರುವ ಮಹಾಶಕ್ತಿಯೇ ಮರಳಿ ಈಗ ನಮ್ಮ ನಡುವೆ ಪ್ರಕಾಶಗೊಳ್ಳುತ್ತಿದೆ. ಇಂದು ಅದರ ಹೆಸರು ರಾಷ್ಟ್ರೀಯತೆ’.

ಭಾರತದ ವರ್ತಮಾನವು ಅವಳ ಭೂತಕಾಲದ ಹಿರಿಮೆಯಲ್ಲಿ ಪ್ರತಿಷ್ಠವಾಗಿದೆಯೆಂದೂ, ಅವಳಿಗಾಗಿ ಉಜ್ವಲ ಭವಿಷ್ಯ ಕಾಯುತ್ತಿದೆ ಎಂದೂ ನಿವೇದಿತಾಳ ನಂಬಿಕೆಯಾಗಿತ್ತು. ಭಾರತ ಮತ್ತು ಭಾರತೀಯರನ್ನು ಕುರಿತು ಮಾತನಾಡುವಾಗ ಆಕೆ, ‘ನಮ್ಮ’ ದೇಶ, ‘ನಮ್ಮ’ ಜನ ಎನ್ನುತ್ತಿದ್ದಳು. ಬ್ರಿಟಿಷರನ್ನು ಕುರಿತು ಮಾತನಾಡುವಾಗ ‘ಆ’ ದೇಶ, ‘ಆ’ ಜನ ಎನ್ನುತ್ತಿದ್ದಳು. ಶ್ರೀಮಾತೆ ಶಾರದಾದೇವಿ ಹೇಳುತ್ತಾರೆ: ‘ನಿವೇದಿತಾ ಈ ನಾಡಿಗೆ ಸೇರಿದವಳು. ಶ್ರೀರಾಮಕೃಷ್ಣರ ಚಿಂತನೆ ಮತ್ತು ಸಂದೇಶಗಳನ್ನು ಪ್ರಚುರಪಡಿಸಲು ಅಲ್ಲಿ (ಪಶ್ಚಿಮದಲ್ಲಿ) ಜನ್ಮ ತಳೆದಳು’. ಸ್ವಾಮೀಜಿ ನಿವೇದಿತಾಳಲ್ಲಿ ಮಾತೃಹೃದಯ ಮತ್ತು ಧೀರ ಸಂಕಲ್ಪ ಸಮ್ಮಿಳಿತವಾಗಿರುವುದನ್ನು ಕಂಡು ತುಂಬು ಹೃದಯದಿಂದ ಹರಸುತ್ತಾರೆ.

