ಶಿಕ್ಷೆಯಿಂದ ಬಚಾವಾಗಲಿಲ್ಲ...; ‘ದೋಸೆ ದೊರೆ’ಯ ದುರಂತ, ಭಾಗ-2

Aa-kshana
Published on
ರಾಜಗೋಪಾಲ್​ನ ಕುಕೃತ್ಯದ ಬಗ್ಗೆ ಪತ್ರಿಕಾ ಹೇಳಿಕೆ ನೀಡಲು ಜೀವನಜ್ಯೋತಿ ಡೇನಿಯಲ್​ನನ್ನು ಸಂರ್ಪಸಿದಾಗ ಆತ ತನ್ನ ಪತ್ರಕರ್ತ ಗೆಳೆಯನ ಪರಿಚಯ ಮಾಡಿಸುತ್ತೇನೆಂದು ಹೇಳಿ 2001ರ ಅ.18ರ ಸಂಜೆ ಸಾಯಿಬಾಬಾ ದೇವಸ್ಥಾನದ ಬಳಿ ಬರಲು ತಿಳಿಸಿದ. ಜ್ಯೋತಿ, ಶಾಂತಕುಮಾರ್​ನೊಡನೆ ಅಲ್ಲಿಗೆ ಹೋದಾಗ ರಾಜಗೋಪಾಲ್​ನ ಅನುಯಾಯಿಗಳು ಇಬ್ಬರನ್ನೂ ಬಲವಂತದಿಂದ ವಾಹನದಲ್ಲಿ ಕೂರಿಸಿಕೊಂಡು ಚೆನ್ನೈ ಹೊರವಲಯದ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ರಾಜಗೋಪಾಲ್​ನ ಕಾರಿಗೆ ಕರೆದೊಯ್ದು ಜ್ಯೋತಿಯನ್ನು ಬಲವಂತದಿಂದ ಕುಳ್ಳಿರಿಸಿದರು. ಕಾರಿನಲ್ಲಿ ರಾಜಗೋಪಾಲ್​ನ ಜತೆಯಲ್ಲಿ ಜ್ಯೋತಿಯ ಮಾತಾಪಿತರೂ ಕುಳಿತಿದ್ದರು. ‘ನಾವು ಎಲ್ಲಿಗೆ ಹೋಗುತ್ತಿದ್ದೇವೆ, ನನ್ನ ಗಂಡ ಎಲ್ಲಿ’ ಎಂದು ಆಕೆ ಕೇಳಿದಾಗ, ‘ನಾವು ತಿರುಚಿಗೆ ಹೋಗುತ್ತಿದ್ದೇವೆ, ನಿನ್ನ ಗಂಡನೂ ಅಲ್ಲಿಗೇ ಬರುತ್ತಾನೆ, ಹೆದರಬೇಡ’ ಎಂದ ರಾಜಗೋಪಾಲ್. ‘ನೀನು ಪೊಲೀಸ್ ಕಮಿಷನರ್​ಗೆ ನೀಡಿದ ದೂರು ಇಲ್ಲಿದೆ ನೋಡು’ ಎಂದು ಜೆರಾಕ್ಸ್ ಪ್ರತಿಯನ್ನು ತೋರಿಸಿ, ನನಗೆ ಯಾರೂ ಏನನ್ನೂ ಮಾಡುವ ಹಾಗಿಲ್ಲ ಎಂದ. ತನ್ನನ್ನು ಕ್ಷಮಿಸಲು ಜ್ಯೋತಿ ‘ಅಣ್ಣಾಚಿ’ಯನ್ನು ವಿನಂತಿಸಿದಳು.

