

ಶ್ರೀಮದ್ರಾಮಾಯಣವು ಕೇವಲ ಮನರಂಜನೆಯ ಕಥೆಯಲ್ಲ, ವ್ಯವಹಾರ ನಿಷ್ಠರಿಗೆ ಇದೊಂದು ನೀತಿಯ ಸಾಗರ, ಸಾಮಾಜಿಕ ಜೀವನಕ್ಕೆ ನೆಲೆಗಟ್ಟು ನೀಡುವ ಸಂಸ್ಕೃತಿಯ ಖನಿ, ಮುಮುಕ್ಷುಗಳ ಅಂತರಂಗ ವಿಕಾಸಕ್ಕೆ ನೆರವಾಗುವ ಭಕ್ತಿಯ ಕಲ್ಪದ್ರುಮ, ವೈಯಕ್ತಿಕ ಹಾಗೂ ಪ್ರಜಾಪಾಲನೆಯ ಜೀವನಪಥದಲ್ಲಿ ಧರ್ಮದ ಮೇಲ್ಪಂಕ್ತಿಯ ಅನಿವಾರ್ಯತೆಯನ್ನು ಎತ್ತಿದೋರುವ ದಾರಿದೀಪ! ಮಾನವ ಜೀವನಕ್ಕೆ ಅತಿ ಹತ್ತಿರದ ಇತಿಹಾಸ ಎಂದೆನಿಸಿರುವ ರಾಮಾಯಣವು ಶಾಶ್ವತ ತತ್ತ್ವಗಳನ್ನು ನಮಗೆ ಅನುಗ್ರಹಿಸುವ ಕಾಮಧೇನು. ‘ದೇಹವೇ ದೇವರು, ಭೋಜನವೇ ಭಕ್ತಿ ಮತ್ತು ಮರಣವೇ ಮುಕ್ತಿ’ ಎಂದೆನ್ನುವ ಪಾಮರರಿಗೆ ಇದು ಸಿಂಹಸ್ವಪ್ನ; ಕ್ಷುದ್ರಬುದ್ಧಿಯ ವ್ಯಕ್ತಿಗಳ ಬದುಕಿಗೆ ಸಕಾರಾತ್ಮಕ ಚಿಕಿತ್ಸೆ ನೀಡುವುದೇ ಇದರ ಧ್ಯೇಯ. ಶೀಲ, ವಿವೇಕ, ದೈವಶ್ರದ್ಧೆ ಹಾಗೂ ಶಾಸ್ತ್ರವಾಕ್ಯಗಳಲ್ಲಿ ನಿಷ್ಠೆಯನ್ನು ಊರ್ಜಿತಗೊಳಿಸುವ, ನಾಸ್ತಿಕ್ಯ ಹಾಗೂ ಅಜ್ಞೇಯತಾವಾದಕ್ಕೆ ಮರ್ವಘಾತವೀಯುವ ವಜ್ರಾಯುಧವಿದು!
ರಾಮಾಯಣದ ಐತಿಹ್ಯ: ಶ್ರೀಮದ್ರಾರಾಮಾಯಣ ಕುರಿತು ಡಿವಿಜಿಯವರ ಅಭಿಪ್ರಾಯ ಹೃದಯಂಗಮ ವಾಗಿದೆ: ‘ಶ್ರೀಮದ್ರಾಮಾಯಣ ಕಾವ್ಯ ಮಾತ್ರವಲ್ಲ, ಆದಿಕಾವ್ಯ. ಅದರ ಆದಿತ್ಯವು ಕಾಲಮಾನ ಮಾತ್ರದ್ದಲ್ಲ; ಗುಣಾಧಿಕ್ಯದಿಂದಲೂ ಸಿದ್ಧವಾದದ್ದು. ಪ್ರಪಂಚದ ಸಾಹಿತ್ಯ ಚರಿತ್ರೆಯಲ್ಲಿ ಇದೊಂದು ಅಚ್ಚರಿಯ ಸಂಗತಿ- ಪ್ರಪಂಚದಲ್ಲಿ ನಮಗೆ ದೊರೆತಿರುವ ಮೊಟ್ಟಮೊದಲನೆಯ ಕಾವ್ಯವೇ ಕಾವ್ಯದ ಸಲ್ಲಕ್ಷಣಗಳಿಗೆ ಆದರ್ಶವೂ ಆಗಿದೆ. ಸರ್ವಾಂಗ ಪರಿಪೂರ್ಣವೂ, ಸರ್ವಾಂಗ ಸುಂದರವೂ ಆದ ಒಂದು ಸಮಗ್ರ ಕಾವ್ಯವನ್ನು ಪ್ರಥಮವಾಗಿ ನಿರ್ವಿುಸಿದ ಯಶಸ್ಸು ವಾಲ್ಮೀಕಿಯದು...’
ದೇವನಾಗರಿ ಲಿಪಿಯಲ್ಲಿ ಶ್ರೀಮದ್ವಾಲ್ಮೀಕಿ ರಾಮಾಯಣ ವಲ್ಲದೆ ರಾಮಚರಿತಮಾನಸ (ಹಿಂದಿ), ಕಂಬರಾಮಾಯಣ (ತಮಿಳು), ಕೃತ್ತಿವಾಸನರಾಮಾಯಣ (ಬಂಗಾಳಿ), ರಾಮಾವತಾರಮ್ (ಪಂಜಾಬಿ), ರಂಗನಾಥ ರಾಮಾಯಣ (ತೆಲುಗು), ಗಿರಿಧರ ರಾಮಚರಿತ್ರೆ (ಗುಜರಾತಿ), ಮಾಧವಕುಂಡಲಿಯ ರಾಮಾಯಣ (ಅಸ್ಸಾಮಿ), ಸಪ್ತಕಾಂಡರಾಮಾಯಣ (ಒರಿಯಾ), ಕನ್ನಾಸ್ಸ ರಾಮಾಯಣಮ್ (ಮಲೆಯಾಳಂ) ಮತ್ತು ಕನ್ನಡದಲ್ಲಿ ತೊರವೆ ರಾಮಾಯಣ ಹಾಗೂ ಶ್ರೀರಾಮಾಯಣದರ್ಶನಂ ಸುಪ್ರಸಿದ್ಧವಾಗಿವೆ. ಹೊರರಾಷ್ಟ್ರಗಳಲ್ಲಿಯೂ ರಾಮಾಯಣ ಗ್ರಂಥಗಳ ಐತಿಹ್ಯವಿದೆ. ರಾಮಾಯಣ ಕಕವಿನ್ (ಜಾವನೀಸ್), ಹಿಕಯತ್ ಸೆರಿ ರಾಮ್ (ಮಲೇಶಿಯನ್), ರಾಮಕಿಯನ್ (ಥಾಯ್), ಜಾನಕೀಹರಣ (ಸಿಂಹಳೀ), ರಾಮಾಶ್ವಮೇಧ (ನೇಪಾಳೀ), ಹೊಬುಟ್ಸುಷು (ಜಪಾನಿ), ಮಹರಾಡಿಯ ಲಾವಣ (ಫಿಲಿಪೈನ್ಸ್), ವಜ್ರಾದರ್ಶ (ಟಿಬೆಟ್) ಮತ್ತು ಲಾವೋಸ್ನ ಫ ಲಕ್ ಫ ಲಮ್ ಹಾಗೂ ಖ್ವೆ ಥು ಅರಫಿ- ಇವು ವಿಶ್ವವಿಖ್ಯಾತವಾಗಿವೆ. ರಾಮಾಯಣವನ್ನು ಸಂಸ್ಕರಿಸಿ ಪ್ರಕಟಿಸಿದ ಕೀರ್ತಿ ಜರ್ಮನಿಯ ಶೆಲೆಗಲ್ ಸಹೋದರರಿಗೆ ಸಲ್ಲುತ್ತದೆ.
