ಅಮೃತಪುರುಷ ಡಾ. ರಾಜಕುಮಾರ್, ಹ್ಯಾಪಿ ಬರ್ತ್ ಡೇ ಸಚಿನ್

Dr Raj
Published on
ಸಮಕಾಲೀನರಿಗೂ ಡಾ. ರಾಜ್ ಮತ್ತು ತೆಂಡುಲ್ಕರ್​ಗೂ ವ್ಯತ್ಯಾಸವೆಂದರೆ, ಅವರ ಸರಳತೆ, ಡೌನ್ ಟು ಅರ್ತ್ ಸ್ವಭಾವ. ಡಾ. ರಾಜ್ ನಟರಾಗಿ ಎಷ್ಟೇ ಎತ್ತರಕ್ಕೆ ಬೆಳೆದರೂ, ಅಹಂಕಾರ ಬೆಳೆಯಲಿಲ್ಲ. ಪಾತ್ರಕ್ಕಾಗಿ ದೈವನಿಂದನೆ, ಜಾತಿನಿಂದನೆ, ಜನನಿಂದನೆ, ಸಮಾಜವಿರೋಧಿ ಕೃತ್ಯ ಬೆಂಬಲಿಸುವಂಥ ಪಾತ್ರಗಳನ್ನು ಒಪ್ಪಿಕೊಳ್ಳಲಿಲ್ಲ. ಸಚಿನ್ ಎಂದಿಗೂ ಸೌಜನ್ಯ ಮರೆಯಲಿಲ್ಲ.

ಒಬ್ಬರು ಅಭಿಮಾನಿಗಳೇ ತನ್ನ ದೇವರು ಎಂದರು. ಇನ್ನೊಬ್ಬರನ್ನು ಅಭಿಮಾನಿಗಳು ದೇವರ ಎತ್ತರಕ್ಕೇರಿಸಿದರು. ಆ ಇಬ್ಬರೂ ಮಹಾನುಭಾವರ ಜನ್ಮದಿನ ಇಂದು. ಒಬ್ಬರು ವರನಟ. ಇನ್ನೊಬ್ಬರು ಕ್ರಿಕೆಟ್ ಶ್ರೇಷ್ಠ. ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರಗಳಲ್ಲಿ ಇಬ್ಬರೂ ಉತ್ತುಂಗಕ್ಕೇರಿದವರು. ತಲುಪಿದ ಗುರಿಗಿಂತ ಅನುಸರಿಸಿದ ದಾರಿ ಮುಖ್ಯ ಎಂಬ ಮಾತೊಂದಿದೆ. ಅದರ ಪ್ರಕಾರ ಇವರಿಬ್ಬರೂ ಅನುಸರಿಸಿದ ದಾರಿ ಮತ್ತು ಸಾಧಿಸಿದ ಗುರಿ ಎರಡೂ ಅನನ್ಯ, ಅಪೂರ್ವ, ಅಭೂತಪೂರ್ವ. ಚಿತ್ರರಂಗದಲ್ಲೂ, ಕ್ರಿಕೆಟ್ ರಂಗದಲ್ಲೂ ಇನ್ನೂ ಎಷ್ಟೆಷ್ಟೋ ಕ್ರಿಯಾಶೀಲರೂ, ದಿಟ್ಟರೂ, ಶ್ರೇಷ್ಠರೂ ಬರಬಹುದು. ಆದರೆ, ಮತ್ತೋರ್ವ

ಡಾ. ರಾಜಕುಮಾರ್, ಮತ್ತೋರ್ವ ಸಚಿನ್ ತೆಂಡುಲ್ಕರ್ ಬರಲಾರರು. ಅವರಿಗೆ ಅವರೇ ಸಾಟಿ.