ಆ ರಾತ್ರಿ ಅವರೆಲ್ಲರೂ ತಿರುಚಿನಾಪಳ್ಳಿಯಲ್ಲಿಯೇ ತಂಗಿದರು. ರಾಜಗೋಪಾಲ್ ಜ್ಯೋತಿಯನ್ನು ಪಾರಪ್ಪಡಿ ಗ್ರಾಮದಲ್ಲಿದ್ದ ಮಂತ್ರವಾದಿಯ ಮನೆಗೆ ಕರೆದೊಯ್ದ. ಭೂತ ಹಿಡಿದಿರುವ ಕಾರಣದಿಂದಲೇ ಆಕೆ ಶಾಂತಕುಮಾರನನ್ನು ಬಿಡಲು ತಯಾರಿಲ್ಲ, ಆ ಭೂತವನ್ನು ತಾನು ಬಿಡಿಸುತ್ತೇನೆ ಎಂದು ಹೇಳಿದ ಮಂತ್ರವಾದಿ ಜ್ಯೋತಿಯ ಮೇಲೆ ಮಾಟಮಂತ್ರಗಳನ್ನು ಮಾಡಿದ. ಮಾರನೆಯ ದಿನ ಎಲ್ಲರೂ ಚೆನ್ನೈಗೆ ವಾಪಸಾದರು. ಅಕ್ಟೋಬರ್ 21ರಂದು ಜ್ಯೋತಿಗೆ ಕರೆ ಮಾಡಿದ ಶಾಂತಕುಮಾರ್ ತನ್ನನ್ನು ಅಪಹರಿಸಿ ಕೊಲೆ ಮಾಡಲು ರಾಜಗೋಪಾಲ್ ಡೇನಿಯಲ್​ಗೆ ಐದು ಲಕ್ಷ ರೂಪಾಯಿ ಕೊಟ್ಟಿದ್ದು, ಡೇನಿಯಲ್​ಗೆ ತನ್ನನ್ನು ಕೊಲ್ಲಲು ಮನಸ್ಸು ಬರದೆ ಮುಂಬೈಗೆ ಓಡಿಹೋಗಲು ತಿಳಿಸಿದನೆಂದು ಹೇಳಿದ. ‘ನೀನು ಕೂಡಲೇ ರೇಲ್ವೆ ನಿಲ್ದಾಣಕ್ಕೆ ಬಾ, ನಾವು ಮುಂಬೈಗೆ ಹೋಗೋಣ’ ಎಂದ. ಇದಕ್ಕೊಪ್ಪದ ಜ್ಯೋತಿ, ‘ರಾಜಗೋಪಾಲ್ ಕ್ಷಮೆಯಾಚಿಸಿದರೆ ಆತ ಸುಮ್ಮನೆ ಬಿಡಬಹುದು’ ಎಂದು ಹೇಳಿ ಅವನನ್ನು ಮನೆಗೆ ಕರೆಸಿದಳು.

ಜ್ಯೋತಿ ಕುಟುಂಬದವರೊಡನೆ ರಾಜಗೋಪಾಲ್ ಮನೆಗೆ ಹೋಗಿ ಅವನ ಕಾಲಿಗೆರಗಿ ನಮ್ಮಿಬ್ಬರನ್ನೂ ನೆಮ್ಮದಿಯಿಂದ ಬಾಳಲು ಬಿಡಿ ಎಂದು ಕೋರಿದಳು. ಆಗ ರಾಜಗೋಪಾಲ್ ಡೇನಿಯಲ್​ನನ್ನು ಕರೆಸಿ ಶಾಂತಕುಮಾರನತ್ತ ಬೊಟ್ಟು ಮಾಡಿ, ‘ಓಡುತ್ತಿರುವ ರೈಲಿನ ಕೆಳಗೆ ಇವನನ್ನು ನೂಕಿ ಕೊಂದೆ ಎಂದೆಯಲ್ಲಾ, ಇಲ್ಲಿರುವುದು ಶಾಂತಕುಮಾರನ ಭೂತವೇ?’ ಎಂದು ಛೇಡಿಸಿದಾಗ ಡೇನಿಯಲ್ ಶಾಂತಕುಮಾರನನ್ನು ಮನಬಂದಂತೆ ಥಳಿಸಿದ. ಆನಂತರ ಅಲ್ಲಿಗೆ ಬಂದ ಒಬ್ಬ ವಕೀಲ ತಾವು ಪೊಲೀಸರಿಗೆ ನೀಡಿದ ದೂರನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಬರೆದಿದ್ದ ಕಾಗದದ ಮೇಲೆ ಜ್ಯೋತಿ ಮತ್ತವಳ ಕುಟುಂಬದವರೆಲ್ಲರ ಸಹಿ ಪಡೆದ. ಅ.4ರಂದು ಜ್ಯೋತಿ ಮತ್ತು ಶಾಂತಕುಮಾರ್​ರನ್ನು ಪೊಲೀಸ್ ಕಮಿಷನರ್ ಕಚೇರಿಗೆ ಕರೆದೊಯ್ದು ಆ ವಕೀಲ ದೂರನ್ನು ಹಿಂಪಡೆಯುತ್ತಿರುವುದಾಗಿ ಬರೆದಿದ್ದ ಪತ್ರವನ್ನು ಡಿ.ಸಿ.ಪಿಗೆ ಕೊಡಿಸಿದ. ಅದೇ ರಾತ್ರಿಯೇ ಜ್ಯೋತಿ, ಶಾಂತಕುಮಾರ್ ಮತ್ತು ಜ್ಯೋತಿಯ ಮಾತಾಪಿತರನ್ನು ತಿರುನೆಲ್ವೇಲಿಗೆ ರಾಜಗೋಪಾಲ್ ಕರೆದೊಯ್ದ. ಅದೇ ಮಂತ್ರವಾದಿಯ ಮನೆಗೆ ಹೋಗಿ ಆಕೆಯ ಮೇಲೆ ಇನ್ನಷ್ಟು ಮಾಟಮಂತ್ರಗಳನ್ನು ಮಾಡಿಸಿದ. ಆಕ್ಟೋಬರ್ 26ರ ಬೆಳಿಗ್ಗೆ ತಮಿಳ್ ಸೆಲ್ವಂ ಎನ್ನುವವನು ಶಾಂತಕುಮಾರ್​ನನ್ನು ರಾಜಗೋಪಾಲ್ ಕರೆಯುತ್ತಿದ್ದಾನೆಂದು ಹೇಳಿ ಅವನನ್ನು ಹೊರಗೆ ನಿಲ್ಲಿಸಿದ್ದ ಟಾಟಾ ಸುಮೋ ವಾಹನದಲ್ಲಿ ಕೂರಿಸಿಕೊಂಡಾಗ ಗಾಬರಿಯಾದ ಜ್ಯೋತಿ ಓಡಿಹೋಗಿ ತಾನೂ ಅದರಲ್ಲಿ ಕುಳಿತಳು. ಅದರಲ್ಲಿ ರಾಜಗೋಪಾಲ್ ಮತ್ತು ಇತರ ಮೂವರಿದ್ದರು. ಅವರಿದ್ದ ವಾಹನವನ್ನು ಬೇರೊಂದು ಟಾಟಾ ಸುಮೋ ವಾಹನ ಹಿಂಬಾಲಿಸತೊಡಗಿತು. ಮಾರ್ಗಮಧ್ಯದಲ್ಲಿ ರಾಜಗೋಪಾಲ್​ನ ಸೂಚನೆಯಂತೆ ಶಾಂತಕುಮಾರ್​ನನ್ನು ಹಿಂದಿದ್ದ ವಾಹನಕ್ಕೆ ಹತ್ತಿಸಲಾಯಿತು. ಅದರಲ್ಲಿದ್ದ ಡೇನಿಯಲ್​ಗೆ ಇವನನ್ನು ಮುಗಿಸಿಬಿಡಿ ಎಂದು ರಾಜಗೋಪಾಲ್ ಸೂಚಿಸಿದ. ಶಾಂತಕುಮಾರ್​ನನ್ನು ಎಲ್ಲಿಗೆ ಕರೆದೊಯ್ಯಲಾಗುತ್ತಿದೆ ಎಂದು ಜ್ಯೋತಿ ಆತಂಕಗೊಂಡು ಕೇಳಿದಾಗ ರಾಜಗೋಪಾಲ್ ಉತ್ತರಿಸದೇ ಅವಳನ್ನು ಚೆನ್ನೈಗೆ ಕರೆದೊಯ್ದು ಅವಳ ತಾಯಿಯ ಮನೆಗೆ ಬಿಟ್ಟ.