ನಿವೇದಿತಾಳನ್ನು ಭಾರತೀಯರಾದ ನಾವು ಮರೆಯ ಬಹುದೆ?: ಭಾರತೀಯ ಸಂಸ್ಕೃತಿಯ ವಾರಸುದಾರರಾಗಿ ನಾವು ನಿವೇದಿತಾ ಭಾರತಕ್ಕಾಗಿ ಮಾಡಿದ ಸೇವೆ ಮತ್ತು ನೀಡಿದ ಕೊಡುಗೆಗಳನ್ನು ಗುರುತಿಸಲು ವಿಫಲರಾದರೆ ನಮ್ಮ ಕರ್ತವ್ಯದಲ್ಲಿ ಲೋಪವಾಗುವುದು. ‘ಭಾರತವನ್ನು ಜಾಗೃತಗೊಳಿಸುವುದೇ ನನ್ನ ಪ್ರಮುಖ ಕಾರ್ಯ’ ಎಂದು ಆಕೆ ಒಮ್ಮೆ ಹೇಳಿದ್ದಳು. ಅವಳ ಹೆಣ್ಣುಮಕ್ಕಳ ಶಾಲೆಯಲ್ಲಿ ಪ್ರಾರ್ಥನೆಯಾಗಿ ‘ವಂದೇ ಮಾತರಂ’ ಗೀತೆಯನ್ನು ಪರಿಚಯಿಸಿದಳು. 1906ರಲ್ಲಿ ನಿವೇದಿತಾ ನಮ್ಮ ರಾಷ್ಟ್ರಧ್ವಜದ ಮಾದರಿಯನ್ನು ಪೂರ್ವಭಾವಿಯಾಗಿ ಸಿದ್ಧಪಡಿಸಿದ್ದಳು. ಅದರ ಕೇಂದ್ರಸ್ಥಾನದಲ್ಲಿ ವಜ್ರದ ಚಿತ್ರವಿತ್ತು. ಹಿಂದೂಧರ್ಮ ಮತ್ತು ಬೌದ್ಧಧರ್ಮದಲ್ಲಿ ಈ ಸಂಕೇತದ ಮಹತ್ವದ ಕುರಿತು ದೀರ್ಘವಾದ ವಿವರಣೆ ಬರೆದಿದ್ದಳು. ಆಕೆಗೆ ವಜ್ರಾಯುಧದ ಸಂಕೇತದಲ್ಲಿ ಒಲವಿತ್ತು. ಅದು ದಧೀಚಿ ಮುನಿಯ ತ್ಯಾಗ ಮತ್ತು ಆತ್ಮಶಕ್ತಿಯ ಸಂಕೇತವಾಗಿತ್ತು. ಸ್ವಾಮಿ ವಿವೇಕಾನಂದರ ಕೈಯಲ್ಲಿ ಅವಳೇ ಒಂದು ವಜ್ರಾಯುಧವಾಗಿ ಮಾರ್ಪಟ್ಟಳು. ಅವಿರತವಾಗಿ ನಮ್ಮ ನಾಡಿಗಾಗಿ ದುಡಿದ ಅವಳು 44 ವರ್ಷ ವಯಸ್ಸಾದಾಗಲೇ ದೇಹ ಬಿಟ್ಟು ಭಾರತದ ಆತ್ಮದಲ್ಲಿ ಒಂದಾದಳು. ರಾಷ್ಟ್ರದ ಮಹತ್ಕಾರ್ಯದಲ್ಲಿ ನಿಸ್ವಾರ್ಥ ಪುರುಷನು ವಜ್ರಾಯುಧದಂತೆ ಎಂದು ನಿವೇದಿತಾ ಭಾವಿಸಿದ್ದಳು. ಆ ನಿಸ್ವಾರ್ಥತೆಯೇ ರಾಷ್ಟ್ರದ ವಿಮೋಚನೆಗಾಗಿ ಹೋರಾಡುವವರಲ್ಲಿ ಬೆಳೆಯಬೇಕಾಗಿದೆ ಎಂದು ಸಾರಿದಳು.

ಪ್ರಸ್ತುತ ಸಂದರ್ಭದಲ್ಲಿ ಭಾರತೀಯರು ಆತ್ಮಖಂಡನೆಯಲ್ಲಿ ತೊಡಗಿದ್ದಾರೆ. ಇಂತಹ ಉಜ್ವಲ ಸಂಸ್ಕೃತಿಯ ಮಹಿಮೆಯನ್ನು ನಾವು ತಿಳಿಯದಿದ್ದರೆ ನಮ್ಮ ಪ್ರಗತಿ ಕುಂಠಿತವಾಗುತ್ತದೆ. ಈ ಸನ್ನಿವೇಶದಲ್ಲಿ ನಿವೇದಿತಾಳ ಜೀವನ ಮತ್ತು ವ್ಯಕ್ತಿತ್ವದ ಮಹತ್ಕಾರ್ಯಗಳು ನಮ್ಮನ್ನು ಅಜ್ಞಾನದ ನಿದ್ದೆಯಿಂದ ಬಡಿದೆಚ್ಚರಿಸಲಿ.