ತಮಿಳುನಾಡಿನ ದಿಗ್ಗಜ ಎಂಜಿಆರ್ ಪಾಲ್ಗೊಂಡಿದ್ದ ಕಾರ್ಯಕ್ರಮವದು. ಅದರಲ್ಲಿ ಡಾ. ರಾಜ್ ಕೂಡ ಅತಿಥಿಗಳಾಗಿ ಭಾಗವಹಿಸಿದ್ದರು. ತಮ್ಮ ಸರದಿ ಬಂದಾಗ ಡಾ. ರಾಜ್ ಕನ್ನಡದಲ್ಲಿ ಭಾಷಣ ಮಾಡಿದರು. ಅಭಿಮಾನಿಗಳು ತಮಿಳು, ತಮಿಳು ಎಂದು ಒತ್ತಾಯಿಸಿದಾಗ ಎಂಜಿಆರ್ ಒಂದು ಮಾತು ಹೇಳಿದರು. ಡಾ. ರಾಜಕುಮಾರ್ ಅವರು ತಮಿಳಿನಲ್ಲಿ, ತೆಲುಗಿನಲ್ಲಿ ನಟಿಸಿದ್ದರೆ ಇಂದು ನಾವ್ಯಾರೂ ನಿಮ್ಮ ಮುಂದೆ ಇರುತ್ತಿರಲಿಲ್ಲ. ಅವರು ಕನ್ನಡವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಕನ್ನಡದಲ್ಲೇ ಮಾತನಾಡಲಿ ಬಿಡಿ. ಐವತ್ತಕ್ಕೂ ಹೆಚ್ಚು ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಅನ್ಯಭಾಷೆಗಳಲ್ಲಿ ನಟಿಸಲು ನೂರಾರು ಅವಕಾಶ, ಒತ್ತಡಗಳಿದ್ದರೂ ಕೇವಲ ಕನ್ನಡ ಚಿತ್ರರಂಗಕ್ಕೆ ತಮ್ಮನ್ನು ಮುಡಿಪಾಗಿಟ್ಟ ಏಕೈಕ ನಟ ಡಾ. ರಾಜ್. ಭಾರತೀಯ ಚಿತ್ರರಂಗದಲ್ಲೇ ನಟನೆಗಾಗಿ ಗೌರವ ಡಾಕ್ಟರೇಟ್ ಪಡೆದ ಮೊದಲ ನಟ ಅವರು. ಒಂದೆರಡು ಚಿತ್ರಗಳನ್ನು ಬಿಟ್ಟರೆ, ರಿಮೇಕ್ ಚಿತ್ರಗಳಲ್ಲಿ ನಟಿಸದೇ, ಕಾದಂಬರಿ ಆಧಾರಿತ ಚಿತ್ರಗಳಲ್ಲೇ ಅತಿಹೆಚ್ಚು ನಟಿಸಿದವರು ರಾಜ್. ತಮ್ಮ ಚಿತ್ರಗಳಿಗೆ ತಾವೇ ಗಾಯಕರಾಗಿ ಕನ್ನಡದ ವಾಕ್ಚಿತ್ರ ಪರಂಪರೆ ಮುಂದುವರಿಸಿದವರು.

‘ನಾನು ದೇವರು ಬ್ಯಾಟಿಂಗ್ ಮಾಡುವುದನ್ನು ನೋಡಿದ್ದೇನೆ. ಅವರು ಭಾರತದ ಪರ 4ನೇ ಕ್ರಮಾಂಕದಲ್ಲಿ ಆಡುತ್ತಾರೆ’ ಎಂದು ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್​ಮನ್ ಮ್ಯಾಥ್ಯೂ ಹೇಡನ್ ಒಮ್ಮೆ ಹೊಗಳಿದ್ದರು. ಓರ್ವ ಕ್ರಿಕೆಟಿಗನಾಗಿ ದೇವರ ಎತ್ತರಕ್ಕೇರಿದ್ದು ಸಚಿನ್ ತೆಂಡುಲ್ಕರ್ ಹಿರಿಮೆ. ಕ್ರಿಕೆಟ್​ನಲ್ಲಿ ಆ ಕಾಲದ ಡಾನ್ ಬ್ರಾಡ್ಮನ್​ರಿಂದ ಈ ಯುಗದ ವಿರಾಟ್ ಕೊಹ್ಲಿವರೆಗೆ ಅನೇಕಾನೇಕ ದಿಗ್ಗಜರು, ದಂತಕಥೆಗಳು, ಶ್ರೇಷ್ಠರು, ದೈತ್ಯರು ಆಗಿಹೋಗಿದ್ದಾರೆ, ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಅಷ್ಟೆಲ್ಲದರ ನಡುವೆ ತೆಂಡುಲ್ಕರ್ ಆಟಕ್ಕೆ, ಸಾಧನೆಗೆ ತೆಂಡುಲ್ಕರ್ ಮಾತ್ರವೇ ಸಾಟಿ. ತೆಂಡುಲ್ಕರ್ ಹೆಸರಲ್ಲಿರುವ ನೂರಾರು ದಾಖಲೆಗಳಿಗೆ ಹತ್ತಾರು ವಾರಸುದಾರರು ಮುಂದೆ ಬರಬಹುದು. ಆದರೆ, ಕೇವಲ ದಾಖಲೆ, ಅಂಕಿ-ಅಂಶಗಳಿಂದ ಓರ್ವ ದೇವರು ರೂಪುಗೊಳ್ಳುವುದಿಲ್ಲ. ದೀರ್ಘ ಕಾಲ ಕ್ರಿಕೆಟ್ ಆಡುವುದರಿಂದ, ಪ್ರಸಿದ್ಧಿಯಿಂದ, ಗಳಿಸುವ ಹಣದಿಂದ ದೈವತ್ವ ಲಭಿಸುವುದಿಲ್ಲ. ಆ ಸಿದ್ಧಿ, ಆ ಗೌರವ ಕೇವಲ ತೆಂಡುಲ್ಕರ್​ಗೆ ಮಾತ್ರ.

ಪದ್ಮಭೂಷಣ ಡಾ. ರಾಜಕುಮಾರ್, ಭಾರತರತ್ನ ಸಚಿನ್ ತೆಂಡುಲ್ಕರ್ ಜೀವನಪಥವನ್ನು ಗಮನಿಸುವಾಗ ಕಾಣಿಸುವ ಸಾಮ್ಯಗಳು ಹಲವು. ಮಕ್ಕಳು ಸಾಧನೆಯಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ, ತಾಯಿಯ ಎದುರು ಚಿಕ್ಕವರೇ. ಡಾ. ರಾಜ್ ಮತ್ತು ಸಚಿನ್ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಿಮಾಲಯದೆತ್ತರಕ್ಕೆ ಬೆಳೆದರೂ ತಾವು ತಾಯಮಡಿಲ ಮಕ್ಕಳ ವಿಧೇಯತೆ, ಸಜ್ಜನಿಕೆಯನ್ನು ಮರೆಯಲಿಲ್ಲ. ಆಧುನಿಕ ಜಮಾನಾದ ಸೂಪರ್​ಸ್ಟಾರ್​ಗಳು ತಾವು ಮಾತ್ರ ಬೆಳೆಯುತ್ತಾರೆ. ತಾಯಿಬೇರಿನ ಆರೈಕೆಯಿಲ್ಲದೆ ಆಗಸಕ್ಕೆ ಚಿಮ್ಮಿದ ಹೈಬ್ರಿಡ್ ಸಂತಾನ ತಾವೆಂಬಂತೆ ಮೆರೆಯುತ್ತಾರೆ. ಆದರೆ, ಡಾ. ರಾಜ್ ತಮ್ಮ ಜೊತೆ ಚಿತ್ರರಂಗವನ್ನೂ ಬೆಳೆಸಿದರು. ಜಾಗತಿಕ ಸಿನಿಮಾ ಭೂಪಟದಲ್ಲಿ ಕನ್ನಡಕ್ಕೊಂದು ಸ್ಥಾನಮಾನ ಕೊಡಿಸಿದರು. ತೆಂಡುಲ್ಕರ್ ತಮ್ಮೊಂದಿಗೆ ಕ್ರಿಕೆಟ್ ಆಟವನ್ನೂ ಬೆಳೆಸಿದರು. ಜಾಗತೀಕರಣದ ಮೆಟ್ಟಿಲುಗಳನ್ನೇರಿಕೊಂಡು ಕ್ರಿಕೆಟ್ ಇವತ್ತಿನ ದೈತ್ಯಸ್ವರೂಪಕ್ಕೆ ಬೆಳೆದು ನಿಂತಿರುವುದರಲ್ಲಿ ಸಚಿನ್ ಎಂಬ ಐಕನ್ ಪಾತ್ರ ಹಿರಿದು.