ರಾಮಾಯಣದ ವೈಶಿಷ್ಟ್ಯ: ಕೌಟುಂಬಿಕ ಜೀವನದಲ್ಲಿ ಸ್ವಾರ್ಥವೇ ಬೃಹದಾಕಾರವಾಗಿ ಗೋಚರಿಸುವುದರಿಂದ ಇಲ್ಲಿ ಸಮಸ್ಯೆಗಳು ಎಂದೂ ಜೀವಂತಿಕೆಯನ್ನು ಕಳೆದುಕೊಳ್ಳುವುದಿಲ್ಲ. ಆದರಿಲ್ಲಿ ಕುಟುಂಬದ ಹಿತಕ್ಕಾಗಿ ತನ್ನ ಸುಖವನ್ನೇ ತ್ಯಾಗಮಾಡುವ ಶ್ರೀರಾಮನು, ‘ಜಗತ್ತಿನ ಸ್ವಾರ್ಥವನ್ನು ನಿಮೂಲನಗೊಳಿಸಲು ಬೇಕಾದ್ದು ಪ್ರತೀಕಾರದ ಅಸ್ತ್ರವಲ್ಲ, ಬದಲಾಗಿ ಮಹತ್ತರ ತ್ಯಾಗದ ಆದರ್ಶ’ ಎಂಬ ಸಂದೇಶವನ್ನು ಶ್ರೀರಾಮನ ಜೀವನ ಬಿಂಬಿಸುತ್ತದೆ. ಗುಹ, ಸುಮಂತ್ರ, ಶಬರಿ ಇವರುಗಳೊಂದಿಗಿನ ಶ್ರೀರಾಮನ ಒಡನಾಟ ಸಮಾಜದಲ್ಲಿ ಸಮತ್ವದೃಷ್ಟಿಯನ್ನು ಜಾಗೃತಗೊಳಿಸುತ್ತದೆ. ಸತ್ಕರ್ಮ ಪುರಸ್ಕಾರದಿಂದ ಆತ್ಮತೃಪ್ತಿ, ತ್ಯಾಗದಿಂದ ಸಮಾಜದ ಪರಿಷ್ಕರಣ ಇಂತಹ ಸುಸಂಸ್ಕೃತ ನಡವಳಿಕೆಗಳಿಂದ ರಾಮಾಯಣದ ಪಾತ್ರಧಾರಿಗಳು ಮರ್ತ್ಯರಾದರೂ ಅಮರ್ತ್ಯರಂತೆ ಕಂಗೊಳಿಸುತ್ತಾರೆ. ಜಗತ್ತಿಗೆ ರಾಮಾಯಣವು ಸಂಸ್ಕೃತಿ, ನಾಗರಿಕತೆ, ಹಕ್ಕುಗಳು ಮತ್ತು ಕರ್ತವ್ಯಗಳ ವಿಚಾರವಾಗಿ ಅದ್ಭುತ ಬೆಳಕನ್ನು ಚೆಲ್ಲಿದೆ. ಅತಿವೈಭವದಿಂದ ಭೂಲೋಕದ ಸ್ವರ್ಗದಂತಿದ್ದ ಲಂಕಾನಗರವು ಅತಿರೇಕದ ಸ್ತ್ರೀವ್ಯಾಮೋಹ ಮತ್ತು ಅತಿಸ್ವಾರ್ಥದಿಂದ ಹಾಳಾಯ್ತು. ಧರ್ಮಪ್ರಜ್ಞೆ, ಭಕ್ತಿ- ಆತ್ಮಾರ್ಪಣೆಗಳಿಂದ ಎಚ್ಚೆತ್ತ ಕಿಷ್ಕಿಂದೆ ನಾಶದ ದವಡೆಯಿಂದ ಪಾರಾಯ್ತು. ಉತ್ತಮ ಸಂಸ್ಕೃತಿಯ ಅಯೋಧ್ಯೆ ಯುಗಯುಗಗಳ ಕಾಲ ತನ್ನ ಸತ್ಕೀರ್ತಿಯ ಪರಿಮಳವನ್ನು ಕೊಂಡೊಯ್ದದ್ದು ಇತಿಹಾಸ!