ಒಮ್ಮೆ ಹಾಲು ಮಾರುವ ಒಬ್ಬ ಶ್ರೀಸಾಮಾನ್ಯ ನಿವೇದಿತಾಳಿಂದ ಧರ್ಮವೆಂದರೇನು ಎಂದು ತಿಳಿಯಲು ಅಪೇಕ್ಷಿಸಿದ. ಆಗ ಆಕೆ ಹೇಳಿದಳು- ‘ನೀವು ಪ್ರಭು ಶ್ರೀಕೃಷ್ಣನ ವಂಶಕ್ಕೆ ಸೇರಿದವರು. ನಾನು ನಿಮಗೆ ನಮಸ್ಕರಿಸುತ್ತೇನೆ. ನನ್ನಿಂದ ಕಲಿಯುವಂತಹದು ನಿಮಗೆ ಏನು ತಾನೇ ಇದೆ?’ ಕವಿ ರವೀಂದ್ರರು ಹೇಳುವಂತೆ, ‘ನಾವು ಅವಳನ್ನು ಗೌರವಿಸಬೇಕಾಗಿರುವುದು ಅವಳು ಹಿಂದೂ ಎಂಬುದಕ್ಕಾಗಿ ಅಲ್ಲ, ಆಕೆ ಒಬ್ಬ ಶ್ರೇಷ್ಠ ವ್ಯಕ್ತಿ ಎಂಬ ಕಾರಣಕ್ಕಾಗಿ’. ಅವರು ನಿವೇದಿತಾಳನ್ನು ‘ಲೋಕಮಾತಾ’ ಎಂದು ಸಂಬೋಧಿಸಿ ಗೌರವಿಸಿದರು. ಅರವಿಂದ ಘೊಷರು ‘ಅಗ್ನಿಶಿಖಾ’ ಎಂದು ಕರೆದರು. ಭಾರತೀಯರಿಗೆ ನಿಜವಾಗಿಯೂ ಅವಳು ಆತ್ಮೀಯ ‘ಸೋದರಿ’, ಸ್ವಾಮಿ ವಿವೇಕಾನಂದರು ನಮಗೆ ಕೊಟ್ಟ ವಿಶಿಷ್ಟ ಉಡುಗೊರೆ.

ಸನಾತನ ಭಾರತೀಯ ಸಂಸ್ಕೃತಿ ಕುರಿತು ಸೋದರಿ ನಿವೇದಿತಾ ದಾಖಲಿಸಿದ ಮಾತುಗಳು ಸನಾತನ ಧರ್ಮದ ನಿಜವಾದ ಮಹಿಮೆ ಮತ್ತು ಅಂತಃಸತ್ವವನ್ನು ಸ್ಪುಟವಾಗಿ ತಿಳಿಸುತ್ತವೆ:

‘ನಿರಂತರವಾಗಿ ಬೆಳೆಯದಿದ್ದರೆ, ತನ್ನನ್ನು ತಾನು ವಿಸ್ತರಿಸಿಕೊಳ್ಳದಿದ್ದರೆ, ನೂತನ ಅನುಭವದ ಕ್ಷೇತ್ರಗಳನ್ನು ತನ್ನದಾಗಿ ಜೀರ್ಣಿಸಿಕೊಳ್ಳದಿದ್ದರೆ, ಹಿಂದೂಧರ್ಮ ಶಾಶ್ವತ ಸನಾತನ ಧರ್ಮವಾಗಿ ಉಳಿಯುವುದು ಸಾಧ್ಯವೇ ಆಗುತ್ತಿರಲಿಲ್ಲ. ತನ್ನನ್ನು ತಾನು ನವೀಕರಿಸಿಕೊಳ್ಳುತ್ತ ಜಗತ್ತಿಗೆ ಹೊಂದಿಕೊಳ್ಳುವ ಶಕ್ತಿಯನ್ನು ಈ ಧರ್ಮವು ಉಳಿದೆಲ್ಲ ಧರ್ಮಗಳಿಗಿಂತ ಹಲವು ಪಟ್ಟು ಅಧಿಕವಾಗಿ ಪಡೆದಿದೆ. ಈ ಕಾರಣದಿಂದಾಗಿಯೇ ಇದೊಂದು ಚಿರಂತನ ಶ್ರದ್ಧೆಯಾಗಿದೆ’.

(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net