ಡಾ. ರಾಜ್ ವೃತ್ತಿಜೀವನದ ಸುದೀರ್ಘ ವರ್ಷಗಳಲ್ಲಿ ಪೌರಾಣಿಕ ಪಾತ್ರಗಳಿಗೆ ದೈವತ್ವ ತುಂಬಿದರು. ಐತಿಹಾಸಿಕ ಪಾತ್ರಗಳಾಗಿ ಜನಮನದಲ್ಲಿ ರಾರಾಜಿಸಿದರು. ಸಾಮಾಜಿಕ ಚಿತ್ರಗಳ ಮೂಲಕ ಜನಸಮುದಾಯಗಳನ್ನು ತಲುಪಿದರು. ಬಾಂಡ್ ಪಾತ್ರಗಳನ್ನೂ ಮಾಡಿದರು. ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್ ಜನಪ್ರಿಯವಾಗುತ್ತಿದ್ದ ಕಾಲಘಟ್ಟದಲ್ಲಿ ಅದರ ಪರಿಪೂರ್ಣ ರಾಯಭಾರಿಯಾದರು. ಕೇವಲ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡಿಗರು ಮಾತ್ರವಲ್ಲ ಭಾರತೀಯರೂ ಕ್ರಿಕೆಟ್ ಆಡಬಲ್ಲರು ಎಂಬ ಆತ್ಮವಿಶ್ವಾಸ ತುಂಬಿದರು. ಭಾರತೀಯರು ಮನೆಯಲ್ಲಿ ಮಾತ್ರ ಹುಲಿ, ವಿದೇಶದಲ್ಲಿ ಇಲಿ ಎಂಬ ಅಪವಾದ ತೊಡೆದುಹಾಕಿ ಜಗತ್ತಿನ ಮೂಲೆಮೂಲೆಯಲ್ಲಿ ರನ್ ಬಾರಿಸಿದರು. ಟೆಸ್ಟ್ ಕ್ರಿಕೆಟ್​ನ ಕಲಾವಂತಿಕೆ, ಏಕದಿನ ಮಾದರಿ ಬೇಡುವ ಸ್ಪೋಟಕತೆ ಎರಡನ್ನೂ ಮೈಗೂಡಿಸಿಕೊಂಡು ಹೊಸ ಪೀಳಿಗೆಯ ಮಕ್ಕಳನ್ನು ಕ್ರಿಕೆಟ್​ನತ್ತ ಸೆಳೆದರು. ಕ್ರಿಕೆಟ್ ಆಡುವ ದೇಶಗಳ ಮನೆಮನೆಯಲ್ಲೂ ಮಕ್ಕಳು ಸಚಿನ್ ಆಗುವ ಕನಸು ಕಾಣುವುದಕ್ಕೆ ಪ್ರೇರಣೆಯಾದರು.