ಇನ್ನು ರಾಮಾಯಣ ಅರಹುವ ಮತ್ತೊಂದು ಅತ್ಯಮೂಲ್ಯ ಸಂದೇಶವೆಂದರೆ, ‘ಸಮಾಜ ಅಥವಾ ದೇಶವನ್ನು ಹಕ್ಕುಗಳು ಮತ್ತು ಕಾನೂನುಗಳ ಬಲದಿಂದಷ್ಟೇ ನಿರ್ವಹಿಸಿ ಅಲ್ಲಿರುವ ಅನ್ಯಾಯ ಅಥವಾ ಪಶುತ್ವವನ್ನು ನಿಮೂಲನಗೊಳಿಸಲಾಗದು. ಭೌತಿಕವಾದವು ಹಕ್ಕುಗಳ ವಾದಕ್ಕೆ ದಾರಿಮಾಡಿಕೊಡುತ್ತದೆ. ಕೇವಲ ಹಕ್ಕುಗಳ ಪ್ರತಿಪಾದನೆಯಿಂದ ಸಂಘರ್ಷ; ಕರ್ತವ್ಯಗಳ ಅನುಷ್ಠಾನದಿಂದ ಸಮರಸತೆಯ ಪ್ರತಿಷ್ಠಾಪನೆ! ಕರ್ತವ್ಯಗಳ ಅಡಿಪಾಯದ ಮೇಲೆ ಹಕ್ಕುಗಳು ಗರಿಗೆದರಿದರೆ ಅದು ರಾಷ್ಟ್ರೀಯ ಚಾರಿತ್ರ್ಯಬಲದ ವಿಕಸನಕ್ಕೂ ದಾರಿಮಾಡಿಕೊಡುವುದು ದಿಟ. ಆದರೆ ಕಾನೂನು ಹೆಚ್ಚಾದಂತೆ ದಂಡನೀತಿಯ ಉಗ್ರತೆಯೂ ಹೆಚ್ಚುತ್ತದೆ! ಅತಿ ನಿಯಂತ್ರಣ ಹೇರಿದಾಗ ಸಮಾಜದಲ್ಲಿ ಮೋಸ, ಕಪಟ, ವಂಚನೆಗಳು ಅಧಿಕಗೊಳ್ಳುತ್ತವೆ!’
ನಮ್ಮ ಮುಂದಿರುವ ‘ರಾಮರಾಜ್ಯ’ದ ಪರಿಕಲ್ಪನೆ ಅತ್ಯದ್ಭುತವಾದದ್ದು. ಹಾಗಾದರೆ ರಾಮರಾಜ್ಯದ ಲಕ್ಷಣಗಳೇನು? ರಾಜನು ತನ್ನ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಸತ್ಯಧರ್ಮಗಳನ್ನು ಅನುಷ್ಠಾನ ಗೈಯುವ ಆದರ್ಶನಿಷ್ಠನಾಗಿರಬೇಕು, ಪ್ರಜೆಗಳ ಯೋಗಕ್ಷೇಮಗಳ ವಿಚಾರದಲ್ಲಿ ಜಾಗೃತನಾಗಿರಬೇಕು, ಶೀಲಸಂಪನ್ನರು ಹಾಗೂ ವಿವೇಕಿಗಳಷ್ಟೇ ಅವನ ಸಲಹೆಗಾರರು ಮತ್ತು ಮಂತ್ರಿಗಳಾಗಿರಬೇಕು. ರಾಜನು ತನ್ನ ಪ್ರಜೆಗಳನ್ನು ಅವರ ಸ್ವಭಾವ- ಸಾಮರ್ಥ್ಯಗಳಿಗನುಗುಣವಾಗಿ ಸಮಾಜಕಾರ್ಯಗಳಲ್ಲಿ ತೊಡಗಿಸಬೇಕು, ಉತ್ತಮ ಬೇಹುಗಾರಿಕೆ ಬೇಕು, ಕಾರ್ವಿುಕರ ವೇತನ ವಿಳಂಬವಾಗಬಾರದು, ಯುದ್ಧವೀರರಿಗೆ ಸನ್ಮಾನ, ಸ್ತುತ್ಯಕಾರ್ಯವೆಸಗಿದವರಿಗೆ ಬಹುಮಾನ, ನಿಷಿದ್ಧಕಾರ್ಯಗೈದವರಿಗೆ ಶಿಕ್ಷೆ ಆಗಲೇಬೇಕು, ಆಯ-ವ್ಯಯದ ನಿಯಮದಲ್ಲಿ ಆಯವು ವ್ಯಯಕ್ಕಿಂತ ಹೆಚ್ಚಿರಬೇಕು. ಒಟ್ಟಾರೆ ಸಾಮಾಜಿಕ ಹಾಗೂ ನೈತಿಕ ಸಮತೋಲನಕ್ಕೆ ಧಕ್ಕೆಯಾಗದಂತೆ ರಾಜನು ಎಚ್ಚರ ವಹಿಸಲೇಬೇಕು.