ಗಂಡನ ಅಪಹರಣದಿಂದ ಜ್ಯೋತಿ ಖಿನ್ನಳಾಗಿದ್ದಳು. ಆಕೆಯನ್ನು ರಾಜಗೋಪಾಲ್​ನ ಅನುಯಾಯಿಗಳು ಚೆನ್ನೈನ ಪುರೋಹಿತರೊಬ್ಬರ ಮನೆಗೆ ಕರೆದೊಯ್ದರು. ಅಲ್ಲಿ ಅವಳ ಮೇಲೆ ಕೆಲವು ಶಾಸ್ತ್ರಗಳನ್ನು ಮಾಡಿಸಿದರು. 21 ವರ್ಷ ವಯಸ್ಸಿನ ಆಕೆಗೆ ಆ ಶಾಸ್ತ್ರಗಳು ವಿಧವೆಗೆ ಮಾಡುವಂತಹವು ಎಂದು ನಂತರ ತಿಳಿದಾಗ ಗಾಬರಿಗೊಂಡಳು.

ಏತನ್ಮಧ್ಯೆ ಜ್ಯೋತಿ ಈ ಹಿಂದೆ ಕೊಟ್ಟ ದೂರನ್ನು ಹಿಂಪಡೆದ ಬಗ್ಗೆ ವಿಚಾರಿಸಲು ಆಕೆಯನ್ನು ವೇಲಚೇರಿ ಪೊಲೀಸ್ ಠಾಣೆಗೆ ಕರೆಸಲಾಯಿತು. ಆಗ ಆಕೆ ತಿರುನೆಲ್ವೇಲಿಯಿಂದ ತನ್ನ ಗಂಡನನ್ನು ಅಪಹರಿಸಿ ಕೊಲೆ ಮಾಡಿರುವರೆಂದು ರಾಜಗೋಪಾಲ್ ಮತ್ತಿತರರ ವಿರುದ್ಧ ದೂರು ನೀಡಿದಳು. ಇದರನ್ವಯ ನವೆಂಬರ್ 20ರಂದು ಕೊಲೆ ಪ್ರಕರಣ ದಾಖಲಾಯಿತು. ಇಷ್ಟರಲ್ಲಿ ಅಕ್ಟೋಬರ್ 31 ರಂದು ಕೊಡೈಕೆನಾಲ್ ಅರಣ್ಯ ವಲಯದ ಅರಣ್ಯ ರಕ್ಷಕ ರಾಮನ್ ಎನ್ನುವವನು ಪೊಲೀಸ್ ಠಾಣೆಗೆ ಬಂದು ಪೊಮಾಳ್​ವುಲೈ ಬಳಿ ಅಪರಿಚಿತ ಪುರುಷ ಮೃತದೇಹವು ಪತ್ತೆಯಾಗಿದೆ ಎಂದು ತಿಳಿಸಿದ. ಪೊಲೀಸರು ಸ್ಥಳಕ್ಕೆ ಹೋಗಿ ಅಲ್ಲಿದ್ದ ಕೊಳೆಯುತ್ತಿದ್ದ ದೇಹದ ಮರಣೋತ್ತರ ಪರೀಕ್ಷೆ ಮಾಡಿಸಿದರು. ಮೃತನ ಕುತ್ತಿಗೆಗೆ ಬಟ್ಟೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದರು. ಕೊಡೈಕೆನಾಲ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಯಿತು. ಮೃತವ್ಯಕ್ತಿಯ ಗುರುತು ತಿಳಿಯದಿದ್ದ ಕಾರಣ ದೇಹದ ಫೋಟೋಗಳನ್ನು ತೆಗೆದುಕೊಂಡು ಮೃತನನ್ನು ಗುರುತು ಹಿಡಿಯುವಂತಹ ವಸ್ತುಗಳನ್ನು ಸಂರಕ್ಷಿಸಿ ದೇಹವನ್ನು ಹೂಳಲಾಯಿತು.