ಡಾ. ರಾಜ್ ನಟಿಸಿರುವ ಚಿತ್ರಗಳು ಸೋತಿದ್ದೇ ಇಲ್ಲ ಎನ್ನಬಹುದು. ಅವರ ಶೇಕಡ 95ಕ್ಕೂ ಹೆಚ್ಚು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ತಂದುಕೊಟ್ಟಿವೆ. ಆ ದೃಷ್ಟಿಯಲ್ಲಿ ಅವರು ನಿರ್ವಪಕರ ಪಾಲಿಗೆ ಕಾಮಧೇನು. ತೆಂಡುಲ್ಕರ್ ಸಹ ಅಷ್ಟೇ. ಎರಡೂವರೆ ದಶಕಗಳ ವೃತ್ತಿಜೀವನದಲ್ಲಿ ಭಾರತ ಕ್ರಿಕೆಟ್ ತಂಡದ ಯಶಸ್ಸಿನಲ್ಲಿ ಸಚಿನ್ ಕೊಡುಗೆ ಸಿಂಹಪಾಲಿತ್ತು. ಅದೆಷ್ಟೋ ಪಂದ್ಯಗಳಲ್ಲಿ ಅವರು ಶತಕ, ಅರ್ಧಶತಕ ಗಳಿಸದೇ ಇದ್ದರೂ, ತಂಡ ಪಂದ್ಯ ಸೋತಿದ್ದರೂ, ತೆಂಡುಲ್ಕರ್ ಸೌಜನ್ಯದಿಂದ, ಹೃದಯವೈಶಾಲ್ಯದಿಂದ ಮನಸ್ಸು ಗೆದ್ದಿರುತ್ತಿದ್ದರು.

ಸಮಕಾಲೀನರಿಗೂ ಡಾ. ರಾಜ್ ಮತ್ತು ತೆಂಡುಲ್ಕರ್​ಗೂ ವ್ಯತ್ಯಾಸವೆಂದರೆ, ಅವರ ಸರಳತೆ, ಡೌನ್ ಟು ಅರ್ತ್ ಸ್ವಭಾವ. ಡಾ. ರಾಜ್ ನಟರಾಗಿ ಎಷ್ಟೇ ಎತ್ತರಕ್ಕೆ ಬೆಳೆದರೂ, ಅಹಂಕಾರ ಬೆಳೆಯಲಿಲ್ಲ. ಅವರು ಪಾತ್ರಕ್ಕಾಗಿ ದೈವನಿಂದನೆ, ಜಾತಿನಿಂದನೆ, ಜನನಿಂದನೆ, ಸಮಾಜವಿರೋಧಿ ಕೃತ್ಯ ಬೆಂಬಲಿಸುವಂಥ ಪಾತ್ರಗಳನ್ನು ಒಪ್ಪಿಕೊಳ್ಳಲಿಲ್ಲ. ಎಷ್ಟೇ ದೊಡ್ಡ ಮಹಾನ್ ನಟರಾಗಿದ್ದರೂ, ತಮ್ಮನ್ನು ವೈಭವೀಕರಿಸುವಂಥ ಸಂಭಾಷಣೆಗಳನ್ನು ಬರೆಸಲಿಲ್ಲ. ಕಾದಂಬರಿಯ ಪಾತ್ರಗಳಿಗೆ ತಾವು ಒಗ್ಗಿಕೊಂಡು ಜೀವ ತುಂಬಿದರೇ ಹೊರತು ತಮಗಾಗಿಯೇ ಕಥೆ, ಪಾತ್ರ ಸೃಷ್ಟಿಸುವಂತೆ ಒತ್ತಡ ಹೇರಲಿಲ್ಲ. ಸಮಕಾಲೀನ ನಟರಿಗೆ ಟಾಂಟ್​ಗಳನ್ನು ಕೊಡುವಂಥ ಡೈಲಾಗ್​ಗಳನ್ನು ಯಾವತ್ತೂ ಉತ್ತೇಜಿಸಲಿಲ್ಲ. ಸಿನಿಮಾಗಳಲ್ಲಿ ಅವರ ಪಾತ್ರಗಳು ಯಾವಾಗಲೂ ರೈತ, ರೈತನ ಮಗ, ಬಡವನ ಮಗ, ಮಧ್ಯಮ ವರ್ಗದ ಹೋರಾಟಗಾರ ಇತ್ಯಾದಿ ಹಿನ್ನೆಲೆ ಹೊಂದಿರುತ್ತಿತ್ತೇ ಹೊರತು, ಹೆಲಿಕಾಪ್ಟರ್ ದೃಶ್ಯಗಳು, ಐಷಾರಾಮಿ ಕಾರುಗಳು, ವಿದೇಶಿ ಲಲನೆಯರ ನಡುವೆ ಮೊದಲ ದೃಶ್ಯದಲ್ಲಿ ಎಂಟ್ರಿ ಪಡೆಯುತ್ತಿರಲಿಲ್ಲ. ಇದೇ ಕಾರಣಕ್ಕೆ ಜನ ಶಾಶ್ವತವಾಗಿ ಡಾ. ರಾಜ್​ರನ್ನು ಇವ ನಮ್ಮವ ಎಂದು ಒಪ್ಪಿಕೊಂಡರು, ಅಪ್ಪಿಕೊಂಡರು. ‘ನಾನಿರುವುದೇ ನಿಮಗಾಗಿ...’ ಎಂದು ರಾಜ್ ಹಾಡಿದಾಗ ಜನ ಹೃದಯದಿಂದ ಸ್ವೀಕರಿಸಿದರು. ನಟನಾಗಿ ನಿರ್ವಹಿಸಿದ ಆದರ್ಶಮಯ ಪಾತ್ರಗಳಂತೆಯೇ ಬದುಕಿ ತೋರಿಸಿದ, ನಡೆಗೂ- ನುಡಿಗೂ ವ್ಯತ್ಯಾಸವಿಲ್ಲದಂತೆ ಬದುಕಿದ ಮಹಾನುಭಾವ ಡಾ. ರಾಜ್.