ರಾಮಯಣದ ಕೆಲವು ಪಾತ್ರಗಳನ್ನು ಗಮನಿಸೋಣ. ಸೀತಾನ್ವೇಷಣೆಗೆ ಸನ್ನದ್ಧರಾಗಿದ್ದ ವಾನರರಿಗೆ ಅಂಗದನು, ‘ಕಾರ್ಯಸಿದ್ಧಿಯಾಗಬೇಕಾದರೆ ಬೇಸರವಿಲ್ಲದ ಉತ್ಸಾಹ, ದಕ್ಷತೆ ಮತ್ತು ಸೋಲೊಪ್ಪಿಕೊಳ್ಳದ ಮನೋಭಾವ ಅತ್ಯವಶ್ಯಕ’ ಎಂದಿದ್ದಾನೆ. ಸೀತೆಯನ್ನು ಕಾಣದೆ ವಿಷಣ್ಣನಾಗಿದ್ದ ಹನುಮಂತನು ಹೀಗೆ ಯೋಚಿಸುತ್ತಾನೆ: ‘ಸೀತಾಮಾತೆಯನ್ನು ಪತ್ತೆಹಚ್ಚಲಾಗಲಿಲ್ಲ, ಪ್ರಯತ್ನದಲ್ಲಿ ವಿಫಲನಾಗಿದ್ದೇನೆ, ಬದುಕಲು ಉತ್ಸಾಹ ಕಾಣುತ್ತಿಲ್ಲ. ಜೀವನ ಅಂತ್ಯಗೊಳಿಸಲೇ? ಇಲ್ಲ, ಇಲ್ಲ! ಆತ್ಮಹತ್ಯೆಯಲ್ಲಿ ಬಹಳ ದೋಷಗಳಿವೆ. ಬದುಕಿದ್ದರೆ ಒಳ್ಳೆಯದನ್ನು ಮಾಡಲಾಗದಿದ್ದರೂ ಚಿಂತೆಯಿಲ್ಲ, ಒಳ್ಳೆಯದನ್ನು ನೋಡಬಹುದಲ್ಲ. ಬದುಕಿದ್ದರೆ ಶ್ರೇಯಃ ಪ್ರಾಪ್ತಿ ನಿಶ್ಚಿತ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳದೆ ಬದುಕನ್ನು ಮುಂದುವರಿಸುವೆ...’ ‘ಮರಣಾಂತಾನಿ ವೈರಾಣಿ’ ವೈರವಿದ್ದರೂ ಮರಣದಲ್ಲಿ ವೈರತ್ವವೂ ಅವಸಾನ ಕಾಣಬೇಕೆಂಬ ಶ್ರೀರಾಮಚಂದ್ರನಿತ್ತ ತಿಳಿವಳಿಕೆಗೆ ತಲೆಬಾಗಿ ಸುಗ್ರೀವ-ವಿಭೀಷಣರು ತಮ್ಮ ಸೋದರರಾದ ವಾಲಿ ಮತ್ತು ರಾವಣರ ಅಂತ್ಯಕ್ರಿಯೆಯನ್ನು ಶ್ರದ್ಧೆಯಿಂದ ನಿರ್ವಹಿಸಿದರು.