ಡೇನಿಯಲ್, ಕಮೇಗಂ, ಹುಸೇನ್, ಮತ್ತು ತಮಿಳ್ ಸೆಲ್ವಂ ಚೆನ್ನೈ ಪೊಲೀಸರ ಮುಂದೆ ಶರಣಾಗಿ ತಾವೇ ಶಾಂತಕುಮಾರ್​ನ ಕೊಲೆ ಮಾಡಿರುವುದಾಗಿ ತಿಳಿಸಿ ಮೃತದೇಹವನ್ನು ಕೊಡೈಕೆನಾಲ್ ಬಳಿ ಎಸೆದಿರುವುದಾಗಿ ಹೇಳಿದರು. ತನಿಖಾಧಿಕಾರಿಯು ಕೊಡೈಕೆನಾಲ್ ಪೊಲೀಸರನ್ನು ಸಂರ್ಪಸಿದಾಗ ಅವರು ಸಂಬಂಧ ಪಟ್ಟ ಫೋಟೋಗಳನ್ನು ಚೆನ್ನೈಗೆ ಕಳಿಸಿದರು. ಈ ಚಿತ್ರಗಳನ್ನು ನೋಡಿ ಶವವು ತನ್ನ ಗಂಡ ಶಾಂತಕುಮಾರನದೇ ಎಂದು ಜ್ಯೋತಿ ಗುರುತಿಸಿದಳು. ತಾವು ತಿರುನೆಲ್ವೇಲಿಯಿಂದ ಬಲವಂತವಾಗಿ ಶಾಂತಕುಮಾರನನ್ನು ವಾಹನದಲ್ಲಿ ಕೂರಿಸಿಕೊಂಡು ಕೊಡೈಕೆನಾಲ್ ಬಳಿಯ ಟೈಗರ್ ಶೋಲಾ ಎನ್ನುವ ಜಾಗದಲ್ಲಿ ಲುಂಗಿಯಿಂದ ಶಾಂತಕುಮಾರನ ಕುತ್ತಿಗೆ ಬಿಗಿದು ಕೊಲೆಮಾಡಿ ದೇಹವನ್ನು ಪ್ರಪಾತದಲ್ಲಿ ಎಸೆದಿದ್ದಾಗಿ ಡೇನಿಯಲ್ ತಿಳಿಸಿ ಜಾಗವನ್ನು ತೋರಿಸಿದ. ಕೊಡೈಕೆನಾಲ್ ಪೊಲೀಸ್ ಠಾಣೆಯಲ್ಲಿ ಮೃತದೇಹದ ಮೇಲಿದ್ದ ಬಟ್ಟೆಬರೆಗಳನ್ನು ಜ್ಯೋತಿ ಶಾಂತಕುಮಾರನದೆಂದು ಗುರುತಿಸಿದಳು. ಹೂತಿದ್ದ ಶವವನ್ನು ಹೊರತೆಗೆಸಿದಾಗ ಶವವು ತನ್ನ ಗಂಡನದೆಂದು ಸೊಂಟದ ಎಡಭಾಗದಲ್ಲಿದ್ದ ಮಚ್ಚೆಯಿಂದ ಜ್ಯೋತಿ ಕರಾರುವಾಕ್ಕಾಗಿ ಗುರುತಿಸಿದಳು.

ಕೊಲೆ ಮಾಡಲು ಉಪಯೋಗಿಸಿದ್ದ ರಾಜಗೋಪಾಲ್​ನ ವಾಹನವನ್ನು ಬಚ್ಚಿಟ್ಟಿದ್ದ ಸ್ಥಳವನ್ನು ಡೇನಿಯಲ್ ತೋರಿಸಿದ. ಅದೇ ವಾಹನದಲ್ಲಿಯೇ ಶಾಂತಕುಮಾರನ ಕೊಲೆ ಮಾಡಲು ಬಳಸಿದ್ದ ಲುಂಗಿ ದೊರಕಿತು. ಕೊಲೆಯಲ್ಲಿ ಶಾಮೀಲಾದ ಕಾಶಿಯ ಮನೆಯಲ್ಲಿ ಶಾಂತಕುಮಾರನ ಪರ್ಸ್ ದೊರಕಿತು. ಅದರಲ್ಲಿ ಜ್ಯೋತಿಯ ಫೋಟೋ ಜತೆಗೆ 2400 ರೂಗಳಿದ್ದವು. ಒಳಸಂಚಿನ ರೂವಾರಿ ರಾಜಗೋಪಾಲ್​ನನ್ನು ಬಂಧಿಸಿ ಹತ್ತು ಜನರ ವಿರುದ್ಧ ಶಾಂತಕುಮಾರ್​ನ ಅಪಹರಣ ಮತ್ತು ಕೊಲೆ ಬಗ್ಗೆ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ರಾಜಗೋಪಾಲ್ ನವೆಂಬರ್ 2001ರಲ್ಲಿ ಶರಣಾದಾಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಯಿತು. ನ್ಯಾಯಾಲಯದ ಸುದೀರ್ಘ ವಿಚಾರಣೆಯಲ್ಲಿ ಈ ಪ್ರಕರಣ ಸುಳ್ಳೆಂದೂ, ರಾಜಗೋಪಾಲ್ ಕೊಲೆಯಲ್ಲಿ ಶಾಮೀಲಾಗಿರುವ ಬಗ್ಗೆ ಯಾವುದೇ ಸಬೂತಿಲ್ಲ ಎಂದೂ ವಾದಿಸಲಾಯಿತು. ಇಷ್ಟರಲ್ಲಿ ರಾಜಗೋಪಾಲ್ ಎರಡು ವರ್ಷ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಬಂದಿದ್ದ. ಶಾಂತಕುಮಾರ್​ನನ್ನು ಕೊಲೆಮಾಡುವ ಉದ್ದೇಶವು ರಾಜಗೋಪಾಲ್​ಗಿದ್ದು ಎರಡು ಬಾರಿ ಅಪಹರಣ ಮಾಡಿಸಿದ್ದರಿಂದಲೂ ಆತ ಜೀವದಿಂದಿರುವಾಗ ಕಟ್ಟಕಡೆಯಲ್ಲಿ ರಾಜಗೋಪಾಲನ ಅನುಯಾಯಿಗಳೊಡನೆ ಕಂಡಿದ್ದು ಆತನ ವಾಹನದಲ್ಲಿಯೇ ಅಪಹರಣಗೊಂಡಿದ್ದ ಕಾರಣ ಸೆಷನ್ಸ್ ನ್ಯಾಯಾಲಯವು 2004ರಲ್ಲಿ ರಾಜಗೋಪಾಲ್​ಗೆ ಹತ್ತು ವರ್ಷಗಳ ಶಿಕ್ಷೆ ವಿಧಿಸಿತು. ಆತ ಮೇಲ್ಮನವಿ ಸಲ್ಲಿಸಿದ ಕಾರಣ ಜೈಲಿಗೇನೂ ಹೋಗಲಿಲ್ಲ. ಉಚ್ಚ ನ್ಯಾಯಾಲಯವು 2009ರಲ್ಲಿ ಅವನ ಶಿಕ್ಷೆಯನ್ನು ಜೀವಿತಾವಧಿಗೆ ಏರಿಸಿತು. ರಾಜಗೋಪಾಲ್ ಸವೋಚ್ಚ ನ್ಯಾಯಾಲಯಕ್ಕೆ ಮಾಡಿದ ಮನವಿಯು 2019ರಲ್ಲಿ ತಿರಸ್ಕೃತಗೊಂಡಾಗ ಶರಣಾಗಿ ಜೈಲಿಗೆ ಹೋಗಲು ಆದೇಶವಾಯಿತು. ನ್ಯಾಯಾಲಯಕ್ಕೆ ಶರಣಾದಾಗ ಆತನ ದೇಹಸ್ಥಿತಿ ವಿಷಮಗೊಂಡು ಆಸ್ಪತ್ರೆಗೆ ಸೇರಿಸಲಾಯಿತು. ಹತ್ತೇ ದಿನ ಆಸ್ಪತ್ರೆಯಲ್ಲಿದ್ದ ರಾಜಗೋಪಾಲ್ 2019ರ ಜುಲೈ 19ರಂದು ಅಸುನೀಗಿದಾಗ ಶರವಣ ಭವನ 24 ದೇಶಗಳ 110 ಶಾಖೆಗಳಲ್ಲಿ 3000 ಕೋಟಿ ರೂಗಳ ವ್ಯವಹಾರ ನಡೆಸುತ್ತಿತ್ತು.

ಹೆಸರುವಾಸಿಯಾಗಬೇಕೆಂಬ ಆತನ ಬಾಲ್ಯದ ಕನಸು ನನಸಾಯಿತು. ‘ಆಕೆಯ ಕಂಡು ಮನೆಯಾಕೆಯ ಮರೆತರೆ ಊಕೆಯ ನೇಣು ಹರಿದಂತೆ ಮನೆಯಲಿರ್ದಾಕೆಯ ಕೆಡುಗು ಸರ್ವಜ್ಞ’ ಎಂಬ ವಚನವೂ ಸತ್ಯವಾಯಿತು.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net