ತೆಂಡುಲ್ಕರ್ ಕೂಡ ಅಷ್ಟೇ. ಕ್ರಿಕೆಟ್ ಮೈದಾನದಲ್ಲಿ ಅಥವಾ ಹೊರಗೆ ಯಾವತ್ತೂ ಹಮ್ಮ-ಬಿಮ್ಮು ತೋರಲಿಲ್ಲ. ಶೋಕಿ ಮೆರೆಯಲಿಲ್ಲ. ನಮಗೆ ತೆಂಡುಲ್ಕರ್​ರನ್ನು ಚಿತ್ರವಿಚಿತ್ರ ಕೇಶವಿನ್ಯಾಸದಿಂದ, ಕಿವಿಯೋಲೆ, ಕೊರಳ ಸರಪಳಿಯಿಂದ, ಮೈತುಂಬ ಹಾಕಿಸಿಕೊಂಡ ಹಚ್ಚೆಯಿಂದ ಗುರುತಿಸಬೇಕಾದ ಅನಿವಾರ್ಯ ಯಾವತ್ತೂ ಒದಗಲೇ ಇಲ್ಲ. ನಿವೃತ್ತಿಯ ದಿನದವರೆಗೂ ಅವರೊಳಗಿನ ವಿದ್ಯಾರ್ಥಿ ಸಕ್ರಿಯನಾಗಿದ್ದ. ಮೇರು ಆಟಗಾರನಾದರೂ ಅಭ್ಯಾಸವನ್ನು ಯಾವತ್ತೂ ಬಿಡಲಿಲ್ಲ. ಸಚಿನ್ ಕ್ರಿಕೆಟ್ ಪಿಚ್​ನಲ್ಲಿ ಗಳಿಸಿದ ಒಂದೊಂದು ರನ್​ಗಳ ಮೂಲಕ, ಶತಕಗಳ ಮೂಲಕವೇ ದಂತಕಥೆಯಾದರು. ಅವರು ಶತಕ ಬಾರಿಸಿದಾಗ ಆಗಸದತ್ತ ಮುಖವೆತ್ತಿ ಮೃತ ತಂದೆಗೆ ಕೃತಜ್ಞತೆ ಅರ್ಪಿಸುತ್ತಿದ್ದ ಏಕೈಕ ಭಾವಭಂಗಿ ಬಿಟ್ಟರೆ, ಬೇರಾವುದೇ ಹಾವ-ಭಾವ- ತೋರಿಕೆ, ನೃತ್ಯ, ಆವೇಶ- ಆರ್ಭಟ, ಮುಷ್ಠಿ... ಇತ್ಯಾದಿ ತೋರಲಿಲ್ಲ. ಎಂಥ ಸನ್ನಿವೇಶದಲ್ಲೂ ಸಂಯಮ ತೊರೆಯಲಿಲ್ಲ. ಏಕಾಗ್ರತೆ ಕದಲಲಿಲ್ಲ. ಸ್ವಾರ್ಥಕ್ಕಾಗಿ ಆಡಲಿಲ್ಲ. ತಂಡವೇ ಮೊದಲು, ತಾವು ಜೊತೆಗೆ ಎಂಬ ಅನುಸರಣೆಯನ್ನು ಬಿಟ್ಟುಕೊಡಲಿಲ್ಲ. ಡಾ. ರಾಜ್ ಮತ್ತು ಸಚಿನ್​ರ ಇಂಥ ಸಮರ್ಪಣೆ, ಸಮಷ್ಠಿ ಪ್ರಜ್ಞೆಯೇ ಅವರನ್ನು ದೇವರ ಎತ್ತರಕ್ಕೇರಿಸಿತು.