ಧರ್ಮಸೂಕ್ಷ್ಮಗಳು: ಶ್ರೀರಾಮಚಂದ್ರನು ಅಡವಿಯಲ್ಲಿದ್ದಾಗ ಅವನನ್ನು ಅಯೋಧ್ಯೆಗೆ ಮರಳಿ ಕರೆದೊಯ್ಯಲು ಆಗಮಿಸಿದ್ದ ಭರತನಿಗೆ ರಾಜ್ಯಭಾರ ಮಾಡಲು ಆಶೀರ್ವದಿಸಿ ಅವನಿಗೆ ರಾಜನಿಂದ ಘಟಿಸುವ ಹದಿನಾಲ್ಕು ದೋಷಗಳ ಬಗ್ಗೆ ತಿಳಿಹೇಳುತ್ತಾನೆ. ಅವುಗಳೆಂದರೆ, ನಾಸ್ತಿಕತೆ, ಸುಳ್ಳು, ಸಿಟ್ಟು, ಅನವಧಾನ, ನಿಧಾನವಾಗಿ ತಡೆದು ಕೆಲಸ ಮಾಡುವುದು, ಪ್ರಾಜ್ಞರಾದ ಸಜ್ಜನರೊಂದಿಗೆ ಸೇರದೇ ಇರುವುದು, ಸೋಮಾರಿತನ, ಪಂಚೇಂದ್ರಿಯಗಳಿಗೆ ಅಧೀನನಾಗಿ ಇಂದ್ರಿಯ ಚಾಪಲ್ಯದಲ್ಲಿ ಮುಳುಗುವುದು, ಯಾರೊಡನೆಯೂ ಸಮಾಲೋಚಿಸದೆ ಏಕಪಕ್ಷೀಯ ನಿರ್ಧಾರ, ಅನುಭವ ಇಲ್ಲದವರೊಂದಿಗೆ ಮಂತ್ರಾಲೋಚನೆ, ನಿಶ್ಚಯಿಸಿದ ಕಾರ್ಯವನ್ನು ಆರಂಭಿಸದೇ ಇರುವುದು, ಮಂತ್ರಾಲೋಚನೆಯನ್ನು ರಹಸ್ಯವಾಗಿ ಉಳಿಸಿಕೊಳ್ಳದೇ ಇರುವುದು, ಮಂಗಳಕರವಾದ ಶುಭಕಾರ್ಯ ಮಾಡದಿರುವುದು, ಎಲ್ಲ ಶತ್ರುಗಳ ಮೇಲೂ ಏಕಕಾಲದಲ್ಲಿ ಯುದ್ಧಾರಂಭ.
ವಾಲಿಯ ವಧೆಯ ಪ್ರಸಂಗ ಬಹಳಷ್ಟು ಜನರನ್ನು ಬುದ್ಧಿಭ್ರಮಣೆಯ ತೀರ್ಪಗಾರರಂತೆ ವ್ಯವಹರಿಸುವಂತೆ ಮಾಡಿದೆ! ಸೂರ್ಯವರಪ್ರಸಾದಿ ಸುಗ್ರೀವನಾದರೆ ಇಂದ್ರನ ಪುತ್ರ ವಾಲಿ. ಅವನಾದರೋ ತನ್ನ ಬಲವನ್ನು ಶ್ರೀಮನ್ನಾರಾಯಣ ಅವತಾರಿಯಾದ ಶ್ರೀರಾಮನ ಸೇವೆಗೆ ನೀಡಲಿಲ್ಲ! ಬದಲಾಗಿ ದೇವತೆಗಳ ಶತ್ರು, ತನ್ನ ಪರಮಾಪ್ತ ಮಿತ್ರ ರಾವಣನಿಗೆ ಧಾರೆಯೆರೆದ. ವಾಲಿಯ ಬಯೋಡಾಟಾ ಹೀಗಿದೆ:
ಧಾರಾಃ ಪುತ್ರಾಃ ಪುರಂ ರಾಷ್ಟ್ರಂ ಭೋಗಾಚ್ಛಾರನ ಭೋಜನಮ್
ಸರ್ವಮೇವಾವಿಭಕ್ತಂ ನೌ ಭವಿಷ್ಯತಿ ಹರೀಶ್ವರಃ||
‘ನಾವಿಬ್ಬರಿಗೂ ಪತ್ನಿ, ಪುತ್ರ, ಪುರ, ರಾಷ್ಟ್ರ, ಭೋಗ, ಉಡುಗೆ, ತೊಡಿಗೆ- ಇವು ಸಮನಾಗಿರಲಿ’ ಎಂದು ವಾಲಿ-ರಾವಣರು ಅಗ್ನಿಸಾಕ್ಷಿಯಾಗಿ ಒಡಂಬಡಿಕೆ ಮಾಡಿಕೊಂಡಿದ್ದರು!