ಡಾ. ರಾಜ್ ಕೇವಲ ನಟನೆಗೆ ಸೀಮಿತವಾಗದೆ ಸಮಾಜಕ್ಕಾಗಿ ಬದುಕಿದರು. ಗೋಕಾಕ್ ಚಳವಳಿ ಸಂದರ್ಭದಲ್ಲಿ ಲಕ್ಷೋಪಲಕ್ಷ ಕನ್ನಡಿಗರನ್ನು ಒಗ್ಗೂಡಿಸಿದ ಮಹಾನ್​ಶಕ್ತಿ ರಾಜ್ ಆಗಿದ್ದರು. ಅವರು ಬಯಸಿದ್ದರೆ ತಮಿಳುನಾಡು, ಆಂಧ್ರದ ಮಾದರಿಯನ್ನು ಅನುಸರಿಸಿ ರಾಜ್ಯದಲ್ಲಿ ಮುಖ್ಯಮಂತ್ರಿಯೇ ಆಗಬಹುದಿತ್ತು. ಆದರೆ, ಅವರಿಗೆ ಅಂಥ ಯಾವ ವ್ಯಾಮೋಹಗಳೂ ಇರಲಿಲ್ಲ. ತೆಂಡುಲ್ಕರ್ ಕೂಡ ಅಷ್ಟೇ. ನಿವೃತ್ತಿ ನಂತರ ಬಯಸಿದ್ದರೆ ಅವರು ಯಾವತ್ತೋ ಬಿಸಿಸಿಐ ಅಧ್ಯಕ್ಷರೇ ಆಗಬಹುದಿತ್ತು. ಅವರು ಇಚ್ಛೆ ವ್ಯಕ್ತಪಡಿಸಿದ್ದರೆ ವಿರೋಧಿಸುವವರು ಯಾರೂ ಇರುತ್ತಿರಲಿಲ್ಲ. ಚುನಾವಣೆಗೆ ನಿಲ್ಲಬಹುದಿತ್ತು. ಆದರೆ, ತೆಂಡುಲ್ಕರ್ ತಾನಾಗಿ ಯಾವುದೇ ಪದವಿ, ಪ್ರಚಾರ ಬಯಸುವ ವ್ಯಕ್ತಿಯೇ ಅಲ್ಲ. ಯುಪಿಎ ಅವಧಿಯಲ್ಲಿ ಅವರಿಗೆ ರಾಜ್ಯಸಭೆ ಸದಸ್ಯರಾಗುವ ಅವಕಾಶ ಬಂದಾಗ ಅದನ್ನು ವಿನಯಪೂರ್ವಕವಾಗಿ ಒಪ್ಪಿಕೊಂಡರೇ ಹೊರತು, ರಾಜಕೀಯದ ಸೆಳೆತಕ್ಕೆ ಜೋತುಬೀಳಲಿಲ್ಲ. ಸಂಸದರಾಗಿದ್ದ ಅವಧಿಯಲ್ಲಿ ಅನೇಕ ಹಳ್ಳಿಗಳನ್ನು ದತ್ತು ತೆಗೆದುಕೊಂಡು ಉದ್ಧಾರ ಮಾಡಿದರು. ನರೇಂದ್ರ ಮೋದಿ ಸರ್ಕಾರ ಸಂಸದರ ಆದರ್ಶ ಗ್ರಾಮ ಯೋಜನೆ ಆರಂಭಿಸುವ ಹಲವು ವರ್ಷ ಮೊದಲೇ ಸಚಿನ್ ಆ ಕೆಲಸವನ್ನು ಸದ್ದುಗದ್ದಲವಿಲ್ಲದೆ ಮಾಡಿದ್ದರು.

ಡಾ. ರಾಜ್ ಜೊತೆ ಸಮಕಾಲೀನ ನಾಯಕನಟರಾಗಿದ್ದ ಅನೇಕರು ಕಾಲಾನಂತರದಲ್ಲಿ ಹೊಟ್ಟೆ, ಬೊಜ್ಜು ಬೆಳೆಸಿಕೊಂಡು ಪೋಷಕಪಾತ್ರಗಳಿಗೆ ಸೀಮಿತರಾದರು. ಆದರೆ, ಯೋಗಸಾಧಕರಾಗಿದ್ದ ರಾಜ್ ಕೊನೆಯವರೆಗೂ ಅಂಗಸೌಷ್ಠವ ಕಾಪಾಡಿಕೊಂಡಿದ್ದರು. ತೆಂಡುಲ್ಕರ್ ಸಹ ಅಷ್ಟೇ, ಆಡುವ ದಿನಗಳಲ್ಲಿ ಟೆನಿಸ್ ಎಲ್ಬೋದಂಥ ಸಮಸ್ಯೆಗಳು ಕಾಡಿದರೂ, ಅವರ ಕೈಕಾಲಿನಲ್ಲಿ, ತೋಳಿನಲ್ಲಿ ದಣಿವೆನ್ನುವುದೇ ಇರುತ್ತಿರಲಿಲ್ಲ. ಸತತ ಐದು ದಿನ ಬ್ಯಾಟಿಂಗ್ ಮಾಡುವುದಕ್ಕೂ ಅವರು ದೈಹಿಕ, ಮಾನಸಿಕವಾಗಿ ಸಿದ್ಧರಿರುತ್ತಿದ್ದರು. ನಿವೃತ್ತರಾಗಿ ಅನೇಕ ವರ್ಷಗಳ ನಂತರ, ಇಂದಿಗೂ ಸಚಿನ್ ಅನೇಕ ಸಮಕಾಲೀನ ಆಟಗಾರರಿಗಿಂಥ ಹೆಚ್ಚಿನ ಫಿಟ್​ನೆಸ್ ಕಾಪಾಡಿಕೊಂಡಿದ್ದಾರೆ.

ಡಾ. ರಾಜ್ ಕನ್ನಡ ಮನಸ್ಸುಗಳನ್ನು ಅಗಲಿ ಹದಿನೈದು ವರ್ಷಗಳೇ ಕಳೆದಿವೆ. ಅವರು ಭೌತಿಕವಾಗಿ ಇರುತ್ತಿದ್ದರೆ ಇಂದಿಗೆ 92ನೇ ಜನ್ಮದಿನ ಆಚರಿಸಿಕೊಳ್ಳಬೇಕಿತ್ತು. ಆದರೆ, ಕನ್ನಡಿಗರ ಹೃದಯಸಿಂಹಾಸನದಲ್ಲಿ ಶಾಶ್ವತವಾಗಿ ವಿರಾಜಮಾನರಾದ, ಅಮೃತಪುರುಷ, ದೈವಾಂಶಸಂಭೂತ ರಾಜ್ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಅಜರಾಮರ. ಅಭಿಮಾನಿಗಳು ದೇವರ ಪಟ್ಟ ಕಟ್ಟಿದರೂ, ಮಾನವತ್ವದ ಶ್ರೇಷ್ಠ ಪ್ರತಿರೂಪವಾಗಿ ಬದುಕುತ್ತಿರುವ ತೆಂಡುಲ್ಕರ್​ಗೆ ಇಂದು 47ನೇ ಜನ್ಮದಿನ. ಹ್ಯಾಪಿ ಬರ್ತ್​ಡೇ ಸಚಿನ್.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net