ಚತುಃ ಸಮುದ್ರಗಳ ಮಧ್ಯದಲ್ಲಿರುವ ಭೂಮಿಯೆಲ್ಲವೂ ಇಕ್ಷಾ್ವಕು ವಂಶದ ಅರಸರ ಸಾಮ್ರಾಜ್ಯಕ್ಕೆ ಒಳಪಟ್ಟಿತ್ತಾದ್ದರಿಂದ ಕಿಷ್ಕಿಂದೆಯೂ ಅವರ ಅಧೀನದಲ್ಲಿಯೇ ಇತ್ತು. ಆದ್ದರಿಂದ ತಮ್ಮ ಸಾಮ್ರಾಜ್ಯದ ಯಾವುದೇ ಭಾಗದಲ್ಲೂ ಧರ್ಮಶಾಸನದ ಅನುಷ್ಠಾನಕ್ಕೆ ಅಧಿಕೃತ ಅಧಿಕಾರಿಗಳು ಅವರೇ ಆಗಿದ್ದರು. ವೈದಿಕವಿಧಿಯಂತೆ ಪಟ್ಟಾಭಿಷೇಕವಾಗಿದ್ದ ವಾಲಿ ಸಂಧ್ಯಾವಂದನೆಯನ್ನೂ ಮಾಡುತ್ತಿದ್ದ. ತನ್ನ ಸೋದರ ಸುಗ್ರೀವನ ಪತ್ನಿ ರುಮೆಯನ್ನು ಅತ್ಯಾಚಾರಗೈದು ವಶದಲ್ಲಿ ಇರಿಸಿಕೊಂಡಿದ್ದ. ತಮ್ಮನಿಗೆ ತಂದೆಯ ಸ್ಥಾನದಲ್ಲಿರಬೇಕಾದ ವಾಲಿ ಭ್ರಾತೃದ್ರೋಹಿ, ಕುಟುಂಬದ್ರೋಹಿ ಮತ್ತು ಧರ್ಮದ್ರೋಹಿಯಾಗಿದ್ದ. ಅಸಹಾಯಶೂರನಾದ ಶ್ರೀರಾಮನೇ ಅಡವಿಯಲ್ಲಿ ಚಕ್ರವರ್ತಿ ಭರತನ ಪ್ರತಿನಿಧಿ ಆಗಿದ್ದರಿಂದ ವಾಲಿಗೆ ಶಿಕ್ಷೆ ವಿಧಿಸುವ ಅಧಿಕಾರ ಶ್ರೀರಾಮನಿಗಿತ್ತು.
ಧರ್ವಿುಷ್ಠನೂ, ವೀರಕ್ಷತ್ರಿಯನೂ ಆದ ಶ್ರೀರಾಮನಿಗೆ ದುಷ್ಟರನ್ನು ಶಿಕ್ಷಿಸುವ, ಅವರ ಬಲಾಬಲ, ಕಾಲ, ಸನ್ನಿವೇಶಗಳಿಗೆ ತಕ್ಕಂತೆ ಯಥೋಚಿತವಾಗಿ ದಂಡಿಸುವ ಅಧಿಕಾರವಿತ್ತು. ಅಲ್ಲದೆ ವಾಲಿಗೆ ಶಿಕ್ಷೆ ವಿಧಿಸುವಾಗ ‘ಹಿಂದಿನಿಂದ ಹೊಡೆಯಬಾರದು, ಮರವೇರಿದವನನ್ನು ಹೊಡೆಯಬಾರದು, ಓಡುತ್ತಿರುವನನ್ನು ಹೊಡೆಯಬಾರದು’ ಎಂಬಿತ್ಯಾದಿ ಸಲಹೆಗಳು ಅಥವಾ ನಿಯಮಗಳು ಬಾಲಿಶವಲ್ಲವೇ? ಆದ್ದರಿಂದ ಶ್ರೀರಾಮನು ಗೈದ ವಾಲಿಯ ವಧೆ ನ್ಯಾಯಸಮ್ಮತ, ಧರ್ಮಸಮ್ಮತ ಮತ್ತು ದೈವಸಮ್ಮತ! ಭಾರತೀಯ ಧಾರ್ವಿುಕ ಇತಿಹಾಸದಲ್ಲಿ ವಿಭೀಷಣ, ಭೀಷ್ಮದ್ರೋಣ, ಮತ್ತು ವಿದುರನ ವ್ಯಕ್ತಿತ್ವ ವಿಶೇಷಗಳು ಅಚ್ಚರಿ ಮೂಡಿಸುತ್ತವೆ. ವಿಭೀಷಣನು ಅಧರ್ವಿುಯಾದ ಸೋದರ ರಾವಣನನ್ನೇ ತ್ಯಜಿಸಿ ಧರ್ಮಮೂರ್ತಿಯಾದ ಶ್ರೀರಾಮನ ಪಕ್ಷ ವಹಿಸಿದ! ಭಾಗವತೋತ್ತಮ ವಿದುರ ಪಾಂಡವ-ಕೌರವರನ್ನು ಸಮಾನಾಂತರವಾಗಿ ಕಂಡ!! ಆದರೆ ದುರ್ಯೂೕಧನ-ದುಶ್ಯಾಸನರನ್ನು ಛೀಮಾರಿ ಹಾಕಿದರೂ ಭೀಷ್ಮದ್ರೋಣರು ಧರ್ಮಕ್ಕಿಂತ ವ್ಯಕ್ತಿದಾಕ್ಷಿಣ್ಯಕ್ಕೆ ತಲೆಬಾಗಿದರು!
ವೇದಬೋಧಿತ ಧರ್ಮರಹಸ್ಯಗಳನ್ನು ಮನದಟ್ಟು ಮಾಡಿಕೊಡುವ ಶ್ರೀಮದ್ರಾಮಾಯಣ ನೂರಾರು ವಿಧಾನಗಳಿಂದ ನಮ್ಮ ಬದುಕಿನ ಆಯಾಮಕ್ಕೆ ವಿಶೇಷ ಮಹತ್ವ ತುಂಬುತ್ತದೆ. ಅತ್ಯುತ್ತಮ ಆಡಳಿತವನ್ನು ‘ರಾಮರಾಜ್ಯ’ ಎಂದೂ, ಯಾವುದೇ ದೊಡ್ಡ ಸಮಸ್ಯೆಗೆ ಒದಗುವ ಪರಿಣಾಮಕಾರಿ ಪರಿಹಾರವನ್ನು ‘ರಾಮಬಾಣ’ ಎಂದೂ ಆಚಂದ್ರಾರ್ಕವಾಗಿ ಉಳಿಯಬಲ್ಲ ಕಟ್ಟಾಜ್ಞೆಗೆ ‘ಸುಗ್ರೀವಾಜ್ಞೆ’ ಎಂದೂ ಯುಗಯುಗಗಳಿಂದ ಮಾನವಸಂಕುಲ ಗುರ್ತಿಸಿಕೊಂಡಿರುವುದು ರಾಮಾಯಣದ ಐತಿಹ್ಯಕ್ಕೆ ಸಮರ್ಥನೀಯ ಉದಾಹರಣೆಗಳಲ್ಲವೇ? ‘ಮರ್ಯಾದಾ ಪುರುಷೋತ್ತಮ’ ಎಂದೇ ಬಿರುದಾಂಕಿತನಾದ ಶ್ರೀರಾಮಚಂದ್ರನು ಮಾನವಸಾಧ್ಯತೆಗಳ ಪರಿಮಿತಿಯನ್ನು ಅನಂತದವರೆಗೆ ವಿಕಸಿಸಿದ ಅತ್ಯುತ್ಕೃಷ್ಟ ವ್ಯಕ್ತಿ! ರಾಕ್ಷಸನಾದ ಮಾರೀಚನೇ ‘ರಾಮೋ ವಿಗ್ರಹವಾನ್ ಧರ್ಮಃ’ ಅಂದರೆ ಶ್ರೀರಾಮನು ಧರ್ಮವೇ ಮೈದಳೆದು ಬಂದ ಮಹಾತ್ಮ ಎಂದಿದ್ದಾನೆ. ಅದು ಉನ್ನತಿಯ ಹೂರಣವಲ್ಲವೇ? ಉತ್ತುಂಗದ ತೋರಣವಲ್ಲವೇ?
